Wednesday, 11th December 2024

ಬಡವರಿಗೆ ಹೆಂಡ ಕುಡಿಸಲು ಹೊರಟಿದ್ದ ಆಪ್‌ !

ವೀಕೆಂಡ್ ವಿತ್‌ ಮೋಹನ್

camohanbn@gmail.com

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ನಿರ್ಮೂಲನಾ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡು ಹೋರಾಟವನ್ನೇ ರಾಜಕೀಯಕ್ಕೆ ಬಳಸಿ ಕೊಂಡು ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಅರವಿಂದ್ ಕೇಜ್ರಿವಾಲ ನೇತೃತ್ವದ ಆಮ್ ಆದ್ಮಿ ಪಕ್ಷ ಕೇವಲ ಹತ್ತು ವರ್ಷಗಳಲ್ಲಿ ಹಲವು ಪ್ರಕರಣಗಳ ಸುಳಿಯಲ್ಲಿ ಸಿಲುಕಿಕೊಂಡಿದೆ.

ಹೋರಾಟದ ಸಂದರ್ಭದಲ್ಲಿ ತಾನು ರಾಜಕೀಯಕ್ಕೆ ಧುಮುಕುವುದಿಲ್ಲವೆಂದು ಹೇಳಿದ್ದ ಕೇಜ್ರಿವಾಲ್ ಅದನ್ನೇ ಅಸ್ತ್ರ ಮಾಡಿಕೊಂಡು ರಾಜಕೀಯ ಪಕ್ಷ ಸ್ಥಾಪಿಸಿ ದೆಹಲಿಯ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ನೇತೃತ್ವದ ಶೀಲಾ ದೀಕ್ಷಿತ್ ಸರಕಾರವನ್ನು ಟೀಕಿಸುತ್ತ ತಾನು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರಕಾರದ ಹಗರಣಗಳನ್ನು ಬಯಲಿ ಗೆಳೆಯುವುದಾಗಿ ಹೇಳಿದ್ದ ಕೇಜ್ರಿವಾಲ, ಆನಂತರ ಅದನ್ನು ಮರೆತೇಬಿಟ್ಟರು. ಮಾತ್ರವಲ್ಲ ಇದೀಗ ತನ್ನದೇ ಪಕ್ಷದ ಹಲವು ಶಾಸಕರು ಹಾಗೂ ಮಂತ್ರಿಗಳು ಹಲವು ಪ್ರಕರಣಗಳಲ್ಲಿ ಸಿಲುಕಿರುವಾಗಲೂ ಸಮರ್ಥಿಸಿಕೊಳ್ಳುತ್ತಿದ್ದಾರೆ.

ದೆಹಲಿಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತೇನೆಂದು ಹೇಳಿ ಬೆರಳೆಣಿಕೆಯಷ್ಟು ಸರಕಾರೀ ಶಾಲೆಗಳನ್ನು ಅಭಿವೃದ್ಧಿಪಡಿಸಿ ಬಾಹ್ಯ ಪ್ರಪಂಚಕ್ಕೆ ದೊಡ್ಡದೊಂದು ಕ್ರಾಂತಿ ಮಾಡಿರುವುದಾಗಿ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಆರೋಗ್ಯದ ವಿಷಯದಲ್ಲಿ ದೆಹಲಿಯಲ್ಲಿ ಶುರು ವಾದಂತಹ ಹಲವು ‘ಮೊಹ ಕ್ಲಿನಿಕ್’ಗಳು ಮೂಲಭೂತ ಸೌಲಭ್ಯಗಳಿಲ್ಲದೆ ಪುಂಡ ಪೋಕರಿಗಳ ಅಡ್ಡೆಯಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ರಾಷ್ಟ್ರ ರಾಜಧಾನಿ ದೆಹಲಿಯ ಆರ್ಥಿಕತೆಯನ್ನು ನಿಭಾಯಿಸುವುದು ಕಷ್ಟದ ಕೆಲಸವಲ್ಲ, ಕೇಂದ್ರ ಸರಕಾರದ ವಿಶೇಷ ಸವಲತ್ತುಗಳು ದೆಹಲಿಗೆ ಸಿಗುತ್ತವೆ. ದೆಹಲಿಯ ಪೊಲೀಸ್ ಇಲಾಖೆಯ ಸಂಪೂರ್ಣ ಖರ್ಚಿನ ಜವಾಬ್ದಾರಿ ಕೇಂದ್ರ ಗೃಹ ಇಲಾಖೆಯ ಅಡಿಯಲ್ಲಿದೆ. ನೌಕರರ ನಿವೃತ್ತಿ ವೇತನದ ಖರ್ಚನ್ನು ಕೇಂದ್ರ ಸರಕಾರವೇ ನೋಡಿಕೊಳ್ಳುತ್ತದೆ. ದೆಹಲಿ ರಾಷ್ಟ್ರ ರಾಜಧಾನಿ ಯಾಗಿರುವುದರಿಂದ ಆರ್ಥಿಕ ಚಟುವಟಿಕೆಗಳು ಜೋರಾಗಿರುತ್ತದೆ. ಹಾಗಾಗಿ ದೆಹಲಿ ಸರಕಾರಕ್ಕೆ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತದೆ. ಇತರ ರಾಜ್ಯಗಳಂತೆ ದೆಹಲಿಯಲ್ಲಿ ರೈತರ ಸಮಸ್ಯೆಯಿಲ್ಲ, ನೀರಾವರಿ ಸಮಸ್ಯೆಯಿಲ್ಲ, ಹಳ್ಳಿಗಳ ಸಮಸ್ಯೆಯಿಲ್ಲ.

ಇಂತಹ ವಾತಾವರಣದಲ್ಲಿಯೂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ಸಾಲ ಮಾಡಿ ಆಡಳಿತ ನಡೆಸುತ್ತಿದೆ. ಉಚಿತ ಯೋಜನೆಗಳ ಸರದಾರ ಎನಿಸಿಕೊಂಡಿರುವ ಆಮ್ ಆದ್ಮಿ ಪಕ್ಷ, ಆರ್ಥಿಕ ಶಿಸ್ತನ್ನು ಮರೆತು ಆಡಳಿತ ನಡೆಸುತ್ತಿದೆ. ಸಾಲದ ಹಣ, ಕೇಂದ್ರದ ಸಹಾಯ ಮತ್ತು ಅನುದಾನಗಳಿಂದ ತನ್ನ ವರ್ಷದ ಆಯವ್ಯವದಲ್ಲಿ ‘ಹೆಚ್ಚುವರಿ ಆದಾಯ’ ತೋರಿಸಿ ದೊಡ್ಡ ಮಟ್ಟದ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಆರ್ಥಿಕ ಶಿಸ್ತು ತೋರದೆ ಆಡಳಿತ ನಡೆಸುತ್ತಿರುವ ಆಪ್‌ನ ನಾಯಕರು ಜೈಲು ಪಾಲಾಗಿದ್ದಾರೆ. ಮಂತ್ರಿಯಾಗಿದ್ದ ಸತ್ಯೇಂದ್ರ ಜೈನ್ ಮನೆಯಲ್ಲಿ ಸಿಕ್ಕ ಕೋಟಿಗಟ್ಟಲೆ ಹಣಕ್ಕೆ ಇಂದಿಗೂ ಲೆಕ್ಕ ಸಿಕ್ಕಿಲ್ಲ.

ಸೆಪ್ಟೆಂಬರ್ ೨೦೧೬ ಹೊತ್ತಿಗೆ ಕೇಂದ್ರ ಸರಕಾರ ಆದಾಯ ತೆರಿಗೆ ಪಾವತಿದಾರರಿಗೆ ಒಂದು ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆಯಡಿಯಲ್ಲಿ ದೊಡ್ಡ ಮೊತ್ತದ ಆದಾಯ ಘೋಷಿಸಿ ತೆರಿಗೆ ಪಾವತಿಸಿದ್ದ ಸತ್ಯೇಂದ್ರ ಜೈನ್, ಇದರ ಹಿಂದಿನ ನಾಲ್ಕು ವರ್ಷಗಳ ಆದಾಯ ತೆರಿಗೆಯಲ್ಲಿ ತನ್ನ ವ್ಯವಹಾರ ದಲ್ಲಿ ನಷ್ಟವಾಗಿದೆಯೆಂದು ಘೋಷಿಸಿಕೊಂಡಿದ್ದನೆಂದು ಹೇಳಲಾಗುತ್ತದೆ. ನಷ್ಟವೆಂದು ಹೇಳಿಕೊಂಡಿದ್ದವನು ಕೋಟಿಗಟ್ಟಲೆ ಹಣವನ್ನು ವಿಶೇಷ ಯೋಜನೆಯಲ್ಲಿ ಘೋಷಿಸಿಕೊಂಡಿದ್ದನೆಂದರೆ ಯಾವ ಮಟ್ಟದ ಭ್ರಷ್ಟಾಚಾರವಾಗಿರಬೇಕೆಂದು ವಿಶೇಷವಾಗಿ ಹೇಳಬೇಕಿಲ್ಲ.

ಇನ್ನು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ. ೨೦೨೧ರಲ್ಲಿ ದೆಹಲಿಯಲ್ಲಿ ‘ನೂತನ ಮದ್ಯ ನೀತಿ’ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದರು. ಈ ಮದ್ಯ ನೀತಿಯ ಪ್ರಕಾರ ದೆಹಲಿಯಲ್ಲಿನ ಮದ್ಯದಂಗಡಿಗಳ ಮೇಲಿನ ಹಿಡಿತ ಸರಕಾರದ ಕೈತಪ್ಪುತ್ತಿತ್ತು. ದೆಹಲಿಯಲ್ಲಿನ 894 ಮದ್ಯದಂಗಡಿಗಳನ್ನು ೩೨ ವಿಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ವಿಭಾಗದಡಿಯಲ್ಲಿ ೨೭ ಮದ್ಯದಂಗಡಿಯನ್ನು ತರಲಾಯಿತು. ಮದ್ಯದಂಗಡಿಯ ಸಂಪೂರ್ಣ ಹಿಡಿತ
ಆಯಾ ವಿಭಾಗಗಳ ಅಡಿಯಲ್ಲಿರುವಂತೆ ಮಾಡಲಾಗಿತ್ತು. ಇದರಿಂದಾಗಿ ದೆಹಲಿಯ ಸರಕಾರ ಮದ್ಯ ಮಾರಾಟದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಳ್ಳುವಂತಾಗುತ್ತಿತ್ತು.

ಆಯಾ ವಿಭಾಗದಡಿಯಲ್ಲಿರುವ ಅಂಗಡಿಗಳಿಗೆ ಮದ್ಯದ ದರದ ಮೇಲೆ ತಮಗಿಷ್ಟಬಂದಷ್ಟು ರಿಯಾಯಿತಿ ನೀಡುವ ಹಕ್ಕನ್ನು ನೀಡಲಾಗಿತ್ತು. ಇದರಿಂದ ಮದ್ಯದ ಮಾರಾಟ ಹೆಚ್ಚಾಗುತ್ತಿತ್ತು. ವಿಪರ್ಯಾಸ ನೋಡಿ ಅಣ್ಣ ಹಜಾರೆಯವರ ಚಳವಳಿಯ ಮೂಲಕ ಬಂದಂತಹ ರಾಜಕೀಯ ಪಕ್ಷದಿಂದ ಮದ್ಯ ಮಾರಾಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನೀತಿಯನ್ನು ಜಾರಿತರಲು ಅರವಿಂದ್ ಕೇಜ್ರಿವಾಲ್ ಸರಕಾರ ತುದಿಗಾಲಿನಲ್ಲಿ ನಿಂತಿತ್ತು. ಅಷ್ಟೇ ಅಲ್ಲದೆ ಮದ್ಯದಂಗಡಿಗಳನ್ನು ಬೆಳಗಿನ ಜಾವ ಮೂರು ಗಂಟೆಯವರೆಗೂ ತೆರೆಯುವ ಅವಕಾಶ ನೀಡುವ ಯೋಜನೆ ನೂತನ ಮದ್ಯ ನೀತಿಯಲ್ಲಿತ್ತು.

ಒಂದೆಡೆ ಮಕ್ಕಳಿಗೆ ಶಿಕ್ಷಣ ನೀಡುತ್ತೇವೆಂದು ಹೇಳಿ, ಮತ್ತೊಂದೆಡೆ ಅದೇ ಮಕ್ಕಳು ವಯಸ್ಸಿಗೆ ಬಂದಮೇಲೆ ಮದ್ಯಪಾನ ಮಾಡಲು ಉತ್ತೇಜಿಸುವ ಯೋಜನೆ ಇದಾಗಿತ್ತು. ಬಡವರ ಪರವೆಂದು ಹೇಳಿಕೊಂಡು ಮದ್ಯದ ಮೇಲೆ ರಿಯಾಯಿತಿ ನೀಡಲು ಅನುಮತಿ ನೀಡುವ ಯೋಜನೆಯನ್ನು ಜಾರಿಗೆ ತಂದು ಸಾವಿರಾರು ಬಡ ಕುಟುಂಬದ ಪುರುಷರನ್ನು ಮದ್ಯದ ಅಮಲಿನಲ್ಲಿ ತೇಲಿಸಿ ಅವರ ಕುಟುಂಬವನ್ನು ಬೀದಿಗೆ ತರುವ ಯೋಜನೆ ಇದಾಗಿತ್ತು. ಬೆಳಗಿನಜಾವದವರೆಗೂ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದರೆ ದೆಹಲಿಯಲ್ಲಿ ಕ್ರಿಮಿನಲ ಕೃತ್ಯಗಳು ಮತ್ತಷ್ಟು ಹೆಚ್ಚಾಗುವ
ಸಾಧ್ಯತೆ ಯನ್ನು ಈ ನೂತನ ನೀತಿಯಿಂದ ತಳ್ಳಿಹಾಕುವಂತಿಲ್ಲ.

ಹೆಂಡಕುಡಿದು ಕೋತಿಯಂತಾಡುವವರಿಗೆ ಮಾತ್ರ ಈ ರೀತಿಯ ಯೋಜನೆಗಳನ್ನು ಯೋಚಿಸಲು ಸಾಧ್ಯ. ಉಚಿತ ಯೋಜನೆಗಳ ಘೋಷಣೆಗಳಿಂದ ದೆಹಲಿ ಖಜಾನೆ ಬರಿದಾಗುವ ಬಗ್ಗೆ ಆತಂಕಗೊಂಡು ನೂತನ ಮದ್ಯ ಯೋಜ ನೆಯ ಮೂಲಕ ಮುಂಗಡವಾಗಿ ಹಣವನ್ನು ವಸೂಲಿ ಮಾಡುವ ಕೆಲಸ ಮೇಲ್ನೋಟಕ್ಕೆ ಈ ಯೋಜನೆಯಿಂದ ಕಂಡುಬರುತ್ತದೆ. ಮದ್ಯದಂಗಡಿಗಳು ಸರಕಾರದ ಕೈತಪ್ಪಿ ಹೋಯಿತೆಂದರೆ ‘ಕರಾಳ ಮದ್ಯದ ದಂಧೆ’ ಹೆಚ್ಚಾಗು ತ್ತದೆ.

ಹೆಚ್ಚಿನ ರಿಯಾಯಿತಿ ನೀಡಿ ತಮ್ಮ ವಹಿವಾಟನ್ನು ಹೆಚ್ಚಿಸಿಕೊಳ್ಳಲು ಮದ್ಯದಂಗಡಿಗಳು ಸ್ಪರ್ಧೆಗೆ ಬಿzಗ ಕಳಪೆ ಗುಣಮಟ್ಟದ ಮದ್ಯ ಜನರಿಗೆ ತಪ್ಪುವ ಅಪಾಯವಿದೆ. ಕಳಪೆ ಗುಣಮಟ್ಟದ ಮದ್ಯ ಸಿಗುವಂತೆ ಮಾಡಿ ಅವರ ಅರೋಗ್ಯ ಹದೆಗೆಟ್ಟು ಮಟ್ಟವರಿಗೆ ಚಿಕಿತ್ಸೆ ನೀಡಲು ಇವರ ‘ಮೊಹ ಕ್ಲಿನಿಕ್’ಗಳು ಕೋಟ್ಯಂತರ ರುಪಾಯಿ ಖರ್ಚು ಮಾಡಬೇಕು. ದೆಹಲಿ ಹೇಳಿ ಕೇಳಿ ವಲಸಿಗರಿಂದ ತುಂಬಿ ತುಳುಕ್ಕುತ್ತಿರುವ ಪ್ರದೇಶ ಅಲ್ಲಿನ ಬಡ ಕೂಲಿ ಕಾರ್ಮಿಕರು ಸೇವಿಸುವ ಮದ್ಯದ ಗುಣಮಟ್ಟ ಕಡಿಮೆಯಾದರೆ ಜೀವಕ್ಕೆ ಆಪತ್ತು ಬಂದೊದಗುತ್ತದೆಯೆಂಬ ಸಾಮಾನ್ಯ ಜ್ಞಾನವಿಲ್ಲದೆ ನೂತನ ಮದ್ಯ ನೀತಿಯನ್ನು ರಚಿಸಲಾಗಿತ್ತು.

ನೂತನ ಮದ್ಯ ನೀತಿಯಿಂದ ಸರಕಾರದ ಬೊಕ್ಕಸ ತುಂಬುತ್ತದೆ ಹಾಗೂ ಕರಾಳ ದಂಧೆ ನಿಲ್ಲುತ್ತದೆಯೆಂಬ ಸುಳ್ಳನ್ನು ಹೇಳಲಾಗಿತ್ತು. ದೆಹಲಿಯ ಸಾರ್ವಜನಿಕರೇ ನೂತನ ಮದ್ಯ ನೀತಿಯ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದರ ಪರಿಣಾಮ ನೂತನ ನೀತಿಯನ್ನು ಜಾರಿಗೆ ತರಲಿಲ್ಲ. ಆದರೆ ನೂತನ ನೀತಿಯನ್ನು ರೂಪಿಸಲು ಮದ್ಯ ಮಾರಾಟಗಾರರು ಮತ್ತು ಉತ್ಪಾದಕರಿಂದ ನೂರಾರು ಕೋಟಿ ಹಣವನ್ನು ಲಂಚವಾಗಿ ಪಡೆದಿರುವ ಆರೋಪ ಮನೀಶ್ ಸಿಸೋಡಿಯಾ ಮೇಲೆ ಕೇಳಿ ಬಂದಿದೆ.

ಸುಮಾರು ೧೫೫ ಕೋಟಿಯಷ್ಟು ಹಣವನ್ನು ಲಂಚದ ರೂಪದಲ್ಲಿ ಪಡೆದಿzರೆಂಬ ಆರೋಪವಿದೆ. ಇದರಿಂದ ಬಂದಂತಹ ಹಣವನ್ನು ಪಂಜಾಬ್ ಮತ್ತು ಗೋವಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಳಸಿಕೊಂಡಿದೆಯೆಂದು ಹೇಳಲಾಗುತ್ತಿದೆ. ದೆಹಲಿಯ ಮುಖ್ಯ ಕಾರ್ಯದರ್ಶಿಗಳು ನೂತನ ಮದ್ಯ ನೀತಿಯಲ್ಲಿನ ಲೋಪದೋಷಗಳ ಬಗ್ಗೆ ದೆಹಲಿಯ ರಾಜ್ಯಪಾಲರಿಗೆ ವಿವರವಾದ ಪಾತ್ರ ಬರೆದಿದ್ದರು. ಸ್ಥಳೀಯ ಮಟ್ಟದ ತನಿಖೆಗೆ ಮನೀಶ್ ಸಿಸೋ ಡಿಯಾ ಸಹಕರಿಸಲಿಲ್ಲದ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಸಿಬಿಐ ತನಿಖೆ ಎದುರಿಸಲು ಮಹಾರಾಜನಂತೆ ತನ್ನ ಬೆಂಬಲಿಗ ರೊಂದಿಗೆ ತೆರೆದ ವಾಹನದಲ್ಲಿ ತೆರಳುತ್ತಿದ್ದ ಮನೀಶ್ ಸಿಸೋಡಿಯಾ ಅಲ್ಲೂ ತನಿಖೆಗೆ ಸ್ಪಂದಿಸದ ಕಾರಣ ಅನಿವಾರ್ಯವಾಗಿ ವಶಕ್ಕೆ ಪಡೆಯಲು ನ್ಯಾಯಾಲಯದ ಮೊರೆ ಹೋಗಲಾಗಿತ್ತು.

ತಾವು ಆಡಿದ್ದೇ ಆಟವೆಂದು ಮೆರೆಯುತ್ತಿದ್ದಂತಹ ಆಮ್ ಆದ್ಮಿ ಪಕ್ಷಕ್ಕೆ ನ್ಯಾಯಾಲಯ ಶಾಕ್ ನೀಡಿತ್ತು. ಮನೀಶ್ ಸಿಸೋಡಿಯರನ್ನು ಸಿಬಿಐ ವಶಕ್ಕೆ ನೀಡಿದೆ. ಈ ಪ್ರಕರಣದಲ್ಲಿ ಕೇಳಿಬರುತ್ತಿರುವ ಮತ್ತೊಂದು ಹೆಸರು ಕವಿತಾ. ಇವರು ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಮಗಳು. ಇವರ ಹತ್ತಿರದವರಿಗೆ ಸೇರಿದ್ದ ಡಿಸ್ಟಲಿರಿಯ ಮೂಲಕ ಹಲವು ಅನುಮಾಸ್ಪದ ವ್ಯವಹಾರಗಳು ಮನೀಶ್ ಸಿಸೋಡಿಯಾರ ಜತೆ ನಡೆದಿದೆಯೆಂದು  ಹೇಳಲಾಗುತ್ತಿದೆ.

ಆಮ್ ಆದ್ಮಿ ಪಕ್ಷದ ಕರ್ಮಕಾಂಡ ಇಷ್ಟಕ್ಕೇ ಮುಗಿದಿಲ್ಲ. ಮನೀಶ್ ಸಿಸೋಡಿಯಾ ಆಪ್ತೆಯಾಗಿದ್ದ ನಿಶಾ ಸಿಂಗ್, ನೋಯಿಡಾದಲ್ಲಿ ನಡೆದ ಗಲಭೆಯ ಹಿಂದಿನ ಪ್ರಮುಖ ರೂವಾರಿಯಾಗಿದ್ದರು. ಈಕೆಗೆ ಈ ಪ್ರಕರಣದಲ್ಲಿ ಏಳು ವರ್ಷ ಜೈಲಾಗಿತ್ತು. ಈಕೆ ಕೂಡ ಆಮ್ ಆದ್ಮಿ ಪಕ್ಷದ ದೆಹಲಿ ಪಾಲಿಕೆಯ ಸದಸ್ಯರಾಗಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಗಲಭೆಯ ಪ್ರಮುಖ ರೂವಾರಿ ಆಮ್ ಆದ್ಮಿ ಪಕ್ಷದ ದೆಹಲಿ ಪಾಲಿಕೆಯ ಸದಸ್ಯ ತಾಹಿರ್ ಹುಸೇನ್. ಈತ ಗಲಾಟೆಗೆ ಬಳಸಲು ತನ್ನ ಮನೆಯ ಮೇಲೆ ಕಲ್ಲುಗಳನ್ನು ಸಂಗ್ರಹ ಮಾಡಿಕೊಂಡಿದ್ದ.

ದೆಹಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಗಲಭೆಯ ಸಂದರ್ಭದಲ್ಲಿ ಅಮಾನುಷವಾಗಿ ಕೊಲ್ಲಲಾಗಿತ್ತು. ಅದರ ಹಿಂದಿನ ಮಾಸ್ಟರ್ ಮೈಂಡ್ ಈತನೇ ಎಂದು ಹೇಳಲಾಗುತ್ತದೆ. ಕಳೆದ ವರ್ಷ ಪಂಜಾಬಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಕ್ಷದ ಫಲವಾಗಿ ಖಲಿಸ್ತಾನಿ ಪ್ರತ್ಯೇಕತಾವಾದಿ ಚಳವಳಿ ಮತ್ತೊಮ್ಮೆ ಮುನ್ನೆಲೆಗೆ ಬರುವಂತೆ ಮಾಡಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಪಂಜಾಬಿನ ರಸ್ತೆಗಳಲ್ಲಿ ಕತ್ತಿಗಳನ್ನು ಹಿಡಿದುಕೊಂಡು ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ಪಂಜಾಬ್ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.

ದಿನದಿಂದ ದಿನಕ್ಕೆ ಇವರ ಕೂಗು ಹೆಚ್ಚುತ್ತಲೇ ಇದೆ. ಪಂಜಾಬಿನಾದ್ಯಂತ ಕಾನೂನು ಸುವ್ಯವಸ್ಥೆಯೇ ಇಲ್ಲದಂತಾಗಿದೆ. ಪಂಜಾಬಿನ ಮುಖ್ಯಮಂತ್ರಿ ‘ಪಾನಪ್ರಿಯ’ರೆಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಪಂಜಾಬಿನಲ್ಲಿ ಅಧಿಕಾರಕ್ಕೆ ಬಂದ ನಂತರ ಸರಕಾರಿ ಅಧಿಕಾರಿ ಗಳಿಗೆ ಸರಿಯಾದ ಸಮಯದಲ್ಲಿ ಸಂಬಳ ನೀಡಲು ಅಲ್ಲಿನ ಸರಕಾರದ ಬಳಿ ಹಣವಿರಲಿಲ್ಲ. ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಿನಲ್ಲಿ ಪಂಜಾಬಿನ ಆರೋಗ್ಯ ಸಚಿವರನ್ನು ‘ಭ್ರಷ್ಟಾಚಾರ ನಿಗ್ರಹ ದಳ’ ಬಂಧಿಸಿತ್ತು.

ಪಂಜಾಬಿನ ಆಮ್ ಆದ್ಮಿ ಪಕ್ಷದ ಶಾಸಕ ಬಲ್ಬೀರ್ ಸಿಂಗ್‌ರಿಗೆ ಪ್ರಕರಣವೊಂದರಲ್ಲಿ ಮೂರು ವರ್ಷ ಸಜೆಯಾಗಿದೆ. ಭ್ರಷ್ಟಾಚಾರ ಮುಕ್ತ ಹೋರಾಟವೆಂದು ಅಣ್ಣಾ ಹಜಾರೆಯವರ ಹೋರಾಟವನ್ನು ಹೈಜಾಕ್ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ನಾಯಕರು ಕೇವಲ ಹತ್ತು ವರ್ಷಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗುವ ಮೂಲಕ ಸಮಾಜದ ಮುಂದೆ ಬೆತ್ತಲಾಗಿದೆ. ಅಧಿಕಾರಕ್ಕೆ
ಬಂದು ಸುಮಾರು ಹತ್ತು ವರ್ಷಗಳೇ ಕಳೆದರೂ ದೆಹಲಿಯಲ್ಲಿರುವ ಯಮುನಾ ನದಿ ಸ್ವಚ್ಛತೆ ಮಾಡಲಿಲ್ಲ. ದೆಹಲಿಯ ವಾಯುಮಾಲಿನ್ಯಕ್ಕೆ ಪರಿಹಾರ ನೀಡಲಾಗಲಿಲ್ಲ.

ಪಕ್ಕದ ಪಂಜಾಬಿನಲ್ಲಿಯೂ ತನ್ನದೇ ಸರಕಾರ ಅಸ್ತಿತ್ವದಲ್ಲಿದ್ದರೂ ವಾಯುಮಾಲಿನ್ಯ ಸಮಸ್ಯೆಗೆ ಪರಿಹಾರ ಕಾಣಿಸಲು ಸಾಧ್ಯವಾಗಲಿಲ್ಲ. ತಾನು ಮಾಡುವ ಅಲ್ಪ ಕೆಲಸಕ್ಕೆ ನೂರಾರು ಕೋಟಿ ಹಣವನ್ನು ವ್ಯಯ ಮಾಡಿ ಸಿಕ್ಕಸಿಕ್ಕಲ್ಲಿ ಜಾಹೀರಾತು ನೀಡುವ ಆಮ್ ಆದ್ಮಿ ಪಕ್ಷ, ದೇಶದಲ್ಲಿಯೇ ಅತೀ ಹೆಚ್ಚು ಹಣವನ್ನು ಜಾಹೀರಾತಿಗಾಗಿ ಖರ್ಚು ಮಾಡುತ್ತದೆ. ದೂರದೃಷ್ಟಿಯಿಲ್ಲದೆ ಆರ್ಥಿಕ ಶಿಸ್ತಿಲ್ಲದೆ, ಕೇವಲ ಉಚಿತ ಯೋಜನೆಗಳ ಘೋಷಣೆಗಳಿಂದ ಅಧಿಕಾರಕ್ಕೆ ಬಂದು ಖಜಾನೆ ಬರಿದು ಮಾಡುವ ಆಮ್ ಆದ್ಮಿ ಪಕ್ಷ, ದೆಹಲಿಯ ಬಡ ನಾಗರಿಕರಿಗೆ ಹೆಂಡದ ಹೊಳೆಯನ್ನು ಹೆಚ್ಚಿಸುವ ಸಲುವಾಗಿ ನೂತನ ಮದ್ಯ ನೀತಿ ಜಾರಿಗೆ ತರಲು ಹೊರಟದ್ದು ಮಾತ್ರ ದುರದೃಷ್ಟಕರ.

 
Read E-Paper click here