Friday, 13th December 2024

ಕೃತಕ ಬುದ್ಧಿಮತ್ತೆ ಬಳಕೆ: ಇರಲಿ ಎಚ್ಚರ

ಸದಾಶಯ

ಮಹಾದೇವ ಬಸರಕೋಡ

ಕಲ್ಪನೆಗೂ ನಿಲುಕದ ತಂತ್ರಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗಳಿಂದಾಗಿ ಬದುಕಿನ ರೀತಿ-ನೀತಿಗಳೆಲ್ಲವೂ ತೀವ್ರಗತಿಯಲ್ಲಿ ಬದಲಾಗುತ್ತಿವೆ.
ನಮ್ಮನ್ನೆಲ್ಲ ಸನ್ಮಾರ್ಗದಲ್ಲಿ ನಡೆಸುತ್ತಿದ್ದ ದೇವರು-ಧರ್ಮ, ಸ್ವರ್ಗ-ನರಕ, ಪಾಪ- ಪುಣ್ಯದ ಪರಿಕಲ್ಪನೆಗಳನ್ನು ವಿತಂಡವಾದದ ಮೂಸೆಯಲ್ಲಿ ಪುಟಕ್ಕಿಟ್ಟ ಕಾರಣಕ್ಕಾಗಿ ನೈತಿಕ ಮೌಲ್ಯಗಳೆಲ್ಲವೂ ಜಾಳುಜಾಳಾಗುತ್ತಿವೆ.  ಸಾಮಾಜಿಕ ಸ್ವಾಸ್ಥ್ಯ ವಿಷಮಗೊಳ್ಳುತ್ತಿದೆ.

ಅಧಿಕಾರದ ದಾಹ, ಭ್ರಷ್ಟಾಚಾರ, ಹಿಂಸೆಯ ವಿಕೃತ ಮನೋಭಾವ ಹೆಚ್ಚುತ್ತಲೇ ಇದೆ. ಇವೆಲ್ಲಕ್ಕಿಂತ ಅಪಾಯಕಾರಿಯಾದ ಶೋಷಣೆಯ ಹಸಿವು ಜಾಗತಿಕವಾಗಿ ತನ್ನ ಕಬಂಧಬಾಹು ಗಳನ್ನು ಚಾಚುತ್ತಲೇ ಇದೆ. ಇತ್ತೀಚಿಗೆ ಸುದ್ದಿ ಮಾಡುತ್ತಿರುವ ಕೃತಕ ಬುದ್ಧಿಮತ್ತೆಯ ಅವಿಷ್ಕಾರವು ಪುರಾಣದ
ಭಸ್ಮಾಸುರನನ್ನು ನಮಗೆ ನೆನಪಿಸುತ್ತಿದೆ. ತಾನೇ ಮೂರು ಲೋಕಕ್ಕೆ ಒಡೆಯನಾಗ ಬೇಕೆಂದು ಬಯಸಿ ಶಿವನನ್ನು ಕುರಿತು ಘನಘೋರ ತಪಸ್ಸು ಮಾಡಿದ ಭಸ್ಮಾಸುರ, ಶಿವನನ್ನು ಒಲಿಸಿಕೊಳ್ಳುವಲ್ಲಿ ಸಫಲನಾಗುತ್ತಾನೆ. ಬೇಕಾದ ವರ ಕೇಳು ಎಂಬ ಶಿವನ ಮಾತಿಗೆ ಭಸ್ಮಾಸುರ, ‘ನಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಕ್ಷಣಾರ್ಧದಲ್ಲಿ ಅವರು ಸುಟ್ಟು ಭಸ್ಮವಾಗಬೇಕು. ಅಂಥ ವರವನ್ನು ದಯಪಾಲಿಸು’ ಎನ್ನುತ್ತಾನೆ. ಕೊಂಚವೂ ಹಿಂದು-ಮುಂದು ನೋಡದೆ ಶಿವ ‘ತಥಾಸ್ತು’ ಎಂದುಬಿಡುತ್ತಾನೆ. ಆ ಕ್ಷಣ ದಿಂದಲೇ ಭಸ್ಮಾಸುರನ ಅಟ್ಟಹಾಸ ಶುರುವಾಗಿಬಿಡುತ್ತದೆ. ವರ ಕೊಟ್ಟ ಶಿವನ ಮೇಲೆಯೇ ಅವನ ಪ್ರಥಮ ಪ್ರಯೋಗ!

ಶಿವ ಭಯಭೀತನಾಗಿ ಓಡತೊಡಗುತ್ತಾನೆ, ಭಸ್ಮಾಸುರ ಬೆನ್ನು ಹತ್ತುತ್ತಾನೆ. ಇದೆಲ್ಲವನ್ನೂ ಗಮನಿಸಿದ ಪಾರ್ವತಿಯು ವಿಷ್ಣುವಿನ ಬಳಿ ಬಂದು, ಹೇಗಾದರೂ ಮಾಡಿ ತನ್ನ ಗಂಡ ನನ್ನು ರಕ್ಷಿಸಬೇಕೆಂದು ಕೋರುತ್ತಾಳೆ. ಪರಿಸ್ಥಿತಿಯ ಗಂಭೀರತೆ ಅರಿತ ವಿಷ್ಣುವು ಮೋಹಿನಿಯ ವೇಷ ಧರಿಸಿ ಭಸ್ಮಾಸುರನನ್ನು ಮೋಹಜಾಲದಲ್ಲಿ ಸಿಲುಕಿಸುತ್ತಾನೆ. ತನ್ನನ್ನು ಮದುವೆಯಾಗುವಂತೆ ಭಸ್ಮಾಸುರ ಮೋಹಿನಿಯನ್ನು ವಿನಂತಿಸಿದಾಗ ತನ್ನಂತೆ ನರ್ತಿಸಿದರೆ ಮದುವೆಯಾಗುವೆ ಎನ್ನುತ್ತಾಳೆ ಮೋಹಿನಿ. ನೃತ್ಯ ಮಾಡುತ್ತ ಮಾಡುತ್ತ ಭಸ್ಮಾಸುರ ತನಗರಿವಿಲ್ಲದಂತೆ ತನ್ನ ತಲೆಯ ಮೇಲೆಯೇ
ಕೈಯಿಟ್ಟುಕೊಂಡು ಸುಟ್ಟು ಭಸ್ಮವಾಗುತ್ತಾನೆ. ಈ ಕಥೆ ಎಲ್ಲರಿಗೂ ಗೊತ್ತಿರುವಂಥದ್ದೇ.

ಭಸ್ಮಾಸುರನು ಹಿಂದೆ ಮೂರು ಲೋಕದ ನಿದ್ರೆಗೆಡಿಸಿದಂತೆ ಇಂದಿನ ಕೃತಕ ಬುದ್ಧಿಮತ್ತೆಯ ಆವಿಷ್ಕಾರವೂ ಜನರನ್ನು ಕಂಗೆಡಿಸಿದೆ. ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿರುವ ಸಾಧನಗಳ ಬಳಕೆಯಿಂದಾಗಿ ವೈಯಕ್ತಿಕ ಮತ್ತು ಸಾಮಾಜಿಕ ಬದುಕುಗಳು ತಲ್ಲಣಕ್ಕೆ ಸಿಲುಕುವಂತಾಗಿದೆ. ಒಂದೊಮ್ಮೆ ಸ್ವಹಿತಾಸಕ್ತರ ಬಿಗಿಹಿಡಿತಕ್ಕೆ ಕೃತಕ ಬುದ್ಧಿಮತ್ತೆಯ ಸಾಧನಗಳು ಒಳಗಾದರೆ ಕಥೆ ಮುಗಿದಂತೆಯೇ!

‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ನೆಲೆಗಟ್ಟಿನ ಮೇಲೆ ರೂಪುಗೊಂಡಿರುವ ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಕೃತಕ ಬುದ್ಧಿಮತ್ತೆಯು ಹುಟ್ಟುಹಾಕಬಹುದಾದ ಸನ್ನಿವೇಶಗಳು ಇನ್ನಷ್ಟು ಅಪಾಯಕಾರಿಯಾಗಬಲ್ಲವು. ಸುಳ್ಳುಗಳ ಜಾಲದಿಂದಾಗಿ ಪ್ರಜಾಪ್ರಭುತ್ವದ
ಆಶಯಗಳು ಸುಲಭವಾಗಿ ಬುಡಮೇಲು ಆಗಬಹುದು. ಕಿಡಿಗೇಡಿಗಳ ಕುಕೃತ್ಯಗಳು ಮತದಾರರ ಮೇಲೆ ಸಲ್ಲದ ಸಂಗತಿಗಳ ಪ್ರಭಾವ ಹೇರಿ ಅಥವಾ ಅವರನ್ನು ಆಮಿಷಕ್ಕೆ ಒಳಗಾಗಿಸಿ ತಮ್ಮ ಇಶಾರೆಯಂತೆ ಕುಣಿಸಬಲ್ಲವು. ಇಂಥ ಬೆಳವಣಿಗೆಗಳು ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕಾರಿಯಾಗಬಲ್ಲವು.
ಇಂಥ ಸಂಕ್ರಮಣ ಸ್ಥಿತಿಯಲ್ಲಿ, ಕೃತಕ ಬುದ್ಧಿಮತ್ತೆಯು ಸಲ್ಲದ ರೀತಿಯಲ್ಲಿ ಬಳಕೆಗೆ ಮುಕ್ತವಾಗುವುದನ್ನು ತಡೆಯಲು ಜಾಗತಿಕ ಮಟ್ಟದ ಬೃಹತ್ ತಂತ್ರಜ್ಞಾನ ಕಂಪನಿಗಳು ಪರಸ್ಪರ ಕೈಜೋಡಿಸಿರುವುದು ಆಶಾದಾಯಕ ಬೆಳವಣಿಗೆ.

ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ ಹತ್ತು ಹಲವು ರಾಷ್ಟ್ರಗಳು ಮ್ಯೂನಿಕ್ ನಲ್ಲಿ ಈ ಸಂಬಂಧದ ಒಡಂಬಡಿಕೆಗೆ ಸಹಿಹಾಕುವ ಮೂಲಕ ಈ ನಿಟ್ಟಿನಲ್ಲಿ ಬದ್ಧತೆಯನ್ನು ತೋರಿಸಿರುವುದು ಸ್ವಾಗತಾರ್ಹ ಸಂಗತಿ. ಮೆಟಾ, ಎಕ್ಸ್, ಗೂಗಲ್, ಲಿಂಕ್ಡ್ ಇನ್, ಓಪನ್ ಎಐ, ಐಬಿಎಂ, ಅಡೋಬ್, ಅಮೆಜಾನ್, ಟಿಕ್ ಟಾಕ್, ಮೈಕ್ರೋಸಾಫ್ಟ್ ನಂಥ ದಿಗ್ಗಜ ಕಂಪನಿಗಳು  ಈ ಕುರಿತಂತೆ ಕೈಜೋಡಿಸಿವೆ ಹಾಗೂ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ದಿಂದಾಗಿ ಒದಗ ಬಹುದಾದ ಎಲ್ಲ ಅಪಾಯಗಳಿಂದ ಬಳಕೆ ದಾರರನ್ನು ರಕ್ಷಿಸುವತ್ತ ಗಮನಾರ್ಹ ಹೆಜ್ಜೆ ಇರಿಸಿವೆ.

ತಂತ್ರಜ್ಞಾನ ವಲಯದ ದೈತ್ಯ ಕಂಪನಿಗಳು, ವಾಣಿಜ್ಯೋದ್ದೇಶ ಮತ್ತು ರಾಜಕೀಯ ಕಾರಣಗಳಿಂದಾಗಿ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಅಪವಾದವನ್ನು ಬಹುದಿನಗಳಿಂದ ಹೊರಬೇಕಾಗಿ ಬಂದಿತ್ತು; ಈ ಅಪವಾದವನ್ನು ದೂರ ಸರಿಸುವ ದೂರಾಲೋಚನೆಯೂ ಈ ನಡೆಯಲ್ಲಿ ಅಡಕ
ವಾಗಿದೆ ಎನ್ನಲಾಗುತ್ತದೆ. ಇದನ್ನು ಅಲ್ಲಗಳೆಯಲಾಗದಿದ್ದರೂ, ಕೃತಕ ಬುದ್ಧಿಮತ್ತೆಯಿಂದ ಸೃಜಿಸಿದ ಸುಳ್ಳು ಸಂಗತಿಗಳು ಮತ್ತು ದೃಶ್ಯರೂಪಗಳನ್ನು ಗುರುತಿಸಲು ಜನ ಜಾಗೃತಿಯಂಥ ಕಾರ್ಯಕ್ರಮಗಳನ್ನು ರೂಪಿಸಲು ಅವು ಮುಂದಾಗಿರುವುದಂತೂ ಖರೆ.

ಅಂತರ್ಜಾಲದ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳುವಿಕೆ, ರಾಜಕೀಯ ಮತ್ತು ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಕಾರುಗಳನ್ನು ತೊಡೆಯುವಿಕೆ ಹೀಗೆ ಜನರಲ್ಲಿ ಅರಿವು ಮೂಡಿಸುವ ಜವಾಬ್ದಾರಿಯನ್ನು ಅವು ಹೊತ್ತುಕೊಂಡಿವೆ. ಬಳಕೆದಾರ ರನ್ನು ಅನಗತ್ಯ ಅಪಾಯಗಳಿಂದ ಪಾರು ಮಾಡಲು ಬೇಕಿರುವ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸುವುದಾಗಿ ಈ ಕಂಪನಿಗಳು ಹೇಳಿಕೊಂಡಿರುವುದು ಸಮಾಧಾನಕರ ಸಂಗತಿ. ಆದರೂ, ಕೃತಕ ಬುದ್ಧಿಮತ್ತೆಯು ತಂದೊಡ್ಡುವ ಅಪಾಯಕಾರಿ ಸಂಗತಿಗಳಿಗೆಲ್ಲ ಇದು ಸಂಪೂರ್ಣ ಪರಿಹಾರ ನೀಡಬಲ್ಲದು ಎಂದು ಈಗಲೇ ಗಟ್ಟಿಯಾಗಿ ನಂಬಲಾಗದು.

ಹೀಗಾಗಿ ಬಳಕೆದಾರರು ವಿವೇಚನೆ ಯಿಂದಲೇ ಹೆಜ್ಜೆ ಇರಿಸಬೇಕಿದೆ. ಎಲ್ಲರೂ ಎಲ್ಲ ವಿಷಯಗಳಲ್ಲೂ ಒಮ್ಮತ ಮೂಡಿಸಿ ಕೊಳ್ಳಬೇಕಿದೆ. ತಂತ್ರಜ್ಞಾನ ಕಂಪನಿಗಳು ಕೂಡ ಎಲ್ಲವನ್ನೂ ಲಾಭ-ನಷ್ಟಗಳ ತಕ್ಕಡಿ ಯಲ್ಲೇ ತೂಗುವಂಥ ಮನಸ್ಥಿತಿಯಿಂದ ಹೊರಬಂದು ಸಮುದಾಯದ ಒಳಿತಿಗಾಗಿ ಶ್ರಮಿಸಬೇಕಿದೆ. ಮನುಷ್ಯರ ಲೌಕಿಕ ಬದುಕಿಗೆ ನೆರವಾಗ ಬೇಕಾದ ವೈಜ್ಞಾನಿಕ/ತಾಂತ್ರಿಕ ಆವಿಷ್ಕಾರ ಗಳು ಮನುಷ್ಯರನ್ನೇ ಹಿಂಸಿಸುವ ಸಾಧನಗ ಳಾಗಿ ಬಳಕೆಯಾಗುವುದು ಯಾವ ಕಾಲಕ್ಕೂ ಸಲ್ಲದ ಸಂಗತಿಯೇ ಸರಿ. ಆದ್ದರಿಂದ, ಕೃತಕ ಬುದ್ಧಿಮತ್ತೆಯಿಂದ ಒದಗಿರುವ ಅಪಾಯವನ್ನು ಮಟ್ಟಹಾಕಲು ಸಂಕಲ್ಪಿಸಿ ಒಡಂಬಡಿಕೆ ಮಾಡಿಕೊಂಡಿರುವ ತಂತ್ರಜ್ಞಾನ ಕಂಪನಿಗಳು, ತಮ್ಮ ಸಂಕಲ್ಪದ ನೆರವೇರಿಕೆಗೆ ಬದ್ಧತೆಯನ್ನು ತೋರಬೇಕಿದೆ.

ಹಾಗಾದಾಗ ಮಾತ್ರವೇ ಸಂಭಾವ್ಯ ಅವಘಡಗಳಿಗೆ ಒಂದಷ್ಟು ತಡೆಗೋಡೆಗಳು ಬಿದ್ದಾವು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸದ್ಬಳಕೆಯ ವಿಷಯದಲ್ಲಿ ಮಾತ್ರವಲ್ಲದೆ, ಈ ತಂತ್ರಜ್ಞಾನವು ಉಂಟುಮಾಡಬಹುದಾದ ಅಪಾಯವನ್ನು ಅರಿಯುವಲ್ಲಿಯೂ ಬಳಕೆದಾರರು ಹೊಣೆಯರಿತು ನಡೆಯಬೇಕು.
‘ಇದು ನಮಗೆ ಸಂಬಂಧಿಸಿದ ವಿಷಯವಲ್ಲ’ ಎಂದು ಅವರು ಸುಮ್ಮನೆ ಕೈಕಟ್ಟಿ ಕೂರಬಾರದು. ನಮ್ಮ ಸುತ್ತಲಿನ ಜಗತ್ತು ಈಗಿರುವುದಕ್ಕಿಂತಲೂ ಇನ್ನಷ್ಟು ಸುಂದರವಾಗಬೇಕು ಎಂಬ ಮಹತ್ವಾಕಾಂಕ್ಷೆಯು ಇಂಥ ಬಳಕೆ ದಾರರಲ್ಲಿ ಮೊಳಕೆಯೊಡೆಯಬೇಕು.

ನಮ್ಮಲ್ಲಿನ ವಿಚಾರಶಕ್ತಿಗೆ ತುಕ್ಕುಹಿಡಿಯದಂತೆ ಉಳಿಸಿಕೊಳ್ಳುವ ಸಾಮರ್ಥ್ಯವೆನಿಸಿದ ವೈಜ್ಞಾನಿಕ ಮನೋಧಮವೂ ನಮ್ಮದಾಗ ಬೇಕು. ಪ್ರತಿಯೊಂದನ್ನೂ ಪ್ರಶ್ನಿಸುತ್ತ, ಪರೀಕ್ಷಿಸುತ್ತ, ಅದರ ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚುವ ದಿಟ್ಟತನವನ್ನು ನಮ್ಮದಾಗಿಸಿ ಕೊಳ್ಳಬೇಕು. ಅಗತ್ಯವಿದ್ದಾಗೆಲ್ಲ ಹೊಸ ಚರ್ಚೆಗೆ ಒಡ್ಡಿಕೊಳ್ಳುವ ಅವಕಾಶವನ್ನು ಸೃಜಿಸಿಕೊಳ್ಳಬೇಕು. ಜತೆಗೆ, ನಮ್ಮೆಲ್ಲರನ್ನೂ ಒಂದಾಗಿಸಿ ಎಲ್ಲರ ಕ್ಷೇಮವನ್ನೂ ಬಯಸುವ ಭಾರತೀಯ ಸಂಸ್ಕೃತಿಯನ್ನು ನಾವು ಗೌರವಿಸಬೇಕು. ನಮ್ಮ ಬದುಕಿನ ನಾವೆಯು ಸ್ವಾರ್ಥವೆಂಬ ಬಂದರಿನಲ್ಲಿ ನಿಲ್ಲುವಂತಾಗ ಬಾರದು, ನಮ್ಮ ಧೋರಣೆಗಳು ಸಕಾರಾತ್ಮಕ ವಾಗಿ ಬದಲಾಗಬೇಕು ಮತ್ತು ಮಾನವೀಯತೆಯೇ ಉಸಿರಾಗಬೇಕು.

ಸಮಕಾಲೀನ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಎದೆಗಾರಿಕೆಯೂ ನಮ್ಮಲ್ಲಿ ರೂಪುಗೊಳ್ಳಬೇಕು. ಹೀಗಾದಾಗ ಮಾತ್ರವೇ ಬದುಕಿನ ಚೆಲುವು ಮತ್ತು ಘನತೆ ಹೆಚ್ಚಲು ಸಾಧ್ಯ ವಾಗುತ್ತದೆ.

(ಲೇಖಕರು ಶಿಕ್ಷಕರು)