Friday, 13th December 2024

ಭಾರತಕ್ಕೆ ವಿಶ್ವಕಪ್‌ ಬಂದ ಕತೆಯಿದು !

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

ಸಿಟ್ಟನ್ನು ಹೇಗಾದರೂ ತೀರಿಸಿಕೊಳ್ಳಲೇಬೇಕೆಂದು ಅವರು ಆಗಲೇ ನಿರ್ಧರಿಸಿದ್ದರು. ವಿಶ್ವಕಪ್ ಪಂದ್ಯಾಟದ ಆಯೋಜನೆಯನ್ನು ಇಂಗ್ಲೆಂಡ್‌ನ ಕಪಿಮುಷ್ಠಿಯಿಂದ ಬಿಡಿಸುವುದು ಎಂದು ತಿಳಿದ ಸಾಳ್ವೆ ತಮ್ಮ ಕೆಲಸ ಆರಂಭಿಸಿದ್ದರು.

1983 ರಲ್ಲಿ ಕಪಿಲ್ ದೇವ್ ನಾಯಕತ್ವದ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಎರಡು ಬಾರಿಯ ವಿಜೇತ, ವೆಸ್ಟ್‌ಇಂಡೀಸ್‌ನಂತಹ ದೈತ್ಯ ತಂಡವನ್ನು ಸೋಲಿಸುತ್ತೇವೆ ಎನ್ನುವ ನಂಬಿಕೆ ಆಟಗಾರರಿಗೇ ಇರಲಿಲ್ಲ. ಕೆಲವೊಮ್ಮೆ ಪವಾಡ ನಡೆಯುತ್ತದೆ ಎನ್ನುವುದಕ್ಕೆ ಸಾಕ್ಷಿ 83 ಮತ್ತು 87
ವಿಶ್ವಕಪ್. 83 ರ ಕಪ್ ಗೆಲ್ಲಲು ಆಟಗಾರರು ಬೆವರು ಸುರಿಸಿದರು, 87 ರ ಕಪ್ ಪಂದ್ಯಾವಳಿಯ ಹಕ್ಕು ಗೆಲ್ಲಲು ಅಧಿಕಾರಿಗಳು ಬುದ್ಧಿ ಸುರಿಸಿದರು.

ಇರಲಿ, ಭಾರತ 87 ರ ವಿಶ್ವಕಪ್ ಪಂದ್ಯಾವಳಿ ಆಯೋಜಿಸಲು ಕಾರಣ, ಇಂಗ್ಲೆಂಡಿನಿಂದ ಕಸಿದುಕೊಳ್ಳಲು ಪಟ್ಟಶ್ರಮ, ಯಶಸ್ವಿಯಾಗಿಸಲು ಹೆಣಗಿದ ರೀತಿ, ಎಲ್ಲವೂ ವಿಸ್ಮಯ. ಒಂದು ಮಾತ್ರ ಸತ್ಯ, ಅಂದು ಭಾರತ ವಿಶ್ವಕಪ್ ಗೆದ್ದದ್ದಷ್ಟೇ ಅಲ್ಲ, ಕೆಲವರ ಅಹಂಕಾರವನ್ನೂ ಮುರಿದಿತ್ತು. ಭಾರತ 83 ರ ವಿಶ್ವಕಪ್‌ನ ಅಂತಿಮ ಹಂತ ತಲುಪಿತ್ತು. ಆ ದಿನಗಳಲ್ಲಿ ಅಂದಿನ ಕೇಂದ್ರ ಸಚಿವ ಸಿದ್ಧಾರ್ಥ್ ಶಂಕರ್ ರೇ ಇಂಗ್ಲೆಂಡ್ ಪ್ರವಾಸದ ಲ್ಲಿದ್ದರು. ಭಾರತ ಅಂತಿಮ ಪಂದ್ಯ ಆಡುವು ದನ್ನು ಕಾಣುವ, ಬಯಸದೇ ಬಂದ ಅವಕಾಶವನ್ನು ಯಾರಾದರೂ ಬಿಟ್ಟಾರೆಯೇ? ಕೂಡಲೇ ತಮ್ಮ ಅಭಿಲಾಷೆಯನ್ನು ತಮ್ಮ ಜತೆ ಕೇಂದ್ರದಲ್ಲಿ ಮಂತ್ರಿಯೂ, ಅಂದಿನ ಬಿಸಿಸಿಐ (Board of Control for Cricket in India) ಅಧ್ಯಕ್ಷರೂ ಆಗಿದ್ದ ಎನ್‌ಕೆಪಿ ಸಾಳ್ವೆಯವರಿಗೆ ತಿಳಿಸಿ, ಎರಡು ಟಿಕೆಟ್ ಒದಗಿಸಿ ಕೊಡುವಂತೆ ಕೇಳಿಕೊಂಡರು.

ಅಂತಿಮ ಪಂದ್ಯ ವೀಕ್ಷಣೆಗೆಂದು ಭಾರತಕ್ಕೆ ಆಗಲೇ ಎರಡು ಟಿಕೆಟ್ ನೀಡಲಾಗಿತ್ತು. ಅದರಲ್ಲಿ ಸಾಳ್ವೆ ಮತ್ತು ಇನ್ನೋರ್ವ ಅಧಿಕಾರಿ ಹೋಗುವುದೆಂದು ನಿಶ್ಚಯ ವಾಗಿದ್ದರಿಂದ, ಇನ್ನೂ ಎರಡು ಟಿಕೆಟ್ ಕೊಡುವಂತೆ ಆಯೋಜಕರಲ್ಲಿ ವಿನಂತಿಸಿಕೊಂಡರು ಸಾಳ್ವೆ. ಸಾಳ್ವೆಯವರ ವಿನಂತಿಯನ್ನು ತಿರಸ್ಕರಿಸಿದ ಆಯೋಜಕರು, ಗಣ್ಯರಿಗೆಂದೇ ಮೀಸಲಾಗಿರುವ ಸ್ಥಳಕ್ಕೆ ಹೆಚ್ಚಿನ ಟಿಕೆಟ್ ನೀಡಲು ಸಾಧ್ಯವಿಲ್ಲವೆಂದು ಖಡಾಖಡಿ ಹೇಳಿಬಿಟ್ಟರು.

ಬ್ರಿಟಿಷರ ಈ ವರ್ತನೆಗೆ ಸಾಳ್ವೆ ಕುದ್ದುಹೋದರು. ಕ್ರಿಕೆಟ್ ಆಡುವ ದೇಶಗಳಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ದೇಶ ಭಾರತ. ಅಂಥ ದೇಶದ ಅಧಿಕೃತ ಕ್ರಿಕೆಟ್ ಸಂಸ್ಥೆಗೆ ಕೇವಲ ಎರಡು ಟಿಕೆಟ್ ಎಂದರೆ ಹೇಗೆ? ಅದರಲ್ಲೂ, ಆ ದೇಶ ಫೈನಲ್ ತಲುಪಿದಾಗ! ಆ ಕಾಲದಲ್ಲಿ ಎಂಸಿಸಿ ಅಥವಾ ಈಗಿನ ಇಸಿಬಿ (England and Wales Cricket Board) ಅಧ್ಯಕ್ಷರೇ ಐಸಿಸಿ (International Cricket Council) ನ ಅಧ್ಯಕ್ಷರೂ ಆಗಿರುತ್ತಿದ್ದರು. ಗಣ್ಯರ ಟಿಕೆಟ್‌ ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಐಸಿಸಿಯ ಅಧಿಕಾರಿಗಳು ಮತ್ತು ಪ್ರಾಯೋಜಕರಿಗೆ ಮೀಸಲಾಗಿರುತ್ತಿದ್ದವು.

ದುರಂತವೆಂದರೆ, ಇಂಗ್ಲೆಂಡ್‌ನ ಪಂದ್ಯ ಇರದಿದ್ದಾಗ ಗಣ್ಯರ ಸ್ಥಳಗಳು ಅರ್ಧಕ್ಕರ್ಧ ಖಾಲಿಯಾಗೇ ಇರುತ್ತಿತ್ತು. ಅಂದೂ ಅಷ್ಟೇ, ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಆಡುತ್ತಿರಲಿಲ್ಲ. ಆದ್ದರಿಂದ ಅರ್ಧಕ್ಕಿಂತಲೂ ಹೆಚ್ಚು ಜಾಗ ಖಾಲಿಯಾಗೇ ಇತ್ತು. ಇದು ಸಾಳ್ವೆಯವರನ್ನು ಇನ್ನಷ್ಟು ಕೆರಳಿಸಿತ್ತು. ಈ ಸಿಟ್ಟನ್ನು ಹೇಗಾದರೂ ತೀರಿಸಿ ಕೊಳ್ಳಲೇಬೇಕೆಂದು ಅವರು ಆಗಲೇ ನಿರ್ಧರಿಸಿದ್ದರು. ಅದಕ್ಕೆ ಆಗಬೇಕಾದ ಮೊದಲ ಕೆಲಸವೆಂದರೆ, ವಿಶ್ವಕಪ್ ಪಂದ್ಯಾಟದ ಆಯೋಜನೆಯನ್ನು ಇಂಗ್ಲೆಂಡ್‌ನ ಕಪಿಮುಷ್ಠಿಯಿಂದ ಬಿಡಿಸುವುದು ಎಂದು ತಿಳಿದ ಸಾಳ್ವೆ ತಮ್ಮ ಕೆಲಸ ಆರಂಭಿಸಿದ್ದರು.

ಅಂತಿಮ ಪಂದ್ಯದಲ್ಲಿ ಭಾರತ ಜಯಿಸಿತ್ತು. ಅಂದು ರಾತ್ರಿ ನಡೆದ ಔತಣ ಕೂಟದಲ್ಲಿ ಸಾಳ್ವೆ ಪಾಕಿಸ್ತಾನ ಮತ್ತು ಶ್ರೀಲಂಕಾದ ಅಧಿಕಾರಿಗಳೊಂದಿಗೆ ಮಾತನಾ ಡುತ್ತಾ, ವಿಶ್ವಕಪ್ ಪಂದ್ಯಗಳು ನಮ್ಮ ದೇಶದಲ್ಲೂ ನಡೆದರೆ ಎಷ್ಟು ಚೆನ್ನಾಗಿರತ್ತೆ ಅಲ್ಲವೇ? ಎಂದರು. ಅವರ ಮಾತನ್ನು ಕೇಳಿದ ಇಬ್ಬರೂ ಕಣ್ಣರಳಿಸಿದರು. ಸಂತೋಷದ ವಿಷಯವೇ ಆದರೂ, ಅಸಲಿಗೆ ಅಂದು ಬಿಸಿಸಿಐ ಹಣವಿಲ್ಲದ ಕಂಗಾಲು ಕಂಪನಿಯಾಗಿತ್ತು. ಇನ್ನು ಉಳಿದ ಎರಡು ದೇಶಗಳ ಪರಿಸ್ಥಿತಿಯಂತೂ ಹರೋಹರ. ಇಬ್ಬರೂ ಅದನ್ನೇ ಹೇಳಿದಾಗ ಸಾಳ್ವೆ ಹೇಳಿದರು, ನಾವು ಒಬ್ಬೊಬ್ಬರೇ ಆಯೋಜಿಸುವಷ್ಟು ಸಮರ್ಥರಿಲ್ಲದಿರಬಹುದು, ಆದರೆ ಒಟ್ಟಾಗಿ ಆಯೋಜಿಸ ಬಹುದಲ್ಲ? ಈ ಮಾತು ಉಳಿದ ಇಬ್ಬರನ್ನು ಇನ್ನೂ ಉತ್ಸುಕರನ್ನಾಗಿ ಮಾಡಿತು.

ಇಬ್ಬರ ತಲೆಯಲ್ಲೂ ಹುಳು ಬಿಟ್ಟ ಸಾಳ್ವೆ ಅಲ್ಲಿಂದ ಹೊರಟು, ವಿಜೇತ ತಂಡದೊಂದಿಗೆ ದೆಹಲಿಗೆ ಬಂದಿಳಿದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ  ತಂಡದವ ರಿಗಾಗಿ ಔತಣ ಏರ್ಪಡಿಸಿದ್ದರು. ಆ ಔತಣದ ನಡುವೆ ಸಾಳ್ವೆ ತಮ್ಮ ಅಭಿಪ್ರಾಯವನ್ನು ಪ್ರಧಾನಿಗೆ ತಿಳಿಸಿದರು. ಇಂದಿರಾ ಒಂದೇ ಪ್ರಶ್ನೆ ಕೇಳಿದರು, ನಿಮಗೆ ಏನು
ಬೇಕು? ಸಾಳ್ವೆ ಕೂಡ ಒಂದೇ ಮಾತಿನಲ್ಲಿ ಹೇಳಿದರು, ಹಣ!. ಇಂದಿರಾ ಕೂಡಲೇ ಧೀರೂಭಾಯಿ ಅಂಬಾನಿಗೆ ಫೋನ್ ಮಾಡಿದರು. ಮಾರನೆಯ ದಿನ ಅಂಬಾನಿ ಪಿಎಂ ಕಚೇರಿಯಲ್ಲಿದ್ದರು!

ಇಂದಿರಾ ಅಂಬಾನಿಗೆ ವಿಷಯ ತಿಳಿಸಿ, ಭಾರತ ವಿಶ್ವಕಪ್ ಪಂದ್ಯಾವಳಿ ಆಯೋಜಿಸಿದರೆ, ವೆಚ್ಚವನ್ನು ನೀವು ಭರಿಸಬಹುದೇ? ಎಂದು ಕೇಳಿದರು. ನೀವು ವಿಶ್ವಕಪ್ ಟೂರ್ನಮೆಂಟ್‌ನ್ನು ಭಾರತದಲ್ಲಿ ಆಯೋಜಿಸುವುದಾದರೆ, ನಾನು ಬ್ಲ್ಯಾಂಕ್ ಚೆಕ್ ಕೊಡಲು ಸಿದ್ಧ ಎಂದರು ಧೀರೂಭಾಯಿ! ಗಾಂಧಿ ಮತ್ತು ಅಂಬಾನಿ ಬಲ ಪಡೆದ ಸಾಳ್ವೆ ಲಾಹೋರಿನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದ ಅಧಿಕಾರಿಗಳನ್ನು ಭೇಟಿಯಾದರು. ವಿಶ್ವಕಪ್ ಪಂದ್ಯಾವಳಿ ಯನ್ನು ಇಂಗ್ಲೆಂಡಿನ ಆಚೆ ನಡೆಸಲು ಐಸಿಸಿಗೆ ಪತ್ರ ಬರೆಯಲಾಯಿತು. ಪತ್ರ ನೋಡಿದ ಐಸಿಸಿಗೆ ಸಿಡಿಲು ಬಡಿದಂತಾಗಿತ್ತು. ಊಟಕ್ಕೆ ಗತಿಯಿಲ್ಲದ ದೇಶಗಳು ವಿಶ್ವಕಪ್ ಆಯೋಜಿಸುವುದು ಎಂದರೆ ಸುಮ್ಮನೆ ಮಾತಾ? ಐಸಿಸಿ ನಿಯಮಗಳ ಪ್ರಕಾರ ಇದು ಸಾಧ್ಯವಾಗದ ಮಾತು ಎಂದು ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು.

ಅಷ್ಟು ಸುಲಭಕ್ಕೆ ಇದು ಸಾಧ್ಯವಿಲ್ಲ ಎನ್ನುವುದು ಭಾರತಕ್ಕೂ ತಿಳಿದಿತ್ತು. ಆದರೆ, ಬಿಸಿಸಿಐ ಬದಲಾವಣೆಗೆ ಬಲೆಯನ್ನಂತೂ ಬೀಸಿತ್ತು. ಭಾರತ ತನ್ನ ಪ್ರಸ್ತಾವನೆ ಯನ್ನು ಆಸ್ಟ್ರೇಲಿಯಾಕ್ಕೆ ತಿಳಿಸಿ, ಮುಂದಿನ ವಿಶ್ವಕಪ್ ಆಯೋಜನೆಗೆ ತಾನು ಸಿದ್ಧವಾಗಿದ್ದು, ಅದಕ್ಕೂ ಮುಂದಿನದ್ದನ್ನು ಆಸ್ಟ್ರೇಲಿಯಾ ಯಾಕೆ ಆಯೋಜಿಸ ಬಾರದು ಎಂದು ಕೇಳಿತು. ಮೇಲ್ನೋಟಕ್ಕೆ ಸ್ನೇಹ ತೋರುತ್ತಿದ್ದರೂ, ಒಳಗೊಳಗೇ ಇಂಗ್ಲೆಂಡಿನೊಂದಿಗೆ ಪೈಪೋಟಿ ನಡೆಸುತ್ತಿದ್ದ ಆಸ್ಟ್ರೇಲಿಯಾ ಇದಕ್ಕೆ ಒಪ್ಪಿತು. ಆಸ್ಟ್ರೇಲಿಯಾದ ಒಪ್ಪಿಗೆ ಸಿಗುತ್ತಿದ್ದಂತೆ ಭಾರತ ಪಾಕಿಸ್ತಾನ ಜಂಟಿ ನಿರ್ವಹಣಾ ಸಮಿತಿ ರಚಿಸಲಾಯಿತು. ಅದಕ್ಕೆ ಸಾಳ್ವೆ ಅಧ್ಯಕ್ಷರಾದರು. ಆಯೋಜನೆಗೆ ತನ್ನ ಬಳಿ ಸಾಮರ್ಥ್ಯ ಇಲ್ಲವೆಂದ ಶ್ರೀಲಂಕಾ, ಭಾರತಕ್ಕೆ ತನ್ನ ಸಹಕಾರ ನೀಡುವುದಾಗಿ ಹೇಳಿತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಐಸಿಸಿಯಲ್ಲಿ ಮತದಾನ ನಡೆಸುವಂತೆ ಭಾರತ ಮತ್ತು ಪಾಕಿಸ್ತಾನ ಒತ್ತಾಯಿಸಿದವು. ಆಧಿಕ್ಯ ಮೆರೆಯುತ್ತಿದ್ದ ಇಂಗ್ಲೆಂಡ್ ಐಸಿಸಿ ಇದಕ್ಕೆ ಒಪ್ಪಿದವು. ಐಸಿಸಿಯಲ್ಲಿ ಆಗ ಒಟ್ಟೂ ಇಪ್ಪತ್ತೊಂಬತ್ತು ತಂಡಗಳಿದ್ದು, ಟೆಸ್ಟ್ ಆಡುವ ಎಂಟು ದೇಶಗಳಿಗೆ ತಲಾ ಎರಡು ಮತ, ಉಳಿದ ಇಪ್ಪತ್ತೊಂದು ದೇಶ
ಗಳಿಗೆ ತಲಾ ಒಂದು ಮತದಂತೆ ಒಟ್ಟೂ ಮೂವತ್ತೇಳು ಮತಗಳಿದ್ದವು. ಆ ಕಾಲದಲ್ಲಿ ಟೆಸ್ಟ್ ಪಂದ್ಯ ಆಡುವ ಎಂಟು ತಂಡಕ್ಕೆ ಐಸಿಸಿ ಶೇ. ಅರವತ್ತು ಮತ್ತು ಉಳಿದ ಇಪ್ಪತ್ತೊಂದು ತಂಡಕ್ಕೆ ನಲವತ್ತರಷ್ಟು ಧನ ಸಹಾಯ ಮಾಡುತ್ತಿತ್ತು. ಸರಳವಾಗಿ ಹೇಳುವುದಾದರೆ, ಐಸಿಸಿ ಟೆಸ್ಟ್ ಆಡುವ ದೇಶಕ್ಕೆ ಹದಿನೈದು ಸಾವಿರ ಪೌಂಡ್, ಉಳಿದ ದೇಶಕ್ಕೆ ೫೦೦೦ ಪೌಂಡ್ ನೀಡುತ್ತಿತ್ತು. ಆಗ ಸಾಳ್ವೆ, ಟೆಸ್ಟ್ ಆಡುವ ದೇಶಕ್ಕೆ ನೀಡುವ ಮೊತ್ತವನ್ನು ಐದು ಪಟ್ಟು ಮತ್ತು ಉಳಿದ ದೇಶಕ್ಕೆ ಕೊಡುವ ಮೊತ್ತ
ವನ್ನು ನಾಲ್ಕು ಪಟ್ಟು ಹೆಚ್ಚಿಸುವುದಾಗಿ ಹೇಳಿದರು. ಆದರೂ ಇಂಗ್ಲೆಂಡ್ ಪ್ರಭಾವದಿಂದ ಕೆಲವು ದೇಶಗಳು ಮತದಾನದಿಂದ ದೂರ ಉಳಿದವು.

ಮತದಾನ ಫಲಿತಾಂಶ ಹೊರಬಂದಾಗ ಭಾರತದ ಪರವಾಗಿ 16, ವಿರೋಧವಾಗಿ 12 ಮತ ಬಿದ್ದಿದ್ದವು. ಇದೆಲ್ಲ ನಡೆದದ್ದು 83 ರಲ್ಲೇ. ಮುಂದಿನ ಮೂರುವರೆ ವರ್ಷ ಇಂಗ್ಲೆಂಡ್ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಇತ್ತು. ಆಗ ಅರವತ್ತು ಓವರ್‌ಗಳ ಮ್ಯಾಚ್ ನಡೆಯುತ್ತಿದ್ದುದರಿಂದ, ಮಂದ ಬೆಳಕಿನ ಸಮಸ್ಯೆ ಎದುರಾಗ ಬಹುದು ಎಂದಿತು. ಅದಕ್ಕೆ ಭಾರತ, ಪಂದ್ಯವನ್ನು ಹತ್ತು ಓವರ್ ಕಮ್ಮಿ ಮಾಡಿ ಐವತ್ತು ಓವರ್‌ಗೆ ಇಳಿಸಲು ಸೂಚಿಸಿತು. ವಿಶ್ವಕಪ್ ಪ್ರಸಾರಣಾ ಸಾಮರ್ಥ್ಯ
ಇಲ್ಲವೆಂದಾಗ, ಅದಕ್ಕೂ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುತ್ತಿರುವುದಾಗಿ ಹೇಳಿತು ಭಾರತ. ನಂತರ ಅದಕ್ಕಾಗಿಯೇ ಮೂವತ್ತು ಕೋಟಿ ರು. ಖರ್ಚು ಮಾಡಲಾಯಿತು. ಆ ಕಾಲದಲ್ಲಿ ವರ್ಣ ನೀತಿಯ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ತಂಡವನ್ನು ನಿಷೇಧಿಸುವುದರ ಕುರಿತು ಚರ್ಚೆ ನಡೆಯುತ್ತಿತ್ತು.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳದ್ದು ಒಂದು ವಾದವಾದರೆ, ವೆಸ್ಟ್ ಇಂಡೀಸ್ ತಂಡದ ವಾದ ಬೇರೆಯಾಗಿತ್ತು. ವಿಶ್ವಕಪ್ ನಂತರ ನಿರ್ಬಂಧದ ಕುರಿತು ನಿರ್ಣಯಿಸುವುದಾಗಿ ಹೇಳಿದರು ಸಾಳ್ವೆ. ಭಾರತ ಮತ್ತು ಪಾಕಿಸ್ತಾನದಂತಹ ದೊಡ್ಡ ದೇಶದಲ್ಲಿ ಆಟಗಾರರು ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾ
ಣಿಸುವುದು ಕಷ್ಟ ಎಂದಾಗ ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಆಟಗಾರರ ಪ್ರಯಾಣದ ಜವಾಬ್ದಾರಿ ಹೊರುವುದಾಗಿ ಭರವಸೆ ನೀಡಿತು. ಪ್ರತಿ ಹಂತದಲ್ಲೂ ಜಗಮೋಹನ್ ದಾಲ್ಮಿಯ, ಐ. ಎಸ್.ಬಿಂದ್ರಾರಂಥವರು ಸಾಳ್ವೆಯವರ ಜತೆಯಾಗಿ ನಿಂತರು.

ಕೊನೆಯ ಅಸ್ತ್ರವಾಗಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡ ಕಾರಣದಿಂದ ಪಂದ್ಯಾವಳಿ ಬಹಿಷ್ಕರಿಸುವುದಾಗಿ ಇಂಗ್ಲೆಂಡ್ ಬೆದರಿಕೆ ಹಾಕಿದಾಗ ಪಾಕಿಸ್ತಾನದ ಜನರಲ್ ಜಿಯಾ ಉಲ್ ಹಕ್ ಭಾರತಕ್ಕೆ ಬಂದು ಪ್ರಧಾನಿ ರಾಜೀವ್ ಗಾಂಧಿಯವರನ್ನು ಭೇಟಿಯಾದರು. ನಂತರ ವಿಶ್ವಕಪ್ ಮುಗಿಯುವವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವೆ ಎಲ್ಲವೂ ಸರಿಯಾಗಿದೆ ಎನ್ನುವಂತೆಯೇ ಇದ್ದರು. ಆದರೆ ಭಾರತದಲ್ಲಿ ಪರಿಸ್ಥಿತಿ ಬದಲಾಗಿತ್ತು.
1984 ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ರಾಜೀವ್ ಗಾಂಧಿ ಪ್ರಧಾನಿಯಾದರು. ರಾಜೀವ್ ಮತ್ತು ಧೀರೂಭಾಯಿ ಸಂಬಂಧ ಚೆನ್ನಾಗಿರಲಿಲ್ಲ. ರಾಜೀವ್ ಗಾಂಧಿ ಮಂತ್ರಿಮಂಡಲದಲ್ಲಿ ವಿ. ಪಿ. ಸಿಂಗ್ ವಿತ್ತಮಂತ್ರಿಯಾಗಿದ್ದರು. ಅಂಬಾನಿಯ ಮೇಲೆ ಐಟಿ ದಾಳಿ ನಡೆದು, ಅಂಬಾನಿ ಮತ್ತು ಸರಕಾರದ
ನಡುವೆ ದೊಡ್ಡ ಸಮರವೇ ಏರ್ಪಟ್ಟಿತ್ತು. ವಿಶ್ವಕಪ್ ಆಯೋಜಿಸಲು ಮೂವತ್ತು ಕೋಟಿ ರುಪಾಯಿ ಬೇಕಾಗಿದ್ದು (ಇತರೆ ಖರ್ಚುಗಳನ್ನು ಹೊರತುಪಡಿಸಿ)
ಭಾರತ ಇಪ್ಪತ್ತು ಕೋಟಿ, ಪಾಕಿಸ್ತಾನ ಹತ್ತು ಕೋಟಿ ಭರಿಸಬೇಕಿತ್ತು. ಅಂಬಾನಿ ಹಿಂದೆ ಸರಿದಿದ್ದರಿಂದ ಭಾರತದ ಬಳಿ ಖಾತರಿ ಮೊತ್ತ ಕೊಡುವಷ್ಟೂ ಹಣವಿರಲಿಲ್ಲ.

ಖಾತರಿ ಮೊತ್ತವಾದ ನಾಲ್ಕು ಕೋಟಿ ರು. (ಸುಮಾರು ಎರಡು ಮಿಲಿಯನ್ ಪೌಂಡ್) ಯನ್ನು ಡಿಸೆಂಬರ್ 1984 ರ ಒಳಗೆ ಭರಿಸಬೇಕಿತ್ತು. ವಿದೇಶಿ ಪ್ರಾಯೋಜಕ ರಿಂದ ಹಣ ಪಡೆಯೋಣ ವೆಂದರೆ, ಆ ಕಂಪನಿಗಳಿಗೆ ಭಾರತದ ಮಾರುಕಟ್ಟೆ ಯಿಂದ ಯಾವ ಲಾಭವೂ ಬರುತ್ತಿರಲಿಲ್ಲ. ಭಾರತದ ಕಂಪನಿಗಳ ಜಾಹೀರಾತಿನಿಂದ ಬರುವ ಹಣ ಪಂದ್ಯ ನಡೆಯುವಾಗ ಅಥವಾ ನಂತರ ಬರುವ ಹಣವಾಗಿತ್ತು. ಆದರೂ, ಜಿಲೆಟ್, ಕೋಕಾಕೋಲಾ, ಕೊಡಕ್, ಮಿಟ್ಸುಬಿಶಿಯಂತಹ ವಿದೇಶಿ ಸಂಸ್ಥೆ ಗಳು ಮತ್ತು ಕೆಲವು ಸ್ಥಳೀಯ ಸಂಸ್ಥೆಗಳನ್ನೆಲ್ಲ ಕೇಳಿಕೊಂಡಾಗ ಒಟ್ಟಾದ ಒಟ್ಟೂ ಮೊತ್ತ ಕೇವಲ ನಲವತ್ತು ಲಕ್ಷ ರು. ಮಾತ್ರವಾಗಿತ್ತು! ಕಾಕತಾಳೀಯವೋ ಏನೋ, ವಿ. ಪಿ. ಸಿಂಗ್ ಹಣಕಾಸು ಸಚಿವರಿಂದ ಬದಲಾಗಿ ರಕ್ಷಣಾಮಂತ್ರಿಯಾದರು.

ಕೂಡಲೇ ಸಾಳ್ವೆ ಧೀರೂಭಾಯಿಯನ್ನು ಸಂಪರ್ಕಿಸಿ, ಸಹಕರಿಸುವಂತೆ ಕೇಳಿಕೊಂಡರು. ನಾಲ್ಕು ಕೋಟಿ ರುಪಾಯಿ ಕೊಡಲು ಒಪ್ಪಿದ ಧೀರೂಭಾಯಿ,
ವಿಶ್ವಕಪ್‌ಗಿಂತ ಮೊದಲು ನಡೆಯುವ ಭಾರತ ಪಾಕಿಸ್ತಾನ ನಡುವಿನ ಪ್ರದರ್ಶನ ಪಂದ್ಯವನ್ನು ತಾವು ಪ್ರಧಾನಿ ರಾಜೀವ್ ಗಾಂಧಿಯವರ ಪಕ್ಕದಲ್ಲಿ ಕುಳಿತು
ನೋಡಬೇಕೆಂಬ ಷರತ್ತು ವಿಧಿಸಿದರು. ಅದಕ್ಕೆ ರಾಜೀವ್ ಗಾಂಧಿ ಒಪ್ಪಿದ ನಂತರ ವಿಶ್ವಕಪ್‌ಗೆ ರಿಲಾಯನ್ಸ್ ಹೆಸರಿಡಲು ಒಂದೂವರೆ ಕೋಟಿ ರು. ನೀಡಿ ದರು
ಅಂಬಾನಿ. ಒಮ್ಮೆ ಗುಜರಾತಿ ಬನಿಯಾ ಮಾರುಕಟ್ಟೆಗೆ ಬಂದರೆ ಕೇಳಬೇಕೆ? ಆಟಗಾರರ ವಸತಿಯಿಂದ ಕ್ರೀಡಾಂಗಣದ ಅಭಿವೃದ್ಧಿಯ ವರೆಗೆ ಬಹುತೇಕ
ಜವಾಬ್ದಾರಿಯನ್ನು ರಿಲಾಯನ್ಸ್ ಹೊತ್ತು ಕೊಂಡಿತು.

ಕೊನೆಗೆ ಮುಕ್ತಾಯ ಸಮಾರಂಭದ ಪ್ರಸಾರಣಕ್ಕೆಂದೇ ಐವತ್ತು ಲಕ್ಷ ರು. ಖರ್ಚುಮಾಡಿತು. ಭಾರತ ಆ ವಿಶ್ವಕಪ್ ಗೆಲ್ಲದಿದ್ದರೂ, ವಿಶ್ವದ ಕಣ್ಣಲ್ಲಿ ಗೆದ್ದಿತ್ತು.
ಅಂದು ಭಾರತ ಕೇಳಿದ ಎರಡು ಟಿಕೆಟ್ ಕೊಟ್ಟಿದ್ದರೆ ಬಹುಶಃ ಇಂದಿಗೂ ವಿಶ್ವಕಪ್ ಇಂಗ್ಲೆಂಡಿನಲ್ಲೇ ನಡೆಯುತ್ತಿತ್ತೋ ಏನೋ? ಒಂದಂತೂ ಸತ್ಯ, ಯಾರೇ
ಆದರೂ ಸಹಾಯ ಕೇಳಿದಾಗ, ಸಾಧ್ಯವಾದಷ್ಟು ಮಾಡಿದರೆ ಒಳ್ಳೆಯದು. ಎದುರಿನವ ದುರ್ಬಲ ಎಂದು ಉಡಾಫೆ ಹೊಡೆದರೆ, ತಿರುಗಿ ಬಲವಾದ ಏಟು
ತಿನ್ನಬೇಕಾದೀತು! ಇದು ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಲ್ಲ, ಯಾವ ವಿಷಯದಲ್ಲಾದರೂ ಅಷ್ಟೇ!