Saturday, 9th December 2023

ಕಣ್ಮರೆಯಾದ ಶತಮಾನದ ನೆಲಸಂತ ಆನಂದ ಆಳ್ವ

ಸುಪ್ತ ಸಾಗರ

rkbhadti@gmail.com

ನಾನವರನ್ನು ಭೇಟಿಯಾಗಿದ್ದು ಆರೇಳು ವರ್ಷಗಳ ಹಿಂದೆ. ಆವಾಗ ಅವರಿಗೆ ಅವರಿಗೆ ತೊಂಬತ್ತೆಂಟೋ, ತೊಂಬತ್ತೊಬಂತ್ತರದೋ ಜವ್ವನ! ಮೂಡುಬಿದಿರೆ ಆಳ್ವಾಸ್‌ನ ಯಾವುದೋ ಪರಿಸರ ಸಂಬಂಧಿ ಕಾರ್ಯಕ್ರಮಕ್ಕೆ ಆಹ್ವನಿತನಾಗಿ ಹೋಗಿದ್ದೆ. ವೇದಿಕೆಯಲ್ಲಿ ದೇವರಂತೆ ಆ ಆರಡಿಯ ತುಸುವೂ ಬಾಗಿರದ,
ಎದ್ದಾಳು ಘನ ಗಂಭೀರವಾಗಿ ನಾವೆಲ್ಲ ಬರುವುದಕ್ಕೆ ಮುನ್ನವೇ ಆಸೀನರಾಗಿದ್ದರು. ತುಸು ಮುಜುಗರದೊಂದಿಗೇ ಅವರ ಮೊಮ್ಮಗ, ನನ್ನ ಸ್ನೇಹಿತ ವಿವೇಕ್ ಆಳ್ವರ ಜತೆ ವೇದಿಕೆಯೇರಿ ಅವರ ಪಕ್ಕ ಕುಳಿತುಕೊಳ್ಳುವಾಗ ಸಂಕೋಚದ ಮುದ್ದೆಯಾಗಿದ್ದೆ. ಇಡೀ ಒಂದೂವರೆ ಗಂಟೆಗಳ ಕಾರ್ಯಕ್ರಮದುದ್ದಕ್ಕೂ ಒಂದಿನಿತೂ ಮಿಸುಕಾಡದೆ, ಕೂತ ಭಂಗಿಯನ್ನೂ ಬದಲಿಸದೇ ತದೇಕಚಿತ್ತದಿಂದ ನಮ್ಮೆಲ್ಲರ ಮಾತನ್ನು ಕೇಳಿದರು. ಕೊನೆಯಲ್ಲಿ ಅವರ ಅಧ್ಯಕ್ಷಿಯ ಭಾಷಣ. ಅದನ್ನು ಭಾಷಣ ಎನ್ನುವುದಕ್ಕಿಂತ ಜೀವನಾಮೃತದ ದಿಗ್ದರ್ಶನ. ಅಬ್ಬಾ, ಎಂಥ ವ್ಯಕ್ತಿತ್ವ!

ಕಾರ್ಯಕ್ರಮದ ಬಳಿಕ, ಖುದ್ದು ಅವರೇ ನನ್ನನ್ನು ಪಕ್ಕಾ ದಕ್ಷಿಣ ಕನ್ನಡ ಶೈಲಿಯ ಬೃಹದಾಕಾರದ ತಮ್ಮ ಮನೆಗೆ ಕರೆದೊಯ್ದು ಜೊತೆಗೇ ಕೂತು ಊಟ ಮಾಡಿಸಿ, ಬರೋಬ್ಬರಿ ಅರ್ಧ ದಿನ ತೋಟ-ಗದ್ದೆ, ಬಯಲು-ಬೇಣ ಎಂದೆಲ್ಲ ಸುತ್ತಾಡಿಸಿದರು. ಎಲ್ಲ ಕಡೆಗೂ ಊರುಗೋಲು ಹಿಡಿದುಕೊಂಡು ಅಷ್ಟೆಲ್ಲ ಓಡಾಡಿದರೂ ಒಂದಿ ನಿತೂ ಬಳಲಿದಂತೆ ಕಾಣಲಿಲ್ಲ. ಹೆಜ್ಜೆಗಳು ತುಸು ನಿಧಾನವಾಗಿದ್ದವು ಎಂಬುದನ್ನು ಬಿಟ್ಟರೆ, ಅವು ತಮ್ಮ ದೃಢತೆಯನ್ನು ಎಲ್ಲಿಯೂ ಕಳೆದುಕೊಂಡಿರಲಿಲ್ಲ. ಅದಾದ ಬಳಿಕ ಅವರಿಗೆ ನೂರು ತುಂಬಿದಾಗ ನನ್ನ ಕಿರಿಯ ಪತ್ರಕರ್ತ ಗೆಳತಿ ಶ್ರೀಗೌರಿಯವರಿಗೆ ಹೇಳಿ ಒಂದಷ್ಟು ಮಾಹಿತಿ ಕ್ರೋಡೀಕರಿಸಿ, ಸಂದರ್ಶನ ವನ್ನೊಳಗೊಂಡ ‘ಶತಮಾನದ ನೆಲಸಂತ’ ಎಂಬ ಶೀರ್ಷಿಕೆಯಡಿ ಮುಖಪುಟ ಲೇಖನವನ್ನು ಮಾಡಿಸಿದ್ದೆ. ಆ ವ್ಯಕ್ತಿತ್ವಕ್ಕೆ ಎಷ್ಟು ಮಾರುಹೋಗಿದ್ದೆನೆಂದರೆ, ಬದುಕಿದರೆ ಹೀಗೆ ಬದುಕಬೇಕು ಎಂದು ಎನಿಸಿದ್ದು ಆಗಲೇ. ಮೊನ್ನೆಮೊನ್ನೆ, ಅಂದರೆ ಎರಡು ವಾರದ ಹಿಂದೆ ಇಂಥ ನೆಲಸಂತ ‘ಮಿಜಾರುಗುತ್ತು ಆನಂದ್ ಆಳ್ವ’ ತಮ್ಮನೂರಾ ನಾಲ್ಕನೇ ‘ಹರೆಯ’ದಲ್ಲಿ ಕೊನೆಯುಸಿರೆಳೆದರು.

ಅವರನ್ನು ಕಳೆದುಕೊಂಡ ಬೇಸರವೊಂದನ್ನು ಬಿಟ್ಟರೆ, ತುಂಬು ಬದುಕಿನಲ್ಲಿ ಎಲ್ಲವನ್ನೂ ಸಾಧಿಸಿಹೋದ ಅವರ ಬಗೆಗೆ ವಿಷಾದದ ತುಣುಕೂ ಇಲ್ಲ. ಮುಂದಿನ ಮೂರ‍್ನಾಲ್ಕು ತಲೆಮಾರಿಗೆ ಆದರ್ಶವಾಗಿ ಬಾಳಿ ಹೋದ ಆನಂದ ಆಳ್ವರ ಆ ‘ಎತ್ತರದ’ ವ್ಯಕ್ತಿತ್ವದ ಬಗೆಗೆ ಅಂದು ಪ್ರಕಟಿಸಿದ್ದ ಬರಹವನ್ನೇ ಮತ್ತೊಮ್ಮೆ
ಮೆಲುಕುವುದಾದರೆ…

***
ಎಲ್ಲ ಸುಖ ದುಡ್ಡಿನಲ್ಲಿದೆ, ಮಹಾನಗರದಲ್ಲಿದೆ ಎಂದೆಲ್ಲ ಭ್ರಮಿಸಿ ಅಂಕದ ದಾರಿಯ ಓಡಿ ಯಂತ್ರಗಳಾಗುವ; ಒಂಟಿತನದ ಬಿಂದುವಿನ ಮೇಲೆ ನಿಂತು ಜುಗುಪ್ಸೆಗೊಳ್ಳುವ; ಬದುಕು, ಜಗತ್ತು ಅಂದರೆ ಇಷ್ಟೇನಾ ಎಂಬ ರೆಕ್ಕೆ ಕಟ್ಟಿಕೊಂಡ ಆಧುನಿಕರು ಈ ಹಿರಿ ಜೀವವನ್ನೊಮ್ಮೆ ನೋಡಲೇಬೇಕು. ಬದುಕಿನ ಸಂಧ್ಯಾ ಕಾಲದಲ್ಲಿಯೂ ನೆಲ ಕೆಸರಿನಲ್ಲಿ ನಿಂತು ಧ್ಯಾನಿಸುವ ಒಬ್ಬ ‘ನೆಲಸಂತ’ ಮಿಜಾರುಗುತ್ತು ಆನಂದ ಆಳ್ವ. ಅನುಪಮ ಜೀವನಪ್ರೀತಿಯನ್ನು ಅಪರಿಮಿತ ಜೀವನೋತ್ಸಾಹವನ್ನು ಹೊಂದಿದ್ದವರು ಆನಂದ ಆಳ್ವರು. ನಮ್ಮ ನಡುವೆ ಒಂದು ಶತಮಾನಕ್ಕೂ ಹೆಚ್ಚು ಕಾಲ ನಡೆದು ಬಂದಿದ್ದ ಆ ಹಿರಿಯ ಚೇತನದ ಜೀವನದ ಸಿಂಹಾವಲೋಕನ ಒಂದು ಇಡೀ ಶತಮಾನದ ಸಂಸ್ಕೃತಿ, ಜೀವನಶೈಲಿ, ಸಂಪ್ರದಾಯಗಳಿಗೆ ಹಿಡಿಯಬಹುದಾದ ಒಂದು ಕನ್ನಡಿ.

ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿ ಮಾಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ್ ಆಳ್ವ ಎಂಬ ಅಗಾಧ ಪ್ರತಿಭೆಗೆ ಮೂಲ ಪ್ರೇರಣೆ ಒದಗಿಸಿ, ಸದಾಕಾಲ ಪ್ರೋತ್ಸಾಹ ನೀಡಿದ್ದ ಅದಮ್ಯ ಚೇತನ, ಸ್ಫೂರ್ತಿ ಸೆಲೆಯಾಗಿ ಮುನ್ನಡೆಸಿದ್ದ ಮಾದರಿ ವ್ಯಕ್ತಿತ್ವವಿದ್ದರೆ ಅದು ಅವರ ತಂದೆ ‘ಮಿಜಾರುಗುತ್ತು ಆನಂದ ಆಳ್ವ’. ನೂರ‍್ನಾಲ್ಕು ವರ್ಷಗಳ ತಮ್ಮ ಬದುಕಿನ ಪಯಣದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡ ಅನುಭವಿ ವ್ಯಕ್ತಿ, ತಮ್ಮ ಜೀವನಾನುಭವಗಳಿಂದ
ಶ್ರೀಮಂತ ವ್ಯಕ್ತಿತ್ವ ಹೊಂದಿರುವ ಆಳ್ವರು ಇಂದಿನ ಪೀಳಿಗೆಗೆ ಮಾರ್ಗದರ್ಶನ ಮಾತ್ರವೇ ಅಲ್ಲ, ಸಾಧನೆಗೆ ಸ್ಫೂರ್ತಿಯನ್ನೊದಗಿಸಬಲ್ಲ ಒಬ್ಬ ಉತ್ತಮ ಶಿಕ್ಷಕನೂ ಹೌದು. ಅವರ ಜತೆ ಅವರ ನಂಬಿಕೆ, ಸಂಸ್ಕೃತಿ, ಸಂಪ್ರದಾಯಗಳು ಕೂಡ ಬೆಳೆದುಕೊಂಡು ಬಂದಿದ್ದವು.

ಆನಂದ ಆಳ್ವರು ಹುಟ್ಟಿದ್ದು ೧೯೧೯ರಲ್ಲಿ. ಕೂಡುಕುಟುಂಬ ವ್ಯವಸ್ಥೆಯಿದ್ದ ಅಂದಿನ ಕಾಲದಲ್ಲಿ ಆಳ್ವರು ಬೆಳೆದದ್ದು ಅವರ ಅಜ್ಜಿಯ ಆರೈಕೆಯಲ್ಲಿ ಕೃಷಿಯೇ ಜೀವನಧಾರವಾಗಿದ್ದ ಆಳ್ವರ ಕುಟುಂಬಕ್ಕೆ ಬಡತನವೆಂಬುದು ಅಪರಿಚಿತವೇನಲ್ಲ. ಸಹಜ ಬಾಲ್ಯದೊಂದಿಗೆ ಬೆಳೆದ ಅವರ ಜೀವನದ ಪ್ರತೀ ಹೆಜ್ಜೆಯಲ್ಲೂ ಕೃಷಿ ಸಾಥ್ ನೀಡಿತ್ತು ಎಂಬುದು ಗಮನಾರ್ಹ. ಕಿನ್ನಿಕಂಬಳದಲ್ಲಿದ್ದ ಸರಕಾರಿ ಶಾಲೆಗೆ ಸೇರಿದ ಆಳ್ವರು ಅಲ್ಲಿ ಕೇವಲ ೫ನೇ ತರಗತಿಯವರೆಗಿನ ಶಿಕ್ಷಣವನ್ನು ಮಾತ್ರ ಪೂರೈಸಿದ್ದವರು. ಶಾಲಾದಿನಗಳಿಂದ ಸೌಟ್ಸ ಹಾಗೂ ಕ್ರೀಡೆಯಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡ ಆಳ್ವರು ಈ ಮೂಲಕ ಚಾಣಾಕ್ಷ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದವರು. ಯಾರಿಗೂ ಅನ್ಯಾಯ ಮಾಡಬಾರದೆಂಬ ಜೀವನಪಾಠವನ್ನು ಆಳ್ವರು ಕಲಿತದ್ದು ಇಲ್ಲಿಯೇ.

ವಿದ್ಯಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ, ಆನಂದ ಆಳ್ವರ ಮನಸ್ಸಿದ್ದದ್ದು ಕೃಷಿಯ ಮೇಲೆಯೇ. ಕೃಷಿ, ಅದರ ಸಂಸ್ಕೃತಿ, ಅದನ್ನು ನಂಬಿಕೊಂಡು
ಬಂದಿದ್ದ ಸಂಪ್ರದಾಯಗಳು ಆನಂದ ಆಳ್ವರನ್ನು ಅತೀವವಾಗಿ ಆಕರ್ಷಿಸಿದವೆಂದರೆ ಖಂಡಿತ ತಪ್ಪಾಗಲಾರದು. ಅದರಲ್ಲಿ ಹುಟ್ಟಿಕೊಂಡು ಬಂದ ಆಸಕ್ತಿಯೇ ಅವರನ್ನು ನೆಲಸಂತನನ್ನಾಗಿಸಿದ್ದು, ಕೃಷಿಗಾಗಿ ತುಡಿಯುವ ಒಬ್ಬ ಭಾವಜೀವಿಯನ್ನಾಗಿಸಿದ್ದು, ಅನ್ನದ ದಾರಿಯಾಗಿ ಕೃಷಿ, ಆನಂದ ಆಳ್ವರಿಗೆ ಎಷ್ಟೊಂದು ಇಷ್ಟವೆಂದರೆ ಒಂದು ಕಾಲದಲ್ಲಿ ಹಡಿಲು ಬಿದ್ದ, ಕೃಷಿ ಇಲ್ಲದ ಭೂಮಿ-ಗದ್ದೆ ಎಲ್ಲೇ ಇರಲಿ ಅದನ್ನು ಭೋಗ್ಯಕ್ಕೆ ಪಡೆದು ಅವರು ಬೆನ್ನಿ ಮಾಡಿಸುತ್ತಿದ್ದರು. ಹಸಿರು ಧ್ಯಾನದ ಆನಂದ ಆಳ್ವರು ತಮ್ಮ ನೂರರ ಅಂಚಿನಲ್ಲೂ ಕೃಷಿ, ಬೆನ್ನಿ, ನಾಟಿ, ನೇಜಿ, ಗz, ಕಂಬಳ ಎಂದರೆ ಸಾಕು ಗರಿಗೆದರುತ್ತಿದ್ದರು.

ಸಂತ ಸ್ಥಿತಿಯಲ್ಲಿ ನಿಂತು ಧ್ಯಾನಿಸುವ ಈ ಹಿರಿಯರ ಎಲ್ಲ ಸಾಧನೆ, ಸಾಧ್ಯತೆಗಳು ಗರಿಗೆದರಿದ್ದು ಈ ಭೂಮಿ ಯ. ಈ ಕಾರಣಕ್ಕೆ ಇವರು ನಿಜವಾದ ನೆಲ ಮೂಲದ
ಜೀವಿ. ನೆಲದ ಭಾಷೆಗೆ ಕೊನೆವರೆಗೆ ಕಿವಿಯಾಗುತ್ತಿದ್ದ, ಅಲ್ಲಿಂದಲೇ ಬಗೆದುಕೊಡುತ್ತಿದ್ದ ಆ ಹಿರಿಜೀವದ ಬೆವರಿಗೆ ಹತ್ತಾರು ಅರ್ಥಗಳಿವೆ, ನೂರಾರು ಪದರಗಳಿವೆ.
***

ಕಾರಣಾಂತರಗಳಿಂದ ಚಿಕ್ಕವಯಸ್ಸಿನಲ್ಲಿಯೇ ಮನೆ, ಕೃಷಿಯ ಸಂಪೂರ್ಣ ತಮ್ಮ ಜವಾಬ್ದಾರಿಯನ್ನು ಆನಂದ ಆಳ್ವರು ಹೊರುವಂತಾಗಿತ್ತು. ಈ ಅನಿವಾರ್ಯವೇ ಅವರಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾದ ಪರಿಸ್ಥಿತಿ ತಂದಿತ್ತಿತ್ತು. ಆದರೆ ಆತ್ಮವಿಶ್ವಾಸವನ್ನು ಜನ್ಮತಃ ಪಡೆದು ಬಂದಿದ್ದ ಆಳ್ವರಿಗೆ ಇದು ದೊಡ್ಡ ಸಂಗತಿಯೆನಿಸಲಿಲ್ಲ. ಅವರ ಗಟ್ಟಿತನ, ಜವಾಬ್ದಾರಿ ಹೊತ್ತುಕೊಳ್ಳುವ ಮನೋಭಾವ ಹಾಗೂ ನಾಯಕತ್ವ ಗುಣಗಳು ಅವರನ್ನು ಒಬ್ಬ ಯಶಸ್ವಿ ನಿರ್ವಹಣಾಕಾರ ರನ್ನಾಗಿಸಿದವು. ಚಿಕ್ಕ ವಯಸ್ಸಿಗೆ ಬಹುದೊಡ್ಡ ಜವಾಬ್ದಾರಿಯನ್ನು ಆನಂದ ಆಳ್ವರು ಹೊತ್ತುಕೊಂಡರೂ ಅದನ್ನು ಅದ್ಭುತವಾಗಿ ನಿಭಾಯಿಸಿದರು. ಒಂದೊಂದೇ ಸಮಸ್ಯೆಯನ್ನು ಬಗೆಹರಿಸುತ್ತ, ಕೃಷಿಯಲ್ಲಿ ಹೊಸಪ್ರಯೋಗಗಳನ್ನು ಮಾಡುತ್ತ ಅವರು ಮುಂದುವರಿದರು.

ಹಾಗೆಯೇ ಕ್ಯಾವೆಂಡಿಸ್ ಬಾಳೆಯ ತಳಿಯನ್ನು ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪರಿಚಯಿಸಿದ ಶ್ರೇಯ ಅವರಿಗೆ ದೊರಕುತ್ತದೆ. ಅವರು ಭೂಮಾಲೀಕ ರಾಗಿದ್ದ ಸಂದರ್ಭದಲ್ಲಿ ಹಲವಾರು ಭೂ ಕಾಯಿದೆಗಳು ಜಾರಿಗೆ ಬಂದವು. ಹೊಸ ಭೂಕಾಯಿದೆಗಳಿಂದ ಹಲವಾರು ಸಮಸ್ಯೆಗಳು ಎದುರಾದರೂ ಅದನ್ನು
ಕೃಷಿ ಮತ್ತು ಸ್ತಶ್ರಮದಿಂದ ಎದುರಿಸಬ ಎಂದು ಸ್ವತಂತ್ರವಾಗಿ ಸಾಧಿಸಿ ತೋರಿಸಿದವರು ಅವರು. ಹಾಗೆಂದು ಆನಂದ ಆಳ್ವರು ಕೇವಲ ಕೃಷಿ ಬದುಕಿಗೆ
ಸೀಮಿತರಾಗಿರಲಿಲ್ಲ. ಕೃಷಿಯ ಹೊರತಾಗಿಯೂ ಹಲವು ಕಾರ‍್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಜಾನುವಾರು ಸಂತೆ ಅದರಲ್ಲಿ ಪ್ರಮುಖ ವಾದದ್ದು. ಕೃಷಿ ಬದುಕಿಗೆ ಪೂರಕವಾದ ಜಾನುವಾರುಗಳ ವಿನಿಮಯವನ್ನು ಅವರು ನಿರ್ವಹಿಸಿದ್ದರು. ಈ ಮೂಲಕ ಕೃಷಿಗೆ ಮತ್ತಷ್ಟು ಭದ್ರ ಬುನಾದಿ ಹಾಕಲು ಯತ್ನಿಸಿದ್ದರು. ಜಾನುವಾರು ಸಂತೆಯ ಜತೆ ಜತೆಗೆ ಆಳ್ವರು ಬೀಡಿ ಉದ್ಯಮವನ್ನೂ ಆರಂಭಿಸಿದರು.

ದಕ್ಷಿಣಕನ್ನಡದಲ್ಲಿ ಹೆಚ್ಚಾಗಿ ವ್ಯಾಪಿಸಿಕೊಂಡಿರುವ ಬೀಡಿ ಉದ್ಯಮವು ಇಲ್ಲಿನ ಅನೇಕ ಕುಟುಂಬಗಳ ಆದಾಯದ ಮೂಲವೂ ಹೌದು. ಈ ಹಿನ್ನೆಲೆಯಲ್ಲಿ ಭಾರತ್ ಬೀಡಿಯ ಪ್ರಾಂಚೈಸಿ ಪಡೆದು ಮೂಡುಬಿದಿರೆಯಲ್ಲಿ ಶಾಖೆ ಆರಂಭಿಸಿ ದರು. ನಂತರ ಮಂಗಳೂರಿನ ಸುಹಾಸಿನಿ ಬೀಡಿ ಪ್ರಾಂಚೈಸಿ ಖರೀದಿಸಿ ಅದರ ನಿರ್ವಹಣೆಯನ್ನು ನೋಡಿಕೊಂಡರು. ಈ ಮೂಲಕ ಹಲವಾರು ಕುಟುಂಬಗಳಿಗೆ ಜೀವನಾಧಾರವನ್ನು ಕಲ್ಪಿಸಿದರು. ಈ ಮಧ್ಯೆ ಸ್ನೇಹಿತರ ಸಲಹೆಯಂತೆ ಶರಾಬು
ವ್ಯಾಪಾರವನ್ನೂ ಆರಂಭಿಸಿದರು. ಬೀಡಿ-ಶರಾಬು ವ್ಯವಹಾರವನ್ನು ನಡೆಸಿದರೂ ಒಂದು ದಿನ ಕೂಡ ಅದರ ಲೋಲು ಪತೆಗೆ ಬಲಿಯಾಗದ ಘನ ವ್ಯಕ್ತಿತ್ವ ಆನಂದ ಆಳ್ವರದ್ದು.

ಬಹುಶಃ ಆನಂದ ಆಳ್ವರಲ್ಲಿದ್ದ ದಿಟ್ಟತನ, ಆತ್ಮವಿಶ್ವಾಸ, ನಾಯಕತ್ವ ಹಾಗೂ ಹೊಸತನ ಬಯಸುವ ಗುಣಗಳು ಅವರನ್ನು ಎಲ್ಲ ಬಗೆಯ ಹೊಸ ಕೆಲಸಗಳಿಗೂ ಪ್ರೇರೇಪಿಸಿದವು. ಹೊಸದಾಗಿ ಕಂಡದ್ದನ್ನು ಪರಿಶೀಲಿಸುವ, ಪರಿಶೀಲನೆಗೊಂಡ ವಿಷಯಕ್ಕೆ ಸಕಾರಾತ್ಮಕ ರೂಪ ನೀಡುವ ಕ್ರಿಯಾತ್ಮಕವಾಗಿ ಸಿದ್ಧಗೊಂಡ ಯೋಜನೆಗೆ ಮನಃಪೂರ್ವಕವಾಗಿ ದುಡಿಯುವ, ತಾದಾತ್ಮ್ಯದಿಂದ ಅದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮನೋಭಾವಗಳು ಆನಂದ ಆಳ್ವರನ್ನು ಒಬ್ಬ
ಶ್ರೇಷ್ಠ ಮಾದರಿ ವ್ಯಕ್ತಿಯಾಗಿ ನಿಲ್ಲಿಸಿದುವು. ಪ್ರಾಮಾಣಿಕತೆ, ವಿಧೇಯತೆ, ವ್ಯವಹಾರ ಚಾಣಾಕ್ಷತೆ ಹಾಗೂ ಶುದ್ಧ ಹಸ್ತದ ನಡವಳಿಕೆಗಳು ಅವರ ವ್ಯಕ್ತಿತ್ವಕ್ಕೆ ಕಲಶವಿಟ್ಟಂತಹ ಗುಣಗಳು.

ಆನಂದ ಆಳ್ವರೆಂದರೆ ಒಬ್ಬ ಚಾಣಾಕ್ಷ ವ್ಯವಹಾರಸ್ಥರಾಗಿದ್ದರು ಎಂದು ಬಾಹ್ಯ ನೋಟಕ್ಕೆ ಅನಿಸಬಹುದು. ಆದರೆ, ಸಂಸ್ಕೃತಿ-ಸಂಪ್ರದಾಯ- ಪೂಜೆ- ದೈವ- ಧಾರ್ಮಿಕತೆ- ಕಲೆಗೆ ಸಂಬಂಧಿಸಿದಂತೆ ಒಬ್ಬ ಸಹೃದಯಿ ಆರಾಧಕ ಅವರ ಅಂತರಂಗದಲ್ಲಡಗಿದ್ದ. ಕಂಬಳ, ನಾಗ, ನಾಗಮಂಡಲ, ದೈವ, ದೈವಾರಾಧನೆ ಎಂದರೆ ನೂರರ ಹರಯದಲ್ಲೂ ಆಳ್ವರು ಹುರುಪು ಕಟ್ಟಿ ನಿಂತುಕೊಳ್ಳುತ್ತಿದ್ದರು. ಮಿಜಾರು ಸುತ್ತಲಿನ ವಲಯದಲ್ಲಿ ಅತಿದೊಡ್ಡ ಮಟ್ಟದಲ್ಲಿ ನಾಗಮಂಡಲ ಕೈಂಕರ‍್ಯವನ್ನು ನೆರವೇರಿಸಿದ್ದು ಆನಂದ ಆಳ್ವರೇ. ಕರಾವಳಿಯ ಕಂಬಳ, ನಾಗಮಂಡಲ, ದೈವಾರಾಧನೆ, ಅಂಕ, ಆಯನ ಯಾವುದೇ ಇರಲಿ, ಅವೆಲ್ಲ ಅರಳುವುದು, ಬಿಚ್ಚಿಕೊಳ್ಳುವುದು ಕೃಷಿ ಪಾಯದ ಮೇಲೆಯೇ. ಕೃಷಿ ಉಳಿಯದೇ ಹೋದರೆ ಈ ನೆಲದ ಮೇಲಿನ ಅನೇಕ ಕಲೆಗಳು ಮರೆಯಾಗಿಬಿಡುತ್ತವೆ
ಎಂಬ ಎಚ್ಚರಿಕೆ ಅವರ ಅನುಭವದಲ್ಲಿದೆ. ಈ ಕೃಷಿ ಸಂಸ್ಕೃತಿಯ ಜತೆಗೆ ತಮ್ಮ ಬದುಕಿನುದ್ದಕ್ಕೂ ಸರ್ವಧರ್ಮ ಸಮನ್ವಯವನ್ನು ಅವರು ಪ್ರತಿಪಾದಿಸಿಕೊಂಡು ಬಂದಿದ್ದರು.

ಯಾವುದೇ ಧರ್ಮವಿರಲಿ ಅದು ಬೋಽಸುವುದು ಒಳ್ಳೆಯದನ್ನೇ. ಸಹೃದಯತೆಯೇ ಎಲ್ಲ ಧರ್ಮಗಳ ಮೂಲ ಎಂದು ಬಲವಾಗಿ ನಂಬಿದ್ದವರು ಅವರು. ಆಳ್ವರ ಈ
ಬಂಗಾರದ ವ್ಯಕ್ತಿತ್ವವನ್ನು ಅವರ ಸಮಕಾಲೀನರು ಬಹುಶಃ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಂಬಳವೆಂದರೆ ಅತಿಯಾಗಿ ಪ್ರೀತಿಸುತ್ತಿದ್ದ ಆನಂದ ಆಳ್ವರ
ಜೀವನದಲ್ಲಿಯೂ ಅದರ ಕುರಿತು ಒಂದು ಕಠಿಣ ಸನ್ನಿವೇಶವಿತ್ತು. ಅವರದ್ದು ಕೃಷಿ ಪ್ರಧಾನ ಕುಟುಂಬವಾದರೂ ಅವರದ್ದೇ ಆದ ಕೋಣಗಳು ಅವರ ಮನೆಯಲ್ಲಿರಲಿಲ್ಲ. ಕೃಷಿಯ ಆರಂಭಿಕ ದಿನಗಳಲ್ಲಿ ಕಷ್ಟಪಟ್ಟ ಅವರು ನಂತರ ಕುಂಜಬೆಟ್ಟು ಕೊರಗ ರೈಯವರಲ್ಲಿ ಕಡಿಮೆ ಬೆಲೆಗೆ ಕೋಣಗಳನ್ನು ಕೊಂಡರು. ನಂತರ ಕುಳವೂರಿನಲ್ಲಿ ನಡೆದ ’ಕುಳತ್ತ ಮಜಲ’ ಕಂಬಳದಲ್ಲಿ ಅದನ್ನು ಭಾಗಿಯಾಗಿಸಿದರು. ಈ ಘಟನೆ ಆನಂದ ಆಳ್ವರ ಜೀವನಕ್ಕೆ ತಿರುವು ನೀಡಿತು. ಕಂಬಳ ಕೋಣ ಗಳ ಮೇಲಿನ ಆಸ್ಥೆಯನ್ನು ಇಮ್ಮಡಿಗೊಳಿಸಿದ ಅವರು ಅದನ್ನು ಕೇವಲ ಒಂದು ಸಂಸ್ಕೃತಿಯಾಗಿ ಅಲ್ಲ; ಬದುಕಾಗಿ ಪ್ರೀತಿಸಿದರು, ಗೌರವಿಸಿದರು. ಅವರು ಹೇಳುತ್ತಿದ್ದ ಪ್ರಕಾರ, ಕಂಬಳಕ್ಕಾಗಿ ಕೋಣ ಸಾಕುವುದಲ್ಲ. ಕೋಣಗಳನ್ನು ಸಾಕುವುದಕ್ಕಾಗಿಯೇ ಕಂಬಳವಿರುವುದಲ್ಲ.

ಕೃಷಿ- ಗದ್ದೆ ಹೇಗೆ ನಮಗೆ ಹಿರಿಯರಿಂದ ಬಂದ ಬಳುವಳಿಯೋ ಹಾಗೆಯೇ ಕೋಣ-ಕಂಬಳ ಬೇಸಾಯದ ಒಂದು ಸಾಧ್ಯತೆ. ಕಂಬಳಕ್ಕಾಗಿ ಕೋಣವನ್ನು ಸಾಕುವುದೆಂದರೆ ಅದೊಂದು ಶ್ರಮ, ಪ್ರೀತಿಯ ಮಾದರಿ. ಇಂತಹ ಮಾದರಿಯಲ್ಲಿ ಕಂಬಳ ಎಲ್ಲೆ ಇರಲಿ, ಯಾವುದೇ ಗzಯಿರಲಿ ಅಲ್ಲಿ ಕೋಣಗಳು ಓಡುತ್ತವೆ;
ಪಳಗುತ್ತವೆ. ಕೃಷಿಗಾಗಿ ತರಬೇತಿ ಪಡೆಯುತ್ತವೆ. ಕಂಬಳ ಎಂಬುದು ಕೋಣಗಳ ಪಾಲಿಗೆ ಒಂದು ತಯಾರಿ- ತರಬೇತಿಯ ಶಿಬಿರವೇ ಹೊರತು ಸ್ಪರ್ಧೆ ಅಲ್ಲವೇ ಅಲ್ಲ. ಕಂಬಳದ ಮೇಲಿನ ಅಭಿಮಾನದಿಂದ ಅಂದಿನ ಕಾಲದಲ್ಲಿ ೭ ಕೋಲು ಲೆಕ್ಕದ ದೊಡ್ಡ ಮಟ್ಟದ ಕಂಬಳವನ್ನು ಆಳ್ವರು ನಡೆಸಿದ್ದರು.

ಮಿಜಾರು ವಲಯದಲ್ಲಿ ಕಂಬಳಕ್ಕೆ ಹೆಚ್ಚಿನ ಪ್ರಾತಿನಿಧ್ಯವನ್ನು ಕಲ್ಪಿಸಿಕೊಟ್ಟರು. ಕರಾವಳಿಯಲ್ಲಿ ಕಂಬಳಕ್ಕೆ ಸದೃಢ ಅಡಿಪಾಯ ಕಲ್ಪಿಸಿದ, ಆ ಕಾಲದಲ್ಲಿ ಕಂಬಳಕ್ಕೆ
ಮುಖ್ಯಮಂತ್ರಿಯನ್ನೇ ಕರೆಸಿದ, ಕೆಸರಿನ ಕಂಬಳವನ್ನು ಲೋಕಕ್ಕೇರಿಸಿದ ಕೀರ್ತಿ ಆನಂದ ಆಳ್ವರದ್ದು. ಕೃಷಿ ಆಧರಿತ ಜನಪರ ಕಲೆಗಳು ಉಳಿಯಬೇಕೆಂದು ಹೋರಾಟ ಮಾಡುವ, ಕಾಯಿದೆ ರೂಪಿಸುವ ಇಂದಿನ ಪೀಳಿಗೆಗೆ ಆನಂದ ಆಳ್ವರ ಈ ನಡೆ ಒಂದು ಶ್ರೇಷ್ಠ ಮಾದರಿಯಾಗಬಲ್ಲದು. ಕೊಡ್ತಾಣ್ ಗುತ್ತು ಮನೆತನದ ಸುಂದರಿಯವರೊಡನೆ ಸಪ್ತಪದಿ ತುಳಿದ ಆನಂದ ಆಳ್ವರು, ಕುಟುಂಬ ಗೌರವಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿದರು. ತಮ್ಮ ನಾಲ್ಕು ಜನ ಮಕ್ಕಳಿಗೆ ಉನ್ನತ ಜೀವನ ಮಟ್ಟವನ್ನು ಕಲ್ಪಿಸಲು, ಅವರನ್ನು ಸಮಾಜಕ್ಕೆ ಉತ್ತಮ ಕೊಡುಗೆಯಾಗಿಸಲು ಪಣ ತೊಟ್ಟರು.

ಹಿರಿಯ ಮಗ ಸೀತಾರಾಮ ಆಳ್ವ ಮುಂಬಯಿಯಲ್ಲಿ ವೈದ್ಯರು, ಎರಡನೆ ಮಗ ಬಾಲಕೃಷ್ಣ ಆಳ್ವ ಕೊಯಮತ್ತೂರಿನಲ್ಲಿ ಎಂಜಿನಿಯರ್ ಆಗಿದ್ದಾರೆ. ಮಗಳು ಮೀನಾಕ್ಷಿ ಆಳ್ವ ಪದವೀಧರೆ ಯಾಗಿ, ವಿದೇಶದಲ್ಲಿ ನೆಲೆಸಿzರೆ. ಇನ್ನು ಕಿರಿಯಮಗ ಡಾ.ಎಂ. ಮೋಹನ್ ಆಳ್ವ ಜಾಗತಿಕ ಶಿಕ್ಷಣ ವಲಯವೇ ಹೆಮ್ಮೆ ಪಡಬಹುದಾದಂತಹ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವನ್ನು ಕಟ್ಟಿ ನಿಲ್ಲಿಸಿದ್ದಾರೆ. ಮೋಹನ್ ಆಳ್ವರ ಬಗ್ಗೆ ಒಂದು ಆಸಕ್ತಿಕರ ವಿಷಯವನ್ನು ಆನಂದ ಆಳ್ವರು ಹೊರಹಾಕುತ್ತಾರೆ. ಅದೆಂದರೆ ಹಳ್ಳಿ ಜನರಿಗೆ ಔಷಧ ನೀಡಲೆಂದು, ಅವರ ಆರೋಗ್ಯಕ್ಕೆ ನೆರವಾಗಲಿ ಎಂದು ಅವರು ಮೋಹನ್ ಆಳ್ವರಿಗೆ ಆಯುರ್ವೇದ ಕಲಿಸಿದ್ದರಂತೆ. ಆದರೆ ಡಾ. ಆಳ್ವರು ಇಡೀ ಸಮಾಜದ ಓರೆಕೋರೆಯನ್ನು ತಿದ್ದುವ, ಶೈಕ್ಷಣಿಕ ವೈದ್ಯರಾಗಿ ಬೆಳೆದು ಆನಂದ ಆಳ್ವರ ಕನಸನ್ನು ಅಕ್ಷರಶಃ ನನಸಾಗಿಸಿದರು.

ಆನಂದ ಆಳ್ವ ಎಂಬ ಈ ಹಿರಿಜೀವದ ಬದುಕು ಇಷ್ಟವಾಗುವುದು ಬಹುಶಃ ಇದೇ ಕಾರಣಕ್ಕಾಗಿ, ಇಡೀ ಶತಮಾನದ ಬದುಕಿನ ಸಾಕ್ಷಿಪ್ರeಯಂತಿದ್ದ ಪ್ರಾಮಾಣಿಕ ಜೀವಿಯಾಗಿದ್ದರು; ಆನಂದ ಆಳ್ವರು. ಶತಮಾನದ ಸ್ಥಿತ್ಯಂತರಗಳನ್ನು ಗಮನಿಸುತ್ತಾ, ಬದಲಾವಣೆಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾ, ಹೊಸಪ್ರಯೋಗಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಾ ಜೀವನಪ್ರೀತಿಯನ್ನು ಪಡೆದುಕೊಳ್ಳುತ್ತಿದ್ದ ಆಳ್ವರು ಇಂದಿಗೂ, ಮುಂದಿಗೂ ಪ್ರಸ್ತುತ. ನಮ್ಮ ಸಂಸ್ಕೃತಿ-ಸಂಬಂಧಗಳನ್ನು ಜತನವಾಗಿ ಪೋಷಿಸಿಕೊಂಡು ಬಂದಿದ್ದ ಈ ಹಿರಿಯ ಚೇತನದ ಬದುಕು ಒಂದು ಪಾಠವೇ ಹೌದು. ಯಾಂತ್ರಿಕ ಯುಗದ ಇಂದಿನ ಜೀವನಘಟ್ಟದಲ್ಲಿ ಬಹುತೇಕ ಪಾಲು
ಯಂತ್ರಗಳಂತಾಗಿ ಬದುಕಿನ ಸಂಬಂಧಗಳ ಅರ್ಥಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಇಂದಿನ ಪೀಳಿಗೆ, ಆನಂದ ಆಳ್ವರ ಬದುಕಿನಿಂದ ಕಲಿಯಬೇಕಾದ್ದು ಬಹಳಷ್ಟಿದೆ.

ಜೀವನದಲ್ಲಿ ಏನೇ ಘಟಿಸಲಿ. ಬಹುಶಃ ಅದು ಒಳ್ಳೆಯದ್ದಾಗಿರಬಹುದು ಅಥವಾ ಕೆಟ್ಟದ್ದಾಗಿರಬಹುದು; ಅದೆಲ್ಲ ನಿಂತಿರುವುದು ನಮ್ಮ ಯೋಗಾಯೋಗದ ಮೇಲೆ ಎಂಬ ದೃಢ ನಂಬಿಕೆ ಆಳ್ವರದ್ದಾಗಿತ್ತು. ಸಾಧನೆಯ ಉತ್ತುಂಗಕ್ಕೇರಬೇಕೆಂಬ ಧಾವಂತದಲ್ಲಿ ಮುನ್ನುಗ್ಗುತ್ತಿರುವ ಇಂದಿನ ಪೀಳಿಗೆಗೆ ಆನಂದ ಆಳ್ವರು
ಹೇಳುತ್ತಿದ್ದುದಿಷ್ಟೇ: ಹೇಗಾದರೂ ಮಾಡಿ ಹಣ ಸಂಪಾದಿಸ ಬೇಕೆಂಬುದು ನಮ್ಮ ಗುರಿಯಾಗ ಬಾರದು. ನಮಗೆ ಅದೃಷ್ಟ ಇದ್ದರೆ, ಯೋಗ ಒದಗಿ ಬಂದರೆ ಎಲ್ಲ ಐಶ್ವರ‍್ಯ ತಾನಾಗಿಯೇ ಒದಗಿ ಬರುತ್ತದೆ. ಆದರೆ ಬಂದ ಹಣವನ್ನು ಧರ್ಮಕಾರ್ಯಕ್ಕೆ, ಜನೋಪಯೋಗಕ್ಕೆ ಸದ್ವಿನಿಯೋಗಪಡಿಸುವ ಕೆಲಸ ನಮ್ಮಿಂದಾಗಬೇಕು. ಸತ್ಯಜೀವನ ಗುರಿಯಾಗಬೇಕು.

ವಯಸ್ಸು ನೂರು ದಾಟಿದ ಮೇಲೆಯೂ ಆನಂದ ಅಳ್ವರಲ್ಲಿ ಸ್ವಾಭಿಮಾನ, ಸ್ವಾವಲಂಬಿತನದ ಧೋರಣೆಗಳು ಮನೆ ಮಾಡಿದ್ದವು. ಆದರೆ ಅಂತರಂಗದಲ್ಲಿ ಅವರದ್ದು ಹಸುಗೂಸಿನ ಮುಗ್ಧತೆಯಾಗಿತ್ತು. ಮಕ್ಕಳು, ಮೊಮಕ್ಕಳೇನಾದರೂ ತಪ್ಪು ಮಾಡಿದರೆ ಪ್ರೀತಿಯಿಂದ ಕಿವಿಹಿಂಡುತ್ತಿದ್ದ, ಹಿತವಾಗಿ ಗದರುತ್ತಿದ್ದ ಅವರು ಸರಿದಾರಿ ಯಲ್ಲಿ ಮುನ್ನಡೆಯುವಂತೆ ಪ್ರೇರೇಪಣೆ ನೀಡುವ ಸೂರ್ತಿದಾಯಕ ಚಿಲುಮೆಯಾಗಿ ದ್ದರು. ಇತರರ ಲೆಕ್ಕಾಚಾರದಲ್ಲಿ ಅವರು ಬದುಕಲೇ ಇಲ್ಲ, ತಮ್ಮ ಆಲೋಚನೆಗೆ ಹತ್ತಿರವಾಗದ ಕಿರಿಯರನ್ನು ಎಂದಿಗೂ ತೆಗಳಲಿಲ್ಲ. ಬದಲಿಗೆ ತಮ್ಮ ಅನುಭವಪೂರ್ಣ ಜೀವನದಿಂದಲೇ ಜತೆಗಿರುವ ಜೀವಗಳಿಗೆ ಮಾದರಿಯಾಗಿ ಭೌತಿಕವಾಗಿ ಹೋದ ಮೇಲೆಯೂ, ಕೋಟ್ಯಂತರ ಮಂದಿಯ ಆಂತರ್ಯ ದಲ್ಲಿ ಉಳಿದಿದ್ದಾರೆ ಮಿಜಾರುಗುತ್ತು ಆನಂದ ಆಳ್ವರು.

Leave a Reply

Your email address will not be published. Required fields are marked *

error: Content is protected !!