Tuesday, 10th September 2024

ಪರಮಾಧಿಕಾರ ಕಸಿವವರ ವಿರುದ್ಧ ಅಂಬೇಡ್ಕರ್‌

ಪುನರವಲೋಕನ

ಡಾ.ಸುಧಾಕರ ಹೊಸಳ್ಳಿ

ಅಂಬೇಡ್ಕರರು ಭಾರತಕ್ಕಾಗಿ, ಭಾರತೀಯರಿಗಾಗಿ ತನ್ನೊಡನಿದ್ದ ತಂಡದ ಮುಖೇನ ಕೇವಲ ನಿಯಮಗಳ ಗುಚ್ಛವನ್ನು, ಆಡಳಿತ ನಡೆಸಲು ಬೇಕಾದ ನ್ಯಾಯಿಕ ನಿಯಮಗಳನ್ನು ಸೃಜಿಸಲಿಲ್ಲ. ಬದಲಾಗಿ ತನ್ನ ಅಧಮ್ಯವಾದ ತೌಲನಿಕ ಶಕ್ತಿಯಿಂದ, ಸಂಶೋಧನ ಶ್ರದ್ಧೆಯಿಂದ ಒಟ್ಟು ಸಂವಿಧಾನದಲ್ಲಿ ಭಾರತೀಯತೆ ಉಳಿಯುವಂತೆ, ಗುಲಾಮಿತನ ಅಳಿಯುವಂತೆ, ನೆಲದ ಗುಣಕ್ಕೆ ಅನುಸಾರವಾಗಿ ನಿಯಮಗಳನ್ನು ಜೋಡಿಸಿದ್ದರು.

ಚಿಕ್ಕ ಚಿಕ್ಕ ಪ್ರಾಂತ್ಯಗಳಾಗಿ ಹಂಚಿ ಹೋಗಿದ್ದ ಭಾರತ ಪರಕೀಯರ ಆಡಳಿತಕ್ಕೆ ಒಳಪಟ್ಟು ದಾಸ್ಯವನ್ನು, ವಸಾಹತುಶಾಹಿಯ ಸರ್ವಾಧಿಕಾರವನ್ನು ಅನುಭವಿಸುವಂತಾಗಿದ್ದನ್ನು ಅರ್ಥೈಸಿಕೊಂಡಿದ್ದ ಅವರು ಮುಂದೆ ಭಾರತ ಪರಕೀಯರ ಪಾಲಾಗದಂತೆ, ಸದೃಢ ಭಾರತದ ಮರು ನಿರ್ಮಾಣಕ್ಕೆ ನಿಯಮಗಳನ್ನು ಅನುಗುಣವಾಗಿಸಿದ್ದರು. ಆದರೆ ಗಮ್ಯ ರಾಷ್ಟ್ರೀಯವಾದಿಯ ಪ್ರಯತ್ನಕ್ಕೆ ಸಂವಿಧಾನ ರಚನಾಸಭೆ ತೆರೆದ ಆಸು ಆಗಿರಲಿಲ್ಲ, ಹಂತ -ಹಂತದಲ್ಲೂ ಅಂಬೇಡ್ಕರ್ ಅವರಿಗೆ ಅಡೆತಡೆಗಳ ಬಹುದೊಡ್ಡ ಮಾಲೆಯನ್ನು ಹೊದಿಸಲಾಗಿತ್ತು.

ಬ್ರಿಟನ್ ಸಂಸತ್ತಿನ ಧೇಯ್ಯೋದ್ದೇಶಗಳನ್ನು ಭಾರತದ ಸಂವಿಧಾನದ ಭಾಗವನ್ನಾಗಿ ಮಾಡಲು ಸಂವಿಧಾನ ರಚನಾ ಸಭೆಯಲ್ಲಿ ಒಂದು ದೊಡ್ಡ ಪಡೆಯೇ ಟೊಂಕ ಕಟ್ಟಿತು. ಸ್ವತಃ ನೆಹರು ಅವರು ಈ ಸಂವಿಧಾನ ರಚನಾಸಭೆ ರಚನೆಯಲ್ಲಿ ಬ್ರಿಟಿಷ್ ಪಾರ್ಲಿಮೆಂಟ್‌ನ , ಬ್ರಿಟಿಷ್ ಸಂಸತ್ತು ನಿರ್ದೇಶಿತ ವಿಷಯ ಗಳ ಹೊರತಾಗಿ ಈ ಸಂವಿಧಾನದಲ್ಲಿ ಏನೋ ಇರುವುದಿಲ್ಲ ಎಂದು ಘೋಷಿಸಿದ್ದರು. ಇಂತಹ ಅನೇಕ ತಡೆಗೋಡೆಗಳ ನಡುವೆ ಭಾರತೀಯತೆಯನ್ನು ಒಳಗೊಂಡ ಸಂವಿಧಾನ ರಚನೆಯಾಗಲು ಅಂಬೇಡ್ಕರರು ಅಗ್ರ ಕಾರಣೀಭೂತನಾಗಿದ್ದಾರೆ. ಇನ್ನೆಂದೂ ಭಾರತ ವಿಘಟಿತವಾಗದಂತೆ ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ನೀಡಲು ಅಂಬೇಡ್ಕರರು ಮುಂದಾದಾಗ, ಮೌಲಾನ ಹಸ್ರತ್ ಮೋಹಾನಿ ಎಂಬ ಸದಸ್ಯ ಅತ್ಯುಗ್ರವಾಗಿ ಅಂಬೇಡ್ಕರರ ಕಾರ್ಯವನ್ನು ನಿಂದಿ ಸಿದ ಒಂದು ಉದಾಹರಣೆಯನ್ನು ಹೀಗೆ ನೋಡಬಹುದು, ಅಂದು ೧೭ ಅಕ್ಟೋಬರ್ ೧೯೪೯, ಹಶ್ರತ್ ಅವರು ಹೇಳಿಕೆ ಕೊಟ್ಟರು.

ಒಂದು ರೀತಿಯ ವಾಗ್ದಾನವನ್ನು ನನಗೆ ಕೊಡಲಾಗಿತ್ತು. ಮಾನ್ಯರೆ, ಸಂವಿಧಾನವನ್ನು ರಚಿಸಲು ನೇಮಿಸಿದ ಸಮಿತಿಗೆ ಈ ಸದನವು ಅಂಗೀಕರಿಸಿರುವ ಧೇಯ್ಯೋದ್ದೇಶಗಳ ನಿರ್ಣಯಕ್ಕೆ ಅನುಸಾರವಾಗಿ ಸಂವಿಧಾನವನ್ನು ರಚಿಸಬೇಕೆಂದು ಸ್ಪಷ್ಟ ನಿರ್ದೇಶನವನ್ನು ಕೊಡಲಾಗಿತ್ತು ಎಂದು ಆ ವರದಿ ಯಲ್ಲಿದೆ. ಅಂಥ ನಿರ್ಣಯವನ್ನು ಅನುಸರಿಸಿ ಹೋಗುವ ಬದಲು. ಡಾ. ಅಂಬೇಡ್ಕರ್ ಅವರ ಮನಸ್ಸಿಗೆ ಬಂದದ್ದನ್ನು ಅಂಗೀಕರಿಸುತ್ತಿರುವುದು ಆಶ್ಚರ್ಯಕರವಾಗಿದೆ. ಅವರ ತಪ್ಪು ,ತಪ್ಪಾದ ತೀರ್ಮಾನದೊಂದಿಗೆ ಧೇಯೋದ್ದೇಶಗಳ ನಿರ್ಣಯ ಅನುಸರಿಸಬೇಕೆಂದು ಅವರು ಇಚ್ಛಿಸುತ್ತಾರೆ. ಅವರು ಕಟ್ಟಳೆಯನ್ನು ತಲೆಕೆಳಗು ಮಾಡಿದ್ದಾರೆ.

ಇದು ಸಂವಿಧಾನದ ಗುಣಲಕ್ಷಣವನ್ನೇ ಬದಲು ಮಾಡಿಬಿಟ್ಟಿದೆ. ಅದಕ್ಕಾಗಿ ವಿರೋಧಿಸುತ್ತಿದ್ದೇನೆ. ನಾನು ಇಲ್ಲಿ ತಿಳಿದಂತೆ ಧೇಯೋದ್ದೇಶಗಳ ನಿರ್ಣಯ ಮತ್ತು ವರದಿಯ ಉದ್ದೇಶವೇನು? ಇದು ಸಾರ್ವಭೌಮ ಸ್ವತಂತ್ರ ಗಣರಾಜ್ಯಗಳ ಒಕ್ಕೂಟವಾಗಿರುತ್ತದೆ’ ಎಂದು ಹೇಳಿದ್ದರು.

ಮತ್ತೆ ಮುಂದುವರಿದ ಅವರು ಹೀಗೆ ಹೇಳಿದ್ದರು: ಗಣರಾಜ್ಯಗಳ ಎಂಬ ಬಹುವಚನ ರೂಪವನ್ನು ಗಮನಿಸಿ, ಈಗ ಎಲ್ಲವನ್ನು ತಲೆ ಕೆಳಗು ಮಾಡಿ ದ್ದಾರೆ. ಅವರು ‘ಫೆಡರೇಷನ್’ ಎಂಬುದನ್ನು ಕೈಬಿಟ್ಟಿದ್ದಾರೆ. ಅದೇ ರೀತಿ ಗಣರಾಜ್ಯ ಮತ್ತು‘ಸ್ವತಂತ್ರ’ ಎಂಬುದನ್ನೂ ತಳ್ಳಿಹಾಕಿದ್ದಾರೆ. ಇದನ್ನು ಒಂದು ಅಗೋಚರವಾದ ಉದ್ದೇಶದಿಂದ ಮಾಡಿರುವರು. ಅದನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ. ಸಮಯ ಬಂದಾಗ ಅವರ ಮುಖದ ಮೇಲೆ
ನೇರವಾಗಿ ಹೇಳಲು ಅದನ್ನು ಕಾಯ್ದಿರಿಸಿದ್ದೇನೆ. ಪ್ರಸ್ತುತ ಸಮಯದಲ್ಲಿ, ಧೇಯೋದ್ದೇಶಗಳ ನಿರ್ಣಯ ಹಾಗೂ ಪಂಡಿತ್ ಜವಾಹರಲಾಲ್ ನೆಹರು ಅವರು ಕೊಟ್ಟಿರುವ ಸೂಚನೆಗಳಿಗನುಗುಣವಾಗಿ, ಈ ಅನುಚ್ಛೇದವನ್ನು ಕಡೆಯ ಪಕ್ಷ ಡಾ. ಅಂಬೇಡ್ಕರರು ಪ್ರಸ್ತಾವಿಸಿರುವ ನೆಹರು ಅವರು ಹೇಳಿರುವ ಮನೋಭಾವಕ್ಕನುಸಾರವಾಗಿ ಬದಲಿಸಬೇಕು. ವಾಸ್ತವವಾಗಿ ಅವರು ಇದನ್ನು ಒಪ್ಪಿದ್ದಾರೆ.

ಅವರು ‘ಸ್ವತಂತ್ರ’ ಎಂಬ ಪದ ತೆಗೆದುಹಾಕಿದ್ದಾರೆ. ಸ್ವತಂತ್ರ ಎಂಬ ಪದಕ್ಕೆ ‘ಫೆಡರಲ್’ ಎಂಬುದನ್ನು ಸೇರಿಸಬೇಕು, ಅಂದರೆ ಸಾರ್ವಭೌಮ ಪೆಡರಲ್ ಗಣರಾಜ್ಯ, ಅದು ಗಣರಾಜ್ಯವೆಂದಿಲ್ಲದಿದ್ದರೂ ಸರಿಯೇ? ಸಾರ್ವಭೌಮ ಫೆಡರಲ್ ಗಣರಾಜ್ಯ ಎಂದರೆ ಅದರ ಅರ್ಥ ಒಂದು ಗಣರಾಜ್ಯವೆಂದು. ರಾಜ್ಯ ಘಟಕಗಳು ಸಹ ಗಣರಾಜ್ಯಗಳೇ ಅಥವಾ ಅದು ಒಂದು ಮಹಾಮಂಡಲ. ನಾನು ಅಲ್ಲವೆಂದು ಹೇಳುತ್ತೇನೆ. ಅದು ಒಂದು ರೀತಿಯ ಏಕಾತ್ಮಕ ವ್ಯವಸ್ಥೆಯ
ಅರ್ಥ ಕೊಡುತ್ತದೆಯಾಗಿ ಅವರು ಆ ಪದವನ್ನು ತೆಗೆದುಕೊಂಡಿದ್ದಾರೆ.

ಅವರು ಈ ಸಂವಿಧಾನದ ಎಲ್ಲ ಗುಣಲಕ್ಷಣಗಳನ್ನು ತಲೆಕೆಳಗು ಮಾಡಿ ಬದಲಾಯಿಸಲು ಇಚ್ಛಿಸಿದ್ದರು. ಭಾರತವನ್ನು ಒಂದು ಸ್ವತಂತ್ರ ಗಣರಾಜ್ಯದ ಫೆಡರಲ್ ಮಂಡಲಿ ಮಾಡುವುದು ನಮ್ಮ ಹಾಗೂ ಧೈಯೋದ್ದೇಶಗಳ ನಿರ್ಣಯದ ಅರ್ಥ. ಆದರೆ ,ಅವರು ಈಗ ಅಲ್ಲ ಎನ್ನುತ್ತಾರೆ. ಭಾರತ ದೇಶವು ರೂಪಾಂತರಗೊಳಿಸಿ, ಬ್ರಿಟಿಷ್ ಸಾಮ್ರಾಜ್ಯದ ಸ್ಥಳದಲ್ಲಿ ನೀವು ಅಽಕಾರವಿಲ್ಲದ ರಾಜ್ಯಗಳ ಭಾರತ ಸಾಮ್ರಾಜ್ಯವನ್ನು ಸೃಷ್ಟಿಸಿ, ಈ ರಾಜ್ಯಗಳಲ್ಲಿ ನೀವು
ಪ್ರಾಂತ್ಯಗಳನ್ನು ಎಳೆದು ತಂದು ಸೇರಿಸಿರುತ್ತೀರಿ.

ಮೊದಲು ಈ ಸೇರ್ಪಡೆಯಿಂದ ರಾಜ್ಯಗಳಿಗೆ ಒಳ್ಳೆಯದಾಗುತ್ತದೆ ಎಂದು ಭಾವಿಸಿದ್ದೆ, ಆದರೆ ನೀವು ಪ್ರಾಂತ್ಯಗಳನ್ನು ಕೆಳಗೆ ತಿಳಿದು, ಅವರ ಸರ್ವಸ್ವವನ್ನು ಕಸಿದುಕೊಂಡು ಒಂದು ರೀತಿಯ ಪ್ರಾಂತೀಯ ಸ್ವಾಯತ್ತೆ ಸಹ ತೆಗೆದುಕೊಳ್ಳಲಾಗಿದ್ದು, ವಾಸ್ತವವಾಗಿ ಪ್ರಾಂತ್ಯಗಳಿಗೆ ಏನೂ ಉಳಿದಿಲ್ಲ. ಆ ಪ್ರಾಂತ್ಯಗಳಿಗೆ ಚನಾಯಿತ ರಾಜ್ಯಪಾಲರುಗಳಿರುತ್ತಾರೆಂದು ತೀರ್ಮಾನಿಸಿದಿರಿ. ನಾನು ‘ಗವರ್ನರ್’ ಎಂಬ ಪದವನ್ನು ಮೊಟ್ಟ ಮೊದಲೇ ಆಕ್ಷೇಪಿಸಿದ್ದೆ. ಆಗ ಪಂಡಿತ್
ಜವಾಹರಲಾಲ್ ನೆಹರು ಅವರು ನಾನು ಮೌಲಾನಾ ಅವರನ್ನು ತೃಪ್ತಿಪಡಿಸಲಾರೆ. ಅವರು ಬಹಳ ಮುಖ್ಯ ವ್ಯಕ್ತಿ. ಅವರು ‘ಗವರ್ನರ್‌’ ಎಂಬ ಪದಕ್ಕೆ ಹೆದರಿದ್ದಾರೆ ಎಂದರು.

ಪ್ರಾಂತ್ಯಗಳಿಗೆ ಸಹ ‘ಗವರ್ನರ್’ ಎಂಬ ಪದದ ಬದಲು ನಾವು ‘ಅಧ್ಯಕ್ಷರು’ ಎಂಬ ಪದ ಉಪಯೋಗಿಸಬಹುದೆಂದು ಸಲಹೆ ಕೊಟ್ಟೆ. ಅದನ್ನು ಮಾಡ ಬೇಕಿಲ್ಲವೆಂದು ಅವರು ಹೇಳಿದರು. ನಾನು ಆ ವಿಷಯವನ್ನು ಆಗ ಒತ್ತಾಯಪಡಿಸಲಿಲ್ಲ. ಇದಕ್ಕೆ ಡಾ. ಅಂಬೇಡ್ಕರರು ಕೊಟ್ಟಿರುವ ಸ್ಪಷ್ಟೀಕರಣ
ಗಳನ್ನು ಕೇಳಿ ಅವರು ಎಲ್ಲವನ್ನು ಬುಡಮೇಲು ಮಾಡಿರುವುದು ನನಗೆ ತಿಳಿದುಬಂದಿದೆ. ಚೀಲದಿಂದ ಬೆಕ್ಕನ್ನು ಹೊರಕ್ಕೆ ಬಿಟ್ಟಿದ್ದಾರೆ. ಅವರು ಸ್ಪಷ್ಟವಾಗಿ ಹೇಳಿದ್ದಾರೆ ಭಾರತವೆಂಬ ಇಂಡಿಯ ಅಂದರೇನು? ಅದು ರಾಜ್ಯಗಳ ಒಂದು ಒಕ್ಕೂಟವಾಗಿರುತ್ತದೆ. ಇದರ ಅರ್ಥವೇನು? ನೀವು ‘ಗಣರಾಜ್ಯ’
ಎಂಬ ಪದವನ್ನು ವಿಸರ್ಜಿಸಿದ್ದೀರಿ, ನೀವು ‘ಫೆಡರೇಷನ್’ ಎಂಬ ಪದವನ್ನು ಬಿಟ್ಟಿರುತ್ತೀರಿ.

ನೀವು ‘ಸ್ವತಂತ್ರ’ ಎಂಬ ಪದವನ್ನು ತಳ್ಳಿಹಾಕಿದ್ದೀರಿ. ನನ್ನ ಗೌರವಾನ್ವಿತ ಮಿತ್ರ ಡಾ. ಅಂಬೇರ್ಡ್ಕ ಹೇಳುತ್ತಾರೆ ಒಳ್ಳೆಯದು ಅದರಿಂದ ಏನಾಗುತ್ತದೆ? ನಾವು ಗಣರಾಜ್ಯ ಎಂದು ಹೇಳಿದರೆ ಏನು ವ್ಯತ್ಯಾಸವಿಲ್ಲ. ನೀವು ಸ್ವತಂತ್ರವೆಂದರೂ, ಎನ್ನದಿದ್ದರೂ ಆದು ಮುಖ್ಯವಲ್ಲ. ಇದು ಅಷ್ಟು ಮುಖ್ಯವಲ್ಲ ವೆಂದರೆ ಅವರು ’ಸ್ವತಂತ್ರ’ ಎಂಬ ಪದವನ್ನು ಪ್ರಜಾಸತ್ತಾತ್ಮಕ ಎಂದು ಬದಲಿಸಲು ಏಕೆ? ಕಾತರರಾಗಿzರೆ ಎಂದು ಕೇಳುತ್ತೇನೆ. ತೆರೆಮರೆಯಲ್ಲಿ ಗುಟ್ಟಾಗಿ ಏನೋ ನಡೆಯುತ್ತಿದೆ.

ಹಿಂದೆ ಒಂದು ಸಂದರ್ಭದಲ್ಲಿ ನಾನು ಈ ವಿಷಯವನ್ನು ಎತ್ತಿ ತೋರಿಸಿದ್ದೆ. ಮೊಹಾನಿ ಎಂಬ ಸಂವಿಧಾನ ರಚನಾ ಸಭೆಯ ಸದಸ್ಯನೊಬ್ಬನ ಮೇಲಿನ ಆರ್ತನಾದವನ್ನು, ಅಂಬೇಡ್ಕರರ ಭಾರತೀಯತೆಯ ಪೂರಕ ಸಂವಿಧಾನ ರಚನೆಯ ಮೇಲಿನ ದ್ವೇಷವನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಸ್ವತಂತ್ರ ನಂತರವು, ಸಂವಿಧಾನದ ಅಸ್ತಿತ್ವದ ನಂತರವೂ ಈ ನೆಲ ದಾಸ್ಯ ಮುಕ್ತವಾಗುವುದನ್ನು ಹಲವರು ಬಯಸಿರಲಿಲ್ಲ ಎಂಬುದು ಸಾದೃಶವಾಗುತ್ತದೆ.

ಆಗಿzಗಿಯೂ, ಶ್ರೇಷ್ಠ ರಾಷ್ಟ್ರಪ್ರೇಮಿ ಅಂಬೇಡ್ಕರರು ಕೆನಡಾದ ಅರೆ ಸಂಯುಕ್ತ ವ್ಯವಸ್ಥೆಯ ಮಾದರಿಯನ್ನು ಎರವಲು ಪಡೆದು ಬಲಿಷ್ಠ ಕೇಂದ್ರ ಸರಕಾರದ ಆಶಯವನ್ನು ಗಟ್ಟಿಗೊಳಿಸಿದ್ದರು ಎಂಬುದು ಮನನವಾಗುತ್ತದೆ.

(ಆಧಾರ-ಭಾರತ ಸಂವಿಧಾನ ರಚನಾ ಸಭೆಯ ಚರ್ಚೆಗಳು, ಪುಟ ಸಂಖ್ಯೆ-೬೧ -೬೨, ಸಂಪುಟ- ೧೦)
(ಲೇಖಕರು ಸಂವಿಧಾನ ತಜ್ಞರು)

Leave a Reply

Your email address will not be published. Required fields are marked *