Wednesday, 11th December 2024

ಸರ್ವಶಕ್ತ ವಿಷಹಾರಿ, ಸರ್ವರೋಗ ಗುಣಕಾರಿ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಮಾನವನ ಇತಿಹಾಸದಲ್ಲಿ ಸಾವನ್ನೇ ತರದ ಅಮೃತಕ್ಕಾಗಿ ಹಾಗೂ ಕೀಳು ಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸುವ ರಸ ವಿದ್ಯೆಗಾಗಿ ಅನೇಕ ಹುಡುಕಾಟ ಗಳು ನಡೆದಿವೆ. ಭಾರತೀಯ ರಸಶಾಸಜ್ಞರು ಅಮೃತ ಸೃಜಿಸಲು ಹೋಗದೆ, ರಸ ವಿದ್ಯೆಯನ್ನು ಕರಗತಗೊಳಿಸಿಕೊಳ್ಳಲು ಪ್ರಯತ್ನಿಸಿದರು.

ಮನುಷ್ಯನ ಬದುಕು ಒಂದು ಕ್ಷದ್ರ ಸ್ಪರ್ಧೆ. ಇಲ್ಲಿ ಬದುಕಲು ಸದಾ ಹೋರಾಟ ನಡೆಯುತ್ತಿರುತ್ತದೆ. ಈ ಹೋರಾಟದಲ್ಲಿ ಬಲಶಾಲಿಯಾದವನು ಬದುಕುಳಿಯುತ್ತಾನೆ. ದುರ್ಬಲನಾದವನು ಅಳಿಯುತ್ತಾನೆ. ಕೊಂದು ತಿನ್ನುವುದು ಈ ಭೂಮಿಯ ನ್ಯಾಯ. ಗಂಡನನ್ನು ಹೆಂಡತಿ ನಂಬುವ ಹಾಗಿಲ್ಲ. ಹೆಂಡತಿಯನ್ನು ಗಂಡ ನಂಬುವ ಹಾಗಿಲ್ಲ. ಹೆತ್ತವರು ತಮ್ಮ ಮಕ್ಕಳನ್ನು ನಂಬುವ ಹಾಗಿಲ್ಲ.

ಹಣಕ್ಕಾಗಿ, ಆಸ್ತಿಗಾಗಿ ಕಟ್ಟಿಕೊಂಡ ಸಂಗಾತಿಯನ್ನು, ಇಲ್ಲವೇ ಹೆತ್ತವರನ್ನೇ ಕೊಲ್ಲಲು ಎದೆಗುಂದುವುದಿಲ್ಲ. ಜನಸಾಮಾನ್ಯರ ಕಥೆಯೇ ಹೀಗಿರಬೇಕಾದರೆ, ಇನ್ನು ರಾಜ ಮಹಾರಾಜರ ವಿಷಯದಲ್ಲಿ ಹೇಗಿದ್ದಿರಬಹುದು ಎಂದು ಕಲ್ಪಿಸಿಕೊಳ್ಳಬೇಕಾಗುತ್ತದೆ. ರಾಜನನ್ನು ವಿಷವಿಕ್ಕಿ ಕೊಲ್ಲಲು ಅಂತರಂಗದ ಶತ್ರುಗಳು ಹಾಗೂ ಬಹಿರಂಗದ ಶತ್ರುಗಳು ಸದಾ ಸಿದ್ಧವಾಗಿರುತ್ತಿದ್ದರು. ಹಾಗಾಗಿ ರಾಜನಾದವನು ತಾನು ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಅತೀವ ಎಚ್ಚರಿಕೆಯನ್ನು ತೆಗೆದುಕೊಳ್ಳ ಬೇಕಾಗಿತ್ತು. ರಾಜನನ್ನು ತೀವ್ರ ವಿಷ ಪ್ರಾಶನದ ಮೂಲಕ ಕೊಂದರೆ, ಆ ಸುದ್ಧಿಯು ಎಲ್ಲರಿಗೂ ಗೊತ್ತಾಗುತ್ತದೆ. ಕೊಂದವರು ಯಾರು ಎಂದು ಸುಲುಭವಾಗಿ ತಿಳಿದುಬಿಡುತ್ತದೆ. ಆಗ ಕೊಂದವರು ರಾಜರಾಗುವುದು ಸುಲುಭವಾಗುತ್ತಿರಲಿಲ್ಲ.

ಹಾಗಾಗಿ ರಾಜನನ್ನು ವಿಷವಿಟ್ಟು ಕೊಲ್ಲಬೇಕೆಂಬ ಸಂಚನ್ನು ಹೂಡಿದವರು, ತೀವ್ರ ವಿಷವನ್ನು ಬಳಸುವ ಬದಲು ನಿಧಾನ ವಿಷವನ್ನು ಪ್ರಯೋಗಿಸುತ್ತಿದ್ದರು. ಉದಾ: ಶಂಖ ಪಾಷಾಣ. ಇದು ರಾಜನನ್ನು ಹಲವು ತಿಂಗಳು ಇಲ್ಲವೇ ವರ್ಷಗಳ ಅವಧಿಯಲ್ಲಿ ನಿಧಾನವಾಗಿ ಕೊಲ್ಲುತ್ತ ಹೋಗುತ್ತದೆ. ಹಾಗಾಗಿ ರಾಜನು ಹಾಗೂ ಅವನ ರಕ್ಷಣೆಯನ್ನು ಹೊತ್ತ ಮಂತ್ರಿಯು, ಆಹಾರ ಸೇವನೆಗೆ ಸಂಬಂಧಿಸಿದಂತೆ ತೀವ್ರ ಸ್ವರೂಪದ ಎಚ್ಚರಿಕೆಗಳನ್ನು ಹಾಗೂ ಕಟ್ಟುಟ್ಟುಗಳನ್ನು ಪರಿಪಾಲಿಸುತ್ತಿದ್ದರು.

ಮಾನವನ ಇತಿಹಾಸದಲ್ಲಿ, ಮನುಷ್ಯನು ನಾನಾ ರೀತಿಯ ಸಸ್ಯ ವಿಷಗಳನ್ನು, ಪ್ರಾಣಿ ವಿಷಗಳನ್ನು ಹಾಗೂ ರಾಸಾಯನಿಕ ವಿಷಗಳನ್ನು ಅಧ್ಯಯನ ಮಾಡಿದ. ಅವುಗಳ ಪ್ರಯೋಗವನ್ನು ಕರಗತ ಮಾಡಿಕೊಂಡ. ಹಾಗೆಯೇ ವಿಷ ಲಕ್ಷಣಗಳನ್ನು ಅರಿಯುವುದರ ಜತೆಯಲ್ಲಿ, ವಿಷ ನಿವಾರಣೆಯ ವಿವಿಧ ವಿಧಾನಗಳನ್ನು ರೂಪಿಸಿಕೊಂಡ. ಈ ವಿಷ ಜ್ಞಾನವು ವೈದ್ಯಕೀಯ ಜ್ಞಾನದ ಒಂದು ಮುಖ್ಯ ಭಾಗವಾಯಿತು. ಆಯುರ್ವೇದದಲ್ಲಿ ಎಂಟು ಚಿಕಿತ್ಸಾ ವಿಭಾಗಗಳಿವೆ. ಅವುಗಳಲ್ಲಿ ‘ಅಗದ ತಂತ್ರ’ ಎನ್ನುವುದು ವಿಷ ವೈದ್ಯಕೀಯಕ್ಕೆ ಸಂಬಂಧಪಟ್ಟಿದೆ. ಆಧುನಿಕ ವೈದ್ಯಕೀಯದಲ್ಲಿ ‘ಟಾಕ್ಸಿಕಾಲಜಿ’ ಎಂಬ ಜ್ಞಾನ ಶಾಖೆ ವಿಷ ವೈದ್ಯಕೀಯದ ಸಮಗ್ರ
ಮಾಹಿತಿಯನ್ನು ನೀಡುತ್ತದೆ. ಪ್ರಾಚೀನ ಭಾರತದಲ್ಲಿ ಅಗದ ತಂತ್ರಕ್ಕೆ ಸಂಬಂಽಸಿದಂತೆ ಹಲವು ಗ್ರಂಥಗಳಿದ್ದವು.

ಪ್ರಯೋಗ ಸಮುಚ್ಚಯ, ವಿಷ ವೈದ್ಯಜ್ಯೋತ್ಸಿತ್ನಿಕ, ಕ್ರಿಯಾ ಕೌಮುದಿ, ವಿಷವೈದ್ಯ ಸಾರ ಸಮುಚ್ಚಯ ಇತ್ಯಾದಿ. ಆಯುರ್ವೇದದಲ್ಲಿ ವಿಷಗಳನ್ನು ಅವುಗಳ ಗುಣಲಕ್ಷಣಗಳನ್ನಾಧರಿಸಿ ಗರಷ (ಕೃತಕ/ರಾಸಾಯನಿಕ ವಿಷಗಳು) ದೂಷ (ನಿಧಾನ ವಿಷಗಳು) ಜಂಗಮಷ (ಪ್ರಾಣಿಜನ್ಯ ವಿಷಗಳು) ಸ್ಥಾವರ ವಿಷ (ಸಸ್ಯಜನ್ಯ ವಿಷಗಳು) ರುದ್ಧಷ (ಒಗ್ಗದ ಆಹಾರ ವಿಷಗಳು) ಹಾಗೂ ಭಿನ್ನವಿಷಗಳು (ವಿಷವು ದೇಹದ ವಿವಿಧ ಅಂಗಗಳಲ್ಲಿ ಸಂಗ್ರಹವಾಗಿ ನಾನಾ ಲಕ್ಷಣಗಳನ್ನು ತೋರು ವಂತಹದ್ದು) ಎಂದು ವರ್ಗೀಕರಿಸುತ್ತಿದ್ದರು. ಕನ್ನಡದಲ್ಲಿ ಸಹ ಮುಗಳೀಪುರದ ಅರಸ ಮಂಗರಾಜನ (೧೩೬೦) ವಿಷ ವೈದ್ಯಕೀಯಕ್ಕೆ ಸಂಬಂಧಿಸಿದ ಹಾಗೆ ರಚಿಸಿದ ‘ಖಗೇಂದ್ರ ಮಣಿ ದರ್ಪಣ’ವು ಪ್ರಖ್ಯಾತವಾದದ್ದು.

ಇದೊಂದು ಅದ್ಭುತ ಕೃತಿಯಾಗಿದ್ದು, ಪ್ರಾಚೀನ ಭಾರತದ ವಿಷ ವೈದ್ಯಕೀಯದ ಜ್ಞಾನವೆಲ ಇದರಲ್ಲಿ ಅಡಕವಾಗಿದೆ. ಪಾಶ್ಚಾತ್ಯ ಜಗತ್ತಿನಲ್ಲಿಯೂ ರಾಜ ಮಹಾರಾಜರು ವಿಷ ಪ್ರಾಶನದಿಂದ ಸಾಯುವ ಭೀತಿಗೆ ಸದಾ ತುತ್ತಾಗಿದ್ದರು ಎನ್ನುವುದರಲ್ಲಿ ಅನುಮಾನವಿಲ್ಲ. ಕ್ರಿ.ಪೂ.೨೮೧ರಲ್ಲಿ ಪಾಂಟಸ್ ಎನ್ನುವ ಸಾಮ್ರಾಜ್ಯವಿತ್ತು(ಇಂದಿನ ಟರ್ಕಿ). ಇದರ ಸಂಸ್ಥಾಪಕ ಮಿತ್ರಿಡೇಟಿಸ್-೧ಎಂಬುವವನು. ಮಿತ್ರಿಡೇಟಿಸ್ ಶಬ್ದವು ಪರ್ಷಿಯನ್ ಮೂಲದ ಮಿತ್ರಿದಾತ್ ಇಂದರಿಂದ ರೂಪುಗೊಂಡಿದೆ. ಇದಕ್ಕೆ ಮೂಲ ಮಿತ್ರ ಎನ್ನುವ ಇಂಡೋ-ಇರಾನಿ ಮೂಲದ ಶಬ್ದ. ಸೂರ್ಯ ಎಂದು ಈ ಶಬ್ದದ ಅರ್ಥ. ಇವನು ವಂಶದಲ್ಲಿ ಮಿತ್ರಿಡೇಟಿಸ್-೬-ಯೂಪಟರ್ (ಕ್ರಿ.ಪೂ.೧೩೫-ಕ್ರಿ.ಪೂ.೬೩) ಎಂಬುವವನು ಹುಟ್ಟಿದ.

ಈತನು ಮಹಾನ್ ಶಕ್ತಿಶಾಲಿ, ಕ್ರೂರಿ ಹಾಗೂ ಚಾಣಾಕ್ಷನಾಗಿದ್ದ. ಮುಂದಿನ ದಿನಗಳಲ್ಲಿ ಈತನು ಮಿತ್ರಿಡೇಟಿಸ್, ದಿ ಗ್ರೇಟ್ ಎಂಬ ಹೆಸರನ್ನು ಗಳಿಸಿದ. ಜತೆಯಲ್ಲಿ ವಿಷದ ಅರಸ (ದಿ ಪಾಯ್ಸನ್‌ಕಿಂಗ್) ಎಂದೂ ಹೆಸರಾದ. ಇದಕ್ಕೆ ಕಾರಣದೆ. ಈತನ ತಾಯಿಯೇ, ಈತನ ತಂದೆಗೆ ವಿಷ ಪ್ರಾಶನವನ್ನು ಮಾಡಿ ಕೊಂದಳಂತೆ.
ಹಾಗಾಗಿ ಯಾರಾದರೂ ವಿಷ ಪ್ರಯೋಗದಿಂದ ತನ್ನನ್ನು ಕೊಲ್ಲಬಹುದೆಂಬ ಭೀತಿಯು ಈತನನ್ನು ಕಾಡುತ್ತಿತ್ತು. ತನ್ನ ತಂದೆಯನ್ನು ಕೊಲ್ಲಲು ಬಳಸಿದ ವಿಷವನ್ನೇ ಅತ್ಯಲ್ಪ ಪ್ರಮಾಣದಲ್ಲಿ ಸೇವಿಸುತ್ತ ಬಂದ. (ಚಾಣಕ್ಯ-ಚಂದ್ರಗುಪ್ತರ ಕಾಲದ ವಿಷ ಕನ್ಯೆಯ ಪ್ರಸಂಗ ನೆನಪಿಗೆ ಬರುತ್ತದೆ) ನಂತರ ತನ್ನ ಮೇಲೆ ಯಾವುದೇ ವಿಷವನ್ನು ಪ್ರಯೋಗಿಸಿದರೂ ಅದನ್ನು ನೀರ್ವಿರ್ಯಗೊಳಿಸುವಂತಹ ಶಕ್ತಿಶಾಲಿ ಪ್ರತಿ ವಿಷವನ್ನು ರೂಪಿಸಿದ. ಈ ಪ್ರತಿವಿಷವನ್ನು ನೂರಕ್ಕೆ ನೂರರಷ್ಟು
ಪ್ರಮಾಣಬದ್ಧವಾಗಿಸಲು, ಅಸಂಖ್ಯ ಖೈದಿಗಳ ಮೇಲೆ ಪ್ರಯೋಗಿಸಿದ.

ಕೊನೆಗೆ ಎಲ್ಲ ವಿಷವನ್ನು ನಿವಾರಿಸಬಲ್ಲ ಅದ್ಭುತ ಔಷಧವನ್ನು ರೂಪಿಸಿದನಂತೆ. ಈ ಪ್ರತಿವಿಷದಲ್ಲಿ ೪೫ ವಿವಿಧ ವಸ್ತುಗಳಿದ್ದವು. ಅವುಗಳಲ್ಲಿ ಅಪೀಮು, ಮಿರ್ರಾ,
ಅರಸಿನ, ಶುಂಠಿ, ಚಕ್ಕೆ, ಹರಳು ಮುಖ್ಯವಾಗಿದ್ದವು. ಈ ಪ್ರತಿವಿಷವು ಮಿತ್ರಿಡೇಟ್/ಮಿತ್ರಿಡೇಟಿಕಮ್/ ಮಿತ್ರಿಡೇಟಿಯಂ ಎಂಬ ನಾನಾ ಹೆಸರುಗಳಲ್ಲಿ ಪ್ರಸಿದ್ಧಿ ಯಾಯಿತು. ಈ ಮಿತ್ರಿಡೇಟಿಸ್‌ನನ್ನು ರೋಮನ್ನರು ಸೋಲಿಸಿದರು. ಆಗ ಅವರಿಗೆ, ಮಿತ್ರಿಡೇಟಿಸ್ ತನ್ನ ಸ್ವಹಸ್ತಾಕ್ಷರದಲ್ಲಿ ಬರೆದಿದ್ದ ಮಿತ್ರಿಡೇಟ್ ಪ್ರತಿವಿಷವನ್ನು ತಯಾರಿಸುವ ರಹಸ್ಯ ಪ್ರತಿಯು ದೊರೆಯಿತಂತೆ. ಆಗ ರೋಮನ್ನರು ತಮ್ಮದೇ ಆದ ಮಿತ್ರಿಡೇಟ್ ಪ್ರತಿವಿಷವನ್ನು ರೂಪಿಸಲಾರಂಭಿಸಿದರು.

ರೋಮನ್ ವೈದ್ಯ ಔಲಸ್ ಕಾರ್ನೀಲಿಯಸ್ ಸೆಲ್ಸಸ್ (ಕ್ರಿ.ಪೂ.೨೫-ಕ್ರಿ.ಶ.೫೦) ಡೀ ಮೆಡಿಸಿನ ಎಂಬ ವೈದ್ಯಕೀಯ ಗ್ರಂಥವನ್ನು ಬರೆದ. ಇದರಲ್ಲಿ ಮಿತ್ರಿಡೇಟ್ ತಯಾರಿಕೆಯನ್ನು ಪರಿಷ್ಕರಿಸಿ, ಅದಕ್ಕೆ ಆಂಟಿಡೋಟಮ್ ಮಿತ್ರಿಡೇಟಿಕಮ್ ಎಂದು ಹೆಸರನ್ನು ನೀಡಿದ. ಇದರ ತಯಾರಿಕೆಯಲ್ಲಿ ಬಳಸಿದ ಎಲ್ಲ ೬೪ ಘಟಕಗಳ ಹೆಸರು ಮತ್ತು ಅವುಗಳ ಪ್ರಮಾಣವನ್ನು ಬರೆದ. ರೋಮನ್ ಅರಸ ನೀರೊ ಎಂದು ಹೆಸರಾದ ನೀರೋಕ್ಲಾಡಿಯಸ್ ಸೀಸರ್ ಅಗಸ್ಟಸ್ ಜರ್ಮೇನಿಕಸ್ (ಕ್ರಿ.ಶ.೩೭-ಕ್ರಿ.ಶ.೬೮) ರಾಜನ ಖಾಸಾ ವೈದ್ಯ ಆಂಡ್ರೋ ಮ್ಯಾಕಸ್, ದಿ ಎಲ್ಡರ್ (ಯಂಗರ್ ಅವನ ಮಗ) ಮಿತ್ರಿಡೇಟನ್ನು ಮತ್ತೆ ಪರಿಷ್ಕರಿಸಿದ. ತಾನು ಪರಿಷ್ಕರಿಸಿದ ‘ಮಿತ್ರಿಡೇಟಿಗೆ ಥೇರಿಯಾಕ ಆಂಡ್ರೋಮ್ಯಾಕೈ’ ಎಂಬ ಹೊಸ ಹೆಸರನ್ನು ನೀಡಿದ.

ಇದರಲ್ಲಿ ವೈಪರ್ ಹಾವಿನ ಮಾಂಸ ಮತ್ತು ಅಪೀಮನ್ನು ಬೆರೆಸಿದ. ಇದು ‘ಥೇರಿಯಾಕ್’ ಅಥವಾ ‘ಥೇರಿಯಾಕ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಯಿತು. ರೋಮನ್ ವೈದ್ಯ ಗ್ಯಾಲನ್ (ಕ್ರಿ.ಶ.೧೨೯-ಕ್ರಿ.ಶ.-೨೧೬) ಥೇರಿಯಾಕವನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ಸಮಗ್ರವಾಗಿ ವಿವರಿಸಲು ಒಂದು ಇಡೀ ಪುಸ್ತಕವನ್ನೇ
ಮೀಸಲಿಟ್ಟ. ರೋಮನ್ ಸಾಮ್ರಾಟ ಮಾರ್ಕಸ್ ಅರಿಲಿಯಸ್ (ಕ್ರಿ.ಶ.೧೨೦-ಕ್ರಿ.ಶ.೧೮೦) ಗ್ಯಾಲನ್ ತಯಾರಿಸಿದ ಥೇರಿಯಾಕವನ್ನು ಪ್ರತಿದಿನವೂ ಸೇವಿಸು ತ್ತಿದ್ದ. ಪ್ರಾಚೀನ ವಿಶ್ವದ ಪ್ರಮುಖ ವಾಣಿಜ್ಯ ರಸ್ತೆಮಾರ್ಗಗಳಲ್ಲಿ ರೇಷ್ಮೆ ರಸ್ತೆ (ಸಿಲ್ಕ್ ರೂಟ್) ಮುಖ್ಯವಾದದ್ದು. ಇದು ಪೂರ್ವ ಗೋಳವನ್ನು ಪಶ್ಚಿಮ ಗೋಳ ದೊಡನೆ ಸಂಪರ್ಕಿಸುವ ಪ್ರಮುಖ ಮಾರ್ಗ. ಆಗ್ನೇಯ ಏಷ್ಯಾ, ಪೂರ್ವ ಏಷ್ಯಾ, ದಕ್ಷಿಣ ಏಷ್ಯಾ, ಪರ್ಷಿಯ, ಅರೇಬಿಯ, ಯೂರೋಪ್ ಹಾಗೂ ಪೂರ್ವ ಆಫ್ರಿಕ ದೇಶಗಳ ಆರ್ಥಿಕ ಚೇತರಿಕೆಗೆ ಈ ಮಾರ್ಗವು ಅಪಾರ ಪ್ರಮಾಣದಲ್ಲಿ ನೆರವನ್ನು ನೀಡುತ್ತಿತ್ತು.

ಈ ಮಾರ್ಗದ ಮೂಲಕ ಥೇರಿಯಾಕ ಪ್ರಧಾನವಾಗಿ ಪರ್ಷಿಯ, ಚೀನ ಮತ್ತು ಭಾರತವನ್ನು ತಲುಪಿತು. ಮಧ್ಯಯುಗದ ಯೂರೋಪಿನಲ್ಲಿ ಸರ್ವಶಕ್ತ ವಿಷಹಾರಿಯೆಂದು ಹೆಸರಾಗಿದ್ದ ಯೂಥೇರಿಯಾಕ ಸರ್ವರೋಗ ಗುಣಕಾರಿ ಎಂದೂ ಪ್ರಖ್ಯಾತವಾಯಿತು. ೧೨ನೆಯ ಶತಮಾನದ ವೆನಿಸ್ ಟ್ರಿಯಾಕಲ್ ಎನ್ನುವ ಹೊಸ ಔಷಧವು ಸಿದ್ಧವಾಯಿತು. ಇದರಲ್ಲಿ ಹಲವು ಹೆಚ್ಚುವರಿ ಖನಿಜಗಳನ್ನು, ವಿಷಗಳನ್ನು, ಪ್ರಾಣಿಗಳ ಮಾಂಸವನ್ನು, ಮೂಲಿಕೆಗಳನ್ನು ಬೆರೆಸಿದ್ದರು. ಇದು ಬ್ಯುಬೋನಿಕ್ ಪ್ಲೇಗ್ ಸೋಂಕನ್ನು ಸಹ ಗುಣ ಪಡಿಸುತ್ತದೆ ಎಂದು ಹೆಸರಾಗಿ ಯೂರೋಪಿನಲ್ಲಿ ಅತ್ಯಂತ ಜನಪ್ರಿಯ ಹಾಗೂ ದುಬಾರಿ ಔಷಧವಾಗಿ ಮಾರಾಟ ವಾಗಲಾರಂಭಿಸಿತು. ಕಾಲಕ್ರಮೇಣ ಹೊಸ ಹೊಸ ಯೂಥೇರಿಯಾಕಗಳಲ್ಲಿ ೧೦೦ಕ್ಕೂ ಹೆಚ್ಚು ವಸ್ತುಗಳು ಸೇರ್ಪಡೆಯಾದವು.

ಮಾನವ ಕುಲದ ಇತಿಹಾಸದಲ್ಲಿ ೨ ವಸ್ತುಗಳಿಗಾಗಿ ತುಂಬಾ ಹುಡುಕಾಟ ನಡೆದಿದೆ. ಮೊದಲನೆ ಯದು ಸಾವನ್ನೇ ತರದ ಅಮೃತ. ಹಾಗೂ ಎರಡನೆ ಯದು ಕೀಳು ಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸುವ ರಸವಿದ್ಯೆ.