Wednesday, 11th December 2024

ಸ್ವರ್ಣ ವ್ಯಾಮೋಹದ ಗುಂಗಿನಲ್ಲಿ…

ಸ್ವರ್ಣಸಮಯ

ಪ್ರಕಾಶ ಹೆಗಡೆ

ಬಹುತೇಕರಿಗೆ ತಿಳಿದಿರುವಂತೆ ಭಾರತೀಯರಲ್ಲಿ ಒಂದು ನಂಬಿಕೆಯಿದೆ. ಅದೆಂದರೆ- ಅಕ್ಷಯ ತೃತೀಯದಂದು ಚಿನ್ನವನ್ನು ಸಂಪಾದಿಸಿದರೆ/ ಖರೀದಿಸಿ ದರೆ ಅದು ಅಕ್ಷಯವಾಗುತ್ತದೆ, ವೃದ್ಧಿಯಾಗುತ್ತದೆ ಎಂಬುದು. ಅಕ್ಷಯ ತೃತೀಯದ ಈ ಹೊಸ್ತಿಲಲ್ಲಿ ದಿನನಿತ್ಯವೂ ಪ್ರತಿಯೊಂದು ಪತ್ರಿಕೆಯ ಮುಖಪುಟ ಗಳಲ್ಲಿ ಸ್ವರ್ಣದ ಜಾಹೀರಾತಿನ ಭರಾಟೆಯೇ ಕಾಣಬರುತ್ತದೆ. ಆದರೆ ಈ ಅಕ್ಷಯ ತೃತೀಯ ಚಿನ್ನ ಖರೀದಿಸಲು ಒಂದು ಅವಕಾಶವಷ್ಟೇ.

ಇದರ ಹೊರತಾಗಿ ಭಾರತೀಯರಿಗೆ ಚಿನ್ನ ಪಡೆಯಲು ಬಹಳಷ್ಟು ಕಿಟಕಿ-ಬಾಗಿಲುಗಳು ತೆರೆದಿವೆ. ಷೋಡಶ ಸಂಸ್ಕಾರಗಳಲ್ಲಿ ಸೇರಿರುವ ಮದುವೆ, ನಾಮಕರಣ ಇತ್ಯಾದಿ ಹಲವು ಸಂಭ್ರಮಗಳನ್ನು ಇಲ್ಲಿ ಉಲ್ಲೇಖಿಸಬಹುದು. ಹಬ್ಬ-ಹರಿದಿನಗಳೂ ಈ ಚಿನ್ನ ಖರೀದಿಸುವ ಕ್ಷಮತೆಗೆ ಸೇರಿಕೊಳ್ಳುತ್ತವೆ.
ಗಮನವಿರಲಿ, ನಮಗೆ ಚಿನ್ನದ ಗಟ್ಟಿ ಅಥವಾ ಚಿನ್ನದ ಬಾಂಡ್ ಬಗೆಗಿಂತ, ಚಿನ್ನದ ಆಭರಣಗಳೆಂದರೆ ಪ್ರಾಣ! ಚಿನ್ನದ ಕುರಿತಾಗಿ ನಮಗೇಕೆ ಈ ಪರಿಯ ಒಲವು? ಜಗತ್ತಿನ ಬಹುತೇಕ ಜನರಿಗೆ ಅನಾದಿ ಕಾಲದಿಂದಲೂ ಅವಿರತವಾಗಿ ಹರಿದು ಬಂದಿರುವ ಒಲವಿದು.

ಏಕೀ ವ್ಯಾಮೋಹ? ಚಿನ್ನದ ಮೇಲೆ ಹೂಡಿಕೆ ಮಾಡುವುದರಲ್ಲೂ ವೈವಿಧ್ಯವನ್ನು ಕಾಣಬಹುದು. ಚಿನ್ನದ ಆಭರಣಗಳು, ನಾಣ್ಯಗಳು, ಗಟ್ಟಿಗಳು ಮತ್ತು ಸರಕಾರದ ಬಾಂಡ್ ಖರೀದಿಸುವುದು ಸೇರಿದಂತೆ ಇದು ವಿವಿಧ ರೂಪಗಳನ್ನು ಪಡೆದುಕೊಳ್ಳಬಹುದು. ಚಿನ್ನದ ಮಾಲೀಕತ್ವದ ಈ ಪ್ರತಿಯೊಂದು ಸ್ವರೂ ಪವೂ ಆಯಾ ಹೂಡಿಕೆದಾರರಿಗೆ ವಿಶಿಷ್ಟ ಗುಣಲಕ್ಷಣಗಳನ್ನು ಮತ್ತು ಆಕರ್ಷಣೆಗಳನ್ನು ಒದಗಿಸಿವೆ. ಉದಾಹರಣೆಗೆ, ಚಿನ್ನದ ಆಭರಣಗಳನ್ನು ಹೂಡಿಕೆ ಯ ಸ್ವರೂಪವಾಗಿ ಮಾತ್ರವಲ್ಲದೆ ಫ್ಯಾಷನ್ ಪರಿಕರ/ಅಲಂಕಾರಿಕ ಸಾಮಗ್ರಿಯಾಗಿಯೂ ಪರಿಗಣಿಸಲಾಗುತ್ತದೆ. ಆದರೆ ಚಿನ್ನದ ಗಟ್ಟಿಗಳು ಮತ್ತು ನಾಣ್ಯ ಗಳನ್ನು ಸಾಮಾನ್ಯವಾಗಿ ಮೌಲ್ಯದ ಸಂಗ್ರಹವಾಗಿ ಅಥವಾ ಆರ್ಥಿಕ ಅನಿಶ್ಚಿತತೆಯ ಎದುರು ರಕ್ಷಣೆಯಾಗಿ ಖರೀದಿಸಲಾಗುತ್ತದೆ.

ತಾವು ಧರಿಸಿದ ಚಿನ್ನದ ಆಭರಣವು, ಅದನ್ನು ನೋಡಿದ ಇತರರು ತಮ್ಮ ಬಗೆಗೆ ತಳೆಯುವ ಅಭಿಪ್ರಾಯದ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಭಾರತೀಯರು ನಂಬುತ್ತಾರೆ. ಆಭರಣಗಳನ್ನು ಧರಿಸುವುದರ ಹಿಂದಿನ ಉದ್ದೇಶ ಮತ್ತು ಅದರಿಂದ ಒದಗುವ ಪರಿಣಾಮಗಳು ವಿವಿಧ ಬಗೆಯ ದ್ದಾಗಿರಬಹುದು. ಅಂದರೆ, ಆಭರಣಗಳಿಂದ ಸುಂದರವಾಗಿ ಕಾಣಬೇಕೆನ್ನುವ ಆಸೆ. ಆಭರಣಗಳು ತನ್ನ ವರ್ಚಸ್ಸನ್ನು ಹೆಚ್ಚಿಸುವುದೆಂಬ ಹಮ್ಮು.  ಆಭರಣಗಳು ಶ್ರೀಮಂತಿಕೆಯ ಸಂಕೇತವೆಂಬ ನಂಬಿಕೆ.

ಆಭರಣಗಳಿಂದ ಜನರ ಗಮನ ಸೆಳೆಯುವ ಉದ್ದೇಶ- ಹೀಗೆ ಹಲವು ತೆರನಾದ ಚಿತ್ತಸ್ಥಿತಿಗಳು ಇಲ್ಲಿ ಅಡಕವಾಗಿರುತ್ತವೆ. ಅಹಂಕಾರವನ್ನು ಪ್ರದರ್ಶಿಸಲು, ಸಂಪತ್ತನ್ನು ತೋರಿಸಲು ಅಥವಾ ಓರ್ವರನ್ನು ಸಮಾಜದ ಉನ್ನತ ವರ್ಗದ ವ್ಯಕ್ತಿ ಎಂದು ಬಿಂಬಿಸಲು ಆಭರಣ ರೂಪದ ಚಿನ್ನವು ಬಳಕೆಯಾಗುವುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಇತ್ತೀಚಿನ ಸುದ್ದಿಯಂತೆ, ಅಂಬಾನಿ ಕುಟುಂಬದ ಯಜಮಾನಿಯು ತಮ್ಮ ಮಗನ ಮದುವೆಯ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಸುಮಾರು ೫೦೦ ಕೋಟಿ ರುಪಾಯಿ ಮೌಲ್ಯದ ಚಿನ್ನದ ನೆಕ್ಲೇಸ್ ಅನ್ನು ಧರಿಸಿದ್ದರಂತೆ.

ಇನ್ನೊಂದು ವರ್ಗದ ಜನರು ಚಿನ್ನವನ್ನು ಹೂಡಿಕೆಯ ಸ್ವರೂಪವಾಗಿ ಬಳಸುವುದುಂಟು. ಇಂಥವರು ತಮ್ಮ ಗಳಿಕೆಯ ಸುಮಾರು ಶೇ.೧೦ರಷ್ಟು ಭಾಗ ವನ್ನು ಇದರ ಮೇಲಿನ ಹೂಡಿಕೆಗಾಗಿ ಬಳಸುತ್ತಾರೆ. ಇವರು ಆಭರಣಗಳ ರೂಪದಲ್ಲಿ ಚಿನ್ನವನ್ನು ಖರೀದಿಸುವುದಿಲ್ಲ; ಬದಲಿಗೆ ಸರಕಾರದ ‘ಗೋಲ್ಡ್ ಬಾಂಡ್’ ಅಥವಾ ಚಿನ್ನದ ಗಟ್ಟಿಯ ರೂಪದಲ್ಲಿ ಕೂಡಿಡುತ್ತಾರೆ. ದೀರ್ಘಾವಧಿಯ ಆಸ್ತಿಯಾಗಿ ಚಿನ್ನವು ಸುಮಾರು ೧೫ ಪ್ರತಿಶತ ವಾರ್ಷಿಕ ಮೌಲ್ಯ ವರ್ಧನೆಯನ್ನು ನೀಡುತ್ತದೆ ಎಂಬುದು ಇದರ ಹಿಂದಿನ ಉದ್ದೇಶ.

ಕಳೆದ ಐದು ವರ್ಷಗಳಲ್ಲಿ, ಚಿನ್ನದಲ್ಲಿ ಹೂಡಿಕೆ ಮಾಡಲಾದ ಒಂದು ರುಪಾಯಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಒಂದು ರುಪಾಯಿಗೆ ಸಮಾನವಾದ ಲಾಭವನ್ನು ನೀಡಿದೆ. ಅದೂ ಈ ಬುಲ್ಲಿಷ್ ಮಾರುಕಟ್ಟೆಯಲ್ಲಿ. ಈ ರೀತಿಯ ಲಾಭಾಂಶವು ಭಾರತದಲ್ಲಷ್ಟೇ ಅಲ್ಲ, ಜಗತ್ತಿನ ಬಹುತೇಕ ಭಾಗಗಳಲ್ಲಿ ಹೂಡಿಕೆದಾರರಿಗೆ ಲಭಿಸಿದೆ. ಹೆಚ್ಚಿನ ವಿಧದ ಹಣಕಾಸು ಸ್ವತ್ತುಗಳಿಗಿಂತ ಭಿನ್ನವಾಗಿದೆ ಚಿನ್ನದ ಬಾಬತ್ತು. ಏಕೆಂದರೆ ಚಿನ್ನದ ಪೂರೈಕೆಯು ಸೀಮಿತ ವಾಗಿದೆ, ಅದರ ಗಣಿಗಾರಿಕೆಯು ಕಷ್ಟಕರವಾಗಿದೆ. ಏಕೆಂದರೆ, ಅಸ್ತಿತ್ವದಲ್ಲಿರುವ ಗಣಿಗಳ ನಿಕ್ಷೇಪಗಳು ಖಾಲಿಯಾಗಿವೆ.

ಗಣಿಗಾರಿಕೆಯಿಂದ ಉತ್ಪಾದಿಸಿದ ಚಿನ್ನದ ಪ್ರಮಾಣವು, ಈಗ ಅನೇಕ ವರ್ಷಗಳಿಂದ ಕಾಣಬರುತ್ತಿರುವ ‘ಚಿನ್ನದ ವಾರ್ಷಿಕ ಬೇಡಿಕೆ’ಗೆ ಹೊಂದಿಕೆಯಾಗು ತ್ತಿಲ್ಲ; ಅಂದರೆ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವು ದೊಡ್ಡದಾಗುತ್ತಲೇ ಇದೆ. ಬೇಡಿಕೆಯು ಪೂರೈಕೆಯ ಪ್ರಮಾಣವನ್ನು ಮೀರಿಸಿರುವು ದರಿಂದ ಚಿನ್ನದ ಬೆಲೆ ಏರುತ್ತಲೇ ಇದೆ. ಆದ್ದರಿಂದಲೇ ಚಿನ್ನದ ಮೇಲಿನ ಹೂಡಿಕೆಯು ಆಕರ್ಷಕ ವ್ಯವಹಾರವಾಗಿದೆ. ಸಾಂಪ್ರದಾಯಿಕವಾಗಿ, ಚಿನ್ನವು ಹಣದುಬ್ಬರದ ರಕ್ಷಕನಾಗಿ ಕಾರ್ಯನಿರ್ವಹಿಸಿದೆ. ದೇಶದ ಆರ್ಥಿಕತೆಯಲ್ಲಿ ಬೆಲೆಯ ಮಟ್ಟಗಳು ಏರಿದಾಗಲೆಲ್ಲಾ, ಚಿನ್ನದ ಬೆಲೆಗಳೂ ಏರುತ್ತವೆ. ಈ ನಡವಳಿಕೆಯು ಇತರ ಹಲವಾರು ಆಸ್ತಿ ವರ್ಗಗಳಿಗೆ ವ್ಯತಿರಿಕ್ತವಾಗಿದೆ.

ಹಣದುಬ್ಬರವು ಅನೇಕ ಆರ್ಥಿಕತೆಗಳಿಗೆ ಪ್ರಮುಖ ಅಪಾಯವಾಗಿ ಪರಿವರ್ತಿತವಾಗಿದ್ದರೂ, ಚಿನ್ನ ಮಾತ್ರ ಇದೆಲ್ಲದಕ್ಕೂ ಹೊರತಾಗಿ ಬೆಲೆಗಳನ್ನು ಹಿಡಿದಿಟ್ಟುಕೊಳ್ಳುವ ಪ್ರವೃತ್ತಿಯನ್ನು ಹೊಂದಿದೆ. ಆದ್ದರಿಂದ ಸಾಕಷ್ಟು ಜನ ಸಮುದಾಯಗಳು/ಸಮಾಜಗಳು ಮತ್ತು ರಾಷ್ಟ್ರಗಳು ಕೂಡ ಸದರಿ ಹಳದಿ ಲೋಹದಿಂದ ಖಾತ್ರಿಯಾಗಿ ಪಡೆದ ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ನಂಬುತ್ತವೆ ಹಾಗೂ ಚಿನ್ನದ ಮೇಲಿನ ಹೂಡಿಕೆಯನ್ನು ಸ್ವಾಭಾವಿಕವಾಗಿ ಉತ್ತೇಜಿಸುತ್ತವೆ.

ಈ ಮೇಲಿನ ವಿಶ್ಲೇಷಣೆಯು, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಗಳಲ್ಲಿ ಕಂಡುಬಂದಿರುವ ದಾಖಲೆಯ ಏರಿಕೆಯಿಂದ ಸ್ಪಷ್ಟವಾಗಿದೆ. ಇಂದಿನ ೨೪ ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ೭,೨೦೦ ರು.ಗೆ ತಲುಪಿದೆ; ೨೦೦೧ರಲ್ಲಿ ಪ್ರತಿ ಗ್ರಾಂಗೆ ಕೇವಲ ೪೩೦ ರು.ನಷ್ಟಿದ್ದ ಚಿನ್ನದ ಬೆಲೆಗೆ ಹೋಲಿಸಿದಾಗ ಇದೊಂದು ಅತ್ಯುತ್ತಮ ಲಾಭಾಂಶದ ಹೂಡಿಕೆಯೇ. ಚಿನ್ನವು ಅನೇಕ ಕುಟುಂಬಗಳ ಪಾಲಿಗೆ ಪೀಳಿಗೆಯಿಂದ ಪೀಳಿಗೆಗೆ ಸಂಪತ್ತನ್ನು ವರ್ಗಾಯಿಸುವ ಸಾಧನವೂ ಆಗಿದೆ. ವಿಶೇಷವಾಗಿ ಆಭರಣಗಳನ್ನು ಹೊಂದುವುದನ್ನು ಆರ್ಥಿಕ ಸ್ಥಿರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಭಾರತೀಯ ಕುಟುಂಬ ಗಳು ಸುಮಾರು ೨೧,೦೦೦ ಟನ್ ಚಿನ್ನದ ಮೇಲೆ ಕುಳಿತಿವೆ ಎಂದು ಅಂದಾಜಿಸಲಾಗಿದೆ.

ಈ ಅಂಕಿ-ಅಂಶವು, ಭಾರತೀಯ ರಿಸರ್ವ್ ಬ್ಯಾಂಕಿನ ೮೦೦ ಟನ್‌ಗಳಿಗಿಂತ ಹೆಚ್ಚಿನ ಚಿನ್ನದ ನಿಕ್ಷೇಪವನ್ನು ಒಳಗೊಂಡಿಲ್ಲ. ೨೦೨೩ರಲ್ಲಿ ಪ್ರಕಟವಾದ
‘ವಿಶ್ವ ಚಿನ್ನದ ಮಂಡಳಿ’ಯ ವರದಿಯ ಪ್ರಕಾರ, ಚಿನ್ನದ ಮೇಲಿನ ಭಾರತೀಯ ಕುಟುಂಬಗಳ ಹೂಡಿಕೆಯು ಆ ಕುಟುಂಬಿಕ ರನ್ನು ವಿಶ್ವದ ಅತಿದೊಡ್ಡ ಮತ್ತು ಅಮೂಲ್ಯ ಲೋಹದ ಹಿಡುವಳಿದಾರರನ್ನಾಗಿ ಮಾಡುತ್ತದೆ. ಜಗತ್ತಿನ ಒಟ್ಟು ಚಿನ್ನದ ಆಸ್ತಿಗೆ ಹೋಲಿಸಿದರೆ, ಭಾರತದ ಕುಟುಂಬಗಳು ವಿಶ್ವದ ಒಟ್ಟು ಚಿನ್ನದ ಶೇ.೧೧ರಷ್ಟನ್ನು ಹೊಂದಿವೆ ಎಂಬ ಮಾಹಿತಿಯು ಇದಕ್ಕೆ ಪುಷ್ಟಿ ನೀಡುತ್ತದೆ.

ಲಘುಹಾಸ್ಯದ ಧಾಟಿಯಲ್ಲಿ ಹೇಳುವುದಾದರೆ, ಭಾರತೀಯ ಕುಟುಂಬಗಳು ಜಾಗತಿಕ ಆರ್ಥಿಕ ವಿಪತ್ತುಗಳ ಪೈಕಿಯ ಅತ್ಯಂತ ಭಯಾನಕ ಪರಿಸ್ಥಿತಿ ಯನ್ನೂ ಎದುರಿಸ ಬಲ್ಲವು. ಭಾರತ ಎಂದಿಗೂ ದಿವಾಳಿಯಾಗುವುದಿಲ್ಲ!

(ಲೇಖಕರು ಲೆಕ್ಕ ಪರಿಶೋಧಕರು)