Thursday, 19th September 2024

ಅಗ್ನಿವೀರ್‌ ಬಗ್ಗೆ ಸುಳ್ಳು: ಬಲ ತಗ್ಗಿಸುವ ಪ್ರಯತ್ನ

ವೀಕೆಂಡ್ ವಿತ್ ಮೋಹನ್

camohanbn@gmail.com

ಒಂದು ಸುಳ್ಳನ್ನು ಪದೇಪದೆ ಹೇಳುತ್ತಿದ್ದರೆ ಕೇಳುವ ಜನ ಸತ್ಯವೆಂದುಕೊಳ್ಳುತ್ತಾರೆಂಬ ಎಡಚರರ ಶತಮಾನಗಳ ತಂತ್ರಗಾರಿಕೆಯನ್ನು ಜಗತ್ತಿನ ಬಹುತೇಕ ಎಡಚರ ಬೆಂಬಲಿತ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದವು. ಸಾಮಾಜಿಕ ಜಾಲತಾಣಗಳು ಸಕ್ರಿಯವಾದ ನಂತರ ಎಡಚರರ ತಂತ್ರಗಾರಿಕೆಗೆ ದೊಡ್ಡ ಪೆಟ್ಟು ಬಿದ್ದಿತ್ತು, ಜಾಲತಾಣಗಳಲ್ಲಿ
ಅವರ ಸುಳ್ಳುಗಳು ಬೆತ್ತಲಾಗುತ್ತಿದ್ದವು, ಜನರಿಗೆ ಸತ್ಯ ಅರ್ಥವಾಗುತ್ತಿತ್ತು. ಆದರೀಗ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಸುಳ್ಳನ್ನು ಬಹುಬೇಗನೆ ಜನರಿಗೆ ತಲುಪಿಸುವ ನೂತನ ತಂತ್ರಗಾರಿಕೆಯನ್ನು ಎಡಚರ ಪಟಾಲಂ ಕಳೆದ ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದೆ.

ಸುಳ್ಳು ವೇಗವಾಗಿ ಹರಡುತ್ತದೆ; ಆದರೆ ಅದರ ಸ್ಪಷ್ಟೀಕರಣದ ವೇಗ ಕಡಿಮೆ. ಒಂದು ವಾಕ್ಯದಲ್ಲಿ ಸುಳ್ಳು ಹೇಳಬಹುದು ಆದರೆ ಒಂದು ವಾಕ್ಯದಲ್ಲಿ ಸ್ಪಷ್ಟೀಕರಣ ನೀಡುವುದು ಕಷ್ಟದ ಕೆಲಸ. ಸತತ ಮೂರನೇ ಬಾರಿಗೆ ಹೀನಾಯವಾಗಿ ಚುನಾವಣೆ ಸೋತಿರುವ ರಾಹುಲ್ ಗಾಂಧಿ ಸಂಸತ್ತಿನಲ್ಲಿ ‘ಅಗ್ನಿವೀರ್’ಯೋಜನೆಯ ಬಗ್ಗೆ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳಿದರು. ಅಗ್ನಿವೀರ್
ಯೋಜನೆಯಲ್ಲಿ ಯುವಕರಿಗೆ ಅನ್ಯಾಯವಾಗುತ್ತಿದೆ. ಅವರು ಯುದ್ಧದಲ್ಲಿ ಮಡಿದರೆ ಸರಕಾರದಿಂದ ಪರಿಹಾರ ದೊರೆಯುವುದಿಲ್ಲ ಎಂಬ ಸುಳ್ಳನ್ನು ಗಂಟಾಘೋಷವಾಗಿ ಒಂದು ವಾಕ್ಯದಲ್ಲಿ ಹೇಳಿದರು. ರಾಹುಲ್ ಗಾಂಧಿ ಹೇಳಿದ ಸುಳ್ಳಿಗೆ ವಿವರವಾಗಿ ಉತ್ತರಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅಗ್ನಿವೀರ್ ಯೋಜನೆಯಲ್ಲಿ ಯೋಧರಿಗೆ ೪೮ ಲಕ್ಷ ಮತ್ತು ಒಂದು ಕೋಟಿ ಪರಿಹಾರ ನೀಡಿವುದರ ಬಗ್ಗೆ ಹೇಳಿದರು.

ಅಗ್ನಿವೀರ್ ಯೋಜನೆಯ ಕುರಿತು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ಹಿರಿಯ ನಾಯಕರು ಚುನಾವಣಾ ಪ್ರಚಾರ ಸಂದರ್ಭದಿಂದಲೂ ಸುಳ್ಳುಗಳನ್ನು ಹೇಳುತ್ತಲೇ ಬಂದಿದ್ದಾರೆ. ಚುನಾವಣೆಯಲ್ಲಿ ಅವರ ಸುಳ್ಳುಗಳಿಗೆ ಮಣೆ ಹಾಕದ ಮತದಾರ ಹೀನಾಯವಾಗಿ ಸೋಲಿಸಿದ್ದಾನೆ. ಆದರೆ ಚುನಾವಣೆ ಸೋತ ನಂತರವೂ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅದೇ ಸುಳ್ಳನ್ನು ಪದೇಪದೆ ಹೇಳುವ ಮೂಲಕ ಎಡಚರರ ತಂತ್ರಗಾರಿಕೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಅಗ್ನಿವೀರ್ ಯೋಜನೆಯ ಬಗ್ಗೆ ಬೇಕಂತಲೇ ಸುಳ್ಳು ಹೇಳುತ್ತಿದ್ದಾರೆ. ತನ್ನ ಸುಳ್ಳುಗಳ ಮೂಲಕ ಯುವಕರು ಸೈನ್ಯಕ್ಕೆ ಸೇರುವುದನ್ನು ತಡೆಯುವುದು ರಾಹುಲ್ ಗಾಂಧಿಯ ಉದ್ದೇಶ. ರಾಹುಲ್ ಹೇಳಿದ ಸುಳ್ಳನ್ನು ಯುವಕರು ನಂಬಿದರೆ, ತಮ್ಮ ತ್ಯಾಗದಿಂದ ತಮ್ಮ ಕುಟುಂಬಕ್ಕೆ ಯಾವ ಅನುಕೂಲವೂ ಆಗುವುದಿಲ್ಲವೆಂಬ ಮನಸ್ಥಿತಿ ಬರುತ್ತದೆ. ಈ ಮನಸ್ಥಿತಿಯಿಂದ ಹೊರಬಾರದ ಯುವಕರು ಸೈನ್ಯಕ್ಕೆ ಸೇರಲು ಹಿಂದೇಟು ಹಾಕುತ್ತಾರೆ. ಸೈನ್ಯಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಿದ್ದರೆ ಭಾರತೀಯ ಸೈನ್ಯದ ಬಲ ಕುಂಠಿತವಾಗುತ್ತದೆ. ರಾಹುಲ್ ಗಾಂಧಿಯ ಉದ್ದೇಶ ಅನುಷ್ಠಾನಕ್ಕೆ ಬಂದರೆ ಶತ್ರುರಾಷ್ಟ್ರಗಳಿಗೆ ಹೆಚ್ಚಿನ ಬಲ ಬಂದಂತಾಗುತ್ತದೆ.

ಕಾಂಗ್ರೆಸ್ ಪಕ್ಷ ೧೯೪೭ರಿಂದಲೂ ಭಾರತೀಯ ಸೈನ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಚಿಂತಿಸಲಿಲ್ಲ, ನೆಹರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಮಹಾತ್ಮಗಾಂಧಿಯವರ ನಿಧನದ ನಂತರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಹರೂವಿಗೆ ತನ್ನನ್ನು ತಾನು ಶಾಂತಿಪ್ರಿಯ ನಾಯಕನ್ನಾಗಿ ಗುರುತಿಸಿಕೊಳ್ಳಬೇಕೆಂಬ ಆಸೆಯಿತ್ತು. ಶಾಂತಿಪ್ರಿಯ ನಾಯಕ ಎನಿಸಿಕೊಂಡರೆ ತನಗೆ ‘ನೊಬೆಲ’ ಬಹುಮಾನ ಸಿಗುತ್ತದೆಯೆಂಬ ಮಹದಾಸೆ ನೆಹರುಗೆ ಇತ್ತೆಂದು ಹಲವು ಇತಿಹಾಸಕಾರರು ಹೇಳುತ್ತಾರೆ. ತನಗೆ ಪ್ರಶಸ್ತಿ ಸಿಗಬೇಕೆಂಬ ಆಸೆಯಿಂದ ಭಾರತೀಯ ಸೈನ್ಯವನ್ನು ನಿಶ್ಶಕ್ತೀಕರಣ ಮಾಡಲು ನೆಹರು ಹೊರಟಿದ್ದಕ್ಕೆ ಅವರ ಹಲವು ನಿರ್ಣಯಗಳು ಸಾಕ್ಷಿಯಾಗಿವೆ.

ಚೀನಾ ದೇಶ ಅಪಾಯಕಾರಿ ಎಂಬ ವಿಷಯ ತಿಳಿದಿದ್ದರೂ ‘ಇಂಡಿಯಾ ಚೀನಿ ಭಾಯ್ ಭಾಯ’ ಎಂಬ ಘೋಷಣೆಯಲ್ಲಿ ಭಾರತೀಯ ಸೈನ್ಯವನ್ನು ನಿಶ್ಶಕ್ತೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಚೀನಾ ದೇಶ ಪಕ್ಕದ ಟಿಬೆಟ್ ಭೂ ಭಾಗವನ್ನು ಆಕ್ರಮಿಸಿಕೊಂಡ ಮೇಲಾದರೂ ನೆಹರು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ನೆಹರು ಪಾಠ ಕಲಿಯಲಿಲ್ಲ. ಜೊತೆಯಲ್ಲಿದ್ದುಕೊಂಡು ಚೀನಾ ದೇಶ ಭಾರತದ ಬೆನ್ನಿಗೆ ಚೂರಿ ಹಾಕಿತು. ಪರಿಣಾಮ ನೆಹರು ಮಾಡಿದ ತಪ್ಪಿನಿಂದ ಭಾರತಕ್ಕೆ ಸೇರಿದ ೨೪,೦೦೦ ಚದರ ಕಿಲೋಮೀಟರ್ ಭೂಭಾಗವಾದ ‘ಅಕ್ಸಯ್ ಚಿನ್’
ಪ್ರಾಂತ್ಯವನ್ನು ಕಳೆದುಕೊಳ್ಳಬೇಕಾಯಿತು. ೧೯೬೨ರ ಚೀನಾ ವಿರುದ್ದದ ಯುದ್ಧದಲ್ಲಿ ಭಾರತೀಯ ಸೈನಿಕರ ಬಳಿ ಸರಿಯಾದ ಯುದ್ದೋಪಕರಣಗಳಿರಲಿಲ್ಲ. ಕೊರೆಯುವ ಚಳಿಯಲ್ಲಿ ಹಿಮಾಲಯದ ಬೆಟ್ಟಗಳ ನಡುವೆ ಭಾರತೀಯ ಸೈನಿಕರು ಯುದ್ಧ ಮಾಡಬೇಕಾಗಿತ್ತು. ನೆಹರು ಯೋಚನೆ ಮಾಡಿದ ರೀತಿಯಲ್ಲಿ ಚೀನಾ ಯೋಚಿಸಿರಲಿಲ್ಲ, ತನ್ನ ಸೈನ್ಯವನ್ನು ಗಟ್ಟಿಗೊಳಿಸುತ್ತಿತ್ತು. ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಪರವಾಗಿ ನಿಲ್ಲದ ಎಡಚರರಿಗೆ ಚೀನಾ ಯುದ್ಧ ಗೆದ್ದರೆ ಭಾರತದ ಮೇಲೆ ಪ್ರಾಬಲ್ಯ ಸಾಧಿಸಿ ಕಮ್ಯುನಿಸ್ಟ್ ಸಿದ್ಧಾಂತವನ್ನು ನಮ್ಮ ನೆಲದಲ್ಲಿ ಆಳವಾಗಿ ಹೇರುವುದು ಸುಲಭವೆಂದು ತಿಳಿದಿತ್ತು.

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನಮಾನ ನೀಡುವುದಾಗಿ ಅಮೆರಿಕ ದೇಶ ನೆಹರು ಬಳಿ ಪ್ರಸ್ತಾಪಿಸಿದ್ದರೂ ಚೀನಾ ಮೇಲಿನ ಪ್ರೀತಿಗೆ ನೆಹರು ಭಾರತಕ್ಕೆ ಸಿಕ್ಕ ಅವಕಾಶವನ್ನು ಕೈಚೆಲ್ಲಿದರು. ಪರಿಣಾಮ ಚೀನಾ ವಿಶ್ವಸಂಸ್ಥೆಯ ಶಾಶ್ವತ ಸದಸ್ಯ ದೇಶವಾಯಿತು. ನೆಹರುವಿನ ಚೀನಾ ದೇಶದ ಮೇಲಿನ ಪ್ರೀತಿಯಿಂದ ಇಂದಿಗೂ ಭಾರತ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಹೋರಾಡುವಂತಾಗಿದೆ. ೧೯೪೮ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದ ಸಂದರ್ಭದಲ್ಲಿ ನೆಹರು ಭಾರತೀಯ ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ‍್ಯ ನೀಡಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರ ಅಂದು ಪಾಕಿಸ್ತಾನಿಗಳ ಕೈ ಸೇರುತ್ತಿರಲಿಲ್ಲ. ಸೈನ್ಯಾಽಕಾರಿಗಳು ಹೇಳಿದ ಮಾತನ್ನು ಕೇಳದ ನೆಹರು ಪಾಕಿಸ್ತಾನಕ್ಕೆ ಉಚಿತವಾಗಿ ಭಾರತದ ದೊಡ್ಡ ಭೂಭಾಗವನ್ನು ನೀಡಿದರು. ಎರಡನೇ ಮಹಾಯುದ್ಧದ ನಂತರ ಜಗತ್ತಿನ ಬಹುತೇಕ ದೇಶಗಳು ತಮ್ಮ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿಕೊಂಡವು.

೧೯೪೭ರಲ್ಲಿ ಸ್ವತಂತ್ರ ನಂತರ ಭಾರತದ ಬಳಿ ಗಟ್ಟಿಯಾದ ಸೈನ್ಯವೇ ಇತ್ತು. ಸುಭಾಷ್ ಚಂದ್ರ ಬೋಸರು ಬ್ರಿಟಿಷರ ವಿರುದ್ಧ ಹೋರಾಡಲು ಸ್ಥಾಪಿಸಿದ್ದ ಇಂಡಿಯನ್ ನ್ಯಾಷನಲ್ ಆರ್ಮಿ ಜಗತ್ತಿನ ಬೇರೆ ದೇಶಗಳ ಸೈನ್ಯಕ್ಕಿಂತಲೂ ಕಡಿಮೆ ಇರಲಿಲ್ಲ. ಬ್ರಿಟಿಷರ ಸೈನ್ಯದಲ್ಲಿ ಯುದ್ಧಕ್ಕೆ ಬೇಕಾದಂತಹ ತರಬೇತಿಗಳನ್ನು ಪಡೆದು ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಿಯೆಂದು ಸಾವರ್ಕರ್ ಹೇಳಿದ್ದನ್ನು ತಿರುಚಿ ಸಾವರ್ಕರ್ ಬ್ರಿಟಿಷರ ಪರವಿದ್ದರೆಂಬ ಸುಳ್ಳನ್ನು ಎಡಚರ ಬೆಂಬಲಿಗರು ದೊಡ್ಡದಾಗಿ ಹಬ್ಬಿಸಿದರು. ಆದರೆ ನೆಹರು ಮಾಡಿದ ಭಾರತೀಯ ಸೈನ್ಯದ ನಿಶ್ಯಕ್ತೀಕರಣದ ಬಗ್ಗೆ ಇತಿಹಾಸದ ಪುಸ್ತಕಗಳಲ್ಲಿ ಹೇಳಲೇ ಇಲ್ಲ.

ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯರಿಗೆ ಸೈನ್ಯದಲ್ಲಿ ಉತ್ತಮ ಅನುಭವವಿತ್ತು. ಸಶಕ್ತ ಯೋಧರ ಪಡೆಯನ್ನು ಹೊಂದಿದ್ದ ಭಾರತೀಯ ಸೈನ್ಯವನ್ನು ದುರ್ಬಲಗೊಳಿಸುವ ಕೆಲಸವನ್ನು ನೆಹರು ೧೯೬೨ರ ಹೊತ್ತಿಗೆ ಮಾಡಿಯಾಗಿತ್ತು. ಕಾಂಗ್ರೆಸ್ಸಿನ ಅವಧಯಲ್ಲಿ ಸೈನಿಕರಿಗೆ ಸರಿಯಾದ ಬೂಟುಗಳಿರಲಿಲ್ಲ, ಆಧುನಿಕ ಬಂದೂಕುಗಳಿರಲಿಲ್ಲ. ಬುಲೆಟ್ ಪ್ರೂಫ್ ಜಾಕೆಟ್‌ಯಿರಲಿಲ್ಲ. ಗಡಿಭಾಗದಲ್ಲಿ ರಸ್ತೆಗಳು ನಿರ್ಮಾಣವಾಗದ ಕಾರಣ ಯುದ್ಧ ಸಾಮಗ್ರಿಗಳು ಸೈನಿಕರರಿಗೆ ಸರಿಯಾದ ಸಮಯದಲ್ಲಿ ಸೇರುತ್ತಿರಲಿಲ್ಲ. ನೆಹರು ಭಾರತೀಯ ಸೈನ್ಯದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸದ ಕಾರಣ ೧೯೬೨ರ ಚೀನಾ ಯುದ್ಧದಲ್ಲಿ ಭಾರತ ದೊಡ್ಡ ಪೆಟ್ಟು ತಿನ್ನಬೇಕಾಯಿತು.

ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ದೊಡ್ಡಣ್ಣ ಅಮೆರಿಕದ ವಿರೋಧದ ನಡುವೆಯೂ ಪೋಕ್ರಾನ್‌ನಲ್ಲಿ ಅಣ್ವಸ ಪರೀಕ್ಷೆ ಮಾಡಲಾಯಿತು. ಭಾರತದ ಜಗತ್ತಿನ ಮುಂದೆ ಅಣ್ವಸ್ತ್ರಗಳನ್ನು ಹೊಂದಿರುವ ರಾಷ್ಟ್ರವೆಂಬುದು ಸಾಬೀತಾಯಿತು. ಸುಮಾರು ಐದು ದಶಕಗಳ ನಂತರ ಭಾರತದ ಮಿಲಿಟರಿಯಲ್ಲಿ ನಡೆದ ದೊಡ್ಡಮಟ್ಟದ ಬೆಳವಣಿಗೆ ಇದಾಗಿತ್ತು.ನರೇಂದ್ರ ಮೋದಿಯವರು ಅಽಕಾರಕ್ಕೆ ಬಂದ ನಂತರ ಸೈನ್ಯದಲ್ಲಿ ಬಹಳಷ್ಟು ಸುಧಾರಣೆಗಳನ್ನು ತಂದರು. ಯುದ್ಧದ ಸಂದರ್ಭದಲ್ಲಿ ಮೂರೂ ಸೇನೆಗಳ ನಡುವೆ ಹೊಂದಾಣಿಕೆ ಮೂಡಿಸುವ ಸಲುವಾಗಿ ಮೂರೂ ಸೇನೆಗೆ ಒಬ್ಬರು ಮುಖ್ಯಸ್ಥರನ್ನು ನೇಮಕ ಮಾಡಿದರು. ಭಾರತಕ್ಕೆ ಹೊಂದಿಕೊಂಡಿರುವ ಚೀನಾ ಮತ್ತು ಪಾಕಿಸ್ತಾನದ ಗಡಿಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದರು. ತುರ್ತು ಸಂದರ್ಭದಲ್ಲಿ ಗಡಿ ಭಾಗಕ್ಕೆ ಯುದ್ಧ ಸಾಮಗ್ರಿಗಳು ಸೈನಿಕರಿಗೆ ತಲುಪುವ ವ್ಯವಸ್ಥೆ ಕಡೆಗೆ ಹೆಚ್ಚಿನ ಗಮನ ವಹಿಸಲಾಗಿದೆ.

ಸೈನಿಕರಿಗೆ ಸಂಪೂರ್ಣ ಸ್ವತಂತ್ರ ನೀಡಿದ ಪರಿಣಾಮ ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ರದ್ದತಿಯ ನಂತರವೂ ಪ್ರತ್ಯೇಕತಾವಾದಿಗಳು ಬಾಲ ಬಿಚ್ಚಲಿಲ್ಲ. ಗಡಿಯಲ್ಲಿ ಕಾಯುವ ಸೈನಿಕರಿಗೆ ಆತ್ಯಾಧುನಿಕ ಶಸ್ತ್ರಾಸ್ತ್ರಗಳು ದೊರಕುವಂತೆ ಮಾಡಿದ್ದಾರೆ. ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಿದ್ದಾರೆ. ಸ್ವದೇಶಿ ನಿರ್ಮಿತ ಅತ್ಯಾಧುನಿಕ ಬಂದೂಕುಗಳನ್ನು ಸೈನ್ಯಕ್ಕೆ ನೀಡಲಾಗಿದೆ.
– ದೇಶದಿಂದ ಮೂರನೇ ತಲೆಮಾರಿನ ’ರಫೆಲ್’ ಯುದ್ಧ ವಿಮಾನಗಳನ್ನು ಖರೀದಿ ಮಾಡಿ ವಾಯುಸೇನೆಯನ್ನು ಬಲಗೊಳಿಸಲಾಗಿದೆ. ಕಾಂಗ್ರೆಸ್ಸಿನ ಅವಧಿಯಲ್ಲಿ ರಫೆಲ್ ಖರೀದಿಯ ಚರ್ಚೆ
ನಡೆದಿತ್ತು, ಆದರೆ ಹಣಕಾಸಿನ ವಿಚಾರದಲ್ಲಿ ಒಪ್ಪಂದ ಪೂರ್ಣವಾಗಿರಲಿಲ್ಲ. ರಫೆಲ್ ಯುದ್ಧ ವಿಮಾನ ಖರೀದಿಯಿಂದ ಭಾರತೀಯ ವಾಯುಸೇನೆ ಮತ್ತಷ್ಟು ಬಲಗೊಳ್ಳುತ್ತದೆಯೆಂಬ ಉದ್ದೇಶ ದಿಂದ ಅದರ ಖರೀದಿಯ ವಿಷಯವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ದೇಶಾದ್ಯಂತ ಮೋದಿಯವರ ವಿರುದ್ಧ ಸುಳ್ಳುಗಳನ್ನು ಹೇಳಿಕೊಂಡು ಬಂದರು.

ರಫೆಲ್ ವಿಚಾರದಲ್ಲಿ ನ್ಯಾಯಾಲಯದಲ್ಲಿ ಕಾಂಗ್ರೆಸ್ಸಿಗೆ ದೊಡ್ಡಮಟ್ಟದ ಮುಖಭಂಗವಾಯಿತು. ಮೋದಿಯವರ ಅವಧಿಯಲ್ಲಿ ಭಾರತದ ಗಡಿಗಳಲ್ಲಿ ಲೇಸರ್ ನಿಯಂತ್ರಿತ ಬೇಲಿ ಹಾಕಲಾಯಿತು. ಪ್ರತಿಷ್ಠಿತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಸ್ವದೇಶಿ ನಿರ್ಮಿತ ‘ತೇಜಸ್’ ಯುದ್ಧ ವಿಮಾನಗಳನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡಿ ವಾಯುಸೇನೆಯನ್ನು
ಮತ್ತಷ್ಟು ಗಟ್ಟಿಗೊಳಿಸಲಾಗಿದೆ. ಇಸ್ರೇಲಿ ನಿರ್ಮಿತ ’ಲೇಸರ್ ಗೈಡೆಡ್ ಬಾಂಬು’ಗಳು ಭಯೋತ್ಪಾದಕರ ನೆಲೆಗಳನ್ನು ದ್ವಂಸಗೊಳಿಸಿವೆ. ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ಪಾಕಿಸ್ತಾನಿಗಳು ನಡೆಸಿದ ಭಯೋತ್ಪಾದಕ ದಾಳಿಯ ಸೇಡನ್ನು ತೀರಿಸಿಕೊಳ್ಳಲು ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಕೋಟ್ ಪ್ರದೇಶದ ಮೇಲೆ ವೈಮಾನಿಕ ದಾಳಿ ನಡೆಸಿ
ದಾಗ ಪಾಕಿಸ್ತಾನದ ಬೆಂಬಲಕ್ಕೆ ಅಮೆರಿಕ ನಿಲ್ಲಲಿಲ್ಲ, ಚೀನಾ ದೇಶ ತುಟಿ ಬಿಚ್ಚಲಿಲ್ಲ.

ಆದರೆ ಕಾಂಗ್ರೆಸ್ಸಿನ ನಾಯಕರು ಸೈನಿಕರು ನಡೆಸಿದ ವೈಮಾನಿಕ ದಾಳಿಯ ಪುರಾವೆಗಳನ್ನು ಕೇಳುವ ಮೂಲಕ ಭಾರತೀಯ ಸೈನಿಕರ ಮನೋಭಲವನ್ನು ಕುಗ್ಗಿಸುವ ಕೆಲಸ ಮಾಡಿದ್ದರು. ಭಾರತೀಯ ಸೈನ್ಯವನ್ನು ನಿಶಕ್ತೀಕರಣಗೊಳಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ನೆಹರೂ ಕಾಲದಿಂದಲೂ ಮಾಡುತ್ತಿದೆ. ತಾನು ಅಧಿಕಾರದಲ್ಲಿದ್ದಾಗ ಸೈನ್ಯಕ್ಕೆ ಬಲ ತುಂಬುವ ಕೆಲಸ ಮಾಡುವುದಿಲ್ಲ ಮತ್ತು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ ನೀಡುವುದಿಲ್ಲ. ಪ್ರತಿಪಕ್ಷದಲ್ಲಿದ್ದಾಗ ಸೈನಿಕರ ಮನೋಸ್ಥೈರ್ಯ ಕುಗ್ಗುವ ಹೇಳಿಕೆಗಳನ್ನು ನೀಡುತ್ತಾರೆ. ಸೈನಿಕರನ್ನು ಅತ್ಯಾಚಾರಿ ಗಳೆಂದವರೊಂದಿಗೆ ರಾಹುಲ್ ಗಾಂಧಿ ಕಾಫಿ ಕುಡಿಯುತ್ತಾರೆ.

ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರುವವರ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ. ರಾಹುಲ್ ಗಾಂಧಿ ಅಗ್ನಿವೀರ್‌ ಯೋಜನೆಯನ್ನು ವಿರೋಧಿಸುವುದರ ಹಿಂದೆಯೂ ಭಾರತೀಯ ಸೈನ್ಯದ ಬಲವನ್ನು ಕುಗ್ಗಿಸುವ ಹುನ್ನಾರವಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಸೇನೆ ಬಹಳಷ್ಟು ಬಲಿಷ್ಠವಾಗಿದೆ. ಜಗತ್ತಿನ ಮುಂದುವರೆದ ದೇಶಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತೀಯ ಸೈನ್ಯದಲ್ಲಿದೆ. ಶತ್ರುಗಳಿಗೆ ಭಾರತೀಯ ಸೈನ್ಯವೆಂದರೆ ಭಯವಿದೆ. ನಮ್ಮ ಸೈನ್ಯದಗುತ್ತಿರುವ ಆಧುನಿಕ ಬದಲಾವಣೆಗಳು ಶತ್ರುಗಳ ನಿದ್ದೆ ಕೆಡಿಸುತ್ತಿದೆ. ಶತ್ರುಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ರಾಹುಲ್ ಗಾಂಽ ಅಗ್ನಿವೀರ್ ಯೋಜನೆಯ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ.

ತಮ್ಮ ಸುಳ್ಳುಗಳ ಮೂಲಕ ಯುವಕರು ಸೈನ್ಯಕ್ಕೆ ಸೇರುವುದನ್ನು ತಡೆಯುವುದು ಅವರ ಏಕೈಕ ಉದ್ದೇಶವಾಗಿದೆ. ಸುಳ್ಳು ಸುದ್ದಿಗಳ ಮೂಲಕ ಭಾರತದ ಸೈನ್ಯದ ಬಲವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ.

Leave a Reply

Your email address will not be published. Required fields are marked *