Saturday, 14th December 2024

ನಮ್ಮದೂ ಉಪ್ಪು ತಿನ್ನೋ ದೇಹ ಅನ್ನೋ ಪ್ರಾಣಿಗಳು

ಶಿಶಿರ ಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ನಮ್ಮ ಕಡೆ ಕಳ್ಳತನ ಅನ್ನೋದು ತೀರಾ ಕಡಿಮೆ – ಅದರಲ್ಲೂ ಮನೆಗಳ್ಳತನ ಎಂದರೆ ಗೊತ್ತೇ ಇಲ್ಲ. ಇವತ್ತಿಗೂ ಮನೆಗಳಿಗೆ ಬೀಗ ಹಾಕಿ ಹೊರ ಹೋಗುವ ಪದ್ಧತಿ ಇಲ್ಲವೇ ಇಲ್ಲ. ತೋಟಕ್ಕೆ – ಕೊಟ್ಟಿಗೆಗೆ ಅಥವಾ ಪೇಟೆಗೆ ಹೋಗುವಾಗ ಹೆಚ್ಚಾಗಿ ಮುಂದಿನ ಬಾಗಿಲು ಎಳೆದಿಟ್ಟು ಹೋಗುವುದು. ಅರ್ಧ ಕೆಳ ಬಾಗಿಲನ್ನಷ್ಟೇ ಹಾಕಿ ಹೋಗುವುದೇ ಹೆಚ್ಚು.

ಬಾಗಿಲು ಅರ್ಧ ಮುಚ್ಚಿದೆ ಎಂದರೆ ಮನೆಯಲ್ಲಿ ಯಾರೂ ಇಲ್ಲ ಎಂದೇ ಅರ್ಥ. ಮನೆಯಲ್ಲಿದ್ದುಕೊಂಡು ಮುಂದಿನ ಬಾಗಿಲು ಹಾಕಿಕೊಳ್ಳುವುದು ಎಂದರೆ ಇವತ್ತಿಗೂ ಏನೋ ಒಂದು ರೀತಿಯಲ್ಲಿ ಉಸಿರಾಡಲು ತಡಸಿದ ಅನುಭವ. ನಮ್ಮ ಹಳ್ಳಿ ಬಿಟ್ಟು ಪೇಟೆ ಸೇರಿದಾಗ ಕೂಡ ಅದೆಷ್ಟೇ ಪ್ರಯತ್ನ ಪಟ್ಟರೂ ಹಗಲಲ್ಲಿ ಬಾಗಿಲು ಹಾಕಿ ಮನೆಯ ಒಳಗೆ ಕೂರುವ ಅಭ್ಯಾಸ ಸಹ್ಯವಾಗಲೇ ಇಲ್ಲ.

ನಮ್ಮ ಕಡೆ ಸಾಮಾನ್ಯವಾಗಿ ಮನೆಗೆ ಬರುವವರು ಹೇಳಿ ಕೇಳಿ ಬರುವ ಪದ್ಧತಿ ಈಗ ಕೂಡ ಇಲ್ಲ. ಫೋನ್ ಮೊಬೈಲ್ ಇದ್ದರೂ
ಸೀದಾ ಹೇಳದೇ ಕೇಳದೇ ಬಂದರೇ ನಮಗೆ ಖುಷಿ. ನಾನಂತೂ ಮನೆಯಲ್ಲಿದ್ದೀರಾ, ಬರಬಹುದಾ ಎಂದು ಕೇಳಿದರೆ ಇವತ್ತಿಗೂ
ಸ್ನೇಹಿತರಿಗೆ ರೇಗಿಬಿಡುವುದಿದೆ. ಹೇಳದೇ ಕೇಳದೇ ಬಂದರೆ ಅದರ ಅನುಭವವೇ ಬೇರೆ. ಆ ಸಲುಗೆ ಇದೆ ಎಂದರೆ ಅವರು
ಇನ್ನಷ್ಟು ಆಪ್ತರು. ಮನೆಗೆ ಕರೆಯುವಾಗಲೇ ಫೋನ್ ಮಾಡದೇ ಬಂದು ಬಿಡಿ ಎನ್ನುವುದಿದೆ.

ಊರಿನಲ್ಲಿ ಮನೆಗೆ ಬರುತ್ತಿದ್ದ ಆಪ್ತೆಷ್ಟರು – ಮದುವೆ ಮುಂಜಿ ಆಹ್ವಾನಿಸಲು ಬರುವವರು ಈ ರೀತಿ ಮನೆಗೆ ಬಂದಲ್ಲಿ ಬಾಗಿಲು ಹಾಕಿಕೊಂಡೇ ಇದ್ದರೆ ಬಾಗಿಲು ಸರಿಸಿ ಒಳಗೆ ತಮ್ಮದೇ ಮನೆಯೆಂಬಂತೆ ಕೂತು ಕಾದು, ಅಂಗಳದ ತುದಿಗೆ ಹೋಗಿ ಒಂದೆರಡು ಬಾರಿ ತೋಟಕ್ಕೆ ಮುಖ ಮಾಡಿ ಕೂಗಿ ಕರೆದು ಮತ್ತೆ ಒಳಬಂದು ಎಲೆ ಅಡಿಕೆ ಹಾಕಿಕೊಂಡು ಮಂಗಳಪತ್ರ ಮತ್ತು ಅಕ್ಷತೆ ಹೊಸ್ತಿಲಲ್ಲಿ ಇಟ್ಟು ಹೋಗುತ್ತಾರೆ. ಕೆಲವೊಮ್ಮೆ ಹೀಗೊಂದು ಆಹ್ವಾನ ಮಾಡುವಾಗ ಮನೆಯವರು ಊರಿನ ಇದ್ದಿರುವುದಿಲ್ಲ.
ಹೀಗಿರುವ ನಮ್ಮೂರಿನಲ್ಲಿ – ನಮ್ಮ ಮನೆಯಲ್ಲಿ ಒಂದು ಕಳ್ಳತನವಾಗಿದ್ದು ನಮ್ಮೆಲ್ಲರನ್ನು ಆಶ್ಚರ್ಯ ತಂದಿತ್ತು.

ಕಳ್ಳತನ ಒಮ್ಮೆ ಆಗಿದ್ದಲ್ಲ – ಪ್ರತೀ ದಿನ ಆಗುತ್ತಿತ್ತು. ಕಳ್ಳತನ ಆಗುತ್ತಿದ್ದುದ್ದಾದರೂ ಏನು? ಚಿನ್ನ ಒಡವೆ ದುಡ್ಡು ಯಾವುದೂ
ಅಲ್ಲ – ಮನೆಯಿಂದ ಕೊಂಚ ದೂರದಲ್ಲಿದ್ದ ಉಪ್ಪಿನ ಮಾಡಿನಲ್ಲಿ ಗೋಣಿ ಚೀಲದಲ್ಲಿ ಇಟ್ಟಿದ್ದ ಉಪ್ಪು. ಪ್ರತೀ ದಿನ ಉಪ್ಪಿನ ಚೀಲದಲ್ಲಿದ್ದ ಸುಮಾರು ಮೂರು ನಾಲ್ಕು ಕೆಜಿ ಉಪ್ಪು ಮಂಗಮಾಯವಾಗುತ್ತಿತ್ತು. ಈಗ ಉಪ್ಪೆಂದರೆ ಟೇಬಲ್ ಸಾಲ್ಟ್
ಎಂದೇ ಆಗಿಬಿಟ್ಟಿದೆ. ಆದರೆ ಆಗ ನಮ್ಮ ಮನೆಯಲ್ಲಿ ಎರಡು ವಿಧದ ಉಪ್ಪುಗಳಿರುತ್ತಿದ್ದವು.

ಮೊದಲನೆಯದು ಮನೆ ಬಳಕೆಯ ಉಪ್ಪು – ಎರಡನೆಯದು ಸ್ವಲ್ಪ ಕೆಳದರ್ಜೆಯ ಆಕಳಿಗೆ – ಅದರ ಕಲಗಚ್ಚಿಗೆ ಹಾಕುವ ಉಪ್ಪು. ಆಕಳ ಆಹಾರಕ್ಕೆ ಬೆರೆಸಲು ಏನಿಲ್ಲವೆಂದರೆ ಒಂದರ್ಧ ಕೆಜಿ ಉಪ್ಪು ಪ್ರತೀ ದಿನ ಬೇಕಾಗುತ್ತಿತ್ತು. ಹಾಗಾಗಿ ಮೂಟೆಗಟ್ಟಲೆ ಉಪ್ಪು ಸದಾ ಇಟ್ಟಿರಬೇಕಿತ್ತು. ಉಪ್ಪು ಮಹಾ ಡೇಂಜರ್ ವಸ್ತು – ಇಟ್ಟ ಹತ್ತಿರದಲ್ಲಿ ಗುದ್ದಲಿ ಪಿಕಾಸು ಇಟ್ಟರೆ ತುಕ್ಕು ಹಿಡಿಯುತ್ತದೆ.
ವಾತಾವರಣದ ಆರ್ದ್ರತೆ ಯಿಂದಾಗಿ ಇಟ್ಟ ರೋಸಿ ನೆಲವನ್ನೇ ಹಾಳು ಮಾಡಿಬಿಡುತ್ತದೆ. ಈ ಕಾರಣದಿಂದ ಅದಕ್ಕೆ ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ಮಾಡು ನಿರ್ಮಿಸಿ ಇಡಲಾಗುತ್ತಿತ್ತು.

ಹೀಗೆ ಉಪ್ಪಿಗೊಂದು ಪ್ರತ್ಯೇಕ ಮನೆ ಪ್ರತೀ ಮನೆಯಲ್ಲೂ ಇರುತ್ತಿತ್ತು. ಹೀಗಿರುವ ಉಪ್ಪಿನ ಮಾಡಿನಿಂದ – ಉಪ್ಪಿನ ಚೀಲದಿಂದ
ಪ್ರತೀ ದಿನ ನಾಲ್ಕಾರು ಕೆಜಿ ಉಪ್ಪಿನ ಕಳ್ಳತನ! ಈ ಚಿದಂಬರ ರಹಸ್ಯವನ್ನು ಬೇಽಸಲು, ಉಪ್ಪನ್ನು ಕದಿಯುವವರು ಯಾರೆಂದು ಕಂಡುಹಿಡಿಯಲು ನಾನು ಮತ್ತು ನನ್ನ ಅತ್ತೆಯ ಮಗ ಒಂದು ರಾತ್ರಿ ತಯಾರಾಗಿ ನಿಂತೆವು. ಆ ಉಪ್ಪಿನ ಮಾಡಿನ ಒಂದು ಮೂಲೆಯಲ್ಲಿ ಮಲಗುವುದು ಮತ್ತು ಕಳ್ಳ ಬಂದಾಕ್ಷಣ ತಕ್ಷಣ ಹಿಡಿಯುವುದು ಎಂದೆಲ್ಲ ನಮ್ಮ ಮಾಸ್ಟರ್‌ ಪ್ಲ್ಯಾನ್ ತಯಾರಾಯಿತು.

ಯೋಜನೆಯ ಪ್ರಕಾರ ಊಟ ಮುಗಿಸಿ, ಅಪ್ಪ ಅಮ್ಮನ ಮಾತನ್ನು ಮೀರಿ ರಾತ್ರಿ ಹೋಗಿ ಉಪ್ಪಿನ ಮಾಡಿನಲ್ಲಿ ಸ್ವಲ್ಪ ಜಾಗ ಮಾಡಿಕೊಂಡು ಮಲಗಿದೆವು. ಮನೆಯ ಮುಂದಿನ ತೋಟದ ಮಧ್ಯೆಯಿರುವ ಈ ಉಪ್ಪಿನ ಅರಮನೆಯಲ್ಲಿ ಮಲಗುವುದು ಅಷ್ಟು ಸುಲಭವಿರಲಿಲ್ಲ. ಚಾದರ ಹೊದ್ದು ಮಲಗುವುದು ಸೆಖೆ ಯಿಂದಾಗಿ ಅಸಾಧ್ಯ – ಚಾದರ ತೆರೆದರೆ ಮೈ ರಕ್ತವನ್ನೆಲ್ಲ ಒಂದೆರಡು ನಿಮಿಷದಲ್ಲಿ ಖಾಲಿಮಾಡಿಬಿಡುವಷ್ಟು ಸೊಳ್ಳೆಗಳು. ಹಾಗಂತ ಸೋಲು ಒಪ್ಪಿ ಕಳ್ಳನನ್ನು ಹಿಡಿಯದೇ ಮನೆಸೇರುವಂತೆ ಕೂಡ ಇಲ್ಲ. ರಾತ್ರಿ ಸುಮಾರು ಹನ್ನೊಂದು ಘಂಟೆ ಇರಬಹುದು.

ಕಳ್ಳನ ಆಗಮನವಾಗಿಯೇ ಬಿಟ್ಟಿತು. ಚರಪರಕ್ ಶಬ್ದ ಕೇಳಿದ ತಕ್ಷಣ ಎಚ್ಛೆತ್ತುಕೊಂಡು ಬ್ಯಾಟರಿ ಬಿಟ್ಟೆವು. ಕಳ್ಳ ಸಿಕ್ಕಿಬಿದ್ದಿದ್ದ. ಆದರೆ ಕಳ್ಳನನ್ನು ಹಿಡಿದುಕೊಳ್ಳು ವಂತಿರಲಿಲ್ಲ. ಏಕೆಂದರೆ ಕಳ್ಳ ಮನುಷ್ಯನಾಗಿರಲಿಲ್ಲ. ಉಪ್ಪು ಕದಿಯುತ್ತಿದ್ದುದು ಉಡ !
ನಮ್ಮ ಕಡೆ ಹೆಚ್ಚು ಉಪ್ಪು ತಿನ್ನುವವರನ್ನು ‘ಉಪ್ಪಿನ ಚಾಪ’ ಎನ್ನುತ್ತೇವೆ. ಚಾಪ ಎಂದರೆ ಉಡ. ಈ ಪ್ರಾಣಿಗೆ ಉಪ್ಪೆಂದರೆ
ಪಂಚಪ್ರಾಣ. ಚಾಪ ಉಪ್ಪನ್ನು ಒಮ್ಮೆ ಕಂಡಿತೆಂದರೆ ಅದು ಖಾಲಿಯಾಗುವ ವರೆಗೆ ಬಿಡುವುದೇ ಇಲ್ಲ.

ಪ್ರತೀ ದಿನ ಹೊಟ್ಟೆ ತುಂಬ ಉಪ್ಪನ್ನೇ ತಿಂದು ಹಾಯಾಗಿರಬಲ್ಲ ಪ್ರಾಣಿ ಅದು. ಅದಕ್ಕೆ ಬಿಪಿಯ ಚಿಂತೆಯಿಲ್ಲ. ಅಂತೂ ನಾವು ಕಳ್ಳನನ್ನು ಹಿಡಿದೆವು ಅಥವಾ ಕಳ್ಳನನ್ನು ಕಂಡುಹಿಡಿದೆವೇನೋ ನಿಜ ಆದರೆ ಕಳ್ಳತನ ನಿಲ್ಲಲಿಲ್ಲ. ಚಾಪ ಮಾರನೆಯ ದಿನವೂ ಕಳ್ಳತನಕ್ಕೆ ನಿರ್ದಾಕ್ಷಣ್ಯದಿಂದ ಹಾಜರಾಗಿ ತನ್ನ ವೃತ್ತಿಪರತೆಯನ್ನು ಮುಂದುವರಿಸಿತು. ಮುಂದೆ ಆ ಚಾಪನ ಕಾಟ – ಕಳ್ಳತನ
ತಪ್ಪಿಸಲು ಉಪ್ಪಿನ ಮಾಡಿಗೆ ಗೋಡೆ ಕಟ್ಟಿ ಬಾಗಿಲು ಹಾಕಿಡಬೇಕಾಯಿತು. ಮನೆಯ ಬಾಗಿಲೇ ಹಾಕಿಡದವರು ಉಪ್ಪಿನ ಮನೆಯ ಬಾಗಿಲನ್ನು ಮುಚ್ಚಿಡಬೇಕಾಯಿತು.

ಪ್ರಾಣಿಜಗತ್ತಿನ ಸೂಕ್ಷ್ಮಗಳನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು ಉಪ್ಪನ್ನು ತಿನ್ನುವುದು ಕೇವಲ ಮನುಷ್ಯರು ಮತ್ತು
ನಮ್ಮ ಮನೆಗೆ ಬರುತ್ತಿದ್ದ ಕಳ್ಳ ಚಾಪ ಎನ್ನುವುದೇ ನನ್ನ ನಂಬಿಕೆಯಾಗಿತ್ತು. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಒಂದು ಅಭಯಾರಣ್ಯಕ್ಕೆ ಪ್ರಾಣಿಗಳ ಫೋಟೋ ತೆಗೆಯಲು ನಾವೊಂದಿಷ್ಟು ಸ್ನೇಹಿತರು ಹೊರಟು ನಿಂತೆವು. ಹೆಗಲಿಗೆ ಕ್ಯಾಮೆರಾ ಸಿಕ್ಕಿಸಿಕೊಂಡು ಊರೂರು ಅಲೆಯೋದು ಫ್ಯಾಶನ್ ಎಂದು ಇಂದಿನ ಸಮಾಜ ತಿಳಿದುಕೊಂಡದ್ದಕ್ಕಿಂತ ಮುಂಚಿನ
ಕಾಲ ಅದು.

ಫೋಟೋ ತೆಗೆಯುವುದು ಎನ್ನುವುದಕ್ಕಿಂತ ಕಾಡಿನಲ್ಲಿ, ಮನುಷ್ಯ ಜಗತ್ತಿನಿಂದ ದೂರ ಪ್ರಕೃತಿಯಲ್ಲಿ ಕಳೆದುಹೋಗುವುದು, ಅದರಲ್ಲಿಯೂ ಹಳ್ಳಿ ಬಿಟ್ಟು ಪೇಟೆ ಸೇರಿದ ನಮ್ಮಂತವರಿಗಂತೂ ಒಂದು ಅನನ್ಯ ಮತ್ತು ನೊಸ್ಟಾಲ್ಜಿಕ್ ಅನುಭವ. ಅದು ಹೇಳಿಕೇಳಿ ಅಭಯಾರಣ್ಯ. ಅಲ್ಲಿಗೆ ಹೋಗಲು ನಾಲ್ಕಾರು ಬಾರಿ ಅನುಮತಿಗೆ ಪ್ರಯತ್ನ ಪಟ್ಟಾಗ ಅದು ಸಾಧ್ಯವಾಗಲಿಲ್ಲ. ಅರಣ್ಯ ಇಲಾಖೆಗಳಿಂದ ಹಿಡಿದು ಮಂತ್ರಿವರ್ಯರ ವರೆಗೂ ಪತ್ರ ಬರೆದರೂ ಉತ್ತರ ಬರಲಿಲ್ಲ.

ಅನುಮತಿ ಪಡೆಯುವುದೇ ಇಷ್ಟು ಕಷ್ಟವಾಗಿರಿಸಲಾಗಿದೆ ಎಂದಾದರೆ ಅಂತಹ ಜಾಗಕ್ಕೆ ಹೋಗಿ ವನ್ಯಮೃಗವನ್ನು – ಅಲ್ಲಿನ ಪರಿಸರದ ಸಮತೋಲನವನ್ನು ಹಾಳುಮಾಡೋ ಮನೆಹಾಳು ಕೆಲಸ ಬೇಡ ಎಂದು ಆ ಯೋಜನೆಯನ್ನು ಅಲ್ಲಿಗೆ  ಬಿಟ್ಟೆವು. ನಂತರದಲ್ಲಿ ಬೇರೊಂದು ಅರಣ್ಯ ಪ್ರದೇಶದಲ್ಲಿ ಪರಿಚಯ ವಾದ ಅರಣ್ಯಾಧಿಕಾರಿಯೊಬ್ಬರು ಆ ಅಭಯಾರಣ್ಯಕ್ಕೆ ವರ್ಗವಾಗಿದ್ದು ತಿಳಿಯಿತು. ಕಾಡಿನ ಗೀಳು ಅಷ್ಟುಸುಲಭದಲ್ಲಿ ಬಿಡುವುದಿಲ್ಲವಲ್ಲ. ಅವರನ್ನು ಸಂಪರ್ಕಿಸಿದಾಗ ಅವರು ಈ ರೀತಿಯೆಲ್ಲ ಅನುಮತಿ ಕೊಡಲಾಗುವುದಿಲ್ಲ ರೀ ಎಂದುಬಿಟ್ಟರು. ಈಗ ಎಲೆ ಉದುರುವ ಸಮಯ, ವರ್ಷದ ಈ ಸಮಯದಲ್ಲಿ ಕಾಡಿಗೆ ಹೋಗಲು ನಮಗೇ ಅನುಮತಿಯಿಲ್ಲ ಎಂದರು.

ಆದರೆ ಒಂದು ಉಪಾಯವಿದೆ – ನೀವೊಬ್ಬರೇ ವಾಲಂಟಿಯರ್ ಆಗಿ ಬಂದರೆ ಉಪ್ಪು ಕೊಡುವ ಸಮಯದಲ್ಲಿ ‘ಕಾಡಿಗೆ ನಮ್ಮ ಜತೆ ಬಂದು ಕೆಲಸ ಮಾಡಬಹುದು ಎಂದರು. ಮರುಭೂಮಿಯಲ್ಲಿ ಒಂದು ಪಸೆ ನೀರು ಸಿಕ್ಕಂತಾಯಿತು. ಆ ಕ್ಷಣದಲ್ಲಿ ಏನಿದು
ಉಪ್ಪು ಕೊಡುವ ಸಮಯ?’ ಎಂದೆಲ್ಲ ವಿವರಣೆ ಅವರಲ್ಲಿ ಕೇಳಲಿಲ್ಲ. ಸರಿ ಅದು ಯಾವ ತಿಂಗಳು ಎಂದು ಕೇಳಿ ಆ ಹೇಳಿದ
ಸಮಯಕ್ಕೆ ಮತ್ತೆ ದುಂಬಾಲು ಬಿದ್ದು ಅವರ ಜತೆ ಕಾಡಿನಲ್ಲಿ – ಅಭಯಾರಣ್ಯದಲ್ಲಿ ಓಡಾಡುವ ತಯಾರಿಯಾಯಿತು. ಈ ಕಾಡು ಪ್ರಾಣಿಗಳಿಗೆ ಉಪ್ಪು ಕೊಡುವ ಪ್ರೋಗ್ರಾಮ ಎಲ್ಲ ಅಭಯಾರಣ್ಯಗಳಲ್ಲಿ ಪ್ರತೀ ವರ್ಷ ನಡೆಯುವ ಕಾರ್ಯಕ್ರಮ.

ಅರಣ್ಯಾಧಿಕಾರಿಗಳು, ಅಲ್ಲಿನ ಗಾರ್ಡ್‌ಗಳು ಎಲ್ಲರೂ ಮೂಟೆ ಮೂಟೆ ಉಪ್ಪನ್ನು ಬೆನ್ನಿನ ಮೇಲೆ ಹೊತ್ತು ಕಾಡಿನ ನಿಗದಿಪಡಿಸಿದ ಹತ್ತಾರು ಸ್ಥಳಗಳಲ್ಲಿ ಉಪ್ಪನ್ನು ರಾಶಿ ಕೊಟ್ಟು ಬರಬೇಕು. ಈ ರೀತಿ ಹಾಕಿದ ಉಪ್ಪನ್ನು ಅಲ್ಲಿನ ಪ್ರಾಣಿಗಳು ಬಂದು ತಿನ್ನುತ್ತವೆ. ಇದು ಒಂದು ತೀರಾ ಮುಖ್ಯವಾದ ವಾರ್ಷಿಕ ಕೆಲಸ. ಕಾಡಿನ ಪ್ರಾಣಿಗಳಿಗೆ ಆಹಾರ ಯಥೇಚ್ಛವಾಗಿ ಸಿಕ್ಕರೂ ಉಪ್ಪು ಸಿಗುವುದಿಲ್ಲ. ಅವುಗಳ ಆರೋಗ್ಯಕ್ಕೆ ಉಪ್ಪು – ಲವಣ ತೀರಾ ಅವಶ್ಯಕ. ಮೂಳೆಗೆ, ಮಾಂಸಖಂಡಕ್ಕೆ, ಸಂತಾನೋತ್ಪತ್ತಿಗೆ, ಗರ್ಭಧರಿಸಲು,
ಬಾಣಂತನದ ದೇಹ ರಿಕವರಿ ಆಗಲು, ದೇಹದಲ್ಲಿ ಹಾಲು ಉತ್ಪಾದನೆಗೆ ಉಪ್ಪು ಬೇಕೇ ಬೇಕು.

ಈ ರೀತಿ ಉಪ್ಪನ್ನು ಅಲ್ಲಲ್ಲಿ ರಾಶಿಕೊಡುವುದರಿಂದ ಈ ಪ್ರಾಣಿಗಳು ಕಾಡಿನಲ್ಲಿ ಆರೋಗ್ಯದಿಂದ ಇರಲು,  ಸಂತಾನೋತ್ಪತ್ತಿ ಯಾಗಲು ಸಾಧ್ಯ. ಒಂದು ವೇಳೆ ಉಪ್ಪನ್ನು ಕೃತಕವಾಗಿ ಒದಗಿಸದಿದ್ದಲ್ಲಿ ಅವುಗಳಲ್ಲಿ ಕ್ರಮೇಣ ಸೋಡಿಯಂ ಮತ್ತು ಕ್ಲೋರಿನ್ ಕೊರತೆಯಿಂದಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಅಲ್ಲದೆ ಸಸ್ತನಿ ಪ್ರಾಣಿಗಳ ಹಾಲು ಉತ್ಪಾದನಾ ಸಾಮರ್ಥ್ಯ ಕ್ರಮೇಣ ಕ್ಷೀಣಿಸಿ ಅವು ಅವಸಾನದತ್ತ ಸಾಗುತ್ತವೆ. ಹಾಗಾದರೆ ಕಾಡು ಪ್ರಾಣಿಗಳು ಸಹಜವಾಗಿ ಬದುಕಬೇಕಲ್ಲ ಎಂದು ನೀವು ಪ್ರಶ್ನಿಸಬಹುದು.

ನಿಜ, ಅವು ಹಾಗೆ ಬದುಕಬಲ್ಲವು, ಆದರೆ ಈ ಪ್ರಾಣಿಗಳು ಹಿಂದೆಲ್ಲ ಸ್ವಚ್ಚಂದವಾಗಿ, ಯಾವುದೇ ನಿರ್ಬಂಧವಿಲ್ಲದೇ ಬದುಕಿ ಕೊಂಡಿದ್ದವು. ಅವುಗಳಿಗೆ ಲವಣದ ಅವಶ್ಯಕತೆಯಿದ್ದಾಗಲೆಲ್ಲ ಅವು ಲವಣವಿರುವ, ಲವಣ ಮಿಶ್ರಿತ ಕಲ್ಲು ಗಳಿರುವ ಸ್ಥಳಗಳನ್ನು ಆಗೆಲ್ಲ ಹುಡುಕಿಕೊಂಡು ಹೋಗುತ್ತಿದ್ದವು. ಈಗ ಅವುಗಳನ್ನು ಅಭಯಾರಣ್ಯವೆಂಬ ದೊಡ್ಡ ಪ್ರಾಣಿ
ಸಂಗ್ರಹಾಲಯದಲ್ಲಿ ಬಂಽಸಿಟ್ಟಿರುವುದರಿಂದ ಮತ್ತು ಅದರ ಸುತ್ತ ಮನುಷ್ಯನೇ ಅವರಿಸಿಕೊಂಡಿರು ವುದರಿಂದ ಈ ರೀತಿ
ಕೃತಕವಾಗಿ ಉಪ್ಪನ್ನು ಒದಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಎಲ್ಲ ಪ್ರಾಣಿಗಳಿಗೂ ಉಪ್ಪು ಬೇಕೇ ಬೇಕು. ಪ್ರಾಣಿಗಳು ಅದೆಷ್ಟೇ ವಿಕಸನ ಹೊಂದಿದರೂ ಮೂಲ ಸಮುದ್ರವೇ ಆಗಿರುವುದರಿಂದ ಈ ಉಪ್ಪಿನ ಅವಲಂಬನೆ ಇನ್ನು ಕೂಡ ಹಾಗೆಯೇ ಉಳಿದುಕೊಂಡುಬಿಟ್ಟಿದೆ. ಆಫ್ರಿಕಾದ ಸಾವಿರ ಗಾವುದ ಉದ್ದಗಲದ ಅಭಯಾರಣ್ಯಗಳಲ್ಲಿ ಸಾಮಾನ್ಯವಾಗಿ ಪ್ರಾಣಿಗಳು ವಲಸೆ ಹೋಗುವುದೇ ನೀರು ಮತ್ತು ಆಹಾರಕ್ಕೆ ಎನ್ನುವುದು ನಮ್ಮ ನಂಬಿಕೆ. ಆದರೆ ಅದೆಷ್ಟೋ ಪ್ರಾಣಿಗಳು

ವಲಸೆ ಹೋಗಲು ಕಾರಣ ಉಪ್ಪು. ಕಿನ್ಯಾ ಮತ್ತು ಉಗಾಂಡಾದ ಗಡಿಯಲ್ಲಿರುವ ಈ ಬೆಟ್ಟದ ಹೆಸರು ಮೌಂಟ್ ಎಲ್ಗೊನ್. ಮಿಲಿಯನ್ ವರ್ಷದ ಹಿಂದೆ ಜ್ವಾಲಾಮುಖಿಯಾಗಿದ್ದ ಈ ಬೆಟ್ಟ ಈಗ ಶಾಂತವಾಗಿ ಅದೆಷ್ಟೋ ಸಾವಿರ ವರ್ಷವಾಯಿತು. ಸಾಮಾನ್ಯವಾಗಿ ಜ್ವಾಲಾಮುಖಿ ಭೂಮಿಯ ಅಂತರಾಳದಲ್ಲಿರುವ ಲಾವಾದಲ್ಲಿ ಕರಗಿರುವ ಹಲವು ಖನಿಜಗಳನ್ನು ಹೊರ
ಕಾರಿರುತ್ತದೆ. ಈ ಖನಿಜಗಳಲ್ಲಿ ಹೆಚ್ಚಾಗಿ ಇರುವಂಥದ್ದು ಲವಣ – ಉಪ್ಪು. ಈ ರೀತಿ ಅದೆಷ್ಟೋ ವರ್ಷದ ಹಿಂದೆ
ಹೊರ ಹಾಕಲ್ಪಟ್ಟ ಲವಣದ ಬೆಟ್ಟ ಇಂದು ಆಫ್ರಿಕಾದ ಪ್ರಾಣಿಗಳಿಗೆ ಉಪ್ಪಿನ ನಿಧಿ.

ಇಲ್ಲಿನ ಕಲ್ಲುಗಳು ಅಪಾರ ಪ್ರಮಾಣದಲ್ಲಿ ಲವಣಾಂಶ ಹೊಂದಿವೆ. ಹಾಗಾಗಿ ಈ ಗುಡ್ಡವನ್ನು ಅರಸಿ – ಅಲ್ಲಿನ ಮಣ್ಣನ್ನು ಕಲ್ಲನ್ನು ತಿನ್ನಲು ಕಿನ್ಯಾ ಮತ್ತು ಉಗಾಂಡಾ ಎರಡೂ ಕಡೆಯ ಕಾಡುಗಳಿಂದ ಪ್ರಾಣಿಗಳು ಇಲ್ಲಿಗೆ ಲಗ್ಗೆಯಿಡುತ್ತವೆ. ಪ್ರಾಣಿಗಳಿಗೆ ಅವುಗಳ ದೇಹದ ತೂಕಕ್ಕೆ ತಕ್ಕಂತೆ ಉಪ್ಪಿನ ಅವಶ್ಯಕತೆಯಿರುತ್ತದೆ. ಅಲ್ಲದೇ ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಉಪ್ಪು ಬೇಕು.

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎನ್ನುವುದಕ್ಕೂ ಇದೇ ಕಾರಣ. ಉಪ್ಪು ದೇಹ ಸೇರಿಕೊಂಡಾಗ ದಾಹ ಹೆಚ್ಚುತ್ತದೆ. ಇದರಿಂದಾಗಿ ಹೆಚ್ಚಿನ ನೀರು ದೇಹದಲ್ಲಿ ಶೇಖರಿಸಲು ಸಾಧ್ಯವಾಗುತ್ತದೆ. ಇದು ದೀರ್ಘ ನೀರಿಲ್ಲದ ಸ್ಥಳಗಳನ್ನು ದಾಟುವ ವಲಸೆಗೆ ಅವಶ್ಯಕ. ಮೌಂಟ್ ಎಲ್ಗೊನ್ ಗೆ ಹೀಗೆ ಉಪ್ಪನ್ನು ಬಯಸಿ ಬರುವ ಪ್ರಾಣಿಗಳಲ್ಲಿ ಆನೆ ಕೂಡ ಒಂದು. ಆನೆಗೆ ಅದರ ಗಾತ್ರಕ್ಕನುಗುಣವಾಗಿ ಪ್ರತೀ ದಿನ ಕನಿಷ್ಠ ನೂರು ಗ್ರಾಮ್ ಉಪ್ಪು ಬೇಕೇ ಬೇಕು.

ಅಷ್ಟು ಪ್ರಮಾಣದಲ್ಲಿ ಉಪ್ಪನ್ನು ಪಡೆಯಬೇಕೆಂದರೆ ಅದು ಉಳಿದ ಪ್ರಾಣಿಗಳಂತೆ ಕಲ್ಲುಗಳನ್ನು ನೆಕ್ಕಿ ಪಡೆಯಲು ಮುಂದಾದರೆ
ಒಂದರ್ಧ ದಿನವೇ ಬೇಕಾಗುತ್ತದೆ. ಹಾಗಾಗಿ ಅವು ಈ ಗುಡ್ಡದ ಬುಡದಲ್ಲಿರುವ ಕಿರಿದಾದ ಕಾರ್ಗತ್ತಲೆಯ ಗುಹೆಗಳನ್ನು
ಹೊಕ್ಕುತ್ತವೆ. ಅಲ್ಲಿ ಗುಹೆಯ ಒಳಮೈನಲ್ಲಿ ಶೇಖರವಾದ ಉಪ್ಪುಗಳನ್ನು ಕೆರೆದು ತಿನ್ನುತ್ತವೆ. ಈ ರೀತಿ ಉಪ್ಪಿನ ಆಗರಗಳ ಲಭ್ಯತೆಯಿರದ ಪ್ರಾಣಿಗಳು ಸಾಮಾನ್ಯವಾಗಿ ಲವಣಯುಕ್ತ ಮಣ್ಣನ್ನು ತಿನ್ನುತ್ತವೆ. ಇದನ್ನು ಮಣ್ಣು ತಿನ್ನೋ ಕೆಲಸ ಎಂದು ತಮಾಷೆಗೆ ಹೇಳಬಹುದು –

ಆದರೆ ಅದು ಆ ಪ್ರಾಣಿಗಳ ಮಟ್ಟಿಗೆ ಜೀವನಾವಶ್ಯಕ. ಹೀಗೆ ಅವಶ್ಯಕವಿರುವ ಲವಣವನ್ನು ಪಡೆಯಲು – ಲವಣ ಮಿಶ್ರಿತ
ಮಣ್ಣನ್ನು ಅರಸಿ ಅದೆಷ್ಟೋ ಪ್ರಾಣಿಗಳು ಹತ್ತಾರು ಗಾವುದ ದೂರ ಪ್ರಯಾಣಿಸುವುದು ಪ್ರಕೃತಿಯ ಸೂಕ್ಷ್ಮ. ಲವಣಯುಕ್ತ
ಕಲ್ಲುಗಳನ್ನು ಪ್ರಾಣಿಗಳು ನೆಕ್ಕುವುದನ್ನು, ತಿನ್ನುವುದನ್ನು natural salt lick or mineral lick ಎನ್ನಲಾಗುತ್ತದೆ.

ಸಾಮಾನ್ಯವಾಗಿ ದನಕರುಗಳ ಸುತ್ತ ಒಂದಿಷ್ಟು ಚಿಕ್ಕ ಚಿಕ್ಕ ಮಿಡತೆಗಳು ಹಾರಾಡುತ್ತಿರುತ್ತವೆ. ನೀವು ಸೂಕ್ಷ್ಮವಾಗಿ ಗ್ರಹಿಸಿದರೆ ಅವುಗಳ ಕಣ್ಣಿನ ಸುತ್ತ ಒಂದುಷ್ಟು ತೀರಾ ಚಿಕ್ಕ ಹುಳುಗಳು ಹಾರಾಡಿ ಮುತ್ತಿಗೆ ಹಾಕಿರುತ್ತವೆ. ಇದಕ್ಕೆ ಕಾರಣ ಕೂಡ ಉಪ್ಪು. ಈ ಕೀಟಗಳು ಉಪ್ಪನ್ನು ಪಡೆಯುವುದು ಅನ್ಯಪ್ರಾಣಿಗಳ ಕಣ್ಣೀರಿನಿಂದ. ಸಾಮಾನ್ಯವಾಗಿ ಕಾಡಿನಲ್ಲಿ ತಿರುಗಾಡುವಾಗ ಹುಳುಗಳು ಕಣ್ಣಿಗೆ ಮುತ್ತುವುದಕ್ಕೂ ಇದೇ ಕಾರಣ.

ಫ್ಲೋರಿಡಾದ ಕಾಡುಗಳಲ್ಲಿ ಲೆಕ್ಕ ಮೀರಿ ಇರುವ ಮೊಸಳೆಗಳನ್ನು ಪತರಗಿತ್ತಿಗಳು ಮುತ್ತುತ್ತಿರುವುದನ್ನು ನೋಡಿದಾಗ ಅಲ್ಲಿನ ಬಿಯೊಲೊಜಿಸ್ಟ್ ಅದಕ್ಕೆ ಕಾರಣ ಕೂಡ ಅವು ಉಪ್ಪನ್ನು ಪಡೆಯಲು ಹೀಗೆ ಮಾಡುತ್ತವೆ ಎಂದಿದ್ದರು. ಈ ಪತರಗಿತ್ತಿಗಳ ಕಾಟ ಅಲ್ಲಿನ ಮೊಸಳೆಗಳಿಗೆ ಎಷ್ಟು ಎಂದರೆ ಅವು ನೀರಿನಿಂದ ಹೊರಬಂದು ನಿದ್ರಿಸುವಾಗಲೆಲ್ಲ ಇವು ಅವುಗಳ ಕಣ್ಣಿನ ಸುತ್ತ ದಾಳಿಯಿಡುತ್ತವೆ. ಹೀಗೆ ನೂರಾರು  ಪತರಗಿತ್ತಿಗಳ ಕಾಟ ಕೆಲವೊಮ್ಮೆ ಸಹಿಸಲಾಗದೆ ಮೊಸಳೆ ಮತ್ತೆ ನೀರಿಗೆ ಜಿಗಿಯುತ್ತದೆ.

ಇಲ್ಲಿನ ಕಾಡುಗಳಲ್ಲಿ ಇನ್ನೊಂದು ವಿಚಿತ್ರ ಮಿಡತೆಯಿದೆ. ಅದರ ಹೆಸರು ಗೊರ್ಗೊನ್ ಮಕರೇನಾ. ಇವುಗಳು ಕೊಳವೆಯಾ ಕೃತಿಯ ಬಾಯಿಯನ್ನು ಹೊಂದಿರುತ್ತವೆ. ಈ ಅಂಗ ಬಳಕೆಯಾಗುವುದೇ ಪ್ರಾಣಿಗಳ, ಪಕ್ಷಿಗಳ ಕಣ್ಣಿನಿಂದ ಉಪ್ಪನ್ನು ಹೀರಲು. ಗೊರ್ಗೊನ್ ಮಕರೇನಾ ಸಾಮಾನ್ಯ ವಾಗಿ ನಿದ್ರಿಸುತ್ತಿರುವ ಪ್ರಾಣಿ ಪಕ್ಷಿಗಳ ಕಣ್ಣಿನ ಪಕ್ಕ ಕೂತು ಆ ಜೀವಿಗೆ ಗೊತ್ತಾಗದಂತೆ ಕಣ್ಣಿನ ಅಂಚಿನಲ್ಲಿ ತಮ್ಮ ಳವೆಯಾಕೃತಿಯ ಬಾಯನ್ನು ಒಳ ತೂರಿಸುತ್ತವೆ. ಈ ಮೂಲಕ ಕಣ್ಣೀರನ್ನು, ಉಪ್ಪನ್ನು ಮತ್ತು ತನಗೆ ಅವಶ್ಯಕವಿರುವ ಪ್ರೊಟೀನ್ ಗಳನ್ನು ಹೀರುತ್ತವೆ.

ಇದರಿಂದ ಈ ಪ್ರಾಣಿಗಳ ಕಣ್ಣಿಗೆ ಯಾವುದೇ ಘಾಸಿಯಾಗುವುದಿಲ್ಲ. ಆದರೆ ಈಗ ಕೆಲವು ವರ್ಷಗಳ ಹಿಂದೆ ಇವು ಉತ್ತರ ಮತ್ತು ದಕ್ಷಿಣ ಅಮೆರಿಕಾದ ಪ್ರಾಣಿಗಳ ಕಣ್ಣಿನ ರೋಗವೊಂದು ಉಂಟುಮಾಡುವ ವೈರಸ್ ಹರಡಿ ಕುಖ್ಯಾತಿಯಾಗಿದ್ದವು ಮತ್ತು ಅದೆಷ್ಟೋ ಪ್ರಾಣಿಗಳ ಕಣ್ಣು ಕೆಂಪಾಗಲು ಕಾರಣವಾಗಿದ್ದವು. ಉತ್ತರ ಅಮೆರಿಕಾದ ಜಿಂಕೆಗಳದ್ದು ಇನ್ನೊಂದು ಕಥೆ. ಇವು
ಉಪ್ಪನ್ನು – ಲವಣವನ್ನು ಪಡೆಯಲು ಆರಿಸಿಕೊಂಡದ್ದು ಸ್ವಲ್ಪ ಬೇರೆಯದೇ ಸುಲಭದ ಪದ್ಧತಿ.

ಇವಕ್ಕೆ ಉಪ್ಪು ತಿನ್ನಬೇಕು ಎಂದೆನಿಸಿ ದಾಗ, ದೇಹದಲ್ಲಿ ಲವಣದ ಅವಶ್ಯಕತೆ ಉಂಟಾದಾಗಲೆಲ್ಲ ನೆಲ ವನ್ನು ಮೂಸುತ್ತ ಹೋಗುತ್ತವೆ. ಅನ್ಯ ಪ್ರಾಣಿಗಳು ಮೂತ್ರ ವಿಸರ್ಜಿಸಿದ ಮಣ್ಣನ್ನು ಸೇವಿಸಿ ಇವು ತಮ್ಮ ದೇಹದ ಉಪ್ಪಿನ ಬಯಕೆಯನ್ನು ತಣಿಸಿಕೊಳ್ಳುತ್ತವೆ. ಜಿಂಕೆಯ ಈ ಅಭ್ಯಾಸದಿಂದಾಗಿ ಹಲವಾರು ಬಾರಿ ಸುಲಭದಲ್ಲಿ ಅವು ರೋಗಗಳಿಗೆ ಕೂಡ ಒಳಗಾಗುತ್ತವೆ.
ಬದುಕೆಂಬ ಹೋರಾಟ ದಲ್ಲಿ ದೇಹದ ಅವಶ್ಯಕತೆಯನ್ನು ತೀರಿಸಿಕೊಳ್ಳಲು – ಬೇಕೆಂಬ ಉಪ್ಪನ್ನು ಪಡೆಯಲು ಜೀವಜಗತ್ತಿನಲ್ಲಿ ಏನೇನೆಲ್ಲ ಸರ್ಕಸ್ ನಡೆಯುತ್ತಿರುತ್ತವೆ.

ಇವು ಕೆಲವು ಸಾಂಪಲ್‌ಗಳಷ್ಟೇ. ಹೆಚ್ಚಿನ ಮಾಂಸಾಹಾರಿ ಪ್ರಾಣಿಗಳು ತಮ್ಮ ಆಹಾರದ – ಮಾಂಸದಿಂದ ತಮಗೆ ಬೇಕಾದ
ಲವಣವನ್ನು ಪಡೆದುಕೊಂಡರೆ, ಸಸ್ಯಾಹಾರಿ ಪ್ರಾಣಿಗಳು ಈ ರೀತಿಯ ಹತ್ತಾರು ಮಾರ್ಗ ಗಳನ್ನೆಲ್ಲ ಅನುಸರಿಸುತ್ತವೆ. ಒಟ್ಟಾರೆ ಎಲ್ಲ ಪ್ರಾಣಿಗಳಿಗೂ ಉಪ್ಪು ಬೇಕೇ ಬೇಕು – ಅವನ್ನು ಪಡೆಯುವ ಮಾರ್ಗ ಮಾತ್ರ ಬೇರೆ ಬೇರೆ. ಮೊದಲೇ ಹೇಳಿದಂತೆ ಸಂತಾನೋತ್ಪತ್ತಿಯ ಸಮಯದಲ್ಲಿ, ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದುಕೊಳ್ಳಲು, ಹಾಲಿನ ಉತ್ಪಾದನೆಗೆ ಉಪ್ಪು – ಲವಣ ಬೇಕು. ಆ ದಿನ ನಮ್ಮ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಕಳ್ಳ ಉಡ ಕೂಡ ತಾಯಿಯಾಗ ಹೊರಟದ್ದಿತ್ತೋ ಏನೋ ಗೊತ್ತಿಲ್ಲ. ಮನುಷ್ಯ ಪ್ರಾಣಿಗೂ ಹೀಗೆ ಉಪ್ಪಿನ – ಕಾಯಿ ತಿನ್ನೋ ಬಯಕೆ ಯಾಗುವುದರ ಕಾರಣ ಈಗ ನಿಮಗೆ ಮತ್ತೆ ಬಿಡಿಸಿ
ಹೇಳಬೇಕಿಲ್ಲ ಬಿಡಿ.