ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಹಲವು ವರ್ಷಗಳಿಂದ ಸಿಗದ, ಭೇಟಿಯಾಗದ ಸ್ನೇಹಿತರೆಲ್ಲ, ಪ್ರತಿದಿನ ಕ್ಲಬ್ ಹೌಸಿನಲ್ಲಿ ಸಿಗುತ್ತಿದ್ದಾರೆ. ವಿದೇಶದಲ್ಲಿರುವ ಆತ್ಮೀಯರ ಜತೆಗೆ ಪಕ್ಕದಲ್ಲಿ ಕುಳಿತು
ಮಾತಾಡಿದಷ್ಟು ಸಂತಸ, ಸಮಾಧಾನ, ಖುಷಿ ಸಿಗುತ್ತಿದೆ. ಕೆಲವರ ಮಾತುಗಳನ್ನು ಒಂದೆರಡು ಗಂಟೆ ಕೇಳಿದರೆ, ಒಂದು ಪುಸ್ತಕ ಓದಿದಷ್ಟು ಸಂತೃಪ್ತಿ ಸಿಗುತ್ತಿದೆ. ಜೀವನದ ಅವರ ಮಾತುಗಳನ್ನು ಕೇಳುವ ಸಂದರ್ಭ ಸಿಗಲಿಕ್ಕಿಲ್ಲ ಎಂದು ಯಾರ ಬಗ್ಗೆ ಅಂದುಕೊಂಡಿದ್ದೆವೋ, ಅವರೆಲ್ಲ ಕ್ಲಬ್ ಹೌಸಿನಲ್ಲಿ ಸಿಗುತ್ತಿದ್ದಾರೆ.
ಅವರ ಅಭಿಪ್ರಾಯಗಳು ನಮ್ಮಲ್ಲಿ ಹೊಸ ಹೊಳಹು, ಚಿಂತನೆಗಳನ್ನು ಹುಟ್ಟಿ ಹಾಕುತ್ತಿವೆ. ಕ್ಲಬ್ ಹೌಸ್ ಮೂಲಕ, ನಮ್ಮ ಕಿವಿಗಳಿಂದ ಜಗತ್ತನ್ನು ನೋಡುವ ಅವಕಾಶ ತೆರೆದುಕೊಂಡಂತಾಗಿದೆ. ಮೂಲತಃ ನಾನು ಕೇಳುಗ. ಯಾರಾದರೂ ಒಳ್ಳೆಯ ವಿಚಾರಗಳನ್ನು ಹೇಳುತ್ತಿದ್ದರೆ, ಕಿವಿಯೊಂದನ್ನಷ್ಟೇ ಅಲ್ಲ, ಬಾಯಿಯನ್ನೂ ತೆರೆದುಕೊಂಡು ಕೇಳುತ್ತೇನೆ. ಹುಟ್ಟಿದಾಗಿನಿಂದ ನಾವು ಈ ಜಗತ್ತನ್ನು ಕೇಳಿಯೂ ಬೆಳೆದವರು. ಕೇಳುತ್ತಾ, ಕೇಳುತ್ತಾ ದೃಶ್ಯಗಳನ್ನು ರೂಪಿಸಿಕೊಂಡವರು. ಕಲ್ಪನೆ, ಯೋಚನೆಗಳನ್ನು ವೃದ್ಧಿಸಿಕೊಂಡವರು. ಅಷ್ಟಕ್ಕೂ ಈ ಜಗತ್ತು ಹುಟ್ಟಿದಾಗ, ಮೊಳಗಿದ್ದೇ ಧ್ವನಿಯಂತೆ. ಅದನ್ನೇ ‘ಓಂಕಾರ’ ಅಂತಾರೆ.
ಧ್ವನಿಯ ಮಗ್ಗುಲಿನಲ್ಲಿಯೇ ಹುಟ್ಟಿದ್ದು ಮೌನ. ಮೌನವೂ ಒಂದು ಧ್ವನಿಯೇ. ಅದು ಯಾರಿಗೂ ಕೇಳದ ಧ್ವನಿ. ಇದನ್ನೇ ಇಂಗ್ಲೀಷಿನಲ್ಲಿ deafening sound ಅಂತ ಹೇಳುವುದು, ‘ಆ ಮೌನ ಗಟ್ಟಿಯಾಗಿ ಕೇಳಿಸುವಂತಿತ್ತು’ ಎಂದು ಹೇಳುವುದು. ಮೌನದಲ್ಲೂ ಮಾತು ಮುಂದುವರಿದಿರುತ್ತದೆ. ಮೌನ ಏಕ ಮುಖವಲ್ಲ. ಮೌನದ ಸಂಭಾಷಣೆ ಮಾಡಬಹುದು. ಚಾರ್ಲಿ ಚಾಪ್ಲಿನ್ ಸಿನಿಮಾ ನೋಡಿದವರಿಗೆ ಇದನ್ನು ವಿವರಿಸಬೇಕಿಲ್ಲ. ಆದರೆ ಮಾತಿಗಿರುವ ಶಕ್ತಿ ಅಗಾಧ. ಮಾತಿನಲ್ಲಿ ಮನೆ ಕಟ್ಟಿದ, ಮಾತಿನಲ್ಲಿ ಜಗತ್ತು ತೋರಿಸಿದ, ಮಾತೇ ಬಂಡವಾಳ, ಮಾತಿನಲ್ಲಿ ಬ್ರಹ್ಮಾಂಡ ಸೃಷ್ಟಿಸಿದ… ಎಂದು ಹೇಳಿರುವುದನ್ನು ಕೇಳಿರಬಹುದು. ಮಾತಿಗೆ ಅಂಥ ಶಕ್ತಿಯಿದೆ. ಮಾತಿಗೆ ಮರುಳಾಗದವರುಂಟೇ? ಕ್ಲಬ್ ಹೌಸ್ ಆಶಯವೂ ಅದೇ.
ಅದು ನಮ್ಮ ‘ಶ್ರವಣ ಸಂಸ್ಕೃತಿ’ಯನ್ನು ನಮಗೆ ಮತ್ತೊಮ್ಮೆ ನೆನಪು ಮಾಡಿಕೊಟ್ಟ, ಅದರ ಅಂತಃಸತ್ವವನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟ ನವವೇದಿಕೆ. ಜಗತ್ತಿನ ಅಪ್ರತಿಮ ಸಾಧಕರು, ಪ್ರತಿಭಾವಂತರು, ಯಶಸ್ಸಿನ ಸರದಾರರು, ಅಸಂಖ್ಯ ಜನರಿಗೆ ಬದುಕಿನ ಸಾಧ್ಯತೆಗಳನ್ನು ತಿಳಿಸಿಕೊಟ್ಟವರು, ಜೀವನದಲ್ಲಿ ಭರವಸೆಯ ಅಂತರಗಂಗೆಯನ್ನು ಬೊಗಸೆಯಲ್ಲಿ ಹಿಡಿದುಕೊಟ್ಟವರು, ಅದ್ಭುತ ವಾಗ್ಮಿಗಳು, ತಮ್ಮ ನಡೆ – ನುಡಿಗಳಿಂದ ತಂಪಾದವರು, ತಂಪನೆರೆದವರು, ಮಾತಿನ ಮೂಲಕ ಬದುಕು ಸಹ್ಯವಾಗಿಸಿದವರು.. ಹೀಗೆ ಅವೆಷ್ಟೋ ಸಾವಿರ ಮಂದಿ ಕ್ಲಬ್ ಹೌಸ್‌ಗೆ ಬಂದು ತಮ್ಮ ಹೃದಯಾಂತರಾಳದ ಮಾತುಗಳನ್ನು
ಹೇಳುತ್ತಿzರೆ. ಇವುಗಳನ್ನು ಕೇಳದವನೇ ಪಾಪಿ!
ಮೊನ್ನೆ ನಾನು ರಿಚರ್ಡ್ ಸ್ಟಾನ್ಲಿ ಎಂಬಾತನ ಮಾತುಗಳನ್ನು ಕ್ಲಬ್ ಹೌಸಿನಲ್ಲಿ ಕೇಳುತ್ತಿದ್ದೆ. ಆತನ ಒಂದು ವೈಶಿಷ್ಟ್ಯವೆಂದರೆ, ಆತ ಎಲ್ಲರನ್ನೂ ಅಳುವಂತೆ ಮಾಡುತ್ತಾನೆ. ಅದೆಂಥ ಕಲ್ಲು ಹೃದಯದವರೂ ಅವನ ಮಾತುಗಳನ್ನು ಕೇಳಿ ಬಿಕ್ಕುತ್ತಾರೆ. ಈತನೇನು ಮಹಾನ್ ವ್ಯಕ್ತಿಯಲ್ಲ. ನ್ಯೂಯಾರ್ಕಿನ ಬೀದಿಗಳಲ್ಲಿ
ಗಿಟಾರ್ ನುಡಿಸುತ್ತಿದ್ದ ಬೀದಿ ಕಲಾವಿದ. ಆತ ಬದುಕನ್ನು ನೋಡಿದ ರೀತಿಯೇ ಅದ್ಭುತ. ಆತ ಆರಂಭದಲ್ಲಿ ಎಲ್ಲರಿಂದ ತಿರಸ್ಕೃತನಾದವನು. ಈ ಬದುಕು ಸಾಕು ಎಂದು ಮೂರು ಸಲ ಆತ್ಮಹತ್ಯೆಗೆ ಪ್ರಯತ್ನಿಸಿ, ಸಾವಿನ ದವಡೆಯೊಳಗೆ ಹೊಕ್ಕು ಬಂದವನು. ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ.
ಒಳ್ಳೆಯ ನೌಕರಿ, ಸಂಪಾದನೆ ಇದೆ. ಆದರೂ ಇಂದು ನ್ಯೂಯಾರ್ಕಿನ ಬೀದಿಗಳಲ್ಲಿ ಅರ್ಧ ಗಂಟೆಯಾದರೂ ಗಿಟಾರ್ ನುಡಿಸುತ್ತಾನೆ. ‘ಇಪ್ಪತ್ತು ವರ್ಷಗಳ ಹಿಂದೆ, ಗಿಟಾರ್ ನುಡಿಸುವಾಗ, ಯಾರಾದರೂ ಒಂದು ಡಾಲರ್ ಹೋಗಲಿ, ಹತ್ತು ಪೆನ್ಸ್ ನಾಣ್ಯವನ್ನು ಡಬ್ಬಿಯೊಳಗೆ ಹಾಕುತ್ತಾರಾ ಎಂದು ಕಣ್ಣರಳಿಸಿ ನೋಡುತ್ತಿದ್ದೆ. ಡಬ್ಬಿಯೊಳಗೆ ನಾಣ್ಯಗಳು ಬೀಳಲಾರಂಭಿಸಿದರೆ, ಹುಚ್ಚೆದ್ದು ಗಿಟಾರ್ ನುಡಿಸುತ್ತಾ ಮೈಮರೆಯುತ್ತಿದ್ದೆ. ನಾಣ್ಯಗಳ ಶಬ್ದವೇ ನನ್ನ ಆನಂದವನ್ನು ಹೆಚ್ಚಿಸುತ್ತಿತ್ತು. ಆ ದಿನದ ಹಣವನ್ನೆ ಕೂಡಿಟ್ಟುಕೊಂಡು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನನ್ನ ತಾಯಿಗೆ ಕೊಟ್ಟು ಹೋಗುತ್ತಿದ್ದೆ. ನನ್ನ ತಾಯಿ ಆ ಹಣವನ್ನು ಮುಟ್ಟಿರಲಿಲ್ಲ.
ಸುಮಾರು ಆರು ವರ್ಷ ಆಕೆ ಕ್ಯಾನ್ಸರ್‌ನಿಂದ ಜರ್ಜರಿತಳಾಗಿದ್ದಳು. ಒಂದು ದಿನ ಆಕೆ ಸತ್ತು ಹೋದಳು. ಅವಳ ಹಳೆಯ ಕಪಾಟನ್ನು ತೆರೆದು ನೋಡಿದರೆ, ಸುಮಾರು ಮೂವತ್ತೊಂದು ಸಾವಿರ ಡಾಲರ್ ಹಣವಿತ್ತು. ನಾನು ಕೊಟ್ಟ ಹಣವನ್ನು ಆಕೆ ಖರ್ಚು ಮಾಡದೇ ಹಾಗೆ ನನಗಾಗಿ ಕೂಡಿಟ್ಟಿದ್ದಳು. ನಾನು ಆ ಹಣವನ್ನೆಲ್ಲ
ಸೇರಿಸಿ ಕ್ಯಾನ್ಸರ್ ಸೊಸೈಟಿಗೆ ಕೊಟ್ಟು ಬಂದುಬಿಟ್ಟೆ’ ಎಂದು ಮೊನ್ನೆ ಮಾತಾಡುತ್ತಿದ್ದ. ಇಂದು ಆತ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಸ್ಟ್ರೀಟ್ ಮಾರ್ಕೆಟಿಂಗ್ ವಿಭಾಗದ ಗ್ಲೋಬಲ್ ಮುಖ್ಯಸ್ಥ. ಆತ ಯಾವ ಜಾಗದಲ್ಲಿ ನಿತ್ಯ ಗಿಟಾರ್ ನುಡಿಸುತ್ತಿದ್ದನೋ, ಹತ್ತಿರದ ಇದ್ದ ಸಂಸ್ಥೆಯ ಮಾಲೀಕನೊಬ್ಬ ಆತನ ಗಿಟಾರ್ ವಾದನಕ್ಕೆ, ಕರ್ತವ್ಯನಿಷ್ಠೆಗೆ ಮರುಳಾಗಿ, ತನ್ನ ಕಂಪನಿಯಲ್ಲಿ ಆತನಿಗೊಂದು ನೌಕರಿ ಕೊಟ್ಟ. ಇಂದು ಆತ ಆ ಕಂಪನಿಯಲ್ಲಿ ಬಹು ಎತ್ತರದ ಹುದ್ದೆಯಲ್ಲಿದ್ದಾನೆ. ಆದರೂ ಗಿಟಾರ್ ಹುಚ್ಚು. ಇಂದು ಆತ ಗಿಟಾರ್ ನುಡಿಸುವಾಗ ಕಾಲ ಬುಡದಲ್ಲಿ ನಾಣ್ಯಗಳನ್ನು ಇಡುವ ಡಬ್ಬ ಇಲ್ಲ.
ಯಾರಾದರೂ ಹಣ ನೀಡಲು ಮುಂದೆ ಬಂದರೆ, ಹತ್ತಿರದ ಭಿಕ್ಷುಕರಿಗೆ ನೀಡಿ ಅಂತ ಹೇಳುತ್ತಾನೆ. ನಾನು ಹಣಕ್ಕಾಗಿ ಅದನ್ನು ನುಡಿಸುತ್ತಿಲ್ಲ ಎಂದು ಹೇಳುತ್ತಾನೆ.
ನಿಮ್ಮ ಮನಸಂತೃಪ್ತಿಗೊಳಿಸಲು ಹಾಗೆ ಮಾಡುತ್ತಿರುವುದಾಗಿ ಹೇಳುತ್ತಾನೆ. ಜನರ ಭಾವನೆ, ವರ್ತನೆ, ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾನೆ. ಪ್ರತಿಯೊಬ್ಬರ ನೋಟ, ವರ್ತನೆ ಅವನಲ್ಲಿ ಹೊಸ ಹೊಸ ಪಾಠವನ್ನು ಹೇಳುತ್ತದೆ. ಮನಸೋ ಇಚ್ಛೆ ಗಿಟಾರ್ ನುಡಿಸಿ, ನಂತರ ತನ್ನ ಬೆಂಜ್ ಕಾರನ್ನು ಏರಿ,
ಹೋಗುತ್ತಾನೆ. ಮನೆಯಲ್ಲಿ ಕಿವಿ ಕೇಳದ ಮಡದಿ, ಅವನಿಗಾಗಿ ಕಾಯುತ್ತಾ ಇರುತ್ತಾಳೆ.
ಇಂದು ಚೆನ್ನಾಗಿ ಗಿಟಾರ್ ನುಡಿಸಿದೆಯಾ ಎಂದು ಕೇಳುತ್ತಾಳೆ. ಒಮ್ಮೊಮ್ಮೆ ‘ಇಂದು ನೀನು ಯಾಕೋ ಚೆನ್ನಾಗಿ ಗಿಟಾರ್ ನುಡಿಸಿಲ್ಲ’ ಎಂದು ಹೇಳುತ್ತಾಳೆ. ಅವಳಿಗೆ ಕಿವಿಯಿಲ್ಲದಿದ್ದರೂ, ನನ್ನ ಮನಸ್ಸು, ಮುಖಚಿಹ್ನೆ ನೋಡಿ ಅವಳು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾಳೆ. ಅವಳ ಒಂದು ಪ್ರತಿಕ್ರಿಯೆಗಾಗಿ ನಾನು ಪ್ರತಿದಿನ ಓಡೋಡಿ ಮನೆಗೆ ಬರುತ್ತೇನೆ. ಜೀವನ ಇಷ್ಟೇ. ಇರುವುದರಲ್ಲಿ ಖುಷಿ ಪಡುವುದು. ಇರದಿರುವುದನ್ನು ಮರೆಯುವುದು, ತಲೆಕೆಡಿಸಿಕೊಳ್ಳದಿರುವುದು. ನಿನ್ನೆಗಿಂತ ಹೆಚ್ಚು
ಖುಷಿ ಕಂಡುಕೊಳ್ಳುವುದು. ಆ ಖುಷಿಯನ್ನು ನಾಲ್ಕು ಜನರಿಗೆ ಹಂಚುವುದು, ನಮ್ಮೊಳಗೇ ಮತ್ತಷ್ಟು ಖುಷಿಯನ್ನು ಭರ್ತಿ ಮಾಡಿಕೊಳ್ಳುವುದು ಮತ್ತು ಖಾಲಿ ಮಾಡುವುದು…
ಜೀವನವೆಂದರೆ ಇಷ್ಟೇ. ಆತ ಮಾತು ಮುಗಿಸಿದ ಎಷೋ ಹೊತ್ತಿನವರೆಗೆ, ಎಲ್ಲರೂ ಮೈಕ್ ಸಿಂಬಲ್ಲನ್ನು ಪದೇ ಪದೆ ಒತ್ತುತ್ತಲೇ (ಚಪ್ಪಾಳೆಯ ದ್ಯೋತಕ) ಇದ್ದರು. ನಾನು ಆ ಮಧ್ಯರಾತ್ರಿ ಸರಿದು ಬೆಳಕು ಮೂಡುವ ಮಧ್ಯದಲ್ಲಿ, ಮೂರೂವರೆ ಗಂಟೆಯ ಹೊತ್ತಿನಲ್ಲಿ, ಇಲ್ಲಿ ಸುಮ್ಮನೆ ನನ್ನ ಮೌನವನ್ನು ಕೇಳಿಸಿಕೊಳ್ಳುತ್ತಿದ್ದೆ.
ಮನಸ್ಸಿನಲ್ಲಿಯೇ ಕ್ಲಬ್ ಹೌಸಿಗೆ ಧನ್ಯವಾದ ಸಲ್ಲಿಸಿದೆ. ಆದರೆ ಕಣ್ಣೊಳಗೆ ನಿದ್ದೆ ಇಳಿಯಲಿಲ್ಲ. ಇಂಥ ಅವೆಷ್ಟೋ ಜನ, ಕ್ಲಬ್ ಹೌಸಿಗೆ ಬರುತ್ತಿದ್ದಾರೆ.
ಪ್ರತಿಯೊಬ್ಬರ ಎದೆಗೂಡಿನೊಳಗೂ ಸಂಕಟಗಳಿವೆ, ಉತ್ಸಾಹಗಳಿವೆ, ಕಥೆಗಳಿವೆ, ಸಂತಸಗಳಿವೆ. ಕೇಳಿಸಿಕೊಳ್ಳುವ ಕಿವಿಗಳೂ ಇವೆ. ಈ ಎಲ್ಲಾ ಭಾವಬಿಂದುಗಳು ನಮ್ಮ ಮನಸ್ಸನ್ನು ಇನ್ನಷ್ಟು ಹದಗೊಳಿಸುವುದರಲ್ಲಿ, ಶ್ರೀಮಂತಗೊಳಿಸುವುದರಲ್ಲಿ , ಮತ್ತಷ್ಟು ಮಾನವಂತರನಾಗಿ ಮಾಡುವುದರಲ್ಲಿ ಸಂದೇಹವೇ ಇಲ್ಲ. ಈ ನವಮಾಧ್ಯಮವನ್ನು ಪ್ರೀತಿಯಿಂದ ಪೊರೆಯಬೇಕಿದೆ. ಅಷ್ಟೇ. ನಾನು ಪದೇ ಪದೆ ಕ್ಲಬ್ ಹೌಸ್ ಬಗ್ಗೆ ಯಾಕೆ ಬರೆಯುತ್ತಿದ್ದೇನೆ ಅಂದರೆ, ಅದರ ದತ್ತಫಲ ನಿಮಗೂ ಸಿಗಲಿ ಎಂಬ ಆಶಯದಿಂದ. ನೀವೂ ಕ್ಲಬ್ ಹೌಸಿಗೆ ಬನ್ನಿ.
ಸುಧಮ್ಮನ ಕ್ಲಬ್ ಹೌಸ್
ವಿಶ್ವವಾಣಿ ಕ್ಲಬ್‌ನಲ್ಲಿ ಸುಧಾಮೂರ್ತಿಯವರ ಕ್ಲಬ್ ಹೌಸ್ ಸಂವಾದ ಕೇಳಿ ಅಮೆರಿಕದಿಂದ ಬೆಂಕಿ ಬಸಣ್ಣ ಬರೆದಿದ್ದಾರೆ. ಇಂದು ಶನಿವಾರ ಬೆಳಿಗ್ಗೆ 7:30 ಗಂಟೆಗೆ ಎದ್ದಕೂಡಲೇ ನನ್ನ ಫೋನಿನಲ್ಲಿ ವಿಶ್ವವಾಣಿಯ ವಿಶ್ವೇಶ್ವರಭಟ್ ನಡೆಸಿಕೊಡುತ್ತಿರುವ ಸುಧಾ ಮೂರ್ತಿಯವರ ಜೊತೆಗಿನ ಸಂವಾದ ಕ್ಲಬ್ ಹೌಸ್ ಪ್ರಾರಂಭ ವಾಯಿತು. ಅವರ ಮಾತನ್ನೇ ಕೇಳುತ್ತಾ ಹಲ್ಲುಜ್ಜಿ, ಮುಖ ತೊಳೆದು ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿ ನನ್ನ ಮಗ ಅವನೀಶ್‌ನನ್ನು ಕರೆದುಕೊಂಡು ನಿಸ್ಕಯೂನ ಹೈಸ್ಕೂಲಿನ ಟೆನಿಸ್ ಕೋರ್ಟ್‌ಗೆ ಹೋದೆವು.
ಅಲ್ಲಿ ಆಗಲೇ ಉಕ್ರೇನ್ ದೇಶದಿಂದ ವಲಸೆ ಬಂದಿರುವ ಡಿಮಿತ್ರಿ ಮತ್ತು ಅವನ ಮಗ ಜೇರೆಮಿ ನಮಗಾಗಿ ಕಾಯುತ್ತಿದ್ದರು. ಅಂದ ಹಾಗೆ ಡಿಮಿತ್ರಿ ಇಲ್ಲಿಯ ಸಿಯನ್ನಾ ಕಾಲೇಜ್‌ನಲ್ಲಿ ಸೈಕಾಲಜಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾನೆ. ಅವನೀಶ್ ಜೇರೆಮಿಗೆ ಟೆನಿಸ್ ಆಟದ ತರಬೇತಿ ಕೊಡುತ್ತಾನೆ. ಅದೇ ವೇಳೆ
ನಾನು ಮತ್ತು ಡಿಮಿತ್ರಿ ಟೆನ್ನಿಸ್ ಆಡುತ್ತೇವೆ. ಆದರೆ ನನಗೆ ಸುಧಾ ಅಮ್ಮನವರ ಮಾತನ್ನು ಬಿಟ್ಟು ಬರಲು ಮನಸಾಗಲಿಲ್ಲ. ಅವರ ಮಾತನ್ನು ಬಹಳಷ್ಟು ಸಲ ಕೇಳಿದ್ದೇನೆ. ಅವರ ಅನೇಕ ಪುಸ್ತಕಗಳನ್ನು ಓದಿದ್ದೇನೆ. ಅವರು ಮಾತನಾಡುವ ವಿಷಯದ ಬಗ್ಗೆ ಗೊತ್ತಿದೆ. ಹೊಸದೇನೂ ಇಲ್ಲ. ಆದರೂ ಸಹ ಅವರ ಮಾತನ್ನು ಎಷ್ಟು ಸಲ ಕೇಳಿದರೂ ಸಹ ಇನ್ನೂ ಕೇಳಬೇಕೆಂಬ ಆಸೆ. ಕಾರಣ ಅವರು ಅನುಭವದ ಮಾತುಗಳು ತುಂಬಾ ಪ್ರಾಮಾಣಿಕ, ಸರಳ, ನೇರ, ಮತ್ತು ಅವರ ಹೃದಯದಿಂದ ನೇರವಾಗಿ ಬರುತ್ತವೆ. ನೀನು ಇಷ್ಟೊಂದು ಏಕಾಗ್ರತೆಯಿಂದ ಕೇಳುತ್ತಿರುವ ಭಾಷಣಕಾರರು ಯಾರು? ಎಂದು ಡಿಮಿತ್ರಿ ಅಚ್ಚರಿಯಿಂದ ನನ್ನನ್ನು ಕೇಳಿದ. ಸುಧಾಮೂರ್ತಿ ಎಂದು ಉತ್ತರಿಸಿದೆ. ಹೌದಾ. ಯಾರವರು? ಅವರ ಬಗ್ಗೆ ನಾನು ಕೇಳಿಯೇ ಇಲ್ಲ ಎಂದನು.
ಅವನಿಗೆ ಸುಧಾಮೂರ್ತಿ, ಇನೋಸಿಸ್ ಸಂಸ್ಥೆ ಮತ್ತು ನಾರಾಯಣ ಮೂರ್ತಿ ಅವರ ಬಗ್ಗೆ ತುಂಬಾ ಅಭಿಮಾನದಿಂದ ಸಂಕ್ತಿಪ್ತವಾಗಿ ವಿವರಿಸಿದೆ. ಅವನು ಸಹ ಬಹಳ ಆಸಕ್ತಿಯಿಂದ ಕೇಳಿದ. ಕ್ಲಬ್ ಹೌಸ್ ನಿಂದ ಬರುತ್ತಿದ್ದ ಸುಧಾಮ್ಮನವರ ಕನ್ನಡ ಸವಿ ಮಾತುಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿ ಹೇಳುತ್ತಾ
ಬಂದೆ. ಅವನು ಕುತೂಹಲದಿಂದ ಕೇಳುತ್ತಲೇ ಬಂದ. ಈಗ ಅವನೂ ಸಹ ಸುಧಾಮೂರ್ತಿಯವರ ಬಹುದೊಡ್ಡ ಅಭಿಮಾನಿಯಾಗಿದ್ದಾನೆ. ಅವರ ಬಗ್ಗೆ ಇಂಟರ್ನೆಟ್‌ನಲ್ಲಿ ಓದುತ್ತಿದ್ದಾನೆ.
ಎರಡು ಪ್ರಸಂಗ, ಎರಡು ಪ್ರತಿಕ್ರಿಯೆ
ಇಲ್ಲಿ ಎರಡು ಪ್ರಸಂಗಗಳಿವೆ. ಅದರ ಕಥಾನಾಯಕ ಒಬ್ಬನೇ. ಎರಡೂ ಪ್ರಸಂಗಗಳಲ್ಲಿ ಕಥಾನಾಯಕ ತಪ್ಪು ಮಾಡುತ್ತಾನೆ. ಆದರೆ ಜನ ಅವನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಗಮನಿಸಿ. ಪ್ರಾಯಶಃ ಜಾಗದ ಮಹಿಮೆ ಕೂಡ ಜನರ ಪ್ರತಿಕ್ರಿಯೆ ಭಿನ್ನವಾಗಿರಲು ಕಾರಣವಾಗಿರುವುದು ಗಮನಾರ್ಹ.
ಚರ್ಚಿನಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಹತ್ತಿ (ಅರಳೆ) ಬಿದ್ದರೂ ಕೇಳಿಸುವಷ್ಟು ದಿವ್ಯ ಮೌನ ಎಡೆ ಹರಡಿತ್ತು. ಅಷ್ಟೊತ್ತಿಗೆ ಯಾರದ್ದೇ ಮೊಬೈಲ್ ಫೋನ್ ಕಿರುಚಿ ಕೊಳ್ಳತೊಡಗಿತು. ಆ ಮೊಬೈಲ್ ಫೋನ್ ಹಿಡಿದವನನ್ನು ಎಲ್ಲರೂ ದುರುಗುಟ್ಟಿ ನೋಡಲಾರಂಭಿಸಿದರು.
ಧರ್ಮಗುರು ಬಂದು ಅವನಿಗೆ ಬಾಯಿಗೆ ಬಂದಂತೆ ಬೈದ. ‘ನಿನ್ನಂಥ ನಾಲಾಯಕ್ ಯಾರೂ ಇಲ್ಲ. ಪ್ರಾರ್ಥನೆ ಮಾಡಲು ಬರುವಾಗ ಮೊಬೈಲನ್ನು ಸೈಲಂಟ್
ಮೋಡ್ ನಲ್ಲಿಟ್ಟಿರಬೇಕು ಎಂಬ ಕಾಮನ್ ಸೆನ್ಸ್ ಇಲ್ಲವಾ?’ ಎಂದು ತರಾಟೆಗೆ ತೆಗೆದುಕೊಂಡ. ಪ್ರಾರ್ಥನೆಯಲ್ಲಿ ಭಾಗವಹಿಸಿದವರೆಲ್ಲ ಅವನನ್ನು ಕ್ಯಾಕರಿಸಿ ನೋಡಿ
ಹೋಗುತ್ತಿದ್ದರು. ಮನೆಗೆ ಹೋಗಬೇಕೆಂದು ಕಾರು ಹತ್ತಿದ. ಅಷ್ಟೊತ್ತಿಗೆ ಹೆಂಡತಿಯೂ ಗರಂ ಆಗಿದ್ದಳು. ಅವಳೂ ಸಹ ಅವನಿಗೆ ವಾಚಾಮಗೋಚರ ಬೈಯಲಾ ರಂಭಿಸಿದಳು.
‘ಪ್ರಾರ್ಥನೆಯಲ್ಲಿರುವಾಗ ಮೊಬೈಲನ್ನು ಸ್ವಿಚಾಫ್ ಮಾಡಬೇಕು ಎಂಬ ತಿಳಿವಳಿಕೆ ಇಲ್ಲವೇನ್ರಿ? ನಿಮ್ಮಿಂದಾಗಿ ಎಲ್ಲರ ಮುಂದೆ ನಮ್ಮ ಮಾನ-ಮರ್ಯಾದೆ ಹರಾಜಾಯ್ತು. ನನಗೂ ತಲೆ ಎತ್ತದಂತೆ ಮಾಡಿಬಿಟ್ರಿ. ನಿಮ್ಮಿಂದಾಗಿ ಎಷ್ಟು ಅವಮಾನವಾಯ್ತು ಗೊತ್ತಾ? ನಿಮ್ಮ ಯಜಮಾನರಿಗೆ ಬುದ್ದಿ ಇಲ್ಲವಾ ಎಂದು ನನ್ನ
ಸ್ನೇಹಿತೆಯರು ಕೇಳಿದರು. ನನಗೆ ತುಂಬಾ ಅಪಮಾನವಾಯ್ತು. ನಾನಂತೂ ಎಂದೆಂದಿಗೂ ನಿಮ್ಮ ಜತೆ ಬರೊಲ್ಲ’ ಎಂದು ಹೆಂಡತಿಯೂ ಅವನಿಗೆ ಯಕ್ಕಾಮಾರಾ ಬೈದಳು.
ಆತ ಮನೆ ತಲುಪುವವರೆಗೂ ಒಂದೇ ಒಂದು ಮಾತನ್ನು ಆಡಲಿಲ್ಲ. ಆತ ಅಪಮಾನದಿಂದ ಕುಗ್ಗಿ ಹೋಗಿದ್ದ. ಆತನಿಗೆ ತನ್ನ ತಪ್ಪಿನ ತೀವ್ರತೆಯ ಅರಿವಾಗಿತ್ತು. ಇನ್ನು ಜೀವನದಲ್ಲಿ ಚರ್ಚ್‌ಗೆ ಹೋಗಬಾರದು ಎಂದು ಆತ ನಿರ್ಧರಿಸಿದ! ಆ ದಿನವೆ ಅವನ ಮನಸ್ಸಿನಲ್ಲಿ ಅದೇ ಯೋಚನೆ ಕೊರೆಯುತ್ತಿತ್ತು. ಅದೇ ದಿನ ಸಾಯಂಕಾಲ ಆತ ಬಾರ್‌ಗೆ ಹೋದ. ಎರಡು ಪೆಗ್ ಗಟಗಟ ಏರಿಸಿದ. ಮೂರನೇ ಪೆಗ್‌ಗೆ ಆರ್ಡರ್ ಮಾಡಿದ. ಅಷ್ಟರೊಳಗೆ ಆತ ವ್ಯಾಕ್ ಅಂತ ವಾಂತಿ ಮಾಡಿಬಿಟ್ಟ. ಎಲ್ಲರೂ ಅವನತ್ತ ನೋಡಿದರು. ತಕ್ಷಣ ವೇಟರ್ ಓಡಿ ಬಂದು, ನ್ಯಾಪ್ಕಿನ್ ತಂದು ಒರೆಸಿದ.
ಮತ್ತೊಬ್ಬ ಬಂದು ಆತನ ವಾಂತಿಯನ್ನು ಬಳಿದು ಸ್ವಚ್ಛ ಮಾಡಿದ. ಬಾರ್ ಮ್ಯಾನೇಜರ್ ಬಂದು, ಆತನ ಆರೋಗ್ಯ ವಿಚಾರಿಸಿದ. (ಲೇಡಿ) ವೇಟ್ರೆಸ್ ಬಂದು, ಆತನಿಗೆ ಒಂದು ಕಾಂಪ್ಲಿಮೆಂಟರಿ ಪೆಗ್ ಕೊಟ್ಟಳು. ಸುತ್ತಲಿನ ಟೇಬಲ್ಲಿನಲ್ಲಿ ಕುಳಿತವರು, ‘ಬ್ರದರ್, ಓಕೆನಾ? ಒಮ್ಮೊಮ್ಮೆ ಹೀಗೆ ಆಗುತ್ತದೆ. ಜಾಸ್ತಿ ಕುಡಿಯಬೇಡ’
ಎಂದರು. ಮತ್ತೊಬ್ಬ ಬಂದು, ‘ಸಾರ್, ಎಲ್ಲ ಸರಿ ಇದೆ ತಾನೇ?’ ಎಂದು ಕೇಳಿ ವಿಚಾರಿಸಿದ.
ಆತನಿಗೆ ಬಹಳ ಸಂತಸ, ಸಮಾಧಾನವಾಯಿತು. ಚರ್ಚ್‌ನಲ್ಲಿ ನನಗೆ ಒಬ್ಬರೇ ಒಬ್ಬರು ಬಂದು ಒಂದು ಸಾಂತ್ವನ ಹೇಳಲಿಲ್ಲ, ಅದೇ ಬಾರ್‌ನಲ್ಲಿ, ಎಲ್ಲರೂ ಬಂದು ವಿಚಾರಿಸಿಕೊಂಡು ಹೋದರು. ಚರ್ಚ್‌ಗೆ ಹೋಗಬೇಕಾದ ದಿನ, ಆತ ಅಲ್ಲಿಗೆ ಹೋಗುವುದನ್ನು ಬಿಟ್ಟು, ಬಾರ್‌ಗೆ ಹೋಗಲಾರಂಭಿಸಿದ. ಮ್ಯಾನೇಜಮೆಂಟ್ ಕ್ಲಾಸಿನಲ್ಲಿ ಈ ಕತೆಯನ್ನು ವಿಶ್ಲೇಷಿಸಿ ಅದರ ನೀತಿಯೇನು ಎಂಬುದನ್ನು ಹೀಗೆ ವಿವರಿಸುತ್ತಾರೆ – ‘ಜನರು ತಪ್ಪು ಮಾಡುವುದು ಸಹಜ. ಆ ಸಂದರ್ಭದಲ್ಲಿ ನೀವು ಅವರನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಅವರಲ್ಲಿ ಬದಲಾವಣೆಯನ್ನು ತರಬಹುದು.’
ಗ್ರಾಹಕ ಸೇವೆ ಕುರಿತು..
ಅಮೆರಿಕಕ್ಕೆ ಹೋದಾಗ ಬಾರ್ನ್ಸ್ ಅಂಡ್ ನೊಬಲ್ಸ್ ಪುಸ್ತಕದ ಅಂಗಡಿಯಲ್ಲಿ ಒಂದು ದಿನ ಕಳೆಯುವುದು ಪ್ರವಾಸದ ಭಾಗವೇ ಆಗಿರುತ್ತಿತ್ತು. ಇಡೀ ದಿನ ಕಳೆದು, ಬರುವಾಗ ಪುಸ್ತಕ ಖರೀದಿಸಿಕೊಂಡು ಬರುವುದು ಅಭ್ಯಾಸ. ಒಂದು ವೇಳೆ ಇಡೀ ದಿನ ಅಲ್ಲಿ ಕುಳಿತು ಪುಸ್ತಕ ಓದಿ, ಹಾಗೇ ಎದ್ದು ಬಂದರೂ ಯಾರೂ ಕೇಳುತ್ತಿರ ಲಿಲ್ಲ. ನೀವು ಪುಸ್ತಕ ಖರೀದಿಸುವುದಕ್ಕಿಂತ ನಿಮ್ಮ ಸಂತೃಪ್ತಿಯೇ ಮುಖ್ಯ. ನೀವು ಸಂಪ್ರೀತರಾಗಿ ಪುಸ್ತಕ ಖರೀದಿಸುತ್ತೀರಿ ಎಂಬುದು ಅವರ ವ್ಯಾಪಾರಿ ಸಿದ್ಧಾಂತ.
ಪುಸ್ತಕ ಖರೀದಿಸಿದ ನಂತರವೂ ಅದು ಇಷ್ಟವಾಗದಿದ್ದರೆ, ನಿಶ್ಚಿತ ದಿನಗಳೊಳಗೆ ಅದನ್ನು ವಾಪಸ್ ಮಾಡಬಹುದಿತ್ತು. ಇಂಥ ವ್ಯಾಪಾರವನ್ನು ಭಾರತದಲ್ಲಿ ಮಾಡಲು ಸಾಧ್ಯವೇ ಇಲ್ಲ. ಇಡೀ ದಿನ ಪುಸ್ತಕದ ಅಂಗಡಿಯಲ್ಲಿ ಕಳೆದು ಹಾಗೇ ಎದ್ದು ಬರುವವರೇ ಹೆಚ್ಚು. ಖರೀದಿಸಿದ ಪುಸ್ತಕವನ್ನು ವಾಪಸ್ ಪಡೆಯುವ ಸೌಲಭ್ಯ ಇದ್ದರೆ, ಎರಡು ದಿನಗಳಲ್ಲಿ ಓದಿ, ಈ ಪುಸ್ತಕ ಚೆನ್ನಾಗಿಲ್ಲ ಎಂದು ವಾಪಸ್ ಮಾಡುವವರಿಗೇನೂ ಕಮ್ಮಿಯಿಲ್ಲ. ಹೀಗಾಗಿ ನಮ್ಮಲ್ಲಿ ಯಾವ ಪುಸ್ತಕ ವ್ಯಾಪಾರಿಯೂ
ಇಂಥ ಸಾಹಸಕ್ಕೆ ಮುಂದಾಗಲಾರ. ಅಮೆರಿಕದಲ್ಲಿ ಗ್ರಾಹಕ ಸೇವೆ (Customer Service)ಗೆ ಕೊಡುವ ಮಹತ್ವ ವಿಶೇಷವಾದುದು. ನಮ್ಮಲ್ಲಿ ಇತ್ತಿತ್ತಲಾಗಿ ಗ್ರಾಹಕರ ಸೇವೆಯ ಮಹತ್ವ ಅರಿವಿಗೆ ಬಂದಿರುವುದು ಸಮಾಧಾನಕರ ಸಂಗತಿ. ಆದರೂ ಬಹುತೇಕ ಸಂದರ್ಭಗಳಲ್ಲಿ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ, ಯಾರೂ ಎತ್ತುವುದೇ ಇಲ್ಲ. ಅಂದರೆ ಕಸ್ಟಮರ್‌ಗೆ ಡೋಂಟ್ ಕೇರ್ !
ಯೋಗಿ ದುರ್ಲಭಜೀ ಅವರು ಗ್ರಾಹಕರ ಸೇವೆ ಕುರಿತು ಹೇಳಿದ ಕೆಲವು ಮಾತುಗಳನ್ನು ನೆನಪಿಸಿಕೊಳ್ಳುತ್ತೇನೆ. ಕಸ್ಟಮರ್ ಸರ್ವಿಸ್ ಎನ್ನುವುದು ಪ್ರತ್ಯೇಕ ವಿಭಾಗವಲ್ಲ. ಅದು ವ್ಯಾಪಾರದ ಸಿದ್ಧಾಂತ. ಮಾರಾಟ ಅಥವಾ ವ್ಯಾಪಾರ ಆದ ನಂತರವೂ ಗ್ರಾಹಕರ ಹಿತದ ಬಗ್ಗೆ ಯೋಚಿಸುವುದೇ ಗ್ರಾಹಕರ ಸೇವೆ. ಯಾರು ಇದನ್ನು ಶ್ರದ್ಧೆಯಿಂದ ಮಾಡುತ್ತಾರೋ, ಅವರು ಎಂಥ ವ್ಯವಹಾರದಲ್ಲೂ ಯಶಸ್ವಿ ಆಗಬಲ್ಲರು.
ನಿಮಗಿಂತ ಗ್ರಾಹಕರಿಗೆ ನಿಮ್ಮ ಪ್ರಾಡಕ್ಟ್ ಬಗ್ಗೆ ಗೊತ್ತಿರುತ್ತದೆ ಎಂಬುದನ್ನು ಮರೆಯಬಾರದು. ನೀವು ಹೇಳಿದ್ದೆಲ್ಲವನ್ನೂ ಗ್ರಾಹಕರು ನಂಬುವುದಿಲ್ಲ. ನಿಮ್ಮನ್ನು ಪರೀಕ್ಷಿಸದೇ ನಿಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ಇಂಟರ್ನೆಟ್ ಕಸ್ಟಮರ್ ಸೇವೆಯಲ್ಲಿ ನಿಮ್ಮ ಪ್ರತಿಸ್ಪರ್ಧಿ ನಿಮಗಿಂತ ಒಂದು ಮೌಸ್ ಕ್ಲಿಕ್ ಸನಿಹದಲ್ಲಿ (ದೂರ?) ಇದ್ದಾನೆ ಎಂಬುದನ್ನು ಮರೆಯಬೇಡಿ. ಒಮ್ಮೆ ಗ್ರಾಹಕನನ್ನು ಕಳೆದುಕೊಂಡರೆ ಮತ್ತೊಮ್ಮೆ ಗಳಿಸುವುದು ಕಷ್ಟ.