ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ಹಲ್ದಿರಾಮ್ನ ಹೆಂಡತಿ ಚಂಪಾದೇವಿ ಮನೆಯಲ್ಲಿ ಮೂಂಗ್ದಾಲ್ (ಹೆಸರು ಬೇಳೆ) ತಿನಿಸನ್ನು ತಯಾರಿಸುತ್ತಿದ್ದಳು. ಊರಿನ ಬೀದಿಬೀದಿಯಲ್ಲಿ, ಮನೆ ಮನೆಗೆ ಸುತ್ತಾಡಿ ಆತ ಅದನ್ನು ಮಾರಿ ಬರುತ್ತಿದ್ದ. ಆತನ ಭುಜಿಯಾದಂತೆಯೇ ಚಂಪಾದೇವಿ ತಯಾರಿಸುತ್ತಿದ್ದ ಮೂಂಗ್ದಾಲೂ ಕೂಡ ಜನರಿಗೆ ರುಚಿಸಿತು.
ಸೇವು, ಶೇವು, ಕರೆ, ಶೇವುಖಾರ, ಕರೆಕಡ್ಡಿ, ಖಾರಕಡ್ಡಿ ಅಥವಾ ಭುಜಿಯಾ, ಎಲ್ಲ ಒಂದೇ. ಇದನ್ನು ತಿಂದಷ್ಟೂ, ಇನ್ನೂ ತಿನ್ನಬೇಕೆಂಬ ಬಯಕೆ ಹೆಚ್ಚುತ್ತಲೇ ಇರುತ್ತದೆ. ಕಳೆದ ಐದು-ಆರು ದಶಕದ ಹಿಂದೆ, ಮುಂದೊಂದು ದಿನ ಇದನ್ನು ಪೊಟ್ಟಣದಲ್ಲಿಟ್ಟು ಮಾರುತ್ತಾರೆ.
ಇದನ್ನು ತಯಾರಿಸುವ ಕಾರ್ಖಾನೆಗಳು ಹುಟ್ಟುತ್ತವೆ ಎಂದು ಯಾರೂ ಯೋಚಿಸಿರಲಿಲ್ಲ. ಹಾಗೊಮ್ಮೆ ಯಾರಾದರೂ ಹೇಳಿದರೆ, ಅಂಥವರನ್ನು ತಲೆ ಸರಿಯಿಲ್ಲ ದವರ ಸಾಲಿಗೆ ಸೇರಿಸಲಾಗುತ್ತಿತ್ತು. ಮದುವೆ, ಉಪನಯನ, ಗೃಹಪ್ರವೇಶ ಏನೇ ಇದ್ದರೂ, ಸಿಹಿತಿಂಡಿಯ ಜತೆ ಖಾರ ತಿಂಡಿಯ ಚರ್ಚೆಯೂ ಆಗುತ್ತಿತ್ತು. ಕಾರ್ಯದ ಮನೆಯಲ್ಲಿ ಊಟಕ್ಕೆ ಸಿಹಿತಿನಿಸುಗಳ ಆಯ್ಕೆಗೆ ಬೇಕಾದಷ್ಟಿದ್ದರೂ, ಮಧ್ಯಾಹ್ನ ಚಹಾ ಅಥವಾ ಕಾಫಿ ಜತೆಗೆ ಆಯ್ಕೆ ಇಂದಿಗೂ ಸೀಮಿತವೇ. ಮೈಸೂರು ಪಾಕ್, ಬೂಂದಿಲಾಡು, ಚೂಡಾ, ಖಾರಕಡ್ಡಿ, ಹೀಗೆ ಹತ್ತು ಎಣಿಸುವುದರಲ್ಲಿ ತಿನಿಸು ಮುಗಿದುಹೋಗುತ್ತದೆ. ಉಳಿದ ಎಲ್ಲಾ ತಿನಿಸುಗಳಿಗಿಂತ ಬೂಂದಿ ಮತ್ತು ಖಾರಕಡ್ಡಿ ಯದ್ದು ಡೆಡ್ಲಿ ಕಾಂಬಿನೇಷನ್. ಒಂದೇ ಬೈಠಕ್ನಲ್ಲಿ ಬೂಂದಿಕಾಳು, ಖಾರಕಡ್ಡಿ ಎರಡನ್ನೂ ಕರಿದು ಮುಗಿಸ ಬಹುದಲ್ಲ! ಬೇರೆಯಾವುದನ್ನೇ ಆದರೂ ಇದರಷ್ಟು ಸಸ್ತಾದಲ್ಲಿ, ಶಿಸ್ತಾಗಿ ಮುಗಿಸುವುದುಕಷ್ಟವೇ.
ಮೊದಲೆಲ್ಲ ಕಾರ್ಯದ ಮನೆಯೆಂದರೆ ಗೌಜೋಗೌಜು. ಕಾರ್ಯಕ್ರಮ ನಡೆಯಬೇಕಾದ ಎರಡು ಮೂರು ದಿನ ಮೊದಲಿಂದಲೇ ತಿನಿಸು ತಯಾರಿಸುವ ಕಾರ್ಯಾಗಾರ ಆರಂಭವಾಗುತ್ತಿತ್ತು. ಅದೇ ಒಂದು ಕಾರ್ಯಕ್ರಮ, ಅದರದ್ದೇ ಒಂದು ಸಂಭ್ರಮ. ಒಂದೆರಡು ದಿನ ಮೊದಲೇ ಬಂದು ಒಲೆ ಹೊತ್ತಿಸುವ ಬಾಣಸಿಗರು, ರಾತ್ರಿಯೆಲ್ಲ ನಿದ್ದೆಗೆಟ್ಟು, ಅವರಸುತ್ತ ಕುಳಿತು, ಬೆರಗುಗಣ್ಣಿನಿಂದ ಅವರು ಹೇಳುವ ಕತೆ ಕೇಳುವ ತಾಯಂದಿರು, ಕೈಗೆಕೊಟ್ಟ ಒಂದೆರಡು ತಿನಿಸನ್ನೇ ಚೀಪುತ್ತ ಅಲ್ಲೇ ತೂಕಡಿಸುವ ಮಕ್ಕಳು, ತಮ್ಮಲೋಕವೇ ಬೇರೆ ಎಂಬಂತೆ ಜಗಲಿಯಲ್ಲಿ ಕುಳಿತು ಪಟ್ಟಾಂಗ ಬಿಗಿಯುವ, ಆಗಾಗ ಚಹಾಕ್ಕೆ ಕಾಯುವ ಗಂಡಸರು. ಈಗ ಕಾಲ ಬದಲಾಗಿದೆ.
ಮನೆಯ ಅಂಗಳದಲ್ಲಿ ಆಗಬೇಕಾದ ಕಾರ್ಯ (ಗೃಹಪ್ರವೇ ಹೊರತುಪಡಿಸಿ) ಸಭಾಂಗಣಕ್ಕೆ, ಛತ್ರಕ್ಕೆ ವರ್ಗಾವಣೆಯಾಗಿದೆ. ಬದಲಾವಣೆ ಜಗದ ನಿಯಮ. ಸಮಯಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕಾದದ್ದೇ ತಾನೆ? ಕಾರ್ಯಕ್ರಮದ ರೀತಿ ರಿವಾಜುಗಳಲ್ಲೇ ಬದಲಾವಣೆಯಾದಾಗ, ತಿಂಡಿ ತಿನಿಸುಗಳ ರೂಪವೂ ಬದಲಾದರೆ ಅಚ್ಚರಿಯೇನಿಲ್ಲ. ಈಗಂತೂ ಬಹುತೇಕ ಎಲ್ಲರೂ ಅದಕ್ಕೆ ಒಗ್ಗಿಕೊಂಡಾಗಿದೆ. ಆದರೆ ಬಹಳ ಮುಂಚೆಯೇ ಇದಕ್ಕೆ ಒಗ್ಗಿಕೊಂಡವರು ಗಂಗಾಬಿಶನ್ ಅಗರ್ವಾಲ್ ಅಥವಾ ಹಲ್ದಿರಾಮ್.
ಹಲ್ದಿರಾಮ್ಸ್ ಎನ್ನುವುದು ಅವರಿಗೆ ಅಪ್ಪ ಅಮ್ಮ ಇಟ್ಟ ಹೆಸರಲ್ಲ. ಗಂಗಾಬಿಶನ್ ಹುಟ್ಟುವಾಗಲೇ ಹಿಟ್ಟಿನಷ್ಟುಬಿಳಿಯಾಗಿದ್ದರಂತೆ. ಅದಕ್ಕೆ ಅವರ ತಾಯಿ ಮತ್ತು ಮಾವ ಅವರನ್ನು ಹಲ್ದಿ (ಹಳದಿಬಣ್ಣ) ಎಂದು ಕರೆಯುತ್ತಿದ್ದರಂತೆ. ಅದೇ ಹೆಸರಿನ ಮುಂದೆ ಪ್ರೀತಿಯಿಂದ ರಾಮ್ ಸೇರಿಸಿ ಕಾಲಕ್ರಮೇಣ ಹಲ್ದಿರಾಮ್ ಆಯಿತಂತೆ.
ಅವರು ಬಿಳಿಬಣ್ಣಕ್ಕೆ ಹಳದಿ ಎಂದು ಯಾಕೆ ಕರೆದರೋ ಗೊತ್ತಿಲ್ಲ. ಒಂದು ವೇಳೆಗೋರೆ (ಬಿಳಿ) ಎಂದು ಕರೆದಿದ್ದರೆ, ಹೆಸರು ಹಲ್ದಿರಾಮ್ ಬದಲು ಗೋರಾರಾಮ್ ಆಗುತ್ತಿತ್ತೇ ವಿನಾ ಉಳಿದ ವಿಷಯದಲ್ಲಿ ಅದಕ್ಕಿಂತ ಹೆಚ್ಚಿನ ವ್ಯತ್ಯಾಸವೇನೂ ಆಗುತ್ತಿರಲಿಲ್ಲ ಬಿಡಿ. ಏಕೆಂದರೆ, ಅವರು ತಾವು ಮಾಡಿದ ಕಾರ್ಯದಿಂದ ಪ್ರಸಿದ್ಧ ರಾದದ್ದೇ ಹೊರತು ಹೆಸರಿನಿಂದಲ್ಲ.
ಎಲ್ಲಿಯವರೆಗೆ ಎಂದರೆ, ಖಾರಕಡ್ಡಿಗೆ ಭುಜಿಯಾ ಎಂಬ ಪರ್ಯಾಯ ಪದವನ್ನು ಪ್ರವರ್ಧಮಾನಕ್ಕೆ ತಂದವರೇ ಹಲ್ದಿರಾಮ್ ಅಂದರೂ ತಪ್ಪಾಗಲಾರದು. ಮಾರ್ವಾಡಿಗಳ ಭಾಷೆಯಲ್ಲಿ ಭುಜನಾ ಎಂದರೆ ಎಣ್ಣೆಯಲ್ಲಿ ಕರಿಯುವುದು ಎಂಬ ಅರ್ಥ. ಕರಿದದ್ದು ಎಂಬ ಕಾರಣಕ್ಕಾಗಿ ಸೇವು ಅಥವಾ ಖಾರಕಡ್ಡಿ ಭುಜಿಯಾ ಆಯಿತು. ಈ ಕಥೆ ಆರಂಭವಾಗುವುದು ರಾಜಸ್ಥಾನದ ಬಿಕಾನೇರ್ನಿಂದ. 1937ರಲ್ಲಿ ತನ್ಸುಖ್ ಹೆಸರಿನ ಮಾರವಾಡಿಯೊಬ್ಬ ತನ್ನಸಹೋದರಿಯಿಂದ ಭುಜಿಯಾ ತಯಾರಿಸುವ ವಿಧಾನವನ್ನು ಕಲಿತ. ಒಂದು ಸಣ್ಣ ಅಂಗಡಿ ತೆರೆದು, ಭುಜಿಯಾ ತಯಾರಿಸಿ, ಮಾರಾಟ ಮಾಡಿ ತನ್ನ ಪರಿವಾರವನ್ನುಸಾಕುತ್ತಿದ್ದ. ಆತನ ಮಗ ಹಲ್ದಿರಾಮ್ ಸಣ್ಣ ವಯಸ್ಸಿನಲ್ಲೇ ಅಂಗಡಿಯಲ್ಲಿ ಕುಳಿತು ತಂದೆಗೆ ಸಹಕರಿಸುತ್ತಿದ್ದ.
ಬುದ್ಧಿವಂತನಾಗಿದ್ದ ಹಲ್ದಿರಾಮ್ ಭುಜಿಯಾ ತಯಾರಿಕೆಯಲ್ಲಿ ಸಾಕಷ್ಟು ಹೊಸ ಪ್ರಯೋಗ ಮಾಡಿದ. ಅದುವರೆಗೆ ಕಡಲೆಹಿಟ್ಟಿನಲ್ಲಿ ತಯಾರಿಸುತ್ತಿದ್ದ ಭುಜಿಯಾಕ್ಕೆ ಮಡಕೆ ಕಾಳಿನಹಿಟ್ಟು ಸೇರಿಸಿ ಇನ್ನಷ್ಟು ರುಚಿಕರವಾಗುವಂತೆಯೂ, ಗಾತ್ರದಲ್ಲಿ ಕಿರುಬೆರಳಿನಷ್ಟು ದಪ್ಪವಾಗಿದ್ದ ಭುಜಿಯಾವನ್ನು ತೆಳುವಾಗಿಸಿ, ಇನ್ನಷ್ಟು
ಗರಿಗರಿಯಾಗುವಂತೆಯೂ ಮಾಡಿದ. ಅಲ್ಲಿಯವರೆಗೂ ಒಂದು ಕಿಲೋ ಭುಜಿಯಾವನ್ನುಎರಡು ಪೈಸೆಗೆ ಮಾರುತ್ತಿದ್ದರು. ಹಲ್ದಿರಾಮ್ ಒಂದು ಕಿಲೋಕ್ಕೆ ಐದು ಪೈಸೆಯಂತೆ ಮಾರಲು ಆರಂಭಿಸಿದ. ಬಿಕಾನೇರ್ನ ಜನ ಇವರ ಅಂಗಡಿಯ ಮುಂದೆ ಭುಜಿಯಾ ಖರೀದಿಸಲು ಸಾಲುಗಟ್ಟಿ ನಿಲ್ಲುತ್ತಿದ್ದರು. ಕ್ರಮೇಣ ಕಿಲೋ ಒಂದಕ್ಕೆ 25 ಪೈಸೆ ಎಂದರೂ ಮಾರಾಟ ವಾಗುತ್ತಿತ್ತು. ಆದರೆ ತಂದೆಯೊಂದಿಗೆ ಬಹುಕಾಲ ನಿಲ್ಲುವ ಭಾಗ್ಯಹಲ್ದಿರಾಮ್ಗೆ ಇರಲಿಲ್ಲ.
ಹಲ್ದಿರಾಮ್ಗೆ ಬಾಲ್ಯವಿವಾಹವಾಗಿತ್ತು. ಆತನ ಹೆಂಡತಿ ಹಾಗೂ ತಾಯಿಯ ಸಂಬಂಧ ಎಣ್ಣೆ ಮತ್ತು ಶಿಗೇಕಾಯಿಯಂತಾಗಿತ್ತು. ಅವಿಭಾಜ್ಯ ಕುಟುಂಬದಲ್ಲಿರುವಂತೆ ಹೆಂಡತಿಯ ಮನವೊಲಿಸಲ ಸಾಧ್ಯವಾಗದಿದ್ದಾಗ ಆತ ಬೇರೆ ಮನೆ ಮಾಡಬೇಕಾಯಿತು. ಆಗಲೇ ಅವನಿಗೆ ಮೂವರು ಮಕ್ಕಳು, ಜತೆಗೆ ಒಬ್ಬ ಮೊಮ್ಮಗನೂ
ಇದ್ದ. ಮನೆ ಬಿಡುವಾಗ ಬಟ್ಟೆಯ ಚೀಲ ಬಿಟ್ಟರೆ ಅವರ ಬಳಿ ಅಂಗಡಿ, ಮನೆ, ಹಣ ಏನೂ ಇರಲಿಲ್ಲ. ದುಡಿದು ಬದುಕುತ್ತೇನೆಂಬ ಆತ್ಮ ವಿಶ್ವಾಸ ಮಾತ್ರ ಆತನಲ್ಲಿ ಭರಪೂರಾಗಿವಾತ್ತು. ಆ ಸಂದರ್ಭದಲ್ಲಿ ಆತನ ಹಳೆಯ ಸ್ನೇಹಿತ ಅಲ್ಲಾಬೇಲಿ ಭೇಟಿಯಾದ. ಕೆಲವು ವರ್ಷಗಳ ಹಿಂದೆ ಹಲ್ದಿರಾಮ್ನಿಂದ ಎರಡು ನೂರು
ರೂಪಾಯಿ ಸಾಲ ಪಡೆದು ಬೇರೆ ಊರಿಗೆ ಹೋಗಿದ್ದ ಅಲ್ಲಾಬೇಲಿ ಬಿಕಾನೇರ್ಗೆ ಹಿಂತಿರುಗಿದ್ದ. ತಾನು ಕೊಟ್ಟ ಹಣವನ್ನು ಹಿಂತಿರುಗಿಸಲು ಕೇಳಿದಾಗ ಆತ
ಇನ್ನೂರರ ಬದಲು ನೂರು ರೂಪಾಯಿ ಮಾತ್ರ ಹಿಂತಿರುಗಿಸಿದ. ಆ ನೂರು ರೂಪಾಯಿ ಮುಂದೊಂದು ದಿನ ಸಾವಿರ ಕೋಟಿ ರೂಪಾಯಿಯ ಕೋಟೆ ಕಟ್ಟುತ್ತದೆ
ಎನ್ನುವುದನ್ನುಹಲ್ದಿರಾಮ್ ಪ್ರಾಯಶಃ ಕನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ.
ಹಲ್ದಿರಾಮ್ನ ಹೆಂಡತಿ ಚಂಪಾದೇವಿ ಮನೆಯಲ್ಲಿ ಮೂಂಗ್ದಾಲ್ (ಹೆಸರು ಬೇಳೆ) ತಿನಿಸನ್ನು ತಯಾರಿಸುತ್ತಿದ್ದಳು. ಊರಿನ ಬೀದಿಬೀದಿಯಲ್ಲಿ, ಮನೆಮನೆಗೆ ಸುತ್ತಾಡಿ ಆತ ಅದನ್ನು ಮಾರಿ ಬರುತ್ತಿದ್ದ. ಆತನ ಭುಜಿಯಾದಂತೆಯೇ ಚಂಪಾದೇವಿ ತಯಾರಿಸುತ್ತಿದ್ದ ಮೂಂಗ್ದಾಲೂ ಕೂಡ ಜನರಿಗೆ ರುಚಿಸಿತು. ಅದರಿಂದ ಸಾಕಷ್ಟು ಹಣವೂ ದೊರಕುತ್ತಿತ್ತು. ಆ ಸಂದರ್ಭದಲ್ಲಿ, ಊರಿನಲ್ಲಿ ಹೊಸ ಜೈನ ಮಂದಿರ ನಿರ್ಮಾಣವಾಯಿತು.
ಮಂದಿರದ ಸಂಕೀರ್ಣದಲ್ಲಿ ಕೆಲವು ಅಂಗಡಿಗಳಿದ್ದವು. ಅದರಲ್ಲಿ ಒಂದನ್ನು ಆತ ಬಾಡಿಗೆಗೆ ಪಡೆದ. ಪುನಃ ತನ್ನ ಮೊದಲ ಪ್ರೇಮವಾದ ಭುಜಿಯಾ ಮಾಡಲು
ಆರಂಭಿಸಿದ. ಕ್ರಮೇಣ ತನ್ನ ಮೆನುಗೆ ಇನ್ನಷ್ಟು ಕುರುಕಲು ತಿಂಡಿ ತಿನಿಸುಗಳನ್ನು ಸೇರಿಸಿಕೊಂಡ. ಇನ್ನೊಂದು ಬಗೆಯ ಸೇವು ತಯಾರಿಸಿ, ಅದಕ್ಕೆ ಬಿಕಾನೇರ್ ಮಹಾರಾಜ ದಂಗರ್ಸೇವ್ ಎಂದು ಹೆಸರಿಟ್ಟು ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡ. ಆ ಸೇವು ದಂಗರ್ಸೇವ್ ಎಂದೇ ಹೆಸರಾಯಿತು. ಈ ಬಾರಿ ಆತನ ಮೂವರು ಮಕ್ಕಳೂ ಆತನೊಂದಿಗೆ ಕೈಜೋಡಿಸಿದರು.
ಆತನ ಭುಜಿಯಾಕ್ಕೆ ಬಿಕಾನೇರ್ನಿಂದ ಆಚೆಗೂ ಸಾಕಷ್ಟು ಬೇಡಿಕೆಯಿತ್ತು. ಒಮ್ಮೆ ಆತನ ಸ್ನೇಹಿತನೊಬ್ಬ, ಮಗನ ಮದುವೆಗೆ ಕಲ್ಕತ್ತಾಕ್ಕೆ ಆಹ್ವಾನಿಸಿದ. ಹೋಗು ವಾಗ ಹಲ್ದಿರಾಮ್ ಒಂದಷ್ಟು ಭುಜಿಯಾ ಮತ್ತು ಇತರ ತಿನಿಸುಗಳನ್ನು ತಯಾರಿಸಿಕೊಂಡುಹೋಗಿದ್ದ. ಅಂದಿನ ಸಮಾರಂಭದಲ್ಲಿ ಅತಿಥಿಗಳು ಹಲ್ದಿರಾಮ್ನ ತಿನಿಸನ್ನುಚಪ್ಪರಿಸಿತಿಂದರು. ಕಲ್ಕತ್ತಾದಲ್ಲಿ ಅಂಗಡಿ ತೆರೆಯುವಂತೆ ಒತ್ತಾಯಿಸಿ, ಅದರಲ್ಲಿಯಶಸ್ವಿಯೂ ಆದರು. ಹಲ್ದಿರಾಮ್ನ ದೇಖರೇಕಿಯಲ್ಲಿ, ಮಕ್ಕಳಾದ ಮೂಲಚಂದ್ ಮತ್ತು ರಾಮೇಶ್ವರ್ಗೆ ಅಂಗಡಿಯನ್ನು ನಡೆಸುತ್ತಿದ್ದರು. ಕಾಲಕ್ರಮೇಣ ದಿಲ್ಲಿ ಮತ್ತು ನಾಗಪುರದಲ್ಲಿಯೂ ಹಲ್ದಿರಾಮ್ ಮಳಿಗೆಗಳು ತೆರೆದು ಕೊಂಡವು. ಆಗ ರಾಮೇಶ್ವರ್ಗೆ ಪಶ್ಚಿಮ ಬಂಗಾಳ, ಮೂಲಚಂದ್ಗೆ ಬಿಕಾನೇರ್ ಉಸ್ತುವಾರಿ ವಹಿಸಿಕೊಟ್ಟು, ತಾನು ಹಿನ್ನೆಲೆಗೆ ಸರಿದ.
ಮಕ್ಕಳು, ಮೊಮ್ಮಕ್ಕಳು ಸೇರಿ ಸಂಸ್ಥೆಯನ್ನುಬೆಳೆಸಿದರು. ನೂರಕ್ಕೂ ಹೆಚ್ಚು ತಿನಿಸುಗಳನ್ನು ತಯಾರಿಸಿದರು. ಖಾರದ ಜತೆ ಸಿಹಿತಿನಿಸುಗಳನ್ನೂ, ರೆಡಿ ಟು ಈಟ್ಗೆ ಪ್ಯಾಕೆಟ್ ಗಳನ್ನು ಸಿದ್ಧಪಡಿಸಿದರು. ಹಲ್ದಿರಾಮ್ ಉಪಹಾರಗೃಹಗಳನ್ನು ತೆರೆದರು. ವಿಶ್ವದ ಎಂಬತ್ತಕ್ಕೂ ಹೆಚ್ಚು ದೇಶಗಳಿಗೆ ತಮ್ಮ ಉತ್ಪಾದನೆಯನ್ನು ತಲುಪಿಸಿದರು. ಇಂದು ಹಲ್ದಿರಾಮ್ ಆದಾಯ ಎಷ್ಟಿದೆ ಗೊತ್ತಾ? ಹೆಸರಾಂತ ಸಂಸ್ಥೆಗಳಾದ ಮ್ಯಾಕ್ಡೊನಾಲ್ಡ್ ಮತ್ತು ಡಾಮಿನೋಸ್ ಪಿಜ್ಜಾ, ಎರಡೂ ಸೇರಿ
ಭಾರತದಲ್ಲಿ ಮಾಡುವ ವ್ಯಾಪಾರದ ಮೊತ್ತಕ್ಕಿಂತಲೂ ಹೆಚ್ಚಾಗಿದೆ. ಹಲ್ದಿರಾಮ್ ಮ್ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಅಥವಾ ಸ್ವತಃ ಹಲ್ದಿರಾಮ್ ಆಗಲಿ, ಯಾರೂ ಎಂಟನೆಯ ತರಗತಿಗಿಂತ ಹೆಚ್ಚು ಓದಿದವರಲ್ಲ. ಆದರೆ ಈ ಮಾರವಾಡಿಗಳ ವ್ಯಾಪಾರಕ್ಕೆ ಅದು ಒಂದು ತೊಡಕು ಎಂದು ಅನಿಸಲೇ ಇಲ್ಲ.
ಹಾಗಂತ ಅವರಿಗೆ ಅಡೆತಡೆಗಳು ಬರಲಿಲ್ಲ ಎಂದಲ್ಲ. ಸಂಕಷ್ಟ ಪರಿಸ್ಥಿತಿಯಲ್ಲೂ ಅದನ್ನು ಎದುರಿಸಿ ಅವರು ಜಯಿಸಿದ್ದರು. ಮೊಮ್ಮಕ್ಕಳಾದ ಶಿವ್ಕಿಶನ್ ನಾಗಪುರ್, ಶಿವ್ ರತನ್ ಬಿಕಾನೇರ್, ಮಧುಸೂದನ್ ಮತ್ತು ಮನೋಹರ್ಲಾಲ್ ಇಲ್ಲಿಯ ಮಳಿಗೆಗಳನ್ನು ನೋಡಿಕೊಳ್ಳುತ್ತಿದ್ದರು. 1983ರಲ್ಲಷ್ಟೇ ದಿಲ್ಲಿಯಲ್ಲಿ ನೂತನ ಮಳಿಗೆ ಆರಂಭವಾಗಿತ್ತು. 1984ರಲ್ಲಿ ನಡೆದ ಸಿಖ್ ದಂಗೆಯಲ್ಲಿ ಅವರ ಮಳಿಗೆ ಅಗ್ನಿಗೆ ಆಹುತಿಯಾಗಿತ್ತು. ಆಗ ಮನೆಯವರೆಲ್ಲ ಸೇರಿ ಮನೆಯಲ್ಲಿಯೇ ತಿನಿಸು ತಯಾರಿಸಿ ಮಾರಿ ಪುನಃ ಗಟ್ಟಿಯಾಗಿ ನಿಂತರು.
ಆತ್ಮವಿಶ್ವಾಸ, ಪರಿಶ್ರಮ ಎಂಬುದಕ್ಕೆ ಇನ್ನೊಂದು ಹೆಸರು ಹಲ್ದಿರಾಮ್ ಎಂದು ತೋರಿಸಿಕೊಟ್ಟರು. 1990ರ ಅಂತ್ಯದಲ್ಲಿ ಪಶ್ಚಿಮ ಬಂಗಾಳದ ರಾಮೇಶ್ವರ್ ಮತ್ತು ಅವನ ಮಕ್ಕಳು ದಿಲ್ಲಿಯಲ್ಲಿ ಮಳಿಗೆ ತೆರೆಯುವ ಸಿದ್ಧತೆ ಮಾಡಿಕೊಂಡರು. ಪಶ್ಚಿಮ ಬಂಗಾಳದಲ್ಲಿ ಹಲ್ದಿರಾಮ್ ಪ್ರಭುಜಿ ಹೆಸರಿನಲ್ಲಿ ಸಂಸ್ಥೆ ನಡೆಸುತ್ತಿದ್ದ ಅವರು ದಿಲ್ಲಿಯ ಹಲ್ದಿರಾಮ್ ಹೆಸರಿನಲ್ಲಿಯೇ ಮಳಿಗೆ ಆರಂಭಿಸಲು ಸಿದ್ಧರಾದಾಗ, ದಿಲ್ಲಿಯವರಿಗೆ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು. ಸುಮಾರು ಹದಿನೈದು ವರ್ಷಕ್ಕಿಂತ ಹೆಚ್ಚು ನಡೆದ ಪ್ರಕರಣದಲ್ಲಿ ದಿಲ್ಲಿಯವರಿಗೆ ಹಲ್ದಿರಾಮ್ಸ್ ವ್ಯಾಪಾರದ ಗುರುತು (ಟ್ರೇಡ್ಮಾರ್ಕ್) ಬಳಸುವ ಹಕ್ಕು ಸಿಕ್ಕಿತು.
ನಾಗಪುರ್, ಬಿಕಾನೇರ್ ಮತ್ತು ದಿಲ್ಲಿಯಲ್ಲಿರುವ ಹಲ್ದಿರಾಮ್, ಒಂದೂವರೆ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಬಿಕಾನೇರ್ ಒಂದರಲ್ಲೇ ಪ್ರತಿ ನಿಮಿಷಕ್ಕೆ ಐವತ್ತರಿಂದ ಅರವತ್ತು ಭುಜಿಯಾ ಪ್ಯಾಕೆಟ್ ತಯಾರಾಗುತ್ತದೆ. ಇತರ ಕಾರ್ಯಗಳಿಗೆ ಯಂತ್ರಗಳನ್ನು ಬಳಸಿದರೂ, ಭುಜಿಯಾವನ್ನುಇಂದಿಗೂ ಕೈಯಲ್ಲೇ ಮಾಡಲಾಗುತ್ತದೆ. ಕಾರ್ಖಾನೆಯಲ್ಲಿ ಒಬ್ಬ ವ್ಯಕ್ತಿ ಪ್ರತಿನಿತ್ಯಇಪ್ಪತ್ತೈದು ಕಿಲೋ ಭುಜಿಯಾ ತಯಾರಿಸುತ್ತಾನೆ. ಹಲ್ದಿರಾಮ್ ಒಂದು ಏಳು ಸಾವಿರ ಕೋಟಿ ರೂಪಾಯಿಯ ಭದ್ರ ಕೋಟೆ ಕಟ್ಟಿಕೊಂಡು ಭಾರತದತಿಂಡಿ ತಿನಿಸುಗಳ ಉದ್ಯಮದಲ್ಲಿ ಸುಭದ್ರವಾಗಿ ನಿಂತಿದೆ.
ಲೇಖಕಿ ಪವಿತ್ರಾ ಕುಮಾರ್ ಅವರು BHUJIA BARONS – The untold story of how Haldiram built a 5000 crore empire ಪುಸ್ತಕದಲ್ಲಿ
ಬಿಕಾನೇರ್ ಭುಜಿಯಾದ ಕತೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಓದಿದರೆ ಭುಜಿಯಾ ತಿಂದಷ್ಟೇ ಸಂತೃಪ್ತಿಯಾಗುತ್ತದೆ. ಭುಜಿಯಾ, ಚಹಾ ಮತ್ತು ಈ ಪುಸ್ತಕ ಒಳ್ಳೆಯ ಕಾಂಬಿನೇಷನ್. ಟ್ರೈಮಾಡಿ.