ಶಿಶಿರ ಕಾಲ
shishirh@gmail.com
ಒಂದೂರಿನಲ್ಲಿ ಒಮ್ಮೆ ಊರ ಪಟೇಲರು ಮತ್ತು ಗೌಡರ ನಡುವೆ ಜಗಳವಾಯಿತು. ಮುಂದುವರಿದ ಗಲಾಟೆ ಹೊಡೆದಾಟದ ಹಂತಕ್ಕೆ ತಲುಪಿ ಊರು ಇಬ್ಭಾಗ. ಗೌಡರನ್ನು ಬೆಂಬಲಿಸುವವರು ಒಂದಿಷ್ಟು ಮಂದಿಯಾದರೆ, ಪಟೇಲರ ಒಕ್ಕೂಟದಲ್ಲಿ ಇನ್ನೊಂದು ಗುಂಪು. ಇವೆಲ್ಲದರ ನಡುವೆ, ಯಾವುದೇ
ಜನಬೆಂಬಲ, ತಾಕತ್ತು ಇಲ್ಲದ ಊರ ಶಾನುಭೋಗರು.
ಊರಿನವರದ್ದೇ ಒಂದಾದರೆ ಇವರದ್ದೇ ಇನ್ನೊಂದು. ‘ನಾನು ಯಾರ ಪರವೂ ಅಲ್ಲ, ನನ್ನದು ಮೂರನೆಯ ಬಣ’ ಎಂದರು. ಆ ಊರಿನಲ್ಲಿ ಕೆಲವು ನಿಷ್ಪ್ರ ಯೋಜಕರಿದ್ದರು. ಅವರನ್ನು ಎರಡೂ ಗುಂಪಿನವರು ದೂರಕ್ಕಿರಿಸಿದ್ದರು. ಶಾನುಭೋಗರಿಗೆ ಯಾರಾದರೂ ಬೆನ್ನಿಗೆ ಬೇಕಲ್ಲ, ಇವರನ್ನೇ ಕಟ್ಟಿಕೊಂಡರು. ಅವರು ಹಸಿವು ಎಂದರು, ಚಹಾ-ತಿಂಡಿ ಕೇಳಿದರು; ಶಾನುಭೋಗರಿಗೇ ಹೊಟ್ಟೆಗಿಲ್ಲ, ಇನ್ನು ಇವರಿಗೆಂತ ಕೊಡುವುದು! ಆಮೇಲೊಂದು ದಿನ ಗೌಡರು ಮತ್ತು ಪಟೇಲರು ಇಬ್ಬರೂ ಶಾನುಭೋಗರ ಮೇಲೆ ಎಗರಿ ಹೊಡೆತ ಕೊಟ್ಟರು.
ಶಾನುಭೋಗರು ಹಿಂದಿರುಗಿ ನೋಡಿದರೆ ಬೆನ್ನಿಗಿದ್ದವರಲ್ಲಿ ಒಬ್ಬರೂ ಇಲ್ಲ. ಶಾನುಭೋಗರಿಗೆ ಪೆಟ್ಟು ಬೀಳುವಾಗ ಈ ತೃತೀಯ ಕ್ರಾಂತಿಕಾರಿಗಳ ಪೈಕಿ ಒಂದಷ್ಟು ಮಂದಿ ಪಟೇಲರ ಗುಂಪಿಗೆ, ಇನ್ನಷ್ಟು ಮಂದಿ ಗೌಡರ ಗುಂಪಿಗೆ ಸೇರಿದರು. ಕೊನೆಗೆ ಉಳಿದದ್ದು ಶಾನುಭೋಗರು ಮಾತ್ರ. ಗೌಡರು- ಪಟೇಲರು ಜತೆ ಸೇರಿ ಶಾನುಭೋಗರಿಗೆ ಗುದ್ದುವಾಗ, ಅವರ ಜತೆಗಿದ್ದವರೂ ಕೈಜೋಡಿಸಿದರು.
ಥೇಟ್ ಶಾನುಭೋಗರ ಸ್ಥಿತಿ ನೆಹರು ಆಡಳಿತದ ನಂತರ ಭಾರತಕ್ಕಾಯಿತು. ಅಲಿಪ್ತ ನೀತಿಯನ್ನು ನಾವೆಲ್ಲಾ ಸಾಧನೆ ಎಂಬಂತೆ ಶಾಲೆಯಲ್ಲಿ ಓದಿ ಕೊಂಡು ಬಂದಿದ್ದೇವೆ. ಇದೊಂದು ಪವಿತ್ರ ನಿಲುವು, ನಾವು ಯಾರ ಪರವೂ ಅಲ್ಲ ಎಂಬ ನಿರ್ಧಾರ. ನಿಜವಾಗಿ ಒಳ್ಳೆಯ ನಿಲುವು. ಆದರೆ ಅಂದಿನ ಸ್ಥಿತಿಯಲ್ಲಿ ಯೋಗ್ಯವಾಗಿತ್ತೇ? ಆಗ ಭಾರತ ಅಷ್ಟು ಸಶಕ್ತವೂ ಆಗಿರಲಿಲ್ಲ. ಬಡತನ, ಸಾಂಕ್ರಾಮಿಕ ರೋಗಗಳು, ಆಹಾರದ ಕೊರತೆ ಹೀಗೆ ನೂರೆಂಟು ಸಮಸ್ಯೆಯ ಮಧ್ಯೆ ಪಾಕಿಸ್ತಾನ, ಚೀನಾವನ್ನು ಗಡಿಯಲ್ಲಿ ಕಾಯಬೇಕು. ಹೀಗಿರುವಾಗ ನೆಹರು ಅಲಿಪ್ತವೆಂಬ ಯೋಚನೆಯ ತೃತೀಯ ರಂಗವನ್ನು ಮುನ್ನ
ಡೆಸಲು ಮುಂದಾಗಿದ್ದು.
ಅಂದು ಜತೆಯಲ್ಲಿ ನಿಂತ ದೇಶಗಳು ಈಜಿಪ್ಟ್, ಘಾನಾ, ಇಂಡೋನೇಷ್ಯಾ ಮತ್ತು ಯೊಗೋ ಸ್ಲಾವಿಯಾ. ಹೀಗೆ ಹೊಟ್ಟೆಗಿಲ್ಲದ ಮತ್ತಷ್ಟು ಆಫ್ರಿಕನ್ ದೇಶ ಗಳನ್ನೆಲ್ಲ ಸೇರಿಸಿಕೊಂಡು ಕ್ರಾಂತಿಕಾರಿಯಾಗಲು ಹೊರಟದ್ದು ನೆಹರು. ‘ನಾವು ಅಮೆರಿಕದತ್ತವೂ ಅಲ್ಲ, ರಷ್ಯಾದ ಕಡೆಗೂ ಇಲ್ಲ. ನಾವೇ ಬೇರೆ, ನಿರ್ಲಿ ಪ್ತರು’ ಎಂಬ ನಿಲುವು. ಇವರು ಸೇರಿಸಿದ ದೇಶಗಳು ಎಷ್ಟು ದಯನೀಯ ಸ್ಥಿತಿಯಲ್ಲಿದ್ದವೆಂದರೆ, ‘ಮೂರನೇ ವಿಶ್ವದ ದೇಶಗಳು’ ಎಂಬುದು ‘ಮೂರನೇ ದರ್ಜೆಯ ದೇಶಗಳ ಗುಂಪು’ ಎಂಬಂತಾಗಿ ಹೋಗಿತ್ತು.
ಈ ಅಲಿಪ್ತ ನಿಲುವಿನ ಒಳ್ಳೆಯತನದ ಬಗ್ಗೆ ಪ್ರಶ್ನೆಯಿಲ್ಲ. ಆದರೆ ಅದರಿಂದಾದ ಯಡವಟ್ಟುಗಳು ಒಂದೇ ಎರಡೇ? ಅದನ್ನು ನೆನಪಿಸಿಕೊಳ್ಳದಿದ್ದರೆ ಹೇಗೆ? ಶಾನುಭೋಗರ ಸ್ಥಿತಿ ಏನಾಯಿತು ಎಂಬುದನ್ನು ಸ್ಥೂಲವಾಗಿಯಾದರೂ ಹಿಂತಿರುಗಿ ನೋಡಬೇಕಲ್ಲ. ಅದೆಲ್ಲದರ ಪೂರ್ಣಚಿತ್ರವನ್ನು ಈಗ ಹೋಲಿಕೆ ಗಾದರೂ ನೆನಪಿಸಿಕೊಳ್ಳಬೇಕಲ್ಲ. ೧೯೬೨ರಲ್ಲಿ ಚೀನಾ ಭಾರತದ ಮೇಲೆರಗಿತು. ಯುದ್ಧ ನಡೆದದ್ದು ಒಂದೇ ತಿಂಗಳು. ಚೀನಾದ ಕಡೆ ೮೦ ಸಾವಿರ ಸೈನಿಕರಿದ್ದರೆ, ನಮ್ಮವರ ಸಂಖ್ಯೆ ೨೨ ಸಾವಿರ. ನಮ್ಮವರಿಗೆ ಯುದ್ಧಸಲಕರಣೆಗಳು, ಬೂಟು, ಹೆಲ್ಮೆಟ್ ಇರಲಿ, ಸರಿಯಾದ ಆಹಾರ ಸರಬರಾಜೂ ಇರಲಿಲ್ಲ.
ಚೀನಾದ ಪ್ರಕಾರ ಸುಮಾರು ೫ ಸಾವಿರ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಸತ್ತರು. ಚೀನಾಕ್ಕೆ ಸೆರೆ ಸಿಕ್ಕವರು ೪ ಸಾವಿರ. ಭಾರತಾಂಬೆಯ ಶಿರದ ಭಾಗವಾಗಿದ್ದ, ಅಕ್ಸಾಯ್ ಚಿನ್- ಸುಮಾರು ೩೮ ಸಾವಿರ ಚ.ಕಿ.ಮೀ. ಪ್ರದೇಶ- ಅಂದು ಚೀನಾ ಪಾಲಾಯಿತು. ಈ ಇಡೀ ಘಟನೆಯಾಗುವಾಗ ಭಾರತದ
ಅಲಿಪ್ತ ನೀತಿಯಿಂದಾಗಿ ಅಮೆರಿಕ, ರಷ್ಯಾ ಬಣದ ಯಾವ ದೇಶಗಳೂ ಸೊಲ್ಲೆತ್ತಲಿಲ್ಲ, ಅಲಕ್ಷಿಸಿದವು. ಅದು ಬಿಡಿ, ನೆಹರು ಜತೆ ಅಲಿಪ್ತರೆಂದು ನಿಂತಿದ್ದ ಘಾನಾ, ಇಂಡೋನೇಷ್ಯಾ, ಇನ್ನೊಂದೆರಡು ಅಲಿಪ್ತ ದೇಶಗಳು ‘ನಾವು ಚೀನಾದತ್ತ’ ಎಂದು ಕೈ ಎತ್ತಿಬಿಟ್ಟವು.
ಯುದ್ಧ ತರುವಾಯ ಆರ್ಥಿಕ ಒಡಂಬಡಿಕೆಯ ಇನಾಮನ್ನು ಚೀನಾದಿಂದ ಈ ದೇಶಗಳು ಪಡೆದವು, ಅದರ ದೋಸ್ತಿಯಾದವು. ಅಷ್ಟೇ ಅಲ್ಲ, ಇಂಗ್ಲೆಂಡ್
ಅಥವಾ ಇನ್ಯಾವುದೇ ದೇಶ ಭಾರತಕ್ಕೆ ನೆರವಾಗಲು ಮುಂದಾದರೆ ಅದರಿಂದ ಯುದ್ಧ ಉಲ್ಬಣಿಸುತ್ತದೆ. ಹಾಗಾಗಿ ಎಲ್ಲಾ ದೇಶಗಳೂ ಇದರಿಂದ ಹೊರಗಿರ ಬೇಕು ಎಂದು ಅಲಿಪ್ತ ನೀತಿಯನ್ನೇ ಡಂಗುರ ಹೊಡೆದವು. ಇದೆಲ್ಲದರಿಂದ ನಮ್ಮ ನೆಲ, ನಮ್ಮ ಸಹಸ್ರಾರು ಸೈನಿಕರನ್ನು ಕಳೆದುಕೊಂಡು ಸೋಲಬೇಕಾ ಯಿತು. ಅಷ್ಟಾಗಿಯೂ ಭಾರತದ ಅಂದಿನ ಪ್ರಧಾನಿ ಬುದ್ಧಿ ಕಲಿಯಲಿಲ್ಲ. ಒಂದಿಷ್ಟು ಯಾವುದಕ್ಕೂ ಬಾರದ ಜಾಗ ಹೋದರೆ ಹೋಯಿತು, ಸತ್ತವರು ಸತ್ತರು ಎಂಬಂತೆ ಮತ್ತದೇ ಅಲಿಪ್ತ, ಜಾಡ್ಯದ ನಿಲುವು ಮುಂದುವರಿಯಿತು. ಇದರ ಜತೆ ಸಂಭಾವಿತರೆನಿಸಿಕೊಳ್ಳಲು ದೇಶೀಯ ಸಮಸ್ಯೆಗಳನ್ನು
ಅಂತಾರಾಷ್ಟ್ರೀಯ ವೇದಿಕೆಗೆ ಸ್ವಯಂ ತೆಗೆದುಕೊಳ್ಳುವ ಕೆಟ್ಟ ಖಯಾಲಿ.
ಮೂರೇ ವರ್ಷ, ೧೯೬೫ರಲ್ಲಿ ಪಾಕಿಸ್ತಾನ ಯುದ್ಧ. ಆಗಲೂ ಅಷ್ಟೆ. ಚೀನಾವನ್ನು ಹಿಂಬಾಲಿಸಿದ್ದ ಇಂಡೋನೇಷ್ಯಾ ಈ ಬಾರಿ ಪಾಕಿಸ್ತಾನವನ್ನು ಬೆಂಬಲಿ ಸಿತು. ಅಲಿಪ್ತ, ನಾವೆಲ್ಲ ಒಂದೇ ಎಂದ ದೇಶ ೨ನೇ ಬಾರಿ ಭಾರತದ ವೈರಿಯ ಜತೆ ನಿಂತಿತು. ಅಷ್ಟೇ ಅಲ್ಲ, ಸೌದಿ ಮೊದಲಾದ ಬಹುತೇಕ ಇಸ್ಲಾಮಿಕ್ ಅಲಿಪ್ತ ದೇಶಗಳು ಪಾಕಿಸ್ತಾನಕ್ಕೆ ಜೈ ಅಂದವು. ಹೀಗೆ ಅಲ್ಲಿಂದಿಲ್ಲಿಗೂ ಇದೊಂದು ನಿಲುವಿನ ಸಂಕೋಚಕ್ಕೆ ಬಿದ್ದು ನಾವು ಅನುಭವಿಸಿದ ಕಷ್ಟಗಳು, ಆದ ಹಾನಿಯೇ ಜಾಸ್ತಿ. ಇದರಿಂದ ಅಂದು ತೀರಾ ಅವಶ್ಯವಿದ್ದ ಆರ್ಥಿಕ ಸಹಾಯ ಭಾರತಕ್ಕಾಗಲಿಲ್ಲ. ವಿಶ್ವ ಯುದ್ಧದ ತರುವಾಯ ಉಳಿದ ದೇಶಗಳು ತೀವ್ರಗತಿಯಲ್ಲಿ ಆರ್ಥಿಕವಾಗಿ, ರಕ್ಷಣೆಯ ವಿಷಯದಲ್ಲಿ ಬೆಳೆಯುತ್ತಿದ್ದರೆ, ಅದನ್ನು ಭಾರತ ನೋಡಿಕೊಂಡು ಕೂರಬೇಕಾಯಿತು.
ಭಾರತವನ್ನು ದೀರ್ಘಕಾಲ ಈ ಒಂದು ಕಾರಣಕ್ಕೇ ಬಹಳಷ್ಟು ಗಟ್ಟಿ ದೇಶಗಳು ಹೊರಗಿರಿಸಿದ್ದವು. ನಂತರದಲ್ಲಿ ರಷ್ಯಾ ತನ್ನ ಅನಿವಾರ್ಯತೆಯಿಂದಾಗಿ
ಭಾರತಕ್ಕೆ ಹತ್ತಿರವಾಯಿತು, ಅಲ್ಪ ಸ್ವಲ್ಪ ಯುದ್ಧ ಸಲಕರಣೆಗಳು ಭಾರತಕ್ಕೆ ಬಂದವು. ನಮ್ಮ ಈ ನಿಲುವಿನಿಂದಾಗಿ ನಮಗೆ ಬಹುಕಾಲ ಒಂದು ಅಣ್ವಸ ಪರೀಕ್ಷೆ ಮಾಡಲಿಕ್ಕಾಗಲಿಲ್ಲ! ಒಟ್ಟಾರೆ, ಇದೆಲ್ಲದರಿಂದ ನಮಗೆ ತೀರಾ ಅವಶ್ಯವಿದ್ದ ಸಮಯದಲ್ಲಿ ಬೇಕಾದದ್ದು ಸಿಗಲಿಲ್ಲ; ವಿಶ್ವಸಂಸ್ಥೆಯಲ್ಲಿ, ಭದ್ರತಾ ಮಂಡಳಿಯಲ್ಲಿ ಸ್ಥಾನಮಾನ ಸಿಗಲಿಲ್ಲ, ವಿಟೋ ಪವರ್ ಕೈತಪ್ಪಿತು. ನಾವು ಈ ಕಾರಣದಿಂದ ತೀರಾ ಇತ್ತೀಚಿನ ವರೆಗೂ ಜಾಗತಿಕವಾಗಿ ಒಂದು ಲೆಕ್ಕವೇ ಆಗಿರಲಿಲ್ಲ.
ಪೋಖ್ರಾನ್ ಅಣುಪರೀಕ್ಷೆ (೨) ನಂತರ ನಮ್ಮ ದೇಶಕ್ಕೆ ಆರ್ಥಿಕ ವಾಗಿ ಸಾಕೋ ಸಾಕಾಗಿತ್ತು. ಅಂತಾರಾಷ್ಟ್ರೀಯ ವ್ಯವಹಾರ ಗಳಲ್ಲಿ ಬಹಳಷ್ಟು ತೊಡಕುಗಳಾದವು. ಹೀಗೆ ಅಲಿಪ್ತ ನಿಲುವಿನಿಂದಾಗಿ ಸ್ವಯಂರಕ್ಷಣೆಗೆ ಬೇಕಾದದ್ದನ್ನು ಪಡೆಯುವುದೂ ಸುಲಭವಾಗಿರಲಿಲ್ಲ. ಇದು ಈ ಮೂರನೇ ರಂಗ ಕಟ್ಟಿಕೊಂಡ ದ್ದರ ಪರಿಣಾಮ. ಇಲ್ಲಿ ತಾಕತ್ತಿಲ್ಲದಿದ್ದಾಗ ಇಂಥದ್ದು ಬೇಕಿತ್ತೇ? ಎಂಬ ಪ್ರಶ್ನೆಗೆ ಮೌಲಿಕ ಉತ್ತರದ ಸಮಜಾಯಿಷಿ ಕೊಡಬಹುದು. ರಾಷ್ಟ್ರಕ್ಕೊಂದು ಗುಣ ವಿಶೇಷ ಹೇರಿಕೆ ಮಾಡಿ ಸಮರ್ಥಿಸಿಕೊಳ್ಳಬಹುದು. ಆದರೆ ಆದ ಆರ್ಥಿಕ ನಷ್ಟಕ್ಕೆ? ಬೆಳವಣಿಗೆ ಕುಂಠಿತವಾದದ್ದಕ್ಕೆ? ಈ ಸಮಸ್ಯೆ ಮುಂದುವರಿದು ಇಂದಿಗೂ ಕಾಡುತ್ತಿರುವುದಕ್ಕೆ? ಏನು ಸಮರ್ಥನೆ? ಯುದ್ಧ ದಲ್ಲಿ ಕಳೆದುಕೊಂಡ ನೆಲ ಮತ್ತು ಸಹಸ್ರಾರು ಭಾರತೀಯ ಸೈನಿಕರ ಹೋದ ಜೀವಕ್ಕೆ? ಮಾತಿನಲ್ಲೇನು ಸಮಜಾಯಿಷಿ ಸಾಧ್ಯ? ಭಾರತದ ಅಂತಾರಾಷ್ಟ್ರೀಯ ನಡೆಗಳು ಅಷ್ಟೊಂದು ಮಹತ್ವವನ್ನು ಪಡೆದುಕೊಳ್ಳದ ಸ್ಥಿತಿ ಈಗೊಂದು ಐದೆಂಟು ವರ್ಷದವರೆಗೂ ಇತ್ತು.
ಅಲ್ಲದೆ ಮನಮೋಹನ್ ಸಿಂಗ್ ಸರಕಾರದ ಸಮಯದಲ್ಲಂತೂ ಅಂತಾರಾಷ್ಟ್ರೀಯ ನಿಲುವು ಗಳನ್ನು ಭಾರತದ ಯಾವುದೋ ಒಂದು ಪ್ರಾದೇಶಿಕ
ರಾಜಕೀಯ ಪಕ್ಷ ನಿರ್ಧರಿಸುವಷ್ಟು ಸ್ಥಿತಿ ಹದಗೆಟ್ಟಿತ್ತು. ೨೦೧೩ ರಲ್ಲಿ ಶ್ರೀಲಂಕಾದಲ್ಲಿ ನಡೆಯುವ ಕಾಮನ್‌ವೆಲ್ತ್ ಶೃಂಗವನ್ನು ಭಾರತ ಬಹಿಷ್ಕರಿಸಿತು. ಇದಕ್ಕೆ ಅಂದಿನ ಸರಕಾರ ಕೊಟ್ಟ ಕಾರಣ- ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು. ಅಸಲಿಗೆ ತಮಿಳುನಾಡಿನ ಪಕ್ಷಗಳು
ವೋಟ್ ಬ್ಯಾಂಕ್ ಕಾರಣಕ್ಕೆ ಈ ರೀತಿ ದೇಶದ ನಿಲುವನ್ನೇ ಅಂದು ನಿರ್ದೇಶಿಸಿದ್ದವು. ೨೦೧೪ರಲ್ಲಿ ಎಲೆಕ್ಷನ್ ಇತ್ತಲ್ಲ!
ಹೀಗೆ ಉದಾಹರಣೆಗಳು ಎಷ್ಟು ಬೇಕು. ಸಂಸತ್ತಿನ ಮೇಲೆ ದಾಳಿಯಾದಾಗ ಗಟ್ಟಿ ಖಂಡಿಸುವಷ್ಟು ಸ್ವರವೂ ಇರಲಿಲ್ಲವಪ್ಪ! ಕಳೆದ ೧೦ ವರ್ಷದ ಭಾರತ ವನ್ನು, ನಡೆ ನುಡಿಯನ್ನು ಒಮ್ಮೆ ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ಕೆಲವು ಘಟನೆಗಳನ್ನು ನೆನಪಿಸಿಕೊಳ್ಳಿ. ಇಂದಿಗೂ ನಮ್ಮ ದೇಶ ಉಳಿದವಕ್ಕೆ ಹೋಲಿಸಿದರೆ ಅಲಿಪ್ತವೇ. ಆದರೆ ಸ್ವಹಿತಾಸಕ್ತಿಗೆ ಮೊದಲು ಮಣೆ. ಅಲಿಪ್ತವಾಗುವುದಕ್ಕಿಂತ ಮೊದಲು ಬೇಕಾದದ್ದು ತಾಕತ್ತು, ಕನಿಷ್ಠ ಅರ್ಹತೆ. ಸುಮ್ಮನೆ ಬಡಬಿದ್ದು ನಾನು ಅಲಿಪ್ತನೆಂದರೆ ಆಪತ್ಕಾಲದಲ್ಲಿ ಯಾರೂ ಆಗಿಬರುವುದಿಲ್ಲ ಎಂಬುದನ್ನು ಕಂಡು ಪಾಠ ಕಲಿತಂತಿದೆ ಭಾರತ.
ಅದಕ್ಕಿಂತ ಹೆಚ್ಚಿನದಾಗಿ ಇಂದು ಭಾರತದ ನಿಲುವುಗಳು ತೀರಾ ಪ್ರಾಯೋಗಿಕ, ವ್ಯಾವಹಾರಿಕ. ಉಕ್ರೇನ್-ರಷ್ಯಾ ಯುದ್ಧದ ನಡುವೆ ಕಡಿಮೆ ಖರ್ಚಿನಲ್ಲಿ ಪೆಟ್ರೋಲ್ ಖರೀದಿಸುವುದು ಇದಕ್ಕೆ ಉದಾಹರಣೆ. ಇದನ್ನು ಪಾಶ್ಚಿಮಾತ್ಯ ದೇಶಗಳು ಖಂಡಿಸಿದರೂ ಸಮರ್ಥಿಸಿ ಜೀರ್ಣಿಸಿಕೊಳ್ಳುವುದು ಶಕ್ತಿ. ಇಲ್ಲಿ ದೇಶದ ಹಿತವೇ ಮುಖ್ಯ. ದೇಶವೇ ಮೊದಲ ಆದ್ಯತೆ. ಅಷ್ಟೇ ಅಲ್ಲ, ಭಾರತಕ್ಕೆ ಇಂದು ಇಸ್ರೇಲ್, ಶ್ರೀಲಂಕಾ ಮೊದಲಾದ ದೇಶಗಳ ಬೆನ್ನಿಗೆ ನಿಲ್ಲಬೇಕಾದಲ್ಲಿ ಅದಕ್ಕೆ ದೇಶದ ಪ್ರಧಾನಿ ಚುನಾವಣೆಯೆಂದು ಸುಮ್ಮನಾಗಬೇಕಿಲ್ಲ, ಯಾವುದೊ ಸ್ಥಳೀಯ ಪಕ್ಷದ ಅನುಮತಿಯನ್ನೂ ಕೇಳಬೇಕಿಲ್ಲ.
ಆಂತರಿಕ ರಾಜಕಾರಣ ಇಂದು ಅಂತಾರಾಷ್ಟ್ರೀಯ ಸಂಬಂಧಗಳನ್ನು ನಿರ್ದೇಶಿಸುವುದಿಲ್ಲ. ಪುಲ್ವಾಮಾ, ಉರಿ ಘಟನೆ, ಬಾಲಕೋಟ್ ಏರ್‌ಸ್ಟ್ರೈಕ್,
ಅಭಿನಂದನ್ ವರ್ಧಮಾನ್, ಆರ್ಟಿಕಲ್ ೩೭೦ ಮೊದಲಾದ ಘಟನೆಗಳು, ಆ ವೇಳೆ ದೇಶದೊಳಗೆ ಮತ್ತು ಹೊರಗೆ ಭಾರತ ಸರಕಾರಕ್ಕೆ ಸಿಕ್ಕ ಬೆಂಬಲ ಅಭೂತಪೂರ್ವ. ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಕೊಡುತ್ತಿದ್ದ ಭಿಕ್ಷೆಯನ್ನು ನಿಲ್ಲಿಸಿದ್ದು. ಟ್ರಂಪ್, ಪುಟಿನ್ ಮತ್ತು ಇಸ್ರೇಲ್ ಬಾಲಕೋಟ್ ಏರ್‌ಸ್ಟ್ರೈಕ್ ನಲ್ಲಿ ಬೆನ್ನಿಗೆ ನಿಂತದ್ದು. ಈ ಎಲ್ಲ ಘಟನೆಗಳನ್ನು ಒಟ್ಟೊಟ್ಟಿಗೆ ನೆನಪಿಸಿ ಕೊಳ್ಳಬೇಕು.
ಇಂದು ಭಾರತಕ್ಕೆ ಯಾವುದೇ ದೇಶದ ಬೆನ್ನಿಗೆ ನಿಲ್ಲಬೇಕಾದ ಅನಿವಾರ್ಯತೆಯಿಲ್ಲ. ನಮ್ಮದೇ ಸ್ವತಂತ್ರ ನಿಲುವು ಸಾಧ್ಯವಾಗಿದೆ. ಅಷ್ಟೇ ಅಲ್ಲ, ಇಂದು ತೃತೀಯ ಅಲಿಪ್ತ ರಂಗವನ್ನು ಮುನ್ನಡೆಸುತ್ತಿರುವುದೇ ಭಾರತ. ಇಂದು ಆಫ್ರಿಕಾದ ಅಲಿಪ್ತ ದೇಶಗಳಲ್ಲಿ ಭಾರತ ಸಾಫ್ಟ್ ವೇರ್ ಐಟಿ ಸೆಂಟರ್ ತೆರೆಯುತ್ತಿದೆ.
ಕಟ್ಟಡ, ರೈಲ್ವೆ, ಆಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಕೋವಿಡ್ ನಂಥ ಸಮಯದಲ್ಲಿ ಲಸಿಕೆ ಕಳಿಸಿಕೊಟ್ಟಿದೆ. ದೇಶವೊಂದು ಪೃಕೃತಿ ವಿಕೋಪಕ್ಕೊಳ ಗಾದರೆ ಭಾರತದ ಆಹಾರ, ಪರಿಹಾ ರವೇ ಮೊದಲು ತಲುಪುವುದು. ಯಾವುದಕ್ಕೂ ಸಿದ್ಧವಿದೆ ದೇಶ. ಇಂದು ಭಾರತ ಈ ದೇಶಗಳ ಹಿತಕ್ಕೆ ನಿಲ್ಲುವಷ್ಟು ಶಕ್ತ ವಾಗಿದೆ. ಹಾಗಾಗಿಯೇ ಜವಾಬ್ದಾರಿಗಳನ್ನು ತೆಗೆದು ಕೊಳ್ಳುತ್ತಿದೆ.
ಅಫ್ಘಾನಿಸ್ತಾನದ ಮರುನಿರ್ಮಾಣದ ಹಲವಾರು ಬೃಹತ್ ಯೋಜನೆಗಳನ್ನು ಪೂರ್ಣಗೊಳಿಸಿದ್ದು ಭಾರತ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಕೃತ್ಯಕ್ಕಿಂತ ಮಹತ್ವದ್ದು ನಿಲುವುಗಳು. ಒಂದು ದೇಶದ ನಿಲುವು ಎಷ್ಟು ಮುಖ್ಯವೆಂದಾಗುವುದು ಆ ದೇಶ ಎಷ್ಟು ಸಮರ್ಥ, ಆ ದೇಶದ ಶಕ್ತಿ ಎಷ್ಟು
ದೇಶಗಳಲ್ಲಿ ಹರಡಿದೆ, ಆ ದೇಶ ತನ್ನ ನಿಲುವನ್ನು ಎಷ್ಟು ಸ್ಪಷ್ಟವಾಗಿ ಹೇಳುತ್ತದೆ ಎಂಬುದರ ಮೇಲೆ. ನರೇಂದ್ರ ಮೋದಿ ಹಿಂದಿನ ಚುನಾವಣೆಯ ಸಮಯದಲ್ಲಿ, ‘ನಾವೇನೂ ಅಣ್ವಸ್ತ್ರವನ್ನು ದೀಪಾವಳಿ ಹಬ್ಬಕ್ಕೆ ಬೇಕೆಂದು ಇಟ್ಟುಕೊಂಡದ್ದಲ್ಲ!’ ಎಂಬ ನೇರಮಾತು ಆಡಿದ್ದರು. ಅದನ್ನು ಹೇಳಿದ್ದು
ಚುನಾವಣೆಯ ಸಮಯದಲ್ಲಾದರೂ ಅದರ ಸ್ಪಷ್ಟ ಸಂದೇಶ ಪಾಕಿಸ್ತಾನಕ್ಕೆ ಹೋಗಿ ಮುಟ್ಟಿತ್ತು. ಪಾಕಿಸ್ತಾನಿ ಪ್ರಧಾನಿಯ ಕಾಲು ತಣ್ಣಗಾಗಿದ್ದವು.
ಇದೊಂದು ವೈರಲ್ ವಿಡಿಯೋ ಎಂದಷ್ಟೇ ಬಿಡುವಂತಿಲ್ಲ. ಇದೊಂದು ಅತ್ಯಂತ ಸ್ಪಷ್ಟ ಸಂದೇಶ. ಇಂಥ ನೇರ ಸಂದೇಶವನ್ನು ಅಣ್ವಸ್ತ್ರ ಪರೀಕ್ಷೆಯ ೧೯೯೮ರಿಂದೀಚೆ ಯಾರೂ ಹೇಳಿಯೇ ಇರಲಿಲ್ಲ. ಜಾಗತಿಕವಾಗಿ ನಾವು ಅಣ್ವಸ್ತ್ರವನ್ನು ಬಳಸಲೂ ಸಿದ್ಧವೆಂಬ ಮಾತೇ ಪಾಕಿಸ್ತಾನದ ಅದೆಷ್ಟೋ ಮುಂದಿನ ಕುಕೃತ್ಯಗಳನ್ನು ನಿಲ್ಲಿಸಿತು. ಇಂಥ ಮಾತುಗಳು, ಸರಕಾರಿ ನಿಲುವುಗಳು, ಅವುಗಳನ್ನು ನಿರ್ಭಿಡೆಯಿಂದ ಹೇಳುವುದು ಅತ್ಯಂತ ಮುಖ್ಯವಾಗು ತ್ತದೆ. ಜಾಗತಿಕ ರಾಜಕಾರಣದಲ್ಲಿ ಗಟ್ಟಿ ಮಾತನಾಡಬೇಕು. ಉಳಿದ ಮಿತ್ರದೇಶಗಳ ಬೆನ್ನಿಗೆ ಬೇಕೆಂದಾಗ ಎಷ್ಟು ಬೇಕೋ ಅಷ್ಟು ನಿಲ್ಲಬೇಕು. ಅದೆಲ್ಲದ ಕ್ಕಿಂತ ಮೊದಲು ರಾಷ್ಟ್ರ ಅಷ್ಟು ಶಕ್ತಿಯುತ ವಾಗಬೇಕು. ಶಕ್ತಿಯುತ ಎಂದರೆ ಕೇವಲ ಅಂಕಿ-ಸಂಖ್ಯೆ ಯಲ್ಲಲ್ಲ.
ಸರಕಾರದ ನಿಲುವುಗಳು ಆಂತರಿಕ ರಾಜಕಾರಣ ದಿಂದ ಹೊರತಾಗಿರಬೇಕು. ಮಾತನಾಡುವವನು ಕೇವಲ ಅದಷ್ಟೇ ಅಲ್ಲ, ಸಮಯ ಬಂದರೆ ಪ್ರತಿಕ್ರಿಯಿ ಸಬಲ್ಲ ಎಂಬ ಹೆದರಿಕೆ ಉಳಿದ ದೇಶಗಳಿಗಿರಬೇಕು. ಯುದ್ಧದ ಸಮಯದಲ್ಲಿ ರಷ್ಯಾದಿಂದ ಪೆಟ್ರೋಲ್ ಖರೀದಿಸುವುದು ಸರಿಯೇ? ಎಂದು ಭಾರತದ ವಿದೇಶಾಂಗ ಸಚಿವರನ್ನು ಅಮೆರಿಕದ ವೇದಿಕೆಯೊಂದರಲ್ಲಿ ಕೇಳಲಾಯಿತು. ಅದಕ್ಕೆ ಅವರು ಏನೆಂದು ಉತ್ತರಿಸಿದರು ಎಂಬುದು ನೆನಪಿರಬಹುದು.
‘ನೀವು ಈ ಪ್ರಶ್ನೆಯನ್ನು ಯುರೋಪಿಗೆ ಕೇಳಬೇಕು. ಅದಕ್ಕಿಂತ ಮೊದಲು ಯುರೋಪ್ ತನ್ನದೇ ಕನ್ನಡಕದಲ್ಲಿ ಜಗತ್ತನ್ನು ನೋಡುವುದನ್ನು ನಿಲ್ಲಿಸ ಬೇಕು’. ಇದು ನಿಲುವಿನ ಸ್ಪಷ್ಟತೆ ಯನ್ನು ಅಂತಾರಾಷ್ಟ್ರೀಯವಾಗಿ ಹೇಳಿ ಸಮರ್ಥಿಸುವುದು. ಅದಾದ ಮೇಲೆ ಈ ಚರ್ಚೆಯೇ ಅಲ್ಲಿಗೆ ನಿಂತುಹೋಯ್ತು ನೋಡಿ. ಅದೊಂದು ವೇಳೆ ಬೆಳೆದಿದ್ದರೆ ಅದು ಭಾರತಕ್ಕೆ ಸಮಸ್ಯೆಯಾಗಬಹುದಿತ್ತು. ಜೈಶಂಕರ್ ಮಾತಿನಿಂದ ಅದಕ್ಕಿದ್ದ ಅವಕಾಶ ಅಲ್ಲಿಯೇ ಇಲ್ಲವಾ ಯಿತು.
ಅಪರಿಚಿತ ಗನ್‌ಮ್ಯಾನ್‌ಗಳು ಭಾರತದ ಹಿಟ್‌ಲಿಸ್ಟ್‌ನಲ್ಲಿರುವ ಭಯೋತ್ಪಾದಕರನ್ನು ಪಾಕಿಸ್ತಾನದಲ್ಲಿ ಕೊಲ್ಲುತ್ತಿರುವುದರ ಪೂರ್ಣ ವಿವರವನ್ನು ಅಂಕಣಕಾರ ಕಿರಣ್ ಉಪಾಧ್ಯಾಯರು ‘ವಿಶ್ವವಾಣಿ’ಯ ಜನವರಿ ೮ರ ಸಂಚಿಕೆಯಲ್ಲಿ ನೀಡಿದ್ದಾರೆ. ಓದಿಲ್ಲವಾದಲ್ಲಿ ಖಂಡಿತ ಓದಿ. ಕೆನಡಾದ ನೆಲದಲ್ಲಿ ನಿಜ್ಜರ್ ಎಂಬ ಭಯೋತ್ಪಾದಕನ ಹತ್ಯೆ ಮಾಡಿದ್ದೂ ಭಾರತ ಎಂಬ ಅಲ್ಲಿನ ಅಧ್ಯಕ್ಷರ ಬೊಬ್ಬೆಯ ತರುವಾಯ ಏನಾಯಿತು? ಅಮೆರಿಕನ್ ಪ್ರಜೆಯೊಬ್ಬ ನನ್ನು ಕೊಲ್ಲಲು ಭಾರತ ತಯಾರಿ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿತು. ಇವೆಲ್ಲವೂ ಹಿಂದಾಗಿದ್ದರೆ ಏನಾಗಿರುತ್ತಿತ್ತು ಸ್ಥಿತಿ? ಅತ್ತ ಕೆನಡಾಕ್ಕೆ ವೀಸಾ ರದ್ದು ಮಾಡಿ, ರಾಜತಾಂತ್ರಿಕರನ್ನು ಮನೆಗೆ ಕಳುಹಿಸಿ ಜೀರ್ಣಿಸಿಕೊಳ್ಳಲಾಯಿತು.
ಇತ್ತ ಅಮೆರಿಕದ ಜತೆ ಮಾತುಕತೆಯಾಗಿ ಸಂಬಂಧಕ್ಕೆ ಒಂದು ಹುಂಡೂ ಹಾನಿಯಾಗಲಿಲ್ಲ. ಇದೆಲ್ಲ ಸುಮ್ಮನೆ ಆಗಿಬಿಡುತ್ತದೆಯೇ? ಅಲಿಪ್ತವಾಗಿರುವು ದೆಂದರೆ ಹೀಗೆ. ಅದಕ್ಕೆ ಬೇಕಾದ ಶಕ್ತಿಯನ್ನು ಆಯಾ ದೇಶ ಮೊದಲು ಸಂಪಾದಿಸಿಕೊಂಡಿರಬೇಕು. ಅಷ್ಟೇ ಅಲ್ಲ ಆ ಶಕ್ತಿಯ ಪ್ರದರ್ಶನ ಜಾಗತಿಕವಾಗಿ ಆಗಾಗ ಆಗುತ್ತಿರಬೇಕು. ಮುಖ್ಯವಾಗಿ ಸ್ವಯಂರಕ್ಷಣೆಯ ವಿಷಯದಲ್ಲಿ ಕೋಡಂಗಿಯಂತಾಗಬಾರದು. ದೇಶದ ನಿಲುವಿನ ಜತೆ ದೇಶ ನಡೆಸುವವರ ಮಾತಿನ ನಿಲುವೂ ಧ್ವನಿಗೂಡಬೇಕು. ನರೇಂದ್ರ ಮೋದಿ, ಜೈಶಂಕರ್, ರಾಜನಾಥ್ ಸಿಂಗ್, ಅಜಿತ್ ಧೋವಲ್ ಇವರೆಲ್ಲರ ಮಾತಿನಲ್ಲಿ ಇಂದು ಅದನ್ನು ಕಾಣಬಹುದು. ಹಿಂದೆಂದೂ ಒಬ್ಬ ಭಾರತೀಯ ರಾಜಕಾರಣಿಯ ಬಾಯಲ್ಲಿ ಕೇಳದ ನೇರವಂತಿಕೆ ಇವರಲ್ಲಿ ಇದೆ. ಈ ನಿಲುವಿನ ತೋರ್ಪಡಿಸುವಿಕೆಯೂ ಸರಿಯಾಗಿಯೇ ಆಗುತ್ತಿದೆ.
ಸೈನಿಕರ ಸಂಖ್ಯೆ ಹೆಚ್ಚಿಸಿಕೊಳ್ಳುವುದು, ಸೈನ್ಯವನ್ನು ಆಧುನೀಕರಣಗೊಳಿ ಸುವುದು ಇತ್ಯಾದಿಗಿಂತ ಅದು ಮುಖ್ಯ. ದೇಶ ಬಲಿಷ್ಠವೆನ್ನಿಸಿ ಕೊಳ್ಳುವುದು ಯುದ್ಧ ಮಾಡಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರದಿಂದಲ್ಲ. ಅದರಾಚೆ ಯುದ್ಧವೇ ಆಗಬಾರದಂತಾಗ ಬೇಕು, ಶತ್ರುದೇಶ ಹೆದರಿ ಸುಮ್ಮನಿರಬೇಕು. ಇದು ಬಿಟ್ಟು, ಕೈಲಾಗದ ಶಾನುಭೋಗರಂತೆ ಪಟೇಲರ, ಗೌಡರ ವಿರುದ್ಧ ಹೋಗುವುದು, ಯಾವುದೋ ಒಂದಿಷ್ಟು ಕೆಲಸಕ್ಕೆ ಬಾರದ ನಿಲುವುಗಳಿಗೆ ಜೋತುಬಿದ್ದು ಸ್ವಹಿತಾಸಕ್ತಿಯನ್ನು ಕಡೆಗಣಿಸು ವುದು ಯಾವ ಸೀಮೆಯ ಅಲಿಪ್ತತೆ? ಅದರಿಂದ ಯಾರಿಗೇನು ಪ್ರಯೋಜನ? ನಮ್ಮ ಸ್ವಾತಂತ್ರ್ಯಾ ನಂತರದ ಇತಿಹಾಸವನ್ನು, ಈಗಿನ ಬದಲಾದ ಸ್ಥಿತಿಯನ್ನು ಯಥಾವತ್ತು ಚಿಕ್ಕದಾಗಿ ನಿಮ್ಮ ಮುಂದೆ ಇಟ್ಟಿದ್ದೇನೆ.
ಇದು ಯಾವುದೇ ಒಂದು ರಾಜಕೀಯ ಪಕ್ಷದ ಪರವಾಗಿನ ವಕಾಲತ್ತು ಅಲ್ಲ. ಈ ಎಲ್ಲ ಘಟನೆಗಳು ಮೇಲ್ನೋಟಕ್ಕೆ ಪ್ರತ್ಯೇಕವಾಗಿ ಕಂಡರೂ ಪೂರ್ಣ ಚಿತ್ರಣವನ್ನು ಸ್ಥೂಲವಾಗಿ ನೋಡಿದಾಗ ವೈಚಾರಿಕ ಸ್ಪಷ್ಟತೆ ಸಾಧ್ಯ. ಇನ್ನು ಇದೆಲ್ಲದರ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂಬಿತ್ಯಾದಿ ಸಂಗತಿ ನಿಮ್ಮ ವಿವೇಚನೆಗೆ.