ಶಿಶಿರ ಕಾಲ
ಶಿಶಿರ್ ಹೆಗಡೆ, ನ್ಯೂಜೆರ್ಸಿ
ಹಸಿವು, ಬಾಯಾರಿಕೆ, ಕಾಮ, ಹೆದರಿಕೆ: ಈ ನಾಲ್ಕು ವಿಚಾರಗಳು ಮನುಷ್ಯನನ್ನು ಏನೇನನ್ನೆಲ್ಲ ಮಾಡಿಸುತ್ತವೆ, ಎಲ್ಲವನ್ನೂ. ಕೇವಲ ಮನುಷ್ಯ ಮಾತ್ರವಲ್ಲ – ಎಲ್ಲ ಜೀವಿಗಳನ್ನೂ. ಕಾಲ ಕೆಟ್ಟು ಹೋಗಿದೆ ಎಂದು ಆಗೀಗ ಹೇಳುವ ಘಟನೆ ಮತ್ತು ವ್ಯಾವ ಹಾರದ ಮೂಲಕ್ಕೆ ಹೋದರೆ ಪಾತ್ರೆಯ ಅಡಿಯಲ್ಲಿ – ಕೊನೆಯಲ್ಲಿ ಸಿಗುವುದು ಈ ಮೊದಲು ಹೇಳಿದ ಯಾವುದಾದರೂ ಒಂದು.
ಕೆಲವರಲ್ಲಿ ಕೆಲವೊಂದು ಹದ ತಪ್ಪಿ ಹೆಚ್ಚು ಕಡಿಮೆಯಿರುತ್ತದೆ. ಮಿತಿ ಮೀರಿದ್ದರೆ ಅವನು ಕ್ರಿಮಿನಲ್ ಅಥವಾ ಹುಚ್ಚ. ಹಾಗಂತ
ಇವು ಯಾವವೂ ಹೊಸತಲ್ಲ ಎಂದು ಬಾಯಿ ಬಿಟ್ಟು ಹೇಳಬೇಕಿಲ್ಲ. ಇವೆಲ್ಲವೂ ಯಾವತ್ತೂ ನಮ್ಮಲ್ಲಿ ಇತ್ತು, ಇಂದೂ ಇದೆ, ಮುಂದೆ ಕೂಡ ಇರುತ್ತದೆ, ಇರಲೇ ಬೇಕು. ಹಸಿವು ಬಾಯಾರಿಕೆ ಇಲ್ಲದ ಜಗತ್ತು ಯೋಚಿಸಲೂ ಸಾಧ್ಯವೇ? ಒಮ್ಮೆ ವಿಚಾರ ಮಾಡಿ ನೋಡಿ – ಒಮ್ಮಿಂದೊಮ್ಮೆಲೇ ಮನುಷ್ಯರೆಲ್ಲರಿಗೆ ಹಸಿವು ಮತ್ತು ಬಾಯಾರಿಕೆ ಆಗುವುದೇ ನಿಂತು ಹೋದರೆ? ಯಾವ ಸ್ವಾಮೀಜಿ – ಸಂತರು ಏನೇ ಹೇಳಿದರೂ ಕಾಮ, ಬಯಕೆ ಇಲ್ಲದ ಜಗತ್ತು ಸ್ಥಿರವಾಗಿರಲು ಸಾಧ್ಯವೇ ಇಲ್ಲ.
ಅದೆಲ್ಲ ಒಂದು ಮಿತಿಯಲ್ಲಿರಬೇಕು ನಿಜ. ಆದರೆ ಇರಲೇ ಬಾರದು ಎನ್ನುವುದು ಪೊಕ್ಕು ವಾದ. ಅದೇ ಕಾರಣಕ್ಕೆ ಓಶೋ ಇಷ್ಟ ವಾಗುವುದು. ಅವರ ಮಾತು, ಪುಸ್ತಕ, ವಿಚಾರಗಳಲ್ಲಿ ಇವೆಲ್ಲದರ ಮಿತಿಯ ಬಗ್ಗೆ ಪ್ರಸ್ತಾವನೆಯಿರುತ್ತದೆಯೇ ವಿನಃ ಅದಕ್ಕೆ ವಿರುದ್ಧವಾಗಿ ವ್ಯವಹರಿಸುವಂತೆ ಓಶೋ ಯಾವತ್ತೂ ಹೇಳುವುದಿಲ್ಲ. ಬುದ್ಧ ಹೇಳಿದ್ದು ಆಸೆಯೇ ದುಃಖಕ್ಕೆ ಮೂಲ ಎಂದು – ಅಷ್ಟೆ. ಆಸೆಯೇ ಪಡದೇ ಬದುಕಬೇಕು ಎಂದು ಯಾವೊಬ್ಬ ಜ್ಞಾನಿಯೂ ಹೇಳುವುದಿಲ್ಲ.
ಜೀವ ಜಗತ್ತಿನ, ಮನುಷ್ಯ ಅಸ್ತಿತ್ವಕ್ಕೆ ಈ ನಾಲ್ಕು ವಿಚಾರಗಳೇ ಆಧಾರ. ನಮ್ಮೆಲ್ಲ ವ್ಯವಹಾರಗಳನ್ನು ಲಕ್ಷ ಲಕ್ಷ ವರ್ಷಗಳಿಂದ ನಿರ್ದೇಶಿಸಿದ್ದೇ ಇವುಗಳು. ಆದರೆ ತೀರಾ ಇತ್ತೀಚಿಗೆ ನಮ್ಮ ಬಹುತೇಕ ವ್ಯವಹಾರಗಳನ್ನು ನಿರ್ದೇಶಿಸುವ ಹೊಸತೊಂದು ನಮ್ಮ ನಡುವೆ ಬಂದು ಕೂತಿದೆ. ಇದು ಕೇವಲ ಆಧುನಿಕ ಮನುಷ್ಯನ ಅನುಭವಕ್ಕೆ ಬರುತ್ತಿರುವುದು. ಇದಕ್ಕೆ ಲಕ್ಷದ ಲೆಕ್ಕದ ಇತಿಹಾಸ ವಿಲ್ಲ ಇವೆಲ್ಲವಕ್ಕೂ ನಮ್ಮ ಗಮನ, ಸಮಯ ಮತ್ತು ಹಣ ಬೇಕು.
ಇವಕ್ಕೆ ನಮ್ಮ ಬದುಕಿನ ಓಟದಲ್ಲಿ ಅವರತ್ತ, ಅದರತ್ತ ಒಂದು ಕ್ಷಣ ನಿಂತು ನೋಡುವಂತೆ ಮಾಡಬೇಕು. ಸೋಷಿಯಲ್
ಮೀಡಿಯಾ, ಇಮೇಲ, ಸುದ್ದಿಯ ಅಪ್ಲಿಕೇಶನ್ಗಳು, ಕಂಪ್ಯೂಟರ್ ಬ್ರೌಸರ್ನಲ್ಲಿ – ಜಾಲತಾಣಗಳು, ವೆಬ್ಸೈಟ್, ಟಿವಿ ಚ್ಯಾನಲ್ ಗಳು, ಎಫ್ಎಂ, ರೇಡಿಯೋ ಹೀಗೆ ಕನಿಷ್ಠ ಏಳೆಂಟು ನಮ್ಮ ಜೀವನದ ಪ್ರತೀ ದಿನದ ಒಂದಿಷ್ಟು ಸಮಯವನ್ನು, ಗಮನವನ್ನು ಪಡೆಯಲು ಹಪಹಪಿಸುತ್ತಿರುತ್ತವೆ. ಇವೆಲ್ಲದರ ನಡುವೆಯೇ ಸ್ಪರ್ಧೆ.
ನಮ್ಮ ಗಮನ, ಸಮಯವೇ ಇವಕ್ಕೆ ಆಹಾರ. ಈ ಗಮನ ಸೆಳೆಯುವ ವ್ಯವಹಾರಗಳಿವೆಯಲ್ಲ, ಇವೆಲ್ಲ ಇತ್ತೀಚಿಗೆ ತೀರಾ ಕಿರಿಕಿರಿ ಯೆನ್ನುವಷ್ಟಾಗಿ ಹೋಗಿದೆ. ಇವೆಲ್ಲ ಕೊನೆಯಲ್ಲಿ ಜಾಹೀರಾತು – ಏನೋ ಒಂದನ್ನು ಮಾರಾಟ ಮಾಡುವಲ್ಲಿಗೇ ಹೋಗಿ ಮುಟ್ಟುವುದು. ಇವತ್ತು ಎಲ್ಲರೂ ಜಾಹೀರಾತು ಶೋಷಿತರೇ. ಚಿಕ್ಕ ಮಕ್ಕಳಿಂದ ಹಣ್ಣು ಮುದುಕರ ವರೆಗೆ ಎಲ್ಲರೂ ಟಾರ್ಗೆಟ್. ಈ ಜಾಹೀರಾತು ಬರುವ ವಿಧಾನಗಳು ಮಾತ್ರ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ, ಅಡ್ವಾನ್ಸ್ ಆಗುತ್ತಲಿದೆ.
ಈಗೀಗ ಜಾಹೀರಾತು ಎಂದಾಕ್ಷಣ ಆಚೆ ಮುಖ ಹಾಕುವವರು ಜಾಸ್ತಿಯಾಗುತ್ತಿದ್ದಂತೆ ಇದು ಜಾಹೀರಾತೇ ಅಲ್ಲ ಎಂದೆನ್ನುತ್ತಾ ನಾನಾ ರೀತಿಯ ಮುಸುಕು ಧರಿಸಿ ಬರುವ ಜಾಹೀರಾತುಗಳು ಕೂಡ ಜಾಸ್ತಿಯಾಗುತ್ತಿವೆ. ಯಾರು ಜಾಲತಾಣಗಳಲ್ಲಿ ಬಂದು ಬಾಯಿ ತೆರೆದರೂ ಇದರ ಹಿಕ್ಮತ್ ಏನು ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ.
ನೇರ ಜಾಹೀರಾತುಗಳು ಬೇರೆ: ಕೋಲಾಗಳು ಮಾತ್ರ ನಿಮ್ಮ ನಿಜವಾದ ಬಾಯಾರಿಕೆಯನ್ನು ತಣಿಸಬಲ್ಲವು, ನಮ್ಮ ಐಸ್ಕ್ರೀಮ, ಪಿಜ್ಜಾ ಬರ್ಗರ್ಗಳು ಮಾತ್ರ ನಿಮ್ಮ ಹಸಿವನ್ನು, ನಾಲಿಗೆಯ ಎಲ್ಲ ರುಚಿ ಗ್ರಾಹಕಗಳನ್ನು ಸಮಾಧಾನಪಡಿಸಬಲ್ಲವು, ನೀವು ತಿನ್ನುವ ದೋಸೆ ಇಡ್ಲಿ ಅವಲಕ್ಕಿಗಿಂತ ಆರೋಗ್ಯಕರ ಸಕ್ಕರೆ ತುಂಬಿದ ಸೀರಿಯಲ್ಗಳು, ಇವರ ಪ್ರಕಾರ ಬೆಳಗ್ಗೆ ಎದ್ದು ದೋಸೆ ಮಾಡಿ ತಿನ್ನುವುದು ಮಾಡರ್ನ್ ಅಲ್ಲ. ನೀವು ಬ್ರಾಂಡೆಡ್ ಷೂ ಧರಿಸದರಷ್ಟೇ ಓಡಬಲ್ಲಿರಿ, ನಡೆಯಬಲ್ಲಿರಿ. ಒಂದಿಷ್ಟು ಇನ್ಸೂರೆನ್ಸ್ ಪಾಲಿಸಿ ಮಾಡಿದರಷ್ಟೇ ನೀವು ನಿಮ್ಮವರನ್ನು ಪ್ರೀತಿಸುತ್ತೀರಿ ಎಂದರ್ಥ.
ಎಲೆ ಅಡಿಕೆಗಿಂತ ಗುಟ್ಕಾ ತಿಂದರೆ ನೀವು ಉನ್ನತ ಜನರು – ನಿಮ್ಮದು ಉನ್ನತ ಒಲವು – ಹಾಗೆ ಬಂದು ಹೇಳುವುದು ಶಾರುಖ್ ಖಾನ್ ಮತ್ತು ಅಜಯ್ ದೇವಗನ್. ನಿಮ್ಮ ಗಡ್ಡಕ್ಕೆ ಯಾವ ಕ್ರೀಮ್ ಹಚ್ಚಬೇಕು ಎಂದು ವಿರಾಟ್ ಕೊಹ್ಲಿ ಬಂದು ಹೇಳುತ್ತಾನೆ. ನಿಮ್ಮ ಜೀವನದ ಸಾಫಲ್ಯ ಈ ಕಾರು ಹೊಂದಿದರಷ್ಟೇ ಸಾಧ್ಯ. ಹೀಗೆ ಸಾವಿರದೆಂಟು ನೇರ ಜಾಹೀರಾತುಗಳು.
ಈ ಜಾಹೀರಾತು ಎಷ್ಟು ಪ್ರಭಾವ ಬೀರಬಲ್ಲದು ಎನ್ನುವುದಕ್ಕೆ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅನುಭವಕ್ಕೆ ಬರುತ್ತದೆ. ಮಕ್ಕಳನ್ನು
ಜಾಹೀರಾತು ಮೂಲಕ ಟಾರ್ಗೆಟ್ ಮಾಡುವುದು ಸುಲಭ ಎನ್ನುವುದು ಜಾಹೀರಾತು ಜಗತ್ತಿನ ಆವಿಷ್ಕಾರ, ನಂಬಿಕೆ ಮತ್ತು ಸತ್ಯ. ಮಾರಾಟ ಮಾಡುವ ವಸ್ತು ಮಕ್ಕಳಿಗೆ ಸಂಬಂಧವಿದ್ದದ್ದೇ ಇರಬಹುದು ಅಥವಾ ಅದು ಅಡುಗೆ ಎಣ್ಣೆಯ ಜಾಹೀರಾತಿರಬಹುದು. ಅಲ್ಲಿ ಜಾಹೀರಾತಿನಲ್ಲಿ ಚಿಕ್ಕ ಮಕ್ಕಳಿದ್ದರೆ ಅದು ಹೆಚ್ಚಿಗೆ ಪರಿಣಾಮಕಾರಿ.
ಜಾಹೀರಾತಿನ ನಂತರ ಮಕ್ಕಳ ಮೂಲಕ ದೊಡ್ಡವರ ಮೇಲೆ ಪ್ರಭಾವ ಸೈಕಾಲಾಜಿ ಕೂಡ ಬಳಸಿಕೊಳ್ಳುವ ಜಾಹೀರಾತುಗಳಿವೆ. ಆ ಕಾರಣಕ್ಕೆ ಬಹುತೇಕ ಜಾಹೀರಾತುಗಳಲ್ಲಿ ಮಕ್ಕಳ ಮುಖ ಬೇಕಾಗಲಿ ಬೇಡವಾಗಲಿ, ನೋಡಬಹುದು. ಜಾಹೀರಾತಿನಿಂದ ಮಕ್ಕಳ ಮೇಲೆ ಆಗುವ ಪ್ರಭಾವವನ್ನು ಗ್ರಹಿಸಿದ ಅಮೆರಿಕ, ಇಂಗ್ಲೆಂಡ್ ಮೊದಲಾದ ಸರಕಾರಗಳು ಕೆಲವು ಸಕ್ಕರೆ ತುಂಬಿದ ಆಹಾರ ವಸ್ತುಗಳ, ಕೋಲಾ ಪಿಜ್ಜಾ ಗಳ ಜಾಹೀರಾತನ್ನು ಮಕ್ಕಳು ಟಿವಿ ನೋಡುವ ಮುಸ್ಸಂಜೆಯ ಸಮಯದಲ್ಲಿ ನಿರ್ಬಂಧಿಸಿದ್ದಿದೆ. ಮನಃಶಾಸ್ತ್ರಜ್ಞರ ಪ್ರಕಾರ ಈ ಸಕ್ಕರೆ ತುಂಬಿದ ಆಹಾರ ವಸ್ತುಗಳ ರುಚಿ ಮತ್ತು ಆ ಮೂಲಕ ಉಂಟಾಗುವ ಬಯಕೆಗಿಂತ ಮಕ್ಕಳಲ್ಲಿ ಜಾಹೀರಾತುಗಳು ಆ ವಸ್ತುಗಳನ್ನು ಮತ್ತೆ ಮತ್ತೆ ಪಡೆಯುವಂತೆ ಮಾಡುತ್ತವೆ.
ಇವೆಲ್ಲವನ್ನು ತಿಳಿದಿದ್ದರೂ ದೊಡ್ಡವ ರಿಗೆ ಇದೆಲ್ಲ ಜಾಹೀರಾತುಗಳು, ಮಲ್ಟಿಮಿಲಿಯನ್ ಕಂಪನಿಗಳು ಇವನ್ನು ಹೇಗಾದರೂ ನಮಗೆ ಮಾರಾಟ ಮಾಡಲು ಈ ಮೂಲಕ ಪ್ರಯತ್ನಿಸುತ್ತಿವೆ ಎಂದೆಲ್ಲ ವಿವರಿಸುವುದು, ಮನದಟ್ಟು ಮಾಡುವುದು ಕಷ್ಟ. ಆದರೆ ಒಂದಿಷ್ಟು ವರ್ಷದ ನಂತರ, ಹದಿಮೂರು ಹದಿನಾಲ್ಕು ವರ್ಷ ವಯಸ್ಸಿನ ನಂತರ ಮಕ್ಕಳು ಜಾಹೀರಾತನ್ನು ಜಾಹೀರಾತೆಂದು ಗ್ರಹಿಸಲು ಶುರುಮಾಡುತ್ತಾರೆ.
ಅದೇ ಕಾರಣಕ್ಕೆ, ಜಾಹೀರಾತಿನಲ್ಲಿ ಕೂಡ ಈ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳನ್ನೇ ಹೆಚ್ಚಿಗೆ ಬಳಸಿಕೊಳ್ಳಲಾಗುತ್ತದೆ. ಈ ವಯಸ್ಸಿಗಿಂತ ಮೊದಲೇ ಒಂದಿಷ್ಟು ಚಾಳಿ, ಅಭ್ಯಾಸಗಳನ್ನು ಕಲಿಸಿಬಿಡಬೇಕು. ಆಮೇಲೆ ಇವು ಅಭ್ಯಾಸಗಳಾಗಿ ಕೆಲವೊಂದಕ್ಕೆ ಸಬ್ಸ್ಕ್ರ ಬ್ ಮಾಡಿಕೊಂಡು ಬಿಡಬೇಕು. ಹದಿಮೂರು ಹದಿನಾಲ್ಕು ವಯಸ್ಸಿನೊಳಗೆ ಬಳಸುವ ವಸ್ತುಗಳನ್ನು ನಂತರದ ಹದಿನೈದು ವರ್ಷ, ಇನ್ನು ಕೆಲವೊಮ್ಮೆ ಜೀವಮಾನ ಪೂರ್ತಿ ಬಳಸುವ ಸಾಧ್ಯತೆ ಹೆಚ್ಚು.
ಒಮ್ಮೆ ಒಂದು ವಸ್ತುವಿನ ಬಳಕೆಯ ಚಂದದಾರರಾದ ನಂತರ, ಅಭ್ಯಾಸವಾದ ಅಲ್ಲಿ ಬೇಕು, ಬೇಡ, ಒಳ್ಳೆಯದು, ಕೆಟ್ಟದ್ದು ಎನ್ನುವ ವಿಚಾರಗಳು ತಿಳಿವಳಿಕೆಗೆ ಬಂದರೂ ರೂಢಿ ಬದಲಾವಣೆಯನ್ನು ಒಪ್ಪುವುದಿಲ್ಲ. ಮನುಷ್ಯ ಬಹುತೇಕ ಅವಶ್ಯಕ ದಿನಬಳಕೆಯ ವಸ್ತುಗಳಲ್ಲಿ ಹೊಸತೊಂದನ್ನು ಟ್ರೈ ವಯಸ್ಸು ಇಪ್ಪತ್ತೈದಕ್ಕೆ ನಿಂತುಬಿಡುತ್ತದೆ. ಇಪ್ಪತ್ತೈದರ ಒಳಗೆ ಬಳಸುವ ಸೋಪ್, ಟೂತ್ಪೇಸ್ಟ್, ಶೇವಿಂಗ್ ಕ್ರೀಮ್ಗಳನ್ನೇ ಬಹುತೇಕರು ನಂತರದ ಜೀವನದಲ್ಲಿ ಬಳಸುತ್ತಾರೆ.
ಹಾಗಾಗಿ ನಂತರದ ವಯಸ್ಸಿನ ಮಾರ್ಕೆಟ್ ಅನ್ನು ಹೆಚ್ಚಿನ ಜಾಹೀರಾತುಗಳನ್ನು ಟಾರ್ಗೆಟ್ ಮಾಡುವುದು ಕಡಿಮೆ. ಇಪ್ಪತ್ತೈದು ವಯಸ್ಸಿನ ನಂತರದವರನ್ನು ಟಾರ್ಗೆಟ್ ಮಾಡುವ ಜಾಹೀರಾತುಗಳು ಸಾಮಾನ್ಯವಾಗಿ ಆರೋಗ್ಯ ಮತ್ತು ದೇಹ ಸೌಂದರ್ಯಕ್ಕೆ ಸಂಬಂಧಿಸಿದ್ದೇ ಇರುತ್ತದೆ. ನಿಮ್ಮ ಮುಂದೆ ಬರುವ ಟಿವಿ ಜಾಹೀರಾತುಗಳನ್ನು ನೋಡಿದಲ್ಲಿ ಇದೆಲ್ಲ ಗ್ರಹಿಕೆಗೆ ಬರುತ್ತದೆ.
ಇನ್ನೊಂದು ವಿಚಾರವೆಂದರೆ ನೀವು ಚಿಕ್ಕವರಿರುವಾಗ ಬಳಸಿದ, ಅದೇ ರೀತಿಯ ವಸ್ತುಗಳ, ಅದೇ ರೀತಿಯ ಜಾಹೀರಾತುಗಳು ಕಾಣಿಸಿಕೊಂಡಾಗ ಮತ್ತು ಅದನ್ನು ಮಕ್ಕಳು ಬಯಸಿದಾಗ ಆ ವಸ್ತುವನ್ನು ಖರೀದಿಸುವ ಸಾಧ್ಯತೆ ಕೂಡ ಅತಿ ಹೆಚ್ಚು.
ಅಂದು ಪ್ರಾಡಕ್ಟ್ ಎಡೆಗೆ ಒಂದು ನೊಸ್ಟಾಲ್ಜಿಯಾ – ಉತ್ಕಟತೆ ಬೆಳೆದಿರುತ್ತದೆ. ಆಗ ಅಲ್ಲಿ ವಯಸ್ಕರ ವಿಶ್ಲೇಷಣಾತ್ಮಕ ಬುದ್ಧಿ ಪಕ್ಕಕ್ಕೆ ಸರಿದುಬಿಡುತ್ತದೆ. ಎಲ್ಲ ಪೋಷಕರಿಗೂ ತಾವು ಅನುಭವಿಸಿದ ಉತ್ತಮವಾದದ್ದನ್ನು ಮಕ್ಕಳಿಗೂ ಅನುವು ಮಾಡಿಕೊಡುವ ಹಂಬಲ ಇದೆಲ್ಲವನ್ನು ಮಾಡಿಸುತ್ತಿರುತ್ತದೆ. ಈಗಿನ ಮಧ್ಯವಯಸ್ಕರು – ಹೊಸ ತಂದೆ ತಾಯಿಗಳು ಚಿಕ್ಕಂದಿನಲ್ಲಿ ಕಾರ್ಟೂನ್ ನೋಡಿ ಬೆಳೆದವರು. ಆ ಕಾರಣಕ್ಕೆ ಈಗೀಗ ಹಳೆಯ ಎರಡು ದಶಕದ ಹಿಂದಿನ ಕಾರ್ಟೂನ್ ಕ್ಯಾರೆಕ್ಟರ್ ಹೋಲುವ ಕಾರ್ಟೂನ್ ಗಳನ್ನು ಜಾಹೀರಾತಿಗೆ ಬಳಸುವ ಹಿಂದಿನ ಮರ್ಮ ಬಿಡಿಸಿ ಹೇಳಬೇಕಿಲ್ಲ.
ಕಾರ್ಟೂನ್ ಎಂದರೆ ಮಕ್ಕಳು ಕನೆಕ್ಟ್ ಆಗಿಬಿಡುತ್ತಾರೆ. ಈ ಎಲ್ಲ ಕಾರಣಗಳಿಂದ ಚಿಲಿ ಮತ್ತು ಹತ್ತಾರು ದೇಶಗಳಲ್ಲಿ ಜಾಹೀರಾತು ಗಳು ಕಾರ್ಟೂನ್ ಮತ್ತು ಮಾಸ್ಕೊಟ್ಸ್ (ಕಾರ್ಟೂನ್ ವೇಷ) ಅನ್ನು ಬಳಸದಂತೆ ನಿಷೇಧ ವಿಧಿಸಲಾಗಿದೆ. ಟಿವಿ ಮತ್ತು ಇಂದು ಕಾಣುವ ಜಾಹೀರಾತುಗಳ ವಿಧಾನಗಳು ಹೊಸತು. ಈಗ ಮಧ್ಯವಯಸ್ಕರಾಗಿರುವವರು ಬಹುತೇಕ ಈ ರೀತಿಯ ಒಂದಿಂದು ಜಾಹೀರಾತನ್ನು ನೋಡಿಯೇ ಬೆಳೆದವರು. ಹಾಗಾಗಿ ಈಗ ಜಾಹೀರಾತಿನ ಪರಿಣಾಮವನ್ನು ಒಬ್ಬ ವ್ಯಕ್ತಿಯ ಜೀವಮಾನದ ಜತೆ ನೋಡುವ ಸಾಧ್ಯತೆಗಳಿವೆ.
ಚಿಕ್ಕಂದಿನಿಂದ ನೋಡಿಕೊಂಡು ಬಂದ ಜಾಹೀರಾತು ಹೇಗೆ ನಮ್ಮನ್ನು ಆವರಿಸಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಮೆಕ್ಸಿಕೋ ಮತ್ತು ಕೋಕಾಕೋಲಾ. ಮೆಕ್ಸಿಕೋ ಅಂಥಾ ಶ್ರೀಮಂತ ದೇಶವೇನಲ್ಲವಲ್ಲ. ಕೋಕಾಕೋಲಾ ಮೆಕ್ಸಿಕೋ ಪ್ರವೇಶಿಸಿದ್ದು ಅರವತ್ತರ ದಶಕದಲ್ಲಿ ಆದರೆ ಎಂಭತ್ತರ ದಶಕದಲ್ಲಿ ಯಥೇಚ್ಛ ಹಣವನ್ನು ಕೋಕ್ ಕಂಪನಿ ಅಲ್ಲಿ ಜಾಹೀರಾತಿಗೆ ವ್ಯಯಿಸಿತು. ಆಗೊಂದಿಷ್ಟು ವರ್ಷ ಬರುತ್ತಿದ್ದ ಲಾಭದ ಹೆಚ್ಚಿನಂಶ ಜಾಹೀರಾತಿಗೆ ವಿನಿಯೋಗವಾಗುತ್ತಿತ್ತು.
ಹೀಗೆ ಒಂದಿಡೀ ಜನರೇಷನ್ ಕೋಕ್ ಜಾಹೀರಾತನ್ನು ನೋಡಿಯೇ ಬೆಳೆಯಿತು. ಕ್ರಮೇಣ ಕೋಕಾಕೋಲಾ ಎಂದರೆ
ಬಾಯಾರಿಕೆಯಾದಾಗ ನೀರಿಗಿಂತ ಮೊದಲು ನೆನಪಾಗುವ ಸ್ಥಿತಿ ನಿರ್ಮಾಣವಾಯಿತು. ದೇಹ ಕೂಡ ಸಕ್ಕರೆಯ ಚಟಕ್ಕೆ ಬಿದ್ದಿತು.
ಈಗ ಕೋಕಾಕೋಲಾ ಎಂದರೆ ಅಲ್ಲಿನ ಸಂಸ್ಕೃತಿಯ ಭಾಗವಾಗಿ ಹೋಗಿದೆ. ಕೆಲವು ದೈವಗಳಿಗೆ ಅಲ್ಲಿ ಕೋಕ್ ನೈವೇದ್ಯ ಮಾಡು ವಷ್ಟು. ಇದನ್ನು ತಮಾಷೆಗೆ ಹೇಳುತ್ತಿಲ್ಲ. ಈಗ ಈ ದೇಶ ಕೋಕಾಕೋಲಾ ಬಳಕೆಯಲ್ಲಿ (ಪರ್ ಕ್ಯಾಪಿಟಾ) ಜಗತ್ತಿನ ಮುಂದೆ. ಇಂದು ಅಲ್ಲಿನ ಯಾರೊಬ್ಬರೂ ಅದೆಷ್ಟೇ ಹೇಳಿದರೂ, ಸರಕಾರ ಬಾಯಿ ಬಡಿದುಕೊಂಡರು ಕೋಕ್ ಕುಡಿಯುವುದು ನಿಲ್ಲಿಸು ತ್ತಿಲ್ಲ. ಮಕ್ಕಳ ಸ್ಥೂಲಕಾಯದಲ್ಲಿ ಮೆಕ್ಸಿಕೋ ಈಗ ನಂಬರ್ ಒನ್.
ಡಯಾಬಿಟೀಸ್ ಎಂದರೆ ಅಲ್ಲಿ ಅದೊಂದು ರೋಗವೇ ಅಲ್ಲ – ಅಲ್ಲಿನ ಅರೋಗ್ಯ ಸಂಸ್ಥೆ ಹದಿನಾರು ವರ್ಷಕ್ಕೆ ಡಯಾಬಿಟೀಸ್ ಪರೀಕ್ಷೆ ಮಾಡಿಕೊಳ್ಳಲು ಹೇಳುತ್ತದೆ, ಒತ್ತಾಯಿಸುತ್ತದೆ. ದಿನಕ್ಕೆರಡು ಬಾರಿ ಇನ್ಸುಲಿನ್ ಚುಚ್ಚಿಕೊಂಡಾದರೂ ಸರಿ, ಕೋಕ್ ಕುಡಿಯಲೇ ಬೇಕು. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿಲ್ಲದೇ ಅಲ್ಲ. ಆದರೂ ಈ ಸಮಾಜದ ಆದ ರೂಢಿ ಏನು ಮಾಡಿ ದರೂ ಹೋಗುವಂತಿಲ್ಲ.
ಇದಕ್ಕೆಲ್ಲ ನೇರ ಕಾರಣ – ಮೂಲದಲ್ಲಿ ಎಂಭತ್ತರಿಂದ ತೊಂಬತ್ತರ ದಶಕದ ಜಾಹೀರಾತುಗಳು. ಇಂದು ಕೋಕಾಕೋಲಾ ಅಮೆರಿಕಾ ಮೆಕ್ಸಿಕೋ ಬಿಡಿ – ಚೀನಾ, ಜಮೈಕಾ, ಸೌದಿ ಅರೇಬಿಯಾ ಹೀಗೆ 193 ದೇಶಗಳಲ್ಲಿ ಆಯಾ ದೇಶಗಳ ಟಾಪ್ ಇಪ್ಪತ್ತು ನಟರು ಅಥವಾ ಆಟಗಾರರನ್ನು ಕೋಕಾಕೋಲಾ ತನ್ನ ಜಾಹೀರಾತಿಗೆ ಬಳಸಿಕೊಳ್ಳುತ್ತದೆ.
ಮೆಕ್ಸಿಕೋನಂತೆ ಇನ್ನೊಂದಿಷ್ಟು ದೇಶಗಳ ಸ್ಥಿತಿ ಮುಂದಿನ ದಿನಗಳಲ್ಲಿ ನೋಡಬಹುದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕೊಕ್ ಇಲ್ಲಿ ಒಂದು ಉದಾಹರಣೆ. ಇದು ಜಾಹೀರಾತಿನ ತಾಕತ್ತು. ಜಾಹೀರಾತುಗಳಲ್ಲಿ ಮನುಷ್ಯನ ಯಾವೆಲ್ಲ ಎಮೋಷನ್
ಗಳನ್ನು ಬಳಸಲು ಸಾಧ್ಯವೋ ಅದೆಲ್ಲವನ್ನು ಬಳಸಲಾಗುತ್ತದೆ ಎನ್ನುವುದು ಸೂಕ್ಷ್ಮಗ್ರಾಹಿಗಳಾಗಿದ್ದಲ್ಲಿ ನಿಮ್ಮ ಗಮನಕ್ಕೆ
ಬಂದಿರುತ್ತದೆ. ಸಾಂಬಾರು ಪದಾರ್ಥಗಳ ಜಾಹೀರಾತಿನಲ್ಲಿ ಅಮ್ಮನ ಮನೆಯ ಎಮೋಷನ್ ಬಳಸುವುದು ಸಾಮಾನ್ಯ.
ಮಹಿಳೆಯರನ್ನು ಟಾರ್ಗೆಟ್ ಮಾಡುವಾಗಲೆ ಅಲ್ಲಿ ದೇಹ ಸೌಂದರ್ಯ ಅಥವಾ ತಾಯಿಯ ಮನೆಯ ನೆನಪಿಗೆ ಸಂಬಂಧಿಸಿದ ಏನಾದರು ಇದ್ದೇ ಇರುತ್ತದೆ. ಇನ್ನೊಂದು ಹೆಚ್ಚಾಗಿ ಬಳಸಲ್ಪಡುವುದು ಮಹಿಳೆಯರ ಸ್ವಾವಲಂಬನೆ ಮತ್ತು ಸಮಾಜದಲ್ಲಿ ಗಂಡಸರಿಗೆ ಸಮ ಎನ್ನುವ ಭಾವದ ಸುತ್ತ. ಹತ್ತೊಂಬತ್ತನೇ ಶತಮಾನದಲ್ಲಿ ಅಮೆರಿಕಾದಲ್ಲಿ ಮಹಿಳೆಯರು ಅಷ್ಟಾಗಿ ಸಿಗರೇಟ್ ಸೇವನೆ ಮಾಡುತ್ತಿರಲಿಲ್ಲ. ಮಾಡಿದರೂ ಸಾರ್ವಜನಿಕವಾಗಿ ಸಿಗರೇಟ್ ಸೇವನೆ ಇರಲೇ ಇಲ್ಲ.
ಲಕ್ಕಿ ಸ್ಟ್ರ ಕ್ ಎನ್ನುವ ಸಿಗರೇಟ್ ಕಂಪನಿ ಸಿಗರೇಟ್ ಅನ್ನು ಮಹಿಳೆಯರ ಸ್ವಾತಂತ್ರ್ಯ ಎನ್ನುವಂತೆ ಬಿಂಬಿಸುವ ಜಾಹೀರಾತು ಗಳನ್ನು ನಿರ್ಮಿಸಿ ಪ್ರಸಾರಮಾಡಲು ಶುರುಮಾಡಿತು. ಇದನ್ನು ಸಮಾಜದ ಮಹಿಳೆಯರೆಲ್ಲ ಒಂದು ಮೂವ್ಮೆಂಟ್’ ಎಂದೇ
ಪರಿಗಣಿಸಿದರು. ಇದರಿಂದ ಮುಂದಿನ ಒಂದೆರಡು ವರ್ಷದಲ್ಲಿ ಮಹಿಳೆಯರು ಸಿಗರೇಟ್ ಸೇದುವುದು ಇಪ್ಪತ್ತು ಪಟ್ಟು ಹೆಚ್ಚಿತು
– ಲಕ್ಕಿ ಸ್ಟ್ರ ಕ್ ಸಿಗರೇಟ್ ಸೇದುವುದು ಮಹಿಳೆಯ ಸಮಾನತೆಯ ಪ್ರತೀಕವಾಗಿ ಬಿಕರಿಯಾಯಿತು. ಇಲ್ಲಿ ತಾರತಮ್ಯದ ವಿಚಾರವೇ
ಈ ಸಿಗರೇಟ್ ಕಂಪನಿಯ ಜಾಹೀರಾತಿಗೆ ಬಂಡವಾಳವಾದದ್ದು.
ಲಕ್ಕಿ ಸ್ಟ್ರ ಕ್ ಇನ್ನೊಂದು ಹಂತ ಮುಂದಕ್ಕೆ ಹೋಗಿ ಇವರ ಸಿಗರೇಟ್ ಬಳಸದ ಹೆಂಗಸರನ್ನು ಸ್ಥೂಲಕಾಯಕ್ಕೆ ಮತ್ತು ಹೋಲಿಕೆಗೆ ಇವರ ಸಿಗರೇಟ್ ಬಳಸುವವರನ್ನು ತೋರಿಸುವಾಗ ತೆಳ್ಳನೆಯ ದೇಹದ ಮಹಿಳೆಯನ್ನು ಬಳಸುವುದರ ಮೂಲಕ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಇವರ ಸಿಗರೇಟ್ ಕಾರಣ ಎಂದು ಪರೋಕ್ಷವಾಗಿ ತೋರಿಸಿ ತನ್ನ ಮಾರಾಟವನ್ನು ಐವತ್ತು ಪಟ್ಟು ಹೆಚ್ಚಿಸಿಕೊಂಡಿತು. ಇಂದಿನ ಜಾಹೀರಾತು ಜಗತ್ತು ಅಷ್ಟು ಸುಲಭವಲ್ಲ.
ಜನರ ಮನಸ್ಸಿಗೆ ಜಾಹೀರಾತು ತಲುಪುವಂತೆ ಮಾಡುವುದು ಕೂಡ ಕಷ್ಟ. ಜಾಹೀರಾತು ತಲುಪಿಸುವ ಮೊದಲು ಅಂದು ಗಟ್ಟಿ
ಮಾಧ್ಯಮದ ಅವಶ್ಯಕತೆಯಿರುತ್ತದೆ. ಇದನ್ನು ಮೊದಲು ಮನಗಂಡದ್ದು ನ್ಯೂಯೋರ್ಕ್ ಸನ್ ಪತ್ರಿಕೆ. 1935ರಲ್ಲಿ ಸನ್
ಪತ್ರಿಕೆ ಮುಖಪುಟದಲ್ಲಿ ಒಂದು ಸುದ್ದಿಯನ್ನು ಪ್ರಕಟಿಸಿತು. ಸುದ್ದಿ ಹೀಗಿತ್ತು – ದಕ್ಷಿಣ ಆಫ್ರಿಕಾದ ಖಗೋಳಶಾಸ್ತ್ರಜ್ಞ ಅದ್ಭುತ ವಾದ ಹೊಸ ಟೆಲಿಸ್ಕೊಪ್ ಒಂದನ್ನು ಕಂಡುಹಿಡಿದಿದ್ದಾನೆ.
ಇದರ ಮೂಲಕ ಚಂದ್ರನ ಮೇಲ್ಮೆ ನ ಅತಿ ಸೂಕ್ಷ ಗಳನ್ನು ನೋಡಬಹುದು ಎಂದಿತ್ತು. ಮುಂದಿನ ಕೆಲವು ಆವೃತ್ತಿಗಳಲ್ಲಿ ಇದರದ್ದೇ ಮುಂದಿನ ಸುದ್ದಿ. ಚಂದ್ರನಲ್ಲಿ ಸಮುದ್ರವಿದೆ, ಅರಣ್ಯಗಳಿವೆ ಎಂದು ವರದಿಗಳಾದವು. ಕೊನೆಗೆ ಒಂದು ಆವೃತ್ತಿಯಲ್ಲಿ ಚಂದ್ರನ ಮೇಲೆ ವಾಸಿಸುವ ವೆಸ್ಪಾಟೆಲಿಯೋ ಹೋಮೋ’ ಎನ್ನುವ ಜೀವಿಯ ಬಗ್ಗೆ ವಿವರಣೆಯಿತ್ತು. ಈ ಜೀವಿ ಮನುಷ್ಯನಂಥ ದೇಹ ಹೊಂದಿದ್ದು ಅದಕ್ಕೆ ಬಾವಲಿಯ ರೀತಿಯ ರೆಕ್ಕೆಗಳಿವೆ ಎಂದು. ಇದೆಲ್ಲ ಸುಳ್ಳು ಸುದ್ದಿಗಳು. ಈ ಆರು ಸರಣಿ ಲೇಖನಗಳು Great Moon Hoax ಎಂದೇ ಕುಖ್ಯಾತ. ಆದರೆ ಇದರಿಂದ ಆದದ್ದೇನು ಗೊತ್ತೇ? ನ್ಯೂಯೋರ್ಕ್ ಸನ್ ಪತ್ರಿಕೆಯ ಪ್ರಸರಣ ಹೆಚ್ಚಿತು.
ಪತ್ರಿಕೆಯ ಚಂದಾದಾರರು ಹೆಚ್ಚಾದರು. ಪತ್ರಿಕೆಗೆ ಜಾಹೀರಾತುಗಳು ಸಾಗರೋಪಾದಿಯಾಗಿ ಹರಿದು ಬಂದವು. ಇದರಿಂದ ಪತ್ರಿಕೆಯ ಬೆಲೆ ಕಡಿಮೆ ಮಾಡಲು ಸಾಧ್ಯವಾಯಿತು. ಈ ರೀತಿ ಮೊದಲು ಗಮನ ಸೆಳೆದು, ಪ್ರಸರಣ ಹೆಚ್ಚಿಸಿಕೊಂಡು ಆಮೇಲೆ ಜಾಹೀರಾತನ್ನು ಕೊಡುವುದು ಇನ್ನೊಂದು ರೀತಿ. ಯುಟ್ಯೂಬ್ನಲ್ಲಿ ನೀವು ಈ ತರಹದ ಹಣೆಬರಹದ’ ವಿಡಿಯೋ ನೋಡ ಬಹುದು. ಅನಾಯ್ತು ಗೊತ್ತಾ? ಅವರು ಏನು ಮಾಡಿದರು ಗೊತ್ತಾ? ಆ ನಟಿ ಅಲ್ಲಿ ಹಾಗೆ ವ್ಯವಹರಿಸಿದ್ದರ ಹಿನ್ನೆಲೆ ಯೇನು? ಆ ಆಟಗಾರನ ಹೆಂಡತಿಯ ವಯಸ್ಸು ಎಷ್ಟು ಗೊತ್ತಾ? ಹೀಗೆ ಗೊತ್ತಾ ಗೊತ್ತಾ ಎನ್ನುವ ವಿಡಿಯೋಗಳು. ಇವೆಲ್ಲ ಗಮನವನ್ನು ಸೆಳೆಯುವ, ಆ ಮೂಲಕ ನೋಡುಗರನ್ನು ಹೆಚ್ಚಿಸಿಕೊಂಡು ಯುಟ್ಯೂಬ್ನಿಂದ ಹಣ ಪಡೆಯುವ ವ್ಯವಹಾರ.
ಅಲ್ಲಿ ಯುಟ್ಯೂಬ್ ಜಾಹೀರಾತಿನಿಂದ ಹಣ ಪಡೆಯುವುದು. ಈಗೀಗ ಜಾಹೀರಾತನ್ನು ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಯುಟ್ಯೂಬ್ ಅನ್ನೇ ತೆಗೆದುಕೊಳ್ಳುವುದಾದರೆ ಅಲ್ಲಿ ಕೆಲವೊಮ್ಮೆ ಸ್ಕಿಪ್ ಆಡ್’ ಬಟನ್ ಮಾಯವಾಗಿರುತ್ತದೆ. ಹಾಡು ಕೇಳಿಸುವ
ಅಪ್ಲಿಕೇಶನ್ನಲ್ಲಿ ಜಾಹೀರಾತು ಕೇಳಿ ಇಲ್ಲವೇ ಹಣ ಕೊಟ್ಟು ಚಂದಾದಾರರಾಗಿ ಎನ್ನಲಾಗುತ್ತದೆ. ವಿಸ್ಬುಕ್ ಟ್ವಿಟ್ಟರ್ ಮೊದಲಾದ ಸೋಷಿಯಲ್ ಮೀಡಿಯಾದಲ್ಲಿ ಜಾಹೀರಾತಿನಿಂದ ಬಚಾವ್ ಆಗುವುದು ಅಸಾಧ್ಯ.
ಇನ್ನು ಟಿವಿ: ರಿಮೋಟ್ ಕಂಟ್ರೋಲ್ ಆವಿಷ್ಕಾರವಾಗಿ ಮನೆ ಮನೆ ಸೇರಿದ್ದೇ ಜಾಹೀರಾತಿನಿಂದ ತಪ್ಪಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎನ್ನುವ ಜಾಹೀರಾತಿನಿಂದ. ಮೊದಲು ಝೆನಿತ್ನ ರೋಮೋಟ್ ಪಿಸ್ತೂಲ್ ರೀತಿಯ ಆಕಾರದ್ದಿರುತ್ತಿತ್ತು. ಅದನ್ನು ಆಡ್ ಕಿಲ್ಲರ್’ – ಜಾಹೀರಾತನ್ನು ಕೊಲ್ಲುವ ಸಾಧನ ಎಂದೇ ಮಾರಾಟ ಮಾಡಲಾಗುತ್ತಿತ್ತು.
ನಂತರದಲ್ಲಿ ಎಲ್ಲ ಟಿವಿ ವಾಹಿನಿಗಳು ಜಾಹೀರಾತನ್ನು ಏಕ ಕಾಲದಲ್ಲಿ ಪ್ರಸಾರಮಾಡಲು ಶುರುಮಾಡಿದ್ದರಿಂದ ಇವತ್ತು ಅಲ್ಲಿ ಕೂಡ ಜಾಹೀರಾತಿನಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಜಾಹೀರಾತಿನ ರಾಕ್ಷಸೀಕರಣ ಎಂದೇನಲ್ಲ. ಜಾಹೀರಾತಿನಿಂದಾಗಿಯೇ ಅದೆಷ್ಟೋ ಸಾಧ್ಯವಾಗಿದೆ. ಜಾಹೀರಾತಿಲ್ಲದಿದ್ದರೆ ಇಂದಿನ ಆಧುನಿಕ ಮೀಡಿಯಾ, ಟಿವಿ ವಾಹಿನಿಗಳು, ಎಫ್ಎಂ, ರೇಡಿಯೋ, ಪತ್ರಿಕೆಗಳು ಫ್ರೀ ಅಥವಾ ಇಷ್ಟು ಕಡಿಮೆ ಬೆಲೆಗೆ ಲಭ್ಯವಾಗುತ್ತಿರಲಿಲ್ಲ.
ನಾವು ಇವೆಲ್ಲವಕ್ಕೆ ನೇರ ಬೆಲೆ ತೆರಬೇಕಾಗುತ್ತಿತ್ತು. ಜಗತ್ತನ್ನೇ ಒಗ್ಗೂಡಿಸುವ ಸೋಷಿಯಲ್ ಮೀಡಿಯಾವನ್ನು ಕೂಡ ಹಣ
ಕೊಟ್ಟು ಚಂದದಾರರಾಗಬೇಕಿತ್ತು. ಇಂಟರ್ನೆಟ್ನಲ್ಲಿ ಒಂದು ಕಡೆ ಏನಾದರು ಹುಡುಕಿದರೆ ಜಾಹೀರಾತುಗಳು ಬೆನ್ನಿಗೇ
ಬಿದ್ದು ಬಿಡುತ್ತವೆ. ಹೋದಲ್ಲಿ, ಕೂತಲ್ಲಿ, ಮೊಬೈಲ್ನಲ್ಲಿ, ಕಂಪ್ಯೂಟರ್ನಲ್ಲಿ ಹೀಗೆ ಎಲ್ಲಿ ಇಂಟರ್ನೆಟ್ ಬಳಸುತ್ತೇವೆಯೋ
ಅಲ್ಲ ಈ ಜಾಹೀರಾತುಗಳು ಪ್ರಕಟವಾಗುತ್ತವೆ. ಇಂಟರ್ನೆಟ್ನ ಬಹುತೇಕ ಎಲ್ಲವೂ ಜಾಹೀರಾತಿನಿಂದಲೇ ಸಾಧ್ಯವಾದದ್ದು. ಇಂದಿನ ದಿನದಲ್ಲಿ ಜಾಹೀರಾತಿನಿಂದ ತಪ್ಪಿಸಿಕೊಳ್ಳುತ್ತೇನೆ, ವಿಮುಖವಾಗಿ ಬದುಕುತ್ತೇನೆ ಎನ್ನುವುದೆಲ್ಲ ಅಸಾಧ್ಯದ ಮಾತು, ಕಾಡಿನಲ್ಲಿ ಬದುಕಬೇಕಷ್ಟೆ.
ಆದರೆ ಆಗಾಗ ಈ ಜಾಹೀರಾತು ನಮ್ಮ ಮೇಲೆ ಹೇಗೆ, ಎಲ್ಲಿ ಪರಿಣಾಮ ಬೀರುತ್ತಿದೆ ಎನ್ನುವ ಬಗ್ಗೆ ವಿಶ್ಲೇಷಿಸಿಕೊಳ್ಳುತ್ತಿರಬೇಕು. ಇಂದಿನ ಮೀಡಿಯಾ ಎಂದರೆ ಅಲ್ಲಿ ನಮಗೆ ಬೇಕಾದದ್ದು ಹಾಲು, ಅದರ ಜತೆ ಬೆರಕೆಯಾಗಿ ಬರುವುದು ಜಾಹೀರಾತೆಂಬ ನೀರು.
ಅಲ್ಲಿ ಹಂಸ ಕ್ಷೀರ ನ್ಯಾಯ, ಹಾಲನ್ನಷ್ಟೇ ಹೀರುವುದು ಸುಲಭವಲ್ಲ ಆದರೆ ಆ ನಿಟ್ಟಿನಲ್ಲಿ ನಿರಂತರ ಜಾಗ್ರತೆ, ಪ್ರಜ್ಞೆ ಮತ್ತು
ಪ್ರಯತ್ನ ಅವಶ್ಯಕ.