Friday, 13th December 2024

ವಯಸ್ಸು ಆಯಸ್ಸಿಗಿಂತ ಮನಸು ಮುಖ್ಯ

ನಾಡಿಮಿಡಿತ

ವಸಂತ ನಾಡಿಗೇರ

vasanth.nadiger@gmail.com

ಇದೊಂದು ಅತ್ಯಂತ ರೋಚಕ ಕಥೆ. ಈ ಕಥಾನಾಯಕನ ಗುರುತನ್ನು ಮೊದಲೇ ಹೇಳಿದರೆ ಸ್ವಾರಸ್ಯ ಇರುವುದಿಲ್ಲ. ಓದುತ್ತಿರು
ವಂತೆಯೇ ಯಾರಿವರು ಎಂಬುದು ನಿಮಗೇ ಅರ್ಥವಾಗುತ್ತ ಹೋಗುತ್ತದೆ. ಆದ್ದರಿಂದ ಸಾಹಸಗಾಥೆ ಯನ್ನು ಹಾಗೆಯೇ ಓದುತ್ತ ಹೋಗಿ.

ಹೆಸರು ಹಾರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್. ಅಮೆರಿಕದ ಇಂಡಿಯಾನಾ ರಾಜ್ಯದ ಹೆನ್ರಿವಿಲ್ಲೆ ಎಂಬಲ್ಲಿ 1890ರ ಸೆಪ್ಟೆಂಬರ್ 9 ರಂದು ಜನನ. ಇವರ ಬದುಕಿನಲ್ಲಿ ಹೋರಾಟ ಹುಟ್ಟಿನಿಂದಲೇ ಆರಂಭವಾಗುತ್ತದೆ. ಅದಕ್ಕಾಗಿಯೇ ಈ ಜೀವನ ಗಾಥೆಯನ್ನು ನಾನು ನಿಮ್ಮ ಮುಂದಿಡ ಬಯಸಿದ್ದು. ಅವರ ನಾಲ್ಕನೇ ವಯಸ್ಸಿಗೇ ತಂದೆ ತೀರಿಹೋಗುತ್ತಾರೆ. ಇವರ ಬೆನ್ನಿಗೆ ಇನ್ನಿಬ್ಬರು
ಮಕ್ಕಳಿರುತ್ತಾರೆ. ಜೀವನ ನಡೆಸುವುದು ಕಷ್ಟವಾದಾಗ ತಾಯಿ ಕೆಲಸಕ್ಕೆ ಸೇರುತ್ತಾಳೆ.

ಮನೆಯಲ್ಲಿ ಅಡುಗೆ ಕೆಲಸ ಇವರದೇ. ಆಗಿನಿಂದಲೆ ಆ ಕಲೆ ಒಂದಷ್ಟು ಕರಗತವಾಗುತ್ತದೆ. ಮುಂದೆ 1902ರಲ್ಲಿ ತಾಯಿ ಮರು ಮದುವೆ ಮಾಡಿಕೊಳ್ಳುತ್ತಾರೆ. ಮಲತಂದೆಯೊಂದಿಗೆ ಹೊಂದಾಣಿಕೆ ಆಗಲಿಲ್ಲ. ಆಗ ಸ್ಯಾಂಡರ್ಸ್‌ಗೆ ಹದಿನಾರರ ಹರಯ. ಶಾಲೆಗೆ ಶರಣು ಹೊಡೆದು, ತಾಯಿಯ ಒಪ್ಪಿಗೆಯೊಂದಿಗೆ ಮನೆಯಿಂದ ಹೊರಬೀಳುತ್ತಾರೆ. ಅಲ್ಲಿಂದ ಬದುಕಿನ ನಿಜ ಹೋರಾಟ ಶುರುವಾಗುತ್ತದೆ. ಚಿಕ್ಕಪ್ಪನ ಮನೆಯಲ್ಲಿರುತ್ತಾರೆ.

ಅವರು ಸ್ಯಾಂಡರ್ಸ್‌ಗೆ ರೈಲು ಕಂಪನಿಯಲ್ಲಿ ಒಂದು ಕೆಲಸ ಕೊಡಿಸುತ್ತಾರೆ. ಆದರೆ ಆ ಕೆಲಸ ಹೋಗುತ್ತದೆ. 1910ರಲ್ಲಿ ಜೊಸೆಫೀನ್ ಎಂಬ ಯುವತಿಯೊಂದಿಗೆ ಮದುವೆಯೂ ಆಗುತ್ತದೆ. ಈ ನಡುವೆ ಆತ ಮತ್ತೊಂದು ಉಪದ್ವ್ಯಾಪದ ಕೆಲಸ ಮಾಡು ತ್ತಾರೆ. ತನ್ನ ಜನ್ಮದಿನದ ಬಗ್ಗೆ ಸುಳ್ಳು ಮಾಹಿತಿ ಕೊಟ್ಟು ಸೇನಾಪಡೆಗೆ ಭರ್ತಿಯಾಗುತ್ತಾರೆ. ಕ್ಯೂಬಾದಲ್ಲಿ ಕೆಲಸಕ್ಕೆ ಕಳಿಸಿಕೊಡು ತ್ತದೆ (ಯೋಧ ಅಲ್ಲ. ಇತರ ಕೆಲಸ). ಹೆಂಡತಿಯು ಮಕ್ಕಳೊಂದಿಗೆ ತವರು ಸೇರಿ ತಾನೂ ಕೆಲಸವೊಂದನ್ನು ಹುಡುಕಿಕೊಳ್ಳುತ್ತಾಳೆ.

ಆದರೆ ಇವರ ಅಸಲಿಯತ್ತು ಅದ್ಹೇಗೋ ಬಯಲಾದಾಗ ಗೌರವ ದಿಂದಲೇ ಅಲ್ಲಿಂದ ಜಾಗ ಖಾಲಿ ಮಾಡಿಸುತ್ತದೆ. ಈ ನಡುವೆ ಕಾನೂನು ಶಿಕ್ಷಣ ಕಲಿತಿದ್ದರಿಂದ ವಾಪಸು ಬಂದ ಮೇಲೆ ಲಾ ಪ್ರಾಕ್ಟೀಸ್ ಶುರು ಮಾಡುತ್ತಾರೆ. ಅದು ಚೆನ್ನಾಗಿ ನಡೆಯುತ್ತಿರುತ್ತದೆ. ಆದರೆ ಒಮ್ಮೆ ಕೋರ್ಟ್ ನಲ್ಲಿ ಕಕ್ಷಿಗಾರನೊಬ್ಬನೆ ಜತೆ ಜೋರು ಜಗಳ ಆಗಿ ಆತನ ಹೆಸರು ಹಾಳಾಗುತ್ತದೆ. ಅಲ್ಲಿಗೆ ಆ ಕೆಲಸಕ್ಕೂ ಕಲ್ಲು ಬಿತ್ತು. ಆದರೆ ಜೀವನೋಪಾಯಕ್ಕೆ ಏನಾದರೂ ಮಾಡಲೇಬೆಕಲ್ಲ.

ಲೈಫ್ ಇನ್ಷೂರೆನ್ಸ್ ಏಜೆಂಟ್ ಆಗಿ ಒಂದೆರಡು ಕಂಪನಿಗಳಲ್ಲಿ ಕೆಲಸ ಮಾಡಿದ್ದಾಯಿತು. ಅದೂ ಕೈಹಿಡಿಯಲಿಲ್ಲ. ಬೇರೆಯವರ ಜೀವನಕ್ಕೆ ವಿಮೆ ಮಾಡಿಸಿದ್ದಷ್ಟೇ ಬಂತೇ ವಿನಾ ಇವರ ಬದುಕಿಗೆ ವಿಮೆ, ಭದ್ರತೆ, ನೆಮ್ಮದಿ ಎಂಥದ್ದೂ ಸಿಗಲಿಲ್ಲ. ಮುಂದೆ
ಟಯರ್ ಕಂಪನಿಯ ಸೇಲ್ಸ್‌ಮ್ಯಾನ್ ಆಗಿ ಉದ್ಯೋಗ. ಅಲ್ಲೂ ಟಯರ್‌ನಂತೆ ಚಪ್ಪಲಿ ಸವಿಯಿತೇ ಹೊರತು ಯಾವ ಸುಖವೂ ಆಗಲಿಲ್ಲ. ಆದರೀತ ಛಲ ಬಿಡದ ತ್ರಿವಿಕ್ರಮ. ಯಾರೋ ಪುಣ್ಯಾತ್ಮ ಒಂದು ಆಯಿಲ್ ಕಂಪನಿ ನಡೆಸುತ್ತಿದ್ದ. ಇವರಿಗೆ ಸರ್ವಿಸ್ ಸ್ಟೇಷನ್ ಹಾಕಿಕೊಳ್ಳಲು ಅವಕಾಶ ಕಲ್ಪಿಸಿದ.

ಸ್ವಲ್ಪ ಕಾಲ ನಡೆದ ಬಳಿಕ ಆ ಕಂಪನಿಯೇ ಬಾಗಿಲೆಳೆದುಕೊಂಡಿತು. ಈತನ ಬದುಕಿನ ಬಾಗಿಲೂ ಮತ್ತೆ ಮುಚ್ಚಿತು. ಈ ನಡುವೆ
ಹೆರಿಗೆ ಮಾಡಿಸುವ ಕೆಲಸವನ್ನೂ ಸ್ಯಾಂಡರ್ಸ್ ಮಾಡಿದರು ಎಂದರೆ ಯಾವ ಮಟ್ಟಿನ ಅನಿಶ್ಚಯತೆ ಇತ್ತು ಮತ್ತು ಕೆಲಸದ ಜರೂರತ್ತು ಇತ್ತು ಎಂಬುದರ ಅರಿವಾಗುತ್ತದೆ.

ಹೀಗೆ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸ್ಯಾಂಡರ್ಸ್ ಮಾಡದ ಕೆಲಸವಿಲ್ಲ ಎಂಬುದು ಉತ್ಪ್ರೇಕ್ಷೆ ಅಲ್ಲ. ಕೆಲವರು ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ ಎನ್ನುತ್ತಾರೆ. ಅವರ ಅದೃಷ್ಟವೋ, ಕೈಗುಣವೋ ಹಾಗಿರುತ್ತದಂತೆ. ವ್ಯತಿರಿಕ್ತ ಮತ್ತು ವಿಪರ್ಯಾಸ
ಎಂಬಂತೆ ಸ್ಯಾಂಡರ್ಸ್ ಮುಟ್ಟಿದ್ದೆಲ್ಲ ಮಣ್ಣಾಗುತ್ತಿತ್ತು. ಎಲ್ಲೆಲ್ಲೂ ಕಷ್ಟ, ನಷ್ಟ, ಅವಮಾನ ಕೊನೆಗೆ ಬರಿಗೈ.

ಇದೇ ಇವರಿಗೆ ಸೈ. 1930ರವರೆಗೂ ಸ್ಯಾಂಡರ್ಸ್ ಜೀವನ ಇದೇ ರೀತಿ ತೀರ ಕಾಣದೆ ತಿರುಗುವ ಹಡಗಿನಂತೆ ಹೊಯ್ದಾಡುತ್ತಲೇ
ಸಾಗಿತ್ತು. ಆದರೆ 1930ರಿಂದ 1952ರ ನಡುವೆ ಬದುಕಿನಲ್ಲಿ ಒಂದಷ್ಟು ಬದಲಾವಣೆಗಳು ಕಂಡುಬಂದವು. ಏನೇನೋ ಮಾಡುವು ದಕ್ಕಿಂತ ತನಗೆ ಗೊತ್ತಿರುವ ಅಥವಾ ಪರಿಣತಿ ಇರುವ ಕೆಲಸ ಮಾಡುವುದು ಉತ್ತಮ ಎಂದು ಈಗೀಗ ಅನ್ನಿಸತೊಡಗಿತು. ಅಷ್ಟೊತ್ತಿಗೆ ಶೆಲ್ ಆಯಿಲ್ ಕಂಪನಿ, ತನ್ನ  ಸರ್ವಿಸ್ ಸ್ಟೇಷನ್‌ನಲ್ಲಿ ಇವರಿಗೆ ಜಾಗ ಕೊಟ್ಟಿತು.

ಅಲ್ಲಿ ಅವತರಿಸಿದ್ದೇ ಭೀಮಸೇನ, ನಳಮಹಾರಾಜ. ಅಲ್ಲೊಂದು ಗಾಡಿ ಇಟ್ಟುಕೊಂಡು ಚಿಕನ್ – ಮಾಡಿ ಅಲ್ಲಿ ಬರುವ ಟ್ರಕ್‌ಗಳಿಗೆ ಪೂರೈಕೆ ಮಾಡುವ ಕೆಲಸ ಆರಂಭವಾಯಿತು. ಅವರ ಈ ಚಿಕನ್ ರುಚಿಯಾಗಿದ್ದ ರಿಂದ ಬಲುಬೇಗ ಜನಪ್ರಿಯವಾಯಿತು. ಒಂದಷ್ಟು ಕಮಾಯಿ ಆಯಿತು. ಆ ಭಾಗದಲ್ಲಿ ಹೆಸರೂ ಬಂದಿತು. ಹೀಗಿರಲಾಗಿ ಸ್ಯಾಂಡರ್ಸ್ ಕೆಫೆಯನ್ನು ತೆರೆದರು. ಆಗ ಇದ್ದ ಹಣದಲ್ಲಿ ಒಂದು ಮೋಟೆಲ್ (ಹೈವೇ ಬದಿಯ ಹೋಟೆಲ್) ತೆರೆಯುವ ಸಾಹಸವೂ ಆಯಿತು. ಅದು ಸ್ವಲ್ಪ ಸಮಯ ನಡೆಯಿತು. ಆದರೆ ದುರದೃಷ್ಟದ ಶನಿ ಬೆನ್ನುಬಿಡಬೇಕಲ್ಲ. ಇವರ ಮೋಟೆಲ್‌ಗೆ ಬೆಂಕಿ ಬಿತ್ತು.

ಹಾಗೆಯೇ ಇವರ ಕನಸಿಗೂ. ಜಗ್ಗದೆ, ಕುಗ್ಗದೆ ಮತ್ತೆ ನಿರ್ಮಿಸಿ ನಡೆಸಿದ್ದಾಯಿತು. ಆದರೂ ಅಂಥ ಏಳ್ಗೆ ಕಾಣದೆ ಮುಚ್ಚಬೇಕಾ ಯಿತು. ಈ ವೇಳೆಗೆ ಅಂದರೆ 1947ರಲ್ಲಿ ಹೆಂಡತಿ ಜೋಸೆಫಿನಾಗೂ ಅವರ ಸಹವಾಸ ಸಾಕಾಗಿತ್ತೇನೊ. ವಿಚ್ಛೇದನವಾಯಿತು. ಹಣ ಇಲ್ಲ, ಹೇಳಿಕೊಳ್ಳುವಂಥ ಕೆಲಸವಿಲ್ಲ. ಹೆಂಡತಿಯೂ ದೂರಹೋದಳು. ಆದರೆ 1949ರಲ್ಲಿ ಕ್ಲ್ಯಾಂಡಿಯಾ ಪ್ರೈಸ್ ಎಂಬಾಕೆ ಯೊಡನೆ ಮರು ವಿವಾಹವಾಯಿತು. ಅದು ಇದೂ ಮಾಡುತ್ತ ಜೀವನ ನೂಕುತ್ತಿರಲಾಗಿ ಯಾಕೋ ಬದುಕೇ ಭಾರ,
ಬೇಜಾರು ಅನಿಸತೊಡಗಿತು.

ಇನ್ನು ಸಾಕು ಎಂಬ ಭಾವ ಒತ್ತರಿಸಿ ಬರತೊಡಗಿತು. ಅಷ್ಟೊತ್ತಿಗೆ ಒಂದರ್ಥಲ್ಲಿ ಮತ್ತೆ ಖಾಲಿ ಜೇಬು, ಖಾಲಿ ಕೈ ಎಂಬಂತಾಗಿತ್ತು. ವಯಸ್ಸೂ 60 ಆಗಿತ್ತು. ಏನೂ ಮಾಡಲು ತೋಚದೆ ಒಂದು ದಿನ ಅಲ್ಲಿ ಇಲ್ಲಿ ಸುತ್ತುತ್ತ ಒಂದು ಮರದ ಕೆಳಗೆ ಬಂದು ಕುಳಿತರು ಸ್ಯಾಂಡರ್ಸ್. ಜೀವನದ 60 ವರ್ಷಗಳನ್ನು ಸುಮ್ಮನೆ ಕಳೆದ ಹಾಗಾಯಿತು. ಏನನ್ನೂ ಸಾಧಿಸಲಿಲ್ಲ. ಸಂಪಾದನೆ ಮಾಡಲಿಲ್ಲ. ಹೆಂಡತಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಹೋಗಲಿ ನನ್ನ ಭವಿಷ್ಯಕ್ಕಾದರೂ ಏನೆಂದರೆ ಏನೂ ಇಲ್ಲ ಎಂದೆಲ್ಲ, ಏನೆಲ್ಲ ಯೋಚನೆಗಳು ಬಂದವು.

ಅದು ವಿಷಾದ ಲಹರಿ, ವಿಷಣ್ಣ ಭಾವ, ಪಶ್ಚಾತ್ತಾಪದ ಬೆಂಕಿ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಯೋಚನೆಯು ಮನದಲ್ಲಿ ಸುಳಿದುಹೋಯಿತು. ಒಂದು ವಿಲ್ ಬರೆದಿಡೋಣ ಎಂದು ಹೊರಟರು. ಆದರೆ ಒಂದು ಕ್ಷಣ ಒಂದು ಸುದೀರ್ಘ ನಿಟ್ಟುಸಿರು
ತೆಗೆದುಕೊಂಡರು. ಆಗ ಅದೇನೋ ಜ್ಞಾನೋದಯವಾಯಿತು. ಅಲ್ಲಿಗೆ ಒಂದು ದೃಢ ನಿಶ್ಚಯಕ್ಕೆ ಬಂದರು. ಆದದ್ದು ಆಯಿತು. ಇದರಲ್ಲಿ ನನ್ನ ಸಂಪೂರ್ಣ ತಪ್ಪೇನೂ ಇಲ್ಲ. ಮಾಡಿದ್ದು ಕೈಹಿಡಿಯದಿದ್ದರೆ ನಾನು ತಾನೇ ಏನು ಮಾಡಲಾಗುತ್ತೆ. ಆದ್ದರಿಂದ ಇನ್ನು ಮುಂದೆ ನನ್ನ ಹೆಂಡತಿಗಾದರೂ ಬದುಕಬೇಕು. ನಾನು ಏನನ್ನಾದರೂ ಸಾಧಿಸಬೇಕು ಎಂದು ನಿರ್ಧಾರ ಕೈಗೊಂಡರು.

ಹೇಗಿದ್ದರೂ ಅವರ ಬಳಿ ಸರಕಾರ ನೀಡುತ್ತಿದ್ದ 105 ಡಾಲರ್ ಪಿಂಚಣಿ ಹಣ ಇತ್ತಲ್ಲ. ಅದೊಂದೇ ಧೈರ್ಯ. ತಮ್ಮ ಪ್ಲ್ಯಾನ್ ಅನ್ನು ಹೆಂಡತಿಗೆ ತಿಳಿಸಿದರು. ಫ್ರೈಡ್ ಚಿಕನ್ ಮಾಡುವ ಸೀಕ್ರೆಟ್ ರೆಸಿಪಿ ಗೊತ್ತಿತ್ತು. ಪತ್ನಿ ಮಾರ್ಕೆಟ್‌ಗೆ ಹೋಗಿ ಚಿಕನ್ ತಂದರೆ
ಇವರು ಅದರಿಂದ ರುಚಿಕಟ್ಟಾದ ಚಿಕನ್ – ಮಾಡುತ್ತಿದ್ದ. ಮನೆ ಮನೆಗೆ ಹೋಗಿ ಅದನ್ನು ತಲುಪಿಸುವ ವ್ಯವಸ್ಥೆ ಆಯಿತು. ಕ್ರಮೇಣ ಇದು ಕೈಹಿಡಿಯಿತು. ಹಾಗೆಂದು ಸ್ಯಾಂಡರ್ಸ್ ಅಲ್ಲಿಗೇ ಸುಮ್ಮನಾಗಲಿಲ್ಲ.

ಸುಮ್ಮನೇ ಕುಳಿತುಕೊಳ್ಳುವ ಜಾಯಮಾನವೂ ಅವರದಲ್ಲ. ಅಂಥ ಆಸಾಮಿಯೂ ಅವರಲ್ಲ. ಕೆಂಟಕಿಯ ಕಾರ್ಬಿನ್ ನಗರದಲ್ಲಿ
ಸ್ಯಾಂಡರ್ಸ್ ಕೆಫೆ ತೆರೆದರು. ಚಿಕಿನ್ ಕ್ಲಿಕ್ ಆಯಿತಾದರೂ ವ್ಯಾಪಾರ ಅಷ್ಟಕ್ಕಷ್ಟೆ. ಮತ್ತೆ ವಿಧಿ ಇಲ್ಲದೆ ಅದನ್ನು ಮಾರಾಟ ಮಾಡಿದರು. ಆಗೆಲ್ಲ ತಮ್ಮ ಚಿಕನ್ ಖಾದ್ಯ ವನ್ನು ತೆಗೆದುಕೊಂಡು ರೆಸ್ಟೊರೆಂಟ್‌ನಿಂದ ರೆಸ್ಟೊರೆಂಟ್ ಗೆ ಅಲೆದರು. ಇದು ನಂಬಲು ಅಸಾಧ್ಯವಾದರೂ ಸತ್ಯ.

1009 ಬಾರಿ ತಿರಸ್ಕೃತರಾದರು. ಅಂದರೆ ಅವರ ಆಫರ್ ಅನ್ನು ಯಾರೂ ಒಪ್ಪಲಿಲ್ಲ. ಆದರೂ ಅದೊಮ್ಮೆ ಲಕ್ ತಿರುಗಿತು. ಒಂದು ರೆಸ್ಟೊರೆಂಟ್‌ನಲ್ಲಿ ಅವಕಾಶ ಸಿಕ್ಕಿತು. ಅಲ್ಲಿಯೇ ಅವರು ಚಿಕನ್ ತಯಾರಿಸಿಕೊಡುತ್ತಿದ್ದರು. ಹೀಗೆ ಅವರು ತಮ್ಮ ಕಾರಿನಲ್ಲಿ ಹೋಟೆಲ್‌ನಿಂದ ಹೋಟೆಲ್‌ಗೆ ತೆರಳಿ ಚಿಕನ್ ಮಾಡುತ್ತಿದ್ದರು. ಎಷ್ಟೋ ವೇಳೆ ಕಾರಿನಲ್ಲಿಯೇ ಮಲಗಿದ್ದೂ ಉಂಟು. ಕ್ರಮೇಣ ಇದು ಜನಪ್ರಿಯವಾಗುತ್ತಿದ್ದಂತೆ ಫ್ರಾಂಚೈಸಿಗಳನ್ನು ನೀಡತೊಡಗಿದರು.

ರೆಸ್ಟೊರೆಂಟ್‌ಗಳಲ್ಲಿ ತಮ್ಮ ಸೀಕ್ರೆಟ್ ರೆಸಿಪಿಯ ಪ್ಯಾಕೆಟ್ ನೀಡುತ್ತಿದ್ದರು, ಅದಕ್ಕೆ ಇಂತಿಷ್ಟು ಎಂದು ಹಣ ಪಡೆಯುತ್ತಿದ್ದರು. ಆಗೆಲ್ಲ ಚಿಕನ್ – ಮಾಡಲು ತುಂಬಾ ಸಮಯ ಬೇಕಾಗುತ್ತಿತ್ತು. ಆದರೆ ಸ್ಯಾಂಡರ್ಸ್ ‘ಪ್ರೆಷರ್ -’ ವಿಧಾನದಲ್ಲಿಮಾಡುತ್ತಿದ್ದರಿಂದ ದಿಢೀರ್ ಆಗಿ ತಯಾರಿಸಬಹುದಾಗಿತ್ತು. ಅಲ್ಲದೆ ಅವರ ಒಂದು ಸೀಕ್ರೆಟ್ ರೆಸಿಪಿ ಇತ್ತಲ್ಲ. ಅದರಿಂದಾಗಿ ಅದಕ್ಕೆ ವಿಶಿಷ್ಟವಾದ ಟೇಸ್ಟ್ ಬಂದಿತ್ತು. ಇದು ಬಲುಬೇಗ ಜನಪ್ರಿಯವಾಯಿತು.

ಬಹಳಷ್ಟು ಜನರು ಇವರ ಫ್ರಾಂಚೈಸಿ ಪಡೆದರು. ಈ ರೆಸ್ಟೊರೆಂಟ್‌ಗಳ ಆದಾಯದಲ್ಲಿ ಶೆ.70ರಷ್ಟು ವೃದ್ಧಿ ಕಂಡುಬಂತು. ಇದಕ್ಕೆ ಕಾರಣ ಇವರ ಚಿಕನ್. ಹೀಗಿರುತ್ತಿರಲಾಗಿ ಸ್ಯಾಂಡರ್ಸ್ ಜೀವನದ ಬಲುದೊಡ್ಡ ಹೊರಳು ಬಂದಿತು. ಪೀಟ್ ಹಾರ್ಮನ್
ಎಂಬುವವರು ಸ್ಯಾಂಡರ್ಸ್‌ನ ಗೆಳೆಯ. ಉಟಾ ರಾಜ್ಯದ ಸಾಲ್ಟ್ ಲೇಕ್ ಸಿಟಿಯಲ್ಲಿ ರೆಸ್ಟೊರೆಂಟ್ ನಡೆಸುತ್ತಿದ್ದರು. ಈ ರೆಸ್ಟೊ ರೆಂಟ್‌ಗಳಲ್ಲಿ ತಮ್ಮ ರೆಸಿಪಿಯನ್ನು ಮಾರಾಟ ಮಾಡುವಂತೆ ಮನವೊಲಿಸಿದರು.

ಒಪ್ಪಿಗೆ ನೀಡಿದಾಗ ಅದಕ್ಕೆ ಕೆಂಟಕಿ ಫ್ರೈಡ್ ಚಿಕನ್ (ಕೆಎಫ್ಸಿ) ಎಂದು ಹೆಸರು ನೀಡಿದರು. ಕೆಎಫ್‌ಸಿಗೆ ಹೋದವರಿಗೆಲ್ಲ ಅಲ್ಲಿ ಕೆಂಪು ರಟ್ಟಿನ ಡಬ್ಬಿಯಲ್ಲಿ ಚಿಕನ್ ಕೊಡುವುದು ಗೊತ್ತಿರುತ್ತದೆ. ಅದನ್ನೆಲ್ಲ ಡಿಸೈನ್ ಮಾಡಿದ್ದೂ ಇವರೇ. ಹೀಗೆ ಈ ವೇಳೆಗೆ ಕೆಎಫ್ಸಿ, ಸ್ಯಾಂಡರ್ಸ್‌ಗೆ ಹಣ ಹೆಸರು ಎಲ್ಲವನ್ನೂ ತಂದುಕೊಟ್ಟಿತು. ಆಗ ಅವರ ವಯಸ್ಸು 85 ದಾಟಿತ್ತು !

ಹಾಗೆಂದು ಶಿವ ಶಿವ ಎಂದು ಹಾಯಾಗಿರಲಿಲ್ಲ ಈ ವ್ಯಕ್ತಿ. ಒಂದು ದಿನ ಇಡೀ ಕೆಎಎಫ್‌ಸಿಯನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದರು. ಆದರೆ ಅದರ ಬ್ರ್ಯಾಂಡ್ ರಾಯಭಾರಿಯಾಗಿ ಮುಂದುವರಿದರು. ಅದಕ್ಕಾಗಿ ಹಣ ಪಡೆಯುತ್ತಿದ್ದರು. ಆದರೆ ಕೆನಡಾ ಮತ್ತಿತರ ಕಡೆ ತಮ್ಮದೇ ಆದ ರೆಸ್ಟೊರೆಂಟ್‌ಗಳನ್ನು ತೆರೆದರು. ಈಗ ಮೆಕ್ ಡೊನಾಲ್ಡ್ ಬಳಿಕ ಕೆಎಎಫ್‌ಸಿ ವಿಶ್ವದ ಎರಡನೇ
ಅತಿದೊಡ್ಡ ರೆಸ್ಟೊರೆಂಟ್ ಚೇನ್. 150 ದೇಶಗಳಲ್ಲಿ 22,621 ರೆಸ್ಟೊರೆಂಟ್‌ಗಳನ್ನು ಹೊಂದಿದೆ.

ಹಾಗೆಂದು ಅಲ್ಲಿಗೂ ಸ್ಯಾಂಡರ್ಸ್‌ಗೆ ಒಂದು ಅಸಮಾಧಾನ ಇದ್ದೇ ಇತ್ತು. ಅವರು ಗುಣಮಟ್ಟದೊಂದಿಗೆ ಎಂದೂ ರಾಜಿಯಾ ದವರಲ್ಲ. ತಮ್ಮ ರೆಸ್ಟೊರೆಂಟ್‌ಗೆ ಸ್ವತಃ ಆಗಾಗ ಹೋಗಿ ಗುಣಮಟ್ಟ ಪರೀಕ್ಷಿಸುತ್ತಿದ್ದರು. ಸರಿ ಇಲ್ಲದಿದ್ದರೆ ಮುಲಾಜಿಲ್ಲದೆ ಎಸೆದು ಬಿಡುತ್ತಿದ್ದರು. ತಮ್ಮ ಕೆಎಫ್ಸಿಯನ್ನು ಮಾರಾಟ ಮಾಡಿದ ಬಳಿಕ ಮುನಿಸಿಕೊಒಂಡಿದ್ದೂ ಈ ಕಾರಣಕ್ಕೇ. ಹೊಸ ಕಂಪನಿಯು ಬೆಲೆ ಕಡಿಮೆ ಮಾಡುವ ಭರದಲ್ಲಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಟೀಕಿಸಿದರು.

ಇಷ್ಟಾದ ಮೇಲೆ ಅವರಲ್ಲೊಂದು ಸಾರ್ಥಕ್ಯ ಭಾವ ಮೂಡಿತ್ತು. ಈಗ ಸಮಾಜ ಸೇವೆ, ದಾನ ಧರ್ಮದಲ್ಲಿ ತಮ್ಮನ್ನು ತೊಡಗಿಸಿ ಕೊಂಡರು. 1980ರಲ್ಲಿ 90ನೇ ವಯಸಿನಲ್ಲಿ ನಿಧನರಾದರು. ಅವರು ಇಲ್ಲದಿದ್ದರೂ ವಿಶ್ವದಾದ್ಯಂತ ಕೆಎಫ್‌ಸಿ ನಡೆಯುತ್ತಿರುವುದು ಇದೇ ಸ್ಯಾಂಡರ್ಸ್ ಹೆಸರಿನಿಂದ. ಒಂದು ಬಿಳಿ ಕೋಟು ಹೋತದ ಗಡ್ಡ, ಒಂದು ಟೈಪ್‌ ಇದು ಸ್ಯಾಂಡರ್ಸ್ ಅವರ ದಿರಸು. ಇದೇ ಎಲ್ಲೆಲ್ಲೂ ಈಗ ರಾರಾಜಿಸು ತ್ತಿರುವುದು.

ಹಾಗೆಂದು ಮೊದಮೊದಲು ಅಡ್ರೆಸ್‌ಗೆ ಇಲ್ಲದಿರುವಾಗ ಈ ಡ್ರೆಸ್ ಹಾಕಿಕೊಂಡು ಅವಕಾಶಕ್ಕಾಗಿ ಅವರಿವರ ಅಂಗಡಿಯ ಬಾಗಿಲು ಕಾದ, ಗೋಗರೆದ ಸಮಯದಲ್ಲಿ ಇದೇ ರೂಪವನ್ನು ನೋಡಿ ಎಷ್ಟೋ ಮಂದಿ ಹಾಸ್ಯ, ಅಪಹಾಸ್ಯ ಮಾಡಿದ್ದೂ ಉಂಟು.
ಹೀಗೆ ಒಂದು ಸಾಮ್ರಾಜ್ಯವನ್ನೇ ಕಟ್ಟಿದ ಸ್ಯಾಂಡರ್ಸ್ ಬದುಕೇ ಒಂದು ಸಾಹಸ. ಸೋಲು – ಗೆಲುವು, ಕಷ್ಟ -ನಷ್ಟ, ಸಿಹಿ – ಕಹಿ, ಮಾನ – ಅವಮಾನ, ವಿಷಾದ, ವಿವಾದ, ವಿಕ್ಷಿಪ್ತ, ವಿಚಿತ್ರ ಎಲ್ಲವುಗಳ ಸಮ್ಮಿಶ್ರಣ.

ಆದರೂ ಕೊನೆಗೆ ಅವರ ಫುಡ್ ಚಿಕನ್‌ನಷ್ಟೇ ರುಚಿಕರ. ಅವರ ಜೀವನದಿಂದ ನಮಗೆ ಎರಡು ಬಗೆಯ ಪಾಠಗಳಿವೆ ಒಂದು – ಸೋಲು, ವೈಫಲ್ಯ, ಹಿನ್ನಡೆ ಹಾಗೂ ಅದಕ್ಕೆ ಕಾರಣವಾದ ಸಂಗತಿಗಳು ನಮಗೂ ಕಲಿಸುವ ಪಾಠ. ಸ್ಯಾಂಡರ್ಸ್ ವೈಫಲ್ಯಗಳ ಸರಮಾಲೆಗೆ ಕಾರಣ ಆರಂಭದಲ್ಲೇ ಬದುಕು ಹಾದಿ ತಪ್ಪಿದ್ದು, ನಿರ್ದಿಷ್ಟ ಗುರಿ ಇರಲಿಲ್ಲ ಮನಸು ವರ್ತನೆ ಮೇಲೆ ಹತೋಟಿ ಇರಲಿಲ್ಲ.

ಆತುರ, ತಾಳ್ಮೆಯ ಕೊರತೆ, ತಪ್ಪು ನಿರ್ಧಾರ ಮುಂಗೋಪ, ಜಾಣ ನಡೆ ನುಡಿಯ ಕೊರತೆ ಪದೇ ಪದೆ ಕೈಕೊಡುತ್ತಿದ್ದ ನಸೀಬು
ವ್ಯವಹಾರ ಜ್ಞಾನ, ಚತುರತೆ ಕೊರತೆ ಆದರೆ ಅವರ ಗೆಲುವಿಗೂ ಇವೆ ಕೆಲವು ಕಾರಣಗಳು: ಎಷ್ಟೇ ಕಷ್ಟ, ನಷ್ಟ ಆದರೂ ಎದೆಗುಂದದಿರುವುದು ಮರಳಿ ಯತ್ನವ ಮಾಡು ಎಂಬ ತತ್ವ ಆತ್ಮವಿಮರ್ಶೆ, ತಪ್ಪು ಸರಿಪಡಿಸಿಕೊಳ್ಳುವ ಮನೋಭಾವ
ಹಳೆಯ ಘಟನೆಗಳಿಂದ ಕೊರಗದೆ ಹೊಸ ಸಾಹಸಕ್ಕೆ ಕೈಹಾಕುವ ಛಾತಿ ತಮ್ಮ ಪ್ರತಿಭೆ, ಕೆಲಸ, ಗುಣಮಟ್ಟದ ಮೇಲೆ ಭರವಸೆ
ವಯಸ್ಸು ದೇಹಕ್ಕೆ, ಮನಸ್ಸಿಗಲ್ಲ ಎಂಬ ವಿಶ್ವಾಸ ಯಾವ ಕೆಲಸವೂ ಮೇಲಲ್ಲ, ಯಾವುದೂ ಕೀಳಲ್ಲ.

ಒಟ್ಟಾರೆ ಅವಗುಣಗಳಿಗಿಂತ ಒಳ್ಳೆಯ ಗುಣಗಳ ತೂಕ ಹೆಚ್ಚಾಗಿದ್ದರಿಂದ, ಹಾಗೆಯೇ ಸಹನೆ, ಸಂಯಮ, ಆಶಾಭಾವದಿಂದ ಅವರು ಕೊನೆಗೊಮ್ಮೆ ಗೆದ್ದರು. ಮನೆ ಮಾತಾದರೂ. ಸೇನಾಪಡೆಯ ಹುದ್ದೆ ಗೌರವದ್ದಾದರೂ ಅವರು ಕರ್ನಲ್ ಸ್ಯಾಂಡರ್ಸ್. ಕೆಂಟಕಿ ಕರ್ನ್‌ಲ್ ಎಂಬ ಈ ಬಿರುದನ್ನು ಕೆಂಟಕಿಯ ಗವರ್ನರ್ ಒಂದಲ್ಲ ಎರಡು ಬಾರಿ ನೀಡಿರುವುದು. ೨೦೨೦ನೇ ವರ್ಷದಲ್ಲಿ ಕರೋನಾ ಕಾರಣದಿಂದಾಗಿ ಎಲ್ಲರ ಬದುಕು ಬರಬಾದಾಗಿದೆ, ಎಲ್ಲರೂ ಹೈರಾಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷದ ನೆನಪೇ ಬೇಡ ಎಂಬಷ್ಟರ ಮಟ್ಟಿಗೆ ಎಲ್ಲರೂ ಬೇಸರ ಗೊಂಡಿದ್ದಾರೆ.

ಈ ವರ್ಷವನ್ನು ಶಪಿಸುತ್ತಿದ್ದಾರೆ. ಆದರೆ ಸ್ಯಾಂಡರ್ಸ್ ಇಂಥ ನೂರಾರು ವೈಫಲ್ಯ, ಕಷ್ಟ – ನಷ್ಟ ಸಂಕಟ ಸಂಕಷ್ಟ ಎಲ್ಲವನ್ನೂ ಎದುರಿಸಿದರೂ ಅವೆಲ್ಲವನ್ನೂ ಮೆಟ್ಟಿ ನಿಂತು ಜಯಶಾಲಿಯಾದರು. ಕರೋನಾದ ಕಾಲದಲ್ಲಿ ಈ ಕಾರಣಕ್ಕಾಗಿ ಸ್ಯಾಂಡಸ್ ಬದುಕು ನಮಗೆ ಹೊಸ ಉತ್ಸಾಹ, ಹುಮ್ಮಸ್ಸು, ಭರವಸೆ ಒದಗಿಸಬಹುದು.

ನಾಡಿಶಾಸ್ತ್ರ
ಬಿದ್ದಮಾತ್ರಕ್ಕೆ ಅದು ಸೋಲಲ್ಲ
ಬಿದ್ದರೂ ಏಳದಿರುವುದು ಸೋಲು
ಇದ್ದರೆ ಇರಬೇಕು ಸ್ಯಾಂಡರ್ಸ್ ಥರ
ಸೋಲು ಮೆಟ್ಟಿ ನಿಲ್ಲುವಂಥ ಛಲಗಾರ