Wednesday, 11th December 2024

ದಿನವೊಂದಕ್ಕೆ 25 ತಾಸು, ತಪ್ಪುವುದೇ ಜಗತ್ತಿನ ತ್ರಾಸು ?

ಶಿಶಿರ ಕಾಲ

shishirh@gmail.com

ಇಲ್ಲಿ ತ್ರಾಸು ಎಂದರೆ ತಕ್ಕಡಿ, ಸಮತೋಲನ ಎಂದರ್ಥ. ಚಂದ್ರ ಭೂಮಿಯಿಂದ ನಿಧಾನವಾಗಿ ದೂರ ಸರಿಯುತ್ತಿzನೆ, ಪರಿಣಾಮ ಭೂಮಿಯ ದಿನ ಲಂಬಿಸಿ ೨೪ರ ಬದಲಿಗೆ ೨೫ ಗಂಟೆಯಾಗಲಿದೆ. ಹೀಗೊಂದು ಸುದ್ದಿ ಕೆಲ ದಿನಗಳ ಹಿಂದೆ ‘ವಿಶ್ವವಾಣಿ’ಯಲ್ಲಿ ಪ್ರಕಟವಾಗಿತ್ತು. ನಂತರ ಉಳಿದ ಕೆಲವು ಸುದ್ದಿವಾಹಿನಿಗಳಲ್ಲಿಯೂ ಅದು ಕಾರ್ಯಕ್ರಮವಾಗಿ ಬಿತ್ತರಗೊಂಡು ಸಾರ್ವಜನಿಕ ನ್ಯಾಯಾಲಯವಾದ ಸೋಷಿಯಲ್ ಮೀಡಿಯಾದಲ್ಲಿಯೂ ಇದರ ಕುರಿತು ಚರ್ಚೆಗಳು ನಡೆದವು.

ಕೆಲವರು, ಮಿಕ್ಕಿದ ೧ ಗಂಟೆ ಏನು ಮಾಡಬಹುದು ಎಂದು ತಲೆಕೆಡಿಸಿಕೊಂಡರೆ, ಇನ್ನು ಕೆಲವರು ಚಂದ್ರ ಭೂಮಿಯಿಂದ ದೂರವಾದರೆ ನಮ್ಮ ದಿನವೇಕೆ ಉದ್ದವಾಗಬೇಕು ಎಂದು ತಮ್ಮೆಲ್ಲ ಶಿಕ್ಷಣವನ್ನು, ವಿeನವನ್ನು ಒರೆಗೆ ಹಚ್ಚಿ ಚರ್ಚಿಸಿದರು. ಒಮ್ಮಿಂದೊಮ್ಮೆಲೇ ಪ್ರತಿದಿನ ಒಂದು ಗಂಟೆ ಹೆಚ್ಚಿಗೆ ಸಿಕ್ಕಿಬಿಟ್ಟರೆ ಎಂಬ ಕಲ್ಪನೆ ಮಜವಾಗಿದೆ. ಇನ್ನಷ್ಟು ಬಾರಿ ‘ಸ್ನೂಜ್’ ಒತ್ತಿ ಒಂದು ಗಂಟೆ ಜಾಸ್ತಿ ನಿದ್ರಿಸಬಹುದು ಎಂದು ಕೆಲವರು, ಜಿಮ್ಮಿಗೆ ಹೋಗಬ ಹುದು, ಹವ್ಯಾಸಕ್ಕೆ, ಜಾಸ್ತಿ ದುಡಿಯಬಹುದು ಇತ್ಯಾದಿ ಒಬ್ಬೊಬ್ಬರದು ಒಂದೊಂದು ಉತ್ತರ.

ನನ್ನ ಅಜ್ಜಿಗೆ ಕೇಳಿದಾಗ, ಇನ್ನೊಂದು ಧಾರಾವಾಹಿ ಹೆಚ್ಚಿಗೆ ನೋಡಬಹುದು ಎಂದರು. ಒಟ್ಟಾರೆ ಯಾರು ಏನೇ ಹೇಳಲಿ, ನಮಗೆ ಇನ್ನೊಂದು ತಾಸು ಹೆಚ್ಚಿಗೆ ಸಿಕ್ಕರೆ ಬಹುತೇಕರು ಅದನ್ನು ಮೊಬೈಲ್ ಉಜ್ಜಿಯೇ ಕಳೆಯುತ್ತಾರೆ. ಬಿಡಿ. ಇಂಥ ಕೆಲವು ವಿಚಿತ್ರವೆನಿಸುವ, ನಮ್ಮ ಗಮನ ವನ್ನು ಆ ಕ್ಷಣಕ್ಕೆ ಸೆಳೆಯುವ, ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿಷಯಗಳು ಆಗೀಗ ಕೇಳಿಬರುತ್ತಲೇ ಇರುತ್ತವೆ. ಎರಡು ದಶಕದ ಹಿಂದೆ ‘ತರಂಗ’ ಪತ್ರಿಕೆಯಲ್ಲಿ ಪ್ರಕಟ ಗೊಂಡ, ಇಂಥದ್ದೇ ಒಂದಿಷ್ಟು ಸುದ್ದಿಗಳನ್ನೊಳಗೊಂಡ ‘ಪ್ರಳಯವಾಗಿಬಿಡುತ್ತದೆ’ ಎಂಬ ವರದಿ ಅಂದು ಸಂಚಲನ ಮೂಡಿಸಿತ್ತು.

ಇವತ್ತಷ್ಟೇ ಇನ್ನೊಂದು ಸುದ್ದಿ ಬಂದಿದೆ. ಭೂಮಿಯ ಅಂತರಾಳದಲ್ಲಿ ಲಾವಾ ಇದೆಯಲ್ಲ, Inner Core- ಅದು ಕಳೆದ ಹದಿನಾಲ್ಕು ವರ್ಷದಿಂದ ವಿನಾಕಾರಣ ಗಣನೀಯವಾಗಿ ನಿಧಾನಕ್ಕೆ ಚಲಿಸುತ್ತಿದೆಯಂತೆ. ಆ ಕರಗಿದ ಲಾವಾ ಇರುವುದು ಮೇಲ್ಮೈ ಇಂದ ಸುಮಾರು ಐದು ಸಾವಿರ ಕಿಲೋಮೀಟರ್ ಒಳಕ್ಕೆ. ಇಂಥ ಅದೆಷ್ಟೋ ಚಿಕ್ಕಪುಟ್ಟವೆನಿಸುವ ವ್ಯತ್ಯಾಸ ಸುದ್ದಿಯಾದಾಗ ಅದರ ದೂರಕಾಲದ ಪರಿಣಾಮವನ್ನು ಗ್ರಹಿಸಿ, ಅದನ್ನು ಪ್ರಳಯಕ್ಕೆ, ಭೂಮಿಯ ಸರ್ವನಾಶಕ್ಕೆ ಕಟ್ಟಿ ವಿಮರ್ಶಿಸುವುದು ಇತ್ತೀಚಿನ ಟ್ರೆಂಡ್. ಇದು ರುಚಿಸುವುದು ಇಂಥ ಸಾಧ್ಯತೆಯ ಭಯ ಎಲ್ಲರಲ್ಲೂ ಇರುವುದರಿಂದ. ಅದು ರೋಚಕತೆಯ ಗುಟ್ಟು.

ಆ ಕಾರಣಕ್ಕೇ ಅಂದು ತರಂಗ ಪತ್ರಿಕೆಯ ಫೋಟೋ ಕಾಪಿಗಳು ಬ್ಲಾಕ್‌ನಲ್ಲಿ ೧೦೦ ರುಪಾಯಿಗೆ ಮಾರಾಟವಾಗಿದ್ದವು. ಇದೆಲ್ಲ ‘butterfly effect’
ವಿಶ್ಲೇಷಣೆಗಳು. ಬ್ರೆಜಿಲ್ಲಿನ ಪಾತರಗಿತ್ತಿ ತಪ್ಪಾಗಿ ಹಾರಿ ಕೂತರೆ ಜಗತ್ತೇ ಸರ್ವನಾಶವಾಗಲಿದೆ ಎಂಬ ಕಲ್ಪಿತ ವಾದ. ಈ ‘ಪ್ರಳಯವಾಗುತ್ತದೆ’ ಎಂಬುದನ್ನು ತೀರಾ ಗಂಭೀರವಾಗಿ ಪರಿಗಣಿಸುವ ಕೆಲವು ಕಲ್ಟ- ಧರ್ಮಪಂಥಗಳು ಇಂದಿಗೂ ಇವೆ. ೧೯೯೬ರಲ್ಲಿ Heaven’s Gate ಎಂಬ ಅಮೆರಿಕನ್ ಕ್ರಿಶ್ಚಿಯನ್ ಕಲ್ಟ ಗುಂಪು, ‘ಪ್ರಳಯವಾಗಲಿದೆ, ಇದರಿಂದ ಬದುಕುಳಿಯಬೇಕೆಂದರೆ ೨೯ ಸೆಪ್ಟೆಂಬರ್ ೧೯೯೬ರ ಒಳಗಡೆ ದೇಹತ್ಯಾಗ ಮಾಡಬೇಕು. ಹಾಗಾದಲ್ಲಿ ಪ್ರಳಯ ಮುಗಿದ ತಕ್ಷಣ ಅವರೆಲ್ಲರೂ ಮರುಹುಟ್ಟು ಪಡೆಯಲಿದ್ದಾರೆ’ ಎಂದು ನಂಬಿಸಿತ್ತು (ಅವರ ವೆಬ್‌ಸೈಟ್ ಒಮ್ಮೆ ನೋಡಿ:
https://www.heavensgate.com/). ಅಮೆರಿಕದಲ್ಲಿ ಆ ದಿನ ೩೯ ಮಂದಿ ಸುಶಿಕ್ಷಿತರು ಇದನ್ನು ನಂಬಿ ಆತ್ಮಹತ್ಯೆ ಮಾಡಿಕೊಂಡರು! Branch Davidians
ಎಂಬ ಗುಂಪಿನವರಂತೂ- ಅವರು ಪ್ರಳಯ ಎಂದು ಆತ್ಮಹತ್ಯೆಗೆ ಪ್ರಚೋದಿಸುತ್ತಿದ್ದಾರೆ ಎಂದು ಬಂಧಿಸಲು ಮುಂದಾದಾಗ ೭೬ ಜನ ಕಾಡಿನ ಮಧ್ಯೆ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟರು.

ಅಮೆರಿಕದಲ್ಲಷ್ಟೇ ಅಲ್ಲ, ಪೂರ್ವದ ಜಪಾನಿನಲ್ಲೂ ಇಂಥ ಘಟನೆ ನಡೆದಿದೆ. ಪ್ರಳಯವಾಗುತ್ತದೆ ಎಂದು ಟೋಕಿಯೋದ ಮೆಟ್ರೋ ರೈಲಿನಲ್ಲಿ ವಿಷಾ ನಿಲ ಬಿಟ್ಟ ಗುಂಪು ಅಂದು ೧೩ ಜನರ ಸಾವಿಗೆ, ಸಾವಿರಾರು ಜನರ ಅಸ್ವಸ್ಥತೆಗೆ ಕಾರಣವಾಗಿತ್ತು. ಪ್ರಳಯಕ್ಕೆ ಅಂಜಿ ತೀರಾ ಅತಿಯೆನಿಸುವ, ಗುಂಪಿನಲ್ಲಿ ಮಾಡಿಕೊಂಡ ಶತಮೂರ್ಖತನದ ನಡೆಗಳು ಇತಿಹಾಸದಲ್ಲಿ ಸಾಕಷ್ಟಿವೆ.

ಒಟ್ಟಿನಲ್ಲಿ ಪ್ರಳಯವಾಗುತ್ತದೆ, ಅಥವಾ ಬಾಹ್ಯಾಕಾಶದ ಅನಂತ ಸಾಧ್ಯತೆಯಲ್ಲಿ ಒಂದು ಬದಲಾವಣೆ ನಮ್ಮ ಬದುಕನ್ನು ಶಾಶ್ವತ ಬದಲಿಸಿಬಿಡುತ್ತದೆ ಎಂಬ ಅನುಮಾನ, ವಿಚಾರಗಳು ಇಂದು ನಿನ್ನೆಯದಲ್ಲ. ಇಂಥದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬುದು ಇಲ್ಲಿನ ಪ್ರಶ್ನೆ. ಕಲ್ಪನೆ
ಸೃಷ್ಟಿಸುವ ಆಕರ್ಷಕ ಅನುಭವ ಒಂದು ಕಡೆ. ಆದರೆ ನಿಜವಾಗಿಯೂ ಇವುಗಳ ಪರಿಣಾಮಗಳೇನು? ಬದಲಾವಣೆಯಾಗುತ್ತಿರುವುದಂತೂ ನಿಜ. ಭೂಮಿಯ ಅಂತರಾಳ ನಿಧಾನವಾಗಿರುವುದು, ಚಂದ್ರ ನಮ್ಮಿಂದ ದೂರವಾಗುತ್ತಿರುವುದು, ಸೂರ್ಯನಿಗೂ ಕೊನೆಯಿದೆ, ಅವನೂ ಒಂದು ದಿನ
ಸಾಯುತ್ತಾನೆ, ಸಾಯುವಾಗ ನಮ್ಮನ್ನೆಲ್ಲ ತಿಂದೇ ಹೋಗುವುದು ಇವೆಲ್ಲವೂ ನಿಜ.

ನಾವು ಮನುಷ್ಯರು ಎಲ್ಲಿಂದ ಬಂದವರು? ಈ ಭೂಮಿಯಲ್ಲಿ ಜೀವೋದ್ಭವ, ನಂತರದ ವಿಕಾಸ ಯಾವ ಉದ್ದೇಶಕ್ಕಾಯಿತು? ಇವಕ್ಕೆಲ್ಲ ಪ್ರೇರಣೆಯೇನು? ಅಸಲಿಗೆ ಜೀವಿಗಳಲ್ಲಿ ಬದುಕಬೇಕೆಂಬ ಉತ್ಕಟತೆ ಹೇಗೆ ಬಂತು? ಮನುಷ್ಯರಾದ ನಾವೇಕೆ ಈ ರೂಪದ ಇದ್ದೇವೆ? ಮನುಷ್ಯರಕೆ ಅನ್ಯರೂಪಗಳಿಲ್ಲ, ಏಕರೂಪವೇಕೆ? ನಾವು ಹೇಗೆ ಇಂದಿನ ಆಧುನಿಕ ಜಗತ್ತಿನವರೆಗೆ ಬಂದು ತಲುಪಿದೆವು? ನಮ್ಮಷ್ಟೇ ಬುದ್ಧಿವಂತನಾಗಿರುವ ಇನ್ನೊಂದು ಪ್ರಾಣಿ ಏಕೆ ಇಲ್ಲಿ ಅಸ್ತಿತ್ವದಲ್ಲಿಲ್ಲ? ವೈರಸ್‌ನಿಂದ ಆರಂಭವಾದ ಜೀವ ಅಸಂಖ್ಯ ಜೀವಿಗಳಾದವು ಎಂದಾದರೆ ಮನುಷ್ಯರೆಲ್ಲರ ಪ್ರಮಾಣಗಳು ಒಂದೇ ಏಕೆ? ನಮ್ಮ ದೇವಸ್ಥಾನಗಳಲ್ಲಿ ಕೆತ್ತನೆಯಾಗಿರುವ ನಾಗ, ಶಾರ್ದೂಲಗಳು ಒಂದು ಕಾಲದಲ್ಲಿ ನಮ್ಮಷ್ಟೇ, ಅಥವಾ ನಮಗಿಂತ ಬುದ್ಧಿವಂತರಿದ್ದವಾ? ಅವುಗಳಿಗೆ ನಮಗಿಲ್ಲದ ಶಕ್ತಿಯಿತ್ತಾ? ಹಾಗಾದರೆ ಹೇಗೆ ಅವೆಲ್ಲವನ್ನು ಸೋಲಿಸಿ ನಾವಷ್ಟೇ ಉಳಿದುಕೊಂಡುಬಿಟ್ಟೆವು? ನಾವು ಉಳಿದದ್ದೇ ಅಥವಾ ಅವರೇ ನಮಗೆ ಭೂಮಿ ಬಿಟ್ಟುಕೊಟ್ಟು ಹೋದದ್ದೇ? ಯಾವ ಪ್ರಶ್ನೆಯೂ ಅಪ್ರಸ್ತುತ, ನಾನ್ಸೆ ಅಲ್ಲ.

ಭೂಮಿ, ಸೌರವ್ಯೂಹ ಹುಟ್ಟಿದ್ದು ೪೬೦ ಕೋಟಿ ವರ್ಷದ ಹಿಂದೆ. ಸುಮಾರು ೩೮೦ ಕೋಟಿ ವರ್ಷದ ಹಿಂದೆ ನೀರು ದ್ರವರೂಪಕ್ಕೆ ಬರುವಷ್ಟು ತಣ್ಣಗಾಗಿ ಸಮುದ್ರಗಳ ಉಗಮ ಶುರುವಾಯಿತು. ಅಷ್ಟೊಂದು ಪ್ರಮಾಣದಲ್ಲಿ ಭೂಮಿಯ ಏಕಿಷ್ಟು ನೀರು? ಭೂಮಿಯಂತೆ ಚಂದ್ರನಕೆ ಇವೆಲ್ಲ ಸಂಭವಿಸಿಲ್ಲ ಇವೆಲ್ಲ ಏತನ್ಮಧ್ಯೆ ಪ್ರಶ್ನೆಗಳು. ನೀರು ಯಥೇಚ್ಛ ದ್ರವರೂಪದಲ್ಲಿ ಲಭ್ಯವಾದಾಗ ಅಲ್ಲಿ ಜೀವಿ, ಏಕಕೋಶ ಜೀವಿ ಹುಟ್ಟಲಿಕ್ಕೆ ಇನ್ನೊಂದು ೩೦ ಕೋಟಿ ವರ್ಷ ಬೇಕಾಯಿತು. ಮೊದಲ ವೈರಸ್‌ನಿಂದ ಬ್ಯಾಕ್ಟೀರಿಯಾ ಹುಟ್ಟಿ, ವಿಕಾಸವಾಗುತ್ತ ಎರಡು ಕಾಲಿನಲ್ಲಿ ನಡೆಯುವ ಹೋಮೋ ಸೇಪಿಯನ್ ಆಗಲಿಕ್ಕೆ ತಗುಲಿದ್ದು ೩೫೦ ಕೋಟಿ ವರ್ಷ.

ಅಂದಿನ ಹೋಮೋ ಸೇಪಿಯನ್‌ನಿಂದ ಇಂದಿನ ಆಧುನಿಕ ಮನುಷ್ಯನವರೆಗೆ ಬಂದು ತಲುಪಲು ನಾವು ತೆಗೆದುಕೊಂಡದ್ದು ‘ಕೇವಲ’ ೩ ಲಕ್ಷ ವರ್ಷ. ಗುಂಪಿನಲ್ಲಿ ಬೇಟೆಯಾಡುವುದರಿಂದ ಆರಂಭಿಸಿ ಸಂವಹನಕ್ಕೆ ಮಾತಿನ ಬಳಕೆ, ಭಾಷೆಯ ಹುಟ್ಟು, ಕೃಷಿ, ನಂತರದಲ್ಲಿ ಹಲವು ನಾಗರಿಕತೆಗಳ ಹುಟ್ಟು,
ಸಾವು, ಮರುಹುಟ್ಟು, ಯುದ್ಧಗಳು, ವೇದ, ತಾಳೆಗರಿ, ಪುಸ್ತಕ, ವಾಸ್ತುಶಿಲ್ಪ, ಪಿರಮಿಡ್, ಕೈಲಾಸ ದೇವಸ್ಥಾನ, ರೋಮ, ರಾಮ, ನಳಂದಾ, ಪರಕೀಯರ ದಾಳಿ, ಸ್ವಾತಂತ್ರ್ಯ ಹೋರಾಟ- ಅಬ್ಬಾ, ಅದೆಂಥಾ ಪ್ರಯಾಣ!

ಅನನ್ಯ. ಅದು ಬಿಡಿ, ಇಂದು ನೆಲೆನಿಂತಿರುವ ಬಹುತೇಕ ನಗರಗಳು, ಅಲ್ಲಿನ ಎತ್ತೆತ್ತರದ ಕಟ್ಟಡಗಳು, ಝಗಮಗಿಸುವ ದೀಪಾಲಂಕೃತ ಬೀದಿಗಳು, ವಿಮಾನ, ಕಾರು, ವಾಹನಗಳು ಇವೆಲ್ಲವಂತೂ ಕೆಲವೇ ನೂರು ವರ್ಷಗಳಲ್ಲಿ ತಯಾರಾದವು. ನಮ್ಮ ಬದುಕಿನ ದೆಸೆಯನ್ನೇ ಬದಲಿಸಿದ ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ ಇವೆಲ್ಲ ಕೆಲವೇ ದಶಕಗಳ ಹಿಂದಿನವು! ಈಗಂತೂ ಪ್ರತಿ ದಶಕ ಕಳೆಯುವುದರೊಳಗೆ ಬದುಕು ಸಂಪೂರ್ಣ ಬದಲಾಗುತ್ತಿದೆ, ವೇಗ ಹೆಚ್ಚುತ್ತಿದೆ.

ನಾವಿರುವ ಭೂಮಿಗೂ ಅಂತ್ಯವಿದೆ. ಅಂತ್ಯವೆಂದರೆ ಭೂಮಿಗಲ್ಲ. ನಮಗೆ ಈ ಭೂಮಿಯಲ್ಲಿ ಸುಮಾರು ೧-೨ ನೂರು ಕೋಟಿ ವರ್ಷ ಬದುಕುವ ವಾತಾವರಣ ಇರುವ ಸಾಧ್ಯತೆಯಿದೆ. ಅದಾದ ನಂತರ ಸೂರ್ಯ ಹಿಗ್ಗಿ, ಭೂಮಿಯ ಮೇಲೆ ಅಂದಾಜಿಸಲಾಗದ ವಿಕೋಪಗಳು ನಡೆದು ಕೊನೆಗೊಂದು ದಿನ ಸೂರ್ಯನೇ ಭೂಮಿಯನ್ನು ನುಂಗಲಿದ್ದಾನೆ. ಮುಂದೊಂದು ದಿನ ನಮ್ಮ ಗ್ಯಾಲಕ್ಸಿ ಇನ್ನೊಂದು ಗ್ಯಾಲಕ್ಸಿಗೆ ಡಿಕ್ಕಿಹೊಡೆಯಲಿದೆ. ಆದರೆ ಅದೆಲ್ಲ ದಕ್ಕಿಂತ ಮೊದಲು ವಾಸಯೋಗ್ಯವಾಗಿರುವ ಭೂಮಿಯ ಆಯಸ್ಸು ಎರಡಲ್ಲ, ಒಂದೇ ಕೋಟಿ ವರ್ಷವೆಂದಿಟ್ಟುಕೊಳ್ಳೋಣ.

ಅದು ಮನುಷ್ಯ ಸಂತತಿಯ ಗರಿಷ್ಠ ಆಯಸ್ಸು. ಅಷ್ಟರೊಳಗೆ ನಾವೇ ವಾತಾವರಣ ಹದೆಗೆಡಿಸಿಕೊಂಡರೆ, ಅಥವಾ ಕ್ಷುದ್ರಗ್ರಹ ಬಂದಪ್ಪಳಿಸಿದರೆ, ಅಥವಾ ಯಾವುದೋ ಒಂದೆರಡು ಜ್ವಾಲಾಮುಖಿಗಳು ಬಾಯಿತೆರೆದುಕೊಂಡರೆ ಅದರಿಂದಾಗುವ ನಾಶದಿಂದ ಮೊದಲೇ ಸರ್ವನಾಶವಾಗಬಹುದು. ಜ್ವಾಲಾ ಮುಖಿಯಿಂದಲೇ ಡೈನಸಾರಸ್ ಆದಿಯಾಗಿ ಶೇ. ೮೦ ಜೀವಿಗಳು ೨೦೦ ಕೋಟಿ ವರ್ಷದ ಹಿಂದೆ ನಾಶವಾಗಿದ್ದವು. ಇರಲಿ, ಅದ್ಯಾವುದೂ ಸಂಭವಿಸಲಿಕ್ಕಿಲ್ಲ ಎಂದೇ ಇಟ್ಟುಕೊಂಡಲ್ಲಿ ಮುಂದಿರುವುದು ನೂರು ಕೋಟಿ ವರ್ಷ.

ನೂರು ಕೋಟಿ ವರ್ಷವೆಂದರೆ ನೂರು ಕೋಟಿ ರುಪಾಯಿ ಎಂಬಂತೆ ತಾತ್ಸಾರ ಮಾಡುವಂತಿಲ್ಲ. ಅದೊಂದು ಬಹು ದೀರ್ಘಕಾಲ. ನಾವು ಮನುಷ್ಯ ಇತಿಹಾಸವನ್ನು ಯಾವತ್ತೂ ಶತಮಾನಗಳಲ್ಲಿ, ಸಾವಿರ ವರ್ಷದ ಲೆಕ್ಕದಲ್ಲಿ ನೋಡುತ್ತೇವೆ, ವಿಕಾಸವಾದವನ್ನು ಕೆಲವು ಲಕ್ಷ ವರ್ಷಗಳಲ್ಲಿ. ನೂರು ಕೋಟಿ ಎಂದರೆ ಹತ್ತು ಸಾವಿರ ಲಕ್ಷ ವರ್ಷ. ಶೂನ್ಯದಿಂದ ಜೀವಿಯ ಉಗಮವಾಗಿ ಅದು ಮನುಷ್ಯನವರೆಗೆ ರೂಪಾಂತರವಾಗಲು ಬೇಕಾಗಿರುವ ೩೫೦ ಕೋಟಿ ವರ್ಷ ತಗುಲಿರಬಹುದು. ಆದರೆ ಮಂಗನಿಂದ ಮನುಷ್ಯನಾಗಿ ರೂಪಾಂತರವಾಗಲು ತಲುಪಿರುವ ಲೆಕ್ಕ ೮೦ ಲಕ್ಷ ವರ್ಷ ಮಾತ್ರ. ಅದು ಮಂಗನಿಂದ ಇಂದಿನ ಮನುಷ್ಯನಾಗಲು ನಾವು ತೆಗೆದುಕೊಂಡ ಸಮಯ.

ಈಗ ತಾಂತ್ರಿಕತೆ ಇತ್ಯಾದಿ ಬೆಳೆದಿದೆ, ಬದುಕೇ ಬದಲಾಗಿದೆ. ಹೀಗಿರುವಾಗ ಮನುಷ್ಯ ಇಲ್ಲಿಂದ ಮುಂದೆ ರೂಪಾಂತರವಾಗದೇ ಇರುತ್ತಾನೆಯೇ? ಜೀವಿ ಸಂಕೀರ್ಣವಾಗುತ್ತಿದ್ದಂತೆ, ಜತೆಯಲ್ಲಿ ಬದುಕುವ ರೀತಿ ಬದಲಿಸಿಕೊಂಡಂತೆ ವಿಕಸನವಾಗುವ, ಹೊಂದಿಕೊಳ್ಳುವ ವೇಗ ಕೂಡ ಇನ್ನಷ್ಟು ಹೆಚ್ಚೆಚ್ಚು.
ಅಷ್ಟೇ ಅಲ್ಲ, ಹತ್ತುಸಾವಿರ ಲಕ್ಷ ವರ್ಷವೆಂದರೆ ಇಂದಿರುವ ಹಾವು, ಹರಣೆ, ಅಥವಾ ಮಂಗ, ಗೊರಿ ಮೊದಲಾದವುಗಳೇ ಬದುಕಿ ವಿಕಾಸನವಾಗುತ್ತ ಹೋದರೆ ಅವು ಮುಂದೊಂದು ದಿನ ನಮಗಿಂತ ಬುದ್ಧಿವಂತ ಪ್ರಾಣಿಯಾಗಿ ಹೊರಹೊಮ್ಮಬಹುದು. ಆ ಪ್ರಭೇದ-species ಬೇರೆಯದೇ ರೂಪದ್ದಿರಬಹುದು. ೮೦ ಲಕ್ಷ ವರ್ಷದಲ್ಲಿ ಮಂಗನಿಂದ ಮನುಷ್ಯರಾಗಿದ್ದೇವೆ ಎಂದರೆ ಇನ್ನುಳಿದ ಹತ್ತು ಸಾವಿರ ಲಕ್ಷ ವರ್ಷದಲ್ಲಿ ನಾವು ಮನುಷ್ಯರು ಇಂದಿನ ಮನುಷ್ಯರಂತೆಯೇ ಉಳಿದುಬಿಡುತ್ತೇವೆಯೇ? ನಾವೂ ವಿಕಾಸವಾಗುತ್ತಿದ್ದೇವೆ, ನಮ್ಮ ಮಿದುಳು ಚಿಕ್ಕದಾಗುತ್ತಿದೆ ಇತ್ಯಾದಿ ನಾವು ಗ್ರಹಿಸಿದ್ದೇವೆ.

ಅಷ್ಟೇ ಅಲ್ಲ, ನಾವಿಂದು ಭೂಮಿಯ ಎಲ್ಲ ಭಾಗದಲ್ಲೂ ನೆಲೆಸಿದ್ದೇವೆ. ಅಲ್ಲಿನ ವಾತಾವರಣ ಬೇರೆ ಬೇರೆ. ಅಂತೆಯೇ ಮುಂದಿನ ದಿನಗಳಲ್ಲಿ ಒಂದೊಂದು ಜಾಗದಲ್ಲಿ ಒಂದೊಂದು ವೈಪರೀತ್ಯಗಳು ಹೆಚ್ಚಲಿವೆ. ಅದಕ್ಕನುಗುಣವಾಗಿ ಆಯಾ ಜಾಗದಲ್ಲಿ ವಿಕಾಸವಾಗುತ್ತ ಹೋದಲ್ಲಿ, ಅಥವಾ
ಇಂದಿನಂತೆ ಮನುಷ್ಯನ ಅಂತಾರಾಷ್ಟ್ರೀಯ ವಲಸಾ ಕ್ರಮ ಮುಂದುವರಿದಲ್ಲಿ ಮನುಷ್ಯರಲ್ಲಿಯೇ ಸಾವಿರಾರು, ಅಥವಾ ಹತ್ತಾರು ಹೊಸ ನಮೂನೆಯ ಮನುಷ್ಯರು ಇನ್ನೊಂದು ೨೦-೩೦ ಲಕ್ಷ ವರ್ಷದಲ್ಲಿ ಬರಬಹುದು. ಆಗ ಅವರುಗಳ ನಡುವೆಯೇ ಯುದ್ಧ, ಪೈಪೋಟಿ ನಡೆಯಬಹುದು, ಅಥವಾ ಅನಿವಾರ್ಯ ಸ್ನೇಹ ಬೆಳೆದು ಒಂದೊಂದು ವರ್ಗ ಒಂದೊಂದು ದೇಶ, ಖಂಡ ತಮ್ಮದೆಂದು ಅವರಿಸಿಕೊಳ್ಳಬಹುದು.

ಅವುಗಳ ನಡುವೆ ವ್ಯಾಪಾರ, ವ್ಯವಹಾರ, ತಾಂತ್ರಿಕ ಮಾಹಿತಿಗಳ ವಿನಿಮಯ ನಡೆಯಬಹುದು. ಈಗಾಗಲೇ ಅಸಂಖ್ಯ ಸಂಕೀರ್ಣ ಜೀವಿಗಳು  ಭೂಮಿ ಯಲ್ಲಿವೆ. ಅವು ಇನ್ನಿರುವ ಕಾಲದಲ್ಲಿ ಏನು ಬೇಕಾದರೂ ಬದಲಾವಣೆಯಾಗಿ ಹೊಸ ಜೀವ ಪ್ರಭೇದಗಳು ಹುಟ್ಟಿಕೊಳ್ಳಬಹುದು. ಈ ಕಲ್ಪನೆಗೆ ಮಿತಿಯೇ ಇಲ್ಲ. ಏಕೆಂದರೆ ಅಷ್ಟೂ ಸಾಧ್ಯತೆಗಳು. ಇದೆಲ್ಲದರ ನಡುವೆ ಚಂದ್ರ ನಮ್ಮಿಂದ ದೂರ ಹೋಗುವುದು, ಭೂಮಿಯ ಅಂತರಾಳದ ಚಲನೆ ಇತ್ಯಾದಿ ವಿಷಯಗಳು. ಇವೆಲ್ಲವೂ ನಮ್ಮ ಅಂಕುಶಕ್ಕೆ ಮೀರಿದ ಅಸಂಖ್ಯ ಸಾಧ್ಯತೆಗಳು. ಇವುಗಳನ್ನು ಅಲಕ್ಷಿಸಬೇಕೇ? ಅಲಕ್ಷಿಸುವ ಅಗತ್ಯವಿಲ್ಲ ಆದರೆ ಗ್ರಹಿಸಬೇಕಾದದ್ದು ಅತ್ಯಗತ್ಯ.

ಅವು ದೀರ್ಘಕಾಲದ ಬದಲಾವಣೆಗಳು. ಅವೆಷ್ಟು ನಿಧಾನ ಎಂದರೆ ಪ್ರಕೃತಿಯಲ್ಲಿ ಅವಕ್ಕೆ ಒಗ್ಗಿಕೊಳ್ಳುವಷ್ಟು, ನಮ್ಮನ್ನು ನಾವೇ ಅಚಿಂತ್ಯ ಬದಲಿಸಿ ಕೊಳ್ಳುವಷ್ಟು ಸಮಯವೂ ನಮಗಿರುತ್ತದೆ. ಭೂಮಿಯ ದಿನ ೨೫ ಗಂಟೆಯಾಗುತ್ತದೆ ಎಂದರೆ ಅದೇನು ನಾಳೆ ಬೆಳಗ್ಗೆಯಿಂದ ಜಾರಿಯಾಗಿ ಬಿಡಲಿಕ್ಕೆ ಯಾವುದೇ ಕಾನೂನೋ ಅಥವಾ ನೋಟು ಅಮಾನ್ಯೀಕರಣವೋ ಅಲ್ಲ. ೧.೭ ಮಿಲಿ ಸೆಕೆಂಡ್‌ನಷ್ಟು ದಿನ ದೀರ್ಘವಾಗಲು ಒಂದು ಶತಮಾನ ಬೇಕು. ೪೬೦ ಕೋಟಿ ವರ್ಷದ ಹಿಂದೆ, ಜೀವು ಉಗಮವೇ ಆಗದಿರುವಾಗ ಭೂಮಿಯ ಒಂದು ದಿನ ೬ ಗಂಟೆ ಇತ್ತು. ಜೀವ ವಿಕಾಸವಾಗುವಾಗ ಕೂಡ ಈ ವೇಗ ತಗ್ಗುತ್ತಲೇ ಇತ್ತು, ಭೂಮಿಯಲ್ಲಿ ದಿನ ದೀರ್ಘವಾಗುತ್ತಲೇ ಇತ್ತು.

ವಿಕಾಸವಾಗುತ್ತ ಅದರ ಜತೆಯಲ್ಲಿಯೇ ಇಂದಿನ ೨೪ ಗಂಟೆಗೆ ದಿನ ಎಂಬುದಕ್ಕೆ ಒಗ್ಗಿಕೊಂಡಿಲ್ಲವೇ ಹಾಗಾದರೆ? ಹಾಗೆಯೆ ದಿನಕ್ಕೆ ೨೫ ಗಂಟೆಯಾ ದಾಗಲೂ. ದಿನಕ್ಕೆ ೨೫ ಗಂಟೆ ಎಂದರೆ ಅದೊಂದೇ ಬದಲಾಗಿರುವುದಿಲ್ಲ. ಅದರ ಜತೆಯಲ್ಲಿ ಭೂಮಿಯೂ, ವಾತಾವರಣವೂ, ಋತುಮಾನವೂ ಎಲ್ಲವೂ
ಬದಲಾಗಿರುತ್ತವೆ. ಅದಕ್ಕೆ ತಕ್ಕ ಮಾರ್ಪಾಡು ಕೂಡ ನಮ್ಮಲ್ಲಿ ಆಗಿರುತ್ತದೆ. ಆಗ ನಾವು ಇಂದಿನ ಮನುಷ್ಯರಾಗಿರುವುದಿಲ್ಲ. ಇಂದಿನ ಯಾವ ಭಾಷೆ, ಧರ್ಮ, ಕಾನೂನು, ಕಟ್ಟಡ, ನಗರ, ಊರು, ದೇಶ, ಲೈನ್ ಆಫ್ ಕಂಟ್ರೋಲ್, ಸಂಸ್ಕೃತಿ, ರೂಪ, ಸೆP, ಆಣೆಕಟ್ಟು, ರಸ್ತೆಗಳು, ನಾವಿಂದು ಬರೆಯುವ ಲೇಖನ, ಲೇಖನದ ಮೂಲಕ ಏನೋ ಒಂದು ಹೇಳುವ ಪದ್ಧತಿ, ತ್ರಿಕೆಗಳು, ಇಂದಿನ ಮೀಡಿಯಾ, ತಂತ್ರಾಂಶ, ಸರಕಾರಿ ಪದ್ಧತಿ, ನರೇಂದ್ರ ಮೋದಿ, ಟ್ರಂಪ್, ಬಿಜೆಪಿ, ಕಾಂಗ್ರೆಸ್, ಆಡಳಿತ ಇವು ಯಾವುವೂ ಇರುವುದಿಲ್ಲ.

ಈ ದೀರ್ಘ ಕಾಲಮಾಪಕದಲ್ಲಿ ಇದನ್ನೆಲ್ಲ ನೋಡುವಾಗ ಭಾಷೆ ನಶಿಸುತ್ತಿದೆ, ಸಂಸ್ಕೃತಿ ಹಾಳಾಗುತ್ತಿದೆ, ರಾಜಕಾರಣ ಹದಗೆಡುತ್ತಿದೆ, ಧರ್ಮಗಳು, ಆಚರಣೆಗಳು ಕೊನೆಯಾಗುತ್ತಿವೆ ಎಂಬಿತ್ಯಾದಿ ಪುಕಾರುಗಳು ಅರ್ಥವನ್ನೇ ಕಳೆದುಕೊಂಡುಬಿಡುತ್ತವೆ. ಏಕೆಂದರೆ ಇವೆಲ್ಲ ಬದಲಾವಣೆಯ ಅಗಾಧತೆ ಯಲ್ಲಿ ನಗಣ್ಯ. ಬದಲಾವಣೆ ಎಂದಿಗೂ ನಿರಂತರ. ಕಳೆದ ಇನ್ನೂರೇ ವರ್ಷದಲ್ಲಿ ಜಗತ್ತನ್ನು ನಾವು ಸಂಪೂರ್ಣ ಹದಗೆಡಿಸಿದ್ದೇವೆ. ಪ್ರಪಂಚವನ್ನು ಪ್ಲಾಸ್ಟಿಕ್‌ನಿಂದ ತುಂಬಿದ್ದೇವೆ, ನಮಗೇ ವಿಷವಾಗುವ ರಾಸಾಯನಿಕವನ್ನು ಬೇರಿನ್ನೊಂದು ಉದ್ದೇಶಕ್ಕೆ ಕಂಡುಹಿಡಿದು ಈಗ ನಾವು ಬಳಸುವ ನೀರು, ಗಾಳಿಗೇ ವಿಷ ಸುರಿದುಕೊಂಡಿದ್ದೇವೆ. ರಾಸಾಯನಿಕಗಳು ಹೊಟ್ಟೆ ಸೇರಿ, ಕೂದಲ ಅಂಚಿನವರೆಗೂ ತಲುಪಿ ಆಗಿದೆ, ಪ್ಲಾಸ್ಟಿಕ್ ಸೂಕ್ಷ ಕಣಗಳು ಇಂದು ಭ್ರೂಣದಲ್ಲಿರುವ ಶಿಶುವಿನಲ್ಲಿ ಕಾಣಿಸಿಕೊಂಡಿವೆ.

ಇದೆಲ್ಲದರ ಜತೆಯಲ್ಲಿ ಸಾಂಕ್ರಾಮಿಕದಿಂದಾಗಿ ನಾವು ಮನುಷ್ಯರು ಅದೆಷ್ಟು ಸೂಕ್ಷ , ಭೇದ್ಯ (vulnerable) ಎಂಬ ಅರಿವಾಗಿದೆ. ಜತೆಯಲ್ಲಿ ಆಹಾರ ಒದಗಿಸುವ ಭೂಮಿಯ ಮೇಲ್ಮಣ್ಣು ಅನಾಚಾರ ಎಬ್ಬಿಸಿ ಆಗಿದೆ. ಇವೆಲ್ಲವೂ ಕೆಲವೇ ಶತಮಾನದಲ್ಲಿ ಸಾಧ್ಯವಾಗಿ ನಡೆದವು. ಹೀಗಾಗಿ ಸದ್ಯ ನಾವು
ಯೋಚಿಸಬೇಕಾದದ್ದು ಮುಂದಿನ ನೂರಿನ್ನೂರು ವರ್ಷದ ನಂತರ ಏನೆಂಬುದರ ಬಗ್ಗೆ ಮಾತ್ರ. ಅದಾದ ಮೇಲೆ, ಅದು ಕಳೆದರಷ್ಟೇ ಮುಂದಿನ ಹತ್ತು ಸಾವಿರ ಲಕ್ಷ ವರ್ಷವಲ್ಲವೇ? ಈಗ ಹೇಳಿ- ಚಂದ್ರ ಭೂಮಿಯಿಂದ ದೂರ ಹೋಗಿ ದಿನಕ್ಕೆ ೨೫ ಗಂಟೆಯಾದರೆ ಎಂಬಿತ್ಯಾದಿ ಸಹಜ, ವಿಲಂಬಿತ
ಬದಲಾವಣೆಗೆ ತಲೆ ಕೆಡಿಸಿಕೊಳ್ಳಬೇಕೇ? ಜಂಗಮಕ್ಕಳಿವುಂಟು ಎನ್ನುವುದೊಂದೇ ಇಲ್ಲಿನ ಸತ್ಯ. ಅಷ್ಟೇ ತಿಳಿದಿದ್ದರೆ ಸದ್ಯಕ್ಕೆ ಸಾಕು.