Wednesday, 11th December 2024

ತೀವ್ರ ಮರೆವು ಉಂಟುಮಾಡುವ ಅಲ್ಜೀಮರ್ಸ್‌

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

ಆಲ್ಜೀಮರ್ಸ್ ಮೆದುಳಿನ ಒಂದು ಕಾಯಿಲೆ. ಇದರಲ್ಲಿ ಮೆದುಳಿನ ಜೀವಕೋಶಗಳು ನಿಧಾನವಾಗಿ ನಾಶವಾಗುತ್ತಾ ಬರುತ್ತವೆ.
ವಯಸ್ಸಾದ ವ್ಯಕ್ತಿಗಳಲ್ಲಿ ಕಂಡು ಬರುವ ಚಿತ್ತವೈಕಲ್ಯಕ್ಕೆ ಮುಖ್ಯ ಕಾರಣ ಈ ಆಲ್ಜೀಮರ್ಸ್ ಕಾಯಿಲೆ. ಹಾಗೆಯೇ ಇದರಲ್ಲಿ ವ್ಯಕ್ತಿಯ ನೆನಪು ಮರೆಯಾಗುತ್ತಾ ಬರುತ್ತದೆ.

ಯೋಚನಾ ಶಕ್ತಿ ಕುಂಠಿತಗೊಳ್ಳುತ್ತದೆ. ವ್ಯಕ್ತಿಯ ವರ್ತನೆಗಳಲ್ಲಿ ಹಲವು ಬದಲಾವಣೆಗಳಾಗಿ ಸ್ವತಂತ್ರವಾಗಿ ಜೀವನ ನಡೆಸುವುದು ಕಷ್ಟವಾಗುತ್ತದೆ. ಕಾಯಿಲೆಯ ಆರಂಭದ ಹಂತದಲ್ಲಿ ಇತ್ತೀಚಿನ ಘಟನೆಗಳನ್ನು ಮತ್ತು ಸಂಭಾಷಣೆಗಳನ್ನು ವ್ಯಕ್ತಿ ಮರೆಯುತ್ತಾ ಬರುತ್ತಾನೆ. ಕಾಯಿಲೆ ಮುಂದುವರಿಯುತ್ತಾ ಹೋದ ಹಾಗೆ ಆತನ ನೆನಪಿನ ಶಕ್ತಿ ಸಂಪೂರ್ಣವಾಗಿ ಮಾಯವಾಗಿ ತನ್ನ ದೈನಂದಿನ
ಕ್ರಿಯೆಗಳನ್ನು ನಡೆಸಲು ತುಂಬಾ ಕಷ್ಟವಾಗುತ್ತದೆ.

ಈಗ ಲಭ್ಯವಿರುವ ಆಲ್ಜೀಮರ್ಸ್ ಕಾಯಿಲೆಯ ಚಿಕಿತ್ಸೆಯು ತಾತ್ಕಾಲಿಕವಾಗಿ ಕಾಯಿಲೆಯ ಲಕ್ಷಣಗಳನ್ನು ಸುಧಾರಿಸಬಹುದು ಅಥವಾ ಕಾಯಿಲೆ ತೀವ್ರ ವಾಗುವುದನ್ನು ಸ್ವಲ್ಪ ನಿಧಾನಿಸಬಹುದು. ಈ ಚಿಕಿತ್ಸೆಗಳು ಆಲ್ಜೀಮರ್ಸ್ ಕಾಯಿಲೆಯ ವ್ಯಕ್ತಿಗಳಿಗೆ
ಸಾಧ್ಯವಾದಷ್ಟು ಕ್ರಿಯಾಶೀಲವಾಗಿರಲು ಸಹಾಯ ಮಾಡುತ್ತವೆ. ಹಾಗೆಯೇ ಆದಷ್ಟು ದಿವಸ ಸ್ವತಂತ್ರ ಜೀವನ ನಡೆಸಲು ಸಹಾಯಕ ವಾಗುತ್ತವೆ. ಹಾಗೆಂದು ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆ ಈಗಲೂ ಲಭ್ಯವಿಲ್ಲ. ಹಾಗೆಯೇ ಈ ಚಿಕಿತ್ಸೆಗಳು ಮೆದುಳಿನಲ್ಲಿ ಕಾಯಿಲೆಯಿಂದ ಉಂಟಾಗುವ ಬದಲಾವಣೆಗಳನ್ನು ತಪ್ಪಿಸಲಾರವು.

ಕಾಯಿಲೆಯ ಗುಣಲಕ್ಷಣಗಳು: ಆಲ್ಜೀಮರ್ಸ್ ಕಾಯಿಲೆಯ ಮುಖ್ಯ ಲಕ್ಷಣ ಎಂದರೆ ನೆನಪಿನ ಶಕ್ತಿ ಕುಂದುವುದು, ಅಂದರೆ ಮರೆವು. ಕಾಯಿಲೆಯ ಆರಂಭದಲ್ಲಿ ವ್ಯಕ್ತಿಗೆ ಇತ್ತೀಚಿನ ಘಟನೆ ಅಥವಾ ಸಂಭಾಷಣೆ ತೀವ್ರವಾಗಿ ನೆನಪಿಗೆ ಬರುವುದಿಲ್ಲ. ಕಾಯಿಲೆ ಮುಂದುವರಿಯುತ್ತಿದ್ದ ಹಾಗೆ ಮರೆವು ತೀವ್ರವಾಗುತ್ತಾ ಬರುತ್ತದೆ, ಹಾಗೆಯೇ ಇತರ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ.

ಆರಂಭದಲ್ಲಿ ಅಂತಹ ವ್ಯಕ್ತಿಗೆ ತನಗೆ ನೆನಪಿನ ಶಕ್ತಿ ಕುಂದುತ್ತಾ ಇದೆ ಎಂದು ಗೊತ್ತಾಗುತ್ತದೆ. ಹಾಗೆಯೇ ತನ್ನ ಯೋಚನಾ
ಕ್ರಮ ವನ್ನು ಒಂದು ಕ್ರಮದಲ್ಲಿ ಇರಿಸಲು ಸಾಧ್ಯವಾಗುತ್ತಿಲ್ಲ ಎಂಬುದೂ ಅರಿವಿಗೆ ಬರುತ್ತದೆ. ಈ ಸಂದರ್ಭದಲ್ಲಿ ಕುಟುಂಬದ ಇತರ ಸದಸ್ಯರು ಅಥವಾ ಆತನ ಸ್ನೇಹಿತರು ಈತನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುತ್ತಾರೆ.

ವಯಸ್ಸಾದ ಹಾಗೆ ಪ್ರತಿಯೊಬ್ಬ ವ್ಯಕ್ತಿಗೂ ಮರೆವು ಬರುವ ಸಾಧ್ಯತೆ ಇದೆ, ಮರೆವು ಬರುತ್ತದೆ. ಕೀ ಬಂಚನ್ನು ಎಲ್ಲಿರಿಸಿರುವುದು ಎನ್ನುವುದು ಮರೆಯುತ್ತದೆ, ಹಾಗೆಯೇ ತೀರಾ ಹತ್ತಿರದ ವ್ಯಕ್ತಿಗಳ ಹೆಸರೂ ಒಮ್ಮೊಮ್ಮೆ ಮರೆತು ಹೋಗಿಬಿಡುತ್ತದೆ. ಆದರೆ
ಆಲ್ಜೀಮರ್ಸ್ ಕಾಯಿಲೆಯಲ್ಲಿ ಕಾಣಿಸಿಕೊಳ್ಳುವ ಮರೆವು ಸ್ವಲ್ಪ ಭಿನ್ನ. ಇದು ಈಗಾಗಲೇ ತಿಳಿಸಿದಂತೆ ನಿಧಾನವಾಗಿ ಜಾಸ್ತಿ ಯಾಗುತ್ತಾ ಹೋಗಿ ನಂತರ ತೀವ್ರ ಪ್ರಮಾಣವನ್ನು ತಲುಪುತ್ತದೆ. ಅಂತಹ ಸಂದರ್ಭಗಳಲ್ಲಿ ತನ್ನ ಮನೆಗೆಲಸ ಅಥವಾ ಆಫೀಸ್ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಆಲ್ಜೀಮರ್ಸ್ ಕಾಯಿಲೆಗೊಳಗಾದ ವ್ಯಕ್ತಿ ತಾನು ಹೇಳಿದ ವಾಕ್ಯವನ್ನೇ ಮತ್ತೆ ಮತ್ತೆ ಪುನರುಚ್ಚರಿಸುತ್ತಾನೆ. ತಾನು ಬೇರೆಯವ
ರೊಡನೆ ನಡೆಸಿದ ಸಂಭಾಷಣೆಗಳನ್ನು ಮರೆಯುತ್ತಾನೆ. ಬೇರೆಯವರ ಜೊತೆ ಏರ್ಪಡಿಸಿಕೊಂಡ ಅಪಾಯಿಂಟ್ ಮೆಂಟ್‌ಗಳನ್ನೂ ಮರೆಯುತ್ತಾನೆ. ತನ್ನ ವಸ್ತುಗಳನ್ನು ಎಲ್ಲೆಲ್ಲಿಯೋ ಇಟ್ಟುಬಿಡುತ್ತಾನೆ. ಉದಾಹರಣೆ ತಾನು ಉಪಯೋಗಿಸುವ ಪೆನ್ ಅಥವಾ ತನ್ನ ವಾಹನದ ಕೀಗಳನ್ನು ಎಲ್ಲೆಲ್ಲಿಯೋ ಇಟ್ಟುಬಿಡುತ್ತಾನೆ. ತನಗೆ ಪರಿಚಿತವಿರುವ ಸ್ಥಳಗಳಲ್ಲೇ ದಾರಿ ತಪ್ಪಿಬಿಡುತ್ತಾನೆ.  ಉದಾಹರಣೆಗೆ ಮನೆಯಲ್ಲಿಯೇ ಬಾತ್ ರೂಂಗೆ ಹೋಗುವ ಬದಲು ಮತ್ತೆಲ್ಲಿಯೋ ಹೋಗಿ ಬಿಡುತ್ತಾನೆ. ನಿಧಾನವಾಗಿ ತನ್ನ
ಮನೆಯಲ್ಲಿರುವ ಸಂಬಂಧಿಗಳನ್ನೇ ಮರೆತು ಬಿಡುತ್ತಾನೆ. ದೈನಂದಿನ ತನ್ನ ಉಪಯೋಗದ ವಸ್ತುಗಳ ಹೆಸರನ್ನೂ ಮರೆತು ಬಿಡುತ್ತಾನೆ. ತಾನು ಉಪಯೋಗಿಸುವ ವಸ್ತುಗಳ ಹೆಸರುಗಳನ್ನೇ ಮರೆಯುವುದರಿಂದ ತನ್ನ ಯೋಚನೆಗಳನ್ನು ವ್ಯಕ್ತಪಡಿಸಲು ಅಸಮರ್ಥನಾಗುತ್ತಾನೆ. ಪರಿಣಾಮ ಎಂದರೆ ಬೇರೆಯವರೊಡನೆ ಸಂಭಾಷಣೆ ಮಾಡಲೇ ಕಷ್ಟವಾಗುತ್ತದೆ.

ಯೋಚನಾ ಶಕ್ತಿ, ವಿಚಾರ ಮಾಡುವ ಶಕ್ತಿ: ಈ ಕಾಯಿಲೆಯಲ್ಲಿ ವ್ಯಕ್ತಿಯ ಗ್ರಾಹ್ಯಶಕ್ತಿ ಕುಂಠಿತವಾಗುವುದರಿಂದ ಯೋಚನಾ ಶಕ್ತಿ ಕಡಿಮೆಯಾಗುತ್ತಾ ಬರುತ್ತದೆ. ಹಾಗೆಯೇ ಆತನಿಗೆ ಅಂಕಿ ಸಂಖ್ಯೆೆಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವೇ ಆಗುವುದಿಲ್ಲ.
ಹಾಗೆಯೇ ವಿವಿಧ ಕ್ರಿಯೆಗಳಿಗೆ ತೊಡಕುಂಟಾಗಿ ಹಣಕಾಸಿನ ವ್ಯವಹಾರವನ್ನು ನಿಭಾಯಿಸಲು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಚೆಕ್ ಬುಕ್ ಮತ್ತು ಪಾಸ್ ಬುಕ್‌ಗಳಲ್ಲಿರುವ ನಂಬರುಗಳು ಏನು ಎಂಬುದೇ ಗುರುತುಹಿಡಿಯಲು ಕಷ್ಟವಾಗಿ ನಿಧಾನವಾಗಿ ಅಂಕಿ
ಸಂಖ್ಯೆಗಳನ್ನೊಳಗೊಂಡ ಯಾವ ವ್ಯವಹಾರವೂ ಈತನಿಗೆ ಸಾಧ್ಯವೇ ಆಗುವುದಿಲ್ಲ.

ನಿರ್ಧಾರ ಕೈಗೊಳ್ಳುವಿಕೆ: ದೈನಂದಿನ ವ್ಯವಹಾರದಲ್ಲಿ ಅಗತ್ಯವಿರುವ ನಿರ್ಧಾರ ಕೈಗೊಳ್ಳುವಿಕೆ ಕ್ರಮೇಣ ಈತನಿಗೆ ಸಾಧ್ಯವೇ ಆಗುವುದಿಲ್ಲ. ಉದಾಹರಣೆಗೆ ಕಾಲಕ್ಕೆ ತಕ್ಕ ಉಡುಪು ಧರಿಸುವ ಬದಲು ಯಾವುದೋ ಕಾಲದಲ್ಲಿ ಯಾವುದೋ ಉಡುಪು ತೊಟ್ಟು ಕೊಳ್ಳುತ್ತಾನೆ. ಅಡಿಗೆ ಮನೆಯಲ್ಲಿ ಸ್ಟವ್ ಉಪಯೋಗಿಸಿ ಮಾಡುವ ಯಾವುದೇ ಕೆಲಸ ಈತನಿಗೆ/ ಈಕೆಗೆ ಸಾಧ್ಯವೇ ಆಗುವುದಿಲ್ಲ. ಕ್ರಮೇಣ ಈತನಿಗೆ ವಾಹನ ಚಲಾಯಿಸಲೂ ಸಾಧ್ಯವಾಗುವುದಿಲ್ಲ.

ಪರಿಚಿತ ಕ್ರಿಯೆಗಳೇ ಕಷ್ಟವಾಗುತ್ತದೆ: ಒಂದಾದ ನಂತರ ಮತ್ತೊಂದು ಈ ರೀತಿ ಮಾಡುವ ಯಾವುದೇ ಕ್ರಿಯೆ ಈತನಿಗೆ ಕಠಿಣ ವೆನಿಸುತ್ತದೆ. ಉದಾಹರಣೆಗೆ ಅಡುಗೆ ಮನೆಯಲ್ಲಿ ಆಹಾರ ತಯಾರಿಸುವುದು, ಯಾವುದಾದರೂ ಆಟ ಆಡುವುದು ಇತ್ಯಾದಿ. ಕಾಯಿಲೆ ತೀರಾ ಮುಂದುವರಿದ ಹಂತಕ್ಕೆ ಹೋದಾಗ ಇಂತಹ ವ್ಯಕ್ತಿಗೆ ದೈನಂದಿನ ಉಡುಪು ಧರಿಸುವುದು, ಸ್ನಾನ ಮಾಡುವುದು ಇಂತಹ ಕ್ರಿಯೆಗಳು ಕಷ್ಟವಾಗುತ್ತಾ ಹೋಗುತ್ತದೆ.

ವ್ಯಕ್ತಿತ್ವ ಮತ್ತು ವರ್ತನೆಯಲ್ಲಿ ಬದಲಾವಣೆ : ಈ ಕಾಯಿಲೆ ಉಂಟುಮಾಡುವ ಮೆದುಳಿನ ಬದಲಾವಣೆಗಳು ಈತನ ವರ್ತನೆ ಮತ್ತು ವ್ಯಕ್ತಿತ್ವವನ್ನು ತೀವ್ರವಾಗಿ ಬದಲಿಸುತ್ತವೆ. ಹಾಗಾಗಿ ಈತ ಖಿನ್ನತೆಗೆ ಒಳಗಾಗಬಹುದು, ಯಾವುದೇ ಕೆಲಸದಲ್ಲಿ ಉತ್ಸಾಹ
ಕುಂದುತ್ತದೆ. ಬೇರೆ ಜನರ ಹತ್ತಿರ ಸಂಪರ್ಕ ಕಡಿಮೆಮಾಡುತ್ತಾ ಹೋಗುತ್ತಾನೆ. ಸಾಮಾಜಿಕ ಸಭೆ, ಸಮಾರಂಭಗಳಿಂದ ದೂರ ಉಳಿಯುತ್ತಾನೆ. ಈತನ ಮೂಡ್ ತೀವ್ರವಾಗಿ ಬದಲಾಗುತ್ತಾ ಹೋಗುತ್ತದೆ.

ಬೇರೆಯವರಲ್ಲಿ ತೀವ್ರವಾಗಿ ಅಪನಂಬಿಕೆ ತೋರಿಸುತ್ತಾನೆ. ಚಡಪಡಿಕೆ ಉಂಟಾಗುತ್ತದೆ. ನಿದ್ರೆ ಮಾಡುವುದರಲ್ಲಿ ಬದಲಾವಣೆ ಕಂಡು ಬರುತ್ತದೆ. ಅವಶ್ಯಕವಾಗಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿರುತ್ತಾನೆ. ಕೆಲವು ಕ್ರಿಯೆಗಳನ್ನು ಮಾಡಬಾರದು ಎಂದಿರುವ ಕ್ರಿಯೆಗಳನ್ನು ಸಹಿತ ಮಾಡುತ್ತಾನೆ. ಒಂದು ರೀತಿಯ ಭ್ರಮೆಗೆ ಒಳಗಾಗುತ್ತಾನೆ. ಏನೋ ಕಳೆದು ಹೋಗಿದೆ ಎಂದು ದೂರುತ್ತಾ ಇರುತ್ತಾನೆ. ಈ ರೀತಿಯ ಕಾಯಿಲೆಯ ಲಕ್ಷಣಗಳಿದ್ದಾಗ್ಯೂ ಕೆಲವು ಮುಖ್ಯ ಕ್ರಿಯೆಗಳಿಗೆ ವ್ಯತ್ಯಯ ಬರುವುದಿಲ್ಲ. ಪುಸ್ತಕ ಓದುವ ಕ್ರಿಯೆ, ಕತೆ ಹೇಳುವುದು, ಹಾಡುವುದು, ಸಂಗೀತ ಕೇಳುವುದು ಅಥವಾ ಯಾವುದೇ ಕಲೆಯಲ್ಲಿ ಮೊದಲಿನಿಂದ ತೊಡಗಿದ್ದರೆ ಮುಂದುವರಿಸಲು ಕಷ್ಟವಾಗುವುದಿಲ್ಲ.

ಕಾಯಿಲೆಯ ಕಾರಣಗಳು: ವಿಜ್ಞಾನಿಗಳ ಪ್ರಕಾರ ಈ ಕಾಯಿಲೆ ಬರಲು ಜೆನೆಟಿಕ್, ಜೀವನ ವಿಧಾನ ಮತ್ತು ಹೊರಗಿನ ವಾತಾವರಣ – ಈ ಎಲ್ಲಾ ವಿಷಯಗಳು ಕಾರಣವಾಗುತ್ತವೆ. ಶೇ.1ಕ್ಕಿಂತ ಕಡಿಮೆ ಜನರಲ್ಲಿ ಕೇವಲ ಜೆನೆಟಿಕ್ ಕಾರಣಗಳಿಂದ ಬರುತ್ತದೆ. ಈ ಕಾಯಿಲೆ ಬರುವ ನಿಜವಾದ ಕಾರಣ ಇನ್ನೂ ವಿಜ್ಞಾನಿಗಳಿಗೆ ಅರ್ಥವಾಗಿಲ್ಲ. ಆದರೆ ಮುಖ್ಯ ತೊಂದರೆ ಎಂದರೆ ಮೆದುಳಿನ ಕೆಲವು ಪ್ರೋಟೀನ್ ಗಳು ಮೆದುಳಿನ ಸಹಜ ಕ್ರಿಯೆಗೆ ತೊಂದರೆ ಕೊಡುತ್ತವೆ. ಮೆದುಳಿನ ಜೀವಕೋಶಗಳ ಕೆಲಸಗಳನ್ನು
ವ್ಯತ್ಯಯಮಾಡುತ್ತವೆ. ಅದರಿಂದ ಹಲವು ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಮೆದುಳಿನ ಜೀವಕೋಶಗಳಿಗೆ ನಷ್ಟ ಉಂಟಾ ಗುತ್ತದೆ, ಅವುಗಳ ಸಂಪರ್ಕದ ಕೊಂಡಿ ಛಿದ್ರಗೊಳ್ಳುತ್ತದೆ, ನಂತರ ಈ ಜೀವಕೋಶಗಳು ನಾಶವಾಗುತ್ತವೆ. ಮೆದುಳಿನ ತೊಂದರೆ ಸಾಮಾನ್ಯವಾಗಿ ನೆನಪಿನ ಕೇಂದ್ರವಿರುವ ಸ್ಥಳದಲ್ಲಿ ಆರಂಭವಾಗುತ್ತದೆ. ಆರಂಭದ ರೋಗ ಲಕ್ಷಣ ಕಾಣಿಸಿಕೊಳ್ಳುವ ಎಷ್ಟೋ ಮೊದಲು ಕಾಯಿಲೆ ಶುರುವಾಗಿರುತ್ತದೆ. ಮೆದುಳಿನ ಜೀವಕೋಶಗಳ ನಷ್ಟವಾಗುವ ಪ್ರಕ್ರಿಯೆ ನಿಧಾನವಾಗಿ ಬೇರೆ ಭಾಗಗಳಿಗೂ ಪಸರಿಸುತ್ತದೆ. ಕಾಯಿಲೆಯ ಅಂತಿಮ ಹಂತದ ಹೊತ್ತಿಗೆ ಮೆದುಳು ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡು ಗಾತ್ರದಲ್ಲಿಯೂ ಸಣ್ಣದಾಗಿ ಬಿಡುತ್ತದೆ.

ಮೆದುಳಿನಲ್ಲಿ ಕಂಡು ಬರುವ ಲಕ್ಷಣಗಳು: ಬೀಟಾ ಅಮೈಲಾಯ್ಡ್ ರೀತಿಯ ಪ್ರೋಟೀನ್‌ಗಳ ಹಲವು ತುಣುಕುಗಳು ಸೇರಿ ಒಂದು ದಟ್ಟ ಮಂಜಿನ ರೀತಿ ರಚನೆಯನ್ನು ಉಂಟು ಮಾಡುತ್ತವೆ. ಇದನ್ನು ನಾವು ಪ್ಲೇಕ್‌ಗಳು (Plaque) ಎನ್ನುತ್ತೇವೆ. ಇವು ಮೆದುಳಿನ ನರ ಜೀವಕೋಶಗಳ ಮೇಲೆ ಕೆಟ್ಟ ಪರಿಣಾಮ ಹೊಂದಿವೆ. ಇವು ನರ ಜೀವಕೋಶಗಳ ನಡುವಿನ ಸಂಪರ್ಕ ಸೇತು ವನ್ನು ಹಾಳುಗೆಡವುತ್ತವೆ. ಇದು ನಂತರ ಗಟ್ಟಿಯಾದ ಹರಳಿನ ರೀತಿ ಆಗಿ ಅಮೈಲಾಯ್ಡ್ ಪ್ಲೇಕ್ ಎನ್ನುತ್ತೇವೆ. ಟಾವು ಪ್ರೋಟೀನ್‌ ಗಳು ನರ ಜೀವಕೋಶಗಳ ಒಳಗಿನ ಶಕ್ತಿಯುತವಾದ ವಸ್ತುಗಳು. ಇವು ಆಹಾರ ಪದಾರ್ಥಗಳನ್ನು ಸಾಗಾಟ ಮಾಡುತ್ತವೆ ಆಲ್ಜೀ ಮರ್ಸ್ ಕಾಯಿಲೆಯಲ್ಲಿ ಈ ಟಾವು ಪ್ರೋಟೀನ್ ಗಳ ಆಕಾರ ಬದಲಾಗುತ್ತದೆ. ಇವು ನ್ಯೂರೋ ಫೈಬ್ರಿಲರಿ ಜಡೆಗಳು ಎಂದು ಮಾರ್ಪಾಡಾಗುತ್ತವೆ. ಇವು ಎಂದಿನ ಆಹಾರ ಪದಾರ್ಥಗಳ ಸಾಗಾಟಕ್ಕೆ ಮಾರಕವಾಗುತ್ತವೆ. ಹಾಗಾಗಿ ನರ ಜೀವಕೋಶಗಳ ನಾಶಕ್ಕೆ ಕಾರಣವಾಗುತ್ತವೆ.

ಬರಬಹುದಾದ ರಿಸ್ಕ್ ಅಂಶಗಳು: ಇದು ವಯಸ್ಸಾದವರಲ್ಲಿ ಕಂಡು ಬರುವ ಕಾಯಿಲೆಯಾದ್ದರಿಂದ ದೀರ್ಘಕಾಲ ಬದುಕಿ ರುವವರಲ್ಲಿ ಅದರಲ್ಲಿಯೂ 75 – 80 ವರ್ಷಗಳ ನಂತರ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕಿಂತಲೂ ಹೆಚ್ಚಿನ ವಯಸ್ಸಿನವರಲ್ಲಿ ಈ ಕಾಯಿಲೆ ಬರುವ ಸಾಧ್ಯತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಒಂದು ಅಧ್ಯಯನದ ಪ್ರಕಾರ 65 – 74 ವಯಸ್ಸಿನವರಲ್ಲಿ ಒಂದು ವರ್ಷದಲ್ಲಿ 1000 ಜನರಲ್ಲಿ 2 ಜನರಲ್ಲಿ ಹೊಸದಾಗಿ ಕಂಡುಬಂದರೆ 75 – 84 ವಯಸ್ಸಿನವರಲ್ಲಿ 1000 ಜನರಲ್ಲಿ 11 ಜನರಲ್ಲೂ ಅದೇ 85ರ ನಂತರದ ವಯಸ್ಸಿನವರಲ್ಲಿ 37 ಜನರಲ್ಲಿ ಕಂಡುಬಂದಿತು. ತಂದೆ ತಾಯಿಗಳಲ್ಲಿ ಈ ಕಾಯಿಲೆ ಕಂಡುಬಂದಿದ್ದರೆ ಮಕ್ಕಳಲ್ಲಿ ಬರುವ ಸಾಧ್ಯತೆ ಜಾಸ್ತಿ. ಆದರೆ ಈ ಕಾಯಿಲೆಯ ಜೆನೆಟಿಕ್ ಹಿನ್ನೆಲೆ ತುಂಬಾ ಸಂಕೀರ್ಣವಾದುದು.

ಡೌನ್ ಸಿಂಡ್ರೋಮ್: ಡೌನ್ ಸಿಂಡ್ರೋಮ್ ಕಾಯಿಲೆ ಇರುವ ಹೆಚ್ಚಿನವರು ಆಲ್ಜೀಮರ್ಸ್ ಕಾಯಿಲೆಗೆ ಒಳಗಾಗುತ್ತಾರೆ. ಕ್ರೋಮೋಸೋಮ್ 21ರ 3 ಪ್ರತಿಗಳು ಇರುವುದರಿಂದ ಡೌನ್ ಸಿಂಡ್ರೋಮ್‌ನವರು ಆಲ್ಜೀಮರ್ಸ್‌ಗೆ ಒಳಗಾಗುತ್ತಾರೆ ಎನ್ನಲಾಗಿದೆ. ಆಲ್ಜೀಮರ್ಸ್ ಕಾಯಿಲೆಯ ರೋಗ ಲಕ್ಷಣಗಳು ಸಾಮಾನ್ಯವಾಗಿ ಇತರರಿಗಿಂತ ಡೌನ್ ಸಿಂಡ್ರೋಮ್ ಕಾಯಿಲೆ ಇರುವವರಲ್ಲಿ 10
ರಿಂದ 20 ವರ್ಷ ಮೊದಲು ಶುರುವಾಗುತ್ತದೆ ಎನ್ನಲಾಗಿದೆ. ಮಹಿಳೆಯರು ಮತ್ತು ಪುರುಷರು ಇಬ್ಬರಲ್ಲಿಯೂ ಈ ಕಾಯಿಲೆ ಕಾಣಿಸಿಕೊಳ್ಳುವುದಾದರೂ ಮಹಿಳೆಯರು ಹೆಚ್ಚು ಕಾಲ ಬದುಕುವುದರಿಂದ ಅವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಎನ್ನಬಹುದು.

ಗ್ರಹಣ ಶಕ್ತಿ ಕಡಿಮೆಯಾಗುವುದು: ಸ್ವಲ್ಪ ಪ್ರಮಾಣದಲ್ಲಿ ಗ್ರಹಣ ಶಕ್ತಿ ಕಡಿಮೆಯಾಗುವುದು ವಯಸ್ಸಾದ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಇದು ಅಂತಹ ವ್ಯಕ್ತಿಗೆ ತನ್ನ ದೈನಂದಿನ ಕೆಲಸ ಮಾಡಲು ತೊಂದರೆ ಮಾಡುವುದಿಲ್ಲ. ಸ್ವಲ್ಪ
ಪ್ರಮಾಣದ ಗ್ರಹಣ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಚಿತ್ತವೈಕಲ್ಯಕ್ಕೆ ಒಳಗಾಗುವ ಸಾಧ್ಯತೆ ಜಾಸ್ತಿ. ಇಂತಹ ವ್ಯಕ್ತಿಗಳಲ್ಲಿ ಮರೆವು ಪ್ರಧಾನವಾಗಿ ಕಂಡುಬಂದರೆ ಅಂತಹವರು ಆಲ್ಜೀಮರ್ಸ್ ಕಾಯಿಲೆಗೆ ಒಳಗಾಗುವ ಸಾಧ್ಯತೆ ಜಾಸ್ತಿ.

ತಲೆಗೆ ಯಾವುದಾದರೂ ಕಾರಣದಿಂದ ಏಟು, ಹೊಡೆತ ಬಿದ್ದವರು ಆಲ್ಜೀಮರ್ಸ್‌ಗೆ ಒಳಗಾಗುವ ಸಾಧ್ಯತೆ ಜಾಸ್ತಿ. ಹಾಗೆಯೇ ನಿದ್ರೆ ತೊಂದರೆ ಇರುವವರಲ್ಲಿ ಅಂದರೆ ಮಲಗಿ ಎಷ್ಟು ಹೊತ್ತಾದರೂ ನಿದ್ರೆ ಬರದೆ ಇರುವವರಲ್ಲಿ, ನಿದ್ರೆ ಬಂದರೂ ಬಹಳ
ಕಾಲ ನಿದ್ರೆ ಮಾಡಲು ಸಾಧ್ಯವಾಗದಿರುವವರಲ್ಲಿ ಆಲ್ಜೀಮರ್ಸ್ ಬರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಜೀವನ ಶೈಲಿ ಮತ್ತು ಹೃದಯದ ಆರೋಗ್ಯ: ಹೃದಯದ ಕಾಯಿಲೆಗೆ ಸಂಬಂಧಪಟ್ಟ ರಿಸ್ಕ್ ಅಂಶಗಳೇ ಆಲ್ಜೀಮರ್ಸ್‌ಗೂ ಕಾರಣವಾಗುತ್ತವೆ ಎನ್ನಲಾಗಿದೆ. ಅವೆಂದರೆ – ಸೂಕ್ತ ವ್ಯಾಯಾಮದ ಕೊರತೆ, ಸ್ಥೂಲಕಾಯ, ಧೂಮಪಾನ, ವಿಪರೀತ ಏರು ರಕ್ತದೊತ್ತಡ (High Blood pressure), ಬಹಳ ಮಟ್ಟದ ಕೊಲೆಸ್ಟ್ರಾಲ್ ಅಂಶ ರಕ್ತದಲ್ಲಿ ಇರುವುದು, ಸರಿಯಾಗಿ ಚಿಕಿತ್ಸೆ ಮಾಡಿ ಸೂಕ್ತವಾಗಿ ಹತೋಟಿಗೆ ತರದೆ ಇರುವ ಡಯಾಬಿಟಿಸ್ ಕಾಯಿಲೆ. ಇವುಗಳಲ್ಲಿ ಆರೋಗ್ಯ ಶೈಲಿಯ ಬದಲಾವಣೆ ಸ್ವಲ್ಪ ಮಟ್ಟಿನ ರಿಸ್ಕ್‌ ಕಡಿಮೆ ಮಾಡಬಲ್ಲದು. ನಿಯಮಿತವಾದ ವ್ಯಾಯಾಮ, ಕೊಬ್ಬಿನ ಅಂಶ ಕಡಿಮೆ ಇರುವ ಆಹಾರ, ಹಣ್ಣು ತರಕಾರಿ ಜಾಸ್ತಿ ಇರುವ ಆಹಾರ ಸೇವಿಸುವುದರಿಂದ ಆಲ್ಜೀಮರ್ಸ್ ಬರುವ ರಿಸ್ಕನ್ನು ಕಡಿಮೆ ಮಾಡಬಹುದು.

ಕಾಯಿಲೆಯ ತೊಡಕುಗಳು: ಮರೆವು, ಭಾಷೆ ನೆನಪಾಗದಿರುವುದು, ನಿರ್ಧಾರ ತೆಗೆದುಕೊಳ್ಳಲು ಅಸಮರ್ಥತೆ – ಈ ಎಲ್ಲಾ ಆಲ್ಜೀಮರ್ಸ್‌ನ ಗುಣಲಕ್ಷಣಗಳು ಬೇರೆ ಕಾಯಿಲೆಗಳ ಚಿಕಿತ್ಸೆಗೂ ತೊಂದರೆ ಕೊಡುತ್ತವೆ. ಆಲ್ಜೀಮರ್ಸ್‌ಗೆ ಒಳಗಾದ ವ್ಯಕ್ತಿ ತನಗೆ ನೋವಾಗುತ್ತದೆ ಎಂದು ತಿಳಿಸಲೂ ಅಸಮರ್ಥನಾಗಬಹುದು. ಬೇರೆ ಕಾಯಿಲೆಗಳ ಲಕ್ಷಣ ತಿಳಿಸಲು ಸಾಧ್ಯವಾಗದಿರುವುದು ಆತನ ಮತ್ತೊಂದು ಸಮಸ್ಯೆ. ಹಾಗಾಗಿ ಇನ್ನೂ ಹಲವು ರೀತಿಯ ತೊಂದರೆಗೆ ಒಳಗಾಗುತ್ತಾನೆ.