ಪ್ರಸ್ತುತ
ಪ್ರಕಾಶ್ ಶೇಷರಾಘವಾಚಾರ್
sprakashbjp@gmail.com
ರಘುರಾಮ್ ರಾಜಾರಾಮ್‌ರವರು ಸಂಸದೀಯ ಸಮಿತಿಗೆ ನೀಡಿರುವ ಉತ್ತರದಲ್ಲಿ ಅತಿ ಹೆಚ್ಚಿನ ಕೆಟ್ಟ ಸಾಲವು 2006 ಮತ್ತು 2008 ರಲ್ಲಿ ನೀಡಿದ ಸಾಲಗಳು ಕಾರಣ ಎಂದಿದ್ದಾರೆ. ಅಂದರೆ ಮನಮೋಹನ ಸಿಂಗ್ ರವರ ಅವಧಿಯು ಬ್ಯಾಂಕ್‌ಗಳ ದುರ್ಗತಿಗೆ ಹೊಣೆಯಾಗಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತದೆ.
ಕಳೆದ ವಾರ ಎರಡು ಬಹು ದೊಡ್ಡ ತಲೆಬರಹದ ಸುದ್ದಿಗಳು ದೇಶದ ಹಣಕಾಸು ಕ್ಷೇತ್ರದಲ್ಲಿ ಸಂಚಲನ ಮತ್ತು ದೊಡ್ಡ ಚರ್ಚೆಗೆ ಕಾರಣವಾದವು. ವಿಶ್ವದಲ್ಲೇ ಅತಿದೊಡ್ಡ ಪೇರು ವ್ಯವಹಾರ ನಡೆಸುವ ಎನ್‌ಎಸ್‌ಇ ಮುಖ್ಯ ಕಾರ್ಯನಿರ್ವಾಹಕಿ ಚಿತ್ರ ರಾಮಕೃಷ್ಣರವರ ಅವ್ಯವಹಾರ ಮತ್ತು ಹಿಮಾಲಯ ಯೋಗಿಯೊಬ್ಬರ ಅಣತಿ ಯಂತೆ ಕಾರ್ಯ ನಿರ್ವಹಿಸುತ್ತಿದ್ದ ಈಕೆಯನ್ನು ಸೇವೆಯಿಂದ ವಜಾ ಮಾಡಿದ್ದು ಮತ್ತು ಎಬಿಜಿ ಶಿಪ್ ಯಾರ್ಡ್ ಖಾಸಗಿ ಕಂಪನಿಯು 28 ಬ್ಯಾಂಕ್‌ಗಳಿಗೆ 23 ಸಾವಿರ ಕೋಟಿ ಹಣವನ್ನು ವಂಚಿಸಿರುವುದು ಬೆಳಕಿಗೆ ಬಂದು ಪೇರು ಮಾರುಕಟ್ಟೆ ಮತ್ತು ಬ್ಯಾಂಕಿಂಗ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಈ ಹಗರಣಗಳು ಬಯಲಾಗುತ್ತಿದ್ದ ಹಾಗೆ ಮೋದಿಯವರನ್ನು ಗುರಿಯಾಗಿಸಿ ಸಲ್ಲದ ಟೀಕೆ ಮತ್ತು ವ್ಯಂಗ್ಯ ಭರಿತ ವಾಗ್ದಾಳಿ ಆರಂಭವಾಯಿತು. ಕಾಂಗ್ರೆಸ್ ವಕ್ತಾರ ಸುರ್ಜೆವಾಲ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮೋದಿ ಸರಕಾರದ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಾರೆ. ಆದರೆ ಯಾವಾಗ ಈ ಎರಡು ಘಟನೆಗಳಿಗೆ ಯುಪಿಎ ಅವಧಿ ಯ ಕೂಸು ಕಾರಣ ಎಂದು ಗೊತ್ತಾದ ಕೂಡಲೇ ಟೀಕಾಕಾರರು ಹತ್ತಿರದ ಬಿಲಗಳನ್ನು ಹುಡುಕಿ ಅಡಗಿಕೊಳ್ಳ ತೊಡಗಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳ ಕಾರ್ಯ ನಿವರ್ಹಿಸದ ಸ್ವತ್ತುಗಳು (Non Performing Assets)ಸರಿ ಸುಮಾರು ಹತ್ತು ಲಕ್ಷಕೋಟಿ ತಲುಪಿದೆ.
ಸಾಲ ಪಡೆದ ಉದ್ದಿಮೆಗಳು ದಿವಾಳಿಯಾಗಿ ವ್ಯಾಪಾರದಲ್ಲಿ ನಷ್ಟವಾಗಿ, ಪಡೆದ ಸಾಲವನ್ನು ಇನ್ನೇ ಬಳಕೆ, ಸಾಲ ಮರುಪಾವತಿ ಮಾಡದೆ ಬ್ಯಾಂಕ್‌ಗಳಿಗೆ ಉಂಡೆ ನಾಮ ತೀಡಿರುವ ಪರಿಣಾಮ ಈ ಹೊರೆಯನ್ನು ಬ್ಯಾಂಕ್‌ಗಳು ಹೊರಬೇಕಾಗಿದೆ. ಈ ಎನ್‌ಪಿಎಗಳು ಹಿಂದಿನ ಯುಪಿಎ ಸರ್ಕಾರದ
ಬಳುವಳಿಯು. 2008ರ ವರಗೆ ಬ್ಯಾಂಕ್‌ಗಳು ನೀಡಿದ ಒಟ್ಟು ಸಾಲ 18 ಲಕ್ಷ ಕೋಟಿಗಳು ಆದರೆ 2008ರಿಂದ 2014ರ ಅವಧಿಯಲ್ಲಿ ನೀಡಿದ ಸಾಲ ೫೨ಲಕ್ಷ ಕೋಟಿಗೆ ತಲುಪಿತು. ಈ ಸಾಲದ ಮೊತ್ತಕ್ಕೆ ತಕ್ಕದಾಗಿ ಜಿಡಿಪಿಯ ಬೆಳವಣಿಗೆ ಆಗಲೇ ಇಲ್ಲ.
ಅದರರ್ಥ ಸಾಲ ನೀಡಿದ ಕಂಪನಿಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹವಾದ್ದು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಉನ್ನತ ಸ್ಥಾನದಲ್ಲಿರುವವರು ಫೋನ್ ಮಾಡಿ ಅನರ್ಹರಿಗೆ ನಿಯಮಗಳನ್ನು ಗಾಳಿಗೆ ತೂರಿ ಸಾಲ ನೀಡಲು ಹೇರಿದ ಒತ್ತಡ ಬಹು ಮಟ್ಟಿಗೆ ಕಾರಣವಾಗಿತ್ತು. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ರಾಜಕೀಯವಾಗಿ ಬೇಕಾಬಿಟ್ಟಿ ಸಾಲವನ್ನು ಕೊಡಿಸಲು ಅಂದಿನ ಆಡಳಿತ ಪಕ್ಷದ ರಾಜಕೀಯ ಪ್ರಮುಖರು ದುರ್ಬಳಕೆ ಮಾಡಿಕೊಂಡರು.
ಯುಪಿಎ ಅವಧಿಯಲ್ಲಿ ಹಿಂದಿರುಗಿಸಲಾಗದ ಸಾಲದ ಹಣ 2.75ಲಕ್ಷ ಎಂದು ಮಾಹಿತಿ ನೀಡಿದ್ದರು ಆದರೆ ವಾಸ್ತವವಾಗಿ ಅದು 9 ಲಕ್ಷ ಕೋಟಿ ಇತ್ತು. ದೇಶಕ್ಕೆ ಸುಳ್ಳು ಮಾಹಿತಿಯನ್ನು ನೀಡಲಾಗಿತ್ತು. ಈ ಹೊರೆಯಿಂದಾಗಿ ಬ್ಯಾಂಕಿಂಗ್ ವಲಯ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದವು ಮತ್ತು ಹಲವಾರು ಹಗರಣಗಳಿಗೂ ಇದು ಕಾರಣವಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆಯೇ ಜನರ ವಿಶ್ವಾಸ ಕಳೆದುಕೊಳ್ಳುವ ಚಿಂತಾಜನಕ ಸ್ಥಿತಿಗೆ ತಲುಪಿತ್ತು.
ಎಬಿಜಿ ಶಿಪ್‌ಯಾರ್ಡ್ ಕಂಪನಿಯು ಖಾಸಗಿ ವಲಯದ ಅತಿ ದೊಡ್ಡ ಹಡಗು ನಿರ್ಮಾಣ ಸಂಸ್ಥೆ ಮತ್ತು ವಿಶೇಷ ಸಾಗಾಣಿಕೆ ಕಂಟೈನರ್ ನಿರ್ಮಿಸುವ ಚಟುವಟಿಕೆಯಲ್ಲಿ ೧೯೮೫ರಿಂದ ತೊಡಗಿತ್ತು.
2009ರಲ್ಲಿ ಸಾರ್ವಜನಿಕ ಉದ್ದಿಮೆ ವೆಸ್ಟರ್ನ್ ಇಂಡಿಯಾ ಶಿಪ್ ಯಾರ್ಡ್ ಎಬಿಜಿಗೆ ಮಾರಾಟ ಮಾಡಲಾಗಿತ್ತು. 2012ರಲ್ಲಿ ?9700 ಕೋಟಿ ಮತ್ತು 2012ರಲ್ಲಿ ಮತ್ತೆ ?500ಕೋಟಿ ಗುತ್ತಿಗೆಯನ್ನು ಭಾರತ ಸರ್ಕಾರ ಎಬಿಜಿ ಶಿಪ್‌ಯಾರ್ಡ್ ಸಂಸ್ಥೆಗೆ ನೀಡಲಾಗಿತ್ತು. ಈ ಗುತ್ತಿಗೆಯನ್ನು ನಿರ್ವಹಿಸಲು
ಬ್ಯಾಂಕ್ ಸಾಲವನ್ನು ಕೊಡಿಸಲಾಗಿತ್ತು. ಬ್ಯಾಂಕ್ ಗಳು ಸೂಕ್ತವಾದ ದಾಖಲೆಯಾಗಲಿ ಮತ್ತು ಅದರ ಸಾಲ ಪಡೆಯುವ ಮಿತಿಯನ್ನು ಪರಿಶೀಲಿಸದೇ
ಧಾರಾಳವಾಗಿ ಸಾಲವನ್ನು ನೀಡಿದವು. ಆದರೆ ನಷ್ಚದಲ್ಲಿದ್ದ ಕಂಪನಿಯು ಕೊಟ್ಟ ಸಾಲಕ್ಕೆ ಬಡ್ಡಿ ಅಥವಾ ಅಸಲನ್ನು ಕಟ್ಟಲು ವಿಫಲವಾದಾಗ ಈ
ಕಂಪನಿಯ ಸಾಲವನ್ನು ಎನ್‌ಪಿಎ ಎಂದು 2013ರಲ್ಲಿ ಘೋಷಿಸಲಾಯಿತು.
ಕಂಪನಿಯನ್ನು ಪುನರುಜ್ಜೀವ ಗೊಳಿಸುವ ನೆಪದಲ್ಲಿ ಮತ್ತೆ ಮತ್ತೆ ಸಾಲವನ್ನು ನೀಡಲಾಯಿತು ಅದು ?12897 ಕೋಟಿಗೆ ತಲುಪಿತು. ಸಾಲದ ಹಣವು ಬಡ್ಡಿ ಸೇರಿ ಬೆಳೆಯಲಾರಂಭಿಸಿತು ಸಾಲ ಕೊಟ್ಟ ಬ್ಯಾಂಕ್‌ಗಳಿಗೆ ಬಿಸಿ ತಾಕಲು ಆರಂಭವಾಯಿತು. ಅದೆಷ್ಟು ದಿನ ಮಡಿಲ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡವು ಸುಡದ ಹಾಗೆ ಇಟ್ಟುಕೊಳ್ಳಲು ಸಾಧ್ಯ? ಆಗ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರ ರಂಗ ಪ್ರವೇಶವಾಗುತ್ತದೆ.
2014 ರಲ್ಲಿ ಪಿ. ಚಿದಂಬರಂ ಅವರು ಮತ್ತು ಅಂದಿನ ರಿಸರ್ವ್ ಬ್ಯಾಂಕ್ ಗೌವರ್ನರ್ ರಘುರಾಮ್ ರಾಜಾರಾಮ್‌ರವರ ಸೂಚನೆಯಂತೆ ಎಬಿಜಿ ಶಿಪ್ ಯಾರ್ಡ್ ಸಾಲವನ್ನು ಪುನರ್‌ರಚನೆ ಮಾಡಲು ಆದೇಶಿಸುತ್ತಾರೆ. ಇದರರ್ಥ ಈ ಕಂಪನಿಯ ಬ್ಯಾಂಕ್ ವ್ಯವಹಾರ ಅಬಾಧಿತವಾಗಿ ನಡೆಯಲು ಅನುಕೂಲವಾಯಿತು. ಕೋಮಾಗೆ ತಲುಪಿದ್ದ ಈ ಕಂಪನಿಯು ಈ ಎಲ್ಲ ಕಸರತ್ತಿನ ತರುವಾಯವೂ ಮತ್ತೆ ಎದ್ದೇಳಲು ಸಾಧ್ಯವಾಗಲಿಲ್ಲ ಅಂತಿಮವಾಗಿ
ಜುಲೈ ೨೦೧೬ರಲ್ಲಿ ಇವರಿಗೆ ನೀಡಿದ ಸಾಲವನ್ನು ಎನ್ ಪಿಎ ಪಟ್ಟಿಗೆ ಸೇರಿಸಲಾಗುವುದು.
ಈ ಕಂಪನಿಗೆ ಐಸಿಐಸಿಐ ಬ್ಯಾಂಕ್ ೭೦೮೯ಕೋಟಿ ರು. ಹಣವನ್ನು ಸಾಲ ನೀಡಿದೆ ಈ ಅವಧಿಯಲ್ಲಿ ಆ ಬ್ಯಾಂಕ್‌ನ ಮುಖ್ಯಸ್ಥೆ ಇದಿದ್ದು ಚಂದಾ ಕೋಚರ್ ಈಗ ಹಲವಾರು ಭ್ರಷ್ಚಾಚಾರ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಯನ್ನು ಎದುರಿಸುತ್ತಿದ್ದಾರೆ. ನೆಲಕಚ್ಚಿದ್ದ ವಿಜಯ್ ಮಲ್ಯರಿಗೂ 2009ರಲ್ಲಿ ?900 ಕೋಟಿ ಸಾಲವನ್ನು ಐಡಿಬಿಐ ಬ್ಯಾಂಕ್ ಮೂಲಕ ಅಂದಿನ ಸರಕಾರ ಕೊಡಲು ಶಿ-ಸು ಮಾಡಿ ಸಾಲ ಪಡೆಯುವ ಅರ್ಹತೆಯು ಇಲ್ಲದಿದ್ದರು ನೀಡಲಾಗಿತ್ತು.
ಎಬಿಜಿ ಶಿಪ್‌ಯಾರ್ಡ್‌ಗೆ ಸಾಲ ಕೊಟ್ಟ ಬ್ಯಾಂಕ್‌ಗಳಲ್ಲಿ ಐಸಿಐಸಿಐ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಸ್‌ಬಿಐ ಮತ್ತು ಐಡಿಬಿಐ ಸೇರಿದಂತೆ ಹಲವಾರು ಬ್ಯಾಂಕ್‌ಗಳು ಸಾಲ ನೀಡಿದ್ದವು. ಈ ಕಂಪನಿಯ ಫಾರೆನ್ಸಿಕ್ ಆಡಿಟ್ ನಡೆಸಿದಾಗ ಕಂಪನಿಯ ಆಡಳಿತ ವರ್ಗ ಮಾಡಿರುವ ಹಲವಾರು ವಂಚನೆಗಳು ಬಯಲಿಗೆ ಬರುತ್ತದೆ. ಬ್ಯಾಂಕ್‌ನಲ್ಲಿ ಸಾಲವನ್ನು ಪಡೆದ ಉದ್ದೇಶಕ್ಕೆ ಬಳಸದೆ ಆ ಹಣವನ್ನು ವಿದೇಶಗಳಲ್ಲಿ ಬೇರೆ ಬೇರೆ ಕಂಪನಿಗಳಲ್ಲಿ ಹೂಡಿಕೆಗಾಗಿ ದುರ್ಬಳಕೆ ಮಾಡಿಕೊಂಡು ಪಡೆದ ಸಾಲವನ್ನು ತೀರಿಸಲಾಗದೇ ಕಂಪನಿಯು ದಿವಾಳಿಯಾಯಿತು.
2019ರಲ್ಲಿ ಎಸ್‌ಬಿಐ ದೂರಿನ ಮೇಲೆ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಇದೀಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಿಶಿ ಅಗರ್ ವಾಲ, ಸಂತಾನಂ ಅಗರ್‌ವಾಲ್ ಹಾಗೂ ಹಲವಾರು ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. 2019ರಲ್ಲಿ ದೂರು ದಾಖಲಿಸಿದರು 2022ರಲ್ಲಿ ಎಫ್ಐಆರ್ ಸಲ್ಲಿಸಿರುವುದನ್ನು ಪ್ರಶ್ನಿಸುತ್ತಿರುವವರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಇಂತಹ ಪ್ರಕರಣಗಳಲ್ಲಿ ಸಂಪೂರ್ಣ ತನಿಖೆ ನಡೆಸಿ ವಂಚನೆಯನ್ನು ಪತ್ತೆ ಹಚ್ಚಲು 52 ರಿಂದ 56 ವಾರಗಳು ಬೇಕಾಗುತ್ತದೆ ಸ್ಪಷ್ಟಿಕರಣ ಕೊಟ್ಟಿದ್ದಾರೆ.
ಮೋದಿ ಸರಕಾರವು ಬಂದ ತರವಾಯ ಎಸ್ಸಾರ್ ಗ್ರೂಪ್‌ನ 1.4 ಶಿಪ್ ಯಾರ್ಡ್‌ನವನು ಎಸ್ಸಾರ್ ಕಂಪನಿಯ ಮಾಲೀಕನ ಅಳಿಯ. ವಂಚನೆ ನಡೆದಿದೆ ಎಂದು ಸುದ್ದಿಯಾದಾಗ ಮೋದಿ ಮತ್ತು ಗುಜರಾತ್ ಪ್ರಶ್ನಿಸಿದವರು ಯಾವಾಗ ಇವೆಲ್ಲ ಮನಮೋಹನ್ ಸಿಂಗ್ ರವರ ಅವಧಿಯಲ್ಲಿ ನಡೆದಿದ್ದು
ತಿಳಿದ ಕೂಡಲೆ ಮೋದಿ ವಿರೋಧಿಗಳು ಉಸಿರೆತ್ತುತ್ತಿಲ್ಲ.
ಮನಮೋಹನ್ ಸಿಂಗ್ ಆಡಳಿತದ ಅಸ್ಥಿಪಂಜರಗಳು ಕಪಾಟಿನಿಂದ ಎಂಟು ವರ್ಷದ ತರುವಾಯವೂ ಹೊರಗೆ ಬೀಳುತ್ತಲೆ ಇದೆ. ಮಾಜಿ ಪ್ರಧಾನಿ ಸಿಂಗ್‌ರವರು ಮೋದಿಯವರನ್ನು ನೆಹರು ಕಾಲವನ್ನು ಟೀಕಿಸಬೇಡಿ ಎಂದು ಹೇಳುವ ಬದಲು ತಮ್ಮ ಕಾಲದಲ್ಲಿ ಹೇಗೆ ಎನ್ಪಿಎ10 ಲಕ್ಷ ಕೋಟಿ ವೃದ್ಧಿಯಾಗಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುವ ಮಟ್ಟ ತಲುಪಿತು ಎಂಬುದರ ಬಗ್ಗೆ ವಿವರಣೆ ನೀಡಬೇಕಲ್ಲವೇ? ರಘುರಾಮ್ ರಾಜಾರಾಮ್ ರವರು ಸಂಸದೀಯ ಸಮಿತಿಗೆ ನೀಡಿರುವ ಉತ್ತರದಲ್ಲಿ ಅತಿ ಹೆಚ್ಚಿನ ಕೆಟ್ಟ ಸಾಲವು 2006 ಮತ್ತು 2008 ರಲ್ಲಿ ನೀಡಿದ ಸಾಲಗಳು ಕಾರಣ ಎಂದಿದ್ದಾರೆ.
ಅಂದರೆ ಮನಮೋಹನ ಸಿಂಗ್ ರವರ ಅವಧಿಯು ಬ್ಯಾಂಕ್‌ಗಳ ದುರ್ಗತಿಗೆ ಹೊಣೆಯಾಗಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ರಾಜಕೀಯವಾಗಿ ಎನ್‌ಪಿಎ ವಿಚಾರದಲ್ಲಿ ರಾಹುಲ್ ಗಾಂಧಿಯವರು ಬಿಜೆಪಿಯನ್ನು ಟೀಕಿಸುತ್ತಾರೆ ಆದರೆ ಮೋದಿ ಸರಕಾರದ ಅವಧಿಯಲ್ಲಿ ಯಾವುದೆ ಎನ್‌ಪಿಎಗಳು
ದಾಖಲೆಯಾಗಿಲ್ಲ ಬದಲಿಗೆ ಹಿಂದಿನ ಹಗರಣಗಳು ನಿಧಾನವಾಗಿ ಇನ್ನೂ ಹೊರಬರುತ್ತಲೇ ಇದೆ.
ಮೋದಿ ನೇತೃತ್ವದ ಸರಕಾರ ಬಂದ ತರುವಾಯ ಶೇಕಡಾ ೨ರಷ್ಟು ಎನ್ಪಿಎ ಕಡಿಮೆಯಾಗಿ ಬ್ಯಾಂಕ್ ಗಳು ಕೊಂಚ ನಿರಾಳವಾಗಿ ಉಸಿರು ಬಿಡುವ
ಸ್ಥಿತಿಯನ್ನು ತಲುಪಿದೆ. ಕಳೆದ ಎಂಟು ವರ್ಷದಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಇಲ್ಲಿಯ ತನಕ 5.49ಲಕ್ಷ ಸಾಲವನ್ನು ಸುಸ್ತಿದಾರರರಿಂದ ಮತ್ತು ಎನ್ಪಿಎ ಯಿಂದ ಸಂಗ್ರಹಿಸಲಾಗಿದೆ. ಉಲ್ಲೇಖಾರ್ಹವೆಂದರೆ ವಿಜಯ್ ಮಲ್ಯ ಮತ್ತು ನೀರವ್ ಮೋದಿಯವರ 18000 ಕೋಟಿ ರು. ಹಣವನ್ನು ಅವರ ಆಸ್ತಿ ಮಾರಾಟ ಮಾಡಿ ಸಂಗ್ರಹಿಸಲಾಗಿದೆ.
ನೀರವ್ ಮೋದಿ ಭಾರತದಿಂದ ಪರಾರಿಯಾದರು ಬ್ರಿಟನ್ ಸೆರಮನೆಯಲ್ಲಿ ಕಳೆದ ಮೂರು ವರ್ಷದಿಂದ ಕೊಳೆಯುತ್ತಿರುವುದು ಮೋದಿ ಸರಕಾರದ
ಕಠಿಣ ನಿಲುವಿಗೆ ಸಾಕ್ಷಿಯಾಗಿದೆ. ಹಳೆಯ ಸರ್ಕಾರದ ಕೊಳೆಯನ್ನು ತೊಳೆಯುವ ಕೆಲಸ ಮೋದಿ ಆಡಳಿತ ಇನ್ನೂ ಮಾಡುತ್ತಿದೆ ಅಂದರೆ ಪ್ರಧಾನಿ
ಮನಮೋಹನ ಸಿಂಗ್ ನೇತೃತ್ವದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಚಾರದ ಅಗಾಧತೆಯು ಊಹೆಗೂ ಸಿಲುಕವುದಿಲ್ಲ. ಇದರಿಂದಾಗಿ 2004 ರಿಂದ 2014ರ ಅವಽಯು ದೇಶದ ಆಡಳಿತವು ದುರಂತ ದಶಕವಾಗಿ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಬಹು ಕಾಲ ಉಳಿಯಲಿದೆ.