Friday, 13th December 2024

ಭಾರತದಲ್ಲಿ ಅಚ್ಛೇ ದಿನ್ ಅಂದ್ರೆ ಇದೇ ಅಲ್ಲವಾ ?

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಅಮೆರಿಕದಂತಹ ದೇಶದಲ್ಲೂ ಇದು ಸಾಧ್ಯವಿಲ್ಲವೇನೋ? ಆದರೆ, ಭಾರತದ ಪಾಸ್ ಪೋರ್ಟ್ ಸೇವಾ ಕೇಂದ್ರದದಲ್ಲಿ ಇದು ಸಾಧ್ಯ ವಾಗಿದ್ದು ನೋಡಿ ನಿಜಕ್ಕೂ ಆಶ್ಚರ್ಯವಾಯಿತು. ಇದಕ್ಕಿಂತ ವೇಗವಾಗಿ ಸರಕಾರೀ ಕಚೇರಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ಇದು ನನ್ನದೊಬ್ಬನ ಕಥೆ ಅಲ್ಲ, ಪಾಸ್ ಪೋರ್ಟ್ ಸೇವಾ ಕೇಂದ್ರ ಕಾರ್ಯನಿರ್ವಹಿಸುವುದೇ ಹೀಗಂತೆ.

ಇಪ್ಪತ್ತೈದು ವರ್ಷಗಳ ಹಿಂದೆ, ನಾನು ಮೊದಲ ಬಾರಿಗೆ ಪಾಸ್ ಪೋರ್ಟ್ ಮಾಡಿಸುವಾಗ ಅನುಭವಿಸಿದ ಕಷ್ಟ-ಕೋಟಲೆ ನನ್ನ ಮನಸ್ಸಿ ನಲ್ಲಿ  ಇನ್ನೂ ನೆಲೆಸಿದೆ. ನಾನು ಇಂಗ್ಲೆಂಡಿಗೆ ಹೊರಟು ನಿಂತಿದ್ದೆ. ಅಲ್ಲಿಗೆ ಹೋಗಲು ಇಪ್ಪತ್ತೈದು ದಿನಗಳಿದ್ದವು. ಅಷ್ಟರೊಳಗೆ ಪಾಸ್
ಪೋರ್ಟ್ ಮಾಡಿಸಿ, ವೀಸಾ ತೆಗೆದುಕೊಂಡು ಹೊರಡಬೇಕಿತ್ತು. ಎಂ.ಜಿ.ರಸ್ತೆಯಲ್ಲಿರುವ ಶಂಕರನಾರಾಯಣ ಬಿಲ್ಡಿಂಗ್‌ನ ಒಂದು ಪಾರ್ಶ್ವದಲ್ಲಿ ಪಾಸ್ ಪೋರ್ಟ್ ಕಚೇರಿಯಿತ್ತು.

ಅಲ್ಲಿಗೆ ಹೋದರೆ ಕಾಲಿಡಲು ಸಹ ಜಾಗ ಇರಲಿಲ್ಲ. ಪಾಸ್ ಪೋರ್ಟಿಗೆ ಅರ್ಜಿ ಸಲ್ಲಿಸಲು ಮೈಲಿಯುದ್ದದ ಸರತಿಸಾಲು. ಯಾವಾಗ ಪಾಸ್ ಪೋರ್ಟ್ ಸಿಗುತ್ತದೆ ಎಂಬುದಕ್ಕೆ ಸ್ಪಷ್ಟತೆ ಇರಲಿಲ್ಲ. ‘ಕೊಟ್ಟು ಹೋಗ್ರಿ.. ನೋಡ್ತೇವೆ’ ಎಂಬ ತಿರಸ್ಕಾರದ ಉತ್ತರ. ನಾನು ಪಾಸ್ ಪೋರ್ಟ್ ಆಫೀಸರ್ ಅವರನ್ನು ಕಂಡು, ಪಾಸ್ ಪೋರ್ಟ್ ತುರ್ತಾಗಿ ಬೇಕಾಗಿರುವ ಅಗತ್ಯವನ್ನು ಮನವರಿಕೆ ಮಾಡಿಕೊಡಲು ಬಯಸಿದೆ. ಆ ವ್ಯಕ್ತಿ ನನ್ನತ್ತ ಬೀರಿದ ಅಸಹ್ಯ ಮತ್ತು ಸಿಡುಕಿನ ನೋಟ ನೋಡಿ, ನಾನು ಒಳಗೊಳಗೇ ಚಡಪಡಿಸಿದೆ.

ಆತ ಬಂಗಾಳಿ ಮೂಲದ ಅಽಕಾರಿ. ‘ಸಾರ್, ನನಗೆ ಹತ್ತು ದಿನಗಳಲ್ಲಿ ಪಾಸ್ ಪೋರ್ಟ್ ಬೇಕಿತ್ತು’ ಎಂದು ಅತ್ಯಂತ ವಿನೀತನಾಗಿ ಹೇಳಿದೆ.
ಹೆಡೆಯನ್ನು ತುಳಿಸಿಕೊಂಡ ಹಾವಿನಂತೆ ಆತ ‘ಬುಸ್ಸ್’ ಎಂದು ನನ್ನ ಮೇಲೆ ಎಗರಿ ಬಂದ. ‘ಪಾಸ್ ಪೋರ್ಟ್ ಆಫೀಸಿಗೆ ಎಲ್ಲರೂ ಕೊನೆ ಕ್ಷಣದ ಬರ್ತಾರೆ. ಎಲ್ಲರಿಗೂ ಅವರು ಹೇಳಿದ ದಿನವೇ ಪಾಸ್ ಪೋರ್ಟ್ ಕೊಡಲು ಸಾಧ್ಯವಿಲ್ಲ. ನೀವ್ಯಾಕೆ ಆರು ತಿಂಗಳ ಮೊದಲು ಪಾಸ್ ಪೋರ್ಟಿಗೆ ಅರ್ಜಿ ಹಾಕಲಿಲ್ಲ? ಕೊನೆ ಕ್ಷಣದಲ್ಲಿಯೇ ಎಲ್ಲರೂ ಅರ್ಜಿ ಹಾಕ್ತಾರೆ. ಎಲ್ಲರಿಗೆ ಆ ರೀತಿ ಕೊಡಲು ಸಾಧ್ಯವಿಲ್ಲ. ನೀವು ಹೇಳಿದಂತೆ ಕೇಳಲು ಸಾಧ್ಯವಿಲ್ಲ’ ಎಂದುಬಿಟ್ಟ.

ಮೊದಲ ಸಲದ ವಿದೇಶಯಾತ್ರೆಯ ರೋಮಾಂಚನವೆಲ್ಲ ಜರ್ರನೆ ಇಳಿದು ಹೋಯಿತು. ನಾನು ಇನ್ನೂ ದೈನೇಸಿ ಮುಖಮುದ್ರೆ ಹೊತ್ತು, ‘ಸಾರ್, ದೊಡ್ಡ ಮನಸ್ಸು ಮಾಡಿ, ಹದಿನೈದು ದಿನಗಳೊಳಗೆ ನನಗೆ ಪಾಸ್ ಪೋರ್ಟ್ ಕೊಡಿಸುವ ಕೃಪೆ ಮಾಡಬೇಕು’ ಎಂದು ಅಂಗಲಾ ಚಿದೆ. ಆತ ಮತ್ತಷ್ಟು ತಾತ್ಸರದಿಂದ, ‘ನೋಡೋಣ, ಯಾವಾಗ ಆಗುತ್ತೋ, ಆವಾಗ ಬರುತ್ತೆ. ನೀವು ಹೇಳಿದ ದಿನದೊಳಗೆ ಕೊಡಲು ಸಾಧ್ಯವಿಲ್ಲ. ನನ್ನ ಟೈಮ್ ವೇಸ್ಟ್ ಮಾಡಬೇಡಿ, ನೀವು ಹೊರಡಬಹುದು’ ಎಂದು ಕರುಣೆಯಿಲ್ಲದ ಕಟುಕನಂತೆ ಗದರಿದ.

ನಾನು ಹ್ಯಾಪು ಮೋರೆಹಾಕಿಕೊಂಡು, ‘ಶಂಕರನಾರಾಯಣ ಕಾಪಾಡು’ ಎಂದು ದೇವರ ಮೇಲೆ ಭಾರ ಹಾಕಿ, ತಲೆ ಮೇಲೆ ಕೈ ಹೊತ್ತು, ಆ ಪಾಸ್ ಪೋರ್ಟ್ ಕಚೇರಿಯ ಮೆಟ್ಟಿಲುಗಳನ್ನು ಇಳಿದು ಬಂದೆ. ಬ್ರಿಟಿಷ್ ವೀಸಾಕ್ಕಾಗಿ ನಾನು ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದೆ. ಆ ದಿನಗಳಲ್ಲಿ ವೀಸಾಕ್ಕಾಗಿ ಚೆನ್ನೈಗೆ ಹೋಗಬೇಕಿತ್ತು. ಅಷ್ಟರೊಳಗೆ ಪಾಸ್ ಪೋರ್ಟ್ ಅನ್ನು ಗಿಟ್ಟಿಸಿಕೊಳ್ಳಲೇಬೇಕಿತ್ತು. ಆದರೆ ಆ ಪಾಸ್ ಪೋರ್ಟ್ ಅಧಿಕಾರಿ ಕಟುಕನ ಮನೆಯ ಕಾವಲುಗಾರನಂತೆ, ನಿರ್ದಾಕ್ಷಿಣ್ಯವಾಗಿ ‘ಸಾಧ್ಯವೇ ಇಲ್ಲ’ ಎಂದು ನನ್ನನ್ನು ಗುಡಿಸಿ ಹಾಕಿದ್ದ.

ನನ್ನ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಆ ಪಾಸ್ ಪೋರ್ಟ್ ಅಧಿಕಾರಿಗೆ ಬೇರೆಯವರ ಮೂಲಕ ಪ್ರಭಾವ ಬೀರುವ ವ್ಯರ್ಥ ಪ್ರಯತ್ನ ಮಾಡಿದೆ. ‘ಆ ಮನುಷ್ಯನ ಹತ್ತಿರ ಮಾತಾಡಿ ಪ್ರಯೋಜನವಿಲ್ಲ, ಮಹಾ ಸಿಡುಕ’ ಎಂದು ಎಲ್ಲರೂ ಹೇಳಿದರು. ಅಷ್ಟಾಗಿಯೂ ನಾನು ಬಡಪೆಟ್ಟಿಗೆ ಸುಮ್ಮನಾಗಲಿಲ್ಲ. ಮರುದಿನ ಪುನಃ ಪಾಸ್ ಪೋರ್ಟ್ ಅಧಿಕಾರಿ ಕೋಣೆ ಮುಂದೆ ಕೈಕಟ್ಟಿ ನಿಂತಿದ್ದೆ. ಆತ ನನ್ನ ನೋಡುತ್ತಲೇ, ‘ಇನ್ನೊಂದು ಸಲ ಇಲ್ಲಿ ನಿಂತರೆ ಈ ಜನ್ಮದಲ್ಲಿ ನಿನಗೆ ಪಾಸ್ ಪೋರ್ಟ್ ಕೊಡುವುದಿಲ್ಲ. ನಾನು ನಿನಗೊಬ್ಬನಿಗಾಗಿ ಕೆಲಸ ಮಾಡುತ್ತಿಲ್ಲ. ನಿನಗಿಂತ ತುರ್ತಾಗಿ ಪಾಸ್ ಪೋರ್ಟ್ ಬೇಕಿರುವವರು ಬಹಳ ಜನರಿದ್ದಾರೆ. ಕೊನೆ ಕ್ಷಣದಲ್ಲಿ ಬಂದು ನನ್ನ ಪ್ರಾಣ ತಿಂತೀರಿ. ನಿಮಗೆಲ್ಲ ಮ್ಯಾನರ್ಸ್ ಇಲ್ಲ.’ ಎಂದು ಎಗರಾಡಲಾರಂಭಿಸಿದ. ಆತ ಏನೇ ಬೈದರೂ ಸುಮ್ಮನೆ ಬೈಸಿಕೊಳ್ಳಬೇಕು ಎಂದು ಮೊದಲೇ ನಿರ್ಧರಿಸಿಯೇ ಅಲ್ಲಿಗೆ ಹೋಗಿದ್ದೆ.

ಆತ ಕಣ್ಣುಗಳಲ್ಲಿ ರಕ್ತ ಇಲ್ಲದ ಮನುಷ್ಯ. ಆತನ ಮುಂದೆ ಏನೇ ಮನವಿ ಮಾಡಿದರೂ ಪ್ರಯೋಜನವಿಲ್ಲ ಎಂದು ಎನಿಸಿತು. ಸುಂಕದವನ ಮುಂದೆ ಗೋಳು ಹೇಳಿಕೊಂಡಂತೆ. ಆತ ಎಲ್ಲ ಸಂವೇದನೆ ಕಳೆದುಕೊಂಡ ನಿರ್ಭಾವುಕ ಸರಕಾರಿ ಅಧಿಕಾರಿ. ಮಾರಿಜಾತ್ರೆಯಲ್ಲಿ ಕೋಣನ ಕಡಿಯುವವನಂತಿದ್ದ. ನನಗೆ ಪರಿಚಿತರಾದ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಕೃಷ್ಣಯ್ಯರ್ ಅವರಿಂದ ಫೋನ್ ಮಾಡಿಸಿದೆ. ಆತ ಅವರ ಹತ್ತಿರವೂ ಅಷ್ಟಲ್ಲದಿದ್ದರೂ, ಸ್ವಲ್ಪ ಗಡುಸಾಗಿಯೇ ಮಾತಾಡಿದ ಮತ್ತು ಅವರಿಗೂ ಯಾವ ಭರವಸೆಯನ್ನೂ ನೀಡಲಿಲ್ಲ.

‘ನಾನು ಹೇಳೋದನ್ನು ಹೇಳಿದ್ದೇನೆ, ಇನ್ನು ನಿಮ್ಮ ಅದೃಷ್ಟ’ ಎಂದುಬಿಟ್ಟರು ಕೃಷ್ಣಯ್ಯರ್. ನಾನು ಆಗ ಕೈಚೆಲ್ಲಿ ಕುಳಿತುಬಿಟ್ಟೆ. ಯಾವಾಗ ಬರುತ್ತದೋ, ಬರಲಿ ಎಂದು ಸುಮ್ಮನಾದೆ. ಅಷ್ಟಾದರೂ ಮನಸ್ಸು ಕೇಳಲಿಲ್ಲ. ಒಂದು ವಾರಬಿಟ್ಟು ಮತ್ತೆ ಅವನ ಕಚೇರಿ ಮುಂದೆ ಹೋಗಿ ಕೈಕಟ್ಟಿ ನಿಂತೆ. ಆತನ ಬೈಗುಳಗಳಿಗೆಲ್ಲ ಸಿದ್ಧನಾಗಿಯೇ, ಮನಸ್ಸನ್ನು ಕಗಿಸಿಕೊಂಡು, ‘ಸಾರ್, ದಯವಿಟ್ಟು ಈ ವಾರವೇ ಪಾಸ್ ಪೋರ್ಟ್ ಇಶ್ಯೂ ಮಾಡಿ’ ಎಂದು ಬೇಡಿಕೊಂಡೆ.

ನನ್ನನ್ನು ನೋಡುತ್ತ ಆತ ಮತ್ತಷ್ಟು ವ್ಯಗ್ರನಾಗಿಬಿಟ್ಟ. ‘ನಿನಗೆ ಯಾವ ಕಾರಣಕ್ಕೂ ಇನ್ನು ಒಂದು ವಾರದಲ್ಲಿ ಪಾಸ್ ಪೋರ್ಟ್ ಕೊಡೊಲ್ಲ, ಹೋಗು ನಡಿ’ ಎಂದು ಗದರಿದ. ಆಗ ನನ್ನಲ್ಲಿ ಯಾವ ಆಸೆಯೂ ಉಳಿದಿರಲಿಲ್ಲ. ಒಳಗೇ ಬಿಕ್ಕಳಿಸಿದೆ. ವಿದೇಶದಲ್ಲಿ ಓದಲು ಅಡ್ಮಿಷನ್  ಸಿಕ್ಕಿತ್ತು, ಸ್ಕಾಲರ್ ಶಿಪ್ ಕೂಡ ಸಿಕ್ಕಿತ್ತು. ಆದರೆ ಇಂಥ ಅಪೂರ್ವ ಅವಕಾಶವನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ವೇದನೆಯಾಯಿತು. ಯಾರ ಹತ್ತಿರ ಹೇಳಿದರೆ, ಕೆಲಸವಾಗಬಹುದು ಎಂದು ಮನಸ್ಸು ಅಹರ್ನಿಶಿ ಯೋಚಿಸುತ್ತಲೇ ಇತ್ತು.

‘ಕನ್ನಡ ಪ್ರಭ’ದ ಅಂದಿನ ಸಂಪಾದಕರಾದ ವೈಎನ್ಕೆ ಅವರ ಮುಂದೆ ನನ್ನ ಗೋಳಿನ ಕತೆಯನ್ನು ತೋಡಿಕೊಂಡೆ. ಅವರು ಆ ಅಧಿಕಾರಿಗೆ ಫೋನ್ ಮಾಡಿದರು. ವೈಎನ್ಕೆ ಅತಿವೇಗದ ಭಾಷೆ ಅವನಿಗೆ ಅರ್ಥವಾಗಿರಲಿಕ್ಕಿಲ್ಲ. ಆತ ಅವರ ಮಾತುಗಳನ್ನು ತುಂಡರಿಸುತ್ತಿದ್ದ. ಅವರು ‘ಇಂಡಿಯನ್ ಎಕ್ ಪ್ರೆಸ್’ ನ ವರದಿಗಾರನನ್ನು ಜತೆಯಾಗಿ ಮಾಡಿ ಕಳಿಸಿದರು. ಆತ ಮಾತಿಗೂ ಪಾಸ್ ಪೋರ್ಟ್ ಅಧಿಕಾರಿ ಹಿಡಿ
ಸೊಪ್ಪುಹಾಕಲಿಲ್ಲ. ಬೇರೆಯವರಿಗೆ ಈ ಜನ್ಮದಲ್ಲಿ ಸಹಾಯವನ್ನೇ ಮಾಡಬಾರದು ಎಂದು ಶಪಥ ಸ್ವೀಕರಿಸಿಯೇ ಆತ ಆ ಕುರ್ಚಿಯಲ್ಲಿ ಬಂದು ಕುಳಿತಿದ್ದಾನೆ ಎಂದೆನಿಸಿತು. ಆತ ಯಾರ ಆದೇಶ, ಮನವಿಗೂ ನಿಲುಕುತ್ತಿರಲಿಲ್ಲ.

ಎಲ್ಲರ ಮೇಲೂ ಗು… ರ್ರ್.. ಎಂದು ಮೇಲೆ ಬೀಳುತ್ತಿದ್ದ. ಈ ಮಧ್ಯೆ ನಾನು ಬ್ರಿಟಿಷ್ ವೀಸಾ ಕಚೇರಿಯನ್ನು ಸಂಪರ್ಕಿಸಿ, ಪಾಸ್ ಪೋರ್ಟ್ ಕ್ಲುಪ್ತ ಕಾಲದಲ್ಲಿ ಬರದಿದ್ದರೆ ಸಹಕರಿಸುವಂತೆ ವಿನಂತಿಸಿಕೊಂಡೆ. ಅದಕ್ಕೆ ಅವರು ಸಮ್ಮತಿಸಿದರು. ಒಂದೆರಡು ದಿನ ತಡವಾದರೂ
ಪರವಾಗಿಲ್ಲ ಎಂದಾಗ, ಹೋದ ಜೀವ ಮರಳಿ ಬಂದಿತು. ಅಂತೂ ‘ಬಸವನ ಹುಳು’ ಬಂತು. ಹದಿನೇಳನೇ ದಿನಕ್ಕೆ ಪಾಸ್ ಪೋರ್ಟ್ ಕೈಸೇರಿತು. ನಾನು ಮಾಡಿಕೊಂಡ ಯಾವ ಮನವಿಯೂ ಆ ಅಧಿಕಾರಿ ಮೇಲೆ ಕಿಂಚಿತ್ತೂ ಪರಿಣಾಮ ಬೀರಿರಲಿಲ್ಲ. ಆತ ಅತಿ ನಿಷ್ಕರುಣೆಯಿಂದ ವರ್ತಿಸಿದ್ದ. ಆತ ನನ್ನೊಂದಿಗೆ ಮಾತ್ರವಲ್ಲ, ಎಲ್ಲರ ಜತೆಯೂ ವರ್ತಿಸುವುದೇ ಹಾಗಿತ್ತು.

ಮೊದಲ ಬಾರಿಗೆ ಪಾಸ್ ಪೋರ್ಟ್ ಕಚೇರಿ ಅಂದರೆ ‘ವಧಾ ಸ್ಥಾನಕ್ಕಿಂತಲೂ ಕಡೆ’ ಎಂಬ ಭಾವನೆ ಗಟ್ಟಿಯಾಗಿ ಬೇರೂರುವಂತೆ ಮಾಡಿಬಿಟ್ಟಿದ್ದ! ನಂತರ ಸುಲಭವಾಗಿ ವೀಸಾ ಗಿಟ್ಟಿಸಿಕೊಂಡೆ ಮತ್ತು ನಿರ್ಧರಿತ ದಿನದಂದೇ ಲಂಡನ್‌ಗೆ ಹಾರಿದೆ. ಅದು ಬೇರೆ ಮಾತು. ಆದರೆ ಪಾಸ್ ಪೋರ್ಟ್ ಕಚೇರಿಯಲ್ಲಿ ಅನುಭವಿಸಿದ ಅವಮಾನ, ವೇದನೆ, ಹಿಂಸೆಯನ್ನು ಮಾತ್ರ ಜನ್ಮೇಪಿ ಮರೆಯಲಿಕ್ಕಿಲ್ಲ. ಕಾಲು ಶತಮಾನ ಸಂದರೂ ಆ ಅಽಕಾರಿ ನನ್ನ ಮನಸ್ಸಿನಲ್ಲಿ ಬ್ರಹ್ಮ ರಾಕ್ಷಸನಂತೆ ಕುಳಿತುಬಿಟ್ಟಿzನೆ. ಅಂದ ಹಾಗೆ ಆತನ ಹೆಸರು – ಪಿ.ಸಿ.ಸರ್ಕಾರ್ ! (ಮ್ಯಾಜಿಷಿಯನ್ ಪಿ.ಸಿ.ಸರ್ಕಾರ್ ಅಲ್ಲ..ಮ್ಯಾಜಿಷಿಯನ್ ಸರ್ಕಾರ್ ಆಗಿದ್ದರೆ ಕ್ಷಣ ಮಾತ್ರದಲ್ಲಿ ಚಮತ್ಕಾರ ಮಾಡಿ ಪಾಸ್ ಪೋರ್ಟ್ ಕೈಗಿಡುತ್ತಿದ್ದರು. ಈ ಸರ್ಕಾರ್ ಹಾಗಲ್ಲ, ಎಂಥದೇ ಚಮತ್ಕಾರಕ್ಕೂ ಜಗ್ಗದ, ತನ್ನದೇ ಸರ್ಕಾರ ಎಂದು ಭಾವಿಸಿದ್ದ
ಹೃದಯಹೀನ ಅಽಕಾರಿ) ಅಷ್ಟು ವರ್ಷಗಳ ಹಿಂದಿನ ಈ ಕೆಟ್ಟ ಘಟನೆ ನೆನಪಾಗಲು ಕಾರಣವಿದೆ.

ಮೊನ್ನೆ ಅವಧಿ ಮೀರಿದ ನನ್ನ ಪಾಸ್ ಪೋರ್ಟನ್ನು ನವೀಕರಿಸಲು ಬೆಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿಯಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಹೋಗಿz. ಹೊಸ್ತಿಲೊಳಲಗೆ ಕಾಲಿಡುತ್ತಿದ್ದಂತೆ ಒಂದು ಸಕಾರಾತ್ಮಕತೆಯ ತಂಗಾಳಿ ಮುಖಕ್ಕೆ ಸೋಕಿದಂತಾಯಿತು.
ಮಧ್ಯಾಹ್ನ ಮೂರು ಗಂಟೆಗೆ ನನಗೆ ಅಪಾಯಿಂಟ್ ಮೆಂಟ್  ಕೊಟ್ಟಿದ್ದರು. ನಾನು ಐದು ನಿಮಿಷ ಮುಂಚಿತವಾಗಿ ಅಲ್ಲಿ ಹಾಜರಿದ್ದೆ. ಸರಿಯಾಗಿ ಮೂರು ಗಂಟೆಗೆ ನನ್ನ ಹೆಸರನ್ನು ಕೂಗಿದರು. ನಾನು ಯಾವ ಡೆಸ್ಕಿಗೆ ಹೋಗಬೇಕು ಎಂಬುದು ಕಂಪ್ಯೂಟರ್ ಪರದೆ ಮೇಲೆ ಮೂಡಿತು. ನಾನು ಅಲ್ಲಿಗೆ ಹೋದೆ. ಅವರು ನನ್ನ ಹಳೆ ಪಾಸ್ ಪೋರ್ಟ್, ಆಧಾರ ಕಾರ್ಡ್, ಅಪಾಯಿಂಟ್ ಮೆಂಟ್ ಲೆಟರ್ ನೋಡಿದರು.
ಅಲ್ಲಿಯೇ ಒಂದು ಕ್ಸೆರಾಕ್ಸ್ ಪ್ರತಿ ತೆಗೆದುಕೊಂಡರು. ಎಲ್ಲ ಮಾಹಿತಿಯೂ ಪಕ್ಕಾ ಆಗಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡರು.

ಕಂಪ್ಯೂಟರ್‌ನಲ್ಲಿಯೇ ನನ್ನ ಫೋಟೋ ತೆಗೆದರು. ಜಂಬೋ (ಹೆಚ್ಚು ಪುಟಗಳಿರುವುದು) ಗಾತ್ರದ ಪಾಸ್ ಪೋರ್ಟ್ ಬುಕ್ ಬೇಕಿದ್ದರೆ ಮುನ್ನೂರು ರುಪಾಯಿ ಪಾವತಿಸುವಂತೆ ತಿಳಿಸಿದರು. ಅದಕ್ಕೆ ಲೆದರ್ ಕವರ್ ಬೇಕಿದ್ದರೆ ಹೆಚ್ಚುವರಿ, ಐನೂರು ರುಪಾಯಿ ಪಾವತಿಸುವಂತೆ
ತಿಳಿಸಿದರು. ಪಾಸ್ ಪೋರ್ಟ್ ಯಾವಾಗ ಬರುತ್ತದೆ, ಅದರ ಸ್ಥಿತಿ-ಗತಿ ವಿವರಗಳನ್ನೂ ಕಾಲಕಾಲಕ್ಕೆ ಎಸ್ಸೆಮ್ಮೆಸ್ ಮೂಲಕ ತಿಳಿಯಲು ಹೆಚ್ಚುವರಿ ಐವತ್ತು ರುಪಾಯಿ ನೀಡಲು ತಿಳಿಸಿದರು.

ಎಲ್ಲ ಹಣವನ್ನೂ ಪಾವತಿಸಿದ್ದಾಯಿತು. ಅದಾದ ಬಳಿಕ, ಪಾಸ್ ಪೋರ್ಟಿಗೆ ಸಂಬಂಧಪಟ್ಟ ದಾಖಲೆಗಳೆಲ್ಲವೂ ಸರಿಯಾಗಿವೆಯೇ ಎಂದು ಇನ್ನೊಂದು ಡೆಸ್ಕಿನಲ್ಲಿ ಪರಿಶೀಲಿಸಿದರು. ಮೂರನೇ ಡೆಸ್ಕಿನಲ್ಲಿ ಪಾಸ್ ಪೋರ್ಟಿನಲ್ಲಿ ನಮೂದಿಸಬೇಕಿರುವ ವಿವರಗಳೆಲ್ಲವೂ ಸರಿಯಾಗಿ ವೆಯೇ ಎಂದು ದೃಢಪಡಿಸಲು ಹೇಳಿದರು. ಎಲ್ಲವೂ ಸರಿಯಾಗಿವೆ ಎಂದು ಹೇಳಿದ ನಂತರ, ಇನ್ನು ಹೊರಡಬಹುದು ಎಂದರು. ಈ ಎಲ್ಲ ಪ್ರಕ್ರಿಯೆಗಳು ಕೇವಲ ಹತ್ತರಿಂದ ಹನ್ನೊಂದು ನಿಮಿಷಗಳಲ್ಲಿ ಮುಗಿದು ಹೋಯಿತು. ನಾನು ನನ್ನ ಕೆಲಸ ಮುಗಿಸಿ ಹನ್ನೆರಡನೇ ನಿಮಿಷ ದಲ್ಲಿ ನನ್ನ ಕಾರಿನಲ್ಲಿ ಕುಳಿತಿದ್ದೆ.

ನನಗೆ ಯಾವುದೋ ಬಹುರಾಷ್ಟ್ರೀಯ ಕಂಪನಿಗೆ ಹೋದ ಅನುಭವವಾಯಿತು. ದೇವರಾಣೆಗೂ, ಸರಕಾರಿ ಕಚೇರಿಗೆ ಹೋದ ಲವ-ಲೇಶದ ಅನುಭವವೂ ಆಗಲಿಲ್ಲ. ಇಡೀ ಕಚೇರಿಯಲ್ಲಿ ಶಾಂತ ವಾತಾವರಣ, ಎಲ್ಲರಲ್ಲೂ ನಗುಮೊಗ, ಹವಾನಿಯಂತ್ರಿತ ಪರಿಸರ, ಸ್ಪಷ್ಟ ಸಂದೇಶ-ಸೂಚನೆ, ಯಾರ ಬಳಿಯೂ ಕೈಕಟ್ಟಿ ನಿಲ್ಲಬೇಕಿಲ್ಲ, ಎಲ್ಲವೂ ಸುಸೂತ್ರ, ಸುರಳೀತ. ಕಾರಿನಲ್ಲಿ ಬಂದು ಕುಳಿತುಕೊಳ್ಳುತ್ತಿದ್ದಂತೆ, ನನ್ನ ಮೊಬೈಲ್ ‘ಕಣ’ ಎಂದು ಸದ್ದು ಮಾಡಿತು. ನೋಡಿದರೆ, ನಿಮ್ಮ ಪಾಸ್ ಪೋರ್ಟ್ ನವೀಕರಣ ಅರ್ಜಿಯ ಮಾಹಿತಿಗಳೆಲ್ಲ ಕರಾರುವ ಕ್ಕಾಗಿದೆ ಎಂಬ ಸಂದೇಶವದು. ಅದಾಗಿ ಹತ್ತು ನಿಮಿಷಕ್ಕೆ ನಿಮ್ಮ ನವೀಕೃತ ಪಾಸ್ ಪೋರ್ಟ ಅರ್ಜಿಯನ್ನು ಪರಿಶೀಲಿಸಲಾಗುತ್ತಿದೆ, ಮುಂದಿನ ಕ್ರಮಕ್ಕೆ ಕಳುಹಿಸಲಾಗಿದೆ ಎಂಬ ಎಸ್ಸೆಮ್ಮೆಸ್ ಬಂದಿತು. ಅದಾಗಿ ಎರಡು ತಾಸಿನ ಬಳಿಕ, ನಿಮ್ಮ ನವೀಕೃತ ಪಾಸ್ ಪೋರ್ಟ್ ಮುದ್ರಣಕ್ಕೆ ಹೋಗಿದೆ ಎಂಬ ಎಸ್ಸೆಮ್ಮೆಸ್ ಬಂತು.

ರಾತ್ರಿ ಹನ್ನೊಂದು ಗಂಟೆ ಹೊತ್ತಿಗೆ, ನವೀಕೃತ ಪಾಸ್ ಪೋರ್ಟ್ ಡೆಲಿವರಿಗೆ ಸಿದ್ಧವಾಗಿದೆ ಎಂಬುದು ಎಸ್ಸೆಮ್ಮೆಸ್‌ನಿಂದ ಗೊತ್ತಾಯಿತು. ಬೆಳಗ್ಗೆ ಆರು ಗಂಟೆಗೆ ಮೊಬೈಲ್ ನೋಡಿದರೆ, ಆರು ಮೆಸೇಜುಗಳು ಬಂದು ಕುಳಿತಿದ್ದವು. ಆ ಎಲ್ಲ ಮೆಸೇಜುಗಳಲ್ಲಿ ಪಾಸ್ ಪೋರ್ಟ್ ಆ ಹೊತ್ತಿನಲ್ಲಿ ಎಲ್ಲಿವೆ (Status) ಎಂಬ ಮಾಹಿತಿಯಿತ್ತು. ಎಂಟು ಗಂಟೆ ಹೊತ್ತಿಗೆ ಬಂದ ಮೆಸೇಜಿನಲ್ಲಿ ಕೊರಿಯರ್ ಸಂಸ್ಥೆಯ ವಿವರ, ಡೆಲಿವರಿ ಬಾಯ್ ಮೊಬೈಲ್ ವಿವರಗಳಿದ್ದವು. ಬೆಳಗ್ಗೆ ಹತ್ತು ಗಂಟೆ ಐವತ್ತಾರು ನಿಮಿಷಕ್ಕೆ ಮನೆಯ ಬೆಲ್ ಆಯಿತು. ಕೊರಿಯರ್ ಡೆಲಿವರಿ ಬಾಯ್ ಒಂದು ಕವರನ್ನು ಕೈಗಿತ್ತು ಸಹಿ ಹಾಕಿಸಿಕೊಂಡ.

ಅದನ್ನು ತೆರೆದರೆ ನವೀಕೃತ ಪಾಸ್ ಪೋರ್ಟ್! ನನ್ನ ಕಣ್ಣುಗಳನ್ನೇ ನಾನು ನಂಬದಾಗಿದ್ದೆ. ಆ ಕ್ಷಣದಲ್ಲಿ ನಾನು ನಿಜಕ್ಕೂ ಭಾರತದಲ್ಲಿಯೇ ಇದ್ದೇನಾ ಎಂಬ ಅನುಮಾನ ಬಂದಿದ್ದು ಸುಳ್ಳಲ್ಲ. ನವೀಕೃತ ಪಾಸ್ ಪೋರ್ಟಿಗೆ ಅರ್ಜಿ ಸಲ್ಲಿಸಿದ ಹದಿನೆಂಟು ಗಂಟೆಯೊಳಗೆ, ನನ್ನ ಮನೆಯ ಬಾಗಿಲಿಗೆ ಅದು ಬಂದಿತ್ತು! ಅಮೆರಿಕದಂತಹ ದೇಶದಲ್ಲೂ ಇದು ಸಾಧ್ಯವಿಲ್ಲವೇನೋ? ಆದರೆ, ಭಾರತದ ಪಾಸ್ ಪೋರ್ಟ್ ಸೇವಾ ಕೇಂದ್ರದದಲ್ಲಿ ಇದು ಸಾಧ್ಯವಾಗಿದ್ದು ನೋಡಿ ನಿಜಕ್ಕೂ ಆಶ್ಚರ್ಯವಾಯಿತು. ಇದಕ್ಕಿಂತ ವೇಗವಾಗಿ ಸರಕಾರೀ ಕಚೇರಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ಇದು ನನ್ನದೊಬ್ಬನ ಕಥೆ ಅಲ್ಲ, ಪಾಸ್ ಪೋರ್ಟ್ ಸೇವಾ ಕೇಂದ್ರ ಕಾರ್ಯನಿರ್ವಹಿಸುವುದೇ ಹೀಗಂತೆ.

ಆದರೆ ಅದು ನನಗೆ ಗೊತ್ತಿರಲಿಲ್ಲ. ಒಂದು ದಿನದೊಳಗೇ, ನಮ್ಮ ನಮ್ಮ ಮನೆಯ ಬಾಗಿಲಿಗೆ ಪಾಸ್ ಪೋರ್ಟ್‌ನಂಥ ಮಹತ್ವದ ದಾಖಲೆ ಯನ್ನು ತಲುಪಿಸುವುದು ಸಣ್ಣ ಕೆಲಸವಾ? ಒಂದು ಕ್ಷಣ ನಾನು ತೆರೆದ ಬಾಯಿಯನ್ನು ಮುಚ್ಚಿರಲಿಲ್ಲ. ಕಾರಣ ಆ ಮಧುರವಾದ ಆಘಾತದಿಂದ ನಾನು ಹೊರ ಬಂದಿರಲಿಲ್ಲ. ನನ್ನ ಸಂತಸ, ಸಮಾಧಾನವನ್ನು ತಿಳಿಸಲು ಪಾಸ್ ಪೋರ್ಟ್ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಿದೆ. ಈ ಪವಾಡ ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಅವರು ವಿವರಿಸಿದರು. ಪಾಸ್ ಪೋರ್ಟನ್ನು ಸ್ಥಳದಲ್ಲಿಯೇ (On
the spot) ಕೊಡುವುದು ಹೇಗೆ ಎಂಬ ಬಗ್ಗೆ ಯೋಚಿಸುತ್ತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಅದೂ  ಜಾರಿಗೆ ಬರುತ್ತದೆ ಎಂದು ಹೇಳಿದರು.
ಪಾಸ್ ಪೋರ್ಟ್ ಕೇಂದ್ರದಲ್ಲಿ ಈಗಿರುವ ನಮ್ಮ ನೆಲಮಂಗಲ ಮೂಲದ ಕನ್ನಡಿಗ ಐಎ-ಎಸ್ ಅಧಿಕಾರಿ ಕೃಷ್ಣ ಕೆ. ಅವರಂಥವರು ಮನಸು ಮಾಡಿದರೆ ತನ್ನಿಂದ ತಾನೇ ಇಂಥ ಅನೇಕ ಬದಲಾವಣೆಗಳು ಆಗುತ್ತವೆ ಎಂಬುದಕ್ಕೆ ಇದೇ ತಾಜಾ ನಿದರ್ಶನ. ಅಚ್ಛೇ ದಿನ್ ಅಂದ್ರೆ ಇದೇ ಅಲ್ಲವಾ?