Friday, 13th December 2024

ರಚ್ಚೆ ಜನಗಳ ಮಧ್ಯೆ ಮತ್ತೆ ಅಚ್ಛೇದಿನ್ ಬಂದೀತೇ ?

ಯಕ್ಷಪ್ರಶ್ನೆ

ತುರುವೇಕೆರೆ ಪ್ರಸಾದ್

‘ಕೊಟ್ಟ ಕುದುರೆಯ ಏರಲಾಗದವನು ಶೂರನೂ ಅಲ್ಲ, ಧೀರನೂ ಅಲ್ಲ’ ಎನ್ನುವ ಮಾತಿದೆ. ಮತದಾರ ಪ್ರಭು ಕೊಟ್ಟ ಕುದುರೆಯನ್ನು ನರೇಂದ್ರ ಮೋದಿ ಸತತವಾಗಿ ಮೂರನೇ ಬಾರಿ ಏರುವ ಮೂಲಕ ತಾವು ಧೀರ, ಶೂರ ಎಂಬುದನ್ನು ತೋರಿಸಿಕೊಡಲು ಸಿದ್ಧರಾಗಿದ್ದಾರೆ. ಈ ಕುದುರೆಯೇರಿ ಅವರು ತಾವಂದುಕೊಂಡಂತೆ ಅಶ್ವಮೇಧ ಯಾಗ ಮಾಡಲಾಗದಿದ್ದರೂ ದೇಶಮೇದು ಹೋಗುವ ಜನರನ್ನು ಅಧಿಕಾರದಿಂದ ದೂರವಿಡಲು, ಅವರೇ ಹೇಳಿ ಕೊಂಡಂತೆ ಚೌಕೀದಾರನ ಕೆಲಸ ಮಾಡಲು ಈ ಅಧಿಕಾರದ ಕುದುರೆ ಹತ್ತಿರುವುದು ಸರಿಯಾಗಿಯೇ ಇದೆ.

ಹಂಗಿನರಮನೆಯಲ್ಲಿದ್ದು ಇಂಗು ತೆಂಗು ಬೇಡಿದರೂ ಒಂದು ಒಳ್ಳೆಯ ಅಡುಗೆ ಮಾಡಿದ ಖುಷಿ, ಸಂತೃಪ್ತಿ ಖಂಡಿತಾ ಇರುತ್ತದೆ. ಇದೂ ಹಾಗೇ! ಎನ್‌ಡಿಎ
ಮಿತ್ರಪಕ್ಷಗಳ ಊರುಗೋಲು ಸಹಾಯದಿಂದಲೇ ಅಧಿಕಾರ ನಡೆಸಬೇಕಾದ ಹಂಗಿದ್ದರೂ ವಿರೋಧಿಗಳ ಲಂಗು-ಲಗಾಮು ಹಿಡಿದು ಜನಹಿತ ಕಾಯಲು ಇದು ಅತ್ಯವಶ್ಯವಾಗಿದೆ. ಏಕರೂಪ ನಾಗರಿಕ ಸಂಹಿತೆಯಂಥ ಬಿಜೆಪಿಯ ಹಲವಾರು ಮಹಾ ಸಂಕಲ್ಪಗಳನ್ನು ಸಾಧಿಸುವುದು ಒತ್ತಟ್ಟಿಗಿರಿಲಿ, ಅಗ್ನಿ
ವೀರ್‌ನಂಥ ಯೋಜನೆಗಳನ್ನು ಮರುಪರಿಶೀಲಿಸಿ ಎಂಬ ಆಗ್ರಹವೂ ಈಗಾಗಲೇ ಜೆಡಿಯುನಿಂದ ಬಂದಿದೆ.

ಈ ಹಿನ್ನೆಲೆಯಲ್ಲಿ ದಿನನಿತ್ಯದ ಆಡಳಿತವನ್ನು ಮೋದಿ ಸುಗಮವಾಗಿ ನಡೆಸಲಾದೀತೇ ಎನ್ನುವುದೇ ಒಂದು ದೊಡ್ಡ ಅನುಮಾನವಾಗಿ ಕಾಡುತ್ತಿದೆ. ಪಕ್ಷ ಪಕ್ಷಗಳ ನಡುವಿನ ಯಾವುದೇ ಮೈತ್ರಿಯಲ್ಲಿ ಅಧಿಕಾರದ ಲೋಭ, ಸ್ವಾರ್ಥ, ಲಾಲಸೆ ಇದ್ದೇ ಇರುತ್ತದೆ. ಇದಕ್ಕೆ ಯಾವ ಪಕ್ಷವೂ ಹೊರತಲ್ಲ. ಅದರಲ್ಲೂ ಈ ಅಧಿಕಾರ ಮತ್ತು ಸ್ವಾರ್ಥಸಾಧನೆಯ ಸ್ಥಿರತೆಯೂ ಮುಖ್ಯವಾಗುತ್ತದೆ. ಇಂಥ ಒಂದು ಸ್ಥಿರತೆ ‘ಇಂಡಿಯ’ ಮೈತ್ರಿಕೂಟಕ್ಕಿಂತ ಎನ್‌ಡಿಎ ಮೈತ್ರಿಕೂಟದ ಜತೆ ಹೋದರೆ ಹೆಚ್ಚು ಸಲೀಸು ಎಂಬುದನ್ನು ಅರಿಯಲಾರದಷ್ಟು ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ದಡ್ಡರಲ್ಲ. ಹಾಗಾಗಿಯೇ ಅವರು ಎನ್‌ಡಿಎಗೆ ತಮ್ಮ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೋದಿಯವರು ಎನ್‌ಡಿಎ ಮೈತ್ರಿಕೂಟದ ಮುಖ್ಯಸ್ಥರಾಗಿ ತಮ್ಮ ಪಕ್ಷ ಅಂದುಕೊಂಡ ಕಾರ್ಯಸೂಚಿಗಳನ್ನು ಜಾರಿಗೆ ತರಲಾಗದಿದ್ದರೂ ಮೈತ್ರಿಯ ಒಪ್ಪಿತ ಸಮಾನ ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತರಬಹುದು. ಆದರೆ ಮುಖ್ಯ ಸಮಸ್ಯೆ ಇರುವುದು ಇಂಥ ಕಾರ್ಯಕ್ರಮಗಳ ಕ್ಷಮತೆ ಎಷ್ಟರ
ಮಟ್ಟಿಗಿದೆ ಎಂಬುದನ್ನು ನಿರ್ಧರಿಸುವಲ್ಲಿ! ಇಂಥ ಕ್ಷಮತೆಗೆ ಸವಾಲಾಗಿ ನಿಲ್ಲುವುದೇ ಭ್ರಷ್ಟಾಚಾರ! ಮೂರನೇ ಅವಧಿಯಲ್ಲಿ ಮೋದಿಯವರಿಗೆ ಅತಿ ದೊಡ್ಡ ಸಮಸ್ಯೆ ಆಗಬಹುದಾದದ್ದು ಈ ಭ್ರಷ್ಟಾಚಾರವೆಂಬ ಪೆಡಂಭೂತವೇ! ಹಂಗಿನ ಆಡಳಿತ ನಡೆಸುವಾಗ ಮಿತಿ ಮೀರಿದ ಆದರ್ಶವನ್ನು ಹೇರಲು, ತಮ್ಮ ಪಕ್ಷದ ಸಿದ್ಧಾಂತಗಳ ಮೂಲಕ ಮಿತ್ರಪಕ್ಷಗಳ ಮೇಲೆ ಅಂಕುಶ ಹಾಕಲು ಸಾಧ್ಯವಿಲ್ಲ.

೧೦ ವರ್ಷಗಳ ಕಾಲ ಭ್ರಷ್ಟಾಚಾರದ ಕಳಂಕವಿಲ್ಲದೆ ಆಳಿರುವ ಮೋದಿ ಮುಂದೆ ಅಂಥದೇ ಒಂದು ಸ್ಚಚ್ಛ, ಪಾರದರ್ಶಕ ಆಡಳಿತ ಕೊಡಬಲ್ಲರೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ದೇಶ ಉದ್ಧಾರವಾಗಲಿ, ದೇಶಕ್ಕೆ ಆಡಳಿತಾತ್ಮಕ ಸ್ಥಿರತೆ ಸಿಗಲಿ ಎಂಬ ಘನ ಉದ್ದೇಶದಿಂದಷ್ಟೇ ಯಾವ ಪಕ್ಷವೂ ಮೈತ್ರಿಗೆ ಒಪ್ಪುವುದಿಲ್ಲ. ಅಂಥ ಒಂದು ಲೋಕೋತ್ತರವಾದ ಘನ ಉದ್ದೇಶ ವಿದ್ದಿದ್ದರೆ ತೆಲುಗುದೇಶಂ ಪಕ್ಷವು ವಿತ್ತ ಖಾತೆಯೂ ಸೇರಿ ಪ್ರಮುಖ ೪ ಖಾತೆ ಗಳಿಗೆ ಬೇಡಿಕೆ ಇಡುತ್ತಿರಲಿಲ್ಲ, ಕೃಷಿ, ಗ್ರಾಮೀಣಾಭಿವೃದ್ಧಿ, ಅಣುಶಕ್ತಿ ಮೊದಲಾದ ಮೂರು ಕ್ಯಾಬಿನೆಟ್ ಖಾತೆಗಳಿಗೆ ಜೆಡಿಯು ಒತ್ತಾಯ ಮಾಡುತ್ತಿರಲಿಲ್ಲ. ಇತರೆ ಪುಡಿ ಪಕ್ಷಗಳೂ ಸಿಕ್ಕ ಅವಕಾಶದ ದುರ್ಲಾಭ ಪಡೆಯುವಂತೆ ಪೈಪೋಟಿಗೆ ಬಿದ್ದು ಖಾತೆಗಳಿಗೆ ಒತ್ತಾಯಿಸುತ್ತಿರಲಿಲ್ಲ.

ಬರೀ ದೇಶಸೇವೆ ಮಾಡುವವರಿಗೆ ಯಾವ ಖಾತೆ ಆದರೇನು? ಅಥವಾ ಈಗಿದ್ದ ಮೋದಿ ಮಂತ್ರಿಮಂಡಲದ ಮಂತ್ರಿಗಳನ್ನು ಮೀರಿಸಿ ಸಾಧನೆ ಮಾಡಿ ದೇಶೋದ್ಧಾರ ಮಾಡುತ್ತಾರೆ ಎಂದರೆ ಯಾರು ನಂಬುತ್ತಾರೆ? ನಂಬಲು ಅಂಥ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿರ ಬೇಕಲ್ಲ? ತೆಲುಗುದೇಶಂ ಪಕ್ಷದ ಬಗ್ಗೆ ಹೇಳುವುದಾದರೆ ಅದೂ ಆಂಧ್ರ ದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನಡೆಸಿದೆ ಎಂದು ಹೇಳಲಾಗುವುದಿಲ್ಲ. ಸ್ವತಃ ಚಂದ್ರ ಬಾಬು ನಾಯ್ಡು ಅವರೇ ೩೭೧ ಕೋಟಿ ರು. ಸ್ಕಿಲ್ ಡೆವಲಪ್ ಮೆಂಟ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿತ್ತು. ಕೌಶಲ ಅಭಿವೃದ್ಧಿ ಯೋಜನೆ ಗಳಿಗೆ ಮೀಸಲಿಟ್ಟ ಕೋಟ್ಯಂತರ ರುಪಾಯಿ ಹಣವನ್ನು ಶೆಲ್ ಕಂಪನಿ ಗಳಿಗೆ ವರ್ಗಾಯಿಸಲಾಗಿತ್ತು ಎಂಬುದು ಮುಖ್ಯ ಆರೋಪ.

ಇದು ರಾಜಕೀಯ ಪ್ರೇರಿತ ಎಂದರೂ, ಈ ಹಗರಣದ ಕುರಿತು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಬೋಸ್ ಮತ್ತು ನ್ಯಾಯಮೂರ್ತಿ ತ್ರಿವೇದಿ ನಾಯ್ಡು, ನಾಯ್ಡು ಅವರ ಮೇಲೆ ಪಿಸಿ ಕಾಯಿದೆ ಜತೆಗೆ ಇತರೆ ಐಪಿಸಿ ಸೆಕ್ಷನ್‌ಗಳ ಆಧಾರದ ಮೇಲೂ ಆರೋಪ ಹೊರಿಸಿರುವುದರಿಂದ ಅವರ ಬಂಧನ ಸಕ್ರಮವಾಗಿದೆ ಎಂದು ಪ್ರತಿಪಾದಿಸಿದ್ದರು. ಈ ಪ್ರಕರಣ ಇನ್ನೂ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬಾಕಿ ಇದೆ.

ಇನ್ನು, ಹಿಂದೆ ತೆಲುಗುದೇಶಂನ ಶಾಸಕರಾಗಿದ್ದ ರೇವಂತ್ ರೆಡ್ಡಿ ಎಂಎಲ್‌ಸಿ ಚುನಾವಣೆಗೆ ಸಂಬಂಧಿಸಿದಂತೆ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂಬ ಆರೋಪದಡಿ ಸಿಕ್ಕಿಬಿದ್ದಿದ್ದರು. ತೆಲುಗು ದೇಶಂನ ಪೊನ್ನೂರಿನ ಶಾಸಕ ನರೇಂದ್ರ ಕುಮಾರ್ ಅವರನ್ನೂ ಈ ಹಿಂದೆ ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು. ಚುನಾವಣೆ ವೇಳೆ ಅವರು ನೀಡಿದ್ದ ಪ್ರಮಾಣಪತ್ರದ ಪ್ರಕಾರ ಅವರ ವಿರುದ್ಧ ೧೬ ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಯೆಲೂರಿ ಸಾಂಬಶಿವರಾವ್ ಅವರ ಮೇಲೂ, ಮತದಾರರಿಗೆ ಲಂಚ ನೀಡಿದರು ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿತ್ತು. ಇಬ್ಬರು ಟಿಡಿಪಿ ರಾಜಕಾರಣಿಗಳ ಮೇಲೆ ಕೇಂದ್ರೀಯ ತನಿಖಾ ದಳಗಳು ದೂರು ದಾಖಲಿಸಿದ್ದು, ಇದಕ್ಕೆ ಕೇಂದ್ರವೇ ಕಾರಣ ಎಂದು ಟಿಡಿಪಿ ದೂರಿತ್ತು.

ಇನ್ನು ಬಿಹಾರದ ನಿತೀಶ್ ಕುಮಾರ್ ಸಾಹೇಬರ ಬಗ್ಗೆ ಹೇಳುವಂತೆಯೇ ಇಲ್ಲ. ಅವರ ಜೆಡಿಯು ಪಕ್ಷ ಹಾಗೂ ಎನ್ ಡಿಎ ಒಕ್ಕೂಟದ ನಡುವಿನ ಕಣ್ಣಾ ಮುಚ್ಚಾಲೆ ಮೈತ್ರಿ ಈಗಾಗಲೇ ನಗೆಪಾಟಲಾಗಿದೆ. ೨೦೧೩ರಿಂದ ಈವರೆಗೆ ನರೇಂದ್ರ ಮೋದಿಯವರೊಂದಿಗೆ ಅವರ ಬಾಯಿ ಬಾಯಿ ಸಂಘರ್ಷ ಮುಂದು ವರಿದೇ ಇದೆ. ೨೦೧೩ರಲ್ಲಿ ಮೋದಿಯವರನ್ನು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ ಪಕ್ಷದ ಹಿರಿಯರಾದ ಆಡ್ವಾಣಿ ಅಂಥವರಿಗೆ ನಂಬಿಕೆದ್ರೋಹ ಮಾಡಿ ಮೂಲೆಗುಂಪು ಮಾಡಲಾಗಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿ ನಿತೀಶ್ ಎನ್‌ಡಿಎಯಿಂದ ದೂರವಾಗಿದ್ದರು.

೨೦೧೭ರಲ್ಲಿ ತಮ್ಮದೇ ರಾಜ್ಯದ ಮಹಾಘಟಬಂಧನದ ಉಪಮುಖ್ಯಮಂತ್ರಿ ತೇಜಸ್ವಿ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ ಅವರು ಮೈತ್ರಿಯಿಂದ ಹೊರಬಂದು ಎನ್‌ಡಿಎ ಬೆಂಬಲ ಪಡೆದಿದ್ದರು. ೨೦೨೨ರ ವಿಧಾನಸಭಾ ಚುನಾವಣೆಗಳ ನಂತರ ಬಿಜೆಪಿಯು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ
ಯೊಂದಿಗೆ ಸೇರಿ ಜೆಡಿಯು ಓಟಕ್ಕೆ, ವೋಟಿಗೆ ಕತ್ತರಿ ಹಾಕಿದೆ ಎಂದು ಆರೋಪಿಸಿ ಎನ್‌ಡಿಎಯಿಂದ ದೂರ ಸರಿದಿದ್ದರು ನಿತೀಶ್. ಆ ಚುನಾವಣೆಯಲ್ಲಿ ಜೆಡಿಯು ೨೮ ಸ್ಥಾನಗಳನ್ನು ಕಳೆದುಕೊಂಡಿತ್ತು. ಮತ್ತೆ ಈ ವರ್ಷದ ಜನವರಿಯಲ್ಲಿ ಅವರು ‘ಇಂಡಿಯ’ ಮೈತ್ರಿಕೂಟದಿಂದ ಹೊರಬಂದು ಎನ್‌ಡಿಎ
ಮೈತ್ರಿಕೂಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ತೇಜಸ್ವಿಯ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ ಎಂಬ ಕಾರಣಕ್ಕೆ ಮೈತ್ರಿ ಮುರಿದುಕೊಂಡ ನಿತೀಶ್ ಕುಮಾರ್ ಹಲವು ಭ್ರಷ್ಟಾಚಾರ ಆರೋಪಗಳಿದ್ದ ಮೇವಾಲಾಲ್ ಚೌಧುರಿ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸಿ ತೀವ್ರ ವಿವಾದಕ್ಕೆ ಗುರಿಯಾಗಿದ್ದರು
ಇನ್ನು ಬಿಜೆಪಿಯವರೇನೂ ಹದಿನಾರಾಣೆ ಸತ್ಯಹರಿಶ್ಚಂದ್ರರಲ್ಲ.

ಹಿಂದೊಮ್ಮೆ ಪಕ್ಷದ ಅಧ್ಯಕ್ಷರಾದ ಬಂಗಾರು ಲಕ್ಷ್ಮಣ್ ಅವರೇ ರಕ್ಷಣಾ ಒಪ್ಪಂದದ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದು ೪ ವರ್ಷ ಸೆರೆವಾಸ ಅನುಭವಿಸಿದ್ದರು.  ಜೆಪಿ ರಾಜ್ಯಭಾರ ಮಾಡುವ ರಾಜ್ಯಗಳಲ್ಲೂ ಭ್ರಷ್ಟಾಚಾರದ ಆರೋಪಗಳು ನಿರಂತರವಾಗಿಯೇ ಇದ್ದವು. ಬಿಜೆಪಿ ಪಾಲಿಗೆ ದಕ್ಷಿಣದ ಭಾಗ್ಯದ ಬಾಗಿಲು ಎನಿಸಿಕೊಂಡ ಕರ್ನಾಟಕದಲ್ಲೂ ಗಣಿ ಭ್ರಷ್ಟಾಚಾರದಿಂದ ಹಿಡಿದು ೪೦ ಪರ್ಸೆಂಟ್ ಕಮಿಷನ್‌ವರೆಗೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳು ಬಿಜೆಪಿ ಯನ್ನು ಎಡೆಬಿಡದೇ ಕಾಡಿದ್ದವು. ಕೋವಿಡ್ ನಿರ್ವಹಣೆಯಲ್ಲೂ ರಾಜ್ಯ ಎಡವಿದೆ ಎಂದು ಸಿಎಜಿ ವರದಿ ಆಕ್ಷೇಪಿಸಿತ್ತು.

ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ‘ಆಪರೇಷನ್ ಕಮಲ’ ನಡೆಯುವಾಗ ಎಷ್ಟು ಕೋಟಿಗಳು ಕೈ ಬದಲಾದವು ಎಂಬುದು ಅಮಿತ್ ಶಾ ಅವರಂಥ ಪಕ್ಷದ ವರಿಷ್ಠರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಇಂಥ ಅಪವಿತ್ರ ಅಽಕಾರ ಕಬಳಿಕೆಗೂ ಕೇಂದ್ರದ ವರಿಷ್ಠರು ಮೌನಮುದ್ರೆ ಒತ್ತಿ ಅಂಗೀಕರಿಸಿದ್ದರು. ಆದರೆ ಮೋದಿಯವರ ಹೆಗ್ಗಳಿಕೆ ಎಂದರೆ ಸ್ವತಃ ತಾವು ಮತ್ತು ತಮ್ಮ ಮಂತ್ರಿಮಂಡಲ ಸ್ವಚ್ಛವಾಗಿರುವಂತೆ ನೋಡಿಕೊಂಡಿದ್ದರು. ಯಾವುದೇ ಭ್ರಷ್ಟಾಚಾರದ ಆರೋಪ ಹತ್ತಿರ ಸುಳಿಯದಂತೆ ನಿಗಾ ವಹಿಸಿದ್ದರು. ಸಂಖ್ಯಾಬಾಹುಳ್ಯದ ದೃಷ್ಟಿಯಿಂದ ಅನುಕೂಲಕರ ಸ್ಥಿತಿಯಲ್ಲಿದ್ದ ಬಿಜೆಪಿ ಸದಸ್ಯರು ತಮ್ಮ ಸ್ಥಾನ ಪಲ್ಲಟವಾಗುವುದರ ಬಗ್ಗೆ ಹೆದರಿದ್ದರು. ಹಾಗಾಗಿ ಅವರ ಮೇಲೆ ನಿಯಂತ್ರಣ ಹೇರುವುದು, ಶಿಸ್ತಿನ ಕ್ರಮ ಜರುಗಿಸುವುದು ಸುಲಭವಾಗಿತ್ತು.

ಆದರೆ ಈಗ ಹಾಗಿಲ್ಲ, ಪ್ರತಿಯೊಬ್ಬ ಸದಸ್ಯನೂ ಬಿಜೆಪಿಗೆ ಹಾಗೂ ಮೈತ್ರಿ ಸರಕಾರಕ್ಕೆ ತೀರಾ ಅನಿವಾರ್ಯ. ಅಲ್ಲದೆ ಹೊರಗಿನವರಿಗೆ ಮಣೆ ಹಾಕಿ ಅಧಿಕಾರ, ಖಾತೆ ಕೊಟ್ಟಮೇಲೆ, ಅವರ ಮೇಲೆ ನಿಯಂತ್ರಣ ಸಾಧ್ಯವಿಲ್ಲದ ಮೇಲೆ ನಮ್ಮನ್ನೇನು ನಿಯಂತ್ರಿಸುವುದು ಎಂಬ ಧೋರಣೆ ಇದ್ದೇ ಇರುತ್ತದೆ.
ಹಾಗಾಗಿ ಬಿಜೆಪಿಯವರೂ ‘ಸಿಕ್ಕಷ್ಟೇ ಸೀರುಂಡೆ’ ಎಂಬ ಧೋರಣೆ ತಳೆದರೂ ಅಚ್ಚರಿಯೇನಿಲ್ಲ. ದೊಡ್ಡ ಪಾಲುದಾರ ಪಕ್ಷಗಳದ್ದೇ ಈ ಕತೆ ಎಂದ ಮೇಲೆ ಚಿಕ್ಕಪುಟ್ಟ ಪಾಳೇಗಾರರನ್ನು ಕೇಳುವವರು ಯಾರು? ಎಲ್ಲಾ ಅಧಿಕಾರಕ್ಕೆ ರಚ್ಚೆ ಹಿಡಿಯುವವರೇ! ಇಂಥ ರಚ್ಚೆ ಜನಗಳ ಮಧ್ಯೆ ಅಚ್ಛೇ ದಿನಗಳ ಕನಸು
ನನಸು ಮಾಡುವುದೇ ಮೋದಿ-೩ ರಾಜ್ಯಭಾರದ ಅತಿದೊಡ್ಡ ಸವಾಲು!

(ಲೇಖಕರು ಹವ್ಯಾಸಿ ಬರಹಗಾರರು)