Wednesday, 18th September 2024

ಆಂಬುಲೆನ್ಸ್ ಸೇವೆಯ ಇತಿಹಾಸ

ಹಿಂದಿರುಗಿ ನೋಡಿದಾಗ

ಆಂಬ್ಯುಲೆನ್ಸ್ ವ್ಯವಸ್ಥೆಯು ಆಧುನಿಕ ಸಮಾಜದ ಅನಿವಾರ್ಯ ಅಂಗವಾಗಿದೆ. ಆಂಬ್ಯುಲೆನ್ಸ್ ಶಬ್ದದ ಮೂಲ ಲ್ಯಾಟಿನ್ ಭಾಷೆಯ ಆಂಬ್ಯುಲೇಶಿಯೊ ಅಥವಾ ಆಂಬ್ಯುಲೇರ್ ಎಂಬ ಪದ. ‘ಎಲ್ಲಿಗೆ ಬೇಕಾದರೂ ಹೋಗುವುದು’ ಎಂಬ ಅರ್ಥವನ್ನು ಇದು ಧ್ವನಿಸುತ್ತದೆ. ಆದರೆ ಈಗ ಈ ಶಬ್ದಕ್ಕೆ ಗಾಯಾಳು
ಅಥವಾ ಅಸ್ವಸ್ಥರನ್ನು ಆಸ್ಪತ್ರೆಗೆ ಸಾಗಿಸಲು ಬಳಸುವ ವಾಹನ ಎಂಬ ಅರ್ಥವೇ ಬಳಕೆಯಲ್ಲಿದೆ. ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವಂತೆಯೇ ಚಿಕಿತ್ಸೆಯನ್ನೂ ಕೊಡುವ ಸವಲತ್ತು ಗಳೂ ಆಂಬ್ಯುಲೆನ್ಸ್‌ನಲ್ಲಿ ಇರುವುದರಿಂದ, ಆಂಬ್ಯುಲೆನ್ಸ್ ಎಂದರೆ ಚಲಿಸುವ ಆಸ್ಪತ್ರೆ ಎಂದು ಅದರ ಅರ್ಥವನ್ನು
ಹಿಗ್ಗಿಸಿದರೂ ತಪ್ಪಾಗಲಾರದು.

ಪ್ರಸ್ತುತ ಭಾರತದ ದೊಡ್ಡ ನಗರಗಳಲ್ಲಿ ವಿವಿಧ ಆಂಬ್ಯುಲೆನ್ಸ್‌ಗಳ ಸೇವೆ ದೊರೆಯುತ್ತಿದೆ. ಮೂಲಸೌಕರ್ಯವಿರುವ ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯು ಲೆನ್ಸ್‌ನಲ್ಲಿ ನುರಿತ ತಂತ್ರಜ್ಞರು, ಮೂಲಭೂತ ವೈದ್ಯಕೀಯ ಉಪಕರಣಗಳು ಹಾಗೂ ಔಷಧಗಳಿರುತ್ತವೆ. ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಆಂಬ್ಯು
ಲೆನ್ಸ್‌ನಲ್ಲಿ ತುರ್ತು ಸಂದರ್ಭಗಳಲ್ಲಿ ನಿಭಾಯಿಸಲು ಅಗತ್ಯವಾದ ಸೌಲಭ್ಯಗಳು, ವೈದ್ಯರು ಹಾಗೂ ಸಹಾಯಕ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಐಸಿಯು ಆಂಬ್ಯುಲೆನ್ಸ್‌ನಲ್ಲಿ ತುರ್ತು ನಿಗಾ ಘಟಕದಲ್ಲಿರುವ ಎಲ್ಲ ಅನುಕೂಲತೆಗಳಿರುತ್ತವೆ.

ಏರ್ ಆಂಬ್ಯುಲೆನ್ಸ್ ವಿಮಾನ/ಹೆಲಿಕಾಪ್ಟರ್ ಮೂಲಕ ರೋಗಿಯನ್ನು ಸಾಗಿಸಬಹುದು. ಬೋಟ್ ಆಂಬ್ಯುಲೆನ್ಸ್, ಅಸ್ಸಾಂ, ಒಡಿಶಾ, ಪಶ್ಚಿಮ ಬಂಗಾಳ, ಗುಜರಾತ್, ದಾದ್ರ- ನಗರಹವೇಲಿ ಮುಂತಾದ ಕೆಲವೇ ರಾಜ್ಯಗಳಲ್ಲಿ ದೊರೆಯು ತ್ತಿದೆ. ನಾನ್-ಎಮರ್ಜೆನ್ಸಿ ಆಂಬ್ಯುಲೆನ್ಸ್ ದೊರೆಯುತ್ತವೆ. ಇದರಲ್ಲಿ ಪಯಣಿಸುವವರಿಗೆ ಯಾವುದೇ ತುರ್ತು ವೈದ್ಯಕೀಯ ಸಮಸ್ಯೆ ಇರುವುದಿಲ್ಲ. ಆದರೆ ಸಾಮಾನ್ಯ ಕಾರು, ಆಟೋ ಇಲ್ಲವೇ ಬಸ್ಸುಗಳಲ್ಲಿ ಇವರು ಪ್ರಯಾಣಿಸಲಾರರು.

ಉದಾಹರಣೆಗೆ ಲಕ್ವ ಹೊಡೆದವರು ಇಲ್ಲವೇ ಬೆನ್ನುಹುರಿಗೆ ಪೆಟ್ಟು ಬಿದ್ದು ಚಿಕಿತ್ಸೆ ಪಡೆಯುತ್ತಿರುವವರು. ಇಂಥವರನ್ನು ಮಲಗಿಸಿಯೇ ಸಾಗಿಸಬೇಕಾಗು ತ್ತದೆ. ಇಂಥವರಿಗಾಗಿ ಈ ಸಾಮಾನ್ಯ ಆಂಬ್ಯುಲೆನ್ಸ್ ಬಳಸುವುದುಂಟು. ಕೆಲವೆಡೆ ಮೃತರನ್ನು ಸಾಗಿಸುವ ಡೆಡ್ ಬಾಡಿ ಆಂಬ್ಯುಲೆನ್ಸ್ ಸೇವೆಯೂ ದೊರೆಯುತ್ತದೆ. ಬೆಂಗಳೂರಿನಲ್ಲಿ ಬೈಕ್ ಆಂಬ್ಯುಲೆನ್ಸ್ ಸೇವೆ ದೊರೆಯುತ್ತಿತ್ತು, ಅದನ್ನು ೧೯೧೫ರ ನಂತರ ನಿಲ್ಲಿಸಿದ್ದಾರೆ. ಹಾಗಾಗಿ ಆಂಬ್ಯುಲೆನ್ಸ್‌ಗಾಗಿ ಫೋನ್ ಮಾಡುವಾಗ, ಯಾವ ರೀತಿಯ ಆಂಬ್ಯುಲೆನ್ಸ್ ಬೇಕಾಗಿದೆ ಎನ್ನುವುದನ್ನು ತಿಳಿಸುವುದು ಒಳ್ಳೆಯದು.

ಆಂಬ್ಯುಲೆನ್ಸ್‌ನ ಬಣ್ಣ ಸಾಮಾನ್ಯವಾಗಿ ಬಿಳಿಯದಿರುತ್ತದೆ. ಈ ಬಣ್ಣವು ಸೂರ್ಯರಶ್ಮಿಯ ಎಲ್ಲ ತರಂಗಗಳನ್ನು ಪ್ರತಿಫಲಿಸುವ ಕಾರಣ, ಅದು ಎಲ್ಲರಿಗೂ ಸ್ಪಷ್ಟವಾಗಿ ಕಾಣುತ್ತದೆ. ಬಿಳಿ ಬಣ್ಣದ ಜತೆಗೆ ಕೆಂಪನ್ನೂ ಬಳಸಿರಬಹುದು. ಕೆಂಪು ಬಣ್ಣವು ತುರ್ತು ಸ್ಥಿತಿಯನ್ನು (ರಕ್ತನಷ್ಟ-ಜೀವನಷ್ಟ) ಸೂಚಿಸುತ್ತದೆ. ಆಂಬ್ಯುಲೆನ್ಸ್ ಮುಂಭಾಗದಲ್ಲಿ ‘ಆಂಬ್ಯುಲೆನ್ಸ್’ ಎಂಬ ಇಂಗ್ಲಿಷ್ ಪದವನ್ನು ತಿರುಗಮುರುಗ ಬರೆದಿರುವುದೂ ಉಂಟು. ಆಂಬ್ಯುಲೆನ್ಸ್‌ನ ಮುಂದೆ ಚಲಿಸುತ್ತಿರುವ ವಾಹನದ ಚಾಲಕ ಅದರ ಪಾರ್ಶ್ವ ಕನ್ನಡಿಯಲ್ಲಿ ನೋಡಿದಾಗ, ತಿರುಗಮುರುಗ ಬರೆದ ಹೆಸರು ನೇರವಾಗಿ ಕಂಡು ಆಂಬ್ಯುಲೆನ್ಸ್‌ಗೆ ದಾರಿ ಬಿಟ್ಟುಕೊಡಲು ಅನುಕೂಲವಾಗು ತ್ತದೆ. ಆಂಬ್ಯುಲೆನ್ಸ್‌ನಲ್ಲಿ ಸೈರನ್ ಮೊಳಗುವುದುಂಟು, ದೀಪ ಬೆಳಗುವುದುಂಟು.

‘ಜೀವ ಹೋಗಬಹುದಾದ ತುರ್ತುಸ್ಥಿತಿಯಿದೆ. ದಯವಿಟ್ಟು ದಾರಿಬಿಡಿ’ ಎಂಬ ಸಂದೇಶವನ್ನು ಸೈರನ್ ಸಾರಿದರೆ, ಕೆಂಪು ದೀಪದ ಬೆಳಕೂ ತುರ್ತುಸ್ಥಿತಿ
ಯನ್ನು ಸೂಚಿಸುತ್ತದೆ. ಅನೇಕ ದೇಶಗಳಲ್ಲಿ ಆಂಬ್ಯುಲೆನ್ಸ್ ಚಲಿಸಲೆಂದೇ ವಿಶೇಷ ಪಥವನ್ನು ಮೀಸಲಿಟ್ಟಿರುವುದುಂಟು. ಭಾರತದಲ್ಲಿ ಇಂಥ ವ್ಯವಸ್ಥೆ ಇಲ್ಲದಿರುವುದು ಮತ್ತು ಆಂಬ್ಯುಲೆನ್ಸ್‌ಗೆ ಮುಕ್ತವಾಗಿ ದಾರಿಬಿಡುವ ಚಾಲಕರ ಸಂಖ್ಯೆ ಕಡಿಮೆಯಿರುವುದು ವಿಷಾದನೀಯ. ಜಗತ್ತಿನಲ್ಲಿ ನಡೆದ ಹಲವು ಯುದ್ಧಗಳಲ್ಲಿ ಕ್ರಿಮಿಯನ್ ಯುದ್ಧವು ಮಹತ್ವದ್ದು. ಇದು ರಷ್ಯನ್ ಸಾಮ್ರಾಜ್ಯ ಹಾಗೂ ಫ್ರೆಂಚ್, ಬ್ರಿಟಿಷ್, ಸಾರ್ಡೀನಿಯ ಮತ್ತು ಒಟ್ಟೋಮಾನ್
ಸಾಮ್ರಾಜ್ಯದ ಸಂಯುಕ್ತ ಪಡೆಗಳ ನಡುವೆ ನಡೆಯಿತು.

ಯುದ್ಧಕ್ಕೆ ಕಾರಣ ಯೆಹೂದಿಗಳಿಗೂ, ಕ್ರೈಸ್ತರಿಗೂ ಹಾಗೂ ಮುಸ್ಲಿಮರಿಗೂ ಪವಿತ್ರವಾದ ದೇವಭೂಮಿಯ ರಕ್ಷಣೆ. ಒಟ್ಟೋಮಾನ್ ಸಾಮ್ರಾಜ್ಯವು ದೇವಭೂಮಿಯ ರಕ್ಷಣೆಯನ್ನು ರಷ್ಯನ್ನರಿಗಿಂತ -ಂಚರಿಗೆ ಒಪ್ಪಿಸುವುದು ಸೂಕ್ತ ಎಂದು ಭಾವಿಸಿತು. ಇದನ್ನು ರಷ್ಯಾ ಒಪ್ಪಲಿಲ್ಲ. ಹಾಗಾಗಿ ಯುದ್ಧ ನಡೆಯಿತು. ಇದು ಆಧುನಿಕ ಜಗತ್ತಿನ ಮೊದಲ ಯುದ್ಧ. ಇದರಲ್ಲಿ ಮೊದಲಬಾರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು, ಹೊಸ ಯುದ್ಧತಂತ್ರಗಳನ್ನು ಬಳಸಿದರು. ಛಾಯಾಗ್ರಾಹಕರು, ಪತ್ರಿಕಾವರದಿಗಾರರು ನೇರವಾಗಿ ಯುದ್ಧ ಭೂಮಿಗೆ ಬಂದು, ಯುದ್ಧದ ಚಿತ್ರಗಳು ಮತ್ತು ವರದಿಯನ್ನು ತಂತಮ್ಮ ಪತ್ರಿಕೆಗಳಿಗೆ ಕಳುಹಿಸಿದರು.

ಹೀಗಾಗಿ ಜನರು ಯುದ್ಧದ ತಾಜಾ ವರದಿಗಳನ್ನು ಓದುವಂತಾಯಿತು. ಈ ಯುದ್ಧದಲ್ಲಿ ಮೊದಲ ಬಾರಿಗೆ ಆಸ್ಪತ್ರೆಗಳು ಯುದ್ಧರಂಗದ ಸಮೀಪದಲ್ಲೇ ಆರಂಭವಾದವು. ಈ ಆಸ್ಪತ್ರೆಯಲ್ಲಿ ವೈದ್ಯಕೀಯ ಶುಶ್ರೂಷೆಯ ಹೊಣೆ ಹೊತ್ತ ಫ್ಲಾರೆನ್ಸ್ ನೈಟಿಂಗೇಲ್ ಎಂಬ ಇಂಗ್ಲಿಷ್ ದಾದಿ ಯುದ್ಧರಂಗದಲ್ಲಿ
ಆಂಬ್ಯುಲೆನ್ಸ್ ಸೇವೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟಳು, ಕುದುರೆಗಾಡಿಯನ್ನೇ ಆಂಬ್ಯುಲೆನ್ಸ್ ಆಗಿ ಪರಿಣಾಮಕಾರಿಯಾಗಿ ಬಳಸಿದಳು. ಈಕೆ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಿ ಸಕಾಲದಲ್ಲಿ ಅತ್ಯಾಧುನಿಕ ಚಿಕಿತ್ಸೆ ನೀಡಿದ್ದು, ಪ್ರತಿಯೊಬ್ಬ ಸೈನಿಕನನ್ನೂ ಮಾನವೀಯತೆಯಿಂದ
ನಡೆಸಿಕೊಂಡದ್ದು ಜಗತ್ತಿನ ಗಮನ ಸೆಳೆಯಿತು.

ಜೂನ್ ೨೪, ೧೮೫೯ರಂದು ಇಟಲಿಯ ಏಕೀಕರಣದ ಹಿನ್ನೆಲೆಯಲ್ಲಿ ಸಾಲರಿನೋ ಎಂಬಲ್ಲಿ ನಡೆದ ಯುದ್ಧದಲ್ಲಿ ೨,೭೦,೦೦೦ ಸೈನಿಕರು ಭಾಗವಹಿಸಿ ದರು. ಅವರಲ್ಲಿ ಕನಿಷ್ಠ ೪೦,೦೦೦ ಮಂದಿ ಸಾವು-ನೋವಿಗೆ ತುತ್ತಾದರು. ಈ ಯುದ್ಧದಲ್ಲಿ ಗಾಯಗೊಂಡ ಸೈನಿಕರ ಬವಣೆ ಕಂಡು ಸ್ವಿಸ್
ವ್ಯಾಪಾರಿ ಹೆನ್ರಿ ಡ್ಯುನಾಂಟ್ ಕರಗಿಹೋದ. ಆಗ ಅವನಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಪರಿಕಲ್ಪನೆ ಹುಟ್ಟಿತು. ಗಾಯಾಳುಗಳು ಯಾವ ಕಡೆಯವರೇ ಆಗಿರಲಿ, ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಮಲಗಿಸಿ ರಣರಂಗದಿಂದ ದೂರದ ಸುರಕ್ಷಿತ ಸ್ಥಳಕ್ಕೆ ಸಾಗಿಸಿ, ಪ್ರಥಮ ಚಿಕಿತ್ಸೆ ನೀಡುವ ಪರಿಕಲ್ಪನೆಯನ್ನು ಈತ ಕಾರ್ಯ
ರೂಪಕ್ಕೆ ತಂದ. ಆರಂಭದಲ್ಲಿ ಮಿಲಿಟರಿಗೆ ಸೀಮಿತವಾಗಿದ್ದ ಪ್ರಥಮ ಚಿಕಿತ್ಸಾ ವ್ಯವಸ್ಥೆ ನಂತರ ಶಾಂತಿ ಸಮಯದಲ್ಲಿ ಜನಸಾಮಾನ್ಯರ ಉಪಯೋಗಕ್ಕೂ ಬಂತು.

ರೆಡ್‌ಕ್ರಾಸ್ ಸಂಸ್ಥೆಯ ಪರಿಕಲ್ಪನೆಗೆ ಜಿನೀವ ಸಮಾವೇಶದಲ್ಲಿ ಅಧಿಕೃತ ಮೊಹರು ಬಿದ್ದ ಕಾರಣ, ಜಗತ್ತಿನ ಎಲ್ಲ ದೇಶಗಳಲ್ಲಿ ಈ ಸಂಸ್ಥೆ ಸೇವೆ ಸಲ್ಲಿಸಲು ಸಾಧ್ಯವಾಯಿತು. ೧೮೬೧-೧೮೬೫ರವರೆಗೆ ಅಮೆರಿಕದ ೧೦,೦೦೦ ಪ್ರದೇಶ ಗಳಲ್ಲಿ ನಡೆದ ಅಂತರ್ಯುದ್ಧದಲ್ಲಿ ೭,೫೨,೦೦ ಜನ ಸತ್ತರು. ಆ ವೇಳೆಗೆ ವೈದ್ಯಕೀಯ ಸವಲತ್ತುಗಳು ಸಾಕಷ್ಟು ಸುಧಾರಿಸಿದ್ದವು. ಇಲ್ಲದಿದ್ದಿದ್ದರೆ ಸಾವು-ನೋವಿನ ಪ್ರಮಾಣ ಮತ್ತಷ್ಟು ಹೆಚ್ಚುತ್ತಿತ್ತು. ಎಲ್ಲ ಕಡೆ ಕುದುರೆಗಾಡಿಯ ಆಂಬ್ಯುಲೆನ್ಸ್ ಇದ್ದವು. ಮೊದಲ ಬಾರಿಗೆ ದೋಣಿ ಮತ್ತು ರೈಲನ್ನು ಆಂಬ್ಯುಲೆನ್ಸ್ ರೂಪದಲ್ಲಿ ಬಳಸಿದರು. ಕ್ಲಾರಾ ಬಾರ್ಟನ್ ಎಂಬಾಕೆಯನ್ನು ಅಮೆರಿಕದ ಫ್ಲೋರೆನ್ಸ್ ನೈಟಿಂಗೇಲ್ ಎಂದರೆ ತಪ್ಪಾಗಲಾರದು. ಶಿಕ್ಷಕಿ ಮತ್ತು ನರ್ಸ್ ಆಗಿದ್ದ ಈ ಕರುಣಾಮೂರ್ತಿ ಅಮೆರಿಕದಲ್ಲಿ ರೆಡ್ ಕ್ರಾಸ್ ಸಂಸ್ಥೆಯನ್ನು ಆರಂಭಿಸಿ, ಅಂತರ್ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ಪ್ರಥಮ ಚಿಕಿತ್ಸೆ ನೀಡಿ, ಆಂಬ್ಯುಲೆನ್ಸ್ ಮೂಲಕ ತ್ವರಿತವಾಗಿ ಆಸ್ಪತ್ರೆಗೆ ಸೇರಿಸಿದಳು, ಅಗತ್ಯವಾದ ಆಹಾರ-ಔಷಧಿಗಳನ್ನೂ ಕಾಲಕಾಲಕ್ಕೆ ಒದಗಿಸಿದಳು. ಹಾಗಾಗಿ ಅಮೆರಿಕನ್ನರು ಈಕೆ ಯನ್ನು ‘ಯುದ್ಧಭೂಮಿಯ ದೇವತೆ’ ಎಂದು ಕರೆದು ಗೌರವಿಸಿದರು.

೧೯ ಮತ್ತು ೨೦ನೇ ಶತಮಾನಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಬೆಳೆದ ಫಲವಾಗಿ ಆವಿ, ವಿದ್ಯುತ್ ಮತ್ತು ಪೆಟ್ರೋಲ್‌ನಿಂದ ಚಲಿಸುವ ಮೋಟಾರು ವಾಹನಗಳು ಬಳಕೆಗೆ ಬಂದವು. ಫೆಬ್ರವರಿ, ೧೮೯೯. ಅಮೆರಿಕದ ಶಿಕಾಗೋದ ಮೈಕೇಲ್ ರೀಸ್ ಆಸ್ಪತ್ರೆ. ೫೦೦ ಉದ್ಯಮಿಗಳು ಹಣ ಹಾಕಿ ಮೊತ್ತಮೊದಲ
ಮೋಟಾರು ಆಂಬ್ಯುಲೆನ್ಸ್ ಅನ್ನು ದಾನವಾಗಿತ್ತರು. ೧೯೦೦ರ ಹೊತ್ತಿಗೆ ನ್ಯೂಯಾರ್ಕ್‌ನಲ್ಲಿ ೨ ಮೋಟಾರು ಆಂಬ್ಯುಲೆನ್ಸ್ ಕೆಲಸಮಾಡಲಾರಂಭಿಸಿದವು. ೨ ಅಶ್ವಶಕ್ತಿ ಸಾಮರ್ಥ್ಯದ ಈ ವಿದ್ಯುತ್ ಚಾಲಿತ ವಾಹನದ ಹಿಂಭಾಗದಲ್ಲಿ ಯಂತ್ರವನ್ನು ಅಳವಡಿಸಿದ್ದರು. ೧೯೦೫ರ ಹೊತ್ತಿಗೆ ಕೆನಡಾದಲ್ಲಿ ೩ ಚಕ್ರಗಳ
ಪೆಟ್ರೋಲ್ ಮೋಟಾರ್ ಆಂಬ್ಯುಲೆನ್ಸ್ ಬಳಸಿದ ಕ್ಯಾಪ್ಟನ್ ಜಾನ್ ಪ್ಯಾಲಿಸರ್, ಅದಕ್ಕೆ ಬುಲೆಟ್ ಪ್ರೂಫ್ ಕವಚ ತೊಡಿಸಿದ್ದ.

ಹಾಗಾಗಿ ಅದು ಯುದ್ಧರಂಗದೊಳಗೇ ನುಗ್ಗಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಮರ್ಥವಾಯಿತು. ೧೮೮೭ರಲ್ಲಿ ಬ್ರಿಟನ್‌ನಲ್ಲಿ ಶುರುವಾದ ಸೇಂಟ್ ಜಾನ್ಸ್ ಆಂಬ್ಯುಲೆನ್ಸ್ ಸೇವೆ, ಪೆಟ್ರೋಲ್ ಚಾಲಿತ ಆಂಬ್ಯುಲೆನ್ಸ್ ಗಳನ್ನು ಬಳಸಸಲಾರಂಭಿಸಿತು. ೧೯೦೯ರ ವೇಳೆಗೆ ಮೋಟಾರು ಆಂಬ್ಯುಲೆನ್ಸ್‌ಗಳ ಕಾರ್ಖಾನೆ ಆರಂಭವಾಯಿತು. ಜೇಮ್ಸ್ ಕನಿಂಗ್‌ಹ್ಯಾಮ್, ಸನ್ ಆಂಡ್ ಕಂಪನಿ ಸಾಮೂಹಿಕವಾಗಿ ಉತ್ಪಾದಿಸಿದ ಆಂಬ್ಯುಲೆನ್ಸ್‌ಗಳು ಅಮೆರಿಕದಾದ್ಯಂತ ದೊರೆತವು. ಇವು ೩೨ ಅಶ್ವಶಕ್ತಿ, ೪ ಸಿಲಿಂಡರ್, ಅಂತರ್ದಹಿತ ಇಂಜಿನ್ನನ್ನು ಒಳಗೊಂಡಿದ್ದವು. ಆಂಬ್ಯುಲೆನ್ಸ್‌ಗೆ ಮೊದಲಬಾರಿಗೆ ಗಾಳಿ ತುಂಬಿದ ಟೈರ್‌ಗಳನ್ನು ಬಳಸಿದ್ದರು. ವಿದ್ಯುತ್ ದೀಪ ಗಳಿದ್ದವು.

ಆಂಬ್ಯುಲೆನ್ಸ್ ಒಳಗೆ ಗಾಯಾಳುವಿಗೆ ಒಂದು ತೂಗುಮಂಚ, ಬಂಧುಗಳು ಕೂರಲು ೨ ಕುರ್ಚಿಗಳಿದ್ದವು. ಹಾರ್ನ್ ಇನ್ನೂ ಆವಿಷ್ಕಾರವಾಗಿರದಿದ್ದ ಕಾರಣ, ಚಾಲಕನ ಪಕ್ಕದಲ್ಲಿ ಒಂದು ಜಾಗಟೆಯನ್ನು ಇಟ್ಟಿದ್ದರು. ಅದನ್ನು ಬಡಿಯುವ ಮೂಲಕ ಜನರನ್ನು/ಚಾಲಕರನ್ನು ಬೇಗ ದಾರಿಬಿಡುವಂತೆ ಎಚ್ಚರಿಸುವ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಹೀಗೆ ಆಂಬ್ಯುಲೆನ್ಸ್ ಹೇಗಿರಬೇಕು ಎಂಬುದಕ್ಕೆ ಒಂದು ಪ್ರಮಾಣ ಬದ್ಧತೆಯನ್ನು ರೂಪಿಸಿದರು.

ಮೊದಲ ಮಹಾಯುದ್ಧ ೧೯೧೪-೧೯೧೮ರವರೆಗೆ ನಡೆಯಿತು. ೧೯೧೭ರಲ್ಲಿ ವಿಮಾನವನ್ನು ಆಂಬ್ಯುಲೆನ್ಸ್ ಆಗಿ ಬಳಸಲು ಯತ್ನಿಸಲಾಯಿತು. ೧೯೨೮ರಲ್ಲಿ ಜಾನ್ ಫ್ಲಿನ್ ಆಸ್ಟ್ರೇಲಿಯದಲ್ಲಿ ಆರಂಭಿಸಿದ ಏರಿಯಲ್ ಮೆಡಿಕಲ್ ಸರ್ವೀಸ್‌ನಲ್ಲಿ ವೈದ್ಯನೇ ವಿಮಾನ ನಡೆಸಿಕೊಂಡು ಗಾಯಾಳುವಿರುವೆಡೆಗೆ ಹೋಗಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚುವರಿ ವೈದ್ಯಕೀಯ ಸೇವೆ ಅಗತ್ಯವಿದ್ದರೆ ಅವನನ್ನು ಅದೇ ವಿಮಾನದ ಮೂಲಕವೇ ಆಸ್ಪತ್ರೆಗೆ ಸಾಗಿಸಬೇಕಾಗಿತ್ತು. ಒಂದು ವರ್ಷ ಪ್ರಾಯೋಗಿಕ ವಾಗಿ ನಡೆದ ಈ ಸೇವೆ ಮುಂದೆ ಆಸ್ಟ್ರೇಲಿಯದ ರಾಯಲ್ ಫ್ಲೈಯಿಂಗ್ ಡಾಕ್ಟರ್ ಸರ್ವೀಸ್ ಆಗಿ ಅರಿವರ್ತಿತವಾಯಿತು.

ಉತ್ತರ ಮತ್ತು ದಕ್ಷಿಣ ಕೊರಿಯ ನಡುವಿನ ಯುದ್ಧ ೧೯೫೦-೧೯೫೩ರವರೆಗೆ ನಡೆಯಿತು. ಅಮೆರಿಕವು ದಕ್ಷಿಣ ಕೊರಿಯಕ್ಕೆ ಬೆಂಬಲ ಸೂಚಿಸಿ ತನ್ನ ಸೇನೆಯನ್ನು ಕಳುಹಿಸಿತು. ೩೬,೫೭೪ ಅಮೆರಿಕನ್ ಯೋಧರು ಮರಣಿಸಿ, ೧,೦೩,೨೮೪ ಯೋಧರು ಗಾಯಗೊಂಡ ಈ ಯುದ್ಧದಲ್ಲಿ ಅಮೆರಿಕವು
ವಿಮಾನ ಆಂಬ್ಯುಲೆನ್ಸ್ ಅನ್ನು ವಿಸ್ತೃತವಾಗಿ ಬಳಸಿತು. ಸಿಯೋಕ್ಸ್-೧೮ ಹೆಲಿಕಾಪ್ಟರ್ ಮೂಲಕ ೧೮,೦೦೦ ಯೋಧ ರನ್ನು ರಣರಂಗದಿಂದ ಸುರಕ್ಷಿತ ಸ್ಥಳಕ್ಕೆ ಸಾಗಿಸಿತು. ಭಾರತದಲ್ಲಿ ಆಂಬ್ಯುಲೆನ್ಸ್ ಸೇವೆ ೧೯೦೨ರ ಹೊತ್ತಿಗೆ ಮುಂಬೈನ ದಾನಿ ಹಾಗೂ ಉದ್ಯಮಿ ಜಮ್‌ಷೆಡ್‌ಜಿ ಟಾಟಾರ ವರ ಮೂಲಕ ಆರಂಭವಾಯಿತು. ೧೯೦೫ರ ವೇಳೆಗೆ ಬ್ರಿಟನ್ನಿನ ಸೇಂಟ್ ಜಾನ್ ಆಂಬ್ಯುಲೆನ್ಸ್ ಸರ್ವೀಸ್ ಕೋಲ್ಕತ್ತದಲ್ಲಿ ಆರಂಭವಾಯಿತು. ಈ ಸೇವೆ ಸೀಮಿತ
ವಾಗಿತ್ತು. ಕೊನೆಗೆ ಭಾರತ ಸರಕಾರವು ಸಿಜಿಎಚ್‌ಎಸ್ ಸೇವೆಗಳ ವ್ಯಾಪ್ತಿಯಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ನೀಡಲಾರಂಭಿಸಿತು.

ವಿಸ್ತೃತ ಆಂಬ್ಯುಲೆನ್ಸ್ ಸೇವೆಗಳು ೧೯೮೦ರ ನಂತರವೇ ದೊರೆಯಲಾರಂಭಿಸಿದರು. ೨೦೧೦ರ ದಶಕದಲ್ಲಿ ಬೆಂಗಳೂರಿನ ಕಾಂಪ್ರೆಹೆನ್ಸಿವ್ ಟ್ರಾಮ ಕನ್ಸಾರ್ಷಿಯಮ್ ಎಂಬ ಸಂಸ್ಥೆ ಜಿಪಿಎಸ್ ಸಜ್ಜಿತ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿತು. ಗಾಯಾಳು ಅಥವಾ ಅಸ್ವಸ್ಥರು ೧೦೬೨ ಸಂಖ್ಯೆಗೆ ಕರೆ ಮಾಡಿದರೆ, ೧೫ ನಿಮಿಷಗಳ ಒಳಗೆ ಆಂಬ್ಯುಲೆನ್ಸ್ ಬಂದು, ಗೋಲ್ಡನ್ ಅವರ್ ಮುಗಿಯುವುದರೊಳಗೆ, ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸುತ್ತಿತ್ತು. ಬೆಂಗಳೂರಿನ ೪ ದಿಕ್ಕಿನಲ್ಲಿದ್ದ ಈ ಆಂಬ್ಯುಲೆನ್ಸ್‌ಗಳು, ೫೮,೭೮೫ ಗಾಯಾಳು ಗಳಿಗೆ ಉಚಿತ ಸೇವೆ ಒದಗಿಸಿದವು.

ಇದೇ ವೇಳೆ ಆಂಧ್ರದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಶುರುವಾಗಿ, ಜನರು ೧೦೮ ಸಂಖ್ಯೆಗೆ ಕರೆ ಮಾಡಿ ಆಂಬ್ಯುಲೆನ್ಸ್ ಸೇವೆ ಪಡೆಯುತ್ತಿದ್ದರು. ಈಗ ಕರ್ನಾಟಕವನ್ನೊಳಗೊಂಡಂತೆ ೨೦ ರಾಜ್ಯಗಳಲ್ಲಿ ಸಂಖ್ಯೆ ೧೦೮ಕ್ಕೆ ಕರೆ ಮಾಡಿದರೆ ಉಚಿತ ಆಂಬ್ಯುಲೆನ್ಸ್ ಸೇವೆ ದೊರೆಯುತ್ತಿದೆ. ಕರ್ನಾಟಕದಲ್ಲಿ ಸುಮಾರು ೭೧೫ ಆಂಬ್ಯುಲೆನ್ಸ್ ಗಳು ೧೦೮ರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿವೆ.

Leave a Reply

Your email address will not be published. Required fields are marked *