ವಿಚಾರ ವೇದಿಕೆ
ಡಾ.ಟಿ.ಎನ್.ವಾಸುದೇವಮೂರ್ತಿ
ಹುಟ್ಟಿನಿಂದ ಯೆಹೂದಿಯಾಗಿದ್ದ ಆಲ್ಬರ್ಟ್ ಐನ್‌ಸ್ಟೀನ್ ಯಾವ ಧರ್ಮದೊಂದಿಗೂ ಗುರುತಿಸಿಕೊಳ್ಳಲು ಬಯಸದೇ ವಿಶ್ವಮಾನ ವತ್ವವನ್ನು ದೃಢವಾಗಿ ನಂಬಿದ್ದರು ಮತ್ತು ತಮ್ಮ ನಿಲುವನ್ನು ಹಲವೆಡೆ ಪ್ರಸ್ತಾಪಿಸಿಯೂ ಇದ್ದರು. ಆದರೆ ಮಹಾಯುದ್ಧದ ಸಂದರ್ಭದಲ್ಲಿ ಯುರೋಪಿಯನ್ ಜಗತ್ತು ಯೆಹೂದಿಗಳನ್ನು ಅಮಾನುಷವಾಗಿ ನಡೆಸಿಕೊಂಡಿತು.
ಹಿಟ್ಲರ್ ೬ ಲಕ್ಷಕ್ಕೂ ಅಧಿಕ ಯೆಹೂದಿಗಳನ್ನು ಬರ್ಬರವಾಗಿ ಕೊಂದ. ಯೆಹೂದಿಗಳು ಎಲ್ಲ ದೇಶಗಳಲ್ಲೂ ನಿರಾಶ್ರಿತರಾಗಿ ದೈನ್ಯದಿಂದ ಬಾಳ್ವೆ ಮಾಡಬೇಕಾಯಿತು. ಸಹಜವಾಗಿಯೇ ಐನ್ ಸ್ಟೀನ್‌ರ ಮೃದುಹೃದಯವು ತನ್ನ ಬಂಧುಗಳ ಪರಿಸ್ಥಿತಿಗೆ ಮರುಗಿತು. ವಿಶ್ವಸಮುದಾಯದೆದುರು ಯೆಹೂದಿಗಳ ಯೋಗಕ್ಷೇಮಕ್ಕಾಗಿ ಮೊರೆಯಿಟ್ಟರು. ಅಂಥ ಅವರ ಭಾಷಣ, ಲೇಖನಗಳಿಂದಾಯ್ದ ಕೆಲವು ಮಾತುಗಳನ್ನು ಇಲ್ಲಿ ನೀಡಲಾಗಿದೆ. ಪ್ರಸ್ತುತ ಹಮಾಸ್-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಇದು ಇಸ್ರೇಲಿಗರಿಗೆ ಐನ್‌ಸ್ಟೀನ್ ಹೇಳುವ ಕಿವಿಮಾತೂ ಆಗಿದೆ.
? ಜ್ಞಾನಕ್ಕಾಗಿ ಜ್ಞಾನದ ತೀವ್ರ ಹುಡುಕಾಟ, ನ್ಯಾಯಕ್ಕಾಗಿ ಹುಚ್ಚುತನವೆಂಬಷ್ಟು ನಿಷ್ಠೆ, ವ್ಯಕ್ತಿಸ್ವಾತಂತ್ರ್ಯಕ್ಕಾಗಿ ಅದಮ್ಯ ಹಂಬಲ ಯೆಹೂದಿ ಪರಂಪರೆಯ ಈ ೩ ವಿಶಿಷ್ಟ ಗುಣ ಲಕ್ಷಣಗಳ ಕಾರಣದಿಂದಾಗಿ ನನಗೆ ಈ ಪರಂಪರೆಯಲ್ಲಿ ಜನ್ಮ ಪಡೆಯಲು ಅವಕಾಶ ನೀಡಿದ ಆ ವಿಧಿಗೆ ನಾನು
ಆಭಾರಿ.
? ಯೆಹೂದಿಗಳು ಕೇವಲ ಒಂದು ಧಾರ್ಮಿಕ ಸಮುದಾಯಕ್ಕೆ ಸೇರಿದವರು ಮಾತ್ರವಲ್ಲ, ರಕ್ತಸಂಬಂಧ ಮತ್ತು ಪರಂಪರೆ ಅವರನ್ನು ಗಟ್ಟಿಯಾಗಿ ಬಂಧಿಸಿಟ್ಟಿದೆ. ಜಗತ್ತಿನ ಉಳಿದ ಸಮುದಾಯಗಳು ಅವರ ಬಗ್ಗೆ ಬೆಳೆಸಿಕೊಂಡಿರುವ ಧೋರಣೆಯೇ ಇದಕ್ಕೆ ಸಾಕ್ಷಿ. ೧೫ ವರ್ಷಗಳ ಹಿಂದೆ ನಾನು ಜರ್ಮನಿಗೆ ಬಂದಾಗ ಇಲ್ಲಿ ಮೊತ್ತಮೊದಲ ಸಲ ನನಗೆ ‘ನಾನೊಬ್ಬ ಯೆಹೂದಿಯಾಗಿದ್ದೇನೆ’ ಎಂಬ ಅನುಭವವಾಯಿತು. ನನ್ನ ಯೆಹೂದಿತ್ವದ ಸ್ಮರಣೆಯನ್ನು ನನಗೆ ತಂದು ಕೊಟ್ಟದ್ದು ಯೆಹೂದಿಗಳಲ್ಲ, ಜೆಂಟೈಲ್‌ಗಳು (ಯೆಹೂದಿ, ಕ್ರೈಸ್ತ ಮತ್ತು ಮುಸ್ಲಿಮರಂಥ ಅಬ್ರಹಾಮಿಕ್ ಧರ್ಮೀ
ಯರ ಪೈಕಿ ಯೆಹೂದಿಗಳಲ್ಲದ ಇತರರು (ಪ್ರಧಾನವಾಗಿ ಕ್ರೈಸ್ತರು ಮತ್ತು ಮುಸ್ಲಿಮರು); ಅಬ್ರಹಾಮಿಕ್ ಧರ್ಮಕ್ಕೆ ಸೇರದ ಪೇಗನ್‌ಗಳನ್ನೂ ಯೆಹೂದಿಗಳು ಜೆಂಟೇಲ್ ಎಂದೇ ಭಾವಿಸುತ್ತಾರೆ).
? ನನ್ನ ಪ್ರಕಾರ ಯೆಹೂದಿ ದೃಷ್ಟಿಕೋನ ಎಂಬುದಿಲ್ಲ. ಯೆಹೂದಿ ಧರ್ಮವು ಬದುಕಿಗೆ ನಿಷ್ಠೆ ತೋರಿಸುವ ವಿಷಯದಲ್ಲಿ ಕಾಳಜಿಯುಳ್ಳ ಧರ್ಮವಾಗಿದೆ. ಯೆಹೂದಿ ಧರ್ಮದ ಸಾರವು ಯೆಹೂದಿ ಜನಾಂಗದಲ್ಲಿ ವಿಕಾಸ ಗೊಂಡಿರುವ ಜೀವನ ನಿಷ್ಠೆಯಲ್ಲಿ ನೆಲೆಸಿರುವುದೇ ವಿನಾ ತೋರಾಹ್ ಗ್ರಂಥ ವಿಽಸಿರುವ ಕಾನೂನು ಕಟ್ಟಳೆಗಳಲ್ಲಿ ಮತ್ತು ತಾಲ್ಮುದ್ ಗ್ರಂಥದಲ್ಲಿ ನೀಡಲಾದ ವ್ಯಾಖ್ಯಾನಗಳಲ್ಲಿ ಇಲ್ಲ. ಪ್ರಾಚೀನ ಕಾಲದಲ್ಲಿ ಯೆಹೂದಿಗಳು ಬದುಕನ್ನು ಹೇಗೆ ಪರಿಭಾವಿಸಿದ್ದರು ಎಂಬುದಕ್ಕೆ ತೋರಾಹ್ ಮತ್ತು ತಾಲ್ಮುದ್ ಗ್ರಂಥಗಳು ಪ್ರಮುಖ ರುಜುವಾತು ಗಳಾಗಿವೆ.
? ಸೃಷ್ಟಿಯ ಎಲ್ಲಾ ಜೀವಿಗಳ ವಿಷಯದಲ್ಲೂ ಬೆಳೆಸಿಕೊಳ್ಳುವ ಸಕಾರಾತ್ಮಕ ಭಾವನೆಯಲ್ಲಿ ಈ ಧರ್ಮದ ಸಾರವಿದೆ. ಸಕಲ ಜೀವಜಾತಿಗಳ ಬದುಕುಗಳನ್ನು ಉದಾತ್ತವಾಗಿ, ಸುಂದರವಾಗಿ ಮಾಡಲು ನೆರವಾಗುವುದರಲ್ಲಿ ಬದುಕಿನ ಸಾರ್ಥಕತೆಯಿದೆ. ಬದುಕು ಪವಿತ್ರವಾದುದು, ಮೌಲ್ಯಯುತವಾದುದು, ಉಳಿದೆಲ್ಲ ಮೌಲ್ಯಗಳೂ ಈ ಮೌಲ್ಯಕ್ಕೆ ಅಧೀನವಾದುದು. ವ್ಯಕ್ತಿಗತ ಬದುಕನ್ನು ಹೀಗೆ ಪವಿತ್ರಗೊಳಿಸಿಕೊಂಡಾಗ ಆಧ್ಯಾತ್ಮಿಕವಾದ ಪ್ರತಿಯೊಂದೂ ಅದನ್ನು ಅನುಸರಿಸುತ್ತವೆ. ಇದೇ ಯೆಹೂದಿ ಪರಂಪರೆಯ ವೈಶಿಷ್ಟ್ಯ.
? ಯೆಹೂದಿ ಎಂಬುದು ಒಂದು ಸೀಮಿತ ಪಂಥಕ್ಕಿರುವ ಹೆಸರಲ್ಲ. ಯೆಹೂದಿ ದೇವರು ಎಂದರೆ ಅದರರ್ಥ ಮೌಢ್ಯದ ನಿರಾಕರಣೆಯಾಗಿದೆ. ಮೌಢ್ಯರಹಿತ ಬದುಕಿಗಿರುವ ಮತ್ತೊಂದು ಹೆಸರಾಗಿದೆ. ಭಯದ ಆಧಾರದ ಮೇಲೆ ನೈತಿಕ ನೆಲೆಗಟ್ಟನ್ನು ಕಟ್ಟಿಕೊಡುವ ಯತ್ನವಾಗಿದೆ ಅದು ವಿಷಾದನೀಯ, ಕಳಂಕಮಯ ಯತ್ನವಾಗಿದೆ ಎಂಬುದು ಬೇರೆ ಮಾತು. ಆದಾಗ್ಯೂ ಯೆಹೂದಿ ಪರಂಪರೆ ಈ ಭಯವನ್ನು ಬಹುಮಟ್ಟಿಗೆ ಕೊಡವಿ ಕೊಂಡು ಮೇಲೆದ್ದು ನಿಂತಿದೆ. ಈ ಪರಂಪರೆಯ ಪ್ರಕಾರ ‘ಬದುಕಿನ ಸೇವೆ’ಯೇ ‘ಭಗವಂತನ ಸೇವೆ’. ಎಲ್ಲ ಯೆಹೂದಿಗಳೂ, ವಿಶೇಷವಾಗಿ
ಪ್ರವಾದಿ ಗಳು ಮತ್ತು ಯೇಸು, ಈ ಉದ್ದೇಶಕ್ಕಾಗಿ ಅವಿರತ ವಾಗಿ ಶ್ರಮಿಸಿದರು.
? ಯೆಹೂದಿ ಧರ್ಮ ಪರಲೋಕದತ್ತ ಮುಖ ಮಾಡಿರುವ ಧರ್ಮವಲ್ಲ, ನಾವು ಹೇಗೆ ಬದುಕುತ್ತಿರುವೆವೋ, ಹೇಗೆ ಬದುಕಲು ಸಾಧ್ಯವೋ, ಎಷ್ಟರ ಮಟ್ಟಿಗೆ ಇದನ್ನು ಅರ್ಥ ಮಾಡಿಕೊಂಡಿರುವೆವೋ ಆ ಒಂದು ಬದುಕಿಗೆ ನಿಷ್ಠವಾಗಿರುವ ಧರ್ಮವಾಗಿದೆ, ಮತ್ತೇನಲ್ಲ. ಧರ್ಮದ ಸ್ವೀಕೃತ ಅರ್ಥವನ್ನು ಪರಿಗಣಿಸುವುದಾದರೆ ಇದನ್ನು ಒಂದು ಧರ್ಮವೆನ್ನಲು ಸಾಧ್ಯವೇ ಎಂದು ನನಗೆ ಅನುಮಾನವಾಗಿರುವುದುಂಟು. ಏಕೆಂದರೆ ಇದು ನಂಬಿಕೆಯನ್ನಾ ಧರಿಸಿ ನಿಂತ ಧರ್ಮವಲ್ಲ, ಈ ಧರ್ಮದ ಪ್ರಕಾರ ಯೆಹೂದಿ ಎನಿಸಿಕೊಂಡವನು ವ್ಯಕ್ತಿಗತ ನೆಲೆಗೆ ಅತೀತ ವಾದ ನೆಲೆ ಯಲ್ಲಿ ಬದುಕನ್ನು ಪವಿತ್ರವಾಗಿಸಿಕೊಳ್ಳಬೇಕಾಗುತ್ತದೆ.
? ಯೆಹೂದಿ ಸಂಪ್ರದಾಯಕ್ಕಿರುವ ಮತ್ತೊಂದು ವಿಶಿಷ್ಟತೆಯು ಹಲವು ಧಾರ್ಮಿಕ ಸ್ತೋತ್ರಗಳಲ್ಲಿ ಕಂಡು ಬರುತ್ತದೆ. ಅವು ಈ ಜಗತ್ತಿನ ಸೌಂದರ್ಯ, ಭವ್ಯತೆಗಳನ್ನು ಕಂಡು ಉಂಟಾಗುವ ವಿಸ್ಮಯವಾಗಿವೆ, ವಿಸ್ಮಯದ ಅಮಲಿನಲ್ಲಿ ತೇಲಿದಾಗ ಹೊರಹೊಮ್ಮುವ ಸ್ತೋತ್ರ ಗಳಾಗಿವೆ. ನಾವು ಆ ಸಂತೋಷ, ವಿಸ್ಮಯಗಳನ್ನು ಮಬ್ಬಾಗಿ ಕಲ್ಪಿಸಿಕೊಳ್ಳಬಹುದು ಅಷ್ಟೇ. ಈ ಸಂತೋಷ ಭಾವದಿಂದ ನೈಜ ವೈಜ್ಞಾನಿಕ ಸಂಶೋಧನೆ ತನ್ನ ಆಧ್ಯಾತ್ಮಿಕ ಪೋಷಣೆ
ಯನ್ನು ಪಡೆಯುತ್ತದೆ. ಹಕ್ಕಿಗಳ ಇಂಚರದಲ್ಲೂ ಈ ಭಾವ ವ್ಯಕ್ತವಾಗುತ್ತದೆ. ಈ ಭಾವವನ್ನು ದೇವರ ಕಲ್ಪನೆಗೆ ಲಗತ್ತಿಸುವುದು ಬಾಲಿಶವೆನಿಸುತ್ತದೆ.
? ಈ ವಿಶಿಷ್ಟತೆ ತನ್ನ ಪರಿಶುದ್ಧ ರೂಪದಲ್ಲಿ ಬೇರೆಲ್ಲೂ ಕಾಣ ಸಿಗುವುದಿಲ್ಲ ಸ್ವತಃ ಯೆಹೂದಿ ಧರ್ಮದಲ್ಲೂ. ಯೆಹೂದಿ ಧರ್ಮದಲ್ಲಿ ಪರಿಶುದ್ಧವಾದ ಪರಮ ಸಿದ್ಧಾಂತವು ಶಬ್ದ ಸೂತಕಕ್ಕೆ ಸಲ್ಲಿಸುವ ಆರಾಧನೆಯಿಂದಾಗಿ ವಿಕ್ಷಿಪ್ತಗೊಂಡಿದೆ. ಆದಾಗ್ಯೂ ಈ ಧರ್ಮವು ಆ ಸಿದ್ಧಾಂತದ ಅತ್ಯಂತ ಪರಿಶುದ್ಧ, ಶಕ್ತಿಶಾಲಿ ಅಭಿವ್ಯಕ್ತಿಯಾಗಿದೆ. ನಿರ್ದಿಷ್ಟವಾಗಿ ಬದುಕನ್ನು ಪವಿತ್ರೀಕರಿಸಿಕೊಳ್ಳಬೇಕೆಂಬ ಮೂಲಭೂತ ಸಿದ್ಧಾಂತಕ್ಕೆ ಈ ಮಾತು ಅನ್ವಯವಾಗುತ್ತದೆ.
? ಪವಿತ್ರ ಸಬ್ಬತ್ ದಿನದಂದು ಮನುಷ್ಯರಿಂದಷ್ಟೇ ಅಲ್ಲ, ಜಾನುವಾರುಗಳಿಂದಲೂ ಯಾವುದೇ ಕೆಲಸ ಮಾಡಿಸದಿರುವುದು ಯೆಹೂದಿ ಪರಂಪರೆಯ ವೈಶಿಷ್ಟ್ಯ. ಇದು ಜಗತ್ತಿನ ಜೀವರಾಶಿಗಳೆಲ್ಲವೂ ಒಂದೇ ಎಂಬ ಭಾವನೆಯನ್ನು ವ್ಯಕ್ತಪಡಿಸುವ ಒಂದು ವಿಶಿಷ್ಟತೆ. ಇನ್ನು ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆಯನ್ನು ಈ ಧರ್ಮ ಪ್ರಬಲವಾಗಿ ಪ್ರತಿಪಾದಿಸುತ್ತದೆ. ಸಮಾಜವಾದದ ಮೂಲತತ್ವಗಳು ಮೊತ್ತಮೊದಲ ಸಲ ಯೆಹೂದಿಗಳಲ್ಲಿ ವ್ಯಕ್ತವಾದುದು ಕೇವಲ ಆಕಸ್ಮಿಕವಲ್ಲ.
? ಬದುಕಿನ ಈ ಪಾವಿತ್ರ್ಯ ಮತ್ತು ಐಕಮತ್ಯ ಯೆಹೂದಿಗಳಲ್ಲಿ ಅದೆಷ್ಟು ಪ್ರಬಲವಾಗಿದೆಯೆಂದರೆ ಒಮ್ಮೆ ವಾಲ್ಟರ್ ರಥೆನೌ ನನ್ನೊಂದಿಗೆ ಸಂಭಾಷಿಸುತ್ತ ಯಾವುದೇ ಯೆಹೂದಿಗೆ ಹೆಮ್ಮೆಯಿಂದ ಎದೆಯುಬ್ಬುವಂತೆ ಮಾಡುವ ಒಂದು ಮಾತನ್ನು ಹೇಳಿದ್ದರು: ‘ಒಬ್ಬ ಯೆಹೂದಿ ತಾನು ಮನರಂಜನೆ ಪಡೆಯಲು ಬೇಟೆಗೆ ಹೋಗುತ್ತಿದ್ದೇನೆ ಎಂದರೆ ಅವನು ಸುಳ್ಳು ಹೇಳುತ್ತಿರುತ್ತಾನೆ’. ಯೆಹೂದಿಗಳು ಬದುಕನ್ನು ಎಷ್ಟು ಪವಿತ್ರಭಾವದಿಂದ ನೋಡುತ್ತಾ
ರೆಂಬುದನ್ನು ಇದಕ್ಕಿಂತ ಸರಳವಾಗಿ ವಿವರಿಸಲಾಗದು.
? ಸಾಮಾಜಿಕ ನ್ಯಾಯ, ಸಹಕಾರ ಮನೋಭಾವ ಮತ್ತು ಸಹಿಷ್ಣುತೆಯಂಥ ಪ್ರಜಾಪ್ರಭುತ್ವದ ಮೌಲ್ಯಗಳು ಯೆಹೂದಿಗಳನ್ನು ಸಾವಿರಾರು ವರ್ಷಗಳಿಂದ ಒಗ್ಗೂಡಿಸಿದ್ದು, ಇವು ಇಂದಿಗೂ ಅವರ ನಡುವಿನ ಐಕಮತ್ಯಕ್ಕೆ ಕಾರಣವಾಗಿವೆ. ಯೆಹೂದಿಗಳ ಪ್ರಾಚೀನ ಧಾರ್ಮಿಕ ಗ್ರಂಥಗಳೂ ಈ ಮೌಲ್ಯಗಳನ್ನು ಒಳಗೊಂಡಿದ್ದು ಇವು ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳನ್ನು ತೀವ್ರವಾಗಿ ಪ್ರಭಾವಿಸಿವೆ. ಮಾತ್ರವಲ್ಲ ಮನುಕುಲದ ಸಾಮಾಜಿಕ ರಚನೆಯ ಮೇಲೂ ಪ್ರಭಾವ ಬೀರಿವೆ. ಶ್ರಮಿಕವರ್ಗಕ್ಕೆ ವಾರದ ರಜಾದಿನ ನಿಗದಿ ಮಾಡಿರುವುದನ್ನು ಇಲ್ಲಿ ನೆನಪಿಸಿ ಕೊಳ್ಳಬೇಕು. ಇದು ಮನುಕುಲದ ಪಾಲಿಗೆ ದೊಡ್ಡ ಅನು
ಗ್ರಹವೇ ಸರಿ. ಮೋಸೆಸ್, ಸ್ಪಿನೋಜಾ, ಕಾರ್ಲ್‌ಮಾರ್ಕ್ಸ್ ಮುಂತಾದ ಧೀಮಂತರು (ಅವರ ನಡುವೆ ವ್ಯತ್ಯಾಸಗಳಿರ ಬಹುದು) ಈ ಸಾಮಾಜಿಕ ನ್ಯಾಯದ ಆದರ್ಶಕ್ಕಾಗಿ ಬದುಕಿದ್ದರು ಮತ್ತು ಇದರ ಸಾಕಾರಕ್ಕೆ ಬದುಕನ್ನು ಸಮರ್ಪಿಸಿದ್ದರು. ಯೆಹೂದಿಗಳ ಪೂರ್ವಿಕರ ಈ ಪರಂಪರೆಯೇ ಇಂದು ಅವರನ್ನು ಮುಳ್ಳಿನ ಹಾದಿಯ ಮೇಲೆ ನಡೆಸುತ್ತಿದೆ. ಲೋಕೋಪಕಾರದ ಕ್ಷೇತ್ರದಲ್ಲಿನ ಯೆಹೂದಿಗಳ ವಿಶಿಷ್ಟ ಸಾಧನೆಗಳೂ ಈ ಮೂಲ ಸ್ರೋತದಿಂದಲೇ ಹೊರಹೊಮ್ಮಿವೆ.
? ೨,೦೦೦ ವರ್ಷಗಳಿಂದ ಯೆಹೂದಿಗಳ ಪಾಲಿನ ಸಮಸ್ತ ಆಸ್ತಿಯೂ ಅವರ ಗತಕಾಲವಾಗಿದೆ. ಜಗತ್ತಿನಾದ್ಯಂತ ಚೆಲ್ಲಾಪಿಲ್ಲಿಯಾಗಿರುವ ನಮ್ಮ ರಾಷ್ಟ್ರ ಜತನದಿಂದ ಕಾಪಾಡಿ ಕೊಂಡು ಬಂದಿರುವ ತನ್ನ ಸಂಪ್ರದಾಯವನ್ನಲ್ಲದೇ ಮತ್ತಾವ ಸಂಪತ್ತನ್ನೂ ಹೊಂದಿಲ್ಲ. ಕೆಲವು ಯೆಹೂದಿಗಳು ಮಹತ್ಕಾರ್ಯ ಗಳನ್ನು ಸಾಧಿಸಿರಬಹುದು. ಆದರೆ ಒಟ್ಟಾರೆ ಯೆಹೂದಿ ಜನಗಳಲ್ಲಿ ಮಹತ್ತಾದ ಸಾಮೂಹಿಕ ಸಾಧನೆ ಮಾಡಬಹುದಾದ ಚೈತನ್ಯ ಉಳಿದಿಲ್ಲ.
(ಲೇಖಕರು ಸಹಪ್ರಾಧ್ಯಾಪಕರು,
ಆದಿಚುಂಚನಗಿರಿ ವಿಶ್ವವಿದ್ಯಾಲಯ)