Tuesday, 10th September 2024

ಉತ್ತರ ಕನ್ನಡ, ನೀ ಹೀಂಗ ತೀಡಡ !

ಅಭಿಮತ

ಪ್ರೊ.ಆರ್‌.ಜಿ.ಹೆಗಡೆ

ಉತ್ತರ ಕನ್ನಡ, ನೀ ಹೀಗೆ ತೀಡಡ(ಅಳಬೇಡ) ಇದು ಜಯಂತ ಕಾಯ್ಕಿಣಿಯವರ ಕವಿತೆಯೊಂದರ ಸಾಲು. ವರ್ಷಗಳ ಹಿಂದೆ ಬರೆದಿದ್ದು. ಅಂದರೆ ಉತ್ತರ ಕನ್ನಡ ಆಗಲೇ ಬಿಕ್ಕಲಾರಂಭಿಸಿತ್ತು, ಮೌನವಾಗಿ. ಆ ಬಿಕ್ಕಳಿಕೆ ಈಗ ಮಹಾರೋದನವಾಗಿ ಕಣ್ಣೀರಿನ ಕೋಡಿಯೇ ಹರಿಯುತ್ತಿದೆ. ಅಘನಾಶಿನಿ ಗಂಗಾವಳಿ ಗಳು ನೆರೆಹಾವಳಿಯಾಗಿ ಕೆಂಪುನೀರು ತುಂಬಿ ಹರಿಯುತ್ತಿರುವ ಹಾಗೆ.

ಜಿಲ್ಲೆಯ ಅವಸ್ಥೆ ಈಗ ಹೇಗಾಗಿ ಹೋಗಿದೆ ಎಂಬುದನ್ನು ನೋಡುವುದರ ಮೊದಲ ಮೂವತ್ತು, ನಲವತ್ತು ವರ್ಷ ಹಿಂದಿನ ಅದರ, ಹಳ್ಳಿಗಳ, ಪರಿಸ್ಥಿತಿ ನೋಡಬೇಕು. ಉದಾಹರಣೆಯಾಗಿ ನಮ್ಮೂರು ಮೂರೂರಿನ ಕಥೆ ಚಿಕ್ಕದಾಗಿ ಹೇಳಿಕೊಳ್ಳುತ್ತೇನೆ. ಬಡತನವಿತ್ತು ನಿಜ. ಆದರೆ ಶಿಕ್ಷಣ, ಯಕ್ಷಗಾನ, ಗಾಯನ, ಸಂಸ್ಕೃತಿ, ಎಲ್ಲದರಲ್ಲಿಯೂ ಮುಂದೆ ಇದ್ದವರು ಮೂರೂರಿನವರು. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಾನ್ಯತೆಯ ಹಲವು ವ್ಯಕ್ತಿಗಳು ಹುಟ್ಟಿದ್ದು, ಬೆಳೆದಿದ್ದು ಅಲ್ಲಿ.

ಯಕ್ಷಗಾನದ ಖ್ಯಾತಿಯ ದೇವರು ಹೆಗಡೆ, ಕನ್ನಡ ಪತ್ರಿಕೋದ್ಯಮದ ದೊರೆ ವಿಶ್ವೇಶ್ವರ ಭಟ್, ಬಾಂಬೆ ಹಾಸ್ಪಿಟಲ್‌ನಲ್ಲಿ ಕ್ಯಾನ್ಸರ್ ಮುಖ್ಯಸ್ಥ ಡಾ. ಜಿ.ಟಿ. ಹೆಗಡೆ, ಎಲ್.ಐ.ಸಿ.ಯ ಟಾಪ್ ಮ್ಯಾನೇಜ್‌ಮೆಂಟ್‌ನಲ್ಲಿದ್ದ ಸುರೇಶ್. ಜಿ. ಭಟ್, ಬ್ಯಾಂಕಿಂಗ್‌ನಲ್ಲಿ ಹಿರಿಯ ಹುದ್ದೆ ಹೊಂದಿದ್ದ ಆರ್.ವಿ. ಹೆಗಡೆ, ಭದ್ರನ್, ಇನೋಸಿಸ್‌ನ ಉಪಾಧ್ಯಕ್ಷರಾಗಿದ್ದ ರಮೇಶ ಅಡ್ಕೋಳಿ, ಇಸ್ರೋನಲ್ಲಿದ್ದ ಪ್ರಮೋದಾ ಹೆಗಡೆ, ರೋಬೋಟಿಕ್ಸನ ವಿನಾಯಕ ಹೆಗಡೆ, ಲಾಸಾ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಶಿವಾನಂದ ಹೆಗಡೆ, ಕರ್ನಲ್ ವಿ.ಎಸ್.ಹೆಗಡೆ, ಖ್ಯಾತ ವರ್ಣಚಿತ್ರಕಾರ, ಗಣಪತಿ.

ಎಸ್.ಹೆಗಡೆ ಇಂಥವರು ಹುಟ್ಟಿದ ಬೆಳೆದ ಊರು ಅದು. ಅಲ್ಲಿನ ಹೆಚ್ಚು ಕಡಿಮೆ ಪ್ರತಿಯೊಂದು ಮನೆಯಿಂದ ಹಿರಿಯ ಸ್ಥಾನಗಳಲ್ಲಿ ಇದ್ದವರು ಬಂದಿ ದ್ದಾರೆ. ಬರುತ್ತಲೇ ಇದ್ದಾರೆ. ಆಗ ಊರ ತುಂಬ ಜನರಿದ್ದರು. ತೋಟ, ಗದ್ದೆಗಳು ಹಸುರಾಗಿದ್ದವು. ಎಲ್ಲೆಲ್ಲಿಯೂ ನೀರು. ಪ್ರತಿಯೊಬ್ಬರ ಮನೆಯಲ್ಲಿ
ಒಂದು ಕೊಟ್ಟಿಗೆ, ಎಮ್ಮೆ ಆಕಳುಗಳು. ಜೀವಂತಿಕೆ ತುಂಬಿದ್ದ, ಸುಂದರ, ಭವಿಷ್ಯದಲ್ಲಿ ಭಾರೀ ಪ್ರಗತಿ ಸಾಧಿಸಬಹುದಾಗಿದ್ದ ಹಳ್ಳಿ ಅದು.

ಹಾಗೆ ಇದ್ದಿದ್ದು ನಮ್ಮೂರು ಮಾತ್ರವೇ ಅಲ್ಲ. ಜಿಲ್ಲೆಯ ಹೆಚ್ಚು ಹಳ್ಳಿಗಳು ಹಾಗೆಯೇ ಇದ್ದವು. ಜಿಲ್ಲೆಯಾದ್ಯಂತದಿಂದ ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತನಾಮರು ಬಂದಿದ್ದಾರೆ. ರಾಮಕೃಷ್ಣ ಹೆಗಡೆ, ದಿನಕರ ದೇಸಾಯಿ, ಆರ್.ವಿ.ದೇಶಪಾಂಡೆ, ಕೆನರಾ ಬ್ಯಾಂಕ್ ಹಿಂದಿನ ಅಧ್ಯಕ್ಷ ಆರ್.ವಿ.ಶಾಸ್ತ್ರಿ,
ಜಸ್ಟಿಸ್ ಎಸ್.ಆರ್.ನಾಯಕ್, ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಗಣಪತಿ ಭಟ್ ಹಾಸಣಗಿ, ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಮಾಜಿ ಸ್ಪೀಕರ್ ಮತ್ತು ಪ್ರಸ್ತುತ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಯಂತ ಕಾಯ್ಕಿಣಿ ಇಲ್ಲಿಯವರು. (ನನ್ನ
ಅಜ್ಞಾನದಿಂದಾಗಿ ಕೆಲ ಹೆಸರು ಬಿಟ್ಟು ಹೋಗಿರಬಹುದು. ಕ್ಷಮೆ ಇರಲಿ).

ವಿಷಯ ಹೇಳಿಕೊಂಡ ಕಾರಣವೆಂದರೆ ಉತ್ತರ ಕನ್ನಡ ಮೂಲತಃ ಅಜ್ಞಾನದ, ಹುಲ್ಲು ಹುಟ್ಟದ, ಮಳೆ ಬರದ, ನೀರೇ ಇದ್ದಿಲ್ಲದ, ಮೈ ಸುಟ್ಟು ಹೋಗುವ ಬಿಸಿಲಿನ ಜಿಲ್ಲೆ ಅಲ್ಲ. ಮಾನವ, ಪ್ರಕೃತಿ, ಸಂಪನ್ಮೂಲ ಇತ್ತು. ನೀರು ಇತ್ತು. ಸುಂದರ ಪರಿಸರವಿತ್ತು. ಹವಾಮಾನವಿತ್ತು. ಇದೆ. ಜನ ಬುದ್ಧಿವಂತರು.
ಹಾಗಾಗಿ ಬೆಳವಣಿಗೆಯ ಅಪಾರ ಸಾಧ್ಯತೆ ಇತ್ತು. ಪ್ರಾಕೃತಿಕವಾಗಿ ಅನಾನುಕೂಲ ಹೊಂದಿದ್ದ ಉತ್ತರ ಕರ್ನಾಟಕದ ಕೆಲವು ಭಾಗಗಳು ಕೂಡ ಈಗ ಭಾರೀ ಅಭಿವೃದ್ಧಿ ಸಾಧಿಸಿವೆ. ಗುಲಬುರ್ಗಾಕ್ಕೆ ಕೇಂದ್ರೀಯ ವಿಶ್ವವಿದ್ಯಾಲಯ ಬಂದಿದೆ, ನೀರು ಬಂದಿದೆ. ವಿಜಾಪುರಕ್ಕೆ ಮಹಿಳಾ ವಿಶ್ವವಿದ್ಯಾಲಯ ಬಂದಿದೆ.

ಹಾಗೆ ನೋಡಿದರೆ ನಮ್ಮ ಜಿಲ್ಲೆ ಸವಾಂಗೀಣವಾಗಿ ಬಹಳ ಬೆಳೆಯಬೇಕಿತ್ತು. ಕನಿಷ್ಟ ನೆರೆಹೊರೆಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ ಮಟ್ಟದಲ್ಲಿ ಮೂಲಭೂತ ಸೌಲಭ್ಯ ಸೃಷ್ಟಿಯಾಗಬೇಕಿತ್ತು. ಧಾರವಾಡವನ್ನು ನೋಡಿ. ನೀರಿನ ಸಮಸ್ಯೆಯಿದ್ದ ಜಿಲ್ಲೆಗೆ ಈಗ ಆ ಸಮಸ್ಯೆ ಇಲ್ಲ. ಐಐಟಿ ಯನ್ನೂ ಹಿಡಿದು ಐದಾರು ವಿಶ್ವವಿದ್ಯಾಲಯಗಳು ಬಂದಿವೆ. ಟಾಟಾ ಮೋಟರ್ಸ್ ಬಂದಿದೆ. ದಕ್ಷಿಣ ಕನ್ನಡದ ಮಣಿಪಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ.

ಶಿವಮೊಗ್ಗಕ್ಕೆ ಏರ್ ಪೋರ್ಟ್ ಇದೆ. ಆ ಜಿಲ್ಲೆಗಳು ಗಿಜಿಗುಡುತ್ತಿವೆ. ವ್ಯಾಪಾರ, ವ್ಯವಹಾರ ಶಿಕ್ಷಣ ಬೆಳೆದಿದೆ. ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳು ರಸ್ತೆಗೊಂದು ಇವೆ. ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹುಟ್ಟಿಕೊಂಡಿವೆ. ಆ ಜಿಲ್ಲೆಗಳಿಂದಲೂ ಜನ ಉದ್ಯೋಗ ಹುಡುಕಿ ಕಾಲಕಾಲಕ್ಕೆ ವಲಸೆ ಹೋಗಿಲ್ಲ ವೆಂದೇನೂ ಅಲ್ಲ. ಆದರೆ ಜನ ತಮ್ಮ ಊರುಗಳಲ್ಲಿಯೂ ಉಳಿಯುತ್ತಿದ್ದಾರೆ. ಜಮೀನು ತೆಗೆದುಕೊಳ್ಳುತ್ತಿದ್ದಾರೆ. ಹಳ್ಳಿಗಳು ಮತ್ತು ಜಿಲ್ಲೆ ಅಭಿವೃದ್ಧಿಯ ಪಥದಲ್ಲಿ ಸಾಗಿವೆ. ಆದರೆ ಅದೇ ನಮ್ಮ ಜಿಲ್ಲೆಗೆ ಇಂದು ಏನಾಗಿದೆ ನೋಡಿ!

ಹಿಂದೆ ಶಿಕ್ಷಣ ಪಡೆದ ಜನ ಅವಕಾಶ ಹುಡುಕಿ ಹೊರಗೆ ಹೋದರು. ಅವರಿಗೆ ಆಗ ಬೇರೆ ದಾರಿ ಇರಲಿಲ್ಲ ಬಿಡಿ! ಹೋದವರೆಲ್ಲ ಹೋಗಿಯೇ ಬಿಟ್ಟರು. ಎಷ್ಟರ ಮಟ್ಟಿಗೆ ಎಂದರೆ ಸಾರಸ್ವತರು ಮುಂಬೈಗೆ ಹೊರಟು ಹೋದರು. (ಅನಂತನಾಗ್, ಶಂಕರನಾಗ್ ಮೂಲತಃ ಉತ್ತರ ಕನ್ನಡ ಜಿಲ್ಲೆಯವರು) ಕರ್ಕಿ ಎನ್ನುವ ಹೊನ್ನಾವರದ ಹಳ್ಳಿಯ ಜನ ಮುಂಬೈಗೆ ನಡೆದು ಬಿಟ್ಟರು. ಜಿಲ್ಲೆ ಅಳಲು ಆರಂಭಿಸಿದ್ದು ಆಗ. ಜನರನ್ನು ನಿಲ್ಲಿಸಲು ಪ್ರಯತ್ನಗಳು ಆಗಿನಿಂದಲೇ ಆರಂಭವಾಗಬೇಕಿತ್ತು.

ಹಾಗೆ ಆಗಲಿಲ್ಲ, ಈಗ ಏನಾಗಿದೆ ಎಂದರೆ ಹಳ್ಳಿಗಳು ನಾಶವಾಗಿ ಹೋಗಿವೆ. ಮನೆಗಳಿಗೆ ಸಾಲು ಸಾಲಾಗಿ ಬೀಗ ಬಿದ್ದಿದೆ. ಉಳಿದವರು ನಾಳೆ ಅಥವಾ ನಾಡಿದ್ದು ಬೀಗ ಹಾಕುವ ವಿಚಾರದಲ್ಲಿದ್ದಾರೆ. ಜಮೀನು ನೋಡುವವರಿಲ್ಲ. ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಅಂತೂ ಶೇಖಡಾ ಎಂಭತ್ತರಷ್ಟು
ಜಮೀನು ಫಲಗುತ್ತಿಗೆಗೆ ಹೋಗಿದೆ. ಅಲ್ಲಿ ಈಗ ಹೆಚ್ಚಾಗಿ ಇರುವವರು ವಯಸ್ಸಾದವರು ಅಥವಾ ಅಸಹಾಯಕತೆಯಲ್ಲಿರುವವರು. ಇರುವುದು ಮಹಾಭಾರತದ ಸ್ವರ್ಗಾರೋಹಣ ಪರ್ವದಂತಹ ವಾತಾವರಣ.

ಜನ ಒಂದು ಊರಿನಲ್ಲಿ ಏಕೆ ನಿಲ್ಲತ್ತಾರೆ? ಊರು ಏಕೆ ಬೆಳೆಯುತ್ತದೆ? ಗಮನಿಸಬೇಕು. ಆ ಸೂತ್ರಗಳು ಸರಳ. ದುಡಿಮೆ ಇದ್ದರೆ, ಗುಣಮಟ್ಟದ ಶಿಕ್ಷಣ ಲಭ್ಯವಿದ್ದರೆ, ಆರೋಗ್ಯ ಸೇವೆ ಲಭ್ಯವಿದ್ದರೆ, ಪ್ರಯಾಣದ ಅನುಕೂಲತೆಗಳಿದ್ದರೆ, ಬದುಕು ಸುಖವಾಗಿದ್ದರೆ, ಅಂದರೆ ನೀರು, ರಸ್ತೆ, ಒಳ್ಳೆಯ ಹವಾಮಾನ, ಉದ್ಯೋಗ, ಮನರಂಜನೆಯ ಅವಕಾಶಗಳು ಸೃಷ್ಟಿಯಾದರೆ ಅಲ್ಲಿ ಮಧ್ಯಮ ವರ್ಗದ ಜನ ನಿಲ್ಲಲಾರಂಭಿಸುತ್ತಾರೆ. ನಿವೃತ್ತರಾದವರು ಮನೆ ಕಟ್ಟಿ
ಉಳಿಯಲಾರಂಭಿಸುತ್ತಾರೆ. ಈ ಮಧ್ಯಮ ವರ್ಗದ ಜನ ನಿಲ್ಲುವುದು ಬಹಳ ಮುಖ್ಯ. ಏಕೆಂದರೆ ಇವರನ್ನು ಹಿಂಬಾಲಿಸಿ ಬೇರೆ ಜನ ಉಳಿಯಲಾ ರಂಭಿಸುತ್ತಾರೆ.

ಅಂಗಡಿಗಳು, ಚಿಕ್ಕ, ದೊಡ್ಡ ಉದ್ಯೋಗಗಳು ಹುಟ್ಟಿಕೊಳ್ಳಲಾರಂಭಿಸುತ್ತವೆ. ವಿಸ್ತಾರವಾಗುತ್ತ ಹೋಗುತ್ತವೆ. ಬೆಳವಣಿಗೆ ಸುತ್ತ ಮುತ್ತ ಪಸರಿಸಲಾರಂಭಿ ಸುತ್ತದೆ. ಸಂತೋಷದ ವಿಷಯವೆಂದರೆ ಈಗ ಅದು ತಾಲೂಕು ಕೇಂದ್ರಗಳಲ್ಲಿ ಆರಂಭವಾಗಿದೆ. ಆದರೆ ಪ್ರಕ್ರಿಯೆ ತೀರ ಸಾವಕಾಶವಾಗಿ ನಡೆದಿದೆ. ಕಾರಣ ಮೂಲಭೂತ ಸೌಕರ್ಯಗಳು ಸಾವಕಾಶವಾಗಿ ಬೆಳೆಯುತ್ತಿವೆ. ಈ ಕನಿಷ್ಟ ಮೂಲಭೂತ ಸೌಕರ್ಯ, ಅಂದರೆ ನೀರು, ರಸ್ತೆ, ವಿದ್ಯುತ್ತು, ಉನ್ನತ ಶಿಕ್ಷಣ ಸಂಸ್ಥೆಗಳು ಇತ್ಯಾದಿ ಮೊದಲಿನ ಹಂತದ ಅಭಿವೃದ್ಧಿ ಸರಕಾರದಿಂದಲೇ ಆಗಬೇಕು. ಅಭಿವೃದ್ದಿ ಒಂದು ಹಂತ ತಲುಪಿ ಹಣ ಓಡಾಡಲು ಆರಂಭವಾದಂತೆ ಖಾಸಗಿಯವರು ಬರುತ್ತಾರೆ. ನಂತರದ ಹಂತಗಳಲ್ಲಿ ಅವರು ದುಡ್ಡು ಹಾಕುತ್ತಾರೆ. ಪ್ರದೇಶ ಬೆಳೆಯುತ್ತದೆ.

ಹೀಗೆ ಒಂದು ವರ್ತುಲ ಸೃಷ್ಟಿಸುವುದು ರಾತ್ರಿ ಬೆಳಗಾಗುವ ತನಕದ ಕೆಲಸವಲ್ಲ. ದಶಕಗಳೇ ಬೇಕಾಗುತ್ತವೆ, ಒಪ್ಪಿಕೊಳ್ಳಬೇಕು. ಎಂಭತ್ತರ ದಶಕದವರೆಗೂ ಉತ್ತರ ಕನ್ನಡ ಅಭಿವೃದ್ಧಿಯಲ್ಲಿ ತೀರ ಹಿಂದುಳಿಯಿತು. ಜಿಲ್ಲೆಗೆ ಬರಲು ಸರಿಯಾದ ರಸ್ತೆಗಳೇ ಇರಲಿಲ್ಲ. ಹಳ್ಳಿಗಳಿಗೆ ರಸ್ತೆಗಳು, ಬ್ರಿಜ್‌ಗಳು, ಬಸ್ ಸಂಪರ್ಕ, ವಿದ್ಯುತ್, ಕುಡಿಯುವ ನೀರು, ಕೃಷಿಗೆ ನೀರು, ಆಸ್ಪತ್ರೆ, ಅಂತೂ ಬಿಡಿ. ಇನ್ನೂ ಬಹಳ ಕೆಲಸವಾಗಬೇಕಿದೆ. ಟ್ರೇನ್ ಬಂದಿದ್ದು ತೊಂಭತ್ತರ ದಶಕದ ಕೊನೆಯಲ್ಲಿ. ಏರ್ ಪೋರ್ಟ್ ಅಂತು ಇನ್ನೂ ಇಲ್ಲ. ಹಿಂದುಳಿಯುವಿಕೆಗೆ ಎರಡು ಕಾರಣಗಳಿವೆ. ಒಂದನೆಯದು ರಾಜಕೀಯ ಇಚ್ಛಾಶಕ್ತಿ. ಎರಡನೆಯದು ಜನರ ಮನಸ್ಥಿತಿ. ಉತ್ತರ ಕನ್ನಡದ ಹಲವು ಜನ ಸಂತೃಪ್ತರು ಮತ್ತು ಅಲ್ಪತೃಪ್ತರು.

ಎಲ್ಲವನ್ನೂ ‘ಯಾರೋ’ ಮಾಡಬೇಕು ಎನ್ನುವ ಮನಸ್ಸಿನವರು. ಬಾಯಿ ಬಿಟ್ಟು ಕೇಳಿದ್ದು ಇಲ್ಲ. ಯಾವುದಕ್ಕೂ ‘ಬೇಕು’ ಎಂಬ ಹೋರಾಟ ಗಟ್ಟಿಯಾಗಿ ನಡೆಸಿದಂತಿಲ್ಲ. ‘ಬೇಡ’ ಎಂದು ಒಂದೆರಡು ಹೋರಾಟ ನಡೆಸಿದ್ದು ಇದೆ. ಸಂಘಟಿತ ಹೋರಾಟವಂತೂ ನಡೆಸಿಯೇ ಇಲ್ಲ. ಹಾಗಾಗಿ ಅವಕಾಶಗಳು ಕೈ ತಪ್ಪಿದವು. ಬಹುಶಃ ಕೈಗಾ ಮತ್ತು ಕದಂಬ ಇಲ್ಲಿಗೆ ಬರುವಾಗ ಕಾರವಾರ, ಅಂಕೋಲಾ ತಾಲೂಕುಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್, ಉದಾ:
ಕರ್ನಾಟಕದ ‘ಕೇಂದ್ರೀಯ ವಿಶ್ವವಿದ್ಯಾಲಯ’ವನ್ನು ಜತೆಗೆ ಕೊಡಿ ಎಂದು ಕೇಳಬೇಕಿತ್ತು. ಕೇಳಲೇ ಇಲ್ಲ. ಕೊಂಕಣ ರೈಲ್ವೆ ಬರುವಾಗ ಅದರಿಂದ ಹುಟ್ಟಿಕೊಳ್ಳುವ ಉದ್ಯೋಗಗಳಲ್ಲಿ ಪಾಲು ಕೊಡಿ ಕೇಳಲೇ ಇಲ್ಲ. ಮತ್ತೆ ಉತ್ತರ ಕರ್ನಾಟಕದಂತೆ ನಮಗೊಂದು ಸಮಗ್ರ ನೀರಾವರಿ ಯೋಜನೆ ಕೊಡಿ ಎಂದು ಕೇಳಲೇ ಇಲ್ಲ.

ವಿಶ್ವವಿದ್ಯಾಲಯ, ಸರಕಾರಿ ಮೆಡಿಕಲ್ ಕಾಲೇಜ್, ಇಂಜಿನಿಯರಿಂಗ್ ಕಾಲೇಜು, ಟೆಕ್ ಪಾರ್ಕ್ ಕೊಡಿ ಕೇಳಲಿಲ್ಲ. ರಾಜಕಾರಣಿಗಳ ಬೆನ್ನು ಬೀಳಲಿಲ್ಲ. ತದಡಿಗೆ ಬರಬಹುದಾಗಿದ್ದ ಭಾರಿ ಬಂದರಿಗೆ ವಿರೋಧ ಬಂತು. ಮಾಜಾಳಿಯಲ್ಲಿ ಬರುತ್ತಿದ್ದ ಟಾಟಾ ಫೈವ್ ಸ್ಟಾರ್ ಹೊಟೆಲ್ ತಿರುಗಿ ಹೋಯಿತು. ನಾವು ಎಂತಹ ತೃಪ್ತ ಮನಸ್ಸಿನವರು ಎಂದರೆ ಕಡಿಮೆ ಬಜೆಟ್‌ನ ತಾಳಗುಪ್ಪ ಸಿರಸಿ ಹುಬ್ಬಳ್ಳಿ, ತಾಳಗುಪ್ಪ ಸಿರಸಿ ಅಳ್ನಾವರ ರೇಲ್ವೆ ಬೇಡಿಕೆ ಕೂಡ ಗಟ್ಟಿಯಾಗಿ
ಇಟ್ಟಿಲ್ಲ. ಹುಬ್ಬಳ್ಳಿ ಅಂಕೋಲ ರೈಲ್ವೆ ಮಾತಿನಲ್ಲೇ ಉಳಿದಿದಿದೆ. ಇಲ್ಲೆಲ್ಲ ಪರಿಸರ ನಾಶದ ಮಾತು ಬರುತ್ತದೆ. ಪರಿಸರ ನಾಶವಾಗಕೂಡದು ನಿಜ. ಆದರೆ ಬಹುಶಃ ಒಂದು ಸೂಕ್ಷ್ಮ ಗಮನಿಸಬೇಕು.

ಜವಾಬ್ದಾರಿಯುತ ಯೋಜನೆಗಳು ತಮ್ನ ಸುತ್ತ ಮುತ್ತ ಪ್ರದೇಶದ ಪರಿಸರ ಸಂರಕ್ಷಣೆ ಮಾಡುತ್ತವೆ. ಇಂದಿನ ದಿನಗಳಲ್ಲಿ ಅದನ್ನು ಅವು ಮಾಡಲೇಬೇಕು ಕೂಡ. ಮಾಡುತ್ತವೆ. ಉದಾಹರಣೆಗೆ ರಿಲಯನ್ಸ್ ಜಾಮನಗರದ ಸುತ್ತಮುತ್ತ ಒಂದೂವರೆ ಲಕ್ಷ ಗುಣಮಟ್ಟದ ಮಾವಿನ ಗಿಡಗಳನ್ನು ನೆಟ್ಟು ಪೋಷಿಸಿತು. ಇಂದು ಜಾಮನಗರ ಮಾವಿನ ಹಣ್ಣಿನ ದೊಡ್ಡ ಮಾರುಕಟ್ಟೆ. ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಸಿದೆ. ಅಲ್ಲದೆ ಜನರೇ ಇಲ್ಲದಿರುವುದರಿಂದಲೇ ನಮ್ಮ
ಪರಿಸರ ಹೋರಾಟಕ್ಕೂ ಶಕ್ತಿ ಇಲ್ಲ. ಮಧ್ಯಮವರ್ಗದ ಜನ ಅಂದರೆ ತಾಕತ್ತಿದ್ದವರು ಜಿಲ್ಲೆಯಲ್ಲಿ ನಿಂತರೆ, ಹೆಚ್ಚು ಹೆಚ್ಚು ನಿಂತರೆ ಹೋರಾಟ ಬಲಗೊ ಳ್ಳುತ್ತದೆ. (ಹಾಗೆಂದು ಪರಿಸರ ಕೆಡಿಸುವ ಉದ್ದಿಮೆಗಳು ನಮಗೆ ಬೇಡವೇ ಬೇಡ.) ಈಗ ನಾವು ಏನು ಮಾಡಬೇಕು? ಮೊದಲನೆಯದು. ಏನು, ಯಾರು ಮಾಡಬಹುದಿತ್ತು, ಮಾಡಿಲ್ಲ ಇತ್ಯಾದಿ ಮಾತನಾಡುತ್ತ ಕುಳಿತುಕೊಳ್ಳುವುದು ಬೇಡ.

ಈಗ ನಾವು ಮಾಡಬೇಕಿರುವುದು ಸರಕಾರಗಳನ್ನು ಈ ಕೆಳಗಿನ ಪ್ರಾಥಮಿಕತೆಗಳಿಗಾಗಿ ಒತ್ತಾಯಿಸುವುದು. ೧) ಜಿಲ್ಲೆಗೊಂದು ಸಮಗ್ರ ನೀರಾವರಿ ಯೋಜನೆ. ಗುಡ್ಡದ ಮೇಲಿರುವ ಅಣೆಕಟ್ಟುಗಳಿಂದ ಕೆಳಗೆ ನೀರು ತರುವುದು ಕಷ್ಟವಲ್ಲ. ೨) ಅಂಡರ್ ಗ್ರೌಂಡ್ ಕೇಬಲ್ ಹಾಕಿ ಹಳ್ಳಿ ಹಳ್ಳಿಗೆ ಆಲ್ ಸೀಸನ್
ವಿದ್ಯುತ್ತು. ೩) ಆಲ್ ಸೀಸನ್ ರಸ್ತೆ. ೪) ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಉದ್ದಿಮೆಗಳನ್ನು ಹೂಡುವವರಿಗೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸ ಬಯಸುವವರಿಗೆ ಪ್ರೋತ್ಸಾಹವಾಗಿ ಜಮೀನು, ನೀರು, ವಿದ್ಯುತ್. ೫) ಕರ್ನಾಟಕಕ್ಕೆ ಬರಬೇಕಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸಸ್ ಅನ್ನು
ಜಿಲ್ಲೆಗೆ ಕೊಡುವಂತೆ ಒತ್ತಾಯಿಸುವುದು. ೬) ಅಡಿಕೆ, ಗೋಡಂಬಿ, ಮಾವು, ಮೆಣಸಿನಕಾಳು, ಏಲಕ್ಕಿ, ತೆಂಗು ಬೆಳೆಗಾರರಿಗೆ ಬೆಂಬಲ ಬೆಲೆ ಮತ್ತು ಅವುಗಳ ಪ್ರೊಸೆಸ್ಸಿಂಗ್ ಯುನಿಟ್ ಆರಂಭಿಸಲು ವಿಶೇಷ ಇನ್‌ಸೆಂಟಿವ್. ೭) ಗೋಡಂಬಿ ಮತ್ತು ಕರೀಶಾಡು ಮಾವು ವ್ಯಾಪಕವಾಗಿ, ವ್ಯವಸ್ಥಿತವಾಗಿ ಬೆಳೆಯಲು ತರಬೇತಿ ಮತ್ತು ಹಣಕಾಸಿನ ಬೆಂಬಲ. ೮) ಬೀಚುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ. ೮) ಹೆದ್ದಾರಿಗಳು ಮತ್ತು ಇತರ ಗುಡ್ಡ ಕತ್ತರಿಸ್ಪಟ್ಟ ಸ್ಥಳಗಳಲ್ಲಿ ಸೂಕ್ತ ತಡೆಗೋಡೆ ನಿರ್ಮಾಣ. ೯) ಉತ್ತರ ಕನ್ನಡ ಡೆವಲಪ್‌ಮೆಂಟ್ ಅಥಾರಿಟಿ ಆರಂಭಿಸಿ ಮಧ್ಯಮ ವರ್ಗದವರಿಗೆ ಅಭಿವೃದ್ಧಿಯಾದ ಸೈಟ್ ಒದಗಿಸು ವುದು. ೧೦) ಟೆಕ್ ಪಾರ್ಕ ಅಭಿವೃದ್ದಿಗೆ  ಇನ್ ಸೆಂಟಿವ್.೧೧) ಜವಾಬ್ದಾರಿಯುತ ಟೂರಿಸಂ ಅಭಿವೃದ್ಧಿಗೆ ಕ್ರಮ. ೧೨) ಹುಬ್ಬಳ್ಳಿ ಅಂಕೋಲಾ, ತಾಳಗುಪ್ಪ ಹುಬ್ಬಳ್ಳಿ ರೈಲ್ವೆ ಹಾಗೂ ಒಂದು ಏರ್ ಪೋರ್ಟ್‌ಗಾಗಿ ಒತ್ತಾಯ. ೧೩) ಜಿಲ್ಲೆಗೆ ಒಂದು ಎನ್‌ಆಯ್‌ಟಿಗಾಗಿ ಬೇಡಿಕೆ.

ಈ ಹಂತದ ಜಿಲ್ಲೆಯ ಬೆಳವಣಿಗೆಗೆ ಸರಕಾರದ ಮಧ್ಯಪ್ರವೇಶದ ಅಗತ್ಯವಿದೆ. ಇಂದಿನ ದಿನಗಳಲ್ಲಿ ಮೂಗು ಹಿಡಿಯದಿದ್ದರೆ ಯಾರೂ ಬಾಯಿ ತೆರೆಯುವು ದಿಲ್ಲ. ಮತ್ತು ಈಗಲೂ ನಾವೆಲ್ಲ ಮೂಕ ಪ್ರೇಕ್ಷಕರಾಗಿಯೇ ಉಳಿದರೆ ಜಿಲ್ಲೆಯಿಂದ ವಲಸೆ ತಪ್ಪಿಸಲಾಗುವುದಿಲ್ಲ. ಹಳ್ಳಿಗಳಂತೂ ಖಾಲಿಯಾಗಲಿವೆ. ಮತ್ತು ಬೇಜವಾಬ್ದಾರಿ ಯೋಜನೆಗಳು ತಂದಿಡುವ ದುರಂತಗಳನ್ನು ನೋಡುತ್ತ ಕುಳಿತುಕೊಳ್ಳಬೇಕಾಗುತ್ತದೆ.

Leave a Reply

Your email address will not be published. Required fields are marked *