Friday, 20th September 2024

ತಿರುಪತಿ ತಿಮ್ಮಪ್ಪನ ಕೃಪಾಕಟಾಕ್ಷ ಇರಲೇಬೇಕಿತ್ತು

Single Point Of Failure (SPOF) ಮೊನ್ನೆಯ ಚಂದ್ರಯಾನದ ಲೈವ್ ನೋಡುತ್ತಿದ್ದಾಗ ನನಗೆ ಈ ಶಬ್ದಪುಂಜ ಪದೇ ಪದೆ ನೆನಪಿಗೆ ಬರುತ್ತಿತ್ತು- ಅದೆಷ್ಟು SPOF ಕಳೆದವು, ಇನ್ನೆಷ್ಟು ಬಾಕಿಯಿದೆ ಎಂದು. ಒಟ್ಟಾರೆ
ಒಂದು ಕಡೆ ಖುಷಿ, ಇನ್ನೊಂದು ಕಡೆ ವಿಫಲವಾಗಿಬಿಟ್ಟರೆ ಎಂದು ಅಷ್ಟೇ ಹೆದರಿಕೆ. ಹಾಗಂತ ಈ ಹೆದರಿಕೆಗೆ ಕಾರಣ ನಮ್ಮವರ ಜ್ಞಾನ-ವಿಜ್ಞಾನದ ಮೇಲಿದ್ದ ಅನುಮಾನವಾಗಿ ರಲಿಲ್ಲ. ಅದು ಬಹುಶಃ ಮಾನವಾತೀತ ಶಕ್ತಿಯ ಮೇಲಿದ್ದ ಅನುಮಾನವಾಗಿತ್ತು. ಏಕೆಂದರೆ ನಾವು ಅಲ್ಲಿ ಮಾಡಲಿಕ್ಕೆ ಹೊರಟ ಕಾರ್ಯ ಮಾನವಾತೀತವೇ ಆಗಿತ್ತು. ಇಸ್ರೋ ದೃಶ್ಯಗಳು ರೋಚಕವೆನಿಸಿದ್ದಕ್ಕೆ ಖುಷಿ ಮತ್ತು ಭಯ ಎರಡೂ ಒಟ್ಟಿಗೆ ಅನುಭವಕ್ಕೆ ಬಂದದ್ದು ಕಾರಣವಿರಬೇಕು.

ಮೊದಲಿಗೆ, ಮೇಲೆ ಹೇಳಿದ ಸಿಂಗಲ್ ಪಾಯಿಂಟ್ ಆಫ್ ಫೇಲ್ಯೂರ್ (SPOF) ಬಗ್ಗೆ ಸ್ವಲ್ಪ ವಿವರಿಸಿಬಿಡುತ್ತೇನೆ. ಕನ್ನಡದಲ್ಲಿ ‘ವೈಫಲ್ಯದ ಏಕಬಿಂದು’ ಎಂದು ಶಬ್ದಾಂತರಿಸಬಹುದು. ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾಗಿಯಾಗುವ ಪೂರ್ಣ ವ್ಯವಸ್ಥೆಯಲ್ಲಿ ಯಾವುದಾದರೊಂದು ಭಾಗ ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಇಡೀ ಮಿಷನ್ ಸಂಪೂರ್ಣ ವಿಫಲವಾಗಿ ಬಿಡುತ್ತದೆ. ಅಂಥ ಒಂದು ಭಾಗ ಅಥವಾ ಹಂತವನ್ನು ಸಿಂಗಲ್
ಪಾಯಿಂಟ್ ಆಫ್ ಫೇಲ್ಯೂರ್ ಅನ್ನುವುದು. ಅಂಥವು ಅಂತರಿಕ್ಷ ಕಾರ್ಯಕ್ರಮವೊಂದರಲ್ಲಿ ನೂರಾರು ಇರುತ್ತವೆ. ಅವುಗಳಲ್ಲಿ ಒಂದೇ ಒಂದು ಸರಿಯಾಗಿ ನಡೆಯದಿದ್ದಲ್ಲಿ ಇಡೀ ಮಿಷನ್ ಮಣ್ಣುಪಾಲು. ರಾಕೆಟ್ ನಿಲ್ಲಿಸಿಡುವ ಸರಪಳಿಗಳಲ್ಲಿ ಯಾವುದೋ ಒಂದು ಸರಪಳಿ ಮಿಲಿ ಸೆಕೆಂಡ್ ವ್ಯತ್ಯಾಸದಲ್ಲಿ ತಡವಾಗಿ ಕಳಚಿಕೊಳ್ಳುವುದು, ರಾಕೆಟ್‌ನಿಂದ ಪೇಲೋಡ್ ಪ್ರತ್ಯೇಕವಾಗುವಾಗ ಯಾವುದೋ ಒಂದು ಚಿಕ್ಕ ಕೊಂಡಿ
ಸರಿಯಾಗಿ ಬಿಟ್ಟುಕೊಳ್ಳದೇ ಇರುವುದು, ಮತ್ತೇನೋ ಒಂದು ಮಧ್ಯದಲ್ಲಿ ಸಿಕ್ಕಿಹಾಕಿಕೊಳ್ಳುವುದು ಇತ್ಯಾದಿ. ಏನೋ ಒಂದು ಚಿಕ್ಕ ಯಾಂತ್ರಿಕ ಕೆಲಸ ನಡೆಯದೆ ಇದ್ದಲ್ಲಿ ಪೂರ್ಣ ಮಿಷನ್ ವಿಫಲವಾಗುತ್ತದೆ ಎಂದರೆ ಅದು SPOF.


‘ನಾಸಾ’ ಇತ್ತೀಚೆಗೆ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನುಅಂತರಿಕ್ಷಕ್ಕೆ ಹಾರಿಸಿದ್ದು ನಿಮಗೆ ಗೊತ್ತಿರುತ್ತದೆ. ೨೦೨೧ರ ಡಿಸೆಂಬರ್ ೨೫. ಆ ಕಾರ್ಯಕ್ರಮ ಹೀಗಿತ್ತು: ಮೊದಲಿಗೆ ದೊಡ್ಡದೊಂದು ಕೊಡೆಯಾಕೃತಿಯ ಟೆಲಿಸ್ಕೋಪ್ ಮತ್ತು ಸೌರಫಲಕವನ್ನು ರಾಕೆಟ್‌ನಲ್ಲಿ ಮಡಚಿ ತುಂಬುವುದು. ನಂತರ ರಾಕೆಟ್ ಆ ಟೆಲಿಸ್ಕೋಪ್ ವ್ಯವಸ್ಥೆಯನ್ನು ಸುಮಾರು ಅರ್ಧ ಗಂಟೆ ಮೇಲಕ್ಕೆ ಸಾಗಿಸಿ ೧೨೦ ಕಿ.ಮೀ. ಎತ್ತರಕ್ಕೆ ಹೋಗಿ ಮುಟ್ಟಿ ಸುವುದು. ಅಲ್ಲಿ ಟೆಲಿಸ್ಕೋಪ್ ಇರುವ ಪೇಲೋಡ್ ರಾಕೆಟ್ ನಿಂದ ಪ್ರತ್ಯೇಕವಾಗುವುದು. ನಂತರ ಮಡಚಿಟ್ಟ ಟೆಲಿಸ್ಕೋಪ್ ಬಿಚ್ಚಿಕೊಳ್ಳುವುದು, ಹೀಗೆ. ಬಾಹ್ಯಾಕಾಶದ ಟೆಲಿಸ್ಕೋಪ್ ಎಂದರೆ ಕೊಡೆ ಆಕೃತಿಯ ಬೃಹತ್ ಡಿಶ್. ಅದೆಲ್ಲವನ್ನು ರಾಕೆ ಟ್‌ನಲ್ಲಿ ತುಂಬಿಸಿ ಕಳುಹಿಸಿ, ಅಲ್ಲಿ ಅಷ್ಟು ಎತ್ತರದಲ್ಲಿ ನಿರ್ವಿ ಘ್ನವಾಗಿ ಬಿಚ್ಚಿಕೊಳ್ಳುವಂತೆ ನೋಡಿಕೊಳ್ಳಬೇಕು. ಈ ಟೆಲಿ ಸ್ಕೋಪ್ ಬಿಚ್ಚಿಕೊಂಡಾಗ ಅದರ (ಸೌರ ಫಲಕದ) ಅಗಲ ಸುಮಾರು ೬೦೪೦ ಸೈಟ್‌ನಷ್ಟು ಆಗುತ್ತದೆ. ಅಂಥ ೬ ಪದರಗಳಲ್ಲಿನ ಲಕ್ಷದಷ್ಟು ಸ್ಕ್ರೂ ಇತ್ಯಾದಿಗಳು ಸರಿಯಾಗಿ ಕೆಲಸ ಮಾಡಬೇಕು. ಅವುಗಳಲ್ಲಿ ಒಂದೇ ಒಂದು ಸ್ಕ್ರೂ ಲೆಕ್ಕಕ್ಕಿಂತ ಕಾಲುಸುತ್ತು ಹೆಚ್ಚು ಸುತ್ತಿಬಿಟ್ಟರೆ ಮೇಲಕ್ಕೆ ಹೋದಾಗ ಇಡೀಮಿಷನ್ ಢಮಾರ್.

ಅಂತರಿಕ್ಷ ಟೆಲಿಸ್ಕೋಪ್‌ಗಳೆಂದರೆ ಸಾಮಾನ್ಯ ಕ್ಯಾಮೆರಾ ಲೆನ್ಸ್‌ಗಳಂತಲ್ಲ. ಅವು ನೇರಳಾತೀತ (ಅಲ್ಟ್ರಾವಯಲೆಟ್), ಅತಿಕೆಂಪು (ಇನ್-ರೆಡ್) ಮತ್ತು ವಿದ್ಯುತ್ಕಾಂತೀಯ ತರ ಗಾಂತರಗಳನ್ನು ಗ್ರಹಿಸುವ ಸಾಧನ. ಬಿಲಿಯನ್ ಜ್ಯೋತಿ ರ್ವರ್ಷ ದೂರದಲ್ಲಿನ ಗ್ಯಾಲಕ್ಸಿಯನ್ನು ಸ್ಪಷ್ಟವಾಗಿ ನೋಡ ಬೇಕೆಂದರೆ ಮಧ್ಯದಲ್ಲಿ ಅದೆಷ್ಟೋ ಅಂತರಿಕ್ಷ ಧೂಳು ಗಳಿರುತ್ತವೆ. ಅವುಗಳ ಮೂಲಕ ಬೆಳಕನ್ನು ಗ್ರಹಿಸಲು ಸಾಧ್ಯವಿಲ್ಲ. ಆದರೆ
ಈ ತರಂಗಗಳು ಅವನ್ನು ಹಾದುಬರುತ್ತವೆ. ಕೊಡೆಯನ್ನು ಯಾವ ದಿಕ್ಕಿನಲ್ಲಿ ಇಡಲಾಗುತ್ತದೆಯೋ ಆ ದಿಕ್ಕಿನಿಂದ ಬರುವ ಈ ಎಲ್ಲ ತರಂಗಾಂತರಗಳನ್ನು ಕಂಪ್ಯೂಟರ್ ಮೂಲಕ ಚಿತ್ರವಾಗಿ ಬದಲಿಸಬೇಕು. ಆಮೇಲೆ ಚಿತ್ರಕ್ಕೆ ಬಣ್ಣವನ್ನು ಕೂಡ ಕೃತಕವಾಗಿ ಕೊಡಲಾಗುತ್ತದೆ. ಈ ಟೆಲಿಸ್ಕೋಪ್ ಅನ್ನು ಭೂಮಿಯ ನೆಲದ ಮೇಲೆ ಇಟ್ಟು ನೋಡಬಹುದಿತ್ತಲ್ಲ ಎಂಬ ಪ್ರಶ್ನೆ ಬಾರದಿರದು. ಹಾಗೆ ಮಾಡಲಿಕ್ಕೆ ಸಾಧ್ಯವಿರಲಿಲ್ಲ. ಏಕೆಂದರೆ ಈ ಅಂತರಿಕ್ಷ ಧೂಳನ್ನು ದಾಟಿಬಂದ ವಿಕಿರಣಗಳು ಭೂಮಿಗೆ ಇರುವ ವಾತಾವರಣವೆಂಬ ರಕ್ಷಾಕವಚದಿಂದಾಗಿ ಕೆಳಕ್ಕೆ ಕಲುಷಿತವಾಗದೆ ತಲುಪುವುದೇ ಇಲ್ಲ. ಆ ಕಾರಣಕ್ಕೆ ಅಂತರಿಕ್ಷದಲ್ಲಿ, ವಾತಾವರಣದಾಚೆ ಇದನ್ನು ಇಟ್ಟರೆ ಸೂಕ್ತ. ಜೇಮ್ಸ್ ವೆಬ್ ಟೆಲಿಸ್ಕೋಪ್ ಈ ಹಿಂದೆ ಅಂತರಿಕ್ಷದಲ್ಲಿಟ್ಟ ಹಬಲ್ ಟೆಲಿಸ್ಕೋಪ್‌ಗಿಂತ ಗಾತ್ರದಲ್ಲಿ ದೊಡ್ಡದು ಮತ್ತು ಇದು ಕೇವಲ ಒಂದಿಷ್ಟು ಮೇಲಕ್ಕೆ ಹೋಗಿ ಅಲ್ಲಿಯೇ ನೆಲೆ ಯೂರಿ ಫೋಟೋ ತೆಗೆಯುವ ಟೆಲಿಸ್ಕೋಪ್ ಅಲ್ಲ. ನಾಸಾ ಮೊದಲು ಕಳುಹಿಸಿದ್ದ ಹಬಲ್ ಟೆಲಿಸ್ಕೋಪ್ ಭೂಮಿಯಿಂದ ೫೩೫ ಕಿ.ಮೀ. ಎತ್ತರದಲ್ಲಿ ಇಂದಿಗೂ ಇದೆ, ಅಲ್ಲಿಯೇ ಗಿರಕಿ ಹೊಡೆಯುತ್ತ. ಆದರೆ ಜೇಮ್ಸ್ ವೆಬ್ ಟೆಲಿಸ್ಕೋಪ್ ಭೂಮಿಯನ್ನು ಬಿಟ್ಟು ದೂರ ಸರಿಯುತ್ತ ಸಾಗುವ ಟೆಲಿಸ್ಕೋಪ್. ಅನ್ವೇಷಿಸುತ್ತ ಲಕ್ಷಗಟ್ಟಲೆ, ಸಾಧ್ಯವಾದರೆ ಕೋಟಿಗಟ್ಟಲೆ ಕಿಲೋಮೀಟರ್ ಹೋಗುವ ಕಾರ್ಯಕ್ರಮ. ಇಂಥ ಜೇಮ್ಸ್ ವೆಬ್ ಟೆಲಿಸ್ಕೋಪ್ ಈಗ ಸುಮಾರು ೧೫ ಲಕ್ಷ ಕಿಲೋಮೀಟರ್ ದೂರದಲ್ಲಿದೆ. ಅದೆಷ್ಟು ದೂರವೆಂದರೆ ಅಲ್ಲಿಂದ ಇಲ್ಲಿಗೆ ಬೆಳಕು ಪ್ರವಹಿಸಲು ಸುಮಾರು ಐದು ಸೆಕೆಂಡ್‌ಗಿಂತ ಜಾಸ್ತಿ ಬೇಕು. ಹೀಗೆ ದೂರ ಸಾಗಿಸುವ ಕಾರಣದಿಂದಾಗಿ ಈ ಕಾರ್ಯ ಕ್ರಮದಲ್ಲಿ ಒಂದೇ ಒಂದು ಚಿಕ್ಕ ಅವ್ಯವಸ್ಥೆಯಾದರೂ ಹಾರಿಸಿದ ನಂತರ ಅದರ ಸಮೀಪ ಹೋಗಿ ರಿಪೇರಿ ಮಾಡಲಿಕ್ಕೆಸಾಧ್ಯವಿಲ್ಲ. ಹಾಗಾಗಿ ಸಂಪೂರ್ಣ ಕಾರ್ಯಾನುಕ್ರಮ ಚಾಚೂ ತಪ್ಪದೆ ನಡೆಯಬೇಕು.

ಜೇಮ್ಸ್ ವೆಬ್ ಟೆಲಿಸ್ಕೋಪ್‌ನಲ್ಲಿ ಇದ್ದಸಿಂಗಲ್ ಪಾಯಿಂಟ್ ಆಫ್ ಫೇಲ್ಯೂರ್ ಎಷ್ಟು ಗೊತ್ತೇ? ಬರೋಬ್ಬರಿ ೩೪೪! ಅಷ್ಟು ಅನುಕ್ರಮ ಕಾರ್ಯಗಳಲ್ಲಿ ಯಾವುದೇ ಒಂದು ಹಂತ ಅಥವಾ ಸಲಕರಣೆ ಸರಿಯಾದ
ಸಮಯಕ್ಕೆ, ಕರಾರುವಾಕ್ಕಾಗಿ ಕೆಲಸ ಮಾಡಿಲ್ಲವೆಂದರೆ ಅಷ್ಟೂ ಹಣ, ಶ್ರಮ ನೀರುಪಾಲು (!). ಈ ಕಾರಣಕ್ಕೆ ಇಂದಿಗೂ ಇದು ಮಾನವ ನಿರ್ಮಿತ ಅತ್ಯಂತ ಸಂಕೀರ್ಣ ಪ್ರಾಜೆಕ್ಟ್ ಎಂದೇ ಕರೆಯಲ್ಪಡುತ್ತದೆ. ೩೦ ವರ್ಷ ನಡೆದ ತಯಾರಿ ಅದು. ನಾಸಾದ ವಿಜ್ಞಾನಿಗಳ ತಲೆಮಾರುಗಳು ಬದಲಾಗುವಷ್ಟು ದೀರ್ಘಕಾಲ ನಡೆದ ಕಾರ್ಯಕ್ರಮ. ಇದಕ್ಕೆ ತಗುಲಿದ ವೆಚ್ಚ ಬರೋಬ್ಬರಿ ೧೦ಬಿಲಿಯನ್ ಡಾಲರ್ (ಅಂದರೆ, ೮೨,೫೭೮ ಕೋಟಿ
ರೂಪಾಯಿ). ಜೇಮ್ಸ್ ವೆಬ್ ಟೆಲಿಸ್ಕೋಪ್ ಕಾರ್ಯಕ್ರಮದ ಸಂಕೀರ್ಣತೆಯ ಸಂಪೂರ್ಣ ವಿವರವಿರುವ ಅದೆಷ್ಟೋ ವಿಡಿಯೋ, ಡಾಕ್ಯುಮೆಂಟರಿಗಳು ಇಂಟರ್ನೆಟ್‌ನಲ್ಲಿ ನೋಡ ಲಿಕ್ಕೆ ಲಭ್ಯವಿವೆ.

ಅದೆಷ್ಟೋ ಅಂತರಿಕ್ಷ ಕಾರ್ಯಕ್ರಮಗಳು ಇಂಥ ನೂರಾರು SPOFಗಳಲ್ಲಿ ಒಂದೇ ಒಂದು ವಿಫಲವಾಗಿ ಬೂದಿಯಾದ ಉದಾಹರಣೆಗಳು ಬಹಳವಿವೆ. ಸ್ಪೇಸ್ ಷಟಲ್ ಚಾಲೆಂ ಜರ್-೧೯೮೬ ಅಮೆರಿಕನ್ ಬಾಹ್ಯಾಕಾಶ ನೌಕೆ ೭ ಜನ ಗಗನ ಯಾತ್ರಿಗಳನ್ನು ಅಂತರಿಕ್ಷಕ್ಕೆ ಒಯ್ಯುವುದಿತ್ತು. ಆ ಕಾಲದ ಅತ್ಯಂತ ಸಂಕೀರ್ಣ ಕಾರ್ಯಕ್ರಮ ಅದು. ನೂರೆಂಟು ರೀತಿಯಲ್ಲಿ ಅಂದು ಇದ್ದ ತಂತ್ರಜ್ಞಾನಗಳನ್ನೆಲ್ಲ ಬಳಸಿ ತಯಾರಿಸಿದ್ದ ರಾಕೆಟ್. ಗಗನಯಾತ್ರಿಗಳು ರಾಕೆಟ್ ಒಳಗೆ ಕೂತದ್ದಾಯಿತು. ರಾಕೆಟ್ ಮೇಲಕ್ಕೆ ಕೂಡ ಹಾರಿತು. ಆದರೆ ಹಾರಿದ ೭೩ ಸೆಕೆಂಡ್ ನಲ್ಲಿ ಇಡೀ ರಾಕೆಟ್, ಅದರಲ್ಲಿದ್ದ ಅಷ್ಟೂ ಮಂದಿ ಭಸ್ಮವಾಗಿ ಹೋದರು. ಇದೆಲ್ಲದಕ್ಕೆ ಕಾರಣ ಏನಿತ್ತು ಗೊತ್ತಾ? ರಾಕೆಟ್‌ನಲ್ಲಿಒಂದು ಚಿಕ್ಕ ರಿಂಗ್‌ಗೆ ಹಾಕಿದ್ದ ಸೀಲ್ ಬಿಚ್ಚಿಕೊಂಡಿದ್ದು. ಅದು ಇಡೀ ಕಾರ್ಯಕ್ರಮವನ್ನೇ ವಿಫಲವಾಗಿಸಿತ್ತು. ಈ ಸಿಂಗಲ್ ಪಾಯಿಂಟ್ ಆಫ್ ಫೇಲ್ಯೂರ್ ಕೇವಲ ಬಾಹ್ಯಾಕಾಶಕ್ಕಷ್ಟೇ ಸೀಮಿತವಾದ ಪದಪುಂಜವಲ್ಲ. ಟೈಟಾನಿಕ್ ಹಡಗು ಮುಳುಗಿದ ಕಥೆ ನಿಮಗೆಲ್ಲ ಗೊತ್ತೇ ಇರುತ್ತದೆ. ಆ ಹಡಗು ಐಸ್‌ಗೆ ಬಡಿದು ದುರಂತವಾಯಿತಲ್ಲ. ಅಂದುಬರೋಬ್ಬರಿ ೧೫೦೦ಕ್ಕಿಂತ ಜಾಸ್ತಿ ಮಂದಿ ದುರಂತದಲ್ಲಿ ಸತ್ತರು.

ಇಷ್ಟೊಂದು ಸಾವಿಗೆ ಕಾರಣವಾದ SPOF ಯಾವುದು ಗೊತ್ತಾ? ಮುಳುಗಲಿಕ್ಕೆ ಸಾಧ್ಯವೇ ಇಲ್ಲವೆನ್ನುವ ಹೆಗ್ಗಳಿಕೆ ಟೈಟಾನಿಕ್‌ಗೆ ಇತ್ತು. ಅದು ಯಾವಾಗ ಮುಳುಗಿತೋ ಆಗ ಅದರಲ್ಲಿ ಇರುವವರಿಗೆ ಬೇಕಾಗುವಷ್ಟು ಲೈ- ಬೋಟ್‌ಗಳು ಇರಲಿಲ್ಲ. ಹಾಗಾಗಿಯೇ ಹಡಗು ಬಡಿದಾಗ ಸತ್ತವರಿಗಿಂತ ಜಾಸ್ತಿ ಜನ ಸತ್ತಿದ್ದು ನಂತರದಲ್ಲಿ ನೀರಿನಲ್ಲಿ ಈಜಲಾಗದೇ ಮುಳುಗಿ. ಒಂದೊಮ್ಮೆ ಟೈಟಾನಿಕ್ ಬಳಿ ಅಷ್ಟೂ ಜನಕ್ಕೆ ಬೇಕಾದಷ್ಟು ಲೈಫ್ ಬೋಟ್ ಇದ್ದುಬಿಟ್ಟಿದ್ದರೆ ಅಲ್ಲಿನ ಸಾವಿನ ಸಂಖ್ಯೆ ನೂರರ ಆಸುಪಾಸಿನಲ್ಲಿ ಇರುತ್ತಿತ್ತು. ಅದಿಲ್ಲದಿದ್ದದ್ದೇ ಇಲ್ಲಿನ ದುರಂತಕ್ಕೆ ಕಾರಣವಾದದ್ದು. ಅದನ್ನು ಕೂಡ SPOF ಎಂದೇ ಕರೆಯುವುದು. ಅಂದಹಾಗೆ, ಇಂದಿನ ವಿಮಾನ ವ್ಯವಸ್ಥೆಯಲ್ಲಿ ಒಂದೇ ಒಂದು SPOF ಇಲ್ಲದಂತೆ ನೋಡಿಕೊಳ್ಳ ಲಾಗುತ್ತದೆ. ಆ ಕಾರಣಕ್ಕೇ ವಿಮಾನದಲ್ಲಿ ಎರಡೆರಡು ಪೈಲಟ್ ಗಳಿರುವುದು. ಎರಡರಲ್ಲಿ ಒಂದು ಎಂಜಿನ್ ಹಾಳಾದರೆ ಇನ್ನೊಂದರಲ್ಲಿಯೇ ವಿಮಾನ ಹಾರುವ ರೀತಿ ರೂಪಿಸುವುದು. ೨೦೧೦. ಅಮೆರಿಕದ ದಕ್ಷಿಣ ತೀರದಲ್ಲಿರುವ ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಬ್ರಿಟಿಷ್ ಪೆಟ್ರೋಲಿಯಂ ಕಚ್ಚಾತೈಲವನ್ನು ಹೊರತೆಗೆಯುತ್ತಿತ್ತು. ಸಮುದ್ರ ಮಧ್ಯದಲ್ಲಿ ಆಳಕ್ಕೆ ಕೊರೆದ ತೈಲಬಾವಿ. ಈ ರೀತಿ ಕೊಳವೆಯಿಂದ ತೈಲ ಹೊರತೆಗೆಯಲು ಬೇಕಾದ ವ್ಯವಸ್ಥೆ ಸಮುದ್ರದ ಮೇಲ್ಮೈ ಹೊರಗಡೆ ಇರುತ್ತದೆ.

ತೈಲಬಾವಿಗಳನ್ನು ಆಳಕ್ಕೆ ಕೊರೆಯುತ್ತಾ ಹೋದ ಹಾಗೆ, ಭೂಮಿಯ ಒಳಗೆ ಅತ್ಯಂತ ಒತ್ತಡದಲ್ಲಿರುವ ತೈಲ ಮತ್ತು ಗ್ಯಾಸ್ ಕೆಲವೊಮ್ಮೆ ಒಮ್ಮೆಲೇ, ಅತ್ಯಂತ ವೇಗದಲ್ಲಿ ಹೊರ ಬಂದುಬಿಡುತ್ತವೆ. ಇದು ಸಾಮಾನ್ಯವಲ್ಲದಿದ್ದರೂ ಅಸಂಭವ ವಲ್ಲ. ಈ ರೀತಿ ಆದಾಗ ಅದೆಷ್ಟು ಒತ್ತಡದಲ್ಲಿ ಪೆಟ್ರೋಲಿಯಂ ಕಚ್ಚಾತೈಲ ಹೊರಬರುತ್ತದೆಯೆಂದರೆ, ಅದನ್ನು ಸಂಭಾಳಿಸಲಿಕ್ಕೆ ಹಾಕಿದ ಪೈಪ್‌ಗಳಿಗೆ ಸಾಧ್ಯವಾಗುವುದಿಲ್ಲ. ಅಂಥ ಅವಘಡವಾ ದಾಗ ಸ್ವಯಂಚಾಲಿತ ಮುಚ್ಚಳಗಳು, ತಡೆಗಳು ಕಾರ್ಯೋ ನ್ಮುಖವಾಗುವ ವ್ಯವಸ್ಥೆಯಿರುತ್ತದೆ. ಅಂದು ಅಲ್ಲಿ ಉಂಟಾದ ಒತ್ತಡ ಎಷ್ಟಿತ್ತು ಎಂದರೆ ಈ ತಡೆಯುವ, ಕೊಳವೆ ಬಾವಿಯನ್ನು ಬಿಗಿಯಾಗಿ ಮುಚ್ಚುವ ವ್ಯವಸ್ಥೆ ಆ ವೇಗದಲ್ಲಿ ಕೆಲಸ ಮಾಡಲಿಲ್ಲ. ಮುಂದೆ ನಡೆದದ್ದು ದುರಂತ. ಅಲ್ಲಿದ್ದ ೧೧ ಕೆಲಸ ದವರು ಸತ್ತರು. ಅದಷ್ಟೇ ಅಲ್ಲ, ಸುಮಾರು ೪೦ ಲಕ್ಷ ಬ್ಯಾರಲ್ (ಒಂದು ಬ್ಯಾರಲ್ ಎಂದರೆ ಸುಮಾರು ೧೫೯ ಲೀಟರ್) ತೈಲ ಸಮುದ್ರದಲ್ಲಿ ಸೋರಿಕೆಯಾಯಿತು. ಈ ದುರಂತದಿಂದ ಸತ್ತ ಜಲಚರಗಳ ಲೆಕ್ಕವೇ ಇಲ್ಲ ಬಿಡಿ. ಇಂದಿಗೂ ಅಲ್ಲಿನ ಜಲ ಚರಗಳು ಕ್ಯಾನ್ಸರ್‌ನಿಂದ ಬಳಲುತ್ತಿವೆ. ಈ ತೈಲ ಸೋರುವಿಕೆಗೆ
ಬಾಗಿಲು ಹಾಕಿ ಮುಚ್ಚಲಿಕ್ಕೆ ಅಮೆರಿಕಕ್ಕೆ ೮೭ ದಿನ ಬೇಕಾಯಿತು.

ಇಂದಿಗೂ ಅಮೆರಿಕ ಮತ್ತು ಬ್ರಿಟಿಷ್ ಪೆಟ್ರೋಲಿಯಂ ನಡುವೆ ಕಾನೂನು ಸಮರ ನಡೆಯುತ್ತಲೇ ಇದೆ. ಬ್ರಿಟಿಷ್ ಪೆಟ್ರೋ ಲಿಯಂ ಕಂಪನಿಯನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದ್ದು, ಈ ಪ್ರಮಾಣದಲ್ಲಿ ಹಾನಿಯಾಗಲು ಕಾರಣ ಒಂದು ಚಿಕ್ಕ ವ್ಯವಸ್ಥೆಯ ಚಿಕ್ಕ ಭಾಗ ಕೆಲಸ ಮಾಡದಿದ್ದುದು. ಕಲ್ಪನಾ ಚಾವ್ಲಾ ಇದ್ದ ಗಗನನೌಕೆ ಭೂಮಿಯನ್ನು ಪ್ರವೇಶಿಸುವಾಗ ಭಸ್ಮವಾಗಿದ್ದು ಕೂಡ ಒಂದು ಚಿಕ್ಕ ಕಾರಣಕ್ಕೆ. ಆ ನೌಕೆಯ ಎಡಗಡೆಯ ರೆಕ್ಕೆಯಲ್ಲಿ ಚಿಕ್ಕದೊಂದು ದೋಷ ವಿತ್ತು. ಅಲ್ಲಿ ಉಂಟಾದ ಒಂದು ಅತಿಚಿಕ್ಕ ರಂಧ್ರ ಕ್ಷಣಾರ್ಧದಲ್ಲಿ ಬಿಸಿಗಾಳಿಯನ್ನು ನೌಕೆಯ ಒಳಗಡೆ ನುಗ್ಗಿಸಿತು. ಆ ರೆಕ್ಕೆ ಅತ್ಯಂತ ಗಟ್ಟಿ ವಸ್ತುವಿನಿಂದ ಮಾಡಿದ್ದಾಗಿತ್ತು. ಅದನ್ನು ಇಷ್ಟೇ ಉಷ್ಣತೆ ಮತ್ತು ಒತ್ತಡದಲ್ಲಿ ಹಲವು ಬಾರಿ ಪರೀಕ್ಷಿಸಲಾಗಿತ್ತು. ಆದರೂ ಹೀಗಾಗಿಹೋಯಿತು. ಈ ಅಂತರಿಕ್ಷದ ವಿಷಯದಲ್ಲಿ ಅದೆಷ್ಟೇ ಪ್ರಯೋಗ ಮಾಡಿದರೂ ಕೊನೆಯಲ್ಲಿ ಅದು ಹೇಗೆ ಸಂಪನ್ನವಾಗುತ್ತದೆ ಎನ್ನುವುದು ದೈವಚಿತ್ತ ಎಂದೇ ವಿಜ್ಞಾನಿಗಳು, ಎಂಜಿನಿಯರು ಗಳು ಹೇಳುವುದಕ್ಕೆ ಕಾರಣವಿದೆ. ಮೊದಲು ಹೇಳಿದ ಜೇಮ್ಸ್ ವೆಬ್ ಟೆಲಿಸ್ಕೋಪ್‌ನ ಉಡಾವಣೆಯಲ್ಲಿ ಅರ್ಧಕ್ಕಿಂತ ಜಾಸ್ತಿ
SPOF ಇದ್ದದ್ದು ಆ ಕೊಡೆಯಾಕೃತಿಯನ್ನು ಬಿಚ್ಚುವುದರಲ್ಲಿ. ಈ ಕೊಡೆಯನ್ನು ಹತ್ತು ಹಲವು ಬಾರಿ ಭೂಮಿಯಲ್ಲಿ ಮಡಿಸಿ, ಬಿಚ್ಚಿ ಮಾಡಲಾಗಿತ್ತು. ಆದರೆ ಕೊನೆಯ ಬಾರಿ ಸರಿಯಾಗಿ ಮಡಿಸಿರಲಿಲ್ಲ, ಅಥವಾ ಏನೋ ಒಂದು ಚಿಕ್ಕ ವ್ಯತ್ಯಯ ವಾಗಿತ್ತು. ಅಲ್ಲದೆ ರಾಕೆಟ್‌ಗಳ ಭಾಗವನ್ನು, ಅಲ್ಲಿರುವ ಸಲ ಕರಣೆಗಳನ್ನು ಅವು ಅಂತರಿಕ್ಷದಲ್ಲಿ ಯಾವ ಸ್ಥಿತಿಯಲ್ಲಿ ಕೆಲಸ ಮಾಡಬೇಕು ಅದೇ ಸ್ಥಿತಿಯಲ್ಲಿ ಪರೀಕ್ಷೆ ಮಾಡಲಾಗುತ್ತದೆ.

ಬಹುತೇಕ ವಸ್ತುಗಳ ಯಥಾರೂಪ, ಇನ್ನೊಂದು ಮಾಡಿ ಅದನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇಂಥ ಸಮಯದಲ್ಲಿ ಪರೀಕ್ಷಿಸದೇ ಇರುವ ಭಾಗದ ತಯಾರಿಕೆಯಲ್ಲಿ ಒಂದೇ ಒಂದು ಚಿಕ್ಕ ಅಣುವಿನಷ್ಟು ಲೋಪವಾದರೆ? ಇನ್ನು ಮೇಲೆ ಬಳಸುವ ವಸ್ತುವನ್ನೇ ಪ್ರಯೋಗಕ್ಕೆ ಬಳಸಿದರೆ ಅವು ಸಹಜ ವಾಗಿ ಹಿಗ್ಗಿ ಕುಗ್ಗಿ ತಮ್ಮ ಸ್ಥಾಯಿತ್ವವನ್ನು ಕಳೆದುಕೊಳ್ಳುತ್ತವೆ. ಹಾಗಾಗಿ ನೂರು ಬಾರಿ ಸರಿಯಾಗಿ ಕೆಲಸ ಮಾಡಿದ ಭಾಗ
ನೂರಾ ಒಂದನೇ ಬಾರಿ ಬಾಹ್ಯಾಕಾಶದಲ್ಲಿ ವಿಫಲವಾಗಬಹುದು. ಉದಾಹರಣೆಗಳು ಸಾಕು. ಯಾವುದೇ ಬಾಹ್ಯಾಕಾಶದ ಮಿಷನ್ ಇರಲಿ, ಅಲ್ಲಿ ಇಂಥ ಸಿಂಗಲ್ ಪಾಯಿಂಟ್ ಆಫ್ ಫೇಲ್ಯೂರ್ ನೂರಾರು ಇರುತ್ತವೆ. ಅವುಗಳನ್ನೆಲ್ಲ ಅದೆಷ್ಟೇ ಜಪ್ಪಯ್ಯ ಎಂದರೂ ನೂರಕ್ಕೆ ನೂರು ಕೆಲಸ ಮಾಡುವಂತೆ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಈಗ ಚಂದ್ರಯಾನ-೩ರಲ್ಲಿ ಮತ್ತು ಇದಕ್ಕೆ ಹಿಂದಿನ ಚಂದ್ರಯಾನ-೨ರಲ್ಲಿ ಇಂಥ ಅದೆಷ್ಟೋ
SPOFಗಳಿದ್ದವು. ಚಂದ್ರಯಾನ-೨ ವಿಫಲವಾಗಲಿಕ್ಕೆ ಕಾರಣ ಲ್ಯಾಂಡರ್ (ಕೆಳಕ್ಕಿಳಿಸುವ ವಾಹನ)ದಲ್ಲಿನ ಸಾಫ್ಟ್ವೇರ್‌ನಲ್ಲಿ ಆದ ಚಿಕ್ಕ ದೋಷ. ಸಾ-ವೇರ್ ಕೆಳಕ್ಕಿಳಿಸುವಾಗ ಕೊಡುವ ನಿರ್ದೇಶನವನ್ನು ಸರಿಯಾಗಿ ಪಾಲಿಸಲಿಲ್ಲ. ಈ ದೋಷದಿಂದ ಹಾಗಾಯಿತು.

ಅದೆಷ್ಟೇ ಮುಂದುವರಿದಿರಲಿ, ಬೆಳೆದಿರಲಿ, ಇಂಥ ಯಾವುದೇ ಅಂತರಿಕ್ಷ ಕಾರ್ಯಕ್ರಮ ವಿಫಲವಾಗದಂತೆ ನೂರು ಪ್ರತಿಶತ ಗ್ಯಾರಂಟಿ ಕೊಡಲಿಕ್ಕೆ ಯಾವ ದೇಶದ ವಿಜ್ಞಾನಿ, ಎಂಜಿನಿಯರ್‌ರಿಂದಲೂ ಸಾಧ್ಯವೇ ಇಲ್ಲ. ಇಸ್ರೇಲಿ ನಂಥ ತಾಂತ್ರಿಕವಾಗಿ ಮುಂದುವರಿದ ಅದೆಷ್ಟೋ ದೇಶಗಳು ಕೂಡ ಇಂಥದ್ದಕ್ಕೆಲ್ಲ ಕೈ ಹಾಕದೆ ಇರುವುದು ಈ ಕಾರಣಕ್ಕೇ. ಅವು ಏನೋ ಒಂದನ್ನು ಅಂತರಿಕ್ಷಕ್ಕೆ ಕಳುಹಿಸಬೇಕೆಂದರೆ ಅಮೆರಿಕ, ಭಾರತ ಮೊದಲಾದ ದೇಶಗಳ ಮೊರೆಹೋಗು ವುದು. ಇವೆಲ್ಲ ಹೀಗಿರುವುದರಿಂದಲೇ ನಾಸಾ ವಿಜ್ಞಾನಿಗಳು ಉಡಾವಣೆಗಿಂತ ಮೊದಲು ಚರ್ಚಿಗೆ ಹೋಗುವುದು. ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಹತ್ತಿರ ಹೋಗುವುದು. ಏಕೆಂದರೆ ಇಲ್ಲಿ ಕೆಲವು ಮಾನವಾತೀತವಾದವು. ಈ ನಮ್ಮ ಸಾಧನೆ, ಗೆಲುವು ಇವೆಲ್ಲ ನಾವು-ನೀವು ಅಂದಾಜಿಸಲಾಗದಷ್ಟು ದೊಡ್ಡವು. ಹಾಗಾಗಿಯೇ ನಾವು ಅಷ್ಟು ಖುಷಿಪಟ್ಟದ್ದು.
ಅರಿಯದ ತಾಯಿ ಬೆಳೆಯುವ ಮಗುವಿನ ಸಾಧನೆಯನ್ನು ಮುಗ್ಧವಾಗಿ ಹೆಮ್ಮೆಪಡುವಂತೆ ಎದೆಯುಬ್ಬಿಸಿದ್ದು. ಅದು ಬಿಟ್ಟು ಏನೋ ಒಂದು ಅಪದ್ಧ ಮಾತನಾಡುವುದು, ದೇಶ ವನ್ನೇ ಅಣಕಿಸುವ ಕಾರ್ಟೂನ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಹೇಸಿಗೆ ಮಾಡಿಕೊಳ್ಳುವುದು ಇವೆಲ್ಲ ಯಾವ ದೊಡ್ಡ ಕೆಲಸವೂ ಅಲ್ಲ. ಕೆಲವರಿಗೆ ಇಂಥವುಗಳೇ ಜೀವನದ ‘ಸಿಂಗಲ್ ಪಾಯಿಂಟ್ ಆಫ್ ಫೇಲ್ಯೂರ್ ಎನ್ನುವುದೇ ಅರ್ಥ ವಾಗುವುದಿಲ್ಲವಲ್ಲ! ಏನು ಹೇಳೋಣ? ಅಂಥವರಿಗೆ ಗುಲಗಂಜಿಯಷ್ಟು ಬುದ್ಧಿಯನ್ನೂ ಏಡುಕೊಂಡಲವಾಡನೇಕೊಡಲಿ!