Friday, 13th December 2024

ಎನ್‍ಇಪಿ ರದ್ದತಿಗೂ ಮೊದಲು ಸಾಕಷ್ಟು ಯೋಚಿಸಬೇಕಿದೆ

-ಪ್ರೊ.ಆರ್.ಜಿ.ಹೆಗಡೆ
ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಕರ್ನಾಟಕದಲ್ಲಿ ರಾಜಕೀಯದಾಟದ ಭಾಗವಾಗಿಹೋಗಿದೆ. ಮುಂದಿನ ವರ್ಷ ದಿಂದ ಎನ್‌ಇಪಿಯನ್ನು ರದ್ದುಗೊಳಿಸಲಾಗುವುದು ಎಂಬ ಮಾತು ಕೇಳಿಬಂದಿವೆ. ‘ರದ್ದಾದರೆ ಬೀದಿಗಿಳಿದು ಹೋರಾ ಡುತ್ತೇವೆ’ ಎಂಬ ಪ್ರತಿಮಾತೂ ಕೇಳಿಬಂದಿದೆ. ಹೀಗಾಗಿ ಎನ್ ಇಪಿಯನ್ನು ಮತ್ತೊಮ್ಮೆ ಕೂಲಂಕಷವಾಗಿ ಅವಲೋಕಿಸಬೇಕಾಗಿ ಬಂದಿದೆ. ಇನ್‌ಇಪಿಯನ್ನು, ಅದರ ಹಿಂದಿದ್ದ ವ್ಯವಸ್ಥೆಯನ್ನು ರಾಜಕೀಯ ಧೂಳಿನಿಂದ ಪ್ರತ್ಯೇಕಿಸಿ ಅವುಗಳ ನಿಜವಾದ ಮೆರಿಟ್‌ಗಳನ್ನು, ಹಾಗೆಯೇ ಸುಧಾರಣೆಗೆ ಕಾಯ್ದಿರುವ ಸವಾಲುಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸ ಬೇಕಿದೆ. ಪದವಿ ಶಿಕ್ಷಣದಲ್ಲಿ ಎನ್‌ಇಪಿಯ ಕುರಿತು ಈ
ಲೇಖನದಲ್ಲಿ ಗಮನಹರಿಸಲಾಗಿದೆ. ಪದವಿ ಹಂತದಲ್ಲಿ ಎನ್‌ಇಪಿ ಜಾರಿಮಾಡಿದ ಮೊದಲ ರಾಜ್ಯ ಕರ್ನಾಟಕ. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ೨೦೨೧-೨೨ರ ಶೈಕ್ಷಣಿಕ ಬ್ಯಾಚ್‌ನಿಂದ ಇದು ಜಾರಿಗೆ ಬಂತು.
ಅಂದರೆ, ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳೀಗ ಪದವಿ ಕಲಿಕೆಯ ೩ನೇ ವರ್ಷವನ್ನು ಪ್ರವೇಶಿಸುತ್ತಿದ್ದಾರೆ. ಹಾಗೆ ನೋಡಿದರೆ, ಈ ನೀತಿಯನ್ನು ‘ಪ್ರಾಯೋಗಿಕವಾಗಿ’ ನಮ್ಮಲ್ಲಿ ಜಾರಿಮಾಡಿದ್ದೂ ಒಳ್ಳೆಯ ಸಂಗತಿಯೇ ಆಗಿತ್ತು. ಏಕೆಂದರೆ ಭಾರತದಂಥ ಸಂಕೀರ್ಣ ದೇಶದಲ್ಲಿ ಶಿಕ್ಷಣ ಸಂಬಂಧಿತ ನೀತಿಯೊಂದರ ಜಾರಿಯಾಗದ ಹೊರತು ಅದರ ಗುಣಾವಗುಣಗಳು, ಸವಾಲುಗಳು ಅರಿವಾಗುವುದಿಲ್ಲ. ಅಲ್ಲದೆ ಶಿಕ್ಷಣವೆಂಬುದು ನಿರಂತರ ರೂಪುಗೊಳ್ಳುತ್ತಲೇ ಬದಲಾಗುತ್ತಲೇ ಹೋಗುವ ಪ್ರಕ್ರಿಯೆ.

ಯಾವ ಶಿಕ್ಷಣ ನೀತಿಯನ್ನೂ ಸಂಪೂರ್ಣ ‘ಫೈನಲ್’ ಮಾಡಿ ಜಾರಿ ಗೊಳಿಸಲಾಗದು. ಹೀಗಾಗಿ ನೀತಿಯನ್ನು ಜಾರಿಗೊಳಿಸಿ ನಂತರ ಅಗತ್ಯವಿದ್ದಲ್ಲಿ ತಿದ್ದಿಕೊಳ್ಳುವ ದೃಷ್ಟಿಕೋನ ಬಹುಶಃ ವೈಜ್ಞಾನಿಕವಾಗಿಯೇ ಇತ್ತು. ಕಸ್ತೂರಿ ರಂಗನ್ ಸಮಿತಿಯ ಆಳ ಅಧ್ಯಯನ, ಲಕ್ಷಗಟ್ಟಲೆ ಪರಿಣತರ ಸಲಹೆಯೊಂದಿಗೆ ರೂಪುಗೊಂಡ ಎನ್‌ಇಪಿ ನಿಜಕ್ಕೂ ಅಗಾಧವಾದ ಶೈಕ್ಷಣಿಕ ಪರಿಕಲ್ಪನೆ. ಹಿಂದೆ ‘ದಂಡಪಿಂಡ’ವಾಗಿ ಹಾಸ್ಯದ, ದುರಂತದ
ವಿಷಯವಾಗಿದ್ದ ಪದವಿ ಶಿಕ್ಷಣಕ್ಕೆ ಮೂಲಭೂತ ವಾಗಿಯೇ ಬದಲಾವಣೆ, ನಾವೀನ್ಯದ ಸ್ಪರ್ಶ ನೀಡಿದೆ ಎನ್‌ಇಪಿ. ಅದಾಗಿದ್ದು ಹೀಗೆ: ಎನ್‌ಇಪಿಯು ಪದವಿಯ ಪ್ರತಿ ಹಂತದ ಕಲಿಕೆಯನ್ನು ಗುರುತಿಸಲು ಯತ್ನಿಸಿದೆ. ಪದವಿ ಕಲಿಕೆಯನ್ನು ಕಟ್ಟಿಹಾಕಿದ್ದ ಹಳೆಯ ರಚನೆಗಳನ್ನು ತೆಗೆದು ಹಾಕಿ ಬದಲಿ ಚೌಕಟ್ಟುಗಳನ್ನು ನಿರೂಪಿಸಿದೆ. ಜ್ಞಾನವನ್ನು ಹೊಸರೀತಿಯಲ್ಲಿ ಕಸ್ಟಮೈಸ್ ಮಾಡಿ ಬಳಸುವ, ಜಾಗತೀಕರಣವನ್ನು ಪಾರಂಪ
ರಿಕ ಸಂಸ್ಕೃತಿಯೊಂದಿಗೆ ಮೇಳೈಸುವ ದಾರಿ ತೋರಿದೆ.

ಬಹುಶಿಸ್ತೀಯ ಕಲಿಕೆಯನ್ನು ಪ್ರೋತ್ಸಾಹಿಸಿ ಪ್ರಾದೇಶಿಕ ಕೌಶಲಗಳನ್ನು ಜಾಗತಿಕ ತಾಂತ್ರಿಕತೆಯೊಂದಿಗೆ ಒಯ್ಯುವುದು ಹೇಗೆಂದು ಹೇಳಿದೆ. ಒಂದು ವಿಷಯದ ಮೇಲೆ ಪದವಿ ಮಟ್ಟದಲ್ಲೇ ಸಾಕಷ್ಟು ಜ್ಞಾನ ಮತ್ತು ಹಿಡಿತ ನೀಡಬಲ್ಲ ಆನರ್ಸ್ ಕೋರ್ಸ್‌ಗಳನ್ನು ಲಭ್ಯವಾಗಿಸಿದೆ. ಮೆಚ್ಚಿನ ವಿಷಯಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಮುಕ್ತ ಆಯ್ಕೆಗಳನ್ನು ಕಲ್ಪಿಸಿದೆ. ಒಟ್ಟಾರೆ ಯಾಗಿ, ವಿದ್ಯಾರ್ಥಿ- ಕೇಂದ್ರಿತ ವ್ಯವಸ್ಥೆಯೊಂದರ ರೂಪಣೆಗೆ ಕಾನೂನಾತ್ಮಕ ಅವಕಾಶ ಕಲ್ಪಿಸಿದೆ. ಇದು ಪದವಿ ಕಲಿಕೆಯ ವಿವಿಧ ಹಂತಗಳನ್ನು ಪ್ರತ್ಯೇಕವಾಗಿ ಗುರುತಿಸಿ ಗೌರವಿಸುತ್ತಾ ಸಾಗುತ್ತದೆ. ಅಂದರೆ ಪ್ರಥಮ ವರ್ಷ ಮುಗಿಸಿದ ವಿದ್ಯಾರ್ಥಿನಿ ಯಾವುದೋ ಕಾರಣಕ್ಕೆ ಕೋರ್ಸ್ ಬಿಡಲು ಬಯಸಿದರೆ ಆಕೆಗೆ ಸರ್ಟಿಫಿಕೇಟ್ ಸಿಗುತ್ತದೆ. ೨ನೇ ವರ್ಷ ಮುಗಿಸಿ ಹೊರಬಿದ್ದರೆ ಡಿಪ್ಲೊಮಾ ಸಿಗಲಿದೆ. ವ್ಯವಸ್ಥೆ ಮಹತ್ವದ್ದು, ಏಕೆಂದರೆ ಮದುವೆಯ ಕಾರಣಕ್ಕೆ ಕಲಿಕೆ ಬಿಡ ಬೇಕಾಗುವ ಹುಡುಗಿಯರಿಗೆ ಅಥವಾ ಬೇಕಾದಷ್ಟೇ ಕೌಶಲಗಳನ್ನು ಕಲಿತು ಕೌಟುಂಬಿಕ ವ್ಯವಹಾರ/ಉದ್ಯೋಗಕ್ಕೆ ಹೋಗ ಬಯಸುವವರಿಗೆ ಈ ನೀತಿಯು ತಕ್ಕಂಥ ವಿದ್ಯಾರ್ಹತೆ  ನೀಡುತ್ತದೆ. ಅವರು ೨ ವರ್ಷ ‘ಕಾಲೇಜಿಗೆ ಮಣ್ಣು ಹೊತ್ತು’ ಬರಿಗೈಲಿ ಹೋಗಬೇಕಿಲ್ಲ. ಉದಾಹರಣೆಗೆ ೨ ವರ್ಷ ‘ಫಂಕ್ಷನಲ್ ಇಂಗ್ಲಿಷ್’ ಕಲಿತವ ಅವಶ್ಯಕತೆಯಿದ್ದರೆ ಹೊರ ಬಂದು ಬಿಪಿಒ, ಮಾರುಕಟ್ಟೆ ಸರಣಿಗಳಲ್ಲಿ ಸೇರಬಹುದು.  ಮಾತ್ರವಲ್ಲ, ನಂತರ ವಿದ್ಯಾಭ್ಯಾಸ ಮುಂದು ವರಿಸುವ ಬಯಕೆಯಿದ್ದರೆ, ಬಿಟ್ಟಲ್ಲಿಂದಲೇ ಮುಂದುವರಿಸ ಬಹುದು.

ಮುಂದೆ ಹೋಗಿ ೩ ವರ್ಷಗಳನ್ನು ಮುಗಿಸಿದರೆ ವಿದ್ಯಾರ್ಥಿಗೆ ಪದವಿ ಸಿಗುತ್ತದೆ. ಅದರ ಮುಂದಿನ ವ್ಯವಸ್ಥೆ ಮಹತ್ವದ್ದು. ವಿದ್ಯಾರ್ಥಿ ೪ನೇ ವರ್ಷಕ್ಕೆ ಕಲಿಕೆ ಮುಂದು ವರಿಸಲು ಇಚ್ಛಿಸಿದರೆ (ಐಚ್ಛಿಕ ಅದು), ಅದನ್ನು ಬಿ.ಎ., ಬಿ.ಎಸ್ಸಿ., ಬಿ.ಕಾಂ. (ಆನರ್ಸ್) ಎಂದು ಪರಿಗಣಿಸಲಾಗುತ್ತದೆ. ವಿಶೇಷವೆಂದರೆ, ಹೆಚ್ಚಿನ ವಿದೇಶಿ ವಿಶ್ವವಿದ್ಯಾ ಲಯಗಳು ೪ ವರ್ಷಗಳ ಪದವಿಗಳನ್ನು ಮಾತ್ರ ನೀಡುತ್ತವೆ (೩ ವರ್ಷಗಳ ಪದವಿಗಳನ್ನು ಹೆಚ್ಚಿನ ವಿದೇಶಿ ವಿ.ವಿ.ಗಳು ಮಾನ್ಯ ಮಾಡು ವುದಿಲ್ಲ). ಎನ್‌ಇಪಿ ತಂದಿರುವ ಈ ಬದಲಾವಣೆಯು ಪದವಿಗಳನ್ನು ಅಂತಾರಾಷ್ಟ್ರೀಯ ಕಲಿಕೆಗೆ ಜೋಡಿಸಿದೆ. ಅಷ್ಟೇ ಅಲ್ಲದೆ, ೪ ವರ್ಷಗಳ ಪದವಿ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಿದ್ಧರಾಗಲು ನೆರವಾಗುತ್ತದೆ. ಹೇಗೆಂದರೆ, ಇಲ್ಲಿ ವಿದ್ಯಾರ್ಥಿಗಳಿಗೆ ಕಡಿಮೆಯೆಂದರೂ ಒಂದು ವಿಷಯದ ಮೇಲೆ ಹಿಡಿತ ಸಿಗುತ್ತದೆ. ಸಂಶೋಧನೆ ಮುಂದುವರಿಸಲು ಬಯಸುವ
ವರಿಗೂ ಅದು ಅನುಕೂಲ. ಹೇಗೆಂದರೆ ೪ನೇ ವರ್ಷದ ಕಲಿಕೆಯಲ್ಲಿ ರಿಸರ್ಚ್ ಮೆಥಡಾಲಜಿ ಮತ್ತು ಒಂದು ಪ್ರಾಜೆಕ್ಟ್ ಮಹತ್ವದ ಭಾಗ. ಹೀಗೆ ಈ ನೀತಿ ಯಿಂದಾಗಿ ಪದವಿ ಒಂದು ‘ಅಟಾನಮಸ್ ಕೋರ್ಸ್’ ಆಗಿಹೋಗಿದೆ.

ಹಿಂದೆ ಬೇರೊಂದು ಡಿಗ್ರಿ ಮಾಡಿಕೊಳ್ಳದೆ ಇದ್ದರೆ ಬರೀ ಬಿಎ/ಬಿಎಸ್ಸಿಗೆ ಮಾರುಕಟ್ಟೆಯಲ್ಲಿ ಅಂಥ ಮಾನ್ಯತೆ ಇರಲಿಲ್ಲ. ೪ ವರ್ಷಗಳ ‘ಆನರ್ಸ್’ ಪದವಿ ಕೋರ್ಸ್‌ನ ಅಳವಡಿಕೆ ಎನ್‌ಇಪಿಯ ಮಹತ್ವದ ಕೊಡುಗೆ. ಎನ್‌ಇಪಿ ಬೇಡ ಎನ್ನುವವರು ಈ ವಿಷಯ ಗಮನಿಸಬೇಕು. ನೀತಿಯು ಜಾರಿಗೆ ತಂದಿರುವ ತುಂಬ ಮಹತ್ವದ ವಿಷಯವೆಂದರೆ, ಹಲವು ಆಶಯಗಳನ್ನು ಪೂರೈಸಬಲ್ಲ, ಬ್ಯಾಲೆನ್ಸ್ ಮಾಡಬಲ್ಲ ಕಲಿಕೆಯ ಹೊಸ ಮಾಡ್ಯೂಲ್‌ಗಳ ರಚನೆ. ಅಂದರೆ ಯಾವ ವಿಷಯಗಳನ್ನು ಎಷ್ಟು ಪ್ರಮಾಣದಲ್ಲಿ, ಯಾವಾಗ ವಿದ್ಯಾರ್ಥಿಗಳು ಪದವಿಯ ಭಾಗವಾಗಿ ಕಲಿಯಬೇಕು ಎನ್ನುವ ಹೊಸ ಚೌಕಟ್ಟನ್ನು ಪದವಿ ಶಿಕ್ಷಣಕ್ಕೆ ಅದು ಒದಗಿಸಿದೆ. ಎನ್‌ಇಪಿ ಅಡಿಯಲ್ಲಿ ಪದವಿಯ ೪ ವರ್ಷಗಳನ್ನು ಸ್ಥೂಲವಾಗಿ ೩ ಘಟಕಗಳಲ್ಲಿ ಹಂಚಲಾಗಿದೆ: ಮೊದಲ ನಾಲ್ಕು ಸೆಮಿಸ್ಟರ್‌ಗಳ (೨ ವರ್ಷಗಳು) ಒಳರಚನೆಯಲ್ಲಿ ಕಲಿಕೆಯ ವಿಷಯಗಳು ೪ ಆಯಾಮಗಳಲ್ಲಿ ಬರು
ತ್ತವೆ. ಐದು ಮತ್ತು ಆರನೆಯ ಸೆಮಿಸ್ಟರ್‌ಗಳು ಅಂದರೆ ೩ನೇ ವರ್ಷದಲ್ಲಿ ಒಳರಚನೆಯಲ್ಲಿ ಕಲಿಕೆ ೨ ಮುಖ್ಯ ವಿಷಯಗಳಲ್ಲಿ ಬರುತ್ತವೆ. ನಾಲ್ಕನೆಯ (ಐಚ್ಛಿಕ) ವರ್ಷ ದಲ್ಲಿ ಒಳ ರಚನೆಯಲ್ಲಿ ಕಲಿಕೆಯ ಒಂದೇ ಮುಖ್ಯ ವಿಷಯ ಬರುತ್ತದೆ. ಅಂದರೆ ಎನ್‌ಇಪಿಯಲ್ಲಿ ಕಲಿಕೆಯು ಪಿರಮಿಡ್ ಆಕೃತಿಯಲ್ಲಿ ಮೇಲೆ ಚಲಿಸುತ್ತದೆ. ಹಿಂದೆ ಹಾಗಿರಲಿಲ್ಲ. (ಎನ್ ಇಪಿಯ ಸಕಾರಾತ್ಮಕ ಮಗ್ಗುಲುಗಳು ಇನ್ನೂ ಸಾಕಷ್ಟಿವೆ; ಆದರೆ ಸ್ಥಳಾಭಾವದಿಂದ ಅವನ್ನು ಇಲ್ಲಿ ನೀಡಲಾಗಿಲ್ಲ). ಆದರೆ, ಕಳೆದೆರಡು ವರ್ಷಗಳ ಅನುಭವ ಕೆಲ ಆತಂಕಗಳನ್ನು ತಂದಿಟ್ಟಿದೆ. ಎನ್‌ಇಪಿ ಆತ್ಮವನ್ನೇ ಇವು ನಾಶಮಾಡಬಲ್ಲವು:

  •  ನೀತಿಯು ನೀಡಿರುವ ಅಪರಿಮಿತ ಅವಕಾಶವನ್ನು ಮಿತಿಗೊಳಿಸುವ ಯತ್ನಗಳಾಗಿವೆ. ಬಹುಶಃ ಇದನ್ನು ಒಪ್ಪಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅಷ್ಟೊಂದು ಸ್ವಾತಂತ್ರ್ಯ ನೀಡಬೇಕಾದರೆ ಅದಕ್ಕೆ ಪೂರಕವಾಗಿ ಭಾರಿ ಪ್ರಮಾಣದ ಶೈಕ್ಷಣಿಕ ಮೂಲಭೂತ ಸೌಕರ್ಯ ಬೇಕು. ಉದಾಹರಣೆಗೆ, ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯ ಕುರಿತು ಮುಕ್ತ ಆಯ್ಕೆ ನೀಡುವುದಿದ್ದರೆ ಅಂಥ ವಿಷಯತಜ್ಞರು ಬೇಕು. ಅವರಿಗೆ ಸೂಕ್ತ ಸಂಬಳ ನೀಡಬೇಕು. ಸದ್ಯಕ್ಕೆ ಒಇಸಿ (ಮುಕ್ತ ಆಯ್ಕೆಯ ವಿಷಯ) ಮತ್ತು ಕೌಶಲಾಭಿವೃದ್ಧಿ ವಿಷಯಗಳ ಬೋಧನೆಯಲ್ಲಿ ಈ ಸಮಸ್ಯೆಯಿದೆ. ಅಂದರೆ ಈ ವಿಷಯಗಳು ಕೇವಲ ಕಾಟಾಚಾರದ ವಿಷಯಗಳಾಗಿ ಹೋಗಿ,
    ಪದವಿ ಕೋರ್ಸು ಮರಳಿ ಹಿಂದಿನಂತೆ ‘ಐಚ್ಛಿಕ’ ವಿಷಯಗಳು ಮತ್ತು ‘ಮೂಲಭೂತ’ ಭಾಷೆಗಳ ಕಲಿಕೆಗಷ್ಟೇ ಹೋಗಿ ನಿಲ್ಲುವ ಸಂಭವವಿದೆ. ಅಂದರೆ, ಎನ್‌ಇಪಿ ಇದ್ದರೂ ವಾಸ್ತವದಲ್ಲಿ ಇಲ್ಲವಾಗುವ ಸಾಧ್ಯತೆಯಿದೆ.
  •  ವಿದ್ಯಾರ್ಥಿಗಳು ಒಇಸಿ ಆಯ್ಕೆ ಮಾಡಿಕೊಳ್ಳುವಾಗ ತಮ್ಮ ನಿಜಾಸಕ್ತಿಯ ಆಯ್ಕೆಯನ್ನು ಬಳಸಿಕೊಳ್ಳದೆ ಅಜ್ಞಾನ ಅಥವಾ ತಪ್ಪು ಮಾರ್ಗದರ್ಶನದಿಂದಾಗಿ ಸುಲಭವಾಗಿ ತೇರ್ಗಡೆ ಯಾಗಬಹುದಾದ ವಿಷಯಗಳ ಮೊರೆಹೋಗು ತ್ತಿರುವುದೂ ಕಂಡುಬಂದಿದೆ. ಅಂದರೆ ಒಇಸಿ ಕಲಿಕೆ ಹಾಸ್ಯಾಸ್ಪದವಾಗುವ ಸಾಧ್ಯತೆಗಳಿವೆ.
  •  ಹಳೆಯ ಪಠ್ಯಕ್ರಮ/ಮೆಥಡಾಲಜಿಗಳೇ ಹೊಸಬಟ್ಟೆ ತೊಟ್ಟು ಮತ್ತೆ ಹಣುಕುಹಾಕಿ ನೀತಿಯ ಉದ್ದೇಶಗಳನ್ನು ಧ್ವಂಸಗೈಯುವ ಅಪಾಯವೂ ಇದೆ. ಈಗಾಗಲೇ ಇಂಥ ಸಂದೇಹಗಳು ನಿಜವಾಗುತ್ತಿವೆ. ಹಲವೆಡೆ ಮತ್ತೆ ಹಳೆಯ ಸಿಲಬಸ್ ಬಂದಿದೆ.
  •  ‘ವರ್ಕ್ ಲೋಡ್’ ಇತ್ಯಾದಿ ಕಚೇರಿಯ ಹಲವು ಸಂಕೀರ್ಣತೆಗಳಲ್ಲಿ ಸಿಲುಕಿ ನೀತಿಯು ನಲುಗಿಹೋಗುವ ಸಂಭವವೂ ಇದೆ. ಗಮನಿಸಬೇಕಾದ ಅಂಶವೆಂದರೆ, ಎನ್ ಇಪಿಯಲ್ಲಿ ಪ್ರತಿಯೊಂದು ಸೆಮಿಸ್ಟರ್‌ನಲ್ಲಿಯೂ ಕಾರ್ಯ ಭಾರದಲ್ಲಿ ಬಹಳ ಹೆಚ್ಚುಕಡಿಮೆಯಾಗುತ್ತದೆ. ಅದು ಈಗ ಕಾಲೇಜುಗಳಲ್ಲಿರುವ ಸಿದ್ಧಮಾದರಿಯ ಶಿಕ್ಷಕರ ಕಾರ್ಯಾವಧಿಗಳನ್ನು ವ್ಯಾಪಕವಾಗಿ ಬದಲಿಸಿದೆ. ಹೀಗಾಗಿ ಪ್ರಾಧ್ಯಾ
    ಪಕರು ೨-೩ ಕಾಲೇಜುಗಳಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇದು ಎನ್‌ಇಪಿಯ ವಿರುದ್ಧ ‘ಆಂತರಿಕ ಬಂಡಾಯ’ ಸೃಷ್ಟಿಸಬಹುದಾದ ಅಂಶ. ಒಟ್ಟಾರೆಯಾಗಿ ಗಮನಿಸಬೇಕಾದ ಅಂಶವೆಂದರೆ, ಒಂದು ಪರಿಕಲ್ಪನೆಯಾಗಿ ಎನ್‌ಇಪಿ ಅದ್ಭುತವಾದುದು.  ಪದವಿ ಶಿಕ್ಷಣವನ್ನು ಮೂಲಭೂತವಾಗಿ ಬದಲಿಸುವ ಸಾಮರ್ಥ್ಯ ಅದಕ್ಕಿದೆ. ನಾವು ಬಹಳ ವರ್ಷಗಳಿಂದ ಬಯಸುತ್ತಿದ್ದ ಹೊಸ ಚೌಕಟ್ಟನ್ನು ಅದು ಒದಗಿಸಿದ್ದು, ಸಮಾಜದ ನಿರೀಕ್ಷೆಗಳನ್ನು ಸಾಕಾರಗೊಳಿಸಬಲ್ಲ ಶಕ್ತಿಯನ್ನು ಹೊಂದಿದೆ.ಇದು ಯಶಸ್ವಿ ಯಾದರೆ ದೇಶ ಬದಲಾಗಲಿದೆ. ಏಕೆಂದರೆ ಪದವಿ ಕೋರ್ಸುಗಳಿಗೆ ಹೆಚ್ಚಾಗಿ ಬರುವವರು ಕೆಳಮಧ್ಯಮ, ಗ್ರಾಮೀಣ ಮತ್ತು ಬಡವಿದ್ಯಾರ್ಥಿಗಳು. ಅವರು ಸಬಲರಾದರೆ ದೇಶ ಸಬಲವಾಗುತ್ತದೆ.

    ಇನ್ನೊಂದು ವಿಷಯ: ಈ ಹಂತದಲ್ಲಿ ಎನ್‌ಇಪಿ ರದ್ದಾದರೆ ಅನೇಕ ಹೊಸ ಸಮಸ್ಯೆ ಗಳನ್ನು ಸೃಷ್ಟಿಸಲಿದೆ. ಮುಖ್ಯವಾಗಿ, ಲಕ್ಷಗಟ್ಟಲೆ ವಿದ್ಯಾರ್ಥಿ ಗಳು ಈಗ ಎನ್‌ಇಪಿ ೩ನೇ ವರ್ಷದಲ್ಲಿದ್ದಾರೆ. ನೀತಿಯ ಕಾನೂನು
    ಚೌಕಟ್ಟಿನ ಪ್ರಕಾರ ತಮ್ಮ ಪದವಿಯನ್ನು ೪ ವರ್ಷಕ್ಕೆ ವಿಸ್ತರಿಸಿಕೊಳ್ಳಲು, ಅಂದರೆ ೪ ವರ್ಷಗಳ ಆನರ್ಸ್ ಪದವಿ ಪಡೆಯಲು ಅವರಿಗೆ ಅರ್ಹತೆ ಇದೆ. ಆ ಆಯ್ಕೆ ಬಯಸಿದ ವಿದ್ಯಾರ್ಥಿಗಳಿಗೆ ಅದನ್ನು ನೀಡಲೇಬೇಕಾದ ಕಾನೂನಾತ್ಮಕ ಬದ್ಧತೆ ಸರಕಾರಕ್ಕೆ ಒದಗಬಹುದು. ಒಂದೊಮ್ಮೆ ಕರ್ನಾಟಕ ಸರಕಾರ ಎನ್‌ಇಪಿಯನ್ನು ಮುಂದಿನ ವರ್ಷದಿಂದ ರದ್ದು ಪಡಿಸಿದರೂ, ಈಗಾಗಲೇ ಎನ್‌ಇಪಿ ಅಡಿಯಲ್ಲಿರುವ
    ವಿದ್ಯಾರ್ಥಿಗಳಿಗೆ ೪ ವರ್ಷದ ಪದವಿ ಕಲಿಕೆಗೆ ಅವಕಾಶ ಕಲ್ಪಿಸ ಬೇಕಾಗಬಹುದು. ಆದ್ದರಿಂದ, ಎನ್‌ಇಪಿ ರದ್ದತಿಯ ನಿರ್ಣಯ ಕೈಗೊಳ್ಳುವ ಮುನ್ನ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

    (ಲೇಖಕರು ನಿವೃತ್ತ ಪ್ರಾಂಶುಪಾಲರು
    ಮತ್ತು ಶೈಕ್ಷಣಿಕ ಸಮಾಲೋಚಕರು)