Friday, 13th December 2024

ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿಯಾಗಲಿ

ವಾಣಿಜ್ಯ ವಿಭಾಗ

ಬೆಳ್ಳೆ ಚಂದ್ರಶೇಖರ ಶೆಟ್ಟಿ

ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮಾವಳಿಗೆ ತಿದ್ದುಪಡಿ ತಂದು, ಪೂರ್ಣ ಪ್ರಮಾಣದ ಕಾಯ್ದೆ ಯನ್ನು ಜಾರಿಗೊಳಿಸಿ, ಅದರ ಅನುಪಾಲನೆಯಾಗುವುದನ್ನು ಕಾರ್ಮಿಕ ಇಲಾಖೆ ಖಚಿತಪಡಿಸಿಕೊಳ್ಳಬೇಕು. ಈ ಬಗ್ಗೆ ಗೃಹ ಇಲಾಖೆಯೊಂದಿಗೂ ಚರ್ಚಿಸಿ ತುರ್ತುಕ್ರಮ ಕೈಗೊಳ್ಳಬೇಕು. ಹೀಗಾದಾಗ ಕಾಯ್ದೆಯನ್ನು ಅರ್ಥಪೂರ್ಣ ಗೊಳಿಸಿದಂತೆ ಆಗುತ್ತದೆ.

ಮುಖ್ಯ ವಿಷಯವನ್ನು ಪ್ರಸ್ತಾಪಿಸುವುದಕ್ಕೂ ಮೊದಲು ಎರಡು ಪ್ರಕರಣ ಗಳನ್ನು ನಿಮ್ಮ ಮುಂದಿಡಲು ಬಯಸುವೆ.
ಪ್ರಕರಣ ಒಂದು: ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ವಾಣಿಜ್ಯ ಸಂಸ್ಥೆಯೊಂದರ ಮಹಿಳಾ ಉದ್ಯೋಗಿಯು ಕಚೇರಿಗೆ ಬೆಳಗ್ಗೆ ಹೋದ ಸಮಯದಲ್ಲಿ ಆಗಂತುಕನೊಬ್ಬ ಅಲ್ಲಿಯೇ ಕಾದು ಕುಳಿತಿದ್ದು, ಆಕೆಯ ಮೇಲೆ ಆಸಿಡ್ ಎರಚಿ ಪರಾರಿಯಾಗುತ್ತಾನೆ (ಕಾರ್ಯಸ್ಥಾನದಲ್ಲಿ ಸುರಕ್ಷತೆಯ ವೈಫಲ್ಯ).

ಪ್ರಕರಣ ಎರಡು: ಜನಸಂದಣಿಯಿರುವ ನಗರದ ಆಹಾರ ಕೆಫೆಯೊಂದರಲ್ಲಿ ನೂರಾರು ಗಿರಾಕಿಗಳು ತುಂಬಿರುವಾಗಲೇ
ಆಗಂತುಕನೊಬ್ಬ ಅಲ್ಲೊಂದು ಕಡೆ ಅಪಾಯಕರ ಸ್ಫೋಟಕವನ್ನಿಟ್ಟು ಸ್ಫೋಟಿಸುತ್ತಾನೆ (ಭದ್ರತೆ ಮತ್ತು ಸುರಕ್ಷತೆಯ ಲೋಪಕ್ಕೆ ಸಿಬ್ಬಂದಿ ಮತ್ತು ಗಿರಾಕಿಗಳು ಬಲಿ) ಪ್ರಕರಣ ಮೂರು: ನಗರ ಸಂದರ್ಶನಕ್ಕಾಗಿ ಪ್ರವಾಸಿ ವೀಸಾದಲ್ಲಿ ಬಂದು, ಬೆಂಗಳೂರಿನ ಹೃದಯ ಭಾಗದಲ್ಲಿರುವ ಐಷಾರಾಮಿ ಹೋಟೆಲ್ ಒಂದರಲ್ಲಿ ಕೊಠಡಿ ಪಡೆದು ತಂಗಿದ್ದ ವಿದೇಶಿ ಮಹಿಳೆಯೊಬ್ಬಳನ್ನು, ಆ ಹೋಟೆಲ್‌ನ ಓರ್ವ ಸಿಬ್ಬಂದಿಯೇ ಕೊಲೆ ಮಾಡುತ್ತಾನೆ (ನೇಮಕಾತಿ ಪೂರ್ವದಲ್ಲಿ ಸಿಬ್ಬಂದಿಯ ನಡತೆಯ ಬಗೆಗಿನ ಮತ್ತು
ಕ್ರಿಮಿನಲ್ ಹಿನ್ನೆಲೆ ಇಲ್ಲದವರೆಂಬ ಬಗೆಗಿನ ದಾಖಲೆ ಪಡೆಯದಿರುವುದು).

ಮೇಲೆ ಉಲ್ಲೇಖಿಸಲಾಗಿರುವ ಮೂರೂ ಪ್ರಕರಣಗಳು ರಾಜ್ಯದ ರಾಜಧಾನಿಯಲ್ಲೇ ನಡೆದಿದ್ದು, ಅದು ಕಾನೂನು ಪಾಲನೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ತೀರಾ ಅಪಾಯಕಾರಿಯಾಗಿರುವುದಲ್ಲದೆ, ಬೆಂಗಳೂರು ನಗರಕ್ಕೆ, ಇಲ್ಲಿನ ಜನರ ಘನತೆ-ಗೌರವಕ್ಕ ಧಕ್ಕೆ ತರುವಂಥವಾಗಿವೆ. ಅದರಲ್ಲಿಯೂ ಕೈಗಾರಿಕೋದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವುದಲ್ಲದೆ, ಜನರ ಭದ್ರತೆ, ಸುರಕ್ಷತೆ ಮತ್ತು ಅತಿಥಿ ಸತ್ಕಾರಕ್ಕೆ ಉತ್ತಮ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರಿನಲ್ಲಿ, ಪ್ರವಾಸಿಯಾಗಿ ಬಂದಿದ್ದ ವಿದೇಶಿ ಮಹಿಳೆಯೊಬ್ಬಳ ಕೊಲೆಯು ಆಕೆ ತಂಗಿದ್ದ ಹೋಟೆಲ್‌ನ ಸಿಬ್ಬಂದಿಯಿಂದಲೇ ಆಗಿರುವುದು ರಾಜ್ಯದ ಪಾಲಿಗೆ ಎಂದೆಂದೂ ಮಾಸದ ಕಪ್ಪುಚುಕ್ಕೆ.

ಅಷ್ಟೇ ಅಲ್ಲ, ಬೆಂಗಳೂರಿಗೆ ಬರುವ ವಿದೇಶಿ ಪ್ರವಾಸಿಗರು ನಗರದಲ್ಲಿನ ಸುರಕ್ಷತೆಯ ಬಗ್ಗೆ ಎರಡೆರಡು ಸಲ ಯೋಚಿಸುವಂತೆ ಮಾಡಿದೆ ಈ ಪ್ರಕರಣ. ಇಂಥ ಪ್ರಸಂಗಗಳು ‘ಬ್ರ್ಯಾಂಡ್ ಬೆಂಗಳೂರು’ ಎಂಬ ಸರಕಾರದ ಘೋಷಣೆಗೆ ಹಿನ್ನಡೆ ಉಂಟು ಮಾಡು ವುದೂ ಉಂಟು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಸರಕಾರ ಸೂಕ್ತ ಚಿಂತನೆಗೆ ಒಡ್ಡಿಕೊಂಡು ಯಥೋಚಿತ ಕ್ರಮಗಳನ್ನು ಕೈಗೊಳ್ಳಬೇಕಿದೆ. ತನ್ಮೂಲಕ, ನಗರದ ಹೆಸರಿಗೆ ತಟ್ಟಿರುವ ಕಳಂಕವನ್ನು ತೊಡೆದು ಬೆಂಗಳೂರಿನ ವರ್ಚಸ್ಸನ್ನು ಮರುಸ್ಥಾಪಿಸ ಬೇಕಿದೆ.

ಈ ಸಂಬಂಧ, ಮೂಲಭೂತವಾಗಿ ನಮ್ಮ ರಾಜ್ಯದಲ್ಲಿರುವ ‘ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ೧೯೬೧’ರ ನಿಯಮಾವಳಿಗೆ ಸೂಕ್ತ ತಿದ್ದುಪಡಿ ತರಬೇಕು. ಕೇರಳ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಮೊದಲಾದ ನಮ್ಮ ನೆರೆರಾಜ್ಯಗಳಲ್ಲಿ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮಾವಳಿಗೆ ಅನ್ವಯವಾಗುವ ಕಾಯ್ದೆಯಲ್ಲಿ, ಆರೋಗ್ಯ ಮತ್ತು ಸುರಕ್ಷತೆ ಬಗ್ಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಆದರೆ, ಅತಿಮುಖ್ಯವಾದ ಈ ಅಧ್ಯಾಯ ಅಥವಾ ವಿಷಯ ನಮ್ಮ ರಾಜ್ಯದ
ಕಾಯ್ದೆಯಲ್ಲಿ ಮಾತ್ರ ಇಲ್ಲದಿರುವುದು ಅಚ್ಚರಿದಾಯಕ ಸಂಗತಿ. ಆದ್ದರಿಂದ ಇಂಥ ಒಂದು ಅಧ್ಯಾಯವನ್ನು ಅನುಪಾಲನೆಗಾಗಿ ಕಾಯ್ದೆಗೆ ಸೇರಿಸಬೇಕು.

೧೦ ಅಥವಾ ೨೦ರಷ್ಟು ನೌಕರರನ್ನು ಒಳಗೊಂಡಿರುವ ಪ್ರತಿ ಅಂಗಡಿ, ಹೋಟೆಲ್ ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಷರತ್ತುಗಳ ಪಾಲನೆಯಲ್ಲದೆ, ನೌಕರರು ಮತ್ತು ತಮ್ಮಲ್ಲಿಗೆ ಬರುವ ಗಿರಾಕಿಗಳು ಹಾಗೂ ಅತಿಥಿಗಳ ಸುರಕ್ಷತೆಯ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ಅಂದರೆ, ಸಿಸಿಟಿವಿ ಕ್ಯಾಮರಾ ಅಳವಡಿಸುವಿಕೆ, ಖನಿಜ- ಸ್ಫೋಟಕಾಂಶ ಶೋಧಕದಂಥ ಪರೀಕ್ಷಾ ಸಾಧನಗಳನ್ನು ಅಳವಡಿಸುವಿಕೆ ಹಾಗೂ ಈ ಸಂಬಂಧವಾಗಿ ಆಧುನಿಕ ಭದ್ರತಾ ವ್ಯವಸ್ಥೆಯನ್ನು ಹೊಂದುವಿಕೆ ಇವೆಲ್ಲವನ್ನೂ ನಿಗದಿಗೊಳಿಸುವ ತಿದ್ದುಪಡಿಗಳನ್ನು ತರಬೇಕು. ಈ ಷರತ್ತುಗಳನ್ನು ಸ್ಥಳೀಯ ನೋಂದಣಿ ಸಂಸ್ಥೆಗಳು ವಿಧಿಸಿ ದಂತೆ ಹಲವು ವಸತಿ ಗೃಹಗಳಲ್ಲಿ ಪಾಲಿಸಲಾಗುತ್ತಿದೆಯಾದರೂ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಇವನ್ನು ಪಾಲಿಸುವ ಬದ್ಧತೆ ಕಾಣಬರುವುದಿಲ್ಲ (ಮೇಲೆ ಉಲ್ಲೇಖಿಸಿರುವ ಪ್ರಸಂಗ-೨ರ ನಂತರ ಕೆಲವರು ಇದನ್ನು ಪಾಲಿಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ; ಈ ಘಟನೆಯ ನಂತರ ಪೊಲೀಸ್ ಇಲಾಖೆಯಿಂದಲೂ ಈ ಷರತ್ತುಗಳನ್ನು ಪಾಲಿಸುವ ಕುರಿತು
ಸೂಚನೆ ಹೊಮ್ಮಿರುವ ಬಗ್ಗೆ ವರದಿಯಿದೆ).

ಇನ್ನು, ಸಂಸ್ಥೆಯೊಳಗಿನ ಕ್ರಿಮಿನಲ್ ಸ್ವಭಾವದ ನೌಕರರ ಬಗ್ಗೆಯೂ ಎಚ್ಚರಿಕೆ ಅಗತ್ಯ. ನೌಕರರನ್ನು ನೇಮಕ ಮಾಡಿಕೊಳ್ಳು ವಾಗ, ಮಾಲೀಕರು ಅಥವಾ ಗುತ್ತಿಗೆದಾರರು ಪಾಲಿಸಬೇಕಾದ ಷರತ್ತುಗಳು ಸದ್ಯಕ್ಕೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯ ವ್ಯಾಪ್ತಿಗೆ ಬರಲಾರದು. ಆದರೆ, ನೆರೆಯ ರಾಜ್ಯಗಳ ಕಾಯ್ದೆಯಲ್ಲಿ, ವೇತನ ಪಾವತಿ, ಕನಿಷ್ಠ ವೇತನ, ನೌಕರರ ನಷ್ಟ ಪರಿಹಾರ ಮೊದಲಾದ ಅಂಶಗಳನ್ನು ಅಳವಡಿಸಿದಂತೆ, ಅಂತಾರಾಜ್ಯ ವಲಸೆ ನೌಕರರ ಸೇವಾ ಕಾಯ್ದೆ ನಿಯಮಾವಳಿ ೧೯೮೧ ಕ್ಕೂ ಬದಲಾವಣೆ ಮಾಡಿ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆಯಡಿ ತಂದು ತಿದ್ದುಪಡಿ ತರಬೇಕು.

ನಿಜ ಹೇಳಬೇಕೆಂದರೆ, ಬೇರೆ ಬೇರೆ ರಾಜ್ಯಗಳಿಂದ ಬರುವ ವಲಸೆ ನೌಕರರಿಗೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರದಿಂದ ಜಾರಿಗೊಳಿಸಲಾಗಿರುವ ಈ ವಲಸೆ ಕಾಯ್ದೆಯು ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರಸ್ತುತವೆಂದು ಕಂಡು ಬರುವುದಿಲ್ಲ. ಇದು ಭಾಗಶಃ ಅಸಾಂವಿಧಾನಿಕವೆಂದು ಪರಿಗಣಿಸುವ ರೀತಿಯಲ್ಲಿದೆ. ಇದು ಹೊರರಾಜ್ಯದಿಂದ ತರಲಾಗುವ ಕೆಲಸಗಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತದೆ. ರಾಜ್ಯದ ೨೦-೫೦ ಕಿ.ಮೀ. ದೂರದ ರಾಜ್ಯದ ಗಡಿಭಾಗದಿಂದ (ಹೊಸೂರು, ಅನಂತ ಪುರ, ಕುಂಬಳೆ ಇತ್ಯಾದಿ) ಬರುವ ನೌಕರರಿಗೆ ಹೆಚ್ಚಿನ ಸೌಲಭ್ಯವಿದ್ದರೆ, ರಾಜ್ಯದೊಳಗೇ ಒಂದು  ಪ್ರದೇಶ ದಿಂದ ಮತ್ತೊಂದು ಊರಿಗೆ ೫೦೦-೭೦೦ ಕಿ.ಮೀ. ದೂರದಿಂದ (ಬೀದರ್‌ನಿಂದ ಮಡಿಕೇರಿಗೆ, ಕಲಬುರ್ಗಿಯಿಂದ ಬೆಂಗಳೂರಿಗೆ ಇತ್ಯಾದಿ) ಕೆಲಸಕ್ಕಾಗಿ ಬರುವ ನೌಕರರಿಗೆ ಈ ಸೌಲಭ್ಯವಿಲ್ಲ.

ಅಷ್ಟರಮಟ್ಟಿಗೆ ಈ ಕಾಯ್ದೆಯು ಅಸಮಾನತೆಯನ್ನು ಹುಟ್ಟುಹಾಕಿದೆ ಎನ್ನಬಹುದು. ಅಂತಾರಾಜ್ಯ ವಲಸೆ ನೌಕರರನ್ನು ನೇಮಕ ಮಾಡುವಾಗ, ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕೆಲವಷ್ಟು ಷರತ್ತುಗಳನ್ನು ರೂಪಿಸಬೇಕು. ಪ್ರಸ್ತುತ ಈ ಬಗ್ಗೆ ಯಾವುದೇ
ಷರತ್ತುಗಳು ಇಲ್ಲದಿರುವುದರಿಂದ, ಅಂಥ ನೌಕರರ ಚಾರಿತ್ರ್ಯ, ಅಪರಾಽಕ ಹಿನ್ನೆಲೆ, ನಡತೆಯ ಬಗ್ಗೆ ದಾಖಲೆಗಳು ಅವಶ್ಯವಿಲ್ಲ. ವಿಚಿತ್ರವೆಂದರೆ, ಸಾಮಾನ್ಯವಾಗಿ ಗುತ್ತಿಗೆ ದಾರರ ಮೂಲಕವೇ ನೇಮಕಾತಿ ಹೊಂದುವ ಇವರು ಬೇರೆ ಬೇರೆ ರಾಜ್ಯದವರಾಗಿ ದ್ದರೂ, ಬೆಂಗಳೂರಿನ ಅಥವಾ ರಾಜ್ಯದಲ್ಲಿ ಕೆಲಸ ಮಾಡುವ ಊರಿನ ನಿವಾಸಿಗಳು ತಾವೆಂದು ಅವರೆಲ್ಲರೂ ವಿಳಾಸದ ದಾಖಲೆ ಯನ್ನು ಸಲ್ಲಿಸುತ್ತಾರೆ.

ಇದರಿಂದಾಗಿ ತಕ್ಷಣಕ್ಕೆ ಗುತ್ತಿಗೆದಾರರು ಮತ್ತು ಮಾಲೀಕರು ಕಾಯ್ದೆಯಡಿಯಲ್ಲಿನ ಬದ್ಧತೆಯ ನೋಂದಣಿ, ಪರವಾನಗಿ, ಹೆಚ್ಚಿನ ಸೌಲಭ್ಯ ನೀಡುವ ವಿಷಯದಲ್ಲಿ ಪಾರಾದರೂ, ಮೇಲೆ ಉಲ್ಲೇಖಿಸಲಾಗಿರುವ ವಿದೇಶಿ ಮಹಿಳೆಯ ಪ್ರಕರಣದಲ್ಲಿ ಗುತ್ತಿಗೆದಾರನಿಗೆ, ಮಾಲೀಕರಿಗೆ ಮತ್ತು ರಾಜ್ಯಕ್ಕೆ ಆಗಿರುವ ಹಾನಿ ಅಪಾರ. ನಗರದ ಬಹುತೇಕ ಅಂಗಡಿ, ವಾಣಿಜ್ಯ ಸಂಸ್ಥೆ, ಅಪಾಟ್ ಮೆಂಟ್ ಮೊದಲಾದವುಗಳಲ್ಲಿ ವರದಿಯಾಗುತ್ತಿರುವ ಕೊಲೆ, ಕಳವು ಮೊದಲಾದ ದುಷ್ಕೃತ್ಯಗಳನ್ನು ಎಸಗಿ ಪರಾರಿ ಆಗುವವರು, ಹೊರ ಗಿನ ರಾಜ್ಯಗಳಿಂದ, ಅದರಲ್ಲಿಯೂ ಉತ್ತರದ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರೇ ಎಂಬು ದಕ್ಕೆ ಸಾಕಷ್ಟು ಪುರಾವೆಗಳಿವೆ. ನಗರದ ಐಷಾರಾಮಿ ಹೋಟೆಲ್‌ನಲ್ಲಿಯ ವಿದೇಶಿ ಮಹಿಳೆಯನ್ನು ಕೊಲೆಗೈದ ಸಿಬ್ಬಂದಿಯೂ ಅಸ್ಸಾಂ ರಾಜ್ಯದವನು ಎಂಬುದು ಗಮನಿಸ ಬೇಕಾದ ಅಂಶ.

ಆದ್ದರಿಂದ ನಮ್ಮ ರಾಜ್ಯ ಇನ್ನಾದರೂ ಜಾಗೃತಗೊಳ್ಳಬೇಕಿದೆ. ಯಥೋಚಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ರಾಜ್ಯದ ಮತ್ತು ಬ್ರ್ಯಾಂಡ್ ಬೆಂಗಳೂರಿನ ಗೌರವ ಹಾಗೂ ವರ್ಚಸ್ಸನ್ನು ಕಾಪಾಡಬೇಕಾದ ಅಗತ್ಯವಿದೆ. ಹಾಗಾಗಿ, ಅಂತಾರಾಜ್ಯ ಕೆಲಸ ಗಾರರ ನೇಮಕಾತಿ ವಿಷಯದಲ್ಲಿ, ಒಬ್ಬನೇ ನೌಕರ ಇದ್ದರೂ (ಪ್ರಸಕ್ತ ಕಾಯ್ದೆಯಲ್ಲಿ ೫ ಅಥವಾ ಹೆಚ್ಚಿನ ಸಂಖ್ಯೆಯ ನೌಕರರಿದ್ದರೆ ಅನ್ವಯಿಸುತ್ತದೆ), ಅವರ ಪೂರ್ವಾಪರ ದಾಖಲೆ ಪಡೆದು ಖಾತ್ರಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು. ‘ಖಾಸಗಿ ಭದ್ರತಾ ಏಜೆನ್ಸಿಗಳ ನಿಯಂತ್ರಣ ಕಾಯ್ದೆ, ೨೦೦೫’ರ ಅಡಿಯಲ್ಲಿರುವಂತೆ, ಪ್ರತಿ ನೌಕರನ ನಡತೆ, ವಾಸಸ್ಥಾನದ ಪುರಾವೆ ಮತ್ತು ಆತನ ಪ್ರದೇಶದ ವ್ಯಾಪ್ತಿಯ ಪೊಲೀಸ್ ಪ್ರಾಧಿಕಾರದಿಂದ ನೀಡಲಾದ ‘ಯಾವುದೇ ಕ್ರಿಮಿನಲ್ ಕೃತ್ಯದಲ್ಲಿ ಈತ ಭಾಗಿಯಾಗಿಲ್ಲ’ ಎಂಬ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಬೇಕು ಹಾಗೂ ನೌಕರರು ಸಲ್ಲಿಸುವ ಎಲ್ಲ ದಾಖಲೆ ಪತ್ರಗಳ ಸೇವಾಪೂರ್ವ ಪರಿಶೀಲನೆ ಕೈಗೊಳ್ಳುವುದನ್ನೂ ಕಡ್ಡಾಯಗೊಳಿಸಬೇಕು.

ಮೇಲೆ ಉಲ್ಲೇಖಿಸಿರುವಂತೆ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮಾವಳಿಗೆ ತಿದ್ದುಪಡಿ ತಂದು, ಪೂರ್ಣ ಪ್ರಮಾಣದ ಕಾಯ್ದೆಯನ್ನು ಜಾರಿಗೊಳಿಸಿ, ಅದರ ಅನುಪಾಲನೆಯಾಗುವುದನ್ನು ಕಾರ್ಮಿಕ ಇಲಾಖೆಯು ಖಚಿತಪಡಿಸಿ ಕೊಳ್ಳಬೇಕು. ಈ ಬಗ್ಗೆ ಗೃಹ ಇಲಾಖೆಯೊಂದಿಗೂ ಉನ್ನತ ಮಟ್ಟದಲ್ಲಿ ಸೂಕ್ತವಾಗಿ ಚರ್ಚಿಸಿ, ತುರ್ತು ಕ್ರಮ ಕೈಗೊಳ್ಳಬೇಕು. ಹೀಗೆ ಮಾಡುವುದರಿಂದ ಕಾಯ್ದೆಯನ್ನು ಅರ್ಥಪೂರ್ಣಗೊಳಿಸಿದಂತೆ ಆಗುತ್ತದೆ. ಜತೆಗೆ, ಅಂಗಡಿ ಮತ್ತು ಸಂಸ್ಥೆಗಳ ನೌಕರರ ಆರೋಗ್ಯ ಹಾಗೂ ಸುರಕ್ಷತೆ ಮಾತ್ರವಲ್ಲದೆ, ಅಲ್ಲಿಗೆ ಭೇಟಿ ನೀಡುವ ಜನರ ಸುರಕ್ಷತೆಯನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಿ ದಂತಾಗುತ್ತದೆ. ತನ್ಮೂಲಕ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಗೂ ನ್ಯಾಯ ಸಲ್ಲಿಸಿದಂತಾಗುತ್ತದೆ. ಈ ವಿಷಯದಲ್ಲಿ ರಾಜ್ಯ ಕಾರ್ಮಿಕ ಮತ್ತು ಕಾನೂನು ಇಲಾಖೆಯು ಸಂಬಂಧಿಸಿದ ಭಾಗೀದಾರರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪ್ರವೃತ್ತ ವಾಗುವ ಅವಶ್ಯಕತೆಯಿದೆ.

(ಲೇಖಕರು ವಾಣಿಜ್ಯ ವಿಷಯಗಳ ವಿಶ್ಲೇಷಕರು)