Friday, 13th December 2024

ಇಷ್ಟ, ರುಚಿಗಳೆಲ್ಲ ವ್ಯಕ್ತಿತ್ವ ಸೂಚಕಗಳಲ್ಲ

ಶಿಶಿರ ಕಾಲ

ಶಿಶಿರ್‌ ಹೆಗಡೆ, ಚಿಕಾಗೋ

shishirh@gmail.com

ಸಾಮಾನ್ಯವಾಗಿ ಮಕ್ಕಳ ಜತೆ ಒಂದೆರಡು ಸಂಭಾಷಣೆಯಾದ ತಕ್ಷಣ ನಮ್ಮಲ್ಲಿರುವ ‘ಉಪದೇಶಕ’ ಜಾಗೃತವಾಗಿಬಿಡುತ್ತಾನೆ. ಅದು ಸರಿ, ಇದು ತಪ್ಪು, ಹಾಗೆ ಮಾಡಬೇಕಿತ್ತು, ಹೀಗೆ ಮಾಡಬಾರದಿತ್ತು ಎಂದೆಲ್ಲ ಪಾಠ ಹೇಳಲು ಶುರು ಮಾಡಿಬಿಡುತ್ತೇವೆ.

ಹೀಗಾದಾಗಲೆಲ್ಲ ನಮ್ಮ ಈ ಉಪದೇಶದ ತುರಿಕೆಯಿಂದಾಗಿ ಅಂದು ಸಂಭಾವ್ಯ ಸುಂದರ ಸಂಭಾಷಣೆ ಅರ್ಧಕ್ಕೆ ನಿಂತು ಬಿಡುತ್ತದೆ. ಮಕ್ಕಳ ಜತೆ ಸಂಭಾ ಷಿಸುವಾಗ ಅವರ ಒಂದಿಷ್ಟು ಪ್ರಶ್ನೆಗಳಿಗೆ ಅವಕಾಶ ಕೊಡಬೇಕು. ಅಂತೆಯೇ ಕೆಲವೊಂದು ತೀರಾ ಸಾಮಾನ್ಯ ಪ್ರಶ್ನೆ ಗಳನ್ನು ಅವರ ಮುಂದಿಡಬೇಕು.
ಅವರ ಅನಿಸಿಕೆ, ಅವರು ಜಗತ್ತನ್ನು ನೋಡುವ, ಗ್ರಹಿಸುವ ರೀತಿ ಇವನ್ನೆಲ್ಲ ಆಸಕ್ತಿಯಿಂದ ಕೇಳಬೇಕು. ಆಗ ಅವರಬ್ಬ ಚಿಕಿತ್ಸಕ ಕಾಣಿಸಿಕೊಳ್ಳುತ್ತಾನೆ. ಮಕ್ಕಳಿಗೆ ಕಲಿಸುವ ಸಂಭಾಷಣೆ ಗಿಂತ ಅವರಿಂದ ಕಲಿಯುವ ನಿಟ್ಟಿ ನಲ್ಲಿ ಆಡುವ ಸಂಭಾಷಣೆ ಬಹಳ ಅದ್ಭುತ ಅನುಭವ. ಮಕ್ಕಳ ಜತೆ ಮಾತಿಗೆ ನಿಂತಾಗ ಕೆಲ ತೀರಾ ಸರಳ ಪ್ರಶ್ನೆ ಗಳು ನಮ್ಮನ್ನು ಯೋಚನೆಗೆ ಹಚ್ಚಿಸಿಬಿಡಬಲ್ಲವು.

ಮಕ್ಕಳಲ್ಲವೇ, ಏನೋ ಒಂದು ಹೇಳುತ್ತವೆ – ಅವಕ್ಕೇನು ಗೊತ್ತು ಎನ್ನುವ ತಾತ್ಸಾರವಿದ್ದರೆ ಎಂದಿಗೂ ಅವರ ಪ್ರಪಂಚ, ಹಿಂದೊಮ್ಮೆ ನಮ್ಮದೇ ಆದ ಪ್ರಪಂಚವಾಗಿದ್ದರೂ ಅದರ ಆಚೀಚೆ ಅರ್ಥವಾಗುವುದಿಲ್ಲ. ಅಂದು ಜನರೇ ಷನ್ ಗ್ಯಾಪ್ ಹುಟ್ಟಿಬಿಡುತ್ತದೆ. ಮಕ್ಕಳ ಲೋಕವೇ ಬೇರೆ. ಅಲ್ಲಿ ಅವರಿಗೆ ಏಳುವ ಕೆಲವು ಮೂಲಭೂತ ಪ್ರಶ್ನೆ ಕೆದಕುತ್ತ ಹೋದಲ್ಲಿ ಅಲ್ಲಿ ನಮ್ಮ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ.

ಸಾಮಾನ್ಯವಾಗಿ ಮಕ್ಕಳ ಸಂಭಾಷಣೆ ಅವರ ಇಷ್ಟದ ಸುತ್ತಲೇ ಇರುತ್ತದೆ. ಇಷ್ಟವಾದ ಬಣ್ಣ ಯಾವುದು, ಇಷ್ಟವಾದ ಆಹಾರ ಯಾವುದು, ಯಾರು ಇಷ್ಟ, ಇಷ್ಟದ ಕಾರ್ಟೂನ್ ಕ್ಯಾರೆಕ್ಟರ್ ಯಾವುದು ಹೀಗೆ. ನಾವು ಈ ಪ್ರಶ್ನೆ ಬಂದಾಗಲೆಲ್ಲ ನಿನಗೆ ಅಪ್ಪ ಇಷ್ಟಾನೋ, ಅಮ್ಮ ಇಷ್ಟಾನೋ ಎಂದು ಕೇಳಿ ಅವರನ್ನು ದ್ವಂದ್ವಕ್ಕೆ ದೂಡಿ ಖುಷಿಪಡುತ್ತೇವೆ, ಉತ್ತರಿಸ ಬೇಕೆಂದು ಕೆಣಕುತ್ತೇವೆ. ಮಗು ಇಬ್ಬರಬ್ಬರು ಎಂದು ಉತ್ತರಿಸಿದರೆ ಏಕೆ ಎಂದು ದುಂಬಾಲು ಬೀಳುತ್ತೇವೆ. ಮೊನ್ನೆ ಏಳುವರ್ಷದ ಮಗಳ ಜತೆ ಮಾತನಾಡುವಾಗ ನನ್ನ ಇಷ್ಟದ ಬಣ್ಣ ಯಾವುದು ಎಂಬ ಪ್ರಶ್ನೆ ಮುಂದಿಟ್ಟಳು. ಸುಮ್ಮನೆ ಜಾಸ್ತಿ ವಿಚಾರ ಮಾಡದೆ ಕೇಸರಿ ಎಂದೆ. ಕೇಸರಿ ಇಷ್ಟವಾದರೆ ನಿನ್ನ ಹತ್ತಿರ ಕೇಸರಿ ಬಣ್ಣದ ಪ್ಯಾಂಟ್ ಏಕಿಲ್ಲ ಎಂದು ಪ್ರಶ್ನೆ ಬಂತು.

ಕೊನೆಗೆ ದೇವರ ಪೂಜೆಯ ಮಡಿ ಯೊಂದನ್ನು ಬಿಟ್ಟು ಕೇಸರಿ ಬಣ್ಣದ ಯಾವೊಂದು ವಸ್ತುವೂ ನನ್ನಲ್ಲಿರಲಿಲ್ಲ. ಹಾಗಾದರೆ ಕೇಸರಿ ಹೇಗೆ ಮತ್ತು ಏಕೆ ಇಷ್ಟ? ಇಷ್ಟವಿದ್ದರೆ ಅದರತ್ತ ಒಲವು, ಅದರ ತೋರ್ಪಡಿಕೆ ಇರಬೇಕಲ್ಲ ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಅವಳಿಗೆ ಗುಲಾಬಿ ಇಷ್ಟ ಎಂದಾ ಯಿತು. ನೋಡಿದರೆ ಅವಳ ಹತ್ತಿರ ಆ ಬಣ್ಣದ ಹತ್ತಾರು ಬಟ್ಟೆಗಳಿದ್ದವು, ಆಟಿಕೆ ಸಾಮಾನುಗಳಿದ್ದವು. ಅವಳಿಗೆ ಏಕೆ ಗುಲಾಬಿ ಇಷ್ಟ ಎನ್ನುವ ಪ್ರಶ್ನೆ ಈಗ. ನನಗೆ ಗುಲಾಬಿ ಇಷ್ಟ – ಇಷ್ಟವಿರುವು ದಕ್ಕೆಲ್ಲ ಕಾರಣವಿರಲೇಬೇಕೆಂದೇನಿಲ್ಲ ಎಂದಳು.

ಕೆಲವರಿಗೆ ಬಿಳಿ ಇಷ್ಟ, ಇನ್ನು ಕೆಲವರಿಗೆ ಕಪ್ಪು, ಕೆಂಪು ಹೀಗೆ. ಒಬ್ಬೊಬ್ಬರಿಗೂ ಒಂದೊಂದು ಬಣ್ಣದ ಮೇಲೆ ಒಲವಿರುತ್ತದೆ. ಕೆಲವರಿಗೆ ರಾಜ್‌ಕುಮಾರ್ ಇಷ್ಟ. ಇನ್ನು ಕೆಲವರಿಗೆ ಶಂಕರ್ ನಾಗ್. ಕೆಲವರಿಗೆ ಬೈಕ್ ಇಷ್ಟ, ಇನ್ನು ಕೆಲವರಿಗೆ ಕಾರಿನಲ್ಲಿನ ಲಾಂಗ್ ಡ್ರೈವ್. ಕೆಲವರಿಗೆ ಹಳ್ಳಿ ಇಷ್ಟ, ಕೆಲವರಿಗೆ ಪೇಟೆ.
ಕೆಲವರಿಗೆ ಐಸ್‌ಕ್ರೀಮ್ ಇಷ್ಟವಾದರೆ ಇನ್ನು ಕೆಲವರಿಗೆ ಪಾನ್ ಪರಾಗ್. ಕೆಲವರಿಗೆ ದೋಸೆ, ಇಡ್ಲಿ. ಚಹಾ- ಕಾಫಿ.ಮೊಸರು- ಸಾಂಬಾರು. ಹೀಗೆ ಒಬ್ಬೊಬ್ಬ ರಿಗೆ ಒಂದೊಂದು ಇಷ್ಟ. ಲೋಕೋಭಿನ್ನ ರುಚಿ: ಎಂದು ಸುಮ್ಮನಾಗಿ ಬಿಡಬಹುದು.

ಆದರೆ ವ್ಯಕ್ತಿಯ ಇಷ್ಟಕ್ಕೆ, ರುಚಿಗೆ ಕಾರಣವೇನು ಎಂದು ಹುಡುಕುತ್ತ ಹೋದರೆ ಕಾರಣ ಸಿಗುವುದೇ ಇಲ್ಲ. ಇಷ್ಟ ಅಷ್ಟೆ ಎಂದು ಆ ಜಟಾಪಟಿ ನಿಂತು ಬಿಡುತ್ತದೆ. ಇಷ್ಟಕ್ಕೆ ಕಾರಣ ಸಿಗದಿರುವುದರಿಂದಲೇ ಅದನ್ನು ಹುಡುಕುವುದು ಇಷ್ಟ !! ಜಗತ್ತಿನ ಬಹುತೇಕ ವ್ಯವಹಾರ, ವ್ಯಾಪಾರದ ಯಶಸ್ಸು ನಿಂತಿರು ವುದೇ ಏನು ಇಷ್ಟ ಎನ್ನುವ ವಿಚಾರದ ಮೇಲೆ. ತಮ್ಮ ಗ್ರಾಹಕರಿಗೆ ಯಾವುದು ಇಷ್ಟವೆಂದು ತಿಳಿದರೆ ಆ ಕಂಪನಿ ಯಶಸ್ಸು ಪಡೆದಂತೆ. ಅದರಲ್ಲಿ ಸ್ವಲ್ಪವೇ ಹೆಚ್ಚು ಕಡಿಮೆಯಾದರೂ ದಿವಾಳಿಯಾಗಿ ಕಂಪನಿಯೇ ಮುಳುಗಿ ಹೋಗುತ್ತದೆ.

ನಿಮಗೆಲ್ಲ ಅಮೆಜಾನ್ ಕಂಪನಿ ಗೊತ್ತೇ ಇದೆ. ಅಮೆಜಾನ್ ಎಂದರೆ ಅದರ ವೆಬ್‌ಸೈಟ್. ಅಮೆಜಾನ್ ಕಂಪ್ಯೂಟರ್ ಪರದೆ ಮೇಲೆ ಬಂದಾಗ ಅದು ಕೇವಲ ಒಂದು ಪೇಜ. ಕಂಪ್ಯೂಟರಿನ ಮೇಲೆ ಮೂಡುವ ವೆಬ್‌ಸೈಟ್‌ನ ಮೊದಲ ಪೇಜ್ ಅನ್ನು ಲ್ಯಾನ್ಡಿಂಗ್ ಪೇಜ್ ಎನ್ನಲಾಗುತ್ತದೆ. ಯಾವುದೇ ವೆಬ್‌ಸೈಟ್‌ನ
ಲ್ಯಾಂಡಿಂಗ್ ಪೇಜ್ ಬಹಳ ಮುಖ್ಯ ವಾದದ್ದು. ಅಮೆಜಾನ್ ಮಟ್ಟಿಗೆ ಈ ಲ್ಯಾನ್ಡಿಂಗ್ ಪೇಜ್‌ನಲ್ಲಿ ಯಾವ ವಸ್ತುವನ್ನು ತೋರಿಸಬೇಕು ಎನ್ನುವುದನ್ನು ನಿರ್ಧರಿ ಸುವುದು ತೀರಾ ಜಟಿಲವಾದ ಅಲ್ಗೊರಿಥಮ್ (ಕಂಪ್ಯೂಟರ್ ಲೆಕ್ಕಾಚಾರ). ಅಲ್ಲಿ ಗ್ರಾಹಕನ ಇಷ್ಟದ ವಸ್ತುವನ್ನೇ ತೋರಿಸ ಬೇಕು. ಈ ಇಷ್ಟವನ್ನು
ತಿಳಿ ಯಲು ಆ ಗ್ರಾಹಕನ ಹಿಂದಿನ ಹುಡುಕಾಟ, ಹಿಂದಿನ ಖರೀ ದಿಗಳು ಮೊದಲಾದ ನೂರೆಂಟು ವಿಚಾರಗಳನ್ನು ಪರಿಗಣಿಸಿ ಏನು ಇಷ್ಟ ಎಂದು ಗ್ರಹಿಸ ಬೇಕು.

ಯೌಟ್ಯೂಬ್, ಫೇಸ್ಬುಕ್, ಟ್ವಿಟರ್ ಹೀಗೆ ಯಾವೊಂದು ಸೋಷಿ ಯಲ್ ಮೀಡಿಯಾ ತೆಗೆದುಕೊಂಡರೂ ಅಲ್ಲಿ ಕೂಡ ಇಂಥದ್ದೇ ಅಲ್ಗೊರಿದಮ್ ಹಿನ್ನೆಲೆ ಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತದೆ. ಗ್ರಾಹಕನಿಗೆ ಇಷ್ಟ ವಾದದ್ದೇ ಕಾಣಿಸಬೇಕು. ಇದನ್ನು ಬಹುತೇಕ ಎಲ್ಲ ವ್ಯವಹಾರಗಳೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾಡುತ್ತಿರುತ್ತವೆ. ಸೂಪರ್ ಮಾರ್ಕೆಟ್‌ನಲ್ಲಿ ಚಾಕಲೇಟ್, ಆಟಿಕೆ ಸಾಮಾನನ್ನು ಮೂರು ಫೀಟ್ ಎತ್ತರದಲ್ಲಿ  ಇಡುವುದಕ್ಕೂ ಅದೇ ಕಾರಣ.

ಅದೆಲ್ಲ ವ್ಯಾಪಾರದ ಮಜುಕೂರುಗಳಾದವು. ಈ ಇಷ್ಟವೆನ್ನುವ ಒಂದು ವಿಚಾರ ವಯಸ್ಕರ ಜಗತ್ತಿನಲ್ಲಿ ಅದೆಷ್ಟೋ ನಡವಳಿಕೆಗಳನ್ನು ನಮಗರಿವಿಲ್ಲ ದಂತೆ ನಿರ್ದೇಶಿಸುತ್ತವೆ. ನಮಗೇನು ಇಷ್ಟವೋ ಅದನ್ನೇ ಇಷ್ಟಪಡುವವರನ್ನು ನಾವು ವಿನಾ ಕಾರಣ ಹೆಚ್ಚಿಗೆ ಇಷ್ಟಪಡುತ್ತೇವೆ. ನಮಗಿಷ್ಟವಿಲ್ಲದ್ದು ಅವರಿಗಾದರೆ ಅವರೇ ನಮಗಾಗಿ ಬರುವುದಿಲ್ಲ. ಮನೆಯಲ್ಲಿ – ನಿಮ್ಮಿಷ್ಟದ ಆಹಾರವನ್ನು ನಿಮ್ಮ ಮಕ್ಕಳು ಇಷ್ಟಪಡಲಿಲ್ಲ ಎಂದಾದರೆ ಏಕೆ ಎಂದು ಪ್ರಶ್ನಿಸುತ್ತೇವೆ. ಅಸಲಿಗೆ ನಮಗೇಕೆ ಇಷ್ಟವೆನ್ನುವ ಪ್ರಶ್ನೆಗೆ ನಮ್ಮಲ್ಲಿಯೇ ಉತ್ತರವಿರುವುದಿಲ್ಲ. ನಮಗೆ ರುಚಿಸಿದರೆ ಅನ್ಯರಿಗೂ ರುಚಿಸಬೇಕು. ಇದು ಮನುಷ್ಯನ ಮೂಲಭೂತ ಇಚ್ಛೆ. ನಮಗೆ ಹೆಚ್ಚಿನ ಬಾರಿ ಇನ್ನೊಬ್ಬ ವ್ಯಕ್ತಿ ಇಷ್ಟವಾಗುವುದು ನಮಗಿಷ್ಟವಾದದ್ದನ್ನು ಅವರೂ ಇಷ್ಟಪಡುತ್ತಾರೆ ಎನ್ನುವ
ಏಕೈಕ ಕಾರಣದಿಂದ. ಹೀಗೆ ಒಬ್ಬ ವ್ಯಕ್ತಿಯ ಇಷ್ಟದ ಮೇಲೆ ಅವನನ್ನು ವರ್ಗೀಕರಿಸಲು ಮುಂದಾಗಿಬಿಡುತ್ತೇವೆ.

ಬಹಳಷ್ಟು ಬಾರಿ ತೋರಿಕೆಯ ಇಷ್ಟಗಳೂ ನಮ್ಮೆದುರಿಗೆ ಕಾಣಿಸುತ್ತಿರುತ್ತವೆ. ನಾವು ಆದರ್ಶವೆಂದುಕೊಂಡವರಂತೆ ನಾವಾಗಿರದಿದ್ದರೂ ಅವರ ಇಷ್ಟವನ್ನು ನಮ್ಮ ಇಷ್ಟವೆನ್ನುವಂತೆ ತೋರ್ಪಡಿಸಿಕೊಳ್ಳುವುದು, ವಸ್ತುಗಳನ್ನು ಖರೀದಿಸುವುದು ಇದೆಲ್ಲ ಆಗೀಗ ಕಾಣಿಸುತ್ತದೆ. ಇದು ಕೆಲವರ ಮನೆಗೆ ಹೋದಾಗ ಕೂಡ ಕಾಣಿಸುವುದುಂಟು. ಉದಾಹರಣೆಗೆ ಅವರು ಪುಸ್ತಕವನ್ನೇ ಓದುವವರಾಗಿರುವುದಿಲ್ಲ. ಆದರೆ ಅವರ ಮನೆಯ ಕಪಾಟಿನಲ್ಲ ಭೈರಪ್ಪ ನವರ, ತೇಜಸ್ವಿಯವರ ಪುಸ್ತಕ ತುಂಬಿಸಿಡುತ್ತಾರೆ. ಅವರಿಗೆ ಓದುವವನು ಎನ್ನುವ ಇಮೇಜ್ ಪಡೆಯುವುದೇ ಮುಖ್ಯವಾಗಿರುತ್ತದೆಯೇ ವಿನಃ
ಓದು ವುದು ಅವರಿಷ್ಟದ ಕೆಲಸವಲ್ಲ.

ನೀವು ಅವರ ಮನೆಗೆ ಹೋಗುವಾಗ ಇನ್ನಷ್ಟು ಪುಸ್ತಕವನ್ನು ಒಯ್ದರೆ ಅವರಿಗೆ ಆ ಇಮೇಜ್ ಒಂದನ್ನು ಕಟ್ಟಿಕೊಂಡ ಸಾರ್ಥಕ್ಯಕ್ಕೆ ಖುಷಿಯಾಗುತ್ತದೆಯೇ ವಿನಃ ಪುಸ್ತಕ ಕೊಟ್ಟದ್ದಕ್ಕಲ್ಲ. ಶೋಕಿ ಎನ್ನುವುದು ಇದಕ್ಕೆ ಸರಿಯಾದ ಶಬ್ದವಲ್ಲ. ಇದು ಒಂದು ಉದಾಹರಣೆ. ಈ ರೀತಿ ವಸ್ತುಗಳನ್ನು ಇಮೇಜಿಗಾಗಿ ಖರೀದಿಸುವ ಒಂದು ದೊಡ್ಡ ವರ್ಗವೇ ನಮ್ಮ ನಡುವೆ ಇದೆ. ಬಹುತೇಕರ ಇಷ್ಟವೆನ್ನುವುದು, ರುಚಿ ಆಗಾಗ, ಕಾಲ ಕಳೆದಂತೆ ಬದಲಾಗುತ್ತಿರುತ್ತದೆ.
ಆದರೆ ಒಂದು ಇಷ್ಟದ ಸುತ್ತ ಹುಟ್ಟಿಕೊಂಡ ಇಮೇಜ್ ಅವರನ್ನು ತನ್ನಿಷ್ಟವನ್ನು ಬದಲಿಸದಂತೆ ಕಟ್ಟಿಹಾಕಿಟ್ಟಿರುತ್ತದೆ.

ಮನುಷ್ಯನ ವಿಕಾಸದಲ್ಲಿ ಕೆಲವೊಂದು ಇಷ್ಟಗಳು ಕಾಲ ಕ್ರಮೇಣ ಬೆಳೆದುಕೊಂಡು ಬಂದಿದೆ. ಸಾಮಾನ್ಯವಾಗಿ ಸಕ್ಕರೆ ಎಂದರೆ ಎಲ್ಲರಿಗೂ ಇಷ್ಟ. ಇದು ವಿಕಸನದ ಹಾದಿಯಲ್ಲಿ ನಾವು ಅಳವಡಿಸಿಕೊಂಡ ರುಚಿ. ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಸಕ್ಕರೆ ಎಂದರೆ ಅದು ಪೌಷ್ಟಿಕ – ಕಹಿಯೆಂದರೆ ಹೆಚ್ಚಾಗಿ
ವಿಷಕಾರಕ. ಸಿಹಿಯಾದ ವಿಷ ಸ್ವಾಭಾವಿಕವಾಗಿ ಇಲ್ಲವೇ ಇಲ್ಲ. ಈ ಕಾರಣದಿಂದಲೇ ನಮಗೆ ಸಕ್ಕರೆಯೆಂದರೆ ಎಲ್ಲಿಲ್ಲದ ಪ್ರೀತಿ ಮತ್ತು ಕಹಿಯೆಂದರೆ ರುಚಿಸುವುದಿಲ್ಲ. ಇದಕ್ಕೆ ಕಾರಣ ನಮ್ಮಲ್ಲಿ ಸಿಹಿ ಮತ್ತು ಕಹಿಯನ್ನು ಸೇವಿಸಿದಾಗ ಮೆದುಳಿನಲ್ಲಿ ಆಗುವ ಪ್ರಚೋದನೆ – ಇದು ನಾವು ವಿಕಸನದಲ್ಲಿ ಪಡೆದು ಕೊಂಡದ್ದು.

ಖುಷಿಯ ವಿಚಾರ ಹೇಳುವಾಗ ಬಾಯಿ ಸಿಹಿ ಮಾಡಿಕೊಳ್ಳುವ ರೂಢಿಯಿದೆಯಲ್ಲ. ಖುಷಿ ಮತ್ತು ಸಿಹಿ ಇವೆರಡಕ್ಕೂ ನಮ್ಮ ಮೆದುಳು ಪ್ರಚೋದನೆ ಗೊಳ್ಳುವ ರೀತಿ ಹೆಚ್ಚು ಕಡಿಮೆ ಒಂದೇ ರೀತಿ. ಆ ಕಾರಣಕ್ಕೆ ಖುಷಿಯ ವಿಚಾರದ ಸಮಯದಲ್ಲಿ ಸಕ್ಕರೆಯನ್ನು ಸೇವಿಸಿದರೆ ನಮ್ಮ ಮೆದುಳಿಗೆ ಇನ್ನಷ್ಟು ಆನಂದದ ಗ್ರಹಿಕೆಯಾಗುತ್ತದೆ. ಕೆಲವರು ತೀರಾ ಬೇಸರವಾದಾಗಲೂ ಸಕ್ಕರೆಯನ್ನು ಬಯಸುವುದಕ್ಕೆ ಇದೇ ಕಾರಣ. ಅದೊಂದು ಕಾಲದಲ್ಲಿ ಸಕ್ಕರೆ ಯನ್ನು ನೋವು ನಿವಾರಕ ಔಷಧದಂತೆ ಬಳಸುತ್ತಿದ್ದ ಉದಾಹರಣೆಗಳಿವೆ. ಇಷ್ಟವೆನ್ನುವುದು ಅಸಲಿಗೆ ನಮ್ಮ ಮೆದುಳಿನ ಪ್ರಚೋದನೆಗೆ ಸಂಬಂಧಿಸಿದ್ದು. ಈ ಪ್ರಚೋದನೆಯನ್ನು ಕಾಲಕ್ರಮೇಣ ಒಬ್ಬ ವ್ಯಕ್ತಿ ತನ್ನದೇ ಜೀವಿತಾವಧಿಯಲ್ಲಿ ಪ್ರಯತ್ನ ಪಟ್ಟರೆ ಬದಲಿಸಿಕೊಳ್ಳಬಹುದು.

ಕ್ರಮೇಣ ಕಹಿಯನ್ನೇ ಇಷ್ಟಪಡುವಂತೆ ನಮ್ಮನ್ನು ನಾವು ಮಾರ್ಪಡಿಸಿಕೊಳ್ಳಬಹುದು. ಅಥವಾ ಖಾರವನ್ನು ಸಿಹಿಗಿಂತ ಕ್ರಮೇಣ ಇಷ್ಟಪಡಬಹುದು. ಇದು ನಮ್ಮ ಬಹುತೇಕ ಇಷ್ಟಗಳಿಗೂ ಅನ್ವಯವಾಗುವಂಥದ್ದು. ಅಮೆರಿಕದಲ್ಲಿ ಹೆಣ್ಣು ಮಕ್ಕಳ ಬಟ್ಟೆಯಿಂದ ಹಿಡಿದು ಬಹುತೇಕ ವಸ್ತುಗಳು ಗುಲಾಬಿ. ಇನ್ನು ಗಂಡುಮಕ್ಕಳದ್ದು ನೀಲಿ. ಇಲ್ಲಿನ ಗಂಡುಮಕ್ಕಳು ಗುಲಾಬಿಯೆಂದರೆ ಅದನ್ನು ಮುಟ್ಟುವುದೇ ಇಲ್ಲ – ಹೆಣ್ಣುಮಕ್ಕಳು ನೀಲಿಯನ್ನು. ಇದು
ಸುಮಾರು ಐವತ್ತು ವರ್ಷದಿಂದ ಇಲ್ಲಿ ನಡೆದುಕೊಂಡು ಬಂದದ್ದು. ಈಗ ಇಲ್ಲಿ ಹೇಗಾಗಿ ಬಿಟ್ಟಿದೆ ಎಂದರೆ ವಯಸ್ಕರು ಕೂಡ ಅದೇ ಇಷ್ಟವನ್ನು ರಕ್ತಗತ ಅಳವಡಿಸಿಕೊಂಡುಬಿಟ್ಟಿದ್ದಾರೆ.

ಹಾಗಾಗಿ ಬಹುತೇಕ ಮಹಿಳೆಯರ ಬಟ್ಟೆಯಲ್ಲಿ ಒಂದಾದರು ಗುಲಾಬಿ ಎಳೆ ಇದ್ದೇ ಇರುತ್ತದೆ. ಪುರುಷರೆಂದರೆ ಅಲ್ಲಿ ನೀಲಿ. ಹಾಗಿಲ್ಲದಿದ್ದರೆ ಅಂತಹ ಬಟ್ಟೆ ಮಾರಾಟವಾಗುವುದು ಕಷ್ಟ. ಇವೆಲ್ಲ ಕಾಲ ಕ್ರಮೇಣ ಸಮಾಜ, ಪರಿಸರ ಹೇರುವ ಇಷ್ಟಗಳಿಗೆ ಉದಾಹರಣೆ. ಬೇಕುಗಳೇ ಬೇರೆ – ಇಷ್ಟಗಳೇ ಬೇರೆ. ಬೇಕಾದzಲ್ಲ ಇಷ್ಟ ವಾಗಬೇಕೆಂದಿಲ್ಲ, ಇಷ್ಟವಾದzಲ್ಲ ಬೇಕೆನ್ನುವಂತೆ ಕೂಡ ಇಲ್ಲ. ಅವರವರ ಇಷ್ಟದಿಂದಲೇ ಅವರ ವ್ಯಕ್ತಿತ್ವ ಅಳೆಯುವುದು, ವ್ಯಕ್ತಿಯನ್ನು ವರ್ಗೀಕರಿಸುವುದು, ಮೇಲೆ ಕೆಳಗೆಂದು ಪ್ರತ್ಯೇಕಿಸುವುದು, ಪಂಗಡಗಳಲ್ಲಿ ವಿಂಗಡಿಸುವುದು, ಒಳ್ಳೆಯವರು – ಕೆಟ್ಟವರೆನ್ನುವುದು ಇವೆಲ್ಲ ಅರಿವಿದ್ದು ಅಥವಾ ಅರಿವಿಗೆ ಬರದಂತೆ ನಾವು ಮಾಡುವ ದೈನಂದಿನ ಅಚಾತುರ್ಯಗಳು.

ಅದರ ಜತೆ ಜತೆ ನಮ್ಮ ಇಷ್ಟವನ್ನು ಇನ್ನೊಬ್ಬರಿಗೆ ಹೇರಲು ಹೋಗಿ ಅದೆಷ್ಟೋ ಸಂಬಂಧಗಳನ್ನೇ ಶಾಶ್ವತವಾಗಿ ಕಳೆದುಕೊಂಡುಬಿಡುವುದು ಕೂಡ ಇದೆ. ವ್ಯಕ್ತಿಯ ಇಷ್ಟವೊಂದರ ಕಾರಣದಿಂದ ಸಂಬಂಧಕ್ಕೆ ಹಿಂದೆಜ್ಜೆ ಹಾಕುವುದು ಕೂಡ ಸಾಮಾನ್ಯ. ಎಲ್ಲಿ ಈ ಇಷ್ಟಗಳು ಮನುಷ್ಯ ಸಂಬಂಧವನ್ನು ನಿರ್ದೇಶಿಸಲು ಮುಂದಾಗುತ್ತವೆಯೋ ಅಲ್ಲ ಎಡವಟ್ಟುಗಳಾಗುತ್ತವೆ. ಇಷ್ಟಗಳಿಗೆ ಹೇಗೆ ಕಾರಣವೇ ಇರುವುದಿಲ್ಲವೋ ಅಂತೆಯೇ ಇಷ್ಟದ ಸುತ್ತದ ನಮ್ಮ
ನಡವಳಿಕೆಗಳಿಗೆ ಕೂಡ. ಅಂತಹ ಸಂದರ್ಭದಲ್ಲ ಒಂದು ಕ್ಷಣ ಅದನ್ನು ಗ್ರಹಿಸಿ, ಯೋಚಿಸಿ ನಡೆದುಕೊಂಡರೆ, ಅವರವರವ ಇಷ್ಟವನ್ನು ಅವರಿಗೆ ಹಾಗೆಯೇ ಬಿಟ್ಟು, ಅವರ ಜತೆಯಲ್ಲಿ ಅವರ ಇಷ್ಟವನ್ನೂ ಸ್ವೀಕರಿಸುವುದಿದೆಯಲ್ಲ ಅಂತಹ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುವಂಥದ್ದು.

ಇಷ್ಟಗಳ ಸುತ್ತ ಇರುವುದು ನಿಮಿತ್ತಕ್ಕೊಂದು ಕಾರಣ ಮಾತ್ರ. ಇಷ್ಟಗಳೆಂದಿಗೂ ವ್ಯಕ್ತಿತ್ವ ರೂಪಕವೂ ಅಲ್ಲ, ಸೂಚಕವೂ ಅಲ್ಲ.