Saturday, 14th December 2024

ಧರ್ಮವಿರೋಧಿ ಅಫೀಮನ್ನು ತಿನ್ನದೆ ಸಮತೋಲನದಲ್ಲಿರಬೇಕು

ಧರ್ಮಸೂಕ್ಷ್ಮ

ಜಿ.ರಾಮನಾರಾಯಣ ಜೋಯಿಸ್

‘ನನ್ನ ಧರ್ಮ ಮಾತ್ರ ಸರಿ, ಉಳಿದ ಧರ್ಮವನ್ನೆಲ್ಲ ನಾನು ತ್ಯಜಿಸುತ್ತೇನೆ, ಅವರ‍್ಯಾರೂ ಸರಿ ಇಲ್ಲ’ ಎಂಬ ಧರ್ಮವಿರೋಧಿ ಅಫೀಮನ್ನು ತಿನ್ನ ಬಾರದು. ನಾವು ಸಮತೋಲನದಲ್ಲಿ ಇರಬೇಕು, ಸಮಾಜವನ್ನು ನಡೆಸಬೇಕು. ಅದಕ್ಕೆ ಮಾನವತಾ ಧರ್ಮ ಎಂದು ಹೇಳುತ್ತಾರೆ. ನನಗೆ ಯಾವುದೆಲ್ಲಾ ಆಗಬಾರದು ಎಂದು ಬಯಸುತ್ತೇವೆಯೋ, ಅದು ಇನ್ನೊಬ್ಬರಿಗೂ ಅಥವಾ ಇನ್ನೊಂದು ಜೀವಿಗೂ ಆಗಬಾರದು ಎಂಬ ಮನಸ್ಥಿತಿಯೇ ಧರ್ಮ. ಇದೇ ಧರ್ಮ ಎಂಬ ಪರಿಭಾಷೆಯ ಅರ್ಥ.

ಎಲ್ಲ ಓದುಗರಿಗೆ ಸವಿನಯ ನಮಸ್ಕಾರಗಳು. ನಾನು ಈ ಲೇಖನವನ್ನು ಯಾರನ್ನಾದರೂ ದೂಷಣೆ ಮಾಡುವುದಕ್ಕಾಗಲೀ ಅಥವಾ ನನ್ನನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕಾಗಲೀ ಅಥವಾ ಸನಾತನ ಧರ್ಮವನ್ನು ಸಮರ್ಥಿಸಿಕೊಳ್ಳುವುದಕ್ಕಾಗಲೀ ಬರೆದಿಲ್ಲ. ಜನರಲ್ಲಿ ಗೊಂದಲಗಳು ಸೃಷ್ಟಿಯಾದಾಗ, ಅದರ ಬಗ್ಗೆ ನನಗೆ ತಿಳಿದ ಕೆಲವು ಅಂಶಗಳನ್ನು ಅವರ ಮುಂದೆ ಇಡುವುದರಿಂದ ಸಮಾಜಕ್ಕೆ ಪ್ರಯೋಜನ ಸಿಗಬಹುದೇನೋ ಎನ್ನುವಂಥ ಒಂದು ಸದುದ್ದೇಶದಿಂದ ಈ ಲೇಖನವನ್ನು ಬರೆದಿದ್ದೇನೆ. ಹಾಗಾಗಿ ಯಾರೇ ನಮ್ಮ ಓದುಗರು ದಯಮಾಡಿ ಪೂರ್ವಗ್ರಹ ಪೀಡಿತರಾಗದೆ ಇದನ್ನು ಅರ್ಥೈಸಿಕೊಳ್ಳ ಬೇಕೆಂದು ಹೇಳಿ ನಿಮ್ಮಲ್ಲಿ ಮೊಟ್ಟಮೊದಲನೆಯದಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.

ಹಾಗೂ ಓದಿದ ಮೇಲೆ ಇದರ ಬಗ್ಗೆ ಚರ್ಚೆ ಮಾಡುವುದಕ್ಕೆ ನನಗೆ ಸಮಯಾವಕಾಶವು ಇರುವುದಿಲ್ಲ, ಅಂಥ ಅಪೇಕ್ಷೆಯೂ ನನಗಿಲ್ಲ. ನನ್ನ ಅಭಿಪ್ರಾಯ ವನ್ನು ಮಂಡಿಸುತ್ತಿದ್ದೇನೆ, ಅಷ್ಟೇ. ಸನಾತನ ಧರ್ಮವೆಂದರೆ, ಇಡೀ ಪ್ರಪಂಚಕ್ಕೆ ಬೆಳಕು ಕೊಡುವಂಥ ಭಾರತ ದೇಶದ ಒಂದು ‘ರಿಸರ್ಚ್ ಆಂಡ್ ಡೆವಲಪ್‌ಮೆಂಟ್’ ವಿಭಾಗವಾಗಿದೆ. ವೇದವು ಯಾವುದೇ ಒಬ್ಬ ಮನುಷ್ಯನಿಂದಾಗಲಿ, ವ್ಯಕ್ತಿಯಿಂದಾಗಲಿ ಆಗಿರುವುದಲ್ಲ; ಅದು ಅಪೌರುಷ. ಒಬ್ಬೊಬ್ಬ ಋಷಿ-ಮುನಿಗಳೂ ಈ ಸನಾತನ ಧರ್ಮ ಕ್ಕಾಗಿ ತಮ್ಮ ಇಡೀ ಜೀವಿತಾವಧಿಯನ್ನು ಮುಡಿಪಾಗಿಟ್ಟು, ತಮ್ಮ ಜ್ಞಾನ, ಜಪ, ಕರ್ಮನಿಷ್ಠೆಯಿಂದ ಅಧ್ಯಾತ್ಮ ಲೋಕಕ್ಕೆ ಹೋಗಿ ಮೇಲಿನಿಂದ ದಾರ್ಶನಿಕರಾಗಿ ನೋಡಿದಂಥ ಸತ್ಯವನ್ನು ಬರೆದಿಟ್ಟಿದ್ದಾರೆ. ಅದು ವೇದ ರೂಪದಲ್ಲಿರಬಹುದು, ಉಪನಿಷತ್ ರೂಪ ದಲ್ಲಿರಬಹುದು, ಸಾಹಿತ್ಯ ರೂಪದಲ್ಲಿರಬಹುದು.

ಇಡೀ ಪ್ರಪಂಚ ಸೃಷ್ಟಿ ಆಗಿರುವಂಥದ್ದು ೨ ಮಹಾವಸ್ತುಗಳಿಂದ- ಒಂದು ಪ್ರಕೃತಿ, ಮತ್ತೊಂದು ಪುರುಷ. ಇದನ್ನು ನೀವು ಇಂಗ್ಲಿಷ್‌ನಲ್ಲಿ ಹೇಳುವುದಾದರೆ ‘ಎನರ್ಜಿ ಆಂಡ್ ಮ್ಯಾಟರ್’ ಅಂತ ಕರೆಯ ಬಹುದು. ಇದನ್ನು ಭೌತಶಾಸದ ಪರಿಭಾಷೆಯಲ್ಲಿ ಹೇಳುವುದಾದರೆ, ‘ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ’ ಎನ್ನಬಹುದು. ಇವೆರಡರ ಸಂಯೋಜನೆಯಿಂದಲೇ ಇಡೀ ಪ್ರಪಂಚದ ಎಲ್ಲಾ ಜೀವರಾಶಿಗಳು ಸೃಷ್ಟಿಯಾಗಿರುತ್ತವೆ. ವೇದಗಳಲ್ಲಿ ಇದನ್ನು ವೇದಭಾಷೆ ಗಳಲ್ಲಿ ಬರೆದಿಟ್ಟಿದ್ದಾರೆ. ಅದು ಸಾಮಾನ್ಯ ಜನರಿಗೆ ಅರ್ಥವಾಗದೆ ಇರುವುದರಿಂದ, ಅವರಿಗೆ ಅರ್ಥಮಾಡಿಸುವ ಉದ್ದೇಶದಿಂದ ಪುರಾಣಗಳಲ್ಲಿ ಇದನ್ನು
ಬರೆದರು. ಆ ಪುರಾಣಗಳಲ್ಲಿ ದೇವರುಗಳ ಸೃಷ್ಟಿಯ ವಿಷಯ ದಲ್ಲಿ, ಶಿಲ್ಪಶಾಸಗಳ ಪ್ರಕಾರ ಒಂದೊಂದು ತತ್ವಕ್ಕೆ ಒಂದೊಂದು ದೇವರುಗಳ ರೂಪ ವನ್ನು ಕೊಟ್ಟರು. ಆ ರೂಪದಲ್ಲಿ ಗಣಪತಿಯೂ ಒಂದು. ‘ಗಣಪತಿ’ ಎಂದರೆ ಗಣಗಳ ಪತಿ. ಗಣ ಎಂದರೆ ಪರಮಾಣು. ನಮ್ಮ ದೇಹವು ಹಲವಾರು ಪರಮಾಣುಗಳು ಸೇರಿ ಆಗಿದೆ.

ಈ ಪರಮಾಣುಗಳಲ್ಲೂ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳಿವೆ. ಅವೆರಡರ ಅಯಸ್ಕಾಂತೀಯ ವಲಯದಲ್ಲಿ ನಮ್ಮ ದೇಹದಲ್ಲಿ ಉಷ್ಣವು ಉತ್ಪತ್ತಿ ಯಾಗುವುದು. ನಮ್ಮ ಅಧ್ಯಾತ್ಮದಲ್ಲಿ ಹೇಳುವುದಾದರೆ, ಯೋಗಾಭ್ಯಾಸಕ್ಕೆ ಕೂತಂಥ ಒಬ್ಬ ವ್ಯಕ್ತಿಗೆ ಮೂಲಾಧಾರದಲ್ಲಿ ಗಣಪತಿ ಇದ್ದಾನೆ ಎಂಬುದನ್ನು ಮಂತ್ರಗಳು ಹೇಳುತ್ತವೆ. ಮೂಲಾಧಾರದಲ್ಲಿ ಎಂದರೆ ಅನ್ನಮಯ ಕೋಶದಲ್ಲಿ ಗಣಪತಿ ಇದ್ದಾನೆ. ಅನ್ನಮಯ ಕೋಶ ಎಂದರೆ ಆಹಾರ ರೂಪದಲ್ಲಿ ತಿನ್ನುವಂಥ ಶಕ್ತಿ ಇರುವುದು ಗಣಪತಿಗೆ. ಹಸಿವು ಪ್ರಾರಂಭವಾಗಿ ಆಹಾರವನ್ನು ತಿಂದ ನಂತರ ಜೀರ್ಣವಾಗಿ ಅಲ್ಲಿರುವಂಥ ಎಲ್ಲಾ ಅಣುಗಳಿಗೂ ಶಕ್ತಿ ಬರುತ್ತದೆ.ಅದರಿಂದ ನಮ್ಮ ಆಯಸ್ಸು ಉಳಿಯುತ್ತದೆ ಮತ್ತು ವೃದ್ಧಿಯಾಗುತ್ತದೆ. ಇದು ಗಣಪತಿಯ ಕೆಲಸ. ಅದಕ್ಕೆ ಗಣಪತಿ ಮಂಡಲಕ್ಕೆ ೨ ತ್ರಿಕೋನ ವನ್ನು ಕೊಟ್ಟಿದ್ದಾರೆ. ಒಂದು ತ್ರಿಕೋನವು ‘ಸತ್ವ-ರಜೋ -ತಮೋ’ ಗುಣಗಳನ್ನು (ಬ್ರಹ್ಮ-ವಿಷ್ಣು-ಮಹೇಶ್ವರ) ಪ್ರತಿನಿಧಿಸುತ್ತದೆ.

ಇನ್ನೊಂದು ತ್ರಿಕೋನವು ಸಹ ‘ಸತ್ವ-ರಜೋ-ತಮೋ’ ಗುಣಗಳನ್ನು (ಸರಸ್ವತಿ-ಲಕ್ಷ್ಮಿ-ಕಾಳಿ) ಪ್ರತಿನಿಧಿಸುತ್ತದೆ. ಅಂದರೆ ಒಂದು ಪ್ರಕೃತಿಯಿಂದ, ಇನ್ನೊಂದು ಪುರುಷನಿಂದ ಬಂದಿರುವಂಥದ್ದು. ಇವೆರಡರ ಸಂಯೋಜನೆಯಿಂದ ಒಂದು ಪರಮಾಣು ಆಗುತ್ತದೆ. ಅದಕ್ಕೆ ‘ಅವ್ಯಕ್ತಃ ಮಾತಃ ಮಾತೋ ಅಹಂಕಾರಃ, ಅಹಂಕಾರಾನ್ ಪಂಚತಂತ್ರಾತ್ಮಾನಿ ಪಂಚಭೂತಾನಿ ಅಖಿಲಃ ಜಗತ್’ ಎಂದು ಹೇಳುವ ಉಪನಿಷತ್ ವಾಕ್ಯದ ಅರ್ಥವೂ ಇದಾಗಿದೆ. ಅವ್ಯಕ್ತವಾಗಿರತಕ್ಕಂಥ ಪರಬ್ರಹ್ಮ ಚೈತನ್ಯವು ಯಾವಾಗ ಅದು ಜೀವಧಾರಣೆ ಮಾಡಬೇಕು ಎಂದಾಗ ತನ್ನನ್ನು ತಾನೇ ವಿಭಜಿಸಿಕೊಂಡು ಪ್ರಕೃತಿ-ಪುರುಷರಾಗಿ ಮೇಲ್ಮೈ ಹೊಂದುತ್ತವೆ. ಆ ಪ್ರಕೃತಿ-ಪುರುಷರಲ್ಲಿ ಈ ಪ್ರಕೃತಿದತ್ತವಾಗಿ ಬಂದಿರತಕ್ಕಂಥ ಸರಸ್ವತಿ-ಲಕ್ಷ್ಮಿ-ಕಾಳಿ ತಮಗೆ ಬೇಕಾದ ಜ್ಞಾನಶಕ್ತಿ-ಇಚ್ಛಾಶಕ್ತಿ-ಕ್ರಿಯಾಶಕ್ತಿಯನ್ನು ಕೊಡುವಂಥ ಬ್ರಹ್ಮ-ವಿಷ್ಣು-ಮಹೇಶ್ವರರು ಇವೆರಡರ ಸಂಯೋಜನೆಯಿಂದ ದೇಹ ಉತ್ಪತ್ತಿಯಾಗಿರುತ್ತದೆ.

ಗಣಪತಿಯ ಬಗ್ಗೆ ಇರುವಂಥ ಮೂಲತತ್ವ ಇದೇ. ಗಣಪತಿಯ ಆರಾಧನೆ ಸತ್ಯ. ಇದರ ಹಿಂದಿನ ಉದ್ದೇಶ ಸ್ವಾತಂತ್ರ್ಯ ಕಾಲದಲ್ಲಿ ಸಾರ್ವಜನಿಕವಾಗಿ ಸಂಯೋಜನೆ ಮಾಡಲಿಕ್ಕೆ; ಈ ಗಣಪತಿ ಹಬ್ಬದ ಆಚರಣೆ ಮಾಡುವ ಮುಖಾಂತರ ಎಲ್ಲರೂ ಒಟ್ಟಾಗಿ ಸ್ವಾತಂತ್ರ್ಯದ ಬಗ್ಗೆ ಯೋಚನೆ ಮಾಡಲಿ ಎಂಬು ದಾಗಿ ಮಾಡಿದ್ದಾರೆ ಎಂಬುದು ಸತ್ಯ. ಆದರೆ ಇದಕ್ಕಿಂತಲೂ ಮೊದಲು, ಸನಾತನ ಕಾಲದಲ್ಲೂ ಗಣಪತಿಯ ಆರಾಧನೆ ಇದ್ದೇ ಇತ್ತು. ಅದಕ್ಕೋಸ್ಕರವೇ ಗಣಪತಿಯೇ ಮೂಲಾಧಾರ ಮತ್ತು ನೈವೇದ್ಯವೇ ಅವನಿಗೆ ಬಹಳ ಮುಖ್ಯ ಎಂದು ಯಾಕೆ ಹೇಳಿರುತ್ತಾರೆ ಎಂದರೆ, ನಮ್ಮ ಅನ್ನಮಯ ಕೋಶದಲ್ಲಿ ನಾವೆಲ್ಲರೂ ಇದ್ದೇವೆ. ನಾವು ಊಟ ಮಾಡುವಂಥದ್ದು ಒಂದು ನಿಮಿಷ ಹೆಚ್ಚು ಕಮ್ಮಿಯಾದರೂ ದೇಹ ತಡೆದುಕೊಳ್ಳುವುದಿಲ್ಲ. ನೀವು ಮೂಲಾಧಾರ ದಲ್ಲಿ ಯೋಗಾಭ್ಯಾಸಕ್ಕೆ ಹೋಗಿ ಈ ಅನ್ನಮಯ ಕೋಶದಲ್ಲಿ ರುವ ಗಣಪತಿಯನ್ನು ಜಯಿಸಿದರೆ ಅಥವಾ ಒಲಿಸಿಕೊಂಡರೆ, ಆಹಾರ ಇಲ್ಲದೆ ಬದುಕು ವಂಥ ಶಕ್ತಿ ಪ್ರಾಪ್ತವಾಗುತ್ತದೆ.

ಯಾಕೆಂದರೆ ಗಾಳಿಯಲ್ಲಿಯೂ ಶಕ್ತಿ ಇದೆ, ಕುಡಿಯುವ ನೀರಿನಲ್ಲಿಯೂ ಶಕ್ತಿ ಇದೆ. ಪ್ರಪಂಚದಲ್ಲಿ ಶಕ್ತಿ ಇಲ್ಲದೆ ಇರತಕ್ಕಂಥ ಯಾವುದೇ ವಸ್ತುವೂ ಇಲ್ಲ. ಶಂಕರಾಚಾರ್ಯರು ಹೇಳಿರುವ ‘ಸರ್ವಂ ಖಲ್ವಿದಂ ಬ್ರಹ್ಮ’ ಎಂಬುದು ಅದ್ವೈತ ಸಿದ್ಧಾಂತ. ಈ ಸಿದ್ಧಾಂತ ಏನು ಹೇಳುತ್ತದೆ ಎಂದರೆ, ಇಡೀ ಪ್ರಪಂಚವೇ ಬ್ರಹ್ಮ ಮಯ, ಎಲ್ಲಾ ವಸ್ತುಗಳಿಗೂ ಶಕ್ತಿ ಇದೆ. ಮನಸ್ಸನ್ನು ಸೂಕ್ಷ್ಮವಾಗಿಸಿಕೊಂಡಲ್ಲಿ ಮತ್ತು ದೇಹವನ್ನು ಸೂಕ್ಷ್ಮವಾಗಿಸಿಕೊಂಡಂತೆಲ್ಲ ಭೌತಿಕ ಆಹಾರವನ್ನು ಬಿಟ್ಟು ಕೇವಲ ನೀರಿನಿಂದ ಬದುಕಲು ಸಾಧ್ಯ. ನೀರನ್ನು ಸಹ ಬಿಟ್ಟು ಕೇವಲ ಉಸಿರಾಟದಿಂದ ಬದುಕಲು ಸಾಧ್ಯ. ಎಲ್ಲಾ ವಸ್ತುಗಳಲ್ಲಿ ಯೂ ಚೈತನ್ಯವಿದೆ. ಅದೇ ಅನ್ನಮಯ ಕೋಶ. ಅನ್ನಮಯ ಕೋಶಕ್ಕೆ ಹೋದ ಮರುಗಳಿಗೆಯಲ್ಲಿ, ಅದನ್ನು ಯೋಗಾಭ್ಯಾಸದಿಂದ ಗಳಿಸಿಕೊಂಡ ಮರುಗಳಿಗೆಯಲ್ಲಿಮನುಷ್ಯ ಹೋಗುವಂಥದ್ದು ಮನೋಮಯ ಕೋಶಕ್ಕೆ.

ಇಡೀ ನಮ್ಮ ಜೀವನವನ್ನು ನಡೆಸುತ್ತಿರುವುದು, ನಮ್ಮ ಎಲ್ಲಾ ಏಳುಬೀಳುಗಳು ಉಂಟಾಗುತ್ತಿರುವುದು ಮನಸ್ಸಿನ ಪ್ರಾಬಲ್ಯದಿಂದ. ಈ ಮನಸ್ಸು ದೇಹಕ್ಕೆ ಸಂಪರ್ಕವಾಗಿದೆ. ದೇಹವನ್ನು ನಡೆಸುವಂಥವು ಯಾವುವೆಂದರೆ ಸತ್ವ-ರಜೋ-ತಮೋ ಗುಣಗಳು. ಅಂದರೆ ಸರಸ್ವತಿ-ಲಕ್ಷ್ಮಿ-ಕಾಳಿ ಈ ಮೂರು ಗುಣಗಳು
ನಮ್ಮಲ್ಲಿ ೨೪ ಗಂಟೆಗಳಲ್ಲೂ ಸಕ್ರಿಯವಾಗಿರುತ್ತವೆ. ದೊಡ್ಡದಾಗಿ ವಿಭಾಗ ಮಾಡಿದಾಗ, ೮:೦೦ ಗಂಟೆ ಸತ್ವಗುಣ, ೮:೦೦ ಗಂಟೆ ರಜೋಗುಣ, ೮:೦೦ ಗಂಟೆ ತಮೋಗುಣಗಳು. ಅದಕ್ಕೇ ಬ್ರಾಹ್ಮೀ ಮುಹೂರ್ತದಲ್ಲಿ ಮನುಷ್ಯರು ಓದಬೇಕು. ಯಾಕೆಂದರೆ, ಇಡೀ ಬ್ರಹ್ಮಾಂಡವು ಸತ್ವಗುಣದಲ್ಲಿ ಇರುತ್ತದೆ.

ಸರಸ್ವತಿಯು ಚೆನ್ನಾಗಿ ಒಲಿಯುತ್ತಾಳೆ. ಎಳೆಯ ಸೂರ್ಯ ಹುಟ್ಟುವಾಗ ಓದಿದರೆ ನಿಮಗೆ ಜ್ಞಾನವು ವೃದ್ಧಿಯಾಗುತ್ತದೆ. ಲಕ್ಷ್ಮಿ ತತ್ವ ಬಂದ ಕೂಡಲೇ
ದುಡಿಯಬೇಕು ಎಂಬ ಪ್ರತೀತಿ ಇದೆ. ತಮೋಗುಣ, ಅಂದರೆ ಸೂರ್ಯ ಮುಳುಗುವ ಹೊತ್ತಿಗೆ ಮನುಷ್ಯನು ಭೋಗಪಡು ವುದಕ್ಕೆ ಹೇಳಿದ್ದಾರೆ. ಇವೆಲ್ಲವೂ ಶಾಸಾಧಾರವಾಗಿರುವಂಥದ್ದು, ನಾನು ಹೇಳುತ್ತಿರುವುದಲ್ಲ. ಎಲ್ಲವುಗಳಿಗೂ ಶಾಸಗಳನ್ನು ಹೇಳಿ, ‘ಈ ತರಹ ಜೀವನವನ್ನು ಸಾಗಿಸು’ ಎಂಬುದಾಗಿ ಹೇಳಿದ್ದಾರೆ. ಬಹುಶಃ ಗಣಪತಿಯ ಬಗ್ಗೆ ಹೇಳಿರುವ ಯಾರೇ ಆಗಲಿ ಇದನ್ನು ದಯಮಾಡಿ ತಿಳಿದುಕೊಳ್ಳಿ. ಯಾಕೆಂದರೆ ಒಂದು ಸ್ಥಾನದಲ್ಲಿ ನಾವು ಇದ್ದಾಗ, ನಾವು ಹೇಳಿದ್ದಕ್ಕೆ ಜನ ಒಪ್ಪುತ್ತಾರೆ. ನಮಗೆ ಮತ್ತು ನಮ್ಮ ಮಾತಿಗೆ ಗೌರವ ಇದೆ ಎಂದು ಸಮಾಜದಲ್ಲಿದ್ದಾಗ ಬಹಳ ಎಚ್ಚರಿಕೆಯಿಂದ ಜನರಿಗೆ ವಿಷಯವನ್ನು ತಿಳಿಸಬೇಕು.

ಸಮಾಜ ದಲ್ಲಿ ಇರತಕ್ಕಂಥ ಇರಬಹುದಾದಂಥ ನಂಬಿಕೆಯನ್ನು ಒಂದು ಮಾತಿನಿಂದ ಹಾಳುಮಾಡಿದರೆ, ಆ ಪಾಪ ನಮಗೆ ಸದಾ ಇರುತ್ತದೆ. ಅದನ್ನು ಅವರು ಅರ್ಥಮಾಡಿಕೊಂಡು, ಗಣಪತಿಯ ಬಗ್ಗೆ ಹೇಳಿರತಕ್ಕಂಥ ಈ ವಿಚಾರಧಾರೆಗಳನ್ನು ಬದಲಿಸಿಕೊಳ್ಳಬೇಕಾಗಿ ಅವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.
ಬಹುಶಃ ಶಿವನ ತತ್ವವನ್ನು ಸಹ ಅವರು ಸರಿಯಾಗಿ ತಿಳಿದುಕೊಂಡಿಲ್ಲ ಎನಿಸುತ್ತದೆ. ಶಿವ ಎಂದರೆ, ಹಿಂದೂ ಸನಾತನ ಧರ್ಮ ದಲ್ಲಿ ಇರತಕ್ಕಂಥ ಎಲ್ಲಾ ದೇವರುಗಳ, ಅಂದರೆ ಪ್ರಕೃತಿ ಮತ್ತು ಪುರುಷರ ಆರಾಧನೆ. ಶಿವ ಎಂದರೆ ಲಿಂಗ, ಪುರುಷತತ್ವದ ಸಂಕೇತ. ಅದಕ್ಕೇ ಸೋಮಸೂತ್ರದಲ್ಲಿ ಲಿಂಗವನ್ನು ಕೂರಿಸಿರುತ್ತಾರೆ.

ಸೋಮಸೂತ್ರ ಎಂದರೆ ಪ್ರಕೃತಿಯ ಸಂಕೇತ. ಎರಡರ ಆರಾಧನೆಯೇ ಶಿವ. ಶಿವನಿಗೆ ಸ್ಮಶಾನವಾಸಿ ಎನ್ನುತ್ತಾರೆ. ನಮ್ಮ ಈ ಪ್ರಪಂಚವೇ ಒಂದು ಸ್ಮಶಾನ. ನಾವು ಮನುಷ್ಯರನ್ನು ಎಲ್ಲಿ ಸುಡುತ್ತೇವೆ ಅಥವಾ ಹುಗಿಯುತ್ತೇವೆ ಅದೇ ಸ್ಮಶಾನ ಎಂದು ತಿಳಿದುಕೊಂಡಿದ್ದೇವೆ. ಆದರೆ ಅದು ಹಾಗಲ್ಲ. ನೂರಾರು
ಜೀವಿಗಳು, ಕ್ರಿಮಿ-ಕೀಟಗಳು ಗಾಳಿಯಲ್ಲಿ ಸಾಯುತ್ತಿರುತ್ತವೆ, ಇದೇ ಸ್ಮಶಾನ. ಇಲ್ಲೆಲ್ಲಾ ಶಿವನ ತತ್ವ ಅಡಗಿದೆ. ಅದಕ್ಕೋಸ್ಕರವೇಶಿವನನ್ನು ಸ್ಮಶಾನವಾಸಿ ಎಂದರು. ಈ ಆಧ್ಯಾತ್ಮಿಕ ಚಿಂತನೆಯ ಮೂಲಸ್ವರೂಪಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಏಕೆಂದರೆ ಎಲ್ಲ ವೇದಮಂತ್ರಗಳನ್ನೂ ಸಂಸ್ಕೃತದಲ್ಲಿ ಬರೆದಿಟ್ಟಿದ್ದಾರೆ. ಯಾಕೆಂದರೆ, ಸಂಸ್ಕರಿಸಲ್ಪಟ್ಟ ಭಾಷೆ ಏನಾದರೂ ಒಂದಿದೆ ಎಂದರೆ ಅದು ಸಂಸ್ಕೃತ. ಉಳಿದ ಯಾವುದೇ ಭಾಷೆಯು ಸಹ ಸಂಸ್ಕಾರ ಆಗಲಿ. ಈಗ ಚಿನ್ನ ಮಣ್ಣಿನಲ್ಲಿ ಇದೆ.

ಮಣ್ಣಿನಿಂದ ಬೇರ್ಪಡಿಸಿ ಶುದ್ಧ ಚಿನ್ನವನ್ನಾಗಿ ಹೇಗೆ ನಾವದನ್ನು ಪಡೆದುಕೊಳ್ಳುತ್ತೇವೆಯೋ, ಅದೇ ರೀತಿ ಭಾಷೆಯಲ್ಲಿಯೂ ಎರಡು ಅರ್ಥಗಳು ಬರುವಂಥ ಒಂದಷ್ಟು ಪದ ಗಳನ್ನು ಬೇರ್ಪಡಿಸಿ, ಅಪಾರ್ಥ ಬರದಿದ್ದಂತೆ ಸಂಸ್ಕರಿಸಿದ ಒಂದು ಭಾಷೆ ಇದ್ದಲ್ಲಿ, ಅದು ಸಂಸ್ಕರಿಸಲ್ಪಟ್ಟ ಸಂಸ್ಕೃತ ಮಾತ್ರ. ಹಾಗೆ, ‘ಓಂ ಗಂ ಗಣಪತಯೇ ನಮಃ’ ಎಂಬುದನ್ನು ಪರಿಗಣಿಸಿದಾಗ, ‘ಗ’ ಎಂದರೆ ಸಂಸ್ಕೃತಲ್ಲಿ ಅರ್ಥ- ಕತ್ತಲೆ, ಅಜ್ಞಾನ, ಮೌಢ್ಯ ಎಂದು. ಅದಕ್ಕೆ ಸೊನ್ನೆಯನ್ನು ಸೇರಿಸಿ ಓಂಕಾರವಾದರೆ ಪವಿತ್ರ ವಾಗುತ್ತದೆ, ಅಜ್ಞಾನ ಹೋಗಿ ಜ್ಞಾನ ಉಂಟಾಗುತ್ತದೆ.

ಉದಾಹರಣೆಗೆ, ‘ರಸ್ತೆ’ ಎನ್ನುವಂಥದ್ದು ಜ್ಞಾನವಾದರೆ, ಅದಕ್ಕೆ ಇರುವ ರೂಢಿಪದ ‘ಏನಪ್ಪಾ ರಸ್ತೆ-ಗಿಸ್ತೆ ಅಂತ ಹೇಳ್ತೀಯಾ, ದೇವರು- ಗೀವರು ಅಂತೀಯಾ’ ಅಂದರೆ, ‘ಗ’ಕಾರವನ್ನು ಸೇರಿಸಿದಾಗ ಅದು ಪುನಃ ಅಜ್ಞಾನಕ್ಕೆ ಹೋಗುತ್ತದೆ. ಹೀಗೆ ನಮ್ಮ ಭಾಷೆಗಳದ್ದು ಒಂದು ರೀತಿಯ ಸೊಗಸಿದೆ. ಅದಕ್ಕೇ, ಎಲ್ಲಾ ದೇವರುಗಳಿಗೆ ಒಂದು ಸ್ವರೂಪವನ್ನು ಕೊಟ್ಟು ಶಿವನಿಗೆ ಲಿಂಗಸ್ವರೂಪವನ್ನು ಯಾಕೆ ಕೊಟ್ಟರು ಎಂದರೆ, ಬಸವಣ್ಣನವರು ಶಿವನನ್ನು ನೋಡಿದಾಗ ಈಶ್ವರನಾಗಿ ಕಂಡ, ಒಬ್ಬ ವಿಷ್ಣುವಿನ ಭಕ್ತ ಆ ಬದಿಯಲ್ಲಿ ಕುಳಿತು ನೋಡಿದಾಗ ಅವನಿಗೆ ವಿಷ್ಣುವಾಗಿ ಕಂಡ. ಇನ್ನೊಬ್ಬನಿಗೆ ಬುದ್ಧನಾಗಿ ಕಂಡ.

ಹಾಗೆಯೇ ಹಲವು ಧರ್ಮದ ವರಿಗೆ ಹಲವು ರೀತಿಯಲ್ಲಿ ಕಾಣಿಸಿಕೊಂಡಿದ್ದಾನೆ. ಕೊನೆಯದಾಗಿ ಪರಬ್ರಹ್ಮ ಚೈತನ್ಯ ಸ್ವರೂಪವು ಒಂದೇ. ಅದನ್ನು ಯಾವುದೇ ರೂಪದಲ್ಲಿ ಅವರವರ ಜ್ಞಾನಶಕ್ತಿಗೆ ಸರಿಯಾಗಿ, ಅವರವರ ಸಂಸ್ಕಾರದ ಶಕ್ತಿಗೆ ಸರಿಯಾಗಿ ನೋಡಿದಾಗ, ಅದು ಅವನಿಗೆ ಕಾಣುವಂಥ ರೂಪ. ಅದಕ್ಕೋಸ್ಕರ ಈಶ್ವರನಿಗೆ ಲಿಂಗಧಾರಣೆ ಯಾಗಿ ಲಿಂಗರೂಪವನ್ನು ಕೊಟ್ಟರು. ಹಾಗಾಗಿಯೇ ಶಿವನು ನಿರಾಕಾರ ಎಂದು ಹೇಳುವುದು. ನೀವು ಹೇಗೆ ನೋಡುತ್ತೀರೋ ಆ ರೀತಿಯ ರೂಪವನ್ನು ಕೊಡುತ್ತಾನೆ. ಪಾತ್ರೆಗೆ ಹಾಕಿದರೆ ಪಾತ್ರೆಯ ರೂಪ, ಲೋಟಕ್ಕೆ ಹಾಕಿದರೆ ಲೋಟದ ರೂಪ. ನೀರಿಗೆ ರೂಪ ಉಂಟಾ? ಕೇಳಿದರೆ ಅದಕ್ಕೆ ರೂಪವಿಲ್ಲ. ಬೆಂಕಿಗೆ ರೂಪ ಉಂಟಾ? ಕೇಳಿದರೆ ಅದಕ್ಕೂ ರೂಪವಿಲ್ಲ. ಗಾಳಿಗೆ ರೂಪ ಉಂಟಾ? ಇಲ್ಲ. ಆಕಾಶಕ್ಕೆ ರೂಪವಿಲ್ಲ.

ಈ ಪಂಚಭೂತಗಳನ್ನೇ ವರಾಹಮಿಹಿರರು ದೇವರು ಎಂದು ಕರೆದರು. ಬೀಜಾಕ್ಷರವನ್ನು ಹುಡುಕಿ, ಯಾವ ಯಾವ ಬೀಜಾಕ್ಷರಗಳನ್ನು ನಾವು ಜಪ ಮಾಡು ವಾಗ, ಧ್ಯಾನ ಮಾಡುವಾಗ ಯಾವ ಯಾವ ತತ್ವಗಳು ನಮಗೆ ಸಿಗುತ್ತವೆ, ಆ ತತ್ವಗಳ ತರಂಗಗಳ ಮೇಲೆ ‘ಓಂ ಗಂ ಗಣಪತಯೇ ನಮಃ’, ‘ಶಿವಾಯ ನಮಃ’, ‘ಓಂ ದುರ್ಗಾಯೈ ನಮಃ’ ಹೀಗೆ ಒಂದೊಂದು ಬೀಜಾಕ್ಷರಗಳ ಮುಖಾಂತರ ಸಂಸ್ಕರಿಸಿದ್ದಾರೆ. ಈ ತತ್ವಗಳನ್ನು ತಿಳಿದುಕೊಂಡು ದಯಮಾಡಿ ಜನರಿಗೆ ಮಾರ್ಗದರ್ಶನ ಮಾಡಬೇಕು. ಅದನ್ನು ಬಿಟ್ಟು ಯಾವುದೋ ಪಾನಿಪುರಿ ತಿಂದಾಗ ನಾಲಿಗೆಗೆ ರುಚಿ ಅನಿಸುತ್ತದೆ ಅಂದರೆ, ದೇಹಕ್ಕೆ ಅದರಿಂದ ವಾಯು ಆಗುತ್ತದೆ. ಈ ರೀತಿ ಸಮಾಜವನ್ನು ಕ್ಷಣಿಕವಾಗಿ ರಂಜಿಸುವುದಕ್ಕೋಸ್ಕರ ಬರೀ ಅಪದ್ಧವನ್ನು ನುಡಿಯುವುದನ್ನು, ಏನೋ ನಾನೊಬ್ಬ ದೊಡ್ಡ ದಾರ್ಶನಿಕ ಎಂದು ಹೇಳಿ ಸಮಾಜಕ್ಕೆ ತೋರಿಸುವ ಒಂದು ಭ್ರಮೆಯನ್ನು ಮೊಟ್ಟ ಮೊದಲನೆಯದಾಗಿ ಈ ಬುದ್ಧಿಜೀವಿಗಳು ಎನಿಸಿಕೊಂಡವರಾಗಲಿ, ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿ ಇರುವವರು ಎನಿಸಿ ಕೊಂಡವರಾಗಲಿ ಅಥವಾ ರಾಜಕೀಯದವರೇ ಆಗಲಿ ಬಿಟ್ಟು, ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗಬೇಕು.

ಧರ್ಮವನ್ನು ಪಾಲನೆ ಮಾಡುತ್ತೇನೆ, ನಾನು ಹೇಳುತ್ತಿರುವುದು ಮಾತ್ರ ಧರ್ಮ ಎಂಬಂಥ ಅಫೀಮನ್ನು ತಿನ್ನಬಾರದು. ನನ್ನ ಧರ್ಮ ಮಾತ್ರ ಸರಿ, ಉಳಿದ ಧರ್ಮವನ್ನೆಲ್ಲ ನಾನು ತ್ಯಜಿಸುತ್ತೇನೆ, ಅವರ‍್ಯಾರೂ ಸರಿ ಇಲ್ಲ ಎಂಬ ಧರ್ಮವಿರೋಧಿ ಅಫೀಮನ್ನು ತಿನ್ನಬಾರದು. ಸಮತೋಲನದಲ್ಲಿ ನಾವು ಇರಬೇಕು, ಸಮಾಜವನ್ನು ನಡೆಸಬೇಕು. ಅದಕ್ಕೆ ಮಾನವತಾ ಧರ್ಮ ಎಂದು ಹೇಳುತ್ತಾರೆ. ನನಗೆ ಯಾವುದೆಲ್ಲಾ ಆಗಬಾರದು ಎಂದು ಬಯಸುತ್ತೇವೆಯೋ, ಅದು ಇನ್ನೊಬ್ಬರಿಗೂ ಅಥವಾ ಇನ್ನೊಂದು ಜೀವಿಗೂ ಆಗಬಾರದು ಎಂಬ ಮನಸ್ಥಿತಿ ಇರಬೇಕು. ಅದುವೇ ಧರ್ಮ ಎಂಬ ಪದದ ಅರ್ಥ. ಧರ್ಮದಲ್ಲಿ ಯಾರು ಇರುತ್ತಾರೋ, ಅವರನ್ನು ಧರ್ಮವು ರಕ್ಷಣೆ ಮಾಡುತ್ತದೆ ಎಂಬ ವ್ಯಾಖ್ಯಾನವು ಇದೆ.

ಅದುವೇ- ‘ಧರ್ಮೋ ರಕ್ಷತಿ ರಕ್ಷಿತಃ’. ಜೀವನ ಎಂಬುವಂಥದ್ದು ಕನ್ನಡಿ ಇದ್ದ ಹಾಗೆ; ನಾವು ಅದಕ್ಕೆ ಏನು ತೋರಿಸುತ್ತೇವೋ ವಾಪಸು ಅದನ್ನೇ ಅದು ತೋರಿಸುತ್ತದೆ. ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ವ್ಯಾಖ್ಯಾನದಂತೆ, ಪರೋಪಕಾರದಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇರಬೇಕು. ಇದು ಕರ್ಮಸಿದ್ಧಾಂತ. ಇದನ್ನು ಎಲ್ಲರೂ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಈ ಧರ್ಮದ ಹೆಸರಿನಲ್ಲಿ ಆಗುತ್ತಿರುವ ಕ್ಷೋಭೆಗಳು, ಕೆಟ್ಟ ಕೆಲಸಗಳನ್ನು ನಿಲ್ಲಿಸಿ, ಪುರುಷಾರ್ಥ ಸಾಧನೆಯ ವ್ಯಕ್ತಿಯಾಗಿ ಅಭಿವೃದ್ಧಿ ಆಗಬೇಕು. ಈ ರೀತಿ ಬದುಕುವ ಕಡೆಗೆ ಹಿರಿಯರು ಮಾರ್ಗದರ್ಶನವನ್ನು
ಮಾಡಬೇಕು. ಇದರಿಂದ ಸಮಾಜಕ್ಕೆ ಹೆಚ್ಚೆಚ್ಚು ಪ್ರಯೋಜನ ಆಗಬೇಕು.

(ಲೇಖಕರು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ
ದೇಗುಲದ ಧರ್ಮದರ್ಶಿ ಮಂಡಳಿಯ ಸದಸ್ಯರು)