Wednesday, 18th September 2024

ದ್ವೀಪದಲ್ಲಿ 18 ವರ್ಷಗಳ ಏಕಾಂಗಿ ಬದುಕು

ಶಶಾಂಕಣ

shashidhara.halady@gmail.com

ಈ ಜಗತ್ತಿನಲ್ಲಿ ಅತಿ ಏಕಾಂಗಿ ಬದುಕನ್ನು ಸವೆಸಿದ ವ್ಯಕ್ತಿ ಯಾರು ಎಂದು ಹುಡುಕುತ್ತಾ ಪಟ್ಟಿ ಮಾಡತೊಡಗಿದರೆ, ಜೌನಾ ಮರಿಯಾ ಎಂಬ ಬುಡಕಟ್ಟು
ಮಹಿಳೆಯ ಹೆಸರು ಪಟ್ಟಿಯ ಮೇಲ್ಭಾಗದಲ್ಲಿ ಕಾಣಿಸಲೇಬೇಕು. ಹಾಗೆ ನೋಡಿದರೆ, ಜೌನಾ ಮರಿಯಾ ಎಂಬುದು ಆಕೆಯ ನಿಜವಾದ ಹೆಸರೇನಲ್ಲ;
ಬದಲಿಗೆ, ಆಕೆಯು ಸಾಯುವಾಗ ನೀಡಿದ ಸ್ಪ್ಯಾನಿಷ್ ಹೆಸರು. ಅವಳ ನಿಜವಾದ ಹೆಸರೇನು ಎಂದು ಯಾರಿಗೂ ಗೊತ್ತಿಲ್ಲ!

ಏಕೆಂದರೆ, ಸಾಯುವಾಗ ಅವಳು ಮಾತನಾಡುತ್ತಿದ್ದ ಭಾಷೆಯನ್ನು ಗುರುತಿಸಬಲ್ಲ ಆಕೆಯ ಕುಲದ ಎಲ್ಲರೂ ಸತ್ತು ಹೋಗಿದ್ದರು. ಆಧುನಿಕ ನಾಗರಿಕತೆಯ ವಿಸ್ತರಣೆಯ ಪ್ರವಾಹದಲ್ಲಿ ಆಕೆ ಮತ್ತು ಆಕೆಯ ಬುಡಕಟ್ಟಿನ ಎಲ್ಲರೂ ಕೊಚ್ಚಿಹೋಗಿದ್ದರು, ಸತ್ತುಹೋಗಿದ್ದರು! ಈ ಜಗತ್ತಿನ ಹಲವು ಬುಡಕಟ್ಟು ಜನರಿಗೆ ತಮ್ಮ ಪಾಡಿಗೆ ತಾವು ವಾಸಿಸಲು ಈ ಆಧುನಿಕ ಜಗತ್ತಿನಲ್ಲಿ ಸಾಧ್ಯವಿಲ್ಲ. ಈಕೆಯ ಕುಲದ ಉದಾಹರಣೆಯು, ಒಂದು ದುರಂತ ಅಧ್ಯಾಯದ ಪುಟಗಳಂತೆ ಕಾಣುತ್ತವೆ.

೧೯.೧೦.೧೮೫೩ರಂದು ಇಹಲೋಕ ತ್ಯಜಿಸಿದ ಜೌನಾ ಮರಿಯಾಳ ಜನ್ಮ ದಿನಾಂಕ ಗೊತ್ತಿಲ್ಲ; ಸುಮಾರು ೫೦ ವರ್ಷದ ಮಹಿಳೆ ಎಂದು ದಾಖಲಿಸ
ಲಾಗಿದೆ. ವಿಶೇಷವೆಂದರೆ, ಆಕೆಯದು ಎಂದು ಹೇಳಲಾದ ಫೋಟೋ ಸಹ ಲಭ್ಯವಿದೆ! ಕ್ಯಾಲಿಫೋರ್ನಿಯಾ ತೀರದಿಂದಾಚೆ, ಸಮುದ್ರದಲ್ಲಿರುವ
ಸ್ಯಾನ್ ನಿಕೊಲಾಸ್ ದ್ವೀಪದ ಕೊನೆಯ ನಿವಾಸಿ ಅವಳು. ಆ ದ್ವೀಪದಲ್ಲಿ ವಾಸವಾಗಿದ್ದ ನಿಕೊಲೆನೋ ಬುಡಕಟ್ಟು ಜನರು ಇಂದು ನಾಮಾವಶೇಷವಾಗಿ
ದ್ದಾರೆ. ಜೌನಾ ಮರಿಯಾಳು ಆ ಬುಡಕಟ್ಟಿನ ಕೊನೆಯ ವ್ಯಕ್ತಿ. ಆ ಬುಡಕಟ್ಟಿನ ಜನರು ಹೇಗೆ ನಾಶವಾಗಿ ಹೋದರು ಎಂಬುದರ ವಿವರವು ದಾಖಲಾಗಿದೆ.

ಇಂದಿನ ಆಧುನಿಕ ಜಗತ್ತು, ನಾನಾ ರೀತಿಯ ನಾಗರಿಕ ಸೌಲಭ್ಯಗಳನ್ನು ಪಡೆದು ಸುಖ ಜೀವನ ಕಟ್ಟಿಕೊಳ್ಳುವಲ್ಲಿ, ನಿಕೊಲೆನೋದಂಥ ಸಾವಿರಾರು ಬುಡಕಟ್ಟು ಜನಾಂಗಗಳ ತ್ಯಾಗವಿತ್ತು ಎಂಬುದನ್ನು ಜೌನಾ ಮರಿಯಾಳ ಕಥೆಯು ತೋರಿಸಿಕೊಡುತ್ತದೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ ನಿಂದ ಸ್ಯಾನ್ ನಿಕೊಲಾಸ್ ದ್ವೀಪಕ್ಕೆ ಸುಮಾರು ೧೨೦ ಮೈಲು ದೂರ. ಅಲ್ಲಿರುವ ಚಾನೆಲ್ ಐಲ್ಯಾಂಡ್ಸ್ ಭಾಗವಾಗಿರುವ ಎಂಟು ದ್ವೀಪಗಳ ಪೈಕಿ, ಸ್ಯಾನ್ ನಿಕೊಲಾಸ್ ದ್ವೀಪವು ಹೆಚ್ಚು ಏಕಾಂಗಿ. ಆದರೆ, ಈ ಎಲ್ಲಾ ದ್ವೀಪಗಳಲ್ಲಿ ಸುಮಾರು ೧೦,೦೦೦ ವರ್ಷಗಳಿಂದಲೂ ಜನವಸತಿ ಇತ್ತು!

ಈಚಿನ ದಶಕಗಳಲ್ಲಿ ಅಲ್ಲಿ ಲಭ್ಯವಾದ ಪುರಾತನ ಅಸ್ಥಿಪಂಜರಗಳ ರೇಡಿಯೋ ಕಾರ್ಬನ್ ಡೇಟಿಂಗ್ ಇದನ್ನು ಸ್ಪಷ್ಟಪಡಿಸಿದ್ದು, ಪುರಾತನ ಮಾನವನ ಸಮುದ್ರಯಾನದ ಸಾಹಸವನ್ನು ಋಜುವಾತುಪಡಿಸಿವೆ. ಈ ದ್ವೀಪಗಳಲ್ಲಿ ತಮ್ಮ ಪಾಡಿಗೆ ಇದ್ದ ಹಲವು ಬುಡಕಟ್ಟು ಜನಾಂಗಗಳು, ತುಪ್ಪಳ ಮತ್ತು ಇತರ ಸಮುದ್ರ ಉತ್ಪನ್ನಗಳನ್ನು ವ್ಯಾಪಾರ ಮಾಡಿ ಜೀವಿಸುವುದನ್ನು ಕಲಿತರು. ಆದರೆ ಹತ್ತೊಂಬತ್ತನೆಯ ಶತಮಾನದಲ್ಲಿ ಇಲ್ಲಿಗೆ ತುಪ್ಪಳದ ವ್ಯಾಪಾರಕ್ಕೆ ಬಂದ ರಷ್ಯನ್ ಮತ್ತು ಅಮೆರಿಕನ್ ಕಂಪನಿಯ (ಫರ್ ಟ್ಯಾಪರ್) ಅಲಾಸ್ಕದ ನೀರುನಾಯಿ ಬೇಟೆಗಾರರು, ಅಲ್ಲಿನ ನೂರಾರು ಬುಡಕಟ್ಟು ಜನರನ್ನು ಸಾಯಿಸಿದರು.

ಇದು ನಡೆದದ್ದು ೧೮೧೪ರಲ್ಲಿ. ನಂತರವೂ ಈ ದ್ವೀಪಗಳಲ್ಲಿ ಬುಡಕಟ್ಟು ಜನರು ಬದುಕುಳಿದಿದ್ದರು. ಆಗ ಈ ದ್ವೀಪಗಳ ಮೇಲೆ ಕಣ್ಣು ಹಾಕಿದವರು,
ಸ್ಪ್ಯಾನಿಷ್ ಮಿಷನರಿಗಳು. ಇವರನ್ನು ಒತ್ತಾಯ ಪೂರ್ವಕವಾಗಿಯೋ, ಉತ್ತಮ ಬದುಕಿನ ಭರವಸೆ ನೀಡಿಯೋ, ಹಡಗಿನಲ್ಲಿ ತುಂಬಿಸಿ, ಕ್ಯಾಲಿಪೋರ್ನಿಯಾ ಸಂತಾ ಮಾರಿಯಾ ಹತ್ತಿರದ ಕ್ಯಾಂಪ್ ಗಳಿಗೆ ಕರೆದುಕೊಂಡು ಹೋದರು. ಬುಡಕಟ್ಟು ಜನರನ್ನು ನಾಗರೀಕರಣ ಪ್ರಕ್ರಿಯೆಗೆ ಒಳಪಡಿಸುವುದರ ಭಾಗವಾಗಿ, ೧೮೩೦ರ ದಶಕದಲ್ಲಿ ಮೇನ್ ಲ್ಯಾಂಡ್‌ಗೆ ಕರೆದುಕೊಂಡು ಹೋದ ಮಿಷನರಿಗಳು, ಅವರಿಗೆ ಶಿಕ್ಷಣ ನೀಡುವ ಪ್ರಯತ್ನ ಮಾಡಿದರು.

ಇದೇ ರೀತಿ, ೧೮೩೫ರಲ್ಲಿ ಸ್ಯಾನ್ ನಿಕೊಲಾಸ್ ದ್ವೀಪಕ್ಕೆ ಬಂದ ಪೀರ್ ಎಸ್ ನಡಾ ಎಂಬ ಹೆಸರಿನ ಹಡಗು, ಅಲ್ಲಿನ ಎಲ್ಲಾ ಬುಡಕಟ್ಟು ಜನರನ್ನು ಹಡಗಿಗೆ
ತುಂಬಿಸಿಕೊಂಡು, ಸಂತಾ ಬಾರ್ಬಾರಾ ಕಡೆಗೆ ಹೊರಟಿತು. ಅದರ ಕ್ಯಾಪ್ಟನ್ ಚಾರ್ಲ್ಸ್ ಹುಬ್ಬಾರ್ಡ್. ಆದರೆ, ಒಬ್ಬ ಮಹಿಳೆ ಮಾತ್ರ, ಆ ದ್ವೀಪದಲ್ಲಿ ಉಳಿದುಹೋದಳು! ಆಕೆ ತನ್ನ ದ್ವೀಪವನ್ನು ಬಿಟ್ಟು ಬರಲಾಗದೇ ಕದ್ದು ಉಳಿದುಕೊಂಡಳೋ ಅಥವಾ ಬೇರಾವುದೋ ಕಾರಣದಿಂದ ಉಳಿದು ಕೊಂಡಳೋ ಸ್ಪಷ್ಟವಿಲ್ಲ. ತನ್ನ ಪುಟ್ಟ ಮಗ ದ್ವೀಪದಲ್ಲೇ ಉಳಿದದ್ದರಿಂದ, ಆಕೆ ಹಡಗಿನಿಂದ ತಪ್ಪಿಸಿಕೊಂಡು ಓಡಿಹೋದಳು ಎಂದು ಸಹ ಕೆಲವು ನಾವಿಕರು ಹೇಳಿದ್ದರು. ಅದೇನೇ ಇರಲಿ, ಬಿರುಗಾಳಿ ಬಂದದ್ದರಿಂದ, ಆಕೆಯೊಬ್ಬಳಿಗಾಗಿ ಇನ್ನು ಕಾಯುವುದಕ್ಕೆ ಸಾಧ್ಯವಿಲ್ಲ ಎಂದು ಹಡಗು, ಕ್ಯಾಲಿಪೋರ್ನಿಯಾದತ್ತ ಹೊರಟಿತು- ಆಕೆಯನ್ನು ಆ ದ್ವೀಪದಲ್ಲಿ ಏಕಾಂಗಿಯಾಗಿ ಬಿಟ್ಟು.

ಆನಂತರ, ಆಕೆಯನ್ನು ನಾಗರಿಕ ಮಾನವ ನೋಡಿದ್ದು ೧೮೫೩ರಲ್ಲಿ! ಈ ರೀತಿ ಒಬ್ಬ ಬುಡಕಟ್ಟು ಮಹಿಳೆಯು ಆ ದ್ವೀಪದಲ್ಲಿ ಉಳಿದುಹೋಗಿದ್ದಾಳೆ
ಎಂಬುದು ಗೊತ್ತಿತ್ತು. ಅವಳನ್ನು ಹುಡುಕುವ ಸಣ್ಣ ಮಟ್ಟದ ಪ್ರಯತ್ನವೂ ನಡೆದಿತ್ತು; ಆಕೆಯನ್ನು ಹುಡುಕುತ್ತಾ ಬಂದಿದ್ದ ನಾವಿಕರಿಗೆ ಯಾರೂ
ಕಾಣಿಸದೇ ಇದ್ದುದರಿಂದ, ಅವಳ ದ್ವೀಪವಾಸ ಮುಂದುವರಿಯಿತು. ಜಾರ್ಜ್ ನಿದೆವರ್ ಎಂಬ ತುಪ್ಪಳದ ವ್ಯಾಪಾರಿಗೆ ಇವಳ ಕಥೆಯು ಬಹಳ
ಕುತೂಹಲಕಾರಿ ಎನಿಸಿ, ಆ ದಿಕ್ಕಿಗೆ ಸಮುದ್ರದಲ್ಲಿ ಹೋದಾಗಲೆಲ್ಲಾ, ನಿಕೊಲಾಸ್ ದ್ವೀಪಕ್ಕೆ ಭೇಟಿ ನೀಡಿ ಹುಡುಕುವ ಪ್ರಯತ್ನ ನಡೆಸುತ್ತಿದ್ದ.

ಕೊನೆಗೆ, ೧೮೫೩ರಲ್ಲಿ ಆತನ ಪ್ರಯತ್ನಕ್ಕೆ ಯಶ ದೊರಕಿತು. ಆತನ ತಂಡದ ಕಾರ್ಲ್ ಡಿಟ್‌ಮ್ಯಾನ್ ಎಂಬಾತ, ಆ ದ್ವೀಪದ ತೀರದಲ್ಲಿ ಮನುಷ್ಯನ ಹೆಜ್ಜೆ
ಗುರುತುಗಳನ್ನು ಕಂಡ. ಅದನ್ನೇ ಅನುಸರಿಸಿ ಹೊರಟಾಗ ಅಚ್ಚರಿ ಕಾದಿತ್ತು! ಒಂದು ಗುಡಿಸಲಿನಲ್ಲಿ ಒಬ್ಬಳು ಬುಡಕಟ್ಟು ಮಹಿಳೆ ವಾಸಿಸುತ್ತಿದ್ದಳು!
ನೀರುಕಾಗೆಗಳ ಚರ್ಮದಿಂದ ಮಾಡಿದ ಒಂದು ಸ್ಕರ್ಟ್ ಧರಿಸಿದ್ದಳು, ಬುಟ್ಟಿಗಳನ್ನು ಹೆಣೆಯುತ್ತಿದ್ದಳು. ಮೃದ್ವಂಗಿ, ಮೀನುಗಳನ್ನು ಬೇಯಿಸಿ ತಿಂದು
ಜೀವ ಉಳಿಸಿಕೊಂಡಿದ್ದಳು. ಬೇಸರ ಕಳೆಯಲು ತನ್ನದೇ ಭಾಷೆಯಲ್ಲಿ ಹಾಡುತ್ತಿದ್ದಳು!

ದ್ವೀಪದ ಎತ್ತರ ಭಾಗದಲ್ಲಿದ್ದ ಗುಡಿಸಲಿನಲ್ಲಿ ೧೮ ವರ್ಷ ಏಕಾಂಗಿಯಾಗಿ ವಾಸಿಸಿದ್ದಳು. ತಿಮಿಂಗಿಲಗಳ ಮೂಳೆಗಳಿಂದ ಆ ಗುಡಿಸಲನ್ನು ನಿರ್ಮಿಸಲಾಗಿತ್ತು. ಆ ದ್ವೀಪ ದಲ್ಲಿರುವ ಒಂದು ಗುಹೆಯಲ್ಲೂ ಆಕೆ ಕೆಲವು ಕಾಲ ವಾಸಿಸಿರಬೇಕು ಎಂದು ನಂತರ ಇತಿಹಾಸ ತಜ್ಞರು ಗುರುತಿಸಿದರು.
ಆ ಏಕಾಂಗಿ ಮಹಿಳೆಯನ್ನು ಹಡಗಿಗೆ ಹತ್ತಿಸಿಕೊಂಡು, ಸಂತಾ ಬಾರ್ಬಾರಾದಲ್ಲಿರುವ ಮಿಷನರಿ ಗಳ ಕೇಂದ್ರಕ್ಕೆ ತರಲಾಯಿತು. ಅವಳನ್ನು ಹಿಡಿದು
ತಂದ ನಾವಿಕರಲ್ಲಿದ್ದ ಭರವಸೆ ಎಂದರೆ, ಮಿಷನರಿ ಕೇಂದ್ರದಲ್ಲಿರುವ ಇತರ ಬುಡಕಟ್ಟು ಜನರ ಬಳಿ ಆಕೆ ಮಾತನಾಡುತ್ತಾಳೆ, ಆ ಮೂಲಕ ಆಕೆಯ ಹದಿ
ನೆಂಟು ವರ್ಷಗಳ ಏಕಾಂಗಿ ಮತ್ತು ಸಾಹಸಿ ಬದುಕಿನ ವಿವರಗಳನ್ನು ತಿಳಿಯಬಹುದು ಎಂಬುದು.

ಆದರೇನು ಮಾಡುವುದು? ಹದಿನೆಂಟು ವರ್ಷಗಳ ಹಿಂದೆ ಅವಳ ದ್ವೀಪದಿಂದ ಕರೆತಂದಿದ್ದ ನಿಕೊಲೆನೋ ಬುಡಕಟ್ಟಿನ ಬೇರೆಲ್ಲಾ ಜನರೂ ಅಷ್ಟರಲ್ಲಿ ಸತ್ತುಹೋಗಿದ್ದರು! ಆ ಮಹಿಳೆಯು ತನ್ನ ಭಾಷೆಯ ಕೆಲವು ಶಬ್ದಗಳನ್ನು, ಒಂದೆರಡು ಹಾಡುಗಳನ್ನು ಹಾಡುತ್ತಿದ್ದಳು. ಆದರೆ, ಅದು ನಿಕೊಲೆನೋ
ಭಾಷೆ. ಅದನ್ನು ಅರ್ಥಮಾಡಿಕೊಳ್ಳುವವರು ಯಾರೂ ಬದುಕಿರಲಿಲ್ಲ! ನಿಜ ಹೇಳಬೇಕೆಂದರೆ, ಅವಳ ನಿಜವಾದ ಹೆಸರು ಸಹ ಅಲ್ಲಿದ್ದವರಿಗೆ
ಗೊತ್ತಾಗಲಿಲ್ಲ. ಅಲ್ಲಿ ಹಲವು ಬುಡಕಟ್ಟು ಜನರು ವಾಸಿಸಿದ್ದರು. ಅಂದರೆ ಅವರೆಲ್ಲರನ್ನೂ ಮಿಷನರಿಗಳು ಕರೆತಂದು, ಅವರಿಗೆ ನಾಗರಿಕತೆಯ ಪಾಠ
ಗಳನ್ನು ಕಲಿಸುವ ಪ್ರಯತ್ನ ಮಾಡಿದ್ದರು.

ಅವರೆಲ್ಲರನ್ನೂ ಕರೆಸಿ, ಮರಿಯಾಳ ಮಾತಿನ ಅರ್ಥ ತಿಳಿಯುವ ಪ್ರಯತ್ನ ಮಾಡಲಾಯಿತು. ಆದರೆ, ಯಶಸ್ಸು ದೊರಕಲಿಲ್ಲ. ಆ ಏಕಾಂಗಿ ಬುಡಕಟ್ಟು ಮಹಿಳೆಯು, ಮಿಷನರಿ ಗಳ ಕೇಂದ್ರಕ್ಕೆ ಬಂದ ನಂತರ ಬಹಳ ಖುಷಿಯಾಗಿದ್ದಳು ಎಂದು ದಾಖಲಾಗಿದೆ. ಹದಿನೆಂಟು ವರ್ಷಗಳ ಕಾಲ ಅವಳು ಆ ದ್ವೀಪ ದಲ್ಲಿ ನಡೆಸಿದ ಏಕಾಂಗಿ ಬದುಕಿನ ನಂತರ, ನಾಗರಿಕ ಜಗತ್ತಿನ ಸೌಲಭ್ಯಗಳನ್ನು ಕಂಡು ಬೆರಗಾಗಿದ್ದಳು. ಅಲ್ಲೆಲ್ಲಾ ಓಡಾಡುತ್ತಿದ್ದ ಕುದುರೆಗಳನ್ನು ಕಂಡು ಅಚ್ಚರಿಗೊಂಡಳು.

ಯುರೋಪಿಯನ್ನರು ಧರಿಸುತ್ತಿದ್ದ ಬಟ್ಟೆಯನ್ನು ಕಂಡು ಸಂತಸಪಟ್ಟಳು. ತಾನೂ ಅಂಥ ಬಟ್ಟೆಯನ್ನು ಧರಿಸಿದಳು. ‘ಮಧ್ಯ ಎತ್ತರ, ತುಸು ದಪ್ಪ. ವಯಸ್ಸು ಸುಮಾರು ೫೦. ಆಕೆ ಚಟುವಟಿಕೆ ಯಿಂದಿದ್ದಳು. ಲವಲವಿಕೆಯ ಮುಖ, ಸದಾ ನಗುತ್ತಿದ್ದಳು..’ ಎಂದು ಆಕೆಯನ್ನು ಕರೆತಂದ ನಿಡೆವರ್ ಎಂಬಾತನು ಆಕೆಯ ಕುರಿತು ಬರೆದಿಟ್ಟಿದ್ದಾನೆ. ಹದಿನೆಂಟು ವರ್ಷಗಳ ಕಾಲ ಏಕಾಂಗಿಯಾಗಿ ದ್ವೀಪದಲ್ಲಿ ಬದುಕಿದ್ದ ಅವಳ ಸಾಹಸವು ಅಲ್ಲೆಲ್ಲಾ
ಪ್ರಚಾರಗೊಂಡು, ಅವಳನ್ನು ನೋಡಲು ಸಂತಾ ಬಾರ್ಬಾರಾ ಪಟ್ಟಣದ ಯುರೋಪಿಯನ್ ಜನರು ಬಂದರು. ಅವರನ್ನು ಕಂಡು ಜೌನಾ ಮರಿಯಾಗೆ
ಇನ್ನಷ್ಟು ಖುಷಿ. ಎಲ್ಲರ ಎದುರೂ ಆಕೆ ಹಾಡುತ್ತಿದ್ದಳಂತೆ! ತನ್ನ ಭಾಷೆಯ ಹಾಡನ್ನು ಹಾಡುತ್ತಾ, ತನಗೆ ತಿಳಿದಂತೆ ನೃತ್ಯ ಮಾಡುತ್ತಿದ್ದ ಈಕೆಯನ್ನು
ಕಂಡು ಆಧುನಿಕ ಜನರು ಬೆರಗಾದರು. ಅವಳ ಹಾಡನ್ನು ಬರೆದಿಡುವ ಪ್ರಯತ್ನ ಮಾಡಿದರು.

ಅದೇನೇ ಇದ್ದರೂ, ಆ ಏಕಾಂಗಿ ಮಹಿಳೆಯ ಭಾಷೆಯನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆಕೆಯ ದ್ವೀಪದಿಂದ ಹದಿನೆಂಟು
ವರ್ಷ ಮುಂಚೆಯೇ ಆ ಮಿಷನರಿ ಕೇಂದ್ರಕ್ಕೆ ಬಂದಿದ್ದವರೆಲ್ಲರೂ ಬೇಧಿ ಮತ್ತು ಇತರ ಕಾಯಿಲೆ ಗಳಿಂದಾಗಿ ಸತ್ತುಹೋಗಿದ್ದರು. ಹದಿನೆಂಟು ವರ್ಷ
ಗಳ ನಂತರ ನಾಗರಿಕ ಜಗತ್ತಿಗೆ ಬಂದಿದ್ದ ಅವಳು, ಕೊನೆಗೂ ತನಗೆ ಆ ದ್ವೀಪದಿಂದ ಬಿಡುಗಡೆ ಸಿಕ್ಕಿತು ಎಂದು ಸಂತಸಪಟ್ಟಿರಲೇಬೇಕು. ಜನರನ್ನು ಕಂಡು
ಸಂತಸದಿಂದ ಹಾಡುತ್ತಾ, ನೃತ್ಯ ಮಾಡುತ್ತಾ, ಹೊಸ ಬದುಕಿಗೆ ಹೊಂದಿಕೊಳ್ಳುವ ಪ್ರಯತ್ನ ನಡೆಸಿದ್ದಳು.

ಆಕೆಯು ತನ್ನ ಏಕಾಂಗಿ ದಿನಗಳಲ್ಲಿ ನಾಲ್ಕು ವಿಧದ ಬುಟ್ಟಿ ಹೆಣೆಯುತ್ತಾ ಇದ್ದಳಂತೆ. ಮೃದ್ವಂಗಿಗಳನ್ನು ಮತ್ತು ಮೀನುಗಳನ್ನು ತಿಂದು ಬದುಕಿದ್ದಳಂತೆ.
ಗುಹೆಯಲ್ಲಿ ಉರಿಯುತ್ತಿದ್ದ ಬೆಂಕಿಯಿಂದ ಆಹಾರವನ್ನು ಬೇಯಿಸಿಕೊಳ್ಳುತ್ತಿದ್ದಳಂತೆ. ಈಗ, ಅಂದರೆ ಸಂತಾ ಬಾರ್ಬಾರಾಕ್ಕೆ ಬಂದ ನಂತರ, ಇಲ್ಲಿನ ಹೊಸ ಹೊಸ ಆಹಾರಗಳನ್ನು ತಿನ್ನತೊಡಗಿದಳು. ಅದರಲ್ಲೂ ಮುಖ್ಯವಾಗಿ, ಆಕೆ ಜೋಳ, ತರಕಾರಿ ಮತ್ತು ಹಲವು ಹಣ್ಣುಗಳನ್ನು ಬಹಳ ಇಷ್ಟಪಟ್ಟು
ತಿನ್ನತೊಡಗಿದಳಂತೆ.

ಅದಕ್ಕೇ ಇರಬಹುದು, ದ್ವೀಪ ಬಿಟ್ಟು ಬಂದ ಏಳು ವಾರಗಳ ನಂತರ, ಆಕೆಗೆ ಬೇಧಿ ಆರಂಭವಾಯಿತು. ಆಕೆಗೆ ಮತ್ತು ಅವಳಂಥ ಬುಡಕಟ್ಟು ಜನರಿಗೆ
ಪ್ರತಿರೋಧ ಶಕ್ತಿ ಕಡಿಮೆ; ಆ ಬೇಧಿಯೇ ಆಕೆಯ ಜೀವವನ್ನು ಬಲಿತೆಗೆದುಕೊಂಡಿತು. ಆಕೆಯ ಮರಣದೊಂದಿಗೆ, ಆ ಬುಡಕಟ್ಟು ಜನಾಂಗದ ಕೊನೆಯ
ವ್ಯಕ್ತಿ ಸತ್ತಂತಾಯಿತು. ಸಾವಿರಾರು ವರ್ಷಗಳ ಕಾಲ ತಮ್ಮ ಪಾಡಿಗೆ ತಾವು ಆ ಪುಟ್ಟ ದ್ವೀಪದಲ್ಲಿ ವಾಸಿಸಿದ್ದ ನಿಕೊಲೆನೋ ಬುಡಕಟ್ಟು ಜನಾಂಗದವರು,
ಆಧುನಿಕ ಮಾನವನ ಸಂಪರ್ಕಕ್ಕೆ ಬಂದ ಎರಡು ಶತಮಾನಗಳ ಒಳಗೆ ಪೂರ್ಣವಾಗಿ ನಾಮಾವಶೇಷ ವಾಗಿದ್ದು ಒಂದು ದುರಂತ. ಇದು ನಿಕೊಲೆನೊ
ಮಾತ್ರವಲ್ಲ, ಅಂಥ ನೂರಾರು ಬುಡಕಟ್ಟು ಜನಾಂಗ ಗಳ ಕಥೆಯೂ ಆಗಿದೆ.

ಆಕೆ ನಿತ್ರಾಣಳಾಗಿ, ಇನ್ನೇನು ಸಾಯುತ್ತಾಳೆ ಎಂದು ಗೊತ್ತಾದಾಗ, -ದರ್ ಸ್ಯಾಂಚೆಜ್ ಎಂಬಾತನು ಆಕೆಗೆ ಜೌನಾ ಮರಿಯಾ ಎಂಬ ಸ್ಪ್ಯಾನಿಷ್ ಹೆಸರನ್ನು ನೀಡಿ, ಬ್ಯಾಪ್ಟೈಸ್ ಮಾಡಿದ. ತನ್ನ ಹುಟ್ಟು ಹೆಸರನ್ನು ಆಕೆ ಹೇಳಲು ಸಾಧ್ಯವಾಗದೇ ಇದ್ದುದರಿಂದಾಗಿ, ಇಂದು ಜೌನಾ ಮರಿಯಾ ಎಂದೇ ಅವಳನ್ನು ಗುರುತಿಸಲಾಗಿದೆ. ಆಕೆ ಉಪ ಯೋಗಿಸುತ್ತಿದ್ದ ನೀರಿನ ಪಾತ್ರೆ, ಬಟ್ಟೆಗಳು, ಆಕೆಯ ದ್ವೀಪದಿಂದ ತಂದಿದ್ದ ಮೂಳೆಯ ಸೂಜಿ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿ, ಕ್ಯಾಲಿಫೋರ್ನಿಯಾದ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾ ಗಿತ್ತು.

ಆದರೆ, ೧೯೦೬ರಲ್ಲಿ ನಡೆದ ಅಗ್ನಿದುರಂತದಲ್ಲಿ ಅವೆಲ್ಲಾ ನಾಶವಾದವು. ಈಕೆಯ ಬದುಕನ್ನು ಆಧರಿಸಿ, ‘ಐಲ್ಯಾಂಡ್ ಆಫ್ ದ ಬ್ಲೂ ಡಾಲಿನ್ಸ್’ ಎಂಬ ಕಾದಂಬರಿಯು ೧೯೬೦ರಲ್ಲಿ ಪ್ರಕಟಗೊಂಡಿದೆ. ಏಕಾಂಗಿಯಾಗಿ ಹದಿನೆಂಟು ವರ್ಷಗಳ ಕಾಲ ಆ ಪುಟ್ಟ ದ್ವೀಪದಲ್ಲಿ ವಾಸಿಸಿದ್ದ ಜೌನಾ ಮರಿಯಾಳ ಬದುಕು, ಮಹಿಳೆಯೊಬ್ಬಳ ಅಭೂತಪೂರ್ವ ಸಾಹಸಕ್ಕೆ ಒಂದು ಮಾದರಿ ಎಂದು ಆಧುನಿಕ ಜಗತ್ತು ಗುರುತಿಸಿದೆ. ಕ್ಯಾಲಿಫೋರ್ನಿಯಾದ ಸಂತಾ
ಬಾರ್ಬಾರಾದಲ್ಲಿ ಆಕೆಯ ಪ್ರತಿಮೆಯನ್ನು ಸ್ಥಾಪಿಸಿ ಗೌರವಿಸಲಾಗಿದೆ. ಆ ಸಾಹಸಿ ಮಹಿಳೆಯ ಬದುಕಿನ ವಿವರಗಳನ್ನು ಓದಿದ ನಿಮಗೊಂದು ಪ್ರಶ್ನೆ: ಏಕಾಂಗಿ ಯಾಗಿ ಬದುಕಿದ್ದ ಆ ಮಹಿಳೆಯು, ಆಧುನಿಕ ಜನ ರಿಂದ ರಕ್ಷಿಸಲ್ಪಟ್ಟ ನಂತರ, ಕೇವಲ ಏಳು ವಾರಗಳಲ್ಲಿ ಬೇಧಿಯಿಂದ ಸತ್ತಳು- ಆದ್ದರಿಂದ, ಅವಳನ್ನು ಆ ದ್ವೀಪದಲ್ಲೇ ಇನ್ನಷ್ಟು ವರ್ಷ ಬದುಕಲು ಬಿಡಬೇಕಿತ್ತೇ ಅಥವಾ ಆಕೆಯನ್ನು ಹುಡುಕಿ, ಕರೆತಂದಿದ್ದು ಸರಿಯೇ?

Leave a Reply

Your email address will not be published. Required fields are marked *