Saturday, 14th December 2024

ಬೆಟ್ಟ ಗುಡ್ಡಗಳ ನಡುವೆ ಒಂದು ಪುಟ್ಟ ಮನೆ

ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ.  ನಿಮ್ಮ ಮನೆಯ ಸುತ್ತಲೂ, ಅಲ್ಲಲ್ಲಿ ಕೆಲವು ಬೆಟ್ಟಗಳು, ಗುಡ್ಡಗಳು ಇರುತ್ತವೆ; ಬೇಸರ ಎನಿಸಿದಾಗ ನೀವು ಒಂದೊಂದು ದಿನ ಒಂದೊಂದು ಗುಡ್ಡದ ತುದಿಗೆ ಹೋಗಿ, ಅಲ್ಲಿರುವ ಬಂಡೆಯ ಮೇಲೆ ಕುಳಿತು, ಸುತ್ತಲೂ ಕಾಣಿಸುವ ನಿಸರ್ಗದೃಶ್ಯವನ್ನು ನೋಡುತ್ತಾ, ದೂರದಿಂದ ಬೀಸಿ ಬರುವ ತಂಗಾಳಿಗೆ ಎದೆಯೊಡ್ಡಿ, ಆ ತಂಗಾಳಿ ತನ್ನ ದಾರಿಯುದ್ದಕ್ಕೂ ಹೊತ್ತುತಂದ ಭಾವಗಳನ್ನು ಮನದಲ್ಲಿ ತುಂಬಿ ಕೊಳ್ಳುತ್ತಾ ಕನಸು ಕಾಣವ ಸಾಧ್ಯತೆ! ಇಂಥದೊಂದು ಸ್ಥಳದಲ್ಲಿ ಮನೆ ಇದ್ದವರೇ ಅದೃಷ್ಟವಂತರು ಎಂದು ನೀವು ಅಂದುಕೊಳ್ಳಬಹುದಲ್ಲವೆ! ನಿಜ ಹೇಳಬೇಕೆಂದರೆ, ನಮ್ಮ ಹಳ್ಳಿ ಮನೆಯು ಇಂಥದ್ದೇ ವಾತಾವರಣವನ್ನು ಹೋಲುವ ಜಾಗದಲ್ಲಿತ್ತು. ಸುಮಾರು ಒಂದು ಕಿ.ಮೀ. ಉದ್ದನೆಯ ಬತ್ತದ ಗದ್ದೆಯ ಸಾಲಿನ ಒಂದು ತುದಿಯಲ್ಲಿತ್ತು, ನಮ್ಮ ಆ ಸರಳ, ಪುಟ್ಟ ಮನೆ; ಅದೇ ಗದ್ದೆ ಸಾಲು ಎಲ್ ಆಕಾರಕ್ಕೆ ತಿರುಗಿ, ಇನ್ನೊಂದು ದಿಕ್ಕಿಗೆ ಮತ್ತೆ ಒಂದು ಕಿ.ಮೀ. ಚಲಿಸಿಹೋಗಿತ್ತು. ಆ ಗದ್ದೆಗಳಲ್ಲಿ ಮಳೆಗಾಲದಲ್ಲಿ ಬತ್ತದ ಬೆಳೆ, ಚಳಿಗಾಲದಲ್ಲಿ ಸುಗ್ಗಿ ಬತ್ತದ ಬೆಳೆ, ಬೇಸಗೆಯ ಆರಂಭದಲ್ಲಿ ಹುರುಳಿ, ಹೆಸರುಕಾಳು, ಉದ್ದು, ಅವಡೆ ಮೊದಲಾದ ಧಾನ್ಯದ ಗಿಡಗಳು. ಬಿರುಬೇಸಗೆಯ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮಾತ್ರ ಆ ಬಯಲು ಖಾಲಿ ಎನಿಸುತ್ತಾ, ತನ್ನದೇ ಬಿಸುಪು ಸೌಂದರ್ಯದಿಂದ ಕಂಗೊಳಿಸುತ್ತಿತ್ತು.

ಈ ಗದ್ದೆ ಬೈಲಿನುದ್ದಕ್ಕೂ ನಮ್ಮೂರಿನ ಕೃಷಿಕರ ಮನೆಗಳು, ಆ ಮನೆಗಳಿಗೆ ನಾನಾ ರೀತಿಯ ಆಪ್ಯಾಯಮಾನವಾದ ಹೆಸರುಗಳು: ಕಟ್ಟಿನಗುಂಡಿ, ಗುಳಿನಬೈಲು, ಕೋಟೆಬೆಟ್ಟು, ಮುಡಾರಿ, ಹಂಚಿನಮನೆ, ನೀಕ್ಮಡಿ, ಕಂಬಳಗದ್ದೆ, ಉಪಾಯ್ದರ ಬೆಟ್ಟು, ಕೊಮೆ, ಸಬ್ಬಾಗಿಲು, ಗಾಣದಡಿ ಹೀಗೆ. ಒಂದೊಂದು ಹೆಸರಿನ ಮೂಲವನ್ನು ಹುಡುಕುತ್ತಾ ಹೋದರೆ, ನಮ್ಮ ಹಳ್ಳಿಯ ಇತಿಹಾಸವೇ ತೆರೆದುಕೊಳ್ಳುತ್ತದೆ. ಉದಾಹರಣೆಗೆ ಕೋಟೆಬೆಟ್ಟು ಎಂಬ ಜಾಗದಲ್ಲಿ ನಾಲ್ಕಾರು ಪುಟಾಣಿ ಮನೆಗಳಿದ್ದವು; ಅದರಲ್ಲಿ ವಾಸಿಸುತ್ತಿದ್ದವರು ಕೃಷಿಕಾರ್ಮಿಕರು. ಆದರೆ, ಅಲ್ಲಿ ಹಿಂದೆ ನಮ್ಮೂರನ್ನು ಆಳಿದ ಮುದ್ದಳರಾಯನೆಂಬ ರಾಜನ ಅರಮನೆ ಇತ್ತಂತೆ! ಆ ಮುದ್ದಳರಾಯನಿಗೆ ಕುಂದಾಪುರದ ಕುಂತಳರಾಯನು ಸಹೋದರನಂತೆ, ಕುಂತಳರಾಜನ ಊರಲ್ಲಿ ನೀರಿನ ಅಭಾವವಾದಾಗ, ಮುದ್ದಳ ರಾಜನು ನಮ್ಮೂರಿನಿಂದ ಕುಂದಾಪುರಕ್ಕೆ ಒಂದು ಕಾಲುವೆಯನ್ನು ತೋಡಿಸಿ, ನೀರನ್ನು ಹರಿಸಿದ್ದನಂತೆ- ಇಂಥದ್ದೇ ಕತೆಗಳು. ಆ ಮುದ್ದಳ ರಾಜ ಕಟ್ಟಿಸಿದ ದೇವಸ್ಥಾನ, ತೋಡಿಸಿದ ಕೆರೆ ಇಂದಿಗೂ ನಮ್ಮ ಹಳ್ಳಿಯಲ್ಲಿವೆ. ನಮ್ಮ ಮನೆಯ ಸುತ್ತಲೂ ನಾಲ್ಕಾರು ಬೆಟ್ಟಗಳಿವೆ ಎಂದೆನೆಲ್ಲ, ಮೊದಲ ಬೆಟ್ಟದ ವಿವರವನ್ನು ಈ ದೇಗುಲದಿಂದಲೇ ಆರಂಭಿಸುವೆ.

ಈಗ ಮಹಾಲಿಂಗೇಶ್ವರ ದೇಗುಲ ಎಂದೇ ಪ್ರಸಿದ್ಧ ವಾದ ಆ ದೇಗುಲಕ್ಕೆ ಕನಿಷ್ಠ ೪ ಶತಮಾನಗಳಷ್ಟು ಹಳೆಯ ಲಿಖಿತ ದಾಖಲೆ ಇದೆ; ಅದಕ್ಕೂ ಹಿಂದಿನಿಂದಲೂ ಆ ದೇಗುಲವಿದ್ದಿರಲೇಬೇಕು. ಬಹು ಹಿಂದೆ ಅದು ಹುಲಿದೇವರ ದೇವಾಲಯವಾಗಿತ್ತಂತೆ; ನಂತರ ಮಹಾಲಿಂಗೇಶ್ವರ ದೇಗುಲವಾಗಿ ರೂಪುಗೊಂಡಿರಬೇಕು. ಆ ದೇಗುಲದ ಗರ್ಭಗುಡಿಯ ಮೇಲ್ಭಾಗದಲ್ಲಿ, ನಾಡಹಂಚಿನಿಂದ ಹೊದಿಸಲ್ಪಟ್ಟ ಪುಟ್ಟ ಉಪ್ಪರಿಗೆ ಇತ್ತು; ಅದಕ್ಕೊಂದು ಬಾಗಿಲಿನ ಸ್ವರೂಪದ ಕಿಂಡಿ. ಹೊರಭಾಗಕ್ಕೆ ತೆರೆದುಕೊಂಡಿದ್ದ ಆ ಬಾಗಿಲು ಯಾವಾಗಲೂ ತೆರೆದಿರುತ್ತಿತ್ತು, ಹೊರತು, ಅದನ್ನು ಹಲಗೆಯಿಂದ ಮುಚ್ಚಿರುತ್ತಿರಲಿಲ್ಲ, ಮುಚ್ಚುವಂತೆಯೂ ಇರಲಿಲ್ಲ. ಏಕೆಂದರೆ, ಅಲ್ಲಿ ಹುಲಿ ವಾಸವಾಗಿರುತ್ತಿತಂತೆ! ಹುಲಿದೇವರ ಆ ಗುಡಿಗೆ ನಮ್ಮೂರಿನವರೆಲ್ಲರೂ ನಮಿಸುತ್ತಿದ್ದರು. ಮಾತ್ರವಲ್ಲ, ಆ ಹುಲಿರಾಯನಿಗೆ ಗೌರವ ಸೂಚಿಸುವ ಉದ್ದೇಶ ದಿಂದಲೇ ಇರಬಹುದು, ನಮ್ಮ ಹಳ್ಳಿಯ ಯಾವುದೇ ಕೊಟ್ಟಿಗೆಗೆ ಬಾಗಿಲು ಇಡಿಸುವಂತಿರಲಿಲ್ಲ. ಅಂದರೆ, ಹಸು, ಕರು, ಎತ್ತುಗಳು ವಾಸಿಸುವ, ಸಾಮಾನ್ಯವಾಗಿ ಮನೆಯ ಎದುರಿನಲ್ಲಿರುತ್ತಿದ್ದ ಕೊಟ್ಟಿಗೆಯನ್ನು ಬಾಗಿಲು ಹಾಕಿ ಭದ್ರಗೊಳಿಸಬಾರದು ಎಂಬ
ನಂಬಿಕೆ. ಅದೇ ರೀತಿ ನಮ್ಮ ಹಳ್ಳಿಯ ಕೊಟ್ಟಿಗೆಗಳಿಗೆ ಬಾಗಿಲುಗಳಿರುತ್ತಿರಲಿಲ್ಲ; ಈಚಿನ ದಿನಗಳಲ್ಲಿ ಈ ಪದ್ಧತಿ ಬಿಟ್ಟುಹೋಗಿದೆ. ಹುಲಿರಾಯನ ದೇಗುಲವಾಗಿದ್ದಿರಬಹುದಾದ ಈ ಮಹಾಲಿಂಗೇಶ್ವರ ದೇಗುಲದ ಹಿಂಭಾಗದಲ್ಲಿ ಒಂದು ಬೆಟ್ಟವಿತ್ತು. ದೇವಸ್ಥಾನದ ಗುಡ್ಡ ಎಂದು ಕರೆಯುವ ಆ ಗುಡ್ಡದ ಸುತ್ತಲೂ ಸಾಕಷ್ಟು ಕಾಡು; ಒಂದು ಭಾಗದಲ್ಲಿ ದಟ್ಟ ಕಾಡು ಇದ್ದರೆ, ಇನ್ನೊಂದೆಡೆ ಕುರುಚಲು ಕಾಡು. ಬಹು ಹಿಂದೆ ಅಲ್ಲೆಲ್ಲಾ
ಹುಲಿಗಳು ತಮ್ಮಪಾಡಿಗೆ ತಾವು ವಾಸವಾಗಿದ್ದವು; ಕಳೆದ ಶತಮಾನದ ಆರನೆಯ ದಶಕದ ತನಕವೂ, ನಮ್ಮ ಹಳ್ಳಿಯ ಕೊಟ್ಟಿಗೆಗಳಿಗೆ ರಾತ್ರಿ ಹೊತ್ತಿನಲ್ಲಿ ಹುಲಿ ಬಂದು ಹಸುಗಳನ್ನು ಕೊಂಡೊಯ್ಯುತ್ತಿದ್ದುದು
ತುಂಬಾ ಸಾಮಾನ್ಯ ಸಂಗತಿ ಎಂದು ನಮ್ಮ ಅಮ್ಮಮ್ಮ ಹೇಳುತ್ತಿದ್ದರು.

ಕ್ರಮೇಣ ಹುಲಿಗಳು ಸಂಪೂರ್ಣವಾಗಿ ಕಣ್ಮರೆಯಾದವು. ದೇವಸ್ಥಾನದ ಗುಡ್ಡ ಎಂದೆ ನಲ್ಲಾ, ಅದರ ತುದಿಯಲ್ಲಿ ನಿಂತರೆ, ಎಲ್ಲಾ ಕಡೆಯೂ ಹರಡಿದ್ದ ಹಾಡಿ, ಕಾಡು, ಹಕ್ಕಲು, ಬ್ಯಾಣ, ಬೆಳಾರ ಜಾಗ, ಹರ ಎಲ್ಲವೂ ಕಾಣಿಸುತ್ತಿದ್ದವು. ಈ ಗುಡ್ಡದ ಪಕ್ಕದಲ್ಲೇ ಕಲ್ಲುಕಟ್ಟರ ಅಣೆ ಇದೆ. ಈ ಎರಡು ಗುಡ್ಡಗಳ ನಡುವೆ ಆಳವಾದ ಕಣಿವೆ; ಅದರ ಮಧ್ಯೆ ಒಂದು ದಾರಿ; ಅದು ತಟ್ಟುವಟ್ಟು ಜೋಯಿಸರ ಮನೆಗೆ ಹೋಗುವ ದಾರಿ; ದೇವಸ್ಥಾನದ
ಗುಡ್ಡದ ಇಳಿಜಾರನ್ನು ಇಳಿದು, ಮತ್ತೆ ಅಷ್ಟೇ ಎತ್ತರ ಏರಿದರೆ, ಕಲ್ಲುಕಟ್ಟರ ಅಣೆಯ ತುದಿ ತಲುಪಬಹುದು. ಇದು ಸ್ವಲ್ಪ ಕಡಿದಾದ ದಾರಿ, ಸಣ್ಣ ಚಾರಣ ಇದ್ದಂತೆ. ಏದುಸಿರು ಬಿಡುತ್ತಾ ತುದಿ ತಲುಪಿದರೆ, ಎಲ್ಲಾ ಆಯಾಸ ಮಾಯ. ಒಮ್ಮೆಗೇ ತಂಗಾಳಿ ಬೀಸುತ್ತದೆ, ಏಕೆಂದರೆ, ಆ ಗುಡ್ಡದಾಚೆ ಎಲ್ಲವೂ ಬಟಾಬಯಲು, ಬಹು ದೂರದಿಂದ ಬೀಸಿ ಬರುವ ಗಾಳಿ ತರುವ ಭಾವಗಳೆಲ್ಲವೂ ನಮ್ಮ ಭಾವನೆಗಳಲ್ಲಿ ಮಿಳಿತವಾಗುವ ಮಧುರ ಸನ್ನಿವೇಶ ಅದು. ಇಲ್ಲಿಂದ ಕಾಣಿಸುವ ನೋಟವೂ ಬಹು ಸುಂದರ. ಕಲ್ಲುಕಟ್ಟರ ಅಣೆಯ ಸುತ್ತಲೂ ದಟ್ಟವಾದ ಹಾಡಿ ಇದ್ದರೂ, ತುದಿ ಪೂರ್ತಿ ಬೋಳು ಬೋಳು. ಅಲ್ಲೆಲ್ಲಾ ಆನೆ ಗಾತ್ರದ ಹತ್ತಾರು ಮುರಕಲ್ಲು ಬಂಡೆಗಳು ಬಿದ್ದುಕೊಂಡಿವೆ. ಅಂಥ ಒಂದು ಬಂಡೆಯ ತುದಿಯನ್ನೇರಿ, ಪೂರ್ವ ದಿಗಂತವನ್ನು ನೋಡುತ್ತಾ ಕುಳಿತರೆ, ಸಮಯ ಸರಿದದ್ದೇ ಗೊತ್ತಾಗದು. ಏಕೆಂದರೆ, ಪೂರ್ವದಿಗಂತದುದ್ದಕ್ಕೂ ಸಾಗಿದ್ದ ಪಶ್ಚಿಮಘಟ್ಟಗಳ ಸುಂದರ ನೋಟ ಅಲ್ಲಿ ಹರಡಿತ್ತು.

ನಮ್ಮ ಹಳ್ಳಿಯಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರಬಹುದಾದ ಆ ಪರ್ವತಗಳ ಸಾಲಿಗೆ ತುಸು ನೀಲಿ ಮಿಶ್ರಿತ ಹಸಿರಿನ ಬಣ್ಣ. ಆಗುಂಬೆ ಘಾಟಿ, ಅದರಿಂದ ನೆಗೆಯುವ ಒನಕೆಅಬ್ಬಿ, ಇನ್ನಾವುದೋ ಅನಾಮಿಕ
ಜಲಪಾತ, ಕಬ್ಬಿನಾಲೆ ಎಂಬ ಊರು ಇರುವ ಪರ್ವತ, ಇನ್ನೂ ದಕ್ಷಿಣಕ್ಕೆ ಸಾಗಿದರೆ ಎತ್ತರವಾಗಿ ತಲೆ ಎತ್ತಿರುವ ಅಜಿಕುಂಜ, ಇನ್ನೂ ದಕ್ಷಿಣಕ್ಕೆ ಕುದುರೆಮುಖ ಪರ್ವತಗಳ ಸಾಲು, ಇತ್ತ ಉತ್ತರಕ್ಕೆ ದಿಟ್ಟಿ ಹಾಯಿಸಿದರೆ, ದಟ್ಟ ಕಾಡಿನಿಂದ ತುಂಬಿದ್ದ ಪರ್ವತ ಸಾಲು, ಅದರ ತುದಿಯಲ್ಲಿ ಕೊಡಚಾದ್ರಿ, ಇನ್ನೂ ಮುಂದಕ್ಕೆ ಪಶ್ಚಿಮ ಸಮುದ್ರವನ್ನು ಮುಟ್ಟಲು ಸಾಗಿದ್ದ ಪರ್ವತಗಳು- ಈ ರೀತಿ ಪರ್ವತಗಳ ಮೆರವಣಿಗೆಯೇ ಅಲ್ಲಿ ಸಾಗಿತ್ತು- ಎಂದೂ ಮುಗಿಯದ ನೀಲ ಹಸಿರಿನ ಮೆರವಣಿಗೆ ಅದು. ನಮ್ಮ ಹಳ್ಳಿಯ ಪಶ್ಚಿಮ ದಿಕ್ಕಿನಲ್ಲಿರುವ ಸೊಪ್ಪಿನ ಅಣೆ ಮತ್ತೊಂದು ಪುಟ್ಟ ವಿಸ್ಮಯ. ಕಲ್ಲುಕಟ್ಟರ ಅಣೆಯಿಂದ ಕೆಳಗಿಳಿದು, ಕಾಡುದಾರಿಯಲ್ಲಿ ಒಂದು
ಕಿ.ಮೀ. ನಡೆದರೆ ಸೊಪ್ಪಿನ ಅಣೆ ತಲುಪಬಹುದು. ನಮ್ಮ ಮನೆಯಿಂದ ಹೋಗುವುದಾದರೆ ಬೇರೆ ಯದೇ ದಾರಿ ಇದೆ; ಮನೆ ಹಿಂದಿನ ಸೇಡಿಮಣ್ಣಿನ ದರೆಯನ್ನೇರಿ, ಹಕ್ಕಲಿನ ಮೂಲಕ ಸಾಗಿ, ಎರಡು ಹಾಡಿಗಳ ನಡುವಿನ ‘ಕಣಿ ದಾರಿ’ಯನ್ನು ಇಳಿದು ಹತ್ತಿ, ಬೋಳುಗುಡ್ಡವನ್ನು ಹಾದು ಬಲಕ್ಕೆ ಇಳಿದರೆ, ಸೊಪ್ಪಿನ ಅಣೆಯ ಬುಡ ತಲುಪಬಹುದು.

ಸುಮಾರು ಒಂದು ಕಿ.ಮೀ. ದೂರದ ಈ ದಾರಿ ಯುದ್ದಕ್ಕೂ ಗಿಡ, ಮರ, ಬಳ್ಳಿ, ಮುಳ್ಳು, ಕಲ್ಲುಗಳೇ ಇದ್ದವು ಹೊರತು ಒಂದೂ ಮನೆ ಇರಲಿಲ್ಲ; ನಗರಿಗರ ಬಾಯಲ್ಲಿ ಅದು ನಿರ್ಜನ ಪ್ರದೇಶ. ಹಸಿರು ಗಿಡಗಳ ನಡುವಿನ ಆ ನಿರ್ಜನ ಪ್ರದೇಶದಲ್ಲಿ ನಾನಾ ರೀತಿಯ ಹಕ್ಕಿಗಳ ಹಾರಾಟ. ಸೊಪ್ಪಿನ ಅಣೆಯ ಹೆಸರೇ ವಿಶಿಷ್ಟ. ಅಣೆ ಎಂದರೆ ಗುಡ್ಡ. ಬ್ರಿಟಿಷರು ತಮ್ಮದೇ ರೀತಿಯ ಅರಣ್ಯ ಕಾನೂನುಗಳನ್ನು ರೂಪಿಸಿದಾಗ, ಕೃಷಿಕರಿಗೆ ಬೇಕೆನಿಸಿದ ಸೊಪ್ಪನ್ನು ಸಂಗ್ರಹಿಸಿಲು ಮೀಸಲಿರಿಸಿದ ಕಾಡು ಪ್ರದೇಶವೇ ಸೊಪ್ಪಿನ ಗುಡ್ಡಗಳು. ನಮ್ಮ ಹಳ್ಳಿಯ ಸೊಪ್ಪಿನ ಅಣೆಯಲ್ಲಿ ಯಾರು ಬೇಕಾದರೂ ಹಸಿರು ಸೊಪ್ಪನ್ನು ಸಂಗ್ರಹಿಸಬಹುದಿತ್ತು, ಆದರೆ ಒಂದೇ ಒಂದು ಮರವನ್ನೂ ಕಡಿಯುವಂತಿರಲಿಲ್ಲ. ಈ ನಿಯಮವನ್ನು ಬಹುಮಟ್ಟಿಗೆ ಪಾಲಿಸಲಾಗುತ್ತಿತ್ತು ಎಂಬುದೇ ವಿಶೇಷ; ಆದ್ದರಿಂದಲೇ ನನ್ನ ಬಾಲ್ಯದಲ್ಲಿ ಆ ಬೆಟ್ಟದ ತುಂಬಾ ಬೃಹದಾಕಾರದ ನಾನಾ ಪ್ರಭೇದದ ಮರಗಳಿದ್ದವು. ಅವುಗಳಲ್ಲಿ ಬೋಗಿ ಮರ, ದೂಪದ ಮರ, ಕಾಸಾನು ಮರ, ನೇರಳೆ ಮರಗಳ ಪ್ರಮಾಣವೇ ಹೆಚ್ಚು; ಸೊಪ್ಪಿನ ಅಣೆಯ ತುದಿಯ ಭಾಗದಲ್ಲಂತೂ, ನಡುಹಗಲಿನಲ್ಲೂ ಬಿಸಿಲು ತೂರಿ ಬರಲಾಗದಂಥ ದಟ್ಟಣೆ, ಕ್ಯಾನೊಪಿ. ತುತ್ತತುದಿಯಲ್ಲಿ ನಾಲ್ಕಾರು ಕಲ್ಲುಬಂಡೆಗಳಿದ್ದವು.

ಆ ಬಂಡೆಯ ಸಂದಿನಲ್ಲಿನ ಗುಹೆಯಂಥ ಜಾಗದಲ್ಲಿ ಬಹು ಹಿಂದೆ ಹುಲಿಗಳು ವಾಸವಿದ್ದವಂತೆ. ಇಲ್ಲಿಂದಲೂ ಸಹ್ಯಾದ್ರಿ ಸಾಲಿನ ಮೋಹಕ ನೋಟ ಕಾಣಿಸುತ್ತಿತ್ತು. ನನ್ನ ಕಾಲೇಜು ವಿದ್ಯಾಭ್ಯಾಸ ಮುಗಿದು ಒಂದು ವರ್ಷ ನಿರುದ್ಯೋಗಿಯಾಗಿ ಮನೆಯಲ್ಲಿದ್ದಾಗ, ವಾರದಲ್ಲಿ ಒಂದು ದಿನವಾದರೂ ಬೆಳಗ್ಗೆ ಬೇಗನೆ ನಾನು ಸೊಪ್ಪಿನ ಅಣೆಯ ತುದಿಗೆ ಚಾರಣ ಮಾಡಿ, ಅರ್ಧ ಗಂಟೆ ಅಲ್ಲೇ ಕುಳಿತು ಹಕ್ಕಿಗಳನ್ನು ಗುರುತಿಸುವುದನ್ನು ಮಾಡುತ್ತಿದ್ದೆ; ನಿರ್ಜನ ಪ್ರದೇಶದಲ್ಲಿದ್ದ ಈ ಬೆಟ್ಟಕ್ಕೆ ನಾನು ಆಗಾಗ ಹೋಗಿ ಬರುವುದನ್ನು ಗಮನಿಸಿದ ನಮ್ಮ ಅಮ್ಮಮ್ಮ, ‘ಈ ಹುಡುಗ ಕೆಲಸ ಸಿಕ್ಕಲಿಲ್ಲ ಅಂತ ಹೀಗೆ ಒಬ್ಬನೇ ಕಾಡು ಸುತ್ತುವುದನ್ನು ಕಲಿತುಬಿಟ್ಟ, ಮುಂದೇನು ಮಾಡ್ತಾನೋ ಗೊತ್ತಿಲ್ಲ’ ಎಂದು ಚಿಂತೆಗೆ ಒಳಗಾಗಿದ್ದರು ಎನಿಸುತ್ತದೆ! ಸೊಪ್ಪಿನ ಅಣೆಯಿಂದ ನಾನು ವಾಪಸು ಬರುವಾಗ, ಅವರು ನನ್ನನ್ನು ನೋಡುತ್ತಿದ್ದ ರೀತಿಯೇ ಹಾಗಿತ್ತು. ಈ ರೀತಿ ಕಾಡು ಮೇಡುಗಳಲ್ಲಿ ಅಲೆಯುವುದರಲ್ಲೂ ಒಂದು ಸುಖವಿದೆ ಎಂಬ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ವಾತಾವರಣ ಆ ಹಳ್ಳಿಯಲ್ಲಿರಲಿಲ್ಲವಲ್ಲ! ನಮ್ಮ ಮನೆಯೆದುರು ಪೂರ್ವದಿಕ್ಕಿಗೆ ನೇರವಾಗಿ ಹರಡಿಹೋಗಿರುವ ಗದ್ದೆಬೈಲಿನ ಉದ್ದ ಸುಮಾರು ಒಂದು ಕಿ.ಮೀ. ಈ ಬೈಲಿನ ಎರಡೂ ಭಾಗಗಳಲ್ಲಿ ಹದವಾಗಿ ಕಾಡುಮರಗಳು ಬೆಳೆದಿದ್ದ ಹಕ್ಕಲುಗಳು, ಹಾಡಿ ಇದ್ದವು.

ಕೊನೆಯಲ್ಲಿ, ಅಂದರೆ ಬೈಲಿನ ತುದಿಯಲ್ಲಿ ಒಂದು ಪುಟ್ಟ ತೋಡು, ಅದನ್ನು ದಾಟಲು ಇಳಿಜಾರಿನಂತಿದ್ದ ಒಂದು ಮರದ ಸಂಕ. ಬ್ಯಾಲೆನ್ಸ್ ಮಾಡುತ್ತಾ ಆ ಸಂಕ ದಾಟಿದ ಕೂಡಲೆ ಸಿಗುವುದೇ ಹರನಗುಡ್ಡ. ನನ್ನ ಮಟ್ಟಿಗೆ, ನಮ್ಮ ಹಳ್ಳಿಯ ನಾಲ್ಕಾರು ಗುಡ್ಡಗಳ ರಾಜ ಈ ಹರನಗುಡ್ಡ. ಆ ಸಂಕ ದಾಟಿದ ತಕ್ಷಣ ಆರಂಭವಾಗುವ ಕಾಡು ಪ್ರದೇಶವು, ಅದೇ ದಿಕ್ಕಿನಲ್ಲಿ ಸುಮಾರು ೮ ಕಿ.ಮೀ. ತನಕ ಮುಂದುವರಿಯುತ್ತದೆ! ಹರನ ಗುಡ್ಡದ ಎತ್ತರ ಸುಮಾರು ೩೦೦ ಅಡಿ ಇರಬಹುದು. ಅದನ್ನು ಏರಲು ಒಪ್ಪವಾಗಿ ಕೆತ್ತಿಸಿದ್ದ ಮುರಕಲ್ಲಿನ ಮೆಟ್ಟಿಲುಗಳಿದ್ದವು. ನಮ್ಮ ಹಳ್ಳಿಯನ್ನು ಸುಮಾರು ೪೦೦ ವರ್ಷಗಳ ಹಿಂದೆ ಆಳುತ್ತಿದ್ದ ಮುದ್ದಳರಾಜನ ಕಾಲದಲ್ಲಿ ವಾಸವಿದ್ದ ಶ್ರೀಮಂತ ಮಹಿಳೆಯೊಬ್ಬಳು ಅದನ್ನು ಕಟ್ಟಿಸಿದಳಂತೆ; ಮಹಾಲಿಂಗೇಶ್ವರ ದೇವರ ಉತ್ಸವವು ಈ ಮೆಟ್ಟಿಲನ್ನೇರಿ, ಹರನಗುಡ್ಡದ ತುದಿಯಲ್ಲಿರುವ ಅಶ್ವತ್ಥಕಟ್ಟೆಯನ್ನು ತಲುಪಿ, ಪೂಜೆ ಪಡೆದು ವಾಪಸಾಗುತ್ತಿತ್ತಂತೆ. ಸುಮಾರು ೩ ಅಡಿ ಅಗಲದ ಆ ಮೆಟ್ಟಿಲುಗಳನ್ನು ಚಂದವಾಗಿ, ಓರಣವಾಗಿ ನಿರ್ಮಿಸಲಾಗಿತ್ತು.

ದಟ್ಟ ಕಾಡಿನ ನಡುವೆ ಸಾಗುವ ಆ ಮೆಟ್ಟಿಲುಗಳು ಇಂದಿಗೂ ಒಂದು ಬೆರಗು! ಆ ೧೨೦ ಮೆಟ್ಟಿಲುಗಳನ್ನು ಏರುತ್ತಾ ಸಾಗಿದಂತೆ, ಕೊನೆಯ ೬-೮ ಮೆಟ್ಟಿಲುಗಳು ಕಡಿದಾಗಿದ್ದು, ಏದುಸಿರು ಬರತೊಡಗುತ್ತದೆ. ತುದಿ
ಯಲ್ಲಂತೂ ದಟ್ಟವಾದ ಕಾಡು, ಹಗಲಿನಲ್ಲೂ ಮುಸ್ಸಂಜೆಯ ಅನುಭವ! ತಂಪಾದ ವಾತಾವರಣದಲ್ಲಿ ಸಾಗುತ್ತಾ ಮುಂದುವರಿಯುವ ಕಾಲ್ದಾರಿಯನ್ನು ಅನುಸರಿಸಿದರೆ, ಅರ್ಧ ಕಿ.ಮೀ.ಗೆ ಕಾಡು ಮುಗಿಯುತ್ತದೆ, ವಿಶಾಲವಾದ ಮೈದಾನ ಎದುರಾಗುತ್ತದೆ. ಅಲ್ಲಲ್ಲಿ ಮುರಕಲ್ಲುಗಳಿರುವ ಆ ಮೈದಾನವು ಟೊಳ್ಳಾಗಿದ್ದು, ಅದರ ಮೇಲೆ ನಡೆಯುವಾಗ ಧನ್ ಧನ್ ಎಂಬ ಸದ್ದಾಗುವುದು ಮತ್ತೊಂದು ವಿಸ್ಮಯ. ಮಳೆಗಾಲದಲ್ಲಿ ಈ ಇಡೀ ಮೈದಾನದ ಮೇಲೆಲ್ಲಾ ಒಂದಿಂಚೂ ಬಿಡದಂತೆ ಹಸಿರು ಹುಲ್ಲು ಬೆಳೆಯುತ್ತದೆ. ಆಗ ಅಲ್ಲಿ ನಿಸರ್ಗ ದೇವತೆಯು ವಿಶಾಲವಾದ ಹಸಿರು ಹಚ್ಚಡವನ್ನು ಹರಡಿದಂತೆ ಕಾಣುತ್ತದೆ. ಮೈದಾನದ ನಡುವೆ ಅಲ್ಲಲ್ಲಿ ಮರಗಳು, ವಿಚಿತ್ರ ವಿನ್ಯಾಸದ ಕಲ್ಲುಗಳು, ಹೊಂಡದಲ್ಲಿ ನಿಂತ ನೀರು, ನೆಲದ ಮೇಲೆಲ್ಲಾ ಕಂಗೊಳಿಸುವ ಹಸಿರು ಹುಲ್ಲು, ನೀಲಾಗಸ- ಈ ಸುಂದರ ದೃಶ್ಯದ ಆಗರ ಹರನಗುಡ್ಡ.

ಇವುಗಳ ಜತೆಯಲ್ಲೇ, ಬಳ್ಳಿ ಹರ, ಬೋಳುಗುಡ್ಡಗಳೂ ನಮ್ಮ ಹಳ್ಳಿಯ ಅಂಚಿನಲ್ಲಿವೆ. ನಿಜ, ಹಸಿರು ತುಂಬಿದ, ತನ್ನದೇ ರೀತಿಯ ವಿವಿಧ ವಿಸ್ಮಯಗಳನ್ನು ತುಂಬಿಕೊಂಡ ಇಂಥ ನಾಲ್ಕಾರು ಗುಡ್ಡಗಳ ನಡುವೆ ನಮ್ಮ ಹಳ್ಳಿಮನೆಯಿತ್ತು. ಆದರೇನು ಮಾಡುವುದು, ಉದ್ಯೋಗ ನಿಮಿತ್ತ ದೂರದ ನಗರಕ್ಕೆ ಬಂದು, ಇಲ್ಲಿನ ನಾಗರಿಕ ಬಂಧನಗಳಿಗೆ, ಅನುಕೂಲಗಳಿಗೆ, ಸೌಕರ್ಯಗಳಿಗೆ ಒಡ್ಡಿಕೊಂಡು, ಕಾಂಕ್ರೀಟು ಕಾಡಿನಲ್ಲಿ ವಾಸಿಸುವ ಆಯ್ಕೆಯನ್ನು ಎಂದು ನಾನು ಮಾಡಿಕೊಂಡೆನೋ, ಅಂದೇ ಆ ಹಳ್ಳಿ ಮನೆಯ ಸಾಂಗತ್ಯ ತಪ್ಪಿಹೋಯಿತು; ಅದರ ಜತೆಯೇ, ಆ ಬೆಟ್ಟಗುಡ್ಡಗಳದೂ.