Friday, 13th December 2024

ಓದಿನ ಹೆಚ್ಚು ಹತ್ತಿಸುವ ಅಮೆರಿಕನ್ ಶಾಲೆಗಳು

ಶಿಶಿರ ಕಾಲ

shishirh@gmail.com

ಊರಲ್ಲಿದ್ದಾಗ ಹತ್ತಿರದ ಗೋಕರ್ಣಕ್ಕೆ, ಅಲ್ಲಿ ನ ಓಂ ಬೀಚ್‌ಗೆ ಹೋಗಿ ಸ್ವಲ್ಪ ಹೊತ್ತು ಕಾಲಕಳೆದು ಬರುವುದು ಆಗೀಗದ ಕಾರ್ಯಕ್ರಮವಾಗಿತ್ತು. ಓಂ ಮತ್ತು ಕುಡ್ಲೆ ಬೀಚ್‌ನಲ್ಲಿ ಸಾಮಾನ್ಯವಾಗಿ -ರಿನರ್‌ಗಳೇ ಜಾಸ್ತಿ ಇರುತ್ತಿದ್ದರು. ಅವರನ್ನು, ಅವರ ವೇಷವನ್ನು ನೋಡುವುದು ಕಾರ್ಯಕ್ರಮದ ಮುಖ್ಯ ಭಾಗಗಳಲ್ಲಿ ಒಂದಾಗಿತ್ತು. ಅಲ್ಲಿ ಮೊದಲು ಗ್ರಹಿಸಿದ್ದು- ಬೀಚ್ ಚೈರ್ ಹಾಕಿ ಮಲಗಿರುತ್ತಿದ್ದ ಬಹುತೇಕ ಎಲ್ಲ ವಿದೇಶಿಗರ ಕೈಯಲ್ಲಿ ಪುಸ್ತಕವಿರುತ್ತಿತ್ತು.

ಇದೇನೋ ಒಂದು ವಿಶೇಷ ಎಂದು ಆಗ ಅನ್ನಿಸಿರಲಿಲ್ಲ. ಆಗ ಅದರ ಬಗ್ಗೆ, ಅದರಾಚೆ ಯೋಚಿಸಿರಲಿಲ್ಲ. ನಂತರದಲ್ಲಿ ದಕ್ಷಿಣ ಅಮೆರಿಕ, ಯುಎಸ್‌ಎ, ದಕ್ಷಿಣ ಆಫ್ರಿಕಾ ಮೊದ ಲಾದ ದೇಶಗಳನ್ನು ನೋಡಿದಾಗ, ಇಲ್ಲೆಲ್ಲ ವಿಶ್ರಮಿಸುವ, ಪ್ರಯಾಣ ಇತ್ಯಾದಿ ಕಾಯುವ ಸಂದರ್ಭದಲ್ಲೆಲ್ಲ ಪುಸ್ತಕ ಓದುವುದು ವಿದೇಶಿಗರ ಒಂದು ಸಾಮಾನ್ಯವಾದ ವಿಚಾರ ಎಂಬುದು ಹೆಚ್ಚೆಚ್ಚು ಗೋಚರವಾಯಿತು.

ನಾನು ಹುಟ್ಟಿ ಬೆಳೆದ ಜಾಗಗಳಲ್ಲೆಲ್ಲ ಪ್ರಾಜ್ಞರ ಸಂಖ್ಯೆ ಯಥೇಚ್ಛವಾಗಿದ್ದರೂ, ಯಾರೇ ಒಬ್ಬರು ಪುಸ್ತಕ ಓದುವುದು ಹೊರಗೆ ಕಾಣಿಸುತ್ತಿರಲಿಲ್ಲ. ಕೆಲವರ ಮನೆಗೆ ಹೋದರೆ ಗಾಜಿನ ಕಪಾಟುಗಳಲ್ಲಿ ಚಂದಕ್ಕೆ ಸರಿದು ಕೂತಿರುತ್ತಿದ್ದ ಪುಸ್ತಕಗಳನ್ನು ನೋಡಿ ದಾಗ, ‘ಬಹುಶಃ ಅಂಗಡಿಯಿಂದ ತರುವಾಗ ಮುಟ್ಟಿದ್ದೇ ಕೊನೆಯಿರಬೇಕು’ ಎನಿಸುತ್ತಿತ್ತು. ನನಗೋ, ಪುಸ್ತಕಗಳನ್ನು ಕಂಡ ಕೂಡಲೇ ಒಮ್ಮೆ ಮುಟ್ಟಿ, ಎರಡು ಹಾಳೆ ತಿರುವಿಸಬೇಕು, ಆಗಲೇ ಸಮಾಧಾನ. ಆಗೆಲ್ಲ ಧೂಳ್ಪದರಗಳು ಕೈಗೆ ತಾಕುತ್ತಿದ್ದವು.

ಒಳಕ್ಕೆ ಹಾಳೆ ತೆಗೆದರೆ ಪ್ರಿಂಟಿಂಗ್ ಪ್ರೆಸ್‌ನ ಪರಿಮಳ ಆರಿಹೋಗಿರುತ್ತಿರಲಿಲ್ಲ. ಇನ್ನು ಕೆಲವರ ಮನೆಗಳಿಗೆ ಹೋದಾಗ ಪುಸ್ತಕ ನೋಡಲು ನಿಂತರೆ ಅವರೂ ಪಕ್ಕದಲ್ಲಿಯೇ ಬಂದು ನಿಲ್ಲೋರು. ಒಮ್ಮೆ ಹೀಗೆ ಆದಾಗ ಯಜಮಾನರು ಒಟ್ಟಿಗೆ ಜೋಡಿಸಿದ್ದ ಮೂರ‍್ನಾಲ್ಕು ಪುಸ್ತಕವನ್ನು ಮುಟ್ಟಲಿಕ್ಕೆ ಬಿಡಲಿಲ್ಲ. ಏನೋ ಒಂದು ಕಥೆ ಹೇಳಿ ತಪ್ಪಿಸಿಬಿಡುತ್ತಿದ್ದರು. ನಂತರ ಅವರು ಒಳಕ್ಕೆ ಹೋದಾಗ ಥಟ್ಟನೆ ತೆರೆದು ನೋಡಿದರೆ, ಅದರ ಮೊದಲ ಪುಟದಲ್ಲಿ ಊರಿನ ಇನ್ನೊಬ್ಬರ ಹೆಸರು ಇತ್ತು.

ಇದು ಬಹುಶಃ ಇವರು ಅವರ ಮನೆಯಿಂದ ತಂದಿದ್ದರು. ಇವರೂ ಓದಿಲ್ಲ, ಹಿಂದಿರುಗಿ ಕೊಡಲು ಏನೋ ಒಂದು ಮೋಹ; ಕೊಟ್ಟವರಿಗೂ ನೆನಪಿಲ್ಲ, ಏಕೆಂದರೆ ಅವರೂ ಓದುವವರಲ್ಲ. ಡಾಕ್ಟರ್ ಕ್ಲಿನಿಕ್, ಬ್ಯಾಂಕ್, ಕಚೇರಿ ಮೊದಲಾದವುಗಳಲ್ಲಿ ಕಾಯುವಾಗ ಎಲ್ಲರೂ ಆಕಾಶವನ್ನೇ ನೋಡುತ್ತಿರುತ್ತಿದ್ದರೇ ವಿನಾ, ಯಾರೊಬ್ಬರ ಕೈಯಲ್ಲೂ ಪುಸ್ತಕವಿರುತ್ತಿರಲಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುವಾಗ ಯಾರೋ ಒಬ್ಬರು ಪೇಪರ್ ಓದುತ್ತಿದ್ದರೆ ಅದರ ಹಾಳೆಯನ್ನು ಕೇಳುವವರು ಬಿಡಿ, ಅವರು ಓದುತ್ತಿರು ವಾಗಲೇ ಮಡಿಸಿದ್ದ ಪೇಪರ್‌ನ ಇನ್ನೊಂದರ್ಧವನ್ನು ತಲೆಕೆಳಗಾಗಿಯೇ ಓದುವವರಿದ್ದರು.

ಓದು ಎಂದರೆ ಹೊರಗೆ ಕಾಣಿಸಿದ್ದು ಇಷ್ಟೇ. ಓದುವವರು ಇದ್ದದ್ದೇ ತೀರಾ ತೀರಾ ಕಡಿಮೆ. ಕೆಲವೇ ಕೆಲವರು. ಅವರೆಲ್ಲ ಎಲ್ಲೋ ವಿಚಿತ್ರದಂತೆ, ‘ಗುಂಪಿನಲ್ಲಿ ಸೇರದ ಪದ’ದಂತೆ ಕಾಣಿಸುತ್ತಿದ್ದರು. ಊರಲ್ಲಿ ಇನ್ನು ಕೆಲವರು ಎರವಲು ಪುಸ್ತಕಗಳನ್ನಷ್ಟೇ ಓದುವವರಿದ್ದರು. ಅವರೆಂದೂ ಪುಸ್ತಕವನ್ನು ದುಡ್ಡು  ಕೊಟ್ಟು ಖರೀದಿಸುತ್ತಿರಲಿಲ್ಲ. ಹೀಗೆ ಎರವಲು ಕೊಡುವವರು ಒಂದು ಪಟ್ಟಿಯಲ್ಲಿ ಯಾರ‍್ಯಾರಿಗೆ ಯಾವ್ಯಾವ ಪುಸ್ತಕ ಕೊಟ್ಟೆ ಎಂದು ಲೆಕ್ಕಹಚ್ಚಿ ಇಡುವವರಿದ್ದರು. ನಂತರ ದೊಡ್ಡ ಶಹರಗಳಲ್ಲಿ, ಬೆಂಗಳೂರು, ಚೆನ್ನೈ, ಕೋಲ್ಕತಾ, ದೆಹಲಿ ಇಲ್ಲೆಲ್ಲ ಓದುವವರನ್ನು ಬಹಿರಂಗವಾಗಿ ಕಂಡಿದ್ದು ಅಷ್ಟಕ್ಕಷ್ಟೇ.

ಇಂದಿಗೂ ಜೀವಮಾನದಲ್ಲಿ ಒಂದೇ ಒಂದು ಪುಸ್ತಕ ಓದದ ಸುಶಿಕ್ಷಿತರ ಬಹದೊಡ್ಡ ಸಂಖ್ಯೆ ನಮ್ಮಲ್ಲಿದೆ. ಈಗ ಕೆಲವು ಸಮಯದ ಹಿಂದೆ ಫೇಸ್‌ಬುಕ್‌ನಲ್ಲಿ ನಾನು ಓದಿದ ಕೆಲವು ಪುಸ್ತಕಗಳ ಮುಖಪುಟಗಳನ್ನು ಹಂಚಿಕೊಂಡಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ ಒಬ್ಬರು, ‘ನಾವು ಏಕೆ ಪುಸ್ತಕ ಓದಬೇಕು? ಪುಸ್ತಕದ ಓದದವರು ಬದುಕುವುದೇ ಇಲ್ಲವೇ?’ ಎಂದು ಪ್ರಶ್ನಿಸಿದ್ದರು. ಅಂಥದ್ದಕ್ಕೆಲ್ಲ ಉತ್ತರಿಸಿ, ವಿವರಿಸಿ, ಒಪ್ಪಿಸುವುದೆಲ್ಲ ಸಾಧ್ಯವಾದದ್ದಲ್ಲ ಎಂದು ಸುಮ್ಮನೆ ಒಂದು ಲೈಕ್ ಒತ್ತಿ ಅಲ್ಲಿಗೇ ಬಿಟ್ಟೆ.

ಅವರು ಕೇಳಿದ ಪ್ರಶ್ನೆ ಸರಿಯೇ ಇದೆ. ಆದರೆ ಉತ್ತರವನ್ನು ಅವರು ಬಯಸಿದಂತನಿಸಲಿಲ್ಲ. ಓದದವರಿಗೇನ್ ಗೊತ್ತು ಪುಸ್ತಕದ ಪರಿಮಳ! ಮನೆಯಲ್ಲಿ ಪುಸ್ತಕ ಓದುವ ವಾತಾವರಣವಿದ್ದುದರಿಂದ ಮತ್ತು ತಂದೆಯವರ ಸ್ವಲ್ಪ ಒತ್ತಾಯದಿಂದ ನಾನು ಪುಸ್ತಕಗಳನ್ನು ಓದಲಿಕ್ಕೆ ಶುರುಮಾಡಿದ್ದು. ಬಹುಶಃ ಹಾಗೊಂದು ವಾತಾವರಣವಿಲ್ಲದಿದ್ದಲ್ಲಿ, ಓದಲಿಕ್ಕೆ ಕಲಿಯದಿದ್ದಲ್ಲಿ ನಾನು
ಈ ಅಂಕಣವನ್ನು ೩ ವರ್ಷದಿಂದ ನಿರಂತರವಾಗಿ ಒಂದೂ ವಾರ ತಪ್ಪಿಸದೆ ಬರೆಯಲಿಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ನನ್ನ ಮಟ್ಟಿಗೆ ಓದೇ ಬರೆಯುವ ಮೆಟ್ಟಿಲು ಹತ್ತಿಸಿದ್ದು. ಹಾಗಂತ ಓದಾಗಲಿ, ಬರವಣಿಗೆಯ ಸಿದ್ಧತೆಯಾಗಲಿ, ಬರವಣಿಗೆ ಯಾಗಲಿ, ನನ್ನ ವೈಯಕ್ತಿಕ ಮೋಜು, ವಿಶ್ರಾಂತಿಗೆ ಯಾವತ್ತೂ ಹೊರೆಯೆನಿಸಿದ್ದಿಲ್ಲ. ಇರಲಿ, ಅವೆಲ್ಲ ವೈಯಕ್ತಿಕವಾಯಿತು.

ಈಗ ಓದಿನ ಮಹತ್ವದ ಬಗ್ಗೆಯೆಲ್ಲ ಕೊರೆಯಲಿಕ್ಕೆ ಹೋಗುವುದಿಲ್ಲ. ನೀವು ಈ ಲೇಖನ ಓದುತ್ತಿದ್ದೀರಿ ಎಂದರೆ ಓದುವ ಹವ್ಯಾಸದವರೇ ಎಂದಾಯಿತು. ಹಾಗಾಗಿ ಅದೆಲ್ಲ ವಿವರ ಬೇಡ. ನನ್ನ ಅನಿಸಿಕೆಯಲ್ಲಿ, ನಾನು ಯಾರಿಗೂ ಓದುವ ಮಹತ್ವದ ಬಗ್ಗೆ ಹೇಳಲೇಬಾರದು. ಓದುವವರಿಗೆ ಅದು ಗೊತ್ತು. ಇನ್ನು, ಓದದವರಿಗೆ ನೀವು ಎಷ್ಟು ಹೇಳಿದರೂ ಅವರು ಬದಲಾಗರು. ಒಂದೊಮ್ಮೆ ನಿಮ್ಮ ಮಾತು ಸರಿಯೆನಿಸಿ ಓದಲು ಶುರುವಿಟ್ಟುಕೊಂಡರೆಂದುಕೊಳ್ಳಿ, ಮುಂದುವರಿಸಲಿಕ್ಕಾಗದೆ ಕೈಚೆಲ್ಲುವವರೇ ಜಾಸ್ತಿ.

ಏಕೆಂದರೆ, ಒಂದು ವಯಸ್ಸಿನ ನಂತರ ಓದಿನ ಹವ್ಯಾಸವನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ್ದಲ್ಲ. ಹಾಗೆ ಕೆಲವರು ಇನ್ನೊಬ್ಬರನ್ನು ಕಂಡು, ಕೇಳಿ ಓದಲು ಶುರುಮಾಡಿ ಅದನ್ನು ಜೀವನದ ಸಹಜ ಭಾಗವಾಗಿ ಹೊಂದಿಸಿಕೊಂಡಿದ್ದಾರೆ ಎಂದರೆ, ಅದು ಅವರ ಅಚಲಚಿತ್ತದ ಪ್ರತೀಕವೇ ಸರಿ. ಆಸ್ಟ್ರಿಚ್, ಪೆಂಗ್ವಿನ್ ಮೊದಲಾದ ಹಾರಲುಬಾರದ ಹಕ್ಕಿಗಳನ್ನು ನೋಡಿದಾಗ ಅವೆಲ್ಲ ವೈಲ್ಡ್ ಜಗತ್ತಿನಲ್ಲಿ ಇದೊಂದು ವೈಕಲ್ಯದಿಂದ ಇನ್ನೂ ನಶಿಸಿಹೋಗಿಲ್ಲವೇಕೆ ಎನ್ನುವ ಪ್ರಶ್ನೆ ಎದುರಾಗುತ್ತದೆ.

ಸಾಮಾನ್ಯವಾಗಿ, ಬಹುತೇಕ ಪ್ರಾಣಿಗಳು ಅವುಗಳ ಲೈಫ್ ಸ್ಕಿಲ್, ಬದುಕುವ ಕಲೆಯನ್ನು ಕಲಿಯುವುದೇ ಅವುಗಳ ತಂದೆ-ತಾಯಿಯಿಂದ. ಅದರಲ್ಲಿಯೂ ವೇಗವಿಲ್ಲದ, ಹಾರಲುಬಾರದ, ಮರವೇರಲು ಸಾಧ್ಯವಾಗದ ಹೀಗೆ ಯಾವುದೋ ಒಂದು ಚಾಲೆಂಜ್ ಇರುವ ಜೀವಿಯಾದರೆ, ಅಲ್ಪಾಯುಷಿ ಜೀವಿಯಾದರೆ ಅವುಗಳ ಲೈಫ್ ಸ್ಕಿಲ್ ಟ್ರೈನಿಂಗ್‌ಗಳು ಇನ್ನಷ್ಟು ತೀವ್ರ ವಾಗಿರುತ್ತವೆ. ಜೀವಿಗಳಲ್ಲಿಯೇ ಮನುಷ್ಯನ ಬದುಕು ಅತ್ಯಂತ ಕ್ಲಿಷ್ಟವಾದದ್ದು. ಹಾಗಾಗಿಯೇ, ಇಲ್ಲಿ ಬದುಕಲಿಕ್ಕೆ ಅಣಿಯಾಗಲು ಗುರುಕುಲ, ಶಾಲೆ ಇತ್ಯಾದಿಗಳು ಬೇಕಾದದ್ದು. ಆದರೆ ಈ ಶಾಲೆಗಳಲ್ಲಿ ಕೆಲವು ತೀರಾ ಅವಶ್ಯಕ ಲೈಫ್ ಸ್ಕಿಲ್‌ಗಳನ್ನು ಕಲಿಸುವುದೇ ಇಲ್ಲ. ಅವನ್ನೆಲ್ಲ ತಂದೆ-ತಾಯಿ ಕಲಿಸಿಕೊಡಬೇಕು, ಅವರಿಗೆ ಗೊತ್ತಿದ್ದರೆ, ಮಹತ್ವದ್ದೆನಿಸಿದರೆ.

ಆದರೆ ಕಾಲ ಕಳೆದಂತೆ ತಂದೆ- ತಾಯಂದಿರು ಮಕ್ಕಳಿಗೆ ಅಷ್ಟೊಂದು ಸಮಯ ಕೊಡಲಿಕ್ಕಾಗುತ್ತಿಲ್ಲ, ಕೊಟ್ಟರೂ ಪ್ರೀತಿಸಲಿಕ್ಕೆ, ಮುದ್ದಿಸಲಿಕ್ಕೆ, ಓಡಾಡಲಿಕ್ಕೆ ಹೊರತಾಗಿ ಜೀವನಕಲೆಯನ್ನು ಕಲಿಸಲಿಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಶಾಲೆಯ ಅವಲಂಬನೆ ದಿನಗಳೆದಂತೆ ಹೆಚ್ಚುತ್ತಿದೆ. ಈ ಕಾರಣಕ್ಕೇ ಮಕ್ಕಳು ತಂದೆ-ತಾಯಿಗಿಂತ ಮೇಷ್ಟ್ರು ಹೇಳಿದ್ದೇ ಸರ್ವಸ್ವ ಅನ್ನೋದು. ಆದರೆ ಇಂದು, ಆ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಣದ ವಾಸ್ತವಿಕ ಉದ್ದೇಶವನ್ನೇ ಪ್ರಶ್ನಿಸುವಂತಿದೆ. ಮೊಳೆ ಹೊಡೆಯೋದು, ಗರಗಸ ಹಿಡಿಯೋದು ಸ್ವಿಚ್-ಪ್ಲಗ್ ಬದಲಿಸೋದು, ಈಜುವುದು ಹೇಗೆ ಎಂಬುದನ್ನೆಲ್ಲ ಶಾಲೆಯಲ್ಲಿ ಕಲಿಸುತ್ತಾರೆಯೇ ಎಂದು ಕೇಳಿದರೆ ಪ್ರಶ್ನೆಯೇ ಹಾಸ್ಯಾಸ್ಪದವೆನ್ನಿಸುವಂತಾಗಿದೆ.

ಓದುವುದು ಹೇಗೆ, ಬರೆಯವುದು ಹೇಗೆ ಎಂದು ಪ್ರೈಮರಿಯಲ್ಲಿ ಕಲಿಸುವಾಗ, ಅದು ತೀರಾ ಥಿಯರಿ ವಿಷಯವಾಗಿಯೇ
ಇದ್ದು ಬಿಡುತ್ತದೆ. ಅಲ್ಲಿಯೇ ಇನ್ನೊಂದು ಕೋಣೆಯಲ್ಲಿ, ಲೈಬ್ರರಿಯಲ್ಲಿರುವ ಪುಸ್ತಕಗಳದ್ದು- ಲೈಬ್ರರಿ ಇನ್‌ಚಾರ್ಜ್ಗಿರುವ ಜವಾಬ್ದಾರಿಯಿಂದಾಗಿ ಕಪಾಟಿನಿಂದ ಹೊರಬೀಳದಂಥ ಸ್ಥಿತಿ. ಆ ಲೈಬ್ರರಿಯ ಪುಸ್ತಕಗಳನ್ನು ತಂದು ಪಠ್ಯೇತರ ಓದು, ಆ ಓದಿನ ಮೋಜು ಇವನ್ನೆಲ್ಲ ಕಲಿಸುವ ಶಾಲೆಗಳು ನಮ್ಮಲ್ಲಿ ಕೆಲವು ಇದ್ದಿರಬಹುದು, ಆದರೆ ವಿರಳ.

ಭಾರತದಲ್ಲಿ ಈ ಪಬ್ಲಿಕ್ ಓದಿನ ಹವ್ಯಾಸ ತೀರಾ ಕಡಿಮೆಯೇ ಸರಿ. ವಿದೇಶಿಗರು, ಅದರಲ್ಲಿಯೂ ಅಮೆರಿಕನ್ನರು ಹಾಗಲ್ಲ. ಅವರ ಕೈಯಲ್ಲಿ, ಬ್ಯಾಗಿನಲ್ಲಿ ಪುಸ್ತಕವೊಂದು ಇದ್ದೇ ಇರುತ್ತದೆ. ಇವರೆಲ್ಲ ಇದೇಕೆ ಇಷ್ಟು ಓದೋದು? ಇವರನ್ನೆಲ್ಲ ಓದಿಗೆ ಹಚ್ಚಿಸಿದವರು ಯಾರು? ಕಲ್ಚರ್‌ನಲ್ಲಿಯೇ ಇವರಿಗೆ ಈ ಪ್ರಮಾಣದಲ್ಲಿ ಓದಿನ ಹವ್ಯಾಸ ಬಂದಿದ್ದು ಹೇಗೆ? ಎನ್ನುವ ಪ್ರಶ್ನೆಗಳು ನನ್ನಲ್ಲಿ ಬಹುಕಾಲದಿಂದಿದ್ದವು. ಏಕೆಂದರೆ ಓದುವ ಹವ್ಯಾಸಕ್ಕೆ ಬೆಳೆದುಬಂದ ಪರಿಸರ ಮುಖ್ಯವಾಗುತ್ತದೆ ಎನ್ನುವುದು ಕಂಡು ಗೊತ್ತಿತ್ತು. ಓದು ಹಿಂದೂಸ್ತಾನಿ ಸಂಗೀತದಂತೆ.

ಅದು Zಟ್ಠಿಜ್ಟಿಛಿb ಠಿZoಠಿಛಿ, ಒಲಿಸಿಕೊಳ್ಳಬೇಕಾದ ಒಂದು ಜೀವನಕಲೆ, ರುಚಿ. ಅದಕ್ಕೆ ಉತ್ತರ ಸಿಕ್ಕಿದ್ದು ಮಗಳು ಮೈನಾ ಶಾಲೆಗೆ ಹೋಗಲು ಶುರುಮಾಡಿದಾಗಿನಿಂದ. ಇಲ್ಲಿನ ಮಕ್ಕಳಿಗೆ ಶಾಲೆಗಳಲ್ಲಿ ಕಥೆ ಓದಿ ಹೇಳಲೆಂದೇ ಪ್ರತಿದಿನ ಒಂದಿಷ್ಟು ಸಮಯ ನಿಗದಿಪಡಿಸಿರಲಾಗುತ್ತದೆ. ಇದು ವ್ಯಾಕರಣ ಕಲಿಯುವುದಕ್ಕೆ ವ್ಯಯಿಸುವ ಸಮಯಕ್ಕಿಂತ ಜಾಸ್ತಿ. ಒಂದನೇ ಕ್ಲಾಸಿನಿಂದಲೇ
ಕಾಮಿಕ್ ಪುಸ್ತಕಗಳನ್ನು ಓದಿ ಹೇಳೋದು ಶುರುವಾಗುತ್ತದೆ.

ಎರಡನೇ ಕ್ಲಾಸಿಗೆ ಬರುವಾಗ ಓದು, ಬರೆಯೋದು ಕಲಿತ ಮಗುವಿಗೆ ಪುಸ್ತಕವನ್ನು ಕೊಟ್ಟು ಚಿತ್ರ ನೋಡುತ್ತ ಕೆಲವೇ ಶಬ್ದಗಳಲ್ಲಿ ಕಥೆ ಹೇಳುವ ಪುಸ್ತಕಗಳನ್ನು ಕೊಟ್ಟು ಓದಿಸಲು ಕೂರಿಸಲಾಗುತ್ತದೆ. ಇದು ಇಲ್ಲಿನ ಮಿಡ್ಲ್ ಸ್ಕೂಲ್‌ವರೆಗೂ ಮುಂದುವರಿದು ಕೊಂಡು ಹೋಗುತ್ತದೆ. ಅಲ್ಲದೆ ಮಕ್ಕಳಿಗೆ ಊರಿನ ಲೈಬ್ರರಿಗೆ ಹೋಗುವಂತೆ, ಅಲ್ಲಿ ಇವಿಷ್ಟು ಬರಹಗಾರರಲ್ಲಿ ಒಬ್ಬರ ಪುಸ್ತಕವನ್ನು ಓದುವಂತೆ ಹೋಂವರ್ಕ್ ಕೊಡಲಾಗುತ್ತದೆ. ಹೀಗೆ ವಾರಕ್ಕೊಮ್ಮೆ ಮಕ್ಕಳನ್ನು ಲೈಬ್ರರಿಗೆ ಕರೆದೊಯ್ಯಲೇಬೇಕು.

ಬರೀ ಓದಿಸುವುದಷ್ಟೇ ಅಲ್ಲ, ಅದರ ಬಗ್ಗೆ ಅವರಿಗೆ ಅನಿಸಿದ್ದನ್ನು ಶಾಲೆಯಲ್ಲಿ ಎಲ್ಲರೆದುರು ಹೇಳಬೇಕು. ಇದು ಪಬ್ಲಿಕ್ ಸ್ಪೀಕಿಂಗ್ ಕಲಿಯಲಿಕ್ಕೆ, ಸ್ಟೇಜ್‌ಫಿಯರ್ (ಸಭಾಕಂಪನ) ದೂರಮಾಡಲಿಕ್ಕೆ ಸಹಾಯವಾಗುತ್ತದೆ. ಇದಷ್ಟೇ ಅಲ್ಲ, ಚಿಕ್ಕ ಗುಂಪುಗಳನ್ನು ಮಾಡಿ, ಆ ಗುಂಪಿಗೆ ಒಂದು ಪುಸ್ತಕ ಕೊಡಲಾಗುತ್ತದೆ. ಆ ಮಕ್ಕಳು ದಿನವೊಂದರಂತೆ ಒಬ್ಬೊಬ್ಬರು ಕೈಬದಲಿಸಿ, ಓದಿ, ಕೊನೆಯಲ್ಲಿ ಆ ಕಥೆಯಲ್ಲಿ ಹೇಳುವಂತೆ, ಚರ್ಚಿಸುವಂತೆ ಶಾಲೆಯಲ್ಲಿ ನೋಡಿಕೊಳ್ಳಲಾಗುತ್ತದೆ. ಇನ್ನು ಒಂದಿಷ್ಟು ಪುಸ್ತಕವನ್ನು ಜಿಲ್ಲೆಯ ಎಲ್ಲರೂ ಓದಬೇಕು. ಆ ಪುಸ್ತಕದ ಮೇಲೆ ಅಭಿಪ್ರಾಯ ಬರೆಯಬೇಕು.

ಅದಕ್ಕೆ ಜಿಲ್ಲಾಮಟ್ಟದ ಸ್ಪರ್ಧೆ. ಗೆದ್ದವರಿಗೆ ಬಹುಮಾನ. ಮಕ್ಕಳು ಓದಿನಲ್ಲಿ ಅದೆಷ್ಟು ಒಳಹೊಕ್ಕಿರುತ್ತಾರೆಂದರೆ, ಮೂರನೇ ಕ್ಲಾಸಿನಲ್ಲಿರುವಾಗಲೇ ಕನಿಷ್ಠ ೧೦ ಬರಹಗಾರರನ್ನು ಹಿಂಬಾಲಿಸಲು ಮಕ್ಕಳು ಶುರುಮಾಡುತ್ತಾರೆ. ಆ ಬರಹಗಾರನ ಮುಂದಿನ ಈ ಪುಸ್ತಕ, ಈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ವಿಷಯವೂ ಮೂರನೇ ಕ್ಲಾಸಿನ ಮಕ್ಕಳಿಗೆ ತಿಳಿದಿರುತ್ತದೆ. ಉಳಿದದ್ದು ಊಹಿಸಿಕೊಳ್ಳಿ.

ಹೀಗೆ ಓದು, ಆ ಮೂಲಕ ಚರ್ಚೆ, ಬರವಣಿಗೆ ಇವೆಲ್ಲವನ್ನೂ ಎಲ್ಲವೂ ಒಂದೇ ಎನ್ನುವ ರೀತಿಯಲ್ಲಿ ಕಲಿಸಲಾಗುತ್ತದೆ. ಐದನೇ ಕ್ಲಾಸಿಗೆ ಬರುವಷ್ಟರೊಳಗೆ ಪ್ರತಿ ಮಗುವೂ ಪಠ್ಯೇತರ ಓದನ್ನು ದಿನಚರಿಯ ಭಾಗವಾಗಿಸಿಕೊಂಡುಬಿಟ್ಟಿರುತ್ತದೆ. ಇದೆಲ್ಲದರಿಂದ ಮಕ್ಕಳು ೨-೩ನೇ ಕ್ಲಾಸಿನಲ್ಲಿಯೇ ಕಾಮಿಕ್ ಪುಸ್ತಕಗಳನ್ನು, ಚಿತ್ರ ಬಿಡಿಸಿ ಹಾಳೆಗಳಲ್ಲಿ ಬರೆಯುತ್ತಾರೆ. ಅವರವರದೇ ಕಲ್ಪನೆಗಳು. ಅದೆಲ್ಲವನ್ನೂ ಸೇರಿಸಿ, ಪುಟಸಂಖ್ಯೆ ಹಾಕಿ, ಸ್ಟೇಪಲ್ ಮಾಡಿ ಶಾಲೆಗೆ ಒಯ್ದು ಅದರ ಸರಿ-ತಪ್ಪುಗಳ ಚರ್ಚೆಸಹಪಾಠಿಗಳ ಜತೆ ಆಗುತ್ತದೆ. ಈ ಮಕ್ಕಳು ಹೈಸ್ಕೂಲು ಮುಟ್ಟುವಾಗ ಸಾಕಷ್ಟು ಓದುವುದು ರೂಢಿಸಿಕೊಂಡಿರುತ್ತಾರೆ. ಅಲ್ಲಿ ಅವರೆದುರು ೨ ಆಯ್ಕೆಗಳು. ಒಂದೋ ಬರವಣಿಗೆಯತ್ತ ಅವರ ಕಲಿಕೆ ಮುಂದುವರಿಸಬಹುದು ಅಥವಾ ಓದುಗನಾಗಿ ಇನ್ನಷ್ಟು ಅಡ್ವಾನ್ಸ್ ಪುಸ್ತಕಗಳನ್ನು ಓದಬಹುದು.

ಅಲ್ಲಿಯೂ ಓದು, ಚರ್ಚೆ, ಪುಸ್ತಕದ ರಿವ್ಯೂ ಬರೆಯುವುದು, ಪುಸ್ತಕ ಬರೆಯವುದು ಇತ್ಯಾದಿ ಮುಂದುವರಿಯುತ್ತದೆ. ಅಲ್ಲಿಂದ
ಮುಂದೆ, ಹೈಸ್ಕೂಲ್ ಮುಗಿಸಿದವನು ಪ್ರಬುದ್ಧ ಬರಹಗಾರನಾಗಲು ಏನೇನು ಬೇಕು ಎಂದು ತಿಳಿದಿರುತ್ತಾನೆ, ಕಲಿತಿರುತ್ತಾನೆ. ಜತೆಗೆ ಪ್ರೌಢ ಓದುಗನಾಗಿರುತ್ತಾನೆ. ಮುಂದೆ ಓದುಗನಾಗಲಿ, ಬರಹಗಾರನಾಗಲಿ, ಆತನಿಗೆ ಓದಿನ ಆಯಾಮಗಳಾದ ಆತ್ಮಕಥನ, ಕಾದಂಬರಿ, ಕೃಷಿ, ವಿಜ್ಞಾನ, ಸಾಹಿತ್ಯ, -ಡ್ ಸಾಹಿತ್ಯ ಹೀಗೆ ಎಲ್ಲವುಗಳ ಸಾಕಷ್ಟು ಪರಿಚಯವಾಗಿರುತ್ತದೆ. ಅಲ್ಲಿಂದ ಮುಂದೆ ಓದು-ಬರಹ ಅವರವರ ಆಯ್ಕೆಗೆ ಬಿಟ್ಟದ್ದು.

ಈ ಕಾರಣಕ್ಕೆ ಅಮೆರಿಕದಲ್ಲಿ ಸಾಹಿತ್ಯ, ಬರವಣಿಗೆ ಮಲ್ಟಿಮಿಲಿಯನ್ ಡಾಲರ್ ವ್ಯವಹಾರ. ಮಕ್ಕಳಿಗೆ ಈ ರೀತಿ ಓದುವುದನ್ನು ಕಲಿಸುವುದರಿಂದ ಅದಕ್ಕೆ ತಕ್ಕನಾಗಿ ಅಷ್ಟೇ ಪ್ರಮಾಣದ ಶಿಶು, ಬಾಲಸಾಹಿತ್ಯ ಬೇಕಲ್ಲ. ಅಂತೆಯೇ ಉಳಿದೆಲ್ಲ, ಆಯಾ ವಯಸ್ಸಿನಲ್ಲಿ ಓದುವ ಸಾಹಿತ್ಯ ಪ್ರಕಾರಕ್ಕೂ ಎಲ್ಲಿಲ್ಲದ ಬೇಡಿಕೆ. ಬೇಡಿಕೆ ಹೆಚ್ಚಿದಂತೆ ಲಭ್ಯತೆ ಹೆಚ್ಚುತ್ತದೆ, ಪೈಪೋಟಿಯೂ ಅದಕ್ಕನುಗುಣವಾಗಿ. ಇದರಿಂದಾಗಿ ಇನ್ನಷ್ಟು ಅದ್ಭುತ ಬರಹಗಾರರು ತಯಾರಾಗುತ್ತಾರೆ.

ಅಮೆರಿಕದಲ್ಲಿ ಬರಹಗಾರನಿಗೆ ಸ್ಟಾರ್ ವ್ಯಾಲ್ಯೂ ಇದೆ. ನೂರಾರು ಲೇಖಕರ ಪುಸ್ತಕಗಳನ್ನು ಓದುಗರು ಮುಂಗಡ ಕಾಯ್ದಿರಿಸು ತ್ತಾರೆ. ಕೆಲವೊಂದು ಲೇಖಕರ ಪುಸ್ತಕಗಳನ್ನಂತೂ ಹೊಸ ಐಫೋನ್ ಖರೀದಿಗೆ ನಿಂತದ್ದಕ್ಕಿಂತ ಜಾಸ್ತಿ ಉದ್ದದ ಕ್ಯೂನಲ್ಲಿ ನಿಂತು ಓದುಗರು ಖರೀದಿಸುತ್ತಾರೆ. ಲೈಬ್ರರಿಯಲ್ಲಿ ಬಹುತೇಕ ಪುಸ್ತಕಗಳು ಸಿಕ್ಕರೂ ಜನರಿಗೆ ಸ್ವಂತಕ್ಕೇ ಬೇಕು. ಅಮೆರಿಕನ್ ಪ್ರಜೆ, ಸರಾಸರಿ ಪ್ರತಿವರ್ಷ ತಲಾ ನೂರು ಡಾಲರ್‌ಗಿಂತ ಜಾಸ್ತಿ ಹಣವನ್ನು ಓದಲು ವ್ಯಯಿಸುತ್ತಾನೆ.

ಪ್ರಿಂಟ್ ಪುಸ್ತಕದ ವ್ಯವಹಾರ ಅಮೆರಿಕದೊಳಗೆ ೩೫೦ ಕೋಟಿ ಡಾಲರ್‌ನಷ್ಟು ದೊಡ್ಡದು. ಇಲ್ಲಿನ ಬಹುತೇಕ ಪುಸ್ತಕಗಳು
ದೇಶದಾಚೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಅದನ್ನೆಲ್ಲ ಸೇರಿಸಿದರೆ ಇದು ೩,೪೮,೨೯,೫೦೦ ಕೋಟಿ ರುಪಾಯಿಯ ಬಹುದೊಡ್ಡಇಂಡಸ್ಟ್ರಿ, ವ್ಯವಹಾರ. ಅಮೆರಿಕದಲ್ಲಿ ಲಕ್ಷದ ಲೆಕ್ಕದಲ್ಲಿ ಬರಹಗಾರರಿದ್ದಾರೆ. ಇಲ್ಲಿ ಪುಸ್ತಕ ಪ್ರಕಟಣೆಗೆ ಬೇಕಾದ ವ್ಯವಸ್ಥೆ ಸುಲಭದಲ್ಲಿ ಎಲ್ಲರ ಕೈಗೆ ಸಿಗುತ್ತದೆ. ಪುಸ್ತಕ ಬರೆಯುತ್ತಿದ್ದೇನೆ ಎಂದು ಯಾವುದೇ ಊರಿನ ಲೈಬ್ರರಿಗೆ
ಹೋದರೆ, ಅದಕ್ಕೆ ಬೇಕಾಗುವ ಸಾಫ್ಟ್ ವೇರ್‌ಗಳು ಮುಫತ್ತಾಗಿ ಲಭ್ಯ.

ಅದಲ್ಲದೆ ಅದೇ ಲೈಬ್ರರಿಯಲ್ಲಿ ಪುಸ್ತಕ ವಿನ್ಯಾಸವನ್ನೂ  ಹೇಳಿಕೊಡಲಾಗುತ್ತದೆ. ಪುಸ್ತಕ ಬಹಳ ಒಳ್ಳೆಯದಾಗಿ ಮೂಡಿಬಂದಿದ್ದರೆ, ಲೈಬ್ರರಿಯವರೇ ಪಬ್ಲಿಷಿಂಗ್ ಏಜಂಟ್ ಜತೆ ಸಂಪರ್ಕ ಮಾಡಿಕೊಡುತ್ತಾರೆ. ಇದೆಲ್ಲದರಿಂದ ಬರೆಯಬೇಕೆಂದಿದ್ದರೆ, ಒಳ್ಳೆಯ ಬರಹಗಾರನಾಗಿದ್ದರೆ ಮೊದಲ ಪುಸ್ತಕ ಹೊರತರುವುದು ಕಷ್ಟವಾಗುವುದಿಲ್ಲ. ಅದಕ್ಕೆ ಯಾರ ಬೆಂಬಲವೂ ಬೇಕಾಗಿಲ್ಲ. ಪುಸ್ತಕದ ಏಜಂಟ್‌ಗಳು ಪ್ರಿಂಟಿಂಗ್‌ನಿಂದ ಹಿಡಿದು ಪ್ರಕಟಣೆ, ಜಾಹೀರಾತುಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಹೀಗೆ ಇಡೀ ವ್ಯವಸ್ಥೆ
ಬರವಣಿಗೆಗೆ ಮತ್ತು ಓದಿಗೆ ಬೇಕಾದ ಪೂರ್ಣ ವಾತಾವರಣವನ್ನು ಇಲ್ಲಿ ನಿರ್ಮಿಸಿದೆ.

ಅಮೆರಿಕದಲ್ಲಿ ಪ್ರತಿ ವಯಸ್ಕ ಬರೀ ಪ್ರಿಂಟ್ ಪುಸ್ತಕದ ಓದಿಗೆ ವ್ಯಯಿಸುವ ಸರಾಸರಿ ಸಮಯ ದಿನಕ್ಕೆ ೩೧ ನಿಮಿಷ (ಇದು ಸರಾಸರಿ- ಸಣ್ಣ ಸಂಖ್ಯೆಯಲ್ಲ). ಈ ಪ್ರಮಾಣದ ಓದಿನ ಸುತ್ತ ಉಳಿದೆಲ್ಲ ಜೀವನಾವಶ್ಯಕ ಕಲಿಕೆಗಳು. ಇದರ ಪರಿಣಾಮ ಕಾರ್ಪೊರೇಟ್ ಜಗತ್ತಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಅಮೆರಿಕನ್ನರು ಈ ಕಾರಣದಿಂದಲೇ ಅಷ್ಟು ಚಂದಕ್ಕೆ ಇ-ಮೇಲ್ ಬರೆಯುತ್ತಾರೆ, ಮೀಟಿಂಗ್‌ ಗಳಲ್ಲಿ ಮಾತನಾಡುತ್ತಾರೆ, ಪ್ರಸೆಂಟ್ ಮಾಡುತ್ತಾರೆ.

ಯಾವುದೋ ಕಾರ್ಯಕ್ರಮದಲ್ಲೋ, ಸಾಹಿತ್ಯೋತ್ಸವದಲ್ಲೋ ಅಥವಾ ಇನ್ನೆಲ್ಲೋ ಇಂದಿನ ಮಕ್ಕಳು, ದೊಡ್ಡವರು ಓದುವುದು ಕಡಿಮೆಯಾಗಿದೆ. ಓದುವವರು ಅಲ್ಪ ಸಂಖ್ಯಾತರು ಎಂದೆಲ್ಲ ಬಾಯಿಬಡಿದುಕೊಂಡರೆ ಓದುವ ಹವ್ಯಾಸ ಜನರಲ್ಲಿ ಹುಟ್ಟಿ ಬಿಡುವುದಿಲ್ಲ. ಅದನ್ನು ಎಳವೆ ಯಿಂದಲೇ, ಹಂತಹಂತವಾಗಿ ಕಲಿಸಿಬಿಡಬೇಕು. ಓದು, ಅದರ ಜತೆಜತೆಯಲ್ಲಿ ಮಾತಾಡುವ, ಬರೆಯುವ, ವಿಮರ್ಶಿ ಸುವ, ಚರ್ಚಿಸುವ, ವಿಷಯವನ್ನು ಪ್ರಸ್ತುತಪಡಿಸುವ ಹೀಗೆ ಉಳಿದೆಲ್ಲ, ಆಧುನಿಕ ಬದುಕಿಗೆ ತೀರಾ ಅವಶ್ಯಕವಿರುವ ಲೈಫ್ ಸ್ಕಿಲ್ ಅನ್ನು ಶಿಕ್ಷಣ ಕಲಿಸಬೇಕು. ಈ ವಿಷಯದಲ್ಲಿ ಅಮೆರಿಕದ ವ್ಯವಸ್ಥೆಯನ್ನು ಮೆಚ್ಚಲೇಬೇಕು, ನೋಡಿ ಕಲಿಯಬೇಕು, ಅಳವಡಿಸಿಕೊಳ್ಳಬೇಕು. ಜತೆಗೆ, ಇಂದಿನ ಇಂಟರ್‌ನೆಟ್ ಜಮಾನದಲ್ಲಿಯೂ ಪುಸ್ತಕಗಳು ಮಹತ್ವ ಕಳೆದುಕೊಳ್ಳ ದಂತೆ ನೋಡಿಕೊಂಡಿರುವ ಅಮೆರಿಕನ್ನರಿಗೆ, ಅವರ ಕಾಳಜಿಗೆ ಶಹಬಾಸ್ ಕೊಡಲೇಬೇಕು.