Friday, 13th December 2024

ಕೃಷಿಯಾಧಾರಿತ ಕೈಗಾರಿಕೀಕರಣದ ಚಿಂತನೆ ಅವರ ಯಶಸ್ಸಿನ ಗುಟ್ಟು !

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್, ಬರಹಗಾರ, ಶಿಕ್ಷಕ

ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಲೇಸು – ಹೀಗೆಂದವರೂ ಅವರೇ. ಮತ್ತು ಹಾಗೆ ನುಡಿದಂತೆ ನಡೆದವರು ಅವರೇ. ಅವರೇ ನಮ್ಮ ವಿಶ್ವೇಶ್ವರಯ್ಯ. ಒಬ್ಬ ಮನುಷ್ಯ ತನ್ನ ಒಟ್ಟೂ ಜೀವಿತಾವಧಿಯಲ್ಲಿ ಸಾಧಿಸಬಹುದಾದ ಸಾಧನೆಗೆ ಜ್ವಲಂತ ನಿದರ್ಶನವಾಗೇ ಕೊನೆಯವರೆಗೂ ಇರುವವರು ವಿಶ್ವೇಶ್ವರಯ್ಯನಂಥವರು ಮಾತ್ರ!

ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು, ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಿಂದ ಕಲಿಯೋಣ- ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವ ಸಮಾರಂಭ
ದಲ್ಲಿ ನೆಹರೂ ಆಡಿದ ಮಾತು (ನೆಹರೂವಿನ ಅಂತರಂಗದ ಮಾತಿದು ಎಂದು ಭಾವಿಸುತ್ತೇನೆ) ಅಕ್ಷರಶಃ ಸತ್ಯವಾಗಿದೆ.

ವ್ಯಕ್ತಿಯೊಬ್ಬ ಶ್ರದ್ಧೆ ಮತ್ತು ನಿಸ್ವಾರ್ಥದಿಂದ ದುಡಿದರೆ ತನ್ನ ವೃತ್ತಿಯಲ್ಲಿ ಶ್ರೇಷ್ಠನೆನಿಸಿಕೊಳ್ಳುತ್ತಾನೆ, ಔನ್ನತ್ಯಕ್ಕೆ, ಉತ್ಕರ್ಷಕ್ಕೆ
ಮಾದರಿಯಾಗಿ ಚಿರಕಾಲ ಉಳಿಯುತ್ತಾನೆ. ವಿಶ್ವೇಶ್ವರಯ್ಯ ಭಾರತದ ಪಾಲಿಗೆ ಯಾವತ್ತೂ ಹೀಗೆಯೇ ಉಳಿದವರು, ಉಳಿಯು ವವರು. ಅವರದು ಅಪ್ರತಿಮ, ಅನನ್ಯ ವಾಸ್ತವ ಚಿಂತನೆ, ಸುಸಂಗತ ವೈಜ್ಞಾನಿಕ ದೃಷ್ಟಿ, ದೂರದೃಷ್ಟಿಯ ಯೋಚನೆ – ಯೋಜನೆ, ಕಾರ್ಯಪಟುತ್ವ, ಕಾರ್ಯದಕ್ಷತೆ ತುಂಬಿದ ಚೈತನ್ಯ. ಎಲ್ಲಕ್ಕಿಂತಲೂ ಮುಖ್ಯವಾಗಿ ಅವರಲ್ಲಿ ಎದ್ದು ಕಾಣುವುದು ಛಲ, ನಿಸ್ಪಹತೆ.

ಒಂದು ದೇಶದ ಸಮಗ್ರ ಅಭಿವೃದ್ಧಿಗೆ ಕೃಷಿಯೇ ಮೂಲಾಧಾರವೆಂಬುದು ನಿಸ್ಸಂದೇಹ. ಅದು ‘ಪ್ರಥಮ ವಲಯ’ (Primary Sector)ಕ್ಕೆ ಸೇರುತ್ತದೆ. ಆರ್ಥಿಕತೆಯ ಮೂರು ವಲಯಗಳಲ್ಲಿ ಕೈಗಾರಿಕೆಗಳು ‘ದ್ವಿತೀಯ’ ವಲಯ (Secondary Sector)ಕ್ಕೆ ಸೇರುತ್ತವೆ. ಕೈಗಾರಿಕೆಗಳು ದೇಶಕ್ಕೆ ಮೂಳೆಗಳಿದ್ದ ಹಾಗೆ. ದೇಹಕ್ಕೆ ಪೂರ್ಣ ಸ್ವಾವಲಂಬನೆ ಮತ್ತು ಚೈತನ್ಯವನ್ನು ಮೂಳೆಗಳು ಹೇಗೆ ಒದಗಿಸುತ್ತವೆಯೋ ಹಾಗೆಯೇ ಆರ್ಥಿಕತೆಗೆ ಚೈತನ್ಯ ಕೊಟ್ಟು ದೀರ್ಘಕಾಲೀನ ಅಭಿವೃದ್ಧಿಗೆ ನೆರವಾಗಲು ಕೈಗಾರಿಕೆಗಳು  ಕೃಷಿಯಂತೆಯೇ ಅತ್ಯಂತ ಆವಶ್ಯಕವಾದುದು.

ಕೈಗಾರಿಕಾಭಿವೃದ್ಧಿ ಸಾಧಿಸಿದ ರಾಷ್ಟ್ರಗಳನ್ನು ಅಭಿವೃದ್ಧಿ ರಾಷ್ಟ್ರಗಳೆಂದೂ ಕೈಗಾರಿಕೆಯಲ್ಲಿ ಹಿಂದುಳಿದ, ಮತ್ತು ಕೃಷಿಯನ್ನೇ ಪ್ರಧಾನವಾಗಿ ಹೊಂದಿರುವ ರಾಷ್ಟ್ರಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳೆಂದೂ ಕರೆಯುವುದು ಆರ್ಥಿಕ ಪ್ರಗತಿಯ ಪರಿಭಾಷೆ ಯಲ್ಲಿ ರೂಢಿಯಾಗಿದೆ. ಭೂಮಿಯ ಫಲವತ್ತತೆ ಮತ್ತು ಕೃಷಿಯ ಉತ್ಪಾದಕತೆಗೆ ಮಿತಿ ಇರುವಿಕೆ ಮತ್ತು ಪ್ರಾಥಮಿಕ ಉತ್ಪನ್ನಗಳ ಬೆಲೆ ಕಡಿಮೆ ಇರುವಿಕೆಯೇ ಈ ತರ್ಕಕ್ಕೆ ಕಾರಣ. ಆದ್ದರಿಂದ ಒಂದು ದೇಶದ ಆರ್ಥಿಕಾಭಿವೃದ್ಧಿ ಅಥವಾ ಪ್ರಗತಿಯ ವಿಕಾಸಕ್ಕೆ ಕೈಗಾರಿಕೆಗಳ ಬೆಳವಣಿಗೆ ಅನಿವಾರ್ಯವೆಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.

ಕೈಗಾರಿಕೋದ್ಯಮದ ಬಗೆಗೆ ಸಮಗ್ರ ಧೋರಣೆ, ಉದ್ಯಮಗಳ ಸ್ಥಾಪನೆ, ಕಾರ್ಯಾಚರಣೆ ಮತ್ತು ಆಡಳಿತ ನಿರ್ವಹಣೆಯ ವಿಷಯಗಳಲ್ಲಿ ಅನುಸರಿಸುವ ಅಧಿಕೃತ ನೀತಿಯೇ ‘ಕೈಗಾರಿಕಾ ನೀತಿ’ (Industrial policy). ಕೈಗಾರಿಕಾ ಪ್ರಗತಿಯ ಬಗೆಗೆ ಸರಕಾರದ ತತ್ವ, ಧೋರಣೆ ಮತ್ತು ನೀತಿಯ ಅನುಷ್ಠಾನಗಳು ಕೈಗಾರಿಕಾ ನೀತಿಯ ಅಂಶಗಳಾಗಿರುತ್ತದೆ. ಎಂತಹ ಬಗೆಯ ಕೈಗಾರಿಕೆಗಳನ್ನು
ಪ್ರೋತ್ಸಾಹಿಸಬೇಕು, ಅವುಗಳ ಕಾರ್ಯಾಚರಣೆ ಮತ್ತು ಆಡಳಿತದಲ್ಲಿ ಸರಕಾರದ ಹಸ್ತಕ್ಷೇಪವಿರಬೇಕೇ ಅಥವಾ ಬೇಡವೇ, ಹಾಗೂ ಯಾವ ಮಾನದಂಡದ ಆಧಾರದ ಮೇಲೆ ದೊಡ್ಡ, ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳನ್ನು ವಿಭಾಗಿಸಬೇಕು, ಯಾವ ವಿಧದ ಕೈಗಾರಿಕೆಗಳು ಸಾರ್ವಜನಿಕ, ಖಾಸಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸ್ಥಾಪಿಸಲ್ಪಡಬೇಕು, ಮೊದಲಾದ ಅಂಶಗಳು
ಕೈಗಾರಿಕಾ ನೀತಿಯಲ್ಲಿರುತ್ತವೆ. ಕೈಗಾರಿಕಾ ನೀತಿಯಲ್ಲಿ ಹಣ ಸಂಬಂಧಿ ನೀತಿ, ಕೋಶೀಯ ನೀತಿ, ಕಾರ್ಮಿಕ ನೀತಿ, ವಿದೇಶೀ ನೆರವಿನ ಬಗೆಗೆ ಸರಕಾರದ ನಿಲುವು ಇತ್ಯಾದಿ ವಿಷಯಗಳು ಒಳಪಡುತ್ತವೆ.

‘ಕೈಗಾರಿಕೀಕರಣ ಇಲ್ಲವೆ ಅವನತಿ’ ಎಂಬ ವಿಶ್ವೇಶ್ವರಯ್ಯನವರ ಪರಿಕಲ್ಪನೆಗೆ ಬೇರೆಯದೇ ಆದ ಅರ್ಥವಿದೆ. ಅದು ಮುಖ್ಯವಾಗಿ ಕೃಷಿಯನ್ನು ಪ್ರಧಾನವಾಗಿ ಇಟ್ಟುಕೊಂಡ ಕೈಗಾರಿಕೀಕರಣದ ಹಂಬಲವಾಗಿತ್ತು. ನೆಹರೂ ಕೈಗಾರಿಕೆಗಳನ್ನು ಆಧುನಿಕ ಭಾರತದ ದೇವಾಲಯಗಳೆಂದು ಕರೆದರು. ಈ ಕೈಗಾರಿಕೀಕರಣದಿಂದ ನಗರೀಕರಣ, ಶಿಕ್ಷಣ ಅಭಿವೃದ್ಧಿ, ಜನಸಂಖ್ಯೆ ನಿಯಂತ್ರಣ ಮಾಡಲು,
ಮೂಢನಂಬಿಕೆಗಳನ್ನು ಹೋಗಲಾಡಿಸಲು ಸಾಧ್ಯವಿದೆಯೆಂಬ ಭಾಗಶಃ ಒಪ್ಪುುವಂಥ ನಂಬಿಕೆಯೊಂದಿದೆ. ಅಷ್ಟೇ ಅಲ್ಲ, ಈ ನಂಬಿಕೆ ಕಾರ್ಯರೂಪಕ್ಕೂ ಇಳಿದು ವರ್ಷಗಳೇ ಸಂದವು. ಕೈಗಾರಿಕೀಕರಣ ಅಬ್ಬರದ ನಡುವೆಯೂ ಭ್ರಷ್ಟಾಚಾರ, ಅತ್ಯಾಚಾರ, ಕೊಲೆ, ಜಾತಿವಾದ, ಕೋಮುವಾದ, ಮೋಸ, ವಂಚನೆ, ದರೋಡೆ, ಡ್ರಗ್ಸ್ ದಂಧೆಗಳು ನಿಂತಿಲ್ಲ ಎಂಬುದೂ ಅಷ್ಟೇ ಸತ್ಯ!

ನಗರಗಳಲ್ಲೂ ಫಲಜ್ಯೋತಿಷ್ಯದ ಹಿಂದೆ ಬೀಳುವವರಿಲ್ಲವೆ? ಕುರುಡು ಸಂಪ್ರದಾಯದ ಅಂಧಾನುಕರಣೆ, ಹಾವಾಡಿಸುವುದು,
ಗಿಣಿಶಾಸ್ತ್ರ, ವರದಕ್ಷಿಣೆ, ಬಾಲ್ಯವಿವಾಹ, ಪ್ರಾಣಿ ಬಲಿಕೊಡುವುದು – ಇರುವಂಥಲ್ಲಿ ಕೈಗಾರಿಕೀಕರಣದಿಂದ ಏನೂ ಸಾಧ್ಯವಿಲ್ಲ. ಯಾರು ಅಶಿಕ್ಷಿತರೋ, ಸಂಪ್ರದಾಯಸ್ಥರೋ, ಸಿದ್ಧಾಂತಕ್ಕೆ, ನಂಬಿಕೆಗೆ ಬದ್ಧರಾಗಿರುವರೋ ಅಂಥವರೇ ಇಂದು ಸಮುದಾಯ ದಲ್ಲಿ ಪ್ರಾಮಾಣಿಕವಾದ ಜೀವನಮಾರ್ಗದಲ್ಲಿ ಬದುಕುತ್ತಿರುವುದನ್ನು ನೋಡುತ್ತಿದ್ದೇವೆ.

ಇರಲಿ, ಆ ವಿಚಾರ ಈಗ ಬೇಡ. ಅಶಿಕ್ಷಿತರಿಗಿಂತ ಸುಶಿಕ್ಷಿತರೇ ಭಾರತದಂಥ ದೇಶಕ್ಕೆ ಯಾವತ್ತೂ ಹೆಚ್ಚು ಅಪಾಯಕಾರಿ ಎಂಬುದು
ಸಾಬೀತಾಗುತ್ತಲೇ ಇದೆ. ಭಾರತದಂಥ ಅಭಿವೃದ್ಧಿಶೀಲ ದೇಶದಲ್ಲಿ ಕೈಗಾರಿಕಾ ನೀತಿಯ ಆವಶ್ಯಕತೆ ತುಂಬ ಮುಖ್ಯವಾದದ್ದು ಎಂದು ಚಿಂತಿಸಿದವರಲ್ಲಿ ವಿಶ್ವೇಶ್ವರಯ್ಯನವರೇ ಅಗ್ರಗಣ್ಯರು. ಅದಕ್ಕಾಗಿ, ಯೋಜನಾಬದ್ಧ ಆರ್ಥಿಕತೆಗೆ ಸಮಗ್ರ ಕಾರ್ಯ
ಸೂಚಿಯನ್ನು ಅವರು ತಮ್ಮ ಕೈಗಾರಿಕಾ ನೀತಿಯಲ್ಲಿ ರೂಪಿಸಿದ್ದರು. ವಿವಿಧ ರೀತಿಯ ಉದ್ಯಮಗಳ ಸ್ಥಾಪನೆ, ಬಂಡವಾಳ ಹೂಡಿಕೆ, ಉತ್ಪಾದನಾ ವಿಧಾನ ಮೊದಲಾದ ಸಂಗತಿಗಳಿಗೆ ಸಂಬಂಧಿಸಿದಂತೆ ಒಂದು ನೀತಿಯನ್ನು ಅಳವಡಿಸಿಕೊಂಡಿದ್ದರಿಂದ ಸಂಪನ್ಮೂಲಗಳ ಕ್ರೋಢೀಕರಣ ಮತ್ತು ವಿನಿಯೋಗತ್ವವನ್ನು ಗಮನದಲ್ಲಿಟ್ಟುಕೊಂಡು ವಿಭಿನ್ನ ಮಾದರಿಯ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿದರು.

ವಿಕಾಸಶೀಲ ಆರ್ಥಿಕತೆಯಲ್ಲಿ ಸಣ್ಣ, ಮಧ್ಯಮ ಮತ್ತು ಗುಡಿ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸುತ್ತವೆಂಬುದು ಅವರ ಚಿಂತನೆ ಯಾಗಿತ್ತು. ಅವುಗಳಿಗೆ ಪ್ರೋತ್ಸಾಹ ಮತ್ತು ಆರ್ಥಿಕ ನೆರವು ನೀಡಲು ಕೈಗಾರಿಕಾ ನೀತಿಯಲ್ಲಿ, ಹಣಕಾಸು ನೀತಿಯಲ್ಲಿ ರಚನಾತ್ಮಕ
ಕ್ರಮಗಳನ್ನು ಕೈಗೊಂಡರು. ಇದನ್ನು ಸಾಧಿಸಲು ಮೈಸೂರು ಬ್ಯಾಂಕ್ ಸ್ಥಾಪನೆ, ಉಳಿತಾಯ ಬ್ಯಾಂಕುಗಳು, ಫೀಡರ್ ಬ್ಯಾಂಕು ಗಳು, ಕೈಗಾರಿಕಾ ಹೂಡಿಕೆ, ಅಭಿವೃದ್ಧಿ ನಿಧಿ, ಪ್ರಾಂತೀಯ ಸಹಕಾರಿ ಬ್ಯಾಂಕ್, ಆಯವ್ಯಯದಲ್ಲಿ ಹೊಸ ದೃಷ್ಟಿಕೋನ – ಇವೆಲ್ಲ ಅವರ ಕೈಗಾರಿಕೀಕರಣದ ಹಿಂದಿನ ಕಾರ್ಯಯೋಜನೆ – ಕಾರ್ಯಯೋಚನೆಯಾಗಿತ್ತು. ಸಣ್ಣ, ಮಧ್ಯಮ ಮತ್ತು ಗುಡಿ ಕೈಗಾರಿಕೆ ಗಳು ತಮ್ಮ ಉತ್ಪಾದನ ಕಾರ್ಯವನ್ನು ಸಾಗಿಸಿಕೊಂಡು ಹೋಗಲು ಈ ಆರ್ಥಿಕ ಕ್ರಮಗಳು ಯಶಸ್ಸನ್ನು ಕೊಟ್ಟವು.

ಭಾರತದ ಅರ್ಥವ್ಯವಸ್ಥೆಯ ಮೂಲ ನಿಂತಿರುವುದು ಕೃಷಿಯಾಧಾರಿತವಾಗಿ. ಕೃಷಿಯು ಮಾನವ ಶ್ರಮವನ್ನೇ ಬಯಸುತ್ತದೆ. ಆದರೆ ಕೈಗಾರಿಕೆಗಳು ಯಂತ್ರಗಳನ್ನು ಬಯಸುತ್ತದೆ. ಯಂತ್ರ ನಾಗರಿಕತೆಯಿಂದ ಆರ್ಥಿಕ ಪ್ರಗತಿ ಸಾಧ್ಯವಾದರೂ  ನಿರುದ್ಯೋಗ ವನ್ನು ಹೆಚ್ಚಿಸುತ್ತದೆ. ಮಾನವ ಶ್ರಮವನ್ನು ಬಯಸುವ ಕೃಷಿಯಲ್ಲಿ ನಿರುದ್ಯೋಗ ನಿವಾರಣೆ ಸಾಧ್ಯವಾದರೂ ಉತ್ಪಾದನೆ ಕುಸಿತ, ಅದಕ್ಷತೆ, ನಿರ್ವಹಣೆಯಲ್ಲಿ ತಾರತಮ್ಯ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಷ್ಟ. ಮಾನವಾಧಾರಿತ ಶ್ರಮವನ್ನು ಬಯಸುವ
ಕೃಷಿಯಲ್ಲೂ ತಂತ್ರಜ್ಞಾನ ಈ ಕಾಲದಲ್ಲಿ ಬೇಕೇ ಬೇಕು.

ಸಾಂಪ್ರದಾಯಿಕ ಕೃಷಿಯಿಂದಾಗುವ ತಕ್ಕಮಟ್ಟಿಗಿನ ಇಳುವರಿ ಸಾಲದು. ಯಂತ್ರಗಳನ್ನಾಧರಿಸಿದ ಆರ್ಥಿಕತೆ ಹುಟ್ಟಿಸುವ ನಿರು ದ್ಯೋಗ ಸಮಸ್ಯೆಗೆ ಭಾರತದಂಥ ದೇಶದಲ್ಲಿ ಕೊನೆಯೇ ಇರುವುದಿಲ್ಲ. ಕೃಷಿಯಲ್ಲೂ ಯಂತ್ರವೇ ಪ್ರಧಾನವಾದುದರ ಪರಿಣಾಮ ವಾಗಿ ಮನುಷ್ಯ ಕೃಷಿಯನ್ನೇ ಮರೆತು ಬಿಟ್ಟಿದ್ದಾನೆ. ವಿಶ್ವೇಶ್ವರಯ್ಯನವರಿಗೆ ಮೈಸೂರು ರಾಜ್ಯದ ಪ್ರಗತಿ ಮುಖ್ಯ ವಾಗಿತ್ತು. ಓರ್ವ ತಂತ್ರಜ್ಞಾನಿಯಾಗಿ ಅವರು ಕೈಗಾರಿಕೀಕರಣವನ್ನು ಬೆಂಬಲಿಸಿ ಅಂದು ಮಾಡಿದ್ದೆಲ್ಲವೂ ಈಗಲೂ ಅಚ್ಚರಿಯೇ!

 

Industrial policy ಮುಂದೆಯೂ! ಆದರೆ, ಮಾನವ ರಹಿತ ಯಂತ್ರ ನಾಗರಿಕತೆಯನ್ನಾಗಲೀ, ಆರ್ಥಿಕತೆಯನ್ನಾಗಲೀ ಸಾಧಿಸುವು ದಾಗಲೀ ಅವರ ಉದ್ದೇಶ ಮತ್ತು ಗುರಿಯಾಗಲಿಲ್ಲ ಎಂಬುದು ಅವರ ಕಾರ್ಯ  ಯೋಜನೆಗಳನ್ನು ಅವಲೋಕಿಸಿದಾಗ ಸ್ಪಷ್ಟ ವಾಗುತ್ತದೆ. ಕೃಷಿ ಯಾವ ಕಾಲಕ್ಕೂ ಮನುಷ್ಯನನ್ನು ಉಪವಾಸ ಬೀಳಿಸದಂತೆ ಕಾಪಾಡಬಲ್ಲುದು. ಅದು ಎಂದಿಗೂ ಯಾರನ್ನೂ ತಿರಸ್ಕರಿಸುವುದಿಲ್ಲ. ಮನುಷ್ಯ ಜೀವನದ ಸಾಂಸ್ಕೃತಿಕ ಮೌಲ್ಯಗಳಿಗೂ ಕೃಷಿಗೂ ಅವಿನಾಭಾವದಂತೆ ಇರುವ ಸಂಬಂಧ ಕೈಗಾರಿಕೀಕರಣದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಕೃಷಿಯ ಮನಸು ಮತ್ತು ಬದುಕು ಮಣ್ಣಿನೊಡನೆ ಅಂಟಿಕೊಂಡಿರುತ್ತದೆ. ಅದರ ಹೊರತಾದ ಯಾವ ಬಂಧವೂ ಅದಕ್ಕೆ ಒಗ್ಗುವುದಿಲ್ಲ. ಆದರೆ ಯಂತ್ರ ನಾಗರಿಕತೆಯ ಯಾಂತ್ರಿಕ ಬದುಕು ಮನುಷ್ಯನನ್ನು ಒಳಗು
ಮಾಡಿ ಕೊನೆಗೆ ಹಿಂಜಿ ಹಿಪ್ಪೆ ಮಾಡುತ್ತದೆ.

ಬದುಕು ದುರ್ಭರವಾಗುವುದು ಆರ್ಥಿಕತೆಯ ಕೊರತೆಯಿಂದಲ್ಲ, ಜೀವವಿಲ್ಲದ ಮನುಷ್ಯ ಸಂಬಂಧಗಳ ನಡುವೆ ಬದುಕ ಬೇಕಾ ದಾಗ! ಆದರೆ ವಿಶ್ವೇಶ್ವರಯ್ಯನವರು ಬಯಸಿದ ಕೈಗಾರಿಕೀಕರಣದಲ್ಲಿ ಮಾನವ ಸಂಬಂಧ ಮೌಲ್ಯಗಳನ್ನು ತಿರಸ್ಕರಿಸುವ ಯಾವ ಪ್ರಜ್ಞಾನೆಲೆಯೂ ಕಾಣುವುದಿಲ್ಲ. ನದಿಗಳ ಜೋಡಣೆ, ಅಣೆಕಟ್ಟು ನಿರ್ಮಾಣ, ಗುಡಿ ಕೈಗಾರಿಕೆಗಳು, ಬ್ಯಾಂಕುಗಳ ಅಸ್ತಿತ್ವ, ಶಿಕ್ಷಣ ಪರಿಕಲ್ಪನೆ, ಆಡಳಿತದಲ್ಲಿ ವಿಕೇಂದ್ರಿಕರಣ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ – ಇವು ಮತ್ತು ಇಂಥ ಹಲವು ಮಹತ್ಕಾರ್ಯಗ ಳು ಮನುಷ್ಯನ ಬದುಕನ್ನು ನಿಸ್ತೇಜಗೊಳಿಸಲಿಲ್ಲ. ಸಮುದಾಯವನ್ನು ಸಬಲಗೊಳಿಸಿದವು.

ಕೈಗಾರಿಕೆಗಳ ಅಭಿವೃದ್ಧಿಯ ಮೂಲಕ ದೇಶದ ಪ್ರಗತಿಯ ಕನಸು ಕಂಡಿದ್ದರು ನೆಹರೂ. ಆದರೆ ಅವರು ಈ ದೇಶವನ್ನು ತಳಮಟ್ಟ ದಿಂದ ಕಂಡವರಲ್ಲ. ಜನಸಾಮಾನ್ಯರ ಬದುಕಿಗೆ ಹತ್ತಿರವಾದ ಬದುಕು ಅವರದ್ದಲ್ಲವಾಗಿತ್ತು. ಅವರ ಚಿಂತನೆಗಳು, ದೃಷ್ಟಿಕೋನ ಗಳು ಹುಟ್ಟಿಕೊಂಡದ್ದು ವಿದೇಶೀ ಸಮಾಜವಾದಿ ಪ್ರೇರಣೆಗಳಿಂದ! ಅಧ್ಯಯನದಿಂದಲ್ಲ! ಈ ಸಮಾಜವಾದಿ ಪ್ರೇರಣೆ ಕೈಗಾರಿಕೀ ಕರಣಕ್ಕೆ ಒತ್ತು ನೀಡುತ್ತದೆಂಬುದು ನಿಜ. ಹಿಂದಿನ ರಷ್ಯಾ, ಅಮೆರಿಕ, ಇಂಗ್ಲೆಂಡ್, ಚೀನಾ ಮುಂತಾದ ರಾಷ್ಟ್ರಗಳ ಅರ್ಥವ್ಯವಸ್ಥೆ ನಿಂತಿರುವುದು ಬೃಹತ್ ಬಂಡವಾಳ ಹೂಡಿಕೆ ಹಾಗೂ ಸಂಗ್ರಹದಿಂದ. ಆಯಾ ರಾಷ್ಟ್ರಗಳಿಗೆ ಒಗ್ಗಿದ ಈ ವ್ಯವಸ್ಥೆ ಭಾರತಕ್ಕೆ ಒಗ್ಗುವುದು ಸುಲಭವಲ್ಲ ಎಂಬ ಪ್ರಜ್ಞೆ ನೆಹರೂಗೆ ಅಷ್ಟು ಸುಲಭವಾಗಿ ಅರ್ಥವಾಗಲಿಲ್ಲ.

ಕೇವಲ ಕೈಗಾರಿಕೀಕರಣದಿಂದ ಆರ್ಥಿಕಾಭಿವೃದ್ಧಿಯ ಹಂಬಲ ಭಾರತದಂಥ ಕೃಷಿಯೇ ಪ್ರಧಾನವಾಗಿರುವ ದೇಶದಲ್ಲಿ ಕಷ್ಟ
ಎಂಬುದೂ ನೆಹರೂ ಅರಿಯಲಾರರು! ಕೃಷಿ ಪ್ರಧಾನವಾಗಿದ್ದ ದೇಶಗಳು ಕೈಗಾರಿಕೀಕೃತ ದೇಶಗಳಾಗಿ ರೂಪಾಂತರಗೊಳ್ಳುವುದು ಆರ್ಥಿಕ ವಿಕಾಸದ ಒಂದು ಐತಿಹಾಸಿಕ ಬೆಳವಣಿಗೆ. ಅಭಿವೃದ್ಧಿ ಹೊಂದಿದ ಎಲ್ಲ ದೇಶಗಳು ಇಂದು ಕೈಗಾರಿಕೀಕರಣ ಸಾಧಿಸಿದ ದೇಶ ಗಳಾಗಿವೆ. ಭಾರತವೂ ಸಹ ಮೂಲಾಧಾರವಾದ ಮತ್ತು ಬೃಹತ್ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಿ ಬೆಳೆಸಲು
ನಿರಂತರವಾಗಿ ಕಾರ್ಯ ಮಗ್ನವಾಗಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ, ಅದರಲ್ಲೂ ಎರಡನೇ ಯೋಜನೆ ಮತ್ತು ನಂತರದ ಯೋಜನೆಗಳ ಅವಧಿಯಲ್ಲಿ ಕೈಗಾರಿಕೀಕರಣಕ್ಕೆ ಭದ್ರ ಬುನಾದಿ ಹಾಕಲಾಗಿತ್ತು. ಸಾರ್ವಜನಿಕ ವಲಯವು ರಭಸವಾಗಿ ವಿಸ್ತಾರ ಗೊಂಡಿರುವುದು ಸ್ವಾತಂತ್ರೋತ್ತರ ಅವಧಿಯ ಕೈಗಾರಿಗಾ ಬೆಳವಣಿಗೆಯ ಪ್ರಮುಖ ಲಕ್ಷಣವಾಗಿದೆ.

ಕೃಷಿಯ ಅಭಿವೃದ್ಧಿಯನ್ನು ಹೊರತುಪಡಿಸಿದ ಕೈಗಾರಿಕೀಕರಣ ವಿಶ್ವೇಶ್ವರಯ್ಯನವರ ಹಂಬಲವಲ್ಲವಾಗಿತ್ತು. ಯಾಕೆಂದರೆ ನದಿ ಜೋಡಣೆ, ಅಣೆಕಟ್ಟು, ಸಣ್ಣ ನೀರಾವರಿಗೆ ಅವರು ಕೊಟ್ಟ ಮಹತ್ವವನ್ನು ತೋರಿದ ಕಾಳಜಿ ಕೃಷಿಗಲ್ಲದೆ ಬೇರೆ ಯಾವುದಕ್ಕೆ ಇದ್ದಿತು? ಇಲ್ಲದಿದ್ದರೆ ಬೆಂಗಳೂರಲ್ಲಿ ಆ ಕಾಲಕ್ಕೇ ಹೆಬ್ಬಾಳದಲ್ಲಿ ವ್ಯವಸಾಯ ಶಿಕ್ಷಣ ಶಾಲೆಯನ್ನು ಆರಂಭಿಸುತ್ತಿರಲಿಲ್ಲ. ಕೈಗಾರಿಕೆ ಗಳು ನೀರಿಲ್ಲದೆ ನಡೆಯಲಾರದು ಎಂಬ ಮಾತು ಬೇರೆ. ಒಂದು ಲಕ್ಷ ಇಪ್ಪತ್ತು ಸಾವಿರ ಎಕರೆ ಕೃಷಿಭೂಮಿಗೆ ನೀರುಣಿಸುವ ಕೆ.ಆರ್.ಎಸ್ ಡ್ಯಾಂ ನಿರ್ಮಾಣದ ಹಿಂದೆ ಇದೆಯೆಂದರೆ ಅಚ್ಚರಿಯಾಗಬೇಕು.

ಅಂದರೆ ಕೃಷಿಯಾಧಾರಿತ ಅರ್ಥಿಕತೆ ಕೈಗಾರಿಕೀಕರಣದ ಮೂಲ ಬೇರೆಂಬ ವಿಶ್ವೇಶ್ವರಯ್ಯನವರ ದೇಶೀಯ ಪ್ರಜ್ಞೆ ಇಲ್ಲಿ ಕೆಲಸ ಮಾಡಿದೆ. ಕೈಗಾರಿಕೀಕರಣಕ್ಕೂ ಕೃಷಿಯೇ ಮೂಲಾಧಾರ. ಹಾಗಂತ ಕೈಗಾರಿಕೆಗಳನ್ನು ಆಧುನಿಕ ಭಾರತದ ದೇವಾಲಯಗಳೆಂದು ನೆಹರೂರಂತೆ ವಿಶ್ವೇಶ್ವರಯ್ಯನವರು ಭಾವಿಸಿದಂತೆ ಕಾಣುವುದಿಲ್ಲ. ಭಾವಿಸಿದ್ದರೆ ಅವರ ಕೈಗಾರಿಕೀಕರಣ ನೀತಿಯು ಕೃಷಿಯನ್ನು
ತಿರಸ್ಕರಿಸುತ್ತಿರಲಿಲ್ಲ. ಇದಕ್ಕೆ ಬದಲಾಗಿ ಕೃಷಿಗೆ ಪೂರಕವಾದ ಕೈಗಾರಿಕಾ ಅಭಿವೃದ್ಧಿಯನ್ನು ವಿಶ್ವೇಶ್ವರಯ್ಯ ಸಾಧಿಸಿದರು.
‘ಮೈಸೂರು ಮಾದರಿ’ ಎಂದು ದೇಶದಲ್ಲೇ ಖ್ಯಾತಿಯಾದದ್ದು ಇವರು ದಿವಾನರಾಗಿದ್ದಾಗಲೇ!