ಯಶೋ ಬೆಳಗು
ಯಶೋಮತಿ ಬೆಳಗೆರೆ
yashomathy@gmail.com
ನನ್ನೊಳಗೆ ಕಾಡುತ್ತಿದ್ದ ಅಸಂಖ್ಯಾತ ಪ್ರಶ್ನೆಗಳಿಗೆ ಸದಾ ಉತ್ತರವಾಗಿದ್ದವರು, ಇನ್ನು ನಿನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ನೀನೇ ಹುಡುಕಿಕೋ ಎನ್ನುತ್ತ ಕೈಕೊಡವಿ ಕೊಂಡು ಬಾರದ ಲೋಕಕ್ಕೆ ಹೊರಟು ಹೋದಾಗ ಸಾಲುಗಟ್ಟಿ ನಿಲ್ಲುತ್ತಿದ್ದ ಪ್ರಶ್ನೆಗಳಿಗೆ ಕೆಲವೊಂದು ಉತ್ತರಗಳು ಹೊಳೆಯುತ್ತಿದ್ದವಾದರೂ ಒಪ್ಪಲಿಕ್ಕೆ ಅಂತರಾತ್ಮ ಸಿದ್ಧವಿರುತ್ತಿರಲಿಲ್ಲ.
Yashomathy ಎನ್ನುವ ಹೆಸರನ್ನು ನನ್ನ ಹೆತ್ತವರಿಗೆ ಅದ್ಯಾರು ಸೂಚಿಸಿದರೋ ನನಗೆ ಗೊತ್ತಿಲ್ಲ. ಯಶೋದ, ಯಮುನ, ಯಶಸ್ವಿನಿ ಅನ್ನೋ ಹೆಸರೆಲ್ಲ ಬಿಟ್ಟು ಇಂಥ ಅಪರೂಪದ ಹೆಸರು ಸೂಚಿಸಿದ ಮಹಾತ್ಮರಿಗೆ ನಮನಗಳು. ಕೇಳಿದ ಕೂಡಲೇ ಇದು ಜೈನರ ಹೆಸರಲ್ವಾ? ಎಂದು ಅನೇಕರು ಕೇಳುತ್ತಾರೆ. ಯಶೋಧರ ಹಾಗೂ ಅಮೃತಮತಿಯ ಮಗನ ಹೆಸರು ಯಶೋಮತಿ ಅನ್ನುವುದನ್ನು ಓದಿದ್ದು ಅಸ್ಪಷ್ಟವಾಗಿ ನೆನಪಿದೆ.
ಬುದ್ಧಿ ಮತ್ತು ಕೀರ್ತಿಗಳು ಜತೆಯಾಗಿರುವ ಈ ಹೆಸರನ್ನು ಆಂಗ್ಲ ಭಾಷೆಯಲ್ಲಿ ಶಾಲೆಯ ರಿಜಿಸ್ಟರಿನಲ್ಲಿ ಅನ್ನೋ ಅಕ್ಷರದಿಂದ ಆರಂಭವಾಗಿ ಅನ್ನುವ ಅಕ್ಷರದಿಂದಲೇ ಕೊನೆಗೊಳ್ಳುವಂತೆ ದಾಖಲಿಸಿಕೊಂಡು ಬಿಟ್ಟಿದ್ದಾರೆ. ಆದ್ದರಿಂದ ಪ್ರಶ್ನೆಯಿಂದಲೇ ಆರಂಭವಾಗಿ ಪ್ರಶ್ನೆಯ ಕೊನೆಗೊಳ್ಳುವ ಏಕೈಕ ಹೆಸರೆಂದರೆ ಅದು ನನ್ನದೇ ಅನ್ನುವ ನಿರಂತರ ಪೇಚಾಟ ನನ್ನದು.
ಹಾಗ್ಯಾಕೆ ಅಂದುಕೊಳ್ತೀಯ? ಪ್ರಶ್ನೆಗಳಿದ್ದಾಗಲೇ ಹುಡುಕಾಟ ಆರಂಭವಾಗುವುದು. ಉತ್ತರಕ್ಕೊಂದು ಅಸ್ತಿತ್ವ ದೊರೆಯುವುದು ಅನ್ನುತ್ತ ಜೊತೆಯಾದವರು ನನ್ನ ಬಾಳಸಂಗಾತಿ. ನನ್ನೊಳಗೆ ಕಾಡುತ್ತಿದ್ದ ಅಸಂಖ್ಯಾತ ಪ್ರಶ್ನೆಗಳಿಗೆ ಸದಾ ಉತ್ತರವಾಗಿದ್ದವರು, ಇನ್ನು ನಿನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ನೀನೇ ಹುಡುಕಿಕೋ ಎನ್ನುತ್ತ ಕೈಕೊಡವಿಕೊಂಡು ಬಾರದ ಲೋಕಕ್ಕೆ ಹೊರಟು ಹೋದಾಗ ಸಾಲುಗಟ್ಟಿ ನಿಲ್ಲುತ್ತಿದ್ದ ಪ್ರಶ್ನೆಗಳಿಗೆ ಕೆಲವೊಂದು ಉತ್ತರಗಳು ಹೊಳೆಯುತ್ತಿದ್ದವಾದರೂ ಒಪ್ಪಲಿಕ್ಕೆ ಅಂತರಾತ್ಮ ಸಿದ್ಧವಿರುತ್ತಿರಲಿಲ್ಲ.
ಕೆಲವೊಂದು ಘಟನೆಗಳ ಮೂಲಕ ಕೆಲವು ಅನುಭವಕ್ಕೆ ಬಂದರೆ ಮತ್ತೆ ಕೆಲವು ಚರ್ಚೆಗಳ ಮೂಲಕ ಲಭ್ಯ ವಾಗುತ್ತಿತ್ತು. ಅವರಿದ್ದಾರಲ್ಲ ಬಿಡು ಎನ್ನುವ ಭರವಸೆ ಯೊಂದಿಗೆ ನೆಮ್ಮದಿಯಾಗಿದ್ದವಳು ಇದ್ದಕ್ಕಿದ್ದಂತೆ ಎಲ್ಲ ಕಡೆಯಿಂದ ಜವಾಬ್ದಾರಿಯ ಒತ್ತಡಗಳು ಬೀಳತೊಡಗಿದಾಗ ದಿಕ್ಕುತೋಚದೆ ಕೆಲವೊಮ್ಮೆ ಸುಮ್ಮನೆ ಕುಳಿತುಬಿಡುತ್ತಿದ್ದೆ. ನಮ್ಮ ಮನೆಯ ವಾಸವಾಗಿರುವ ನೇಪಾಳ ಮೂಲದವನಾದ ನಮ್ಮ house maid ಬಂದು; ದೀದಿ, ರಾತ್ ಮೆ ಬಹುತ್ ಡರ್ ಲಗತಾ ಹೈ! ಅಚಾನಕ್ ಲಿಫ್ಟ್ ಕಾ ದರ್ವಾಜಾ ಕಟ್ ಕಟಾನೆ ಕಾ ಆವಾಜ್ ಆತಾ ಹೈ, ಬಾಹರ್ ಸಾಬ್ ಕಾ ಬಡಾ ಫೋಟೋ ಡಾಲೋ ದೀದಿ ಎಂದು ಹೆದರುತ್ತಾ ಹೇಳಿದಾಗ ಅವನ ಹೆಂಡತಿ ಬೇರೆ ಗರ್ಭಿಣಿ ಇದೇ ಭಯದಲ್ಲಿ ಹೆಚ್ಚು ಕಡಿಮೆಯೇನಾದರೂ ಆದರೆ ಎನಿಸಿ ಅವರ ಸಮಾಧಾನಕ್ಕಾಗಿ ಒಂದು -ಟೋ ಇಟ್ಟು ಅದಕ್ಕೊಂದು ಹಾರ ಹಾಕಿದೆ.
ಆಶ್ಚರ್ಯವೆಂದರೆ ಕುತ್ತಿಗೆಯ ಸರಪಳಿ ಬಿಚ್ಚಿದ ಕೂಡಲೇ ಬೀದಿಯಿಡೀ ಓಡಾಡುತ್ತ ಎಲ್ಲರನ್ನು ಹೆದರಿಸುತ್ತಿದ್ದ ನಮ್ಮ ಗುರುಸಿದ್ದ (ಲ್ಯಾಬ್ರೆಡಾರ್ ಡಾಗ್) ಹಾಗೂ ಭಜಗೋವಿಂದ (ಅವರೊಂದಿಗೆ ಸದಾ ಇರುತ್ತಿದ್ದ ಪುಟ್ಟ ಜೀವ shitzu dog) ಗಲಾಟೆಯನ್ನೇ ಮಾಡದೆ ಮಂಡಿಯೂರಿ ಕುಳಿತು ಅವರ ಫೋಟೋದೆಡೆಗೆ ನೋಡುತ್ತ ಕಣ್ಣೀರು ಸುರಿಸುತ್ತಿದ್ದ ದೃಶ್ಯವನ್ನು ಕಂಡಾಗ ಆದ ವೇದನೆಯನ್ನು ಅಕ್ಷರಗಳಲ್ಲಿ ತಿಳಿಸಲಾಗದು.
ಆದಷ್ಟೂ ನಮ್ಮ ಯಾವ ಕೆಲಸಗಳಿಗೂ ಹೊರಗಿನವರ ಮೇಲೆ ಅವಲಂಬಿಸುವುದು ಬೇಡ. ನಮ್ಮಿಂದಾದಷ್ಟು ಕೆಲಸಗಳನ್ನು ಸ್ವಲ್ಪ ಕಷ್ಟವಾದರೂ ಸರಿ, ನಾವೇ ಮಾಡಿಕೊಳ್ಳೋಣ ಎಂದುಕೊಂಡು ಮೇಲಿನ ಕೋಣೆಗೆ shift ಮಾಡಲು bunker bed ಅನ್ನು ಅದರ ನಟ್ಟು ಬೋಲ್ಟುಗಳನ್ನು ಜಾಣತನದಿಂದ ಬಿಚ್ಚಿಟ್ಟು ನಂತರ ಅದನ್ನು ಜೋಡಿಸಲಾಗದೆ ಪರದಾಡುತ್ತಿರಬೇಕಾದರೆ, ಅಕ್ಕಾ, ಯಾಕೋ ಸರ್ ತುಂಬ ನೆನಪಿಗೆ ಬರ್ತಿದ್ರು ಅದಕ್ಕೆ ಒಂದ್ಸಲ ನೀವೆಲ್ಲ ಹೇಗಿದ್ದೀರ ಅಂತ ಮಾತಾಡಿಸಿಕೊಂಡು ಹೋಗೋಣ ಅಂತ ಬಂದೆ ಅನ್ನುತ್ತಾ ಬೆಳ್ಳಬೆಳಗ್ಗೆ ಮನೆ ಬಾಗಿಲಲ್ಲಿ ನಮ್ಮ ಕಾರ್ಪೆಂಟರ್ ಬಂದು ನಿಂತಾಗ ಸಮಸ್ಯೆಗೊಂದು ಪರಿಹಾರ ಸಿಕ್ಕು ಮನಸ್ಸು ನಿರಾಳವಾಗಿತ್ತು.
ಹಾಗೇ ನಾನು ಬಹಳ ಬೇಸರದಿಂದ, ದುಃಖದಿಂದ ಇದ್ದ ದಿನಗಳಲ್ಲಿ ನನ್ನ ಸೋದರಳಿಯ- ಅತ್ತೆ, ಮಾವ ನನ್ನ ಕನಸಲ್ಲಿ ಬಂದಿದ್ರು ಹಿಮವಂತನನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದರು ಅನ್ನುವ ಹಾಗೂ ಪ್ರತಿದಿನ ತಪ್ಪದೆ ಗುಡ್ ಮಾರ್ನಿಂಗ್ ಮೆಸೇಜು ಕಳಿಸುವ ನನಗಷ್ಟೇನೂ ಆಪ್ತರಲ್ಲದ ಅವರ ಓದುಗ ಗೆಳತಿ, ಸರ್ ನಿನ್ನೆ ಕನಸಲ್ಲಿ ಬಂದಿದ್ರು He was with you like a guardian angel ಅನ್ನುವ ಮೆಸೇಜುಗಳನ್ನು ಕಂಡಾಗ ಸಮಾಧಾನದ ಸಂದೇಶ ಸಿಕ್ಕು ಮತ್ತೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದೆ.
ಇಂಥವುಗಳನ್ನು ನಾನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲವಾದರೂ ತರ್ಕಕ್ಕೆ ನಿಲುಕದ ಇಂಥ ಪ್ರಶ್ನೆಗಳನ್ನು ಯಾವುದಾದರೂ ಪಂಡಿತರ ಬಳಿ ಕೇಳಿ ತಿಳಿಯೋಣ ವೆನ್ನುತ್ತ ನಮ್ಮ ಮನೆಯ ಪೂಜೆ-ಪುನಸ್ಕಾರಗಳಿಗೆ ಬರುತ್ತಿದ್ದ ಪಂಡಿತರನ್ನು ಕೇಳಿದಾಗ ಅವರು ಸಂಖ್ಯಾ ಶಾಸ್ತ್ರದ ಮೂಲಕ ಪ್ರಶ್ನೆಯನ್ನಿಟ್ಟು ಒಂದೆ ರಡು ಸಂಖ್ಯೆಗಳನ್ನು ಹೇಳಿ ಎಂದಾಗ, ನಾನು ಹೇಳಿದ ಸಂಖ್ಯೆಗಳೊಳಗೆ ಅಡಗಿದ್ದ ಸಾರಾಂಶವನ್ನು ತಿಳಿಸಿದಾಗ ನಿಜಕ್ಕೂ ದಿಗ್ಮೂಢಳಾಗಿದ್ದೆ. ಹೌದು ಅವರ ಆತ್ಮ ಈ ಮನೆಯ ಆಸುಪಾಸಿನಲ್ಲಿ ಸುಳಿದಾಡುತ್ತಿದೆ. ಅವರು ಅಷ್ಟು ಪ್ರೀತಿಸುತ್ತಿದ್ದ ಅವರ ಹೆಂಡತಿ ಹಾಗೂ ಮಗನ ಮೇಲಿನ ಮೋಹದಿಂದ ಅವರಿಗಿನ್ನೂ ಬಿಡುಗಡೆ ಸಿಕ್ಕಿಲ್ಲ ಆದರೆ ಅವರಿಂದ ಯಾರಿಗೂ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.
ಅನ್ನುವ ಮಾತುಗಳು ಕೇಳಿದಾಗ ಉತ್ತರ ಸಿಗದ ಪ್ರಶ್ನೆಗಳೊಳಗೆ ಮನಸು ಮುಳುಗಿ ಹೋಗಿತ್ತು. ಇವೆಲ್ಲವುಗಳನ್ನು ನೋಡುವಾಗ ಇದೆಲ್ಲ ಹೇಗೆ ಸಾಧ್ಯ?
ಭೌತಿಕವಾಗಿ ನಮ್ಮ ಅಸ್ತಿತ್ವ ಇಲ್ಲವಾದ ಮೇಲೂ ಸಂದೇಶಗಳು, ಸಂಪರ್ಕಗಳು ಹೇಗೆ ಸಾಧ್ಯವಾಗುತ್ತವೆ? ಬಾಲ್ಯ ದಲ್ಲಿ ದೆವ್ವಗಳೆಂದೇ ಅದೊಂದು ಭಯಮಿಶ್ರಿತ ಫ್ಯಾಂಟಸಿ ಲೋಕ. ಮೈನವಿರೇಳಿಸುವ ಕತೆಗಳನ್ನು ಕೇಳುತ್ತ ಕೇಳುತ್ತ ನಾವೂ ಕೂಡ ದೆವ್ವಗಳಾಗಿ ಬಿಟ್ಟರೆ ಎಷ್ಟು ಆರಾಮಲ್ವ? ಸ್ಕೂಲಿಗೆ ಹೋಗುವ, ಹೋಮ್ ವರ್ಕ್ ಬರೆಯುವ, ಟೀಚರಿಂದ ಬೈಸಿಕೊಳ್ಳುವ, ಎಲ್ಲಿಗೆ ಹೋಗಬೇಕೆಂದರೂ ದೊಡ್ಡವರ ಅನುಮತಿ ಬೇಡುವ ಗೋಜಿರುವುದಿಲ್ಲ.
ಬೇಕೆಂದಲ್ಲಿಗೆ ಬೇಕಾದ ಹಾಗೆ ತೇಲಾಡುತ್ತಾ ಓಡಾಡಬಹುದು. ನಮಗೆ ತೊಂದರೆ ಕೊಟ್ಟವರನ್ನು ಹೆದರಿಸುತ್ತಾ ಕಾಡಬಹುದು. ನಮ್ಮಿಷ್ಟದ ತಿಂಡಿ ತಿನಿಸುಗಳನ್ನು ತಿನ್ನಬಹುದೆಂಬ ಆಸೆ ಆಗಾಗ ಕಾಡುತ್ತಿತ್ತು. ದೇವರಾಗುವುದು ಹೇಗೆ ಅನ್ನುವ ಕಲ್ಪನೆಯೂ ಇರಲಿಲ್ಲ. ಏಕೆಂದರೆ ದೇವರುಗಳೆಲ್ಲ ಆಗಲೇ ಮೂರ್ತರೂಪಗಳಲ್ಲಿ ಅಸ್ತಿತ್ವದಲ್ಲಿದ್ದರು. ಸಾರ್ವಜನಿಕವಾಗಿ ಸಮಾನವಾಗಿ ಸಾಧ್ಯವಿದ್ದ ಒಂದೇ ಅವಕಾಶವೆಂದರೆ ಅದು ಸತ್ತು ದೆವ್ವವಾಗುವುದು! ಆದರೆ ಎಲ್ಲರಿಗೂ ಭೀಷ್ಮರಂತೆ ಬಯಸಿದಾಗ ಸಾವು ಬರುವಂತಿದ್ದಿದ್ದರೆ ಸ್ವಲ್ಪ ಸಮಸ್ಯೆಗಳು ಎದುರಾದ ಕೂಡಲೇ ಪ್ರತಿಯೊಬ್ಬರೂ ಸಾವನ್ನಪ್ಪಿಕೊಂಡು ಬಿಡುತ್ತಿದ್ದರೇನೋ? ಸಾಯಲು ಬಯಸುವುದೇ ಒಂದು ಹೇಡಿತನ ಎನ್ನುವುದು ನಿಧನಿಧಾನಕ್ಕೆ ಅರಿವಿಗೆ ಬರಲಾರಂಭಿಸಿತು.
ಅದಕ್ಕಿಂತ ಹೆಚ್ಚಾಗಿ ಅದೇನೇ ಕಷ್ಟಗಳು ಬಂದರೂ ಎದುರಿಸಿ ಬದುಕುವಷ್ಟು ಸುಲಭವಲ್ಲ ಸಾವಿಗೆ ಶರಣಾಗುವುದು. ಯಾರು ತಮ್ಮನ್ನು ತಾವು ಪ್ರೀತಿಸುವು ದಿಲ್ಲವೋ ಅಂಥವರು ಮಾತ್ರ ಸಾವನ್ನು ಎದುರು ನೋಡುತ್ತಾರೆ. ಆದರೆ ಸಹಜವಾದ ಸಾವಿಗಿಂತ ಭಿನ್ನ ಆತ್ಮಹತ್ಯೆಗಳು! ಅರೆ, ಸಾಯುವುದು ದೇಹವಲ್ಲವಾ? ಅದನ್ಯಾಕೆ ಆತ್ಮಹತ್ಯೆ ಅನ್ನುತ್ತಾರೆ? ಹಾಗಾದರೆ ನಮ್ಮೆಲ್ಲರ ಆಂತರ್ಯದೊಳಗೂ ಆತ್ಮವಿದೆ ಅಂತಾಯ್ತು. ಸಾವು ಸಹಜವಾಗಿ ಸಂಭವಿಸಿದಾಗ ದೇಹ ದಿಂದ ಬಿಡುಗಡೆಯಾಗುವ ಆತ್ಮಗಳು ತಮ್ಮ ಪ್ರಯಾಣವನ್ನು ಮುಂದುವರೆಸುತ್ತವೆ. ತಮ್ಮ ಕರ್ಮಾನುಸಾರ ಮತ್ತೊಂದು ದೇಹದೊಳಗೆ ಜನ್ಮ ತಾಳುತ್ತ ಪರಿಪೂರ್ಣತೆ ಯತ್ತ ಸಾಗುತ್ತವೆ. ಆದರೆ ಅಸಹಜವಾದ ಸಾವಿನಲ್ಲಿ ದೇಹದಿಂದ ಬಿಡುಗಡೆಯಾಗುವ ಆತ್ಮಗಳು ತಮ್ಮ ಪ್ರಯಾಣವನ್ನು ಮುಂದುವರೆಸಲಾಗದೆ ಅಂತರ್ ಪಿಶಾಚಿ ಗಳಾಗಿ ಅಲೆದಾಡುತ್ತಿರುತ್ತವೆ.
ಹುಟ್ಟುವಾಗ ಹೇಗೆ ನಾವು ಈ ಲೋಕದೊಳಗೆ ಪ್ರವೇಶಿಸಲು ತಾಯ ಗರ್ಭದಲ್ಲಿ ದಿನದಿನವೂ ಬೆಳೆಯುತ್ತಾ ಒಂಭತ್ತು ತಿಂಗಳ ಸಮಯವನ್ನು ತೆಗೆದು ಕೊಳ್ಳುತ್ತೇವೆಯೋ ಹಾಗೆಯೇ ಸಾವಿನ ನಂತರ ಈ ಲೋಕದಿಂದ, ಬಂಧಗಳಿಂದ ದೂರಾಗಲು ಸಹ ಅಷ್ಟೇ ಸಮಯದ ಅವಶ್ಯಕತೆಯಿರುತ್ತದೆ ಅನ್ನುತ್ತಾರೆ ಸದ್ಗುರು! ಬದುಕಿzಗ ಅವರು ಬಳಸುತ್ತಿದ್ದ ವಸ್ತುಗಳಲ್ಲ ಅವರ ದೇಹದ ಮೂಲಕ, ಸ್ಪರ್ಶದ ಮೂಲಕ ಕಣ್ಣಿಗೆ ಕಾಣದ ಸೂಕ್ಷ್ಮ energy ಗಳು ಜೀವಂತವಾಗಿಯೇ ಇರುತ್ತದೆ. ಹೀಗಾಗಿಯೇ ಸಾವಿನ ನಂತರ ಅವರು ನಿತ್ಯ ಬಳಸುತ್ತಿದ್ದ ವಸ್ತುಗಳನ್ನೂ ಸಹ ದೇಹದೊಂದಿಗೆ ರುದ್ರಭೂಮಿಗೆ ಕಳಿಸಿ ಕೈತೊಳೆದುಕೊಳ್ಳುತ್ತಾರೆ.
ಪ್ರತಿಯೊಬ್ಬರ ಸುತ್ತಲೂ ಅವರದ್ದೇ ಆದಂತಹ ಅಂತಃಶಕ್ತಿಯ ಏಳು ಪದರಗಳ ಪ್ರಭೆ ಸದಾ ಆವರಿಸಿಕೊಂಡಿರುತ್ತದೆ. ಅದು ಸದಾ ಜೀವಾತ್ಮವನ್ನು ರಕ್ಷಿಸುತ್ತಿ ರುತ್ತದೆ. ಹಾಗಾದರೆ ದೇಹದ ಜೊತೆ ಜೊತೆಗೆ ಆತ್ಮಗಳು ಯಾಕೆ ಸಾಯುವುದಿಲ್ಲ? ಈ ಪುನರ್‌ಜನ್ಮಗಳೆಲ್ಲ ಯಾಕೆ? ಮಾಡಿದ ಕರ್ಮಗಳಿಗೆ ಅದೇ ಜನ್ಮಗಳ ಪ್ರಾಯಶ್ಚಿತ್ತ ಗಳೇಕಿಲ್ಲ? ಜೀವದೊಂದಿಗೆ ಬೆಸೆದುಕೊಳ್ಳುವ ಆತ್ಮವೂ ಸಹ ದಿನದಿನಕ್ಕೂ ಬೆಳೆಯುತ್ತಾ ಹೋಗುತ್ತದೆಯೇ? ಹಾಗಾದರೆ ಅಲ್ಪಾಯುಷಿಗಳ ಆತ್ಮಗಳು ದೀರ್ಘಾಯುಷಿಗಳ ಆತ್ಮಗಳಿಗಿಂತ ಭಿನ್ನವಾಗಿರುತ್ತವೆಯೆ? ತಮ್ಮ ಕರ್ಮಗಳಿಗನುಸಾರವಾಗಿ ಆತ್ಮಗಳಿಗೆ ಜೀವಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಗಳಿವೆಯಾ? ಒಂದು ಯುಗದ ಅವಧಿ ಸರಿಸುಮಾರು ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರುಷಗಳು! ಹಾಗಾದರೆ ಪುರಾಣ ಕತೆಗಳಲ್ಲಿ ಬರುವ ಶಾಪಗ್ರಸ್ಥ ರಾದ ವಿಷ್ಣುವಿನ ದ್ವಾರಪಾಲಕರಾದ ಜಯ- ವಿಜಯರು ಮೂರು ಜನ್ಮಗಳಿಗಾಗಿ ತಮ್ಮ ಒಂದೊಂದು ಜನ್ಮದ ನಂತರವೂ ಲಕ್ಷಾಂತರ ವರ್ಷಗಳ ಕಾಲ ಆತ್ಮಗಳ ಸ್ಥಿತಿಯ ಕಾಯುತ್ತಿದ್ದರಾ? ದೇಹದ ಆಶ್ರಯವಿಲ್ಲದೆ ಆತ್ಮಗಳಿಗೆ ಪರಿಪೂರ್ಣತೆಯ ಸಾಧ್ಯತೆ ಏಕಿಲ್ಲ? ಆತ್ಮಗಳದ್ದೇ ಒಂದು ಲೋಕವಿದೆ ಅನ್ನುವುದಾದರೆ ಆ ಅವುಗಳು ತಮ್ಮ ಜೀವನವನ್ನು ನಡೆಸಬಹುದಲ್ಲವೇ? ಏಕೆ ಈ ಕ್ಷುಲ್ಲಕ ದೇಹದ ಬಯಕೆ? ಅಥವಾ ಇದೆಲ್ಲ ಹುಟ್ಟು-ಸಾವುಗಳ, ಪಾಪ-ಪುಣ್ಯಗಳ ಚಕ್ರವ್ಯೂಹ ದೊಳಗೆ ಸಿಲುಕಿ ನಲುಗುವ ಮನುಷ್ಯ ಕಂಡುಕೊಂಡ ಪರಿಹಾರದ ಕಾಲ್ಪನಿಕ ಲೋಕವಾ? ಅನ್ನುವ ಪ್ರಶ್ನೆಗಳಿಗಿನ್ನೂ ಸಮರ್ಪಕವಾದ ಉತ್ತರ ಸಿಕ್ಕಿಲ್ಲ. ಆದರೆ ಹುಡುಕಾಟವಿದೆ.
ಆದರೆ ನಮ್ಮೊಳಗಿರುವ ಆತ್ಮ ದೇಹಬಿಟ್ಟು ಹೋಗುವುದಾದರೂ ಎಲ್ಲಿಗೆ? ಭೂಮಿಗಿರುವಂತೆ ಆತ್ಮಗಳ ಲೋಕಕ್ಕೂ ಆಯಸ್ಕಾಂತೀಯ ಗುಣವೇನಾದರೂ ಇದೆಯೇ? ಸತ್ತವರಾರೂ ಬಂದು ಸ್ವರ್ಗ-ನರಕಗಳ ಕತೆಗಳನ್ನು ಹೇಳಿಲ್ಲ. ಆತ್ಮಗಳ ಇರುವಿಕೆಯ ಬಗ್ಗೆ ಮಾಹಿತಿ ನೀಡಿಲ್ಲ. ಅಥವಾ ಅದಕ್ಕೆ ಸಾಕ್ಷಿಗಳನ್ನು ಒದಗಿ ಸಿಲ್ಲ. ಕಣ್ಣಿಗೆ ಕಂಡದ್ದು, ಅನುಭವಕ್ಕೆ ಬಂದದ್ದನ್ನು ಮಾತ್ರ ನಂಬುವಂತಹ ಸಾಮಾನ್ಯರಲ್ಲಿ ಅತಿಸಾಮಾನ್ಯಳಾದ ನನಗೆ ಈ ಸೃಷ್ಟಿಯ ಗರ್ಭದಲ್ಲಿ ಅಡಗಿರುವ ಸಾವಿರದ ಅದೆಷ್ಟೋ ಅಗೋಚರ ರಹಸ್ಯಗಳು ಅರಿವಿಗೆ ಬರುವುದಾದರೂ ಹೇಗೆ ಸಾಧ್ಯ?