Monday, 16th September 2024

ರಾಜಕೀಯ ತಂತ್ರಗಾರಿಕೆ: ಅನಂತಕುಮಾರ್‌ ತಂತ್ರಗಾರಿಕೆ

ಅನಂತನಮನ

ಜಿ.ಎಂ.ಇನಾಂದಾರ್‌

ಅನಂತಕುಮಾರ್ ಅವರಿಗೆ ‘ಚಾಣಾಕ್ಷ ತಂತ್ರಗಾರ’ ಎಂದು ಹೆಸರು ಬಂದಿದ್ದು ಸುಮ್ಮನೆ ಅಲ್ಲ. ದೇಶದ ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದಾಗ ಅವರು ‘ಪಕ್ಷವನ್ನು ಸರ್ವಸ್ಪರ್ಶಿಯಾಗಿ ಮಾಡುವ’ ತಂತ್ರಗಾರಿಕೆಯನ್ನು ಉಪಯೋಗಿಸಿ ಅದರಲ್ಲಿ ಯಶಸ್ವಿ ಯೂ ಆಗಿದ್ದು ಇದಕ್ಕೆ ಸಾಕ್ಷಿ. ಅವರ ಯಶಸ್ಸಿಗೆ ಬೇರುಮಟ್ಟದ ಸಂಪರ್ಕ, ಅನುಭವ ಕಾರಣವಾಯಿತು ಎಂದರೆ ಅತಿಶಯೋಕ್ತಿ ಆಗಲಾರದು.

ಈಗ ಚುನಾವಣೆ ಭರಾಟೆ. ಭಾರತೀಯ ಜನತಾ ಪಕ್ಷದ ಚುನಾವಣೆಗಳಿಗೆ ತಳುಕು ಹಾಕಿಕೊಂಡಿರುವ ಹೆಸರು ದಿ. ಅನಂತಕುಮಾರ್ ಅವರದು. ಭಾರತೀಯ ಜನತಾ ಪಕ್ಷದ ‘ಸ್ಟ್ರಾಟಜಿಸ್ಟ್’ ಎಂದೇ ಹೆಸರಾಗಿದ್ದು, ಚುನಾವಣೆಗಳನ್ನು ಗೆಲ್ಲಲು ಬಗೆಬಗೆಯ ತಂತ್ರ ರೂಪಿಸುತ್ತಿದ್ದ ಅನಂತಕುಮಾರ್, ಬಿಜೆಪಿಯ ಗ್ರಾಫ್
ಸದಾ ಮೇಲೇರುವಂತೆ ನೋಡಿಕೊಂಡಿದ್ದರು. ಅವರ ಚುನಾವಣಾ ಯಶಸ್ಸಿಗೆ ಕಾರಣ ಅವರಿಗಿದ್ದ ತಳಮಟ್ಟದ ಅನುಭವ.

ಗೋಡೆ ಬರಹ, ಪೋಸ್ಟರ್ ಅಂಟಿಸುವುದರಿಂದ ಶುರುವಾದ ಅವರ ಪ್ರಯಾಣ, ದೇಶದ ನೀತಿ ನಿರೂಪಣೆಯಲ್ಲಿ ಭಾಗೀದಾರರಾಗುವವರೆಗೆ ಮುಂದು ವರಿದಿದ್ದು ಈಗ ಇತಿಹಾಸ. ಹುಬ್ಬಳ್ಳಿಯ ವಿಜಯನಗರದ ಕೆಂಪಣ್ಣನವರ್ ಕಲ್ಯಾಣ ಮಂಟಪದ ಬದಿಯಲ್ಲಿ ‘ಅನಂತ ಪ್ರೇರಣಾ ಕೇಂದ್ರ’ ಇದೆ. ಅಲ್ಲಿ ಅನಂತಕುಮಾರ್ ಅವರ ಜೀವನಯಾತ್ರೆಯ ವಿವಿಧ ಮಗ್ಗುಲುಗಳು, ಚಿತ್ರಪ್ರದರ್ಶಿನಿಯಾಗಿ ರೂಪುಗೊಂಡಿವೆ. ಅಲ್ಲಿ ತುಸು ದೊಡ್ಡಗಾತ್ರದ ಕೊಡ ವೊಂದನ್ನು ಇಡಲಾಗಿದೆ. ಅನಂತಕುಮಾರ್ ಕಾರ್ಯಕರ್ತರಾಗಿದ್ದಾಗ ಪಾಳಂದೇಯವರ ಮನೆಯಲ್ಲಿ ಉಳಿದುಕೊಂಡಾಗ ಈ ಕೊಡದಿಂದಲೇ
ಕುಂದಗೋಳದ ದೂರದ ಬಾವಿಯಿಂದ ನೀರು ತರುತ್ತಿದ್ದ ರಂತೆ. ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಅನಂತಕುಮಾರ್ ಅವರ ಯಶಸ್ಸಿಗೆ ಈ ಬೇರುಮಟ್ಟದ ಸಂಪರ್ಕ, ಅನುಭವ ಕಾರಣವಾಯಿತು ಎಂದರೆ ಅತಿಶಯೋಕ್ತಿ ಆಗಲಾರದು.

ನಮ್ಮ ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸಿಗೆ ಕೂಡ ಸಾಮಾನ್ಯ ಜನರ ಕಷ್ಟ ಕೋಟಲೆಗಳ First hand ಅನುಭವವೇ ಕಾರಣ ಎಂದು
ಅವರು ಹೇಳುತ್ತಿರುತ್ತಾರೆ. ಬೆಳ್ಳಿಯ ಚಮಚೆಯನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದವರಿಗೆ ಈ ಒಳನೋಟ ಅಲಭ್ಯ. ಹಾಗಾಗಿ, ಅವರ ಅನುಭವ ತುಂಬಾ ಸೂಪರ್‌ಫಿಶಿಯಲ್ ಆಗಿರುತ್ತದೆ. ಚುನಾವಣೆ ಬಂತೆಂದರೆ ಅನಂತಕುಮಾರ್, ಪಾರ್ಟಿಯ ಘೋಷವಾಕ್ಯ, ಪ್ರಣಾಳಿಕೆ ಮತ್ತು ಪ್ರಚಾರ ಸಾಮಗ್ರಿ ರೂಪಿಸು ವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅದು ಅವರಿಗೆ ತೃಪ್ತಿ ತರುವವರೆಗೂ ಪರಿಷ್ಕರಿಸಿದ ಮೇಲೆಯೇ ಅದನ್ನು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಲಾಗುತ್ತಿತ್ತು.

೧೯೮೭ರಲ್ಲಿ ಅನಂತಕುಮಾರ್ ಬಿಜೆಪಿಯನ್ನು ಪ್ರವೇಶಿಸಿದರು. ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಅವರು ಮೊದಲ ಚುನಾವಣೆ ಎದುರಿಸಿ ದ್ದು ೧೯೮೯ರಲ್ಲಿ. ಆಗ ಬಿಜೆಪಿ ೧೧೮ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗ
ದಿಂದಲೂ, ಹಿರಿಯ ನಾಯಕ ಬಿ.ಬಿ. ಶಿವಪ್ಪನವರು ಸಕಲೇಶಪುರದಿಂದಲೂ ಸ್ಪರ್ಧಿಸಿದ್ದರು. ಆಗ ಅನಂತಕುಮಾರ್ ಇಡೀ ರಾಜ್ಯದ ಚುನಾವಣಾ ಜವಾಬ್ದಾರಿ ವಹಿಸಿಕೊಂಡು, ೧೮ ದಿನಗಳ ಕಾಲ ಸತತ ಪ್ರವಾಸ ಮಾಡಿದ್ದರು; ಇಬ್ಬರು ಚಾಲಕರ ಸಮೇತ ಒಂದು ಅಂಬಾಸಿಡರ್ ಕಾರಿನಲ್ಲಿಯೇ ದಿನ ಕಳೆದು ಭರ್ಜರಿ ಪ್ರಚಾರ ನಡೆಸಿದ್ದರು. ಅನಂತಕುಮಾರ್ ೧೯೯೬ರ ವರೆಗೆ ಅನೇಕ ಚುನಾವಣೆಗಳಲ್ಲಿ ಟಿಕೆಟ್ ಹಂಚಿಕೆ ಮಾಡಿದ್ದರು. ಅವರು ತಮಗೆ ಟಿಕೆಟ್ ಕೊಟ್ಟುಕೊಂಡಿರಲಿಲ್ಲ. ೧೯೯೬ ರಲ್ಲಿ ಅವರ ತಾಯಿಯವರ ವೈಕುಂಠ ಸಮಾರಾಧನೆಯ ದಿನ ಹುಬ್ಬಳ್ಳಿಯಲ್ಲಿ ಬಿಜೆಪಿಯ ಎಲ್ಲ ನಾಯಕರು ಬಂದು, ಒಕ್ಕೊರಲಿನಿಂದ ‘ನೀವು ಬೆಂಗಳೂರಿನಿಂದ ಲೋಕಸಭೆಗೆ ನಿಲ್ಲಬೇಕು’ ಎಂದು ಒತ್ತಾಯಿಸಿ, ಟಿಕೆಟ್ ನೀಡಿದರು.

ತದ ನಂತರ ೧೯೯೬ರಿಂದ ೨೦೧೪ರವರೆಗಿನ ಲೋಕಸಭಾ ಚುನಾವಣೆಗಳಲ್ಲಿ ಅನಂತಕುಮಾರ್ ಜಯಭೇರಿ ಬಾರಿಸಿ ‘ಸೋಲಿಲ್ಲದ ಸರದಾರ’ ಎನಿಸಿ ಕೊಂಡರು. ಅವರು ಸೋಲಿಸಿದ ಘಟಾನುಘಟಿಗಳು ಒಬ್ಬಿಬ್ಬರಲ್ಲ. ಮೊದಲ ಚುನಾವಣೆಯಲ್ಲಿಯೇ ಜಯಗಳಿಸಿದ ಹೆಗ್ಗಳಿಕೆ ಅನಂತ್ ಅವರದ್ದು, ಆಗ ಅವರ ಪ್ರತಿಸ್ಪರ್ಧಿಯಾಗಿದ್ದವರು ವರಲಕ್ಷ್ಮಿ ಗುಂಡೂರಾವ್ ಅವರು. ನಂತರ ಡಿ.ಪಿ.ಶರ್ಮ, ಬಿ.ಕೆ.ಹರಿಪ್ರಸಾದ್, ಲೇಔಟ್ ಕೃಷ್ಣಪ್ಪ, ಕೃಷ್ಣ ಭೈರೇಗೌಡ, ನಂದನ್ ನಿಲೇಕಣಿ ಇವರುಗಳನ್ನು ವಿವಿಧ ಅವಽಗಳಲ್ಲಿ ಸೋಲಿಸಿದ್ದು ಅನಂತ್ ಸಾಧನೆ.

ವಿಶೇಷವೆಂದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ, ತಮ್ಮ ಕೊನೆಯ ಚುನಾವಣೆಯಲ್ಲಿ ಅನಂತಕುಮಾರ್ ಶೇ.೫೬.೮೮ರಷ್ಟು ಮತ ಪಡೆದು ಜಯ ಶಾಲಿಯಾಗಿದ್ದರು. ಬೆಂಗಳೂರಿನಂಥ ಪ್ರತಿಷ್ಠಿತ ಕ್ಷೇತ್ರದಲ್ಲಿ ಆರು ಚುನಾವಣೆಗಳ ನಂತರವೂ ಅವರಿಗೆ AntiIncumbency ಇರಲಿಲ್ಲ ಎನ್ನುವುದು ವಿಶೇಷ ಸಂಗತಿ. ಇದಕ್ಕೆ ಕಾರಣ, ತಮ್ಮ ಲೋಕಸಭಾ ಕ್ಷೇತ್ರಕ್ಕೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆಗಳು, ಜತೆಗೆ ಬಿಜೆಪಿಯ ಹಾಗೂ ಆರ್‌ಎಸ್‌ಎಸ್‌ನ ನಿಷ್ಠಾವಂತ ಕಾರ್ಯಕರ್ತರು ಮತ್ತು ಅವರ ಶ್ರೀಮತಿ ತೇಜಸ್ವಿನಿಯವರ ಸಾಮಾಜಿಕ ಕಾರ್ಯಗಳೂ ಇದಕ್ಕೆ ಯೋಗದಾನ ನೀಡಿದವು ಎನ್ನಬೇಕು ಚಾಣಾಕ್ಷ ತಂತ್ರಗಾರ ಅನಂತಕುಮಾರ್ ಅವರಿಗೆ ‘ಚಾಣಾಕ್ಷ ತಂತ್ರಗಾರ’ ಎಂದು ಹೆಸರು ಬಂದಿದ್ದು ಸುಮ್ಮನೆ ಅಲ್ಲ.

ಅವರ ನಿಶಿತಮತಿ ಈ ದಿಕ್ಕಿನಲ್ಲಿ ಚುರುಕಾಗಿ ಓಡುತ್ತಿತ್ತು. ಅವರ ತಂತ್ರಗಾರಿಕೆಯ ಕೆಲವು ಝಲಕುಗಳು ಇಲ್ಲಿವೆ: ಅನಂತಕುಮಾರ್ ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವರಾಗಿದ್ದ ಹೊಸತರಲ್ಲಿನ ಘಟನೆಯಿದು. ATC (Air Traffic Control) ನೌಕರರು ಮುಷ್ಕರ ಹೂಡಿ ಸರಕಾರಕ್ಕೆ ಭಾರಿ ಹೊರೆಯಾಗುವ ಬೇಡಿಕೆಗಳನ್ನು ಇಟ್ಟು, ಸರಕಾರವನ್ನೇ ಬ್ಲಾಕ್‌ಮೇಲ್ ಮಾಡುವ ಯೋಜನೆ ಹಾಕಿಕೊಂಡಿದ್ದರು. ಅವರು ಕೆಲಸಕ್ಕೆ ಹಾಜರಾಗ ದಿದ್ದರೆ ಇಡೀ ದೇಶದ ವೈಮಾನಿಕ ಕ್ಷೇತ್ರ ಸ್ತಬ್ಧವಾಗುವ ಪರಿಸ್ಥಿತಿ ಉದ್ಭವಿಸಿತ್ತು.

ಆಗ ಸ್ವಲ್ಪ ಎಡವಿದ್ದರೂ ಸರಕಾರಕ್ಕೆ ಕೆಟ್ಟ ಹೆಸರು ಹಾಗೂ ಮಂತ್ರಿ ಪದವಿಗೇ ಸಂಚಕಾರ ಬರುವ ಸಾಧ್ಯತೆಗಳಿದ್ದವು. ಅನಂತಕುಮಾರ್ ದಿಟ್ಟ ನಿರ್ಧಾರ ಕೈಗೊಂಡರು. ಮುಷ್ಕರ ನಿರತ ಎಲ್ಲ ನೌಕರರನ್ನು ತಕ್ಷಣ ವಜಾಗೊಳಿಸುವ, ಅವರ ಬದಲಾಗಿ ವಾಯುಸೇನೆಯ ಸಿಬ್ಬಂದಿಯನ್ನು ನಿಯೋಜಿಸುವ ದಿಟ್ಟ ನಿರ್ಧಾರವನ್ನು ಪ್ರಕಟಿಸಿದರು. ಇದರಿಂದ ಆಘಾತಗೊಂಡ ಮುಷ್ಕರನಿರತರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾದರು. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವುದಾಗಿ ಅನಂತಕುಮಾರ್ ಭರವಸೆ ನೀಡಿದರು. ಅನಂತಕುಮಾರರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಬಂದಿದ್ದು ೨೦೦೩ರಲ್ಲಿ. ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ಈ ಜವಾಬ್ದಾರಿ ವಹಿಸಿಕೊಂಡಿದ್ದರು.

ಆ ಸಮಯದಲ್ಲಿ ಬಿಜೆಪಿಯ ಕೇಂದ್ರೀಯ ನಾಯಕತ್ವವು ಮೂವರು ಪ್ರಮುಖ ಸಚಿವರನ್ನು ಸರಕಾರದಿಂದ ಬಿಡುಗಡೆ ಮಾಡಿ, ಪಕ್ಷದ ಬೆಳವಣಿಗೆಗೆ ನಿಯೋಜಿಸಿತ್ತು- ಮಹಾರಾಷ್ಟ್ರಕ್ಕೆ ಪ್ರಮೋದ್ ಮಹಾಜನ್, ಕರ್ನಾಟಕಕ್ಕೆ ಅನಂತಕುಮಾರ್ ಹಾಗೂ ರಾಜಸ್ಥಾನಕ್ಕೆ ವಸುಂಧರಾ ರಾಜೆ. ತಮ್ಮ ಕೇಂದ್ರ ಸಚಿವ ಸ್ಥಾನ ತೊರೆಯಲು ಅನಂತಕುಮಾರ್ ಕೊಂಚವೂ ಹಿಂಜರಿಯಲಿಲ್ಲ. ಪಕ್ಷದ ಅಧ್ಯಕ್ಷರಾಗಿ ಹತ್ತು ತಿಂಗಳ ಕಾಲ ಸತತ ಪ್ರವಾಸ ಮಾಡಿದ ಅನಂತ ಕುಮಾರ್ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರು ಪಕ್ಷವು ಸರ್ವಸ್ಪರ್ಶಿ ಆಗುವಂತೆ ಮಾಡಿದರು. ದೇಶದ ಬೇರೆ ಬೇರೆ ರಾಜ್ಯಗಳ ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾಗ ಅನಂತಕುಮಾರರು ‘ಪಕ್ಷವನ್ನು ಸರ್ವ ಸ್ಪರ್ಶಿಯಾಗಿ ಮಾಡುವ’ ಇದೇ ತಂತ್ರಗಾರಿಕೆ ಯನ್ನು ಉಪ ಯೋಗಿಸಿದ್ದು ಮಾತ್ರವಲ್ಲ, ಅದರಲ್ಲಿ ಅವರು ಯಶಸ್ವಿಯೂ ಆಗಿದ್ದು ಗಮನಾರ್ಹ.

ರಾಮಕೃಷ್ಣ ಹೆಗಡೆಯವರ ಅನೇಕ ಸಮೀಪವರ್ತಿ ನಾಯಕರಾದ ಗೋವಿಂದ ಕಾರಜೋಳ, ಎಸ್. ಬಂಗಾರಪ್ಪ, ಸಿ.ಎಂ. ಉದಾಸಿ, ರಮೇಶ್ ಜಿಗಜಿಣಗಿ ಹೀಗೆ ಅನೇಕ ಘಟಾನುಘಟಿಗಳನ್ನು ಬಿಜೆಪಿಗೆ ಕರೆತಂದದ್ದು ಅನಂತ ಕುಮಾರ್. ಆ ಕಾಲಘಟ್ಟದಲ್ಲಿ ಬಿಜೆಪಿಯು ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಲ್ಲಿಯವರೆಗೆ ಭಾರತೀಯ ಜನತಾ ಪಾರ್ಟಿಯನ್ನು ಆಡಳಿತಕ್ಕೆ ಬರದ, ಒಂದು Fringe Party ಎಂದು ಪರಿಗಣಿಸು ತ್ತಿದ್ದ ಜನತೆ, ನಂತರದಲ್ಲಿ ‘ಅಽಕಾರಕ್ಕೆ ಬರಬಹುದಾದ ಪಾರ್ಟಿ’ ಎಂದು ಪರಿಗಣಿಸತೊಡಗಿತು. ಮುಂದೆ, ಭಾರತೀಯ ಜನತಾ ಪಾರ್ಟಿಯು ಕರ್ನಾಟಕ ದಲ್ಲಿ ಅಧಿಕಾರ ಹಿಡಿದಿದ್ದು ಈಗ ಇತಿಹಾಸ.

ಆ ಚುನಾವಣಾ ಸಮಯದಲ್ಲಿ ಅವರಿಗೆ ಅವರ ಲೋಕಸಭಾ ಕ್ಷೇತ್ರಕ್ಕೆ ಕನಿಷ್ಠ ಒಂದು ವಾರದಿಂದ ೧೦ ದಿನ ಮೀಸಲಿಡುವಂತೆ ನಾನು ಕೋರಿದೆ. ಆಗ ಅವರು ಹೇಳಿದ್ದು ‘ನಾನು ನನ್ನ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚೆಂದರೆ ೩ ದಿನ ಕೊಡಬಲ್ಲೆ. ನಾಮಪತ್ರ ಸಲ್ಲಿಕೆಯ ದಿನ, ಕೇಂದ್ರ ನಾಯಕರ ಸಭೆಯ ದಿನ
ಹಾಗೂ ಚುನಾವಣಾ ಪ್ರಚಾರದ ಕೊನೆಯ ದಿನ. ನನಗೆ ರಾಜ್ಯದ ಜವಾಬ್ದಾರಿ ಇದೆ. ನನ್ನ ಕ್ಷೇತ್ರದ ಜನ ಹಾಗೂ ಕಾರ್ಯಕರ್ತರ ಮೇಲೆ ವಿಶ್ವಾಸವಿದೆ’ ಎಂದಿದ್ದರು. ಇದು ಅವರಿಗೆ ತಮ್ಮ ಕ್ಷೇತ್ರದ ಮೇಲೆ ಇದ್ದ ಕರಾರುವಾಕ್ಕಾದ ಹಿಡಿತವನ್ನು ಸೂಚಿಸುತ್ತದೆ.

ಅದು, ಜಿಎಸ್‌ಟಿ ವಿಧೇಯಕವನ್ನು ಅನುಮೋದಿಸುವ ಸಮಯ. ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದರು. ವಿಪಕ್ಷ ನಾಯಕರಾಗಿ ಗುಲಾಂ ನಬಿ ಆಜಾದ್ ಇದ್ದರು. ವಿಪಕ್ಷಗಳ ಕೆಲ ತಿದ್ದುಪಡಿಗಳಿಗಾಗಿ dead lock ನಿರ್ಮಾಣವಾಗಿತ್ತು. ಅರುಣ್ ಜೇಟ್ಲಿ ಅವರ ಅಭಿಪ್ರಾಯ- ‘ವಿಪಕ್ಷದವರೇ ನಮ್ಮಲ್ಲಿಗೆ ಬಂದು ವಿಷಯ ಬಗೆಹರಿಸಿಕೊಳ್ಳಲಿ’ ಎಂಬುದಾಗಿತ್ತು. ಅನಂತಕುಮಾರ್ ಸಮಜಾಯಿಷಿ ನೀಡಿ, ‘ನಮಗೆ ಬಿಲ್ ಪಾಸಾಗಬೇಕಿದೆ, ನಾವೇ ಹೋಗೋಣ’ ಎಂದು ಅರುಣ್ ಜೇಟ್ಲಿ ಅವರನ್ನು ಕರೆದು ಕೊಂಡು ಗುಲಾಂ ನಬಿ ಆಜಾದ್ ಬಳಿಗೆ ಹೋದರು.

ಸೌಹಾರ್ದಮಯ ವಾತಾವರಣದಲ್ಲಿ ವಿಷಯ ಬಗೆ ಹರಿಯಿತು. ಕೊನೆಗೆ, ಜಿಎಸ್‌ಟಿ ವಿಧೇಯಕ ಸರ್ವಾನುಮತ ದಿಂದ ಅಂಗೀಕಾರವಾಯಿತು. ಮೊನ್ನೆ, ಮಿತ್ರ ವಿಕ್ರಮಾದಿತ್ಯ ಫೋನ್ ಮಾಡಿದ್ದರು. ಭಾರತೀಯ ಸಾರ್ವಜನಿಕ ಸಂಸ್ಥೆಗಳ (PSU) ಇತಿಹಾಸ ದಲ್ಲೇ ಮೊದಲ ಬಾರಿಗೆ ಮುಚ್ಚಲ್ಪಟ್ಟ ಸಾರ್ವ ಜನಿಕ ಉದ್ಯಮವೊಂದು (BGML) ತನ್ನ ಕೆಲಸಗಾರರಿಗೆ ಅವರಿದ್ದ ಮನೆ ಗಳನ್ನು ರಿಯಾಯಿತಿ ದರದಲ್ಲಿ ಬಿಟ್ಟುಕೊಟ್ಟು ಹಕ್ಕುಪತ್ರ ನೀಡಿತು. ಇದರಿಂದ ಅಲ್ಲಿ ಕೆಲಸಕ್ಕೆ ಇದ್ದ ೧೯೦೦ ಕುಟುಂಬಗಳು ಮನೆಗಳನ್ನು ಹೊಂದುವಂತಾಯಿತು. ಇದಕ್ಕೆ ಮೂಲಕಾರಣ ಅನಂತಕುಮಾರ್ ಅವರ ಪ್ರಯತ್ನ ಎಂದು ವಿಕ್ರಮಾದಿತ್ಯ ಸ್ಮರಿಸಿಕೊಂಡರು.

ಈ ರೀತಿ, ಅನಂತಕುಮಾರ್ ಮಾಡಿದ ಅನೇಕ ಜನಪರ ಕಾರ್ಯಗಳು-ಕಾರಣಗಳು ಕಣ್ಣಿಗೆ ಕಾಣದೇ ಉಳಿದಿವೆ. ಹುಬ್ಬಳ್ಳಿಯ ಅನಂತ ಪ್ರೇರಣಾ ಕೇಂದ್ರದ ಉದ್ಘಾಟನೆಯ ಸಮಯದಲ್ಲಿ ಹಿರಿಯ ಪ್ರಚಾರಕ ಸು. ರಾಮಣ್ಣ ಅವರು ‘ಅನಂತಕುಮಾರ್ ತುಂಬಾ ಶ್ರೀಮಂತವಾದ ವಾರಸುದಾರಿಕೆಯನ್ನು ಬಿಜೆಪಿಗೆ, ಸಮಾಜಕ್ಕೆ ಬಿಟ್ಟು ಹೋಗಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ’ ಎಂದು ಉದ್ಗರಿಸಿದ್ದರು. ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ ಅನಂತಕುಮಾರ್ ಅವರಿಗೆ ದೇಶದ ಪದ್ಮಪ್ರಶಸ್ತಿಗಳು ದೊರಕಬೇಕೆಂಬುದು ಬಿಜೆಪಿ ಕಾರ್ಯ ಕರ್ತರ ಬಯಕೆ ಯಾಗಿದೆ.

(ಲೇಖಕರು ಅನಂತಕುಮಾರ್
ಪ್ರತಿಷ್ಠಾನದ ಕಾರ್ಯಕರ್ತರು)

Leave a Reply

Your email address will not be published. Required fields are marked *