ವಿಶ್ವ ಬಾನುಲಿ ದಿನ
ಡಾ.ಎ.ಎಸ್.ಬಾಲಸುಬ್ರಹ್ಮಣ್ಯ
ವಿಶ್ವಸಂಸ್ಥೆ ಅನುಮೋದಿತ ‘ವಿಶ್ವ ಬಾನುಲಿ ದಿನ’ ಹಲವು ವಿಶೇಷಗಳನ್ನು ಹೊಂದಿದೆ. ಫೆಬ್ರವರಿ ೧೩ ರಂದು ಆಚರಿಸುವ ಈ ದಿನ ಎಲ್ಲ ಬಾನುಲಿ ಕೇಂದ್ರಗಳು ಹಾಗೂ ಇತರೆ ಸಂಬಂಧಿತ ಸಂಸ್ಥೆಗಳು ಈ ಹುಉಪಯೋಗಿ ಮಾಧ್ಯಮದ ಮಹತ್ವದ ಮೇಲೆ ಬೆಳಕು ಚೆಲ್ಲುತ್ತವೆ. ಶ್ರೋತೃಗಳ ಜತೆ ಸಂವಾದಿಸುತ್ತವೆ.
ಅವರಲ್ಲಿ ಈ ಮಾಧ್ಯಮದ ಮಹತ್ವ ತಿಳಿಯಪಡಿಸುತ್ತವೆ. ಕಳೆದ ೧೧ ವರ್ಷಗಳಿಂದ ‘ವಿಶ್ವ ಬಾನುಲಿ ದಿನ’ ವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಈ ದಿನವೇ ಯಾಕೆ? ಫೆಬ್ರವರಿ ೧೩ರಂದು ವಿಶ್ವಸಂಸ್ಥೆಯ ಬಾನುಲಿ ಕೇಂದ್ರ ಆರಂಭವಾದ ದಿನದ ನೆನಪಿಗೆ ಈ ದಿನವನ್ನು ಆಯ್ಕೆ ಮಾಡಲಾಗಿದೆ. ಬಾಹ್ಯ ಪ್ರಪಂಚದ ಬೆಳವಣಿಗೆ ಗಳಿಗೆ ಕಿಟಕಿ ತೆರದ ಮೊದಲಿನ ಮಾಧ್ಯಮ ಪತ್ರಿಕೆಗಳು. ನಂತರದ ದಿನಗಳಲ್ಲಿ ಸಿನಿಮಾ ಸೀಮಿತ ಮಟ್ಟದಲ್ಲಿ ದೂರ ಪ್ರದೇಶದ ದೃಶ್ಯಾವಳಿಗಳನ್ನು ತೆರೆಯ ಮೇಲೆ ಪ್ರಸ್ತುತ ಪಡಿಸಿತು.
ಆದರೆ ಈ ಮಾಧ್ಯಮಗಳಿಗೆ ತಮ್ಮದೇ ಮಿತಿಗಳಿದ್ದವು. ಪತ್ರಿಕೆ ಓದಲು ಅಕ್ಷರ ಜ್ಞಾನ ಬೇಕು. ಚಿತ್ರಮಂದಿರಗಳಿಗೆ ಹಣ ತೆತ್ತು ಪ್ರವೇಶ ಪಡೆಯಬೇಕು. ಆದರೆ ಬಾನುಲಿ ಹಾಗಲ್ಲ. ನೀವು ಇರುವಲ್ಲಿಗೆ ಸಂದೇಶಗಳನ್ನು ಹೊತ್ತುತರುವ ಅತ್ಯಂತ ಸರಳ ಮಾಧ್ಯಮ. ಗಾಳಿಯಲ್ಲಿ ತೇಲಿಬರುವ ಈ ಧ್ವನಿ ತರಂಗಗಳು ಪ್ರಕೃತಿ ನಿರ್ಮಿತ ಕೊಡುಗೆ. ಈ ಸಾಲಿನ ‘ಬಾನುಲಿ ದಿನ’ ಆಚರಣೆಯ ಸಂದರ್ಭದಲ್ಲಿ ಬಾನುಲಿ ಉದ್ಯಮವು ಮೂರು ಅಂಶಗಳತ್ತ ಗಮನ ಹರಿಸುವಂತೆ ಸೂಚಿಸಿದೆ.
೧. ಸ್ವತಂತ್ರ ಮತ್ತು ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನುಪ್ರಸಾರಿಸಿ: ಈಗಿನ ಉನ್ನತ ಗುಣಮಟ್ಟದ ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮದ ಮೂಲ ಮಾನದಂಡಗಳನ್ನು ಗೌರವಿಸುವುದು ಪತ್ರಕರ್ತರಿಗೆ ಸವಾಲಿನ ಸಂಗತಿ. ಶೋತೃಗಳ ನಂಬಿಕೆಯನ್ನು ಉಳಿಸಿ ಬೆಳೆಸಲು ಪರಿಶೀಲಿಸಬಹುದಾದ ಮಾಹಿತಿಯನ್ನು ಆಧರಿಸಿ ಕಾರ್ಯಕ್ರಮಗಳ ಪ್ರಸಾರ ಆಗಬೇಕು. ಇದರಿಂದ ಬಾನುಲಿ ಸಮಾಜದ ಎಲ್ಲ ವರ್ಗದವರಿಗೂ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
೨.ಶೋತೃಗಳ ಅಗತ್ಯತೆಗಳನ್ನು ಗಮನಿಸಿ: ವಿಕಲಾಂಗ ವ್ಯಕ್ತಿಗಳನ್ನು ಒಳಗೊಂಡಂತೆ ಶೋತೃಗಳ ಮಾಹಿತಿ ಅಗತ್ಯಗಳ ಪೂರೈಕೆ ಮತ್ತು ಸಾಮಾಜಿಕ ಭಾಗವ
ಹಿಸುವಿಕೆಗೆ ಬಾನುಲಿ ವೇಗವರ್ಧಕವಾಗಿದೆ. ಡಿಜಿಟಲ್ ಬಾನುಲಿ ವೇದಿಕೆಗಳು ಹಲವಾರು ನಾವೀನ್ಯಗಳನ್ನು ಹೊಂದಿವೆ. ಅವುಗಳ ಸಮರ್ಥ ಬಳಕೆಯಾಗಲಿ.
೩. ಸ್ಪರ್ಧಾತ್ಮಕತೆಯ ಸವಾಲುಗಳನ್ನು ಖಚಿತ ಪಡಿಸಿಕೊಳ್ಳಿ: ಮಾಧ್ಯಮ ಮಾರುಕಟ್ಟೆಗೆ ಆರ್ಥಿಕ ಬಿಕ್ಕಟ್ಟು ಬಂದಾಗ ಬಾನುಲಿ ಹೇಗೆ ಬದುಕಬಲ್ಲದು ಹಾಗು ನಿಷ್ಠಾವಂತ ಶೋತೃಗಳ ಬೆಂಬಲದಿಂದ ಆರ್ಥಿಕ ಸುಸ್ಥಿರತೆ ಹೇಗೆ ಹೊಂದಬಹುದು ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಿ. ನಿಷ್ಠಾವಂತ ಶ್ರೋತೃಗಳು
ಬಾನುಲಿ ಕೇಂದ್ರಗಳ ಬೆನ್ನೆಲುಬು.
ಇದು ಬಹುಮಾಧ್ಯಮ ಪ್ರಪಂಚ. ಎಲ್ಲ ಸಮೂಹ ಮಾಧ್ಯಮಗಳು ಪರಸ್ಪರ ಅವಲಂಬಿತ. ಎಲ್ಲ ಮಾಧ್ಯಮಗಳು ಅಂಗೈನ ಲಭ್ಯ. ಈ ಹಿನ್ನೆಲೆಯಲ್ಲಿ ‘ವಿಶ್ವ ಬಾನುಲಿ ದಿನ’ ವೈಶಿಷ್ಟ್ಯವನ್ನು ಹೊಂದಿದೆ. ಬದಲಾಗುತ್ತಿರುವ ಜಾಗತಿಕ ಮಾಧ್ಯಮ ಉದ್ದಿಮೆಯ ಗುಣಲಕ್ಷಣಗಳ ಹಿನ್ನೆಲೆಯಲ್ಲಿ ಪ್ರತಿ ಮಾಧ್ಯಮವೂ ತನ್ನ ಉಳಿವಿಗೆ ಹೆಣಗುತ್ತಿವೆ. ಡಿಜಲೀಕರಣದಿಂದ ಮಾಧ್ಯಮಗಳು ತಮ್ಮ ಮೂಲ ಸ್ವರೂಪಗಳನ್ನೇ ಬದಲಿಸಿಕೊಳ್ಳುತ್ತಿವೆ. ಇಂದಿನ ಸ್ಮಾರ್ಟ್ ಟಿವಿ ಸೆಟ್, ಮೊಬೈಲ್ ಇಲ್ಲವೇ ನಿಮ್ಮ ಕಂಪ್ಯೂಟರ್ ಎಲ್ಲ ಮಾಧ್ಯಮಗಳನ್ನು ಪರ ದೆಯ ಮೇಲೆ ಮೂಡಿಸಬಲ್ಲವು.
ಟಿವಿ ನೋಡಬಹುದು, ರೇಡಿಯೋ ಕೇಳಬಹುದು, ಪತ್ರಿಕೆ ಇಲ್ಲವೇ, ಪುಸ್ತಕಗಳನ್ನು ಓದಬಹುದು/ಆಲಿಸಬಹುದು, ಸಿನಿಮಾ ನೋಡಬಲ್ಲಿರಿ, ಗೇಮ್ಸ್ ಆಡಬಲ್ಲಿರಿ, ಸಂದೇಶಗಳನ್ನು ಕಳುಹಿಸಬಲ್ಲಿರಿ, ನಿಮ್ಮನ್ನು ನೀವೇ ಲೈವ್ ಆಗಿಸಿಕೊಳ್ಳಬಲ್ಲಿರಿ ! ಸವಾಲು ಇರುವುದು ನಿಮ್ಮ ಮಾಧ್ಯಮದ ಬಳಕೆದಾರರ ವಿಸ್ವಾಸಾರ್ಹತೆಯನ್ನು ಸಂಪಾದಿಸುವುದು.ಧ್ವನಿ-ಸಂಗೀತ ಆಧಾರಿತ ಸಂದೇಶಗಳನ್ನು ಆಡಿಯೋ ಫೈಲ್‌ಗಳ ಮೂಲಕ ಕಳುಹಿಸುವ ತಂತ್ರಜ್ಞಾನದ ಬೆಳವಣಿಗೆಯ ಹಿನ್ನೆಲೆಯಲ್ಲಿ ಯಾರು ಬೇಕಾದರೂ ಬಾನುಲಿ ಕ್ಷೇತ್ರ ಪ್ರವೇಶಿಸಬಹುದಾಗಿದೆ. ಪಾಡ್ ಕಾಸ್ಟಿಂಗ್ ಬಾನುಲಿಗೆ ಹೊಸ ಆಯಾಮವನ್ನೇ ನೀಡಿದೆ. ಬೇಕಾದಲ್ಲಿ ಬೇಕೆಂದಾಗ ನೀವು ಶ್ರವ್ಯ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ. ನೀವು ಪ್ರಸಾರಿಸುವ ಸಂದೇಶಗಳಲ್ಲಿ ನಂಬಿಕೆ ಇರಿಸುವುದು ದೊಡ್ಡ ಸವಾಲಾಗಿರುವ ಹಿನ್ನೆಲೆಯಲ್ಲಿ, ಪ್ರತಿ ಬಾನುಲಿ
ಕೇಂದ್ರ ತನ್ನ ಶ್ರೋತೃಗಳ ಮನಗೆಲ್ಲುವುದು ಒಂದು ಸಾಹಸವೇ ಸರಿ.
ಶ್ರೋತೃಗಳ ಜತೆ ಮಾಹಿತಿ ಪ್ರಸರಣೆ ಮತ್ತು ವಿನಿಮಯಕ್ಕೆ ಬಾನುಲಿಯಂತಹ ಮಾಧ್ಯಮ ಇನ್ನೊಂದಿಲ್ಲ. ಅಗತ್ಯವಾಗಿ ಬೇಕಾದದ್ದು ಶ್ರೋತೃಗಳ ಅಪೇಕ್ಷೆಗಳ
ಮನವರಿಕೆ. ಬಾನುಲಿ ಸೇರಿದಂತೆ ಇದು ಎಲ್ಲ ಮಾಧ್ಯಮಗಳಿಗೆ ಅನ್ವಯ. ಶ್ರೋತೃ ಸಂಶೋಧನೆ ಅತ್ಯವಶ್ಯ. ಮನರಂಜನೆ ಜತೆಗೆ ಶಿಕ್ಷಣ ಹಾಸುಹೊಕ್ಕಿರಬೇಕು. ವಿವಿಧ ವರ್ಗಗಳ ಅವಶ್ಯಕತೆಗಳನ್ನು ಮನಗಂಡು ಕಾರ್ಯಕ್ರಮಗಳು ಸಿದ್ಧಗೊಂಡರೆ ಮಾತ್ರ ಬಾನುಲಿ ಸಮಾಜಮುಖಿಯಾಗಬಲ್ಲದು. ಒಂದು ಶತಮಾನಗಳ ಹಿನ್ನೆಲೆಯ ಬಾನುಲಿ ಪ್ರಸಾರ ಹಲವಾರು ಮಜಲುಗಳಿಗೆ ಸಾಕ್ಷಿಯಾಗಿದೆ. ರೂಪಾಂತರಗೊಳ್ಳುತ್ತಿರುವ ಮಾಧ್ಯಮಗಳ ಸ್ವರೂಪಗಳಿಗೆ ಬಾನುಲಿ ಹೊರತಲ್ಲ. ಎಲ್ಲ ಮಾಧ್ಯಮಗಳಿಗೆ, ವಿಶೇಷವಾಗಿ ಬಾನುಲಿಗೆ, ಜಾಹೀರಾತು ಆದಾಯವೇ ಪ್ರಮುಖ ಮೂಲ.
ಸ್ಪರ್ಧಾತ್ಮಕ ಮತ್ತು ಅಂತರ್ಜಾಲ ಆಧಾರಿತ ನವ ಮಾಧ್ಯಮಗಳ ನಡುವೆ ಪರಂಪರಾಗತ ಮಾಧ್ಯಮಗಳು ತುರುಸಿನ ಸ್ಪರ್ಧೆಯಲ್ಲಿ ನಲುಗುತ್ತಿವೆ. ಜಾಹೀರಾತು
ಆದಾಯ ಡಿಜಿಟಲ್ ಮಾಧ್ಯಮಗಳತ್ತ ಮುಖ ಮಾಡಿವೆ. ಜಾಹೀರಾತುದಾರರನ್ನು ಸಂತಸಗೊಳಿಸಲು ಇರುವ ಏಕೈಕ ಮಾರ್ಗ ಶ್ರೋತೃಗಳನ್ನು ಸಂತೃಪ್ತಿ ಗೊಳಿಸುವುದು. ಅವರ ನಿಷ್ಠೆ ಉಳಿಸಿಕೊಳ್ಳುವುದು ಮತ್ತು ಆ ಮೂಲಕ ಅವರ ಬೆಂಬಲ ಗಳಿಸುವುದು. ದೇಶದ ಅನಕ್ಷರಸ್ಥರು ಮತ್ತು ಗ್ರಾಮೀಣ ಜನರಿಗೆ ಮಾಹಿತಿ ಮತ್ತು ಮನರಂಜನೆ ನೀಡುವಲ್ಲಿ ಬಾನುಲಿ ಮಹತ್ತರವಾದ ಪಾತ್ರ ನಿರ್ವಹಿಸಿದೆ.
ಬಹುಕಾಲ ಇದೊಂದೇ ಪ್ರಧಾನವಾದ ಮಾಧ್ಯಮವಾಗಿತ್ತು. ಪ್ರಾದೇಶಿಕ ಭಾಷೆಗಳಲ್ಲಿ ದೂರದರ್ಶನ ಪ್ರಸಾರ ಆರಂಭವಾಗುತ್ತಿದ್ದಂತೆ, ಬಾನುಲಿ ಕ್ರಮೇಣವಾಗಿ ಹಿಂದೆ ಸರಿಯಿತು. ೧೯೯೦ರ ನಂತರ ಖಾಸಗಿ ಟಿವಿ ವಾಹಿನಿಗಳ ಭರಾಟೆಯಲ್ಲಿ ಬಾನುಲಿ ಮಾಧ್ಯಮ ಮತ್ತಷ್ಟು ಹಿನ್ನಡೆ ಅನುಭವಿಸಿತು. ಬದಲಾದ ನೂತನ ಆರ್ಥಿಕ ನೀತಿಗಳ ಅನ್ವಯ ಖಾಸಗಿಯವರು ಬಾನುಲಿ ಕ್ಷೇತ್ರ ಪ್ರವೇಶಿಸಿದರು. ಆಕಾಶವಾಣಿಯ ಏಕಸ್ವಾಮ್ಯ ಅಂತ್ಯಗೊಂಡು, ಬಾನುಲಿ ಕ್ಷೇತ್ರ ಸ್ಪರ್ಧೆಗೆ ಮೈಯೊಡ್ಡಿತು.
ಭಾರತದಲ್ಲಿ ಪ್ರಸ್ತುತ ೧,೦೯೭ ಬಾನುಲಿ ಕೇಂದ್ರಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರಿಸುತ್ತಿವೆ. ಇವುಗಳನ್ನು ಮೂರು ಬಗೆಯ ಕೇಂದ್ರಗಳ
ನ್ನಾಗಿ ವಿಂಗಡಿಸಬಹುದು. ಪ್ರಸಾರ ಭಾರತಿ ಉಸ್ತುವಾರಿಯ ಸರಕಾರಿ ಬಾನುಲಿ ಕೇಂದ್ರಗಳು, ಖಾಸಗಿಯವರ ಮಾಲೀಕತ್ವದ ಕೇಂದ್ರಗಳು ಹಾಗೂ ಸ್ವಯಂಸೇವಾ/ ಶೈಕ್ಷಣಿಕ ಸಂಸ್ಥೆಗಳು ನಡೆಸುವ ಸಮುದಾಯ ಬಾನುಲಿ ಕೇಂದ್ರಗಳು. ಪ್ರಸಾರ ಭಾರತಿಯ ಆಕಾಶವಾಣಿ ೨೩ ಭಾಷೆಗಳಲ್ಲಿ ೪೭೯ ಬಾನುಲಿ ಕೇಂದ್ರಗಳನ್ನು ನಡೆಸುತ್ತಿದೆ. ದೇಶದ ಎಲ್ಲ ಜನರನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿರುವ ಏಕೈಕ ಬೃಹತ್ ಪ್ರಸಾರ ಜಾಲವಿದು.
ಖಾಸಗಿಯವರು ದೇಶದ ೧೧೧ ಪ್ರಮುಖ ನಗರಗಳಲ್ಲಿ ೩೮೫ ಎಫ್ಎಂ ಬಾನುಲಿ ಕೇಂದ್ರಗಳನ್ನು ನಿರ್ವಹಿಸುತ್ತಿವೆ. ಸಮುದಾಯ ಹಾಗೂ ಶೈಕ್ಷಣಿಕ ಬಾನುಲಿ ಕೇಂದ್ರಗಳ ಸಂಖ್ಯೆ ೨೫೧. ಖಾಸಗಿ ಬಾನುಲಿ ಕೇಂದ್ರಗಳು ಮನರಂಜನೆಗೆ ಅಧಿಕ ಪ್ರಾಮುಖ್ಯ ನೀಡಿದರೆ, ಉಳಿದ ಕೇಂದ್ರಗಳು ಮಾಹಿತಿ ಹಾಗೂ ಮನೋ ರಂಜನೆಗೆ ಮಹತ್ವ ನೀಡುತ್ತವೆ. ಸೀಮಿತ ಪ್ರಸಾರ ಕ್ಷೇತ್ರ ಹೊಂದಿರುವ ಸಮುದಾಯ ಬಾನುಲಿ ಕೇಂದ್ರಗಳು ಮಾಹಿತಿ, ಶಿಕ್ಷಣ ಹಾಗೂ ತಮ್ಮ ಆಯ್ದ ಕ್ಷೇತ್ರಗಳಿಗೆ
ಸಂಬಂಽಸಿದ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರಿಸುತ್ತವೆ. ಡಿಜಲೀಕರಣ ಹಾಗು ಅಂತರ್ಜಾಲ ಮಾಧ್ಯಮದ ತೀವ್ರಗತಿ ಬೆಳವಣಿಗೆಯ ಹಿನ್ನೆಲೆಯಲ್ಲಿ
ಎಲ್ಲ ಬಾನುಲಿ ಕೇಂದ್ರಗಳ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ಯುಟ್ಯೂಬ್, ಫೇಸ್‌ಬುಕ್ ಮೂಲಕ ಆಲಿಸಬಹುದಾಗಿದೆ. ಬೇಕೆಂದರೆ ನಿಮ್ಮ ಆಯ್ಕೆಯ
ಕಾರ್ಯಕ್ರಮಗಳನ್ನು ಸಂಗ್ರಹಿಸಿ ಕೂಡ ನಿಮ್ಮ ಕಂಪ್ಯೂಟರ್‌ಗಳಲ್ಲಿ ಇಡಬಹುದಾಗಿದೆ.
ಕೋವಿಡ್ ಸಾಂಕ್ರಾಮಿಕ, ಬಾನುಲಿ ಉದ್ದಿಮೆಯ ಆದಾಯಕ್ಕೆ ಭಾರಿ ಆಘಾತ ತಂದಿದೆ. ಆರ್ಥಿಕ ಚಟವಟಿಕೆಗಳ ಹಿಂಜರಿತ ಬಾನುಲಿ ಮೇಲೆ ನೇರ ಪರಿಣಾಮ ಬೀರಿತು. ೨೦೧೯ರಲ್ಲಿ ೩,೧೦೦ ಕೋಟಿ ರು. ಇದ್ದ ಆದಾಯ, ೨೦೨೦ ರಲ್ಲಿ ಶೇ.೫೪ರಷ್ಟು ಇಳಿಕೆ ಕಂಡಿತು. ೨೦೨೧ ರಲ್ಲಿ ಕ್ರಮೇಣವಾಗಿ ಚೇತರಿಕೆಯ ಹಾದಿಯಲ್ಲಿದೆ ಎಂದು ಬಾನುಲಿ ಉದ್ದಿಮೆಯ ತಜ್ಞರು ಆಶಾಭಾವನೆ ಹೊಂದಿದ್ದಾರೆ. ಡಿಜಿಟಲ್ ಮಾಧ್ಯಮ ಈಗಾಗಲೇ ಪತ್ರಿಕೆಗಳ ಆದಾಯವನ್ನು ಹಿಂದಿಕ್ಕಿವೆ. ಸಿನಿಮಾ ಆದಾಯ ವನ್ನು ಆನ್‌ಲೈನ್ ಗೇಮಿಂಗ್ ಮೀರಿಸಿರುವುದು ಬದಲಾಗುತ್ತಿರುವ ಮಾಧ್ಯಮ ಬಳಕೆದಾರರ ಆಶಯಗಳಿಗೆ ಕನ್ನಡಿ ಹಿಡಿದಂತಿದೆ.
ಟಿವಿ, ಮುದ್ರಣ, ಚಲನಚಿತ್ರ, ರೇಡಿಯೋ ಮುಂತಾದ ಸಾಂಪ್ರದಾಯಿಕ ಮಾಧ್ಯಮಗಳ ನಡುವಿನ ಅಂತರ ಮಸುಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಬಳಕೆದಾರರ ಆಶಯಗಳನ್ನು ಗುರುತಿಸಿ ಅಧ್ಯಯನ ಮಾಡುವುದು ಬಾನುಲಿಗಷ್ಟೇ ಅಲ್ಲ ಎಲ್ಲ ಸಾಂಪ್ರದಾಯಿಕ ಮಾಧ್ಯಮಗಳಿಗೆ ಬಹು ದೊಡ್ಡ ಸವಾಲಾಗಿದೆ.
ಬಾನುಲಿ ತನ್ನ ಆರ್‌ಜೆಗಳು ಮತ್ತು ಪ್ರಬಲ ನೆಟ್‌ವರ್ಕ್ಗಳ ಮೂಲಕ ಶ್ರೋತೃಗಳನ್ನು ಆಕರ್ಷಿಸಿ ಆದಾಯ ತರಲು ನೆರವಾಗಬೇಕಿದೆ. ಉತ್ತಮ ಕಾರ್ಯಕ್ರಮಗಳ
ನಿರ್ಮಾಣದ ಜತೆಗೆ ಮಾರ್ಕೆಟಿಂಗ್ ಪರಿಣಿತರಾಗಿ ಬಾನುಲಿ ಕೇಂದ್ರಗಳಿಗೆ ಆದಾಯ ದೊರಕಿಸಲು ನೆರವಾಗುವು ಅನಿವಾರ್ಯವಾಗುತ್ತಿದೆ.
ಟಿವಿ, ರೇಡಿಯೋ ಕೇಂದ್ರಗಳು- ನೆಟ್‌ವರ್ಕ್‌ಗಳ ಹೊರಗೆ ಸಹ ಅಪಾರವಾದ ಅವಕಾಶಗಳು ಹೊರಹೊಮ್ಮಿವೆ ಎಂಬುದನ್ನು ಗಮನಿಸಬೇಕಾಗಿದೆ. ಗೂಗಲ್ ಮತ್ತು ಫೇಸ್‌ಬುಕ್ ಹಾಗೂ ಇತರೆ ವೇದಿಕೆಗಳು ಪ್ರತಿಭೆಗಳಿಗೆ ಅಪಾರ ಅವಕಾಶಗಳನ್ನು ತೆರೆದಿಟ್ಟಿವೆ ಎಂಬುದನ್ನು ಗಮನಿಸಿ. ಇಂದು, ೫೦ಸಾವಿರಕ್ಕೂ ಹೆಚ್ಚು ಪ್ರತಿಭೆಗಳು ದೇಶದ ಕಿರು ವಿಡಿಯೊ ವೇದಿಕೆಗಳಲ್ಲಿ ತಲಾ ಒಂದು ಲಕ್ಷಕ್ಕೂ ಮಿಗಿಲು ಹಿಂಬಾಲಕರನ್ನು ಹೊಂದಿದ್ದಾರೆಂದು ಮಾಧ್ಯಮ ತಜ್ಞರು ಅಂದಾಜಿಸಿzರೆ. ದೃಶ್ಯ, ಶ್ರವ್ಯ ಮತ್ತು ಮುದ್ರಣ ವಸ್ತುವಿಷಯ ರಚನಕಾರರ (ಟ್ಞಠಿಛ್ಞಿಠಿ ಛಿZಠಿಟ್ಟo) ಪ್ರಜಾಪ್ರಭುತ್ವೀಕರಣದ ಈ ಬೆಳವಣಿಗೆಗಳು, ಸಂಘಟಿತ ಮಾಧ್ಯಮ ಉದ್ದಿಮೆಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡುತ್ತಿವೆ.
ಅಂತರ್ಜಾಲ ಸೌಲಭ್ಯವಿರುವ ಸ್ಮಾರ್ಟ್ ಫೋನ್‌ಗಳ ಬಳಕೆ ದೇಶದಲ್ಲಿ ೫೦ ಕೋಟಿ ಮೀರಿರುವ ಹಿನ್ನೆಲೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ನಗರೇತರ ಪ್ರದೇಶಗಳಲ್ಲಿ ಬೇಡಿಕೆ ಕುದುರುತ್ತಿದೆ. ಬಾನುಲಿ ಸೇರಿದಂತೆ ಇತರೆ ಎಲ್ಲ ಸೃಜನಶೀಲ ಮಾಧ್ಯಮಗಳಿಗೆ ಇದು ಎಚ್ಚರಿಕೆಯ ಘಂಟೆ.
(ಲೇಖಕರು ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು)