Saturday, 23rd November 2024

ಪದ್ಯ ರಚನೆಗೂ ಒಂದು ಆಯಪ್ ಬಂದರೆ ಒಳ್ಳೆಯದಿತ್ತೇ ?

ತಿಳಿರು ತೋರಣ

srivathsajoshi@yahoo.com

ಅರವಿಂದ ಸಿಗದಾಳು- ಹಾಗೆಲ್ಲ ಸುಲಭವಾಗಿ ಕೈಗೆ ಸಿಗದ ಆಳು- ಮೊನ್ನೆ ಶುಕ್ರವಾರ ವಾಟ್ಸ್ಯಾಪ್‌ನಲ್ಲಿ ಸಿಕ್ಕಿದ್ದರು! ಈ ಹಿಂದೆ ನಾನವ ರನ್ನು ಅಂಕಣದೊಳಕ್ಕೆ ಎಳೆದುತಂದದ್ದು ಕೋವಿಡ್ ಪೂರ್ವ ಕಾಲದಲ್ಲಿ, ‘ಹಬೆ ಪಾತ್ರೆಯಲ್ಲಿ ಬೆಂದ ತಿಂಡಿಯ ರುಚಿ ಮತ್ತು ಘಮ’ ಲೇಖನ ದಲ್ಲಿ, ಎರಡು-ಎರಡು-ಎರಡುಸಾವಿರ ದಿಪ್ಪತ್ತರಂದು, ಅವರ ಕೊಳಕ ಪ್ರಸಂಗವನ್ನು ಬಣ್ಣಿಸುತ್ತ.

ಆಗ ಕೊಟ್ಟಿದ್ದ ಅವರ ಕಿರುಪರಿಚಯ ಈಗಲೂ ಪ್ರಸ್ತುತವೇ: ಅವರೊಬ್ಬ ಟೆಕ್ಕೃಷಿಕ. ಹಿಂದೊಮ್ಮೆ ಬೆಂಗಳೂರಿನ ಕಾಂಕ್ರೀಟ್ ಜಂಗಲ್‌ನಲ್ಲಿ ಟೆಕ್ಕಿ ಆಗಿದ್ದವರು ಆ ವೃತ್ತಿ ತೊರೆದು ಈಗ ಕೆಲ ವರ್ಷಗಳಿಂದ ಮಲೆನಾಡಿನ ತನ್ನ ಊರು ‘ಸಿಗದಾಳು’ವಿನಲ್ಲಿ ಕೃಷಿಕರಾಗಿ ಖುಷಿಪಟ್ಟವರು. ಅಂದಹಾಗೆ ಈ ‘ಟೆಕ್ಕೃಷಿಕ’ ಅನ್ನೋದು ಈ ಕ್ಷಣದಲ್ಲಿ ನಾನೇ ಟಂಕಿಸಿದ ಪದ.

ಟೆಕ್ಕಿ + ಕೃಷಿಕ = ಟೆಕ್ಕೃಷಿಕ. ಜೀವನಮಾರ್ಗ ಕವಲೊಡೆದ ಸಂಧಿ. ಅದಕ್ಕೆ ಉದಾಹರಣೆ ಯಾಗಿರುವ ಪುಣ್ಯಾತ್ಮರ ಸಂಖ್ಯೆ ಹೆಚ್ಚುತ್ತಿರು ವುದು ಸಂತಸವೇ; ನನ್ನ ಪರಿಚಿತವಲಯ ದಲ್ಲಿಯೂ ಕೆಲವರಿರುವುದು ಮತ್ತಷ್ಟು ಅಭಿಮಾನವೇ. ಇರಲಿ, ಅರವಿಂದ ಸಿಗದಾಳು ತನ್ನ
ಪ್ರವೃತ್ತಿಯಾಗಿ ಅಷ್ಟಿಷ್ಟು ಅಕ್ಷರಕೃಷಿಯನ್ನೂ ನಡೆಸುತ್ತಾರೆ. ಅದಕ್ಕಿಂತ ಹೆಚ್ಚಾಗಿ ಯಕ್ಷಗಾನ ದಲ್ಲಿ ಆಸಕ್ತಿ ಇದೆ. ತಾಳಮದ್ದಳೆ ಕೂಟಗಳನ್ನು ಏರ್ಪಡಿಸುತ್ತಾರೆ, ತಾನೂ ಅರ್ಥಧಾರಿ ಯಾಗಿ ಭಾಗವಹಿಸುತ್ತಾರೆ. ಗಮಕವಾಚನ ವ್ಯಾಖ್ಯಾನ ಮಾಡುತ್ತಾರೆ. ಆರೋಗ್ಯಕರ ಹಾಸ್ಯ, ಕೀಟಲೆ, ಅಕ್ಷರದಾಟಗಳಲ್ಲಿ ಪರಿಣತಿ.

ಪ್ರಖರ ಪ್ರತ್ಯುತ್ಪನ್ನಮತಿ. ಅವರು ಮೊನ್ನೆ ವಾಟ್ಸ್ಯಾಪ್‌ನಲ್ಲಿ ಕಳುಹಿಸಿದ ಮೆಸೇಜು ಹೀಗಿದೆ: ‘ಪದ್ಯ ರಚನೆ ಮಾಡುವಾಗ ಎಲ್ಲ ಲಯಗಳನ್ನು
ನೆನಪಿಟ್ಟುಕೊಳ್ಳುವುದು ಹೇಗೆ!? ಛಂದಸ್ಸುಗಳ ನೆನಪಿಗೆ ಸಪರೇಟ್ -ಕಮ್ಮಿರೇಟ್ ಮಾತ್ರೆ ಏನಾದ್ರೂ ಇದೆಯಾ? ಎರಡೂ ಕೈಗಳನ್ನು
ಬಳಸಿ ನಾಲ್ಕು ಪಾದಗಳ ಅಂಬೆಗಾಲಿಕ್ಕುವಾಗ ಷಟ್ಪದಿಯ ಲಯಗಳೆಲ್ಲ ನೆನಪಾಗುವುದಿಲ್ಲ! ತ್ರಿಪದಿಯ ಎರಡನೆಯ ಸಾಲು ಮುಗಿದು ಮೂರನೆಯ ಸಾಲು ಕೆತ್ತುವಾಗ ಶಬ್ದಗಳು ಸಿಗದೆ ದಿನವೆಲ್ಲ ಒದ್ದಾಡುವಾಗ ಸಪ್ತಪದಿಯವಳು… ಕೈ ಕಾಲು(ಪಾದ!) ತೊಳೆಯಿರಿ, ಊಟಕ್ಕೇಳಿ ಅಂತಾಳೆ!

ಭಾಮಿನಿ ತಲೆಯ ಒಳಗೆ ಬರುವಾಗ ಕುಸುಮ ತಲೆಯ ಮೇಲಿಂದ ಬಿದ್ದುಹೋಗಿದ್ದೂ ಅರಿವಿಗೆ ಬರುವುದಿಲ್ಲ! ಎಲ್ಲ ನೆನಪಾಗುವಾಗ ವಾರ್ಧಕ್ಯ ಬಂದು ಅಷ್ಟೂ ಮರೆತೇಹೋಗುತ್ತೆ! ಹಾಗಾಗಿ, ಪದ್ಯ ರಚನೆಗೆ ಒಂದು ಆಪ್ ಬಂದರೆ ಹೇಗೆ!? ಹಲಸಿನಹಣ್ಣಿನ ಕಡುಬು ಅಂತ ಸಬ್ಜೆಕ್ಟ್ ಕೊಟ್ಟು… ಬೇಕಾದ ಶಬ್ದ, ಪ್ರಾಸಗಳನ್ನು ಫೀಡ್ ಮಾಡಿ, ನವರಸಗಳಲ್ಲಿ ಯಾವ ರಸ ಬೇಕು ಅಂತ ಆಯ್ಕೆ ಬಟನ್ ಒತ್ತಿ,
ಭೋಗ ಷಟ್ಪದಿಯಲ್ಲಿ ಹದಿನಾರು ಪದ್ಯಗಳು(ಹಲಸಿನ ಶಾಡೆಗಳಲ್ಲ, ಪದ್ಯಗಳು!) ಬೇಕು ಅಂತ ಹೇಳಿ ಎಂಟರ್ ಒತ್ತಿದ ತತ್‌ಕ್ಷಣ… ಸುತ್ತಿದ, ಬಾಡಿದ ಬಾಳೆಎಲೆಯಿಂದ ಬಿಸಿಬಿಸಿ ಕಡುಬು ತಟ್ಟೆಗೆ ಬಡಿಸಿದ ಹಾಗೆ, ಮೊಬೈಲ್‌ನಲ್ಲಿ ಹದಿನಾರು ಘಮಘಮ ಭೋಗ ಷಟ್ಪದಿಗಳು ಸಿದ್ಧಗೊಳ್ಳಬೇಕು! ಆಪ್ ಅಭಿವೃದ್ಧಿ ಮಾಡುವ ಸಾಫ್ಟ್ ವೇರ್ ಎಂಜಿನಿಯರ್ ಯಾರಾದರೂ ನಿಮಗೆ ಗೊತ್ತೇ?’ ಟಿಪಿಕಲ್ ಅರವಿಂದ ಸಿಗದಾಳ್ ಛಾಪಿನ ಮೆಸೇಜು ಅದು.

ಕ್ರಿಯೇಟಿವ್ ಯೋಚನಾಲಹರಿ, ರುಚಿಗೆ ತಕ್ಕಷ್ಟು ಪದವಿನೋದ, ತುಂಟತನದಂದಿಷ್ಟು ಪನ್-ಟತನ. ಕಣ್ಣಿಗೆ ಕಟ್ಟುವಂತೆ, ಅಲ್ಲಲ್ಲ… ನಾಲಗೆ ಒದ್ದೆಯಾಗುವಂತೆ ಉಪಮೆಗಳು. ಒಟ್ಟಿನಲ್ಲಿ ನಾನ್ಸೆ ಎಂದು ಕಡೆಗಣಿಸಲಾಗದ ಸರಕು. ಸಮಸ್ಯೆಯೇನೆಂದರೆ ಅವರ ಮೆಸೇಜು ಬಂದದ್ದು ಶುಕ್ರವಾರ. ಅದು ನನ್ನ ಅಂಕಣ ಗರ್ಭಧಾರಣೆ-ಹೆರಿಗೆನೋವು-ಬಾಣಂತನದ ಸಮಯ. ಅಜ್ಜಿಗೆ ಅರಿವೆ ಚಿಂತೆ ಎಂಬಂತೆ ನಾನಿಲ್ಲಿ ಈವಾರ ಅಂಕಣದಲ್ಲಿ ಏನು ಬರೆಯಲಿ, ಸಬ್ಜೆಕ್ಟ್ ಮತ್ತೊಂದಿಷ್ಟು ಗುಂಡುಬಿಂದು(ಬುಲೆಟ್ ಪಾಯಿಂಟ್ಸ್) ಫೀಡ್ ಮಾಡಿ ಪದ ಸಂಖ್ಯೆಮಿತಿ ತಿಳಿಸಿ ಎಂಟರ್ ಒತ್ತಿದಾಕ್ಷಣ -ಷ್ ಅಂಕಣಬರಹ ಬಂದುಬೀಳುವಂಥದೊಂದು ಆಪ್ ಇರಬಾರದಿತ್ತೇ ಅಂತ ಯೋಚಿಸು ತ್ತಿದ್ದರೆ… ಇವರಿಗೆ ಪದ್ಯರಚನೆಗೆ ಆಪ್ ಬೇಕಂತೆ!

ಬಿಸಿಬಿಸಿ ಹಲಸಿನ ಕಡಬು ತಟ್ಟೆಗೆ ಬಡಿಸಿದ ಹಾಗೆ ಎಂದು ಹೋಲಿಕೆ ಬೇರೆ! ಆ ಚಿತ್ರಣದಿಂದಲೇ ಬಾಯಿಯಲ್ಲಿ ಜೊಲ್ಲು ಸುರಿಯುವಂತೆ ಮಾಡಿದ್ದಕ್ಕೆ ಅವರಿಗೆ ಲೈಟಾಗಿ ಶಾಪ ಕೊಡಲಿಕ್ಕೂ ಒಂದು ಆಪ್ ಇದ್ದಿದ್ದರೂ ಒಳ್ಳೆಯದಿತ್ತೆಂದು ಒಮ್ಮೆ ಅನಿಸಿತು. ಆದರೂ ಸುಮ್ಮನಾದೆ. ಅವರ ಮೆಸೇಜಿಗೆ ತತ್‌ಕ್ಷಣ ಉತ್ತರಿಸಲಿಲ್ಲ. ಈ ವಾರದ ಅಂಕಣಬರಹವೇ ತಕ್ಕುದಾದ ಉತ್ತರ ಎಂದು ನಿರ್ಧರಿಸಿದೆ.

ಅರವಿಂದರ ಕಾಲ್ಪನಿಕ ಆಪ್ ಛಂದೋಬದ್ಧ ಪದ್ಯ ರಚಿಸುತ್ತದೆ ಅನ್ನೋದು ವೈಯಕ್ತಿಕವಾಗಿ ನನಗೆ ಹೆಚ್ಚು ಖುಷಿಯ ಸಂಗತಿ. ಏಕೆಂದರೆ ‘ಎಮ್ಮೆ ಉಚ್ಚೆ ಹೊಯ್ದಂತೆ ಇರುವ’ ಎಂದು ಹೇಳಿದರೆ ಕೆಲವರು ‘ನಖಶಿಖಾಂತ ಉರಿಯಬಹುದಾದರೂ, ಗದ್ಯವನ್ನೇ ಮನಬಂದಲ್ಲ ಲೈನ್-ಬ್ರೇಕ್ ಕೊಟ್ಟು ಒಂದರ ಕೆಳಗೊಂದು ಸಾಲಿನಲ್ಲಿ ಬರೆದದ್ದು’ ಎಂದು ಹೇಳಿದರೆ ಕೆಲವರು ಸಿಟ್ಟಾಗಬಹುದಾದರೂ, ನವ್ಯ ಭವ್ಯ ಎಂದು ಕರೆಸಿಕೊಳ್ಳುವ, ಓದುವವರಿಗಂತೂ ಬಿಡಿ, ಬಹಳಷ್ಟು ಸಂದರ್ಭಗಳಲ್ಲಿ ಬರೆದವರಿಗೇ ಅರ್ಥವಾಗದಂಥ ಮುಕ್ತಛಂದದ ಕವಿತೆ ಯೆಂದರೆ ನನಗೆ ಅಷ್ಟಕ್ಕಷ್ಟೇ.

ಹಾಗಂತ ನಾನು ಯಾವ ಕವಿ-ತೆಗಳನ್ನೂ ತೆಗಳಲಾರೆ. ಅರ್ಥವಾಗದಿರುವುದು ನನ್ನ ಲಿಮಿಟೇಷನ್ ಅಂತ ಸುಮ್ಮನಾಗುತ್ತೇನೆ. ನನಗೆ ಅಷ್ಟನ್ನೂ ಬರೆಯಲಿಕ್ಕೆ ಬರುವುದಿಲ್ಲವೆಂದ ಮೇಲೆ ಸುಮ್ಮನಿರುವುದೇ ಒಳ್ಳೆಯದು. ಛಂದೋಬದ್ಧ ಪದ್ಯವಾದರೆ ಹಾಗಲ್ಲ, ಅದು ನನಗೆ ತುಂಬ ಇಷ್ಟ. ಬರೆಯಲಿಕ್ಕೆ ಬರದಿದ್ದರೇನಂತೆ ಓದಿ ಮೆಚ್ಚುಗೆ ವ್ಯಕ್ತಪಡಿಸಲಿಕ್ಕೇನೂ ತೊಂದರೆಯಿಲ್ಲವಲ್ಲ. ಆದ್ದರಿಂದಲೇ ಛಂದೋಬದ್ಧ ಪದ್ಯ ಕಟ್ಟುವ ಸಮಕಾಲೀನ ಕವಿ-ಕವಯಿತ್ರಿಯರನೇಕರನ್ನು ನಾನು ಅಂಕಣದಲ್ಲಿ ಆಗೊಮ್ಮೆ ಈಗೊಮ್ಮೆ ಸಂದರ್ಭೋಚಿತವಾಗಿ ಉಖಿಸಿ ಗೌರವಿಸುತ್ತೇನೆ.

ತತ್ತ್ವಬೋಧನೆಯ ಸಾವಿರಕ್ಕೂ ಹೆಚ್ಚು ಭಾಮಿನಿ ಷಟ್ಪದಿಗಳನ್ನು ರಚಿಸಿರುವ ತ.ನಾ.ಶಿವಕುಮಾರ, ಭಾಮಿನಿ ಷಟ್ಪದಿ ರಚನೆಯಲ್ಲಿ
ಇದೀಗ ಸಾವಿರ ಸಂಖ್ಯೆ ತಲುಪಿ ಹೊಸ ವಿಕ್ರಮ ಸಾಧಿಸಿರುವ ಕಿಗ್ಗಾಲು ಗಿರೀಶ್, ಅಡುಗೆಮನೆ ಸ್ಟುಡಿಯೊದಲ್ಲಿ ಹೂವು-ಹಣ್ಣು-ತರಕಾರಿಗಳ ನವನವೀನ ವಿನ್ಯಾಸ ಕೊಟ್ಟು ಅದಕ್ಕೆ ತಕ್ಕಂತೆ ಛಂದೋಬದ್ಧ ಕವಿತೆಗಳನ್ನು ಅಟ್ಟು (ಅಡುಗೆ ಮಾಡಿ) ಉಣಬಡಿಸುವ ಮೋಹಿನಿ ದಾಮ್ಲೆ, ಪೌರಾಣಿಕ ಕಥಾನಕಗಳನ್ನು ಛಂದದ ಪದ್ಯಗಳಲ್ಲಿ ಚಿತ್ರಿಸಬಲ್ಲ ವಸುಮತಿ ರಾಮಚಂದ್ರ ಮತ್ತು ಅರ್ಚನಾ ಕೆಕ್ಕಾರು, ಕಾಲೇಜಿನ
ಪ್ರಾಂಶುಪಾಲರಾಗಿದ್ದು ಪಠ್ಯಬೋಧನೆಯ ವೃತ್ತಿಯ ಜೊತೆಯ ಛಂದೋಬದ್ಧ ಪದ್ಯ ಬರೆಯುವ ನಂಜುಂಡ ಭಟ್, ಗಣಿತ ಪ್ರಮೇಯ ಗಳನ್ನು ಸಿದ್ಧಾಂತಗಳನ್ನು ಷಟ್ಪದಿಗಳಲ್ಲಿ ಹೊಸೆಯುವ ವೃಕ್ಷವರ್ಧನ ಹೆಬ್ಬಾರ್, ಅಕ್ಷರಮಾಲೆಯನ್ನು ಛಂದದಿಂದ ಸಿಂಗರಿಸಬಲ್ಲ ಅನಂತ ತಾಮ್ಹನಕರ್, ನಮ್ಮೂರಿನ ಇನ್ನೊಬ್ಬ ಪ್ರತಿಭಾನ್ವಿತ ಹುಡುಗ ಸುಬ್ರಹ್ಮಣ್ಯ ಬರ್ವೆ, ಛಂದದ ಉಳಿ ಹಿಡಿದು ಪದ್ಯ ಕೆತ್ತುವುದನ್ನು ಈಗಷ್ಟೇ ಕಲಿತುಕೊಂಡಿರುವ ಧಾತ್ರೀ ಶ್ರೀಕಾಂತ್… ಮುಂತಾದವರೆಲ್ಲರ ಕಾವ್ಯಪ್ರತಿಭೆಯನ್ನು ನಾನು ವಿಶೇಷವಾಗಿ ಮೆಚ್ಚುವುದು ಇವರೆಲ್ಲ ಛಂದಸ್ಸಿನ ನಿಯಮ ಪಾಲಿಸಿ ಪದ್ಯ ರಚಿಸುತ್ತಾರೆಂಬ ಕಾರಣಕ್ಕೆ.

ಇಲ್ಲಿ ಸವಿತಾ ರವಿಶಂಕರ್ ಎಂಬ ಅಮೆರಿಕನ್ನಡಿತಿಯ ಹೆಸರನ್ನೂ ಪ್ರಸ್ತಾವಿಸಲೇಬೇಕು. ಹರಿದಾಸಸಾಹಿತ್ಯ ಕೋರ್ಸಿನ ಎಸೈಸ್
ಮೆಂಟ್‌ಗೆಂದು ಮೊನ್ನೆಯಷ್ಟೇ ಅವರು ಶ್ರವಣ-ಕೀರ್ತನ-ಸ್ಮರಣ-ಪಾದಸೇವನ ಮೊದಲಾದ ನವವಿಧ ಭಕ್ತಿಯ ಒಂಬತ್ತು ದೃಷ್ಟಾಂತ ಗಳನ್ನು ಒಂಬತ್ತು ಭಾಮಿನಿ ಷಟ್ಪದಿಗಳಲ್ಲಿ ಕಟ್ಟಿರುವ ರೀತಿ ಅಪ್ರತಿಮ, ಅಸಾಮಾನ್ಯ. ‘ಪದ್ಯ ರಚನೆಗೆ ಒಂದು ಆಪ್ ಬಂದರೆ ಹೇಗೆ!?’ ಅಂತ ಅರವಿಂದರ ಮೆಸೇಜ್ ಓದಿದೊಡನೆ ನನಗೆ ಈಎಲ್ಲ ಪ್ರತಿಭಾನ್ವಿತರು ನೆನಪಾದದ್ದು ಇವರೆಲ್ಲ ಒಂಥರದಲ್ಲಿ ಆ ತಥಾಕಥಿತ ಆಪ್‌ಅನ್ನು ಮೀರಿದವರಾದ್ದರಿಂದ.

ಏನೇ ಸಬ್ಜೆಕ್ಟ್ ಕೊಡಿ ಛಂದೋಬದ್ಧ ಪದ್ಯವನ್ನು ಥಟ್ಟಂತ ಬರೆಯಬಲ್ಲವರಾದ್ದರಿಂದ. ಆಪ್ ರಚಿಸಲಿಕ್ಕೆ ಯಾರಾದರೂ ಮುಂದೆ ಬರುವವರಿದ್ದರೆ ಈ ಕವಿಪ್ರತಿಭೆಗಳ ಮಿದುಳನ್ನು ಅಭ್ಯಸಿಸುವುದು ಬಹುಶಃ ಪ್ರಯೋಜನವಾಗಬಹುದು. ನಿಜವಾಗಿಯೂ ಅಂಥದೊಂದು ಆಪ್ ಅಭಿವೃದ್ಧಿಯಾಗಿ ಆಂಡ್ರಾಯ್ಡ್ ಮತ್ತು ಆಪಲ್ ಆವೃತ್ತಿಗಳೆರಡೂ ಬಿಡುಗಡೆಯಾಯ್ತು ಅಂತಿರಲಿ. ನಾನದನ್ನು ನನ್ನ ಐಫೋನ್‌ನಲ್ಲಿ
ಡೌನ್ಲೋಡ್ ಮಾಡಿ ಬಳಸುವೆನೇ ಎಂದು ಒಮ್ಮೆ ಯೋಚಿಸಿದೆ.

ಒಂದನೆಯದಾಗಿ ನಾನೊಬ್ಬ ಸ್ಮಾರ್ಟ್ ಫೋನ್ ಬಳಕೆದಾರನಾಗಿಯೂ -ನನ್ನು ದೂರವಾಣಿ ಕರೆಗಳಿಗೆ, ವಾಟ್ಸ್ಯಾಪ್ ಫೇಸ್‌ಬುಕ್‌ಗಳಿಗೆ, ಡ್ರೈವ್ ಮಾಡುವಾಗ ಕೆಲವೊಮ್ಮೆ ಗೂಗಲ್ ಮ್ಯಾಪ್‌ಗೆ ಮಾತ್ರ ಬಳಸುತ್ತೇನೆಯೇ ಹೊರತು ಒಟ್ಟಾರೆ ತರಹೇವಾರಿ ಆಪ್‌ಗಳ ಖಯಾಲಿ ನನಗಿಲ್ಲ. ಎರಡನೆಯದಾಗಿ, ಮುಕ್ತಛಂದದ್ದಂತೂ ಕೇಳೋದೇಬೇಡ, ಛಂದೋಬದ್ಧ ಕವಿತೆ ಕಟ್ಟೋಣವೆಂದು ನನಗೆ ಮೂಡ್
ಮೂಡು ವುದೂ ಅಮಾವಾಸ್ಯೆ-ಹುಣ್ಣಿಮೆ-ಸಂಕ್ರಮಣ ಮೂರೂ ಒಂದೇದಿನ ಬಂದರೆ ಮಾತ್ರ.

ಪನ್(ಪದವಿನೋದ) ಅಂತಾದ್ರೆ ಥಟ್ಟಂತ ಕಟ್ಟಬ. ‘ರವೀಂದ್ರರ ರಾಷ್ಟಗೀತೆಯಲ್ಲಿ ದ್ರಾವಿಡ-ಉತ್ಕಲ-ವಂಗ| ರವೆಉಂಡೆಯ ರಸಾಸ್ವಾದದಲ್ಲಿ ದ್ರಾಕ್ಷಿ-ಏಲಕ್ಕಿ-ಲವಂಗ’ ಎಂದು ಪದ್ಯದಂತೆ ತೋರುವ ಪನ್ ಹೊಸೆಯಬ. ಪನ್-ಗುಂ ಲಂಘಯತೇ ಗಿರಿಂ ಎಂದು
ಭಗವದ್ಗೀತೆ ಧ್ಯಾನಶ್ಲೋಕಗಳಲ್ಲೂ ಪನ್ ಹುಡುಕಬ. ಈಗೀಗ ಏಕಾಕ್ಷರ ಬಳಕೆಯ ಫ್ಯಾಷನ್ ಹೆಚ್ಚಿದೆ.

ದೊಡ್ಡಪ್ಪ-ದೊಡ್ಡಮ್ಮರನ್ನು ದೊ ಎಂದು ಕರೆಯುವುದು, ಬ್ರದರ್ ‘ಬ್ರೋ’ ಆಗಿರುವುದು… ‘ಅಂತ ಮೊನ್ನೆ ಒಂದು ವಾಟ್ಸ್ಯಾಪ್ ಗ್ರೂಪಲ್ಲಿ
ಚರ್ಚೆಯಾಗುತ್ತಿzಗ ಬ್ರೋ ಬಳಕೆ ಈಗಿನದಲ್ಲ ದ್ವಾಪರಯುಗದ ಇತ್ತು. ಮಾನಭಂಗದ ವೇಳೆ ದ್ರೌಪದಿಯು ಕೃಷ್ಣನನ್ನು ಕರೆದದ್ದು
‘ಬ್ರೋ’ಚೇವಾರೆವರುರಾ ಎಂದೇ!’ ಅಂತ ಸ್ಪಾಂಟೇನಿಯಸ್ಸಾಗಿ ಟೈಪಿಸಿದ್ದಂತೆ ಟೈಪಿಸಬ. ಪರಂತು ಪದ್ಯರಚನೆಯ ಕೋಶಗಳು ನನ್ನ ಮಿದುಳಿನಲ್ಲಿಲ್ಲ.

ಆದರೆ ಪದ್ಯರಚನೆಯ ನಿಜವಾದ ಶೋಕಿಯಿದ್ದವರಿಗೆ ಅರವಿಂದರ ಕಾಲ್ಪನಿಕ ಆಪ್ ಬಹಳವೇ ಉಪಯುಕ್ತವಾಗಬಹುದು. ವ್ಹಾಟ್ಸ್ ಆನ್
ಯುವರ್ ಮೈಂಡ್? ಎಂದು ಫೇಸ್ಬುಕ್ ಕೆಣಕಿದಾಕ್ಷಣ ಪದ್ಯರಚನೆ ಆಪ್‌ಗೊಂದಿಷ್ಟು ರಾ ಮೆಟೀರಿಯಲ್ ಒದಗಿಸೋದು. ಆಲೂಗಡ್ಡೆಗಳನ್ನು ಯಂತ್ರದ ಮೂಲಕ ಚಿನ್ನದ ಗಟ್ಟಿಗಳಾಗಿಸಬಲ್ಲ ರಾಹುಲ್ ಗಾಂಧಿಗಿಂತ ಫಾಸ್ಟಾಗಿ ಛಂದೋಬದ್ಧ ಪದ್ಯ ಸಿದ್ಧ! ‘ಹಲಗೆ ಬಳಪವ
ಪಿಡಿಯ ದೊಂದ| ಗ್ಗಳಿಕೆ ಪದವಿಟ್ಟಳುಪದೊಂದ| ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ| ಬಳಸಿ ಬರೆಯಲು ಸ್ಮಾರ್ಟುಫೋನಿನ| ವುಲುಹುಗೆಡದಗ್ಗಳಿಕೆಯೆಂಬೀ| ಬಲುಹು ಆಪನು ಬಳಸಿ ಪದ್ಯವ ರಚಿಪ ಕಿಂಕರಗೆ||’ ಎಂದು ಕುಮಾರವ್ಯಾಸನಂತೆ ಎದೆ ತಟ್ಟಿ ಹೇಳಲಿಕ್ಕಡ್ಡಿಯಿಲ್ಲ.

ಆದಿಪ್ರಾಸ ಸರಿಯಿದೆಯೇ, ಮಾತ್ರೆಗಳ ಲೆಕ್ಕ ಟ್ಯಾಲಿ ಆಗಿದೆಯೇ ಅಂತೆಲ್ಲ ತಲೆಬಿಸಿಯಿಲ್ಲ. ಅರವಿಂದರಿಗೆ ಈಗ ಆಗುವಂತೆ ತ್ರಿಪದಿಯ
ಎರಡನೆಯ ಸಾಲು ಮುಗಿದು ಮೂರನೆಯ ಸಾಲು ಕೆತ್ತುವಾಗ ಶಬ್ದಗಳು ಸಿಗದೆ ದಿನವೆಲ್ಲ ಒದ್ದಾಡುವಾಗ ಸಪ್ತಪದಿಯವಳು ‘ಪಾದ ತೊಳೆಯಿರಿ, ಊಟಕ್ಕೇಳಿ’ ಅಂತ ಉಪದ್ರವ ಕೊಡುವ ಸೀನ್ ಇಲ್ಲ. ಯಾರದಾದರೂ ಬರ್ತ್‌ಡೇಗೆ ಪದ್ಯರೂಪದಲ್ಲಿ ವಿಷ್ ಮಾಡಬೇಕಂತನಿಸಿತೋ ಸ್ಮಾರ್ಟ್ ಫೋನ್‌ನಲ್ಲಿ ಪದ್ಯರಚನೆ ಆಪ್ ಐಕಾನ್ ಒತ್ತಿ ಬರ್ತ್‌ಡೇ ಬಾಯ/ಗರ್ಲ್ ಹೆಸರನ್ನೂ ಬೇಕಿದ್ದರೆ ಟೈಪಿಸಿ ಎಂಟರ್ ಹೊಡೆದರಾಯಿತು ಛಂದೋಬದ್ಧ ಪದ್ಯ ಕ್ಷಣಾರ್ಧದಲ್ಲಿ ರೆಡಿ! ಮದುವೆಯಾದ ಹೊಸ ಜೋಡಿಯನ್ನು ಹರಸಲಿಕ್ಕೆ ಉಡುಗೊರೆ ಹಿಡಕೊಂಡು ಸರದಿಯ ಸಾಲಲ್ಲಿ ನಿಲ್ಲಬೇಕೆಂದಿಲ್ಲ, ಅದಕ್ಕಿಂತ ಮೊದಲೇ ಡೈನಿಂಗ್‌ಹಾಲ್‌ಗೆ ನುಗ್ಗಿ ಪ್ಲೇಟಲ್ಲಿ ಬಫೆ ಐಟಮ್ಸ್ ಪೇರಿಸಿ ಕೊಳ್ಳುತ್ತಿರುವಾಗಲೇ ಪದ್ಯರಚನೆಯ ಆಪ್ ಕ್ಲಿಕ್ಕಿಸಿ ಶೃಂಗಾರರಸ ಆಯ್ಕೆಯನ್ನು ತಪ್ಪದೇ ಆಯ್ದುಕೊಂಡು ಒಂದು ಛಂದೋಬದ್ಧ ಪದ್ಯ ಪಡೆದು ವಧೂವರರಿಗೆ ವಾಟ್ಸ್ಯಾಪಿಸಿದರಾಯ್ತು.

ಅವರೇನಾದರೂ ಪುರುಸೊತ್ತು ಸಿಕ್ಕಿ ಆ ಮೆಸೇಜನ್ನು ನೋಡಿದರೆ ‘ಆಹಾ! ನಮ್ಮ ಮದುವೆಗೆ ಬಂದಿದ್ದರೋ ಇಲ್ಲ ಗೊತ್ತಿಲ್ಲ ಆದರೆ ಎಷ್ಟು ಚಂದದ ಪದ್ಯ ರಚಿಸಿ ಹರಸಿದ್ದಾರೆ!’ ಎಂದು ನಿಮ್ಮ ಕವಿಪ್ರತಿಭೆಯನ್ನು ಮನಸಾರೆ ಕೊಂಡಾಡುವರು. ಅದೇವೇಳೆಗೆ, ಅಂದರೆ ಪದ್ಯರಚನೆಯ ಆಪ್‌ಅನ್ನು ಜನಸಾಮಾನ್ಯರು ವಿಪರೀತವಾಗಿ ಬಳಸತೊಡಗಿದಾಗ, ಏನೇನೆಲ್ಲ ವಿಕೋಪಗಳಾಗಬಹುದು ಎಂದು ಕಲ್ಪಿಸಿದರೆ ಭಯವಾಗುತ್ತದೆ. ‘ಪದ್ಯವಂತರಿಗಿದು ಕಾಲವಲ್ಲ’ ಎಂದು ಬಿ.ಆರ್.ಲಕ್ಷ್ಮಣರಾವ್ ಒಮ್ಮೆ ಬರೆದಿದ್ದರು.

ಪದ್ಯವಂತರಿಗಿದು ಕಾಲವಲ್ಲ| ಸದ್ಯೋಜಾತರಿಗೆ ಸುಭಿಕ್ಷ ಕಾಲ|| ಛಂದೋಬದ್ಧ ಕಾವ್ಯ ಎಂದೋ ಕಾಣೆಯಾಗಿ| ಇಂದೋ ಗದ್ಯವೇ ಪದ್ಯವಾದ ಕಾಲ| ಕೊಂಡಿಯಿಲ್ಲದ ಚೇಳಿನಂಥ ಹನಿಗವನಗಳು| ಧಂಡಿಧಂಡಿಯಾಗಿ ಪಿತಗುಡುವ ಕಾಲ| ಕುಂಡಿಯೂರಲು ವ್ಯವಧಾನವಿಲ್ಲದೆ ನಿಂತು| ಕೊಂಡೇ ಉಂಡೋಡುವ ಧಾವಂತ ಕಾಲ|| ಪರಂಪರೆ ಯಾರಿಗೂ ಬೇಕಿರದ ಹೊರೆಯಾಗಿ| ಹಿರಿಯರೆಲ್ಲ ಮರೆಗೆ ಸರಿದ ಕಾಲ| ಗಾಳಿಯ ಬೇರೂರಿ ಬೆಳೆವ ತುರುಸಿನ ಕಾಲ| ಗುರುವಿರದ ಗುರಿಯಿರದ ಅತಂತ್ರ ಕಾಲ||’ ಅಂತೆಲ್ಲ ಬರುವ ಅರ್ಥಗರ್ಭಿತ ಅಣಕವಾಡು.

‘ಇದರಲ್ಲಿನ ಕುಂಡಿಯೂರಲು ವ್ಯವಧಾನವಿಲ್ಲದೆ ನಿಂತು| ಕೊಂಡೇ ಉಂಡೋಡುವ ಧಾವಂತ ಕಾಲ’ ಸಾಲುಗಳೇ ಮೇಲಿನ ಪ್ಯಾರಗ್ರಾಫಲ್ಲಿ ನಾನು ಬಫೆಯೂಟದ ಮಧ್ಯೆಯೇ ಪದ್ಯರಚನೆ ಆಪ್ ಬಳಕೆಯ ಚಿತ್ರಣ ಉದಾಹರಿಸಲಿಕ್ಕೆ ಪ್ರೇರಣೆ. ಲಕ್ಷ್ಮಣರಾಯರು ಜರಿದದ್ದು ಮುಕ್ತಛಂದದ ಪದ್ಯಗಳ ಉಪಟಳವನ್ನು. ಆದರೆ ಪದ್ಯರಚನೆಯ ಆಪ್ ಬಳಕೆ ಹೆಚ್ಚಿದಂತೆಲ್ಲ ಛಂದೋಬದ್ಧ ಪದ್ಯಗಳ ಉಪಟಳವೂ ಅದಕ್ಕಿಂತ ಹೆಚ್ಚು ಹಿಂಸೆ ನೀಡಬಹುದೆಂದು ಅರವಿಂದರು ಬಹುಶಃ ಆಲೋಚಿಸಿಲ್ಲ.

ಇನ್ನೊಂದು ನೆನಪಾಗುವುದು ಖ್ಯಾತ ಲೇಖಕ ಜೋಗಿಯವರು ಹಾಯ್ ಬೆಂಗಳೂರ್! ಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣದ ಎಂದೋ ಕೇಳಿದ ‘ಒಂದು ಹಾಡು ಹಾಗೂ ಇಂದಿನ ಪಾಡು!’ ಲೇಖನ. ‘ಈ ಜಗತ್ತಿನಲ್ಲಿ ಕವಿತೆ ಬರೆಯುವಷ್ಟು ಸುಲಭದ ಮತ್ತು ಐಷಾರಾಮದ ಕೆಲಸ ಮತ್ತೊಂದಿಲ್ಲ ಎಂದು ಭಾವಿಸಿರುವ ತರುಣರ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ಷರ ಬಲ್ಲ ಪ್ರತಿಯೊಬ್ಬನೂ ಒಂದಲ್ಲಒಂದು ಕವನವನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಬರೆದವನೇ ಆಗಿರುತ್ತಾನೆ. ಹಾಗೆ ಬರೆದ ಒಂದೇ ಕವನವನ್ನಿಟ್ಟುಕೊಂಡು ತಾನು ಕವಿ ಎಂದು ಸಾಽಸುವ ಹುಮ್ಮಸ್ಸು ಆತನಿಗೆ ಬಂದುಬಿಟ್ಟರೆ ಪತ್ರಿಕೆಗಳ ಸಂಪಾದಕರನ್ನು ಕಾವ್ಯಸರಸ್ವತಿಯೇ ಕಾಪಾಡಬೇಕು…’ ಎಂದು ಆರಂಭವಾಗುವ
ಆ ಲೇಖನದಲ್ಲಿ ಮುಂದೆ ಅವರು ಕವಿತೆಯ ಮಾನ ಮತ್ತು ಪ್ರಾಣ ಎರಡೂ ಉಳಿಯಬೇಕಿದ್ದರೆ ಮುಂದಿನ ಇಪ್ಪತ್ತು ವರುಷ ಯಾರೂ ಕವಿತೆಗಳನ್ನು ಬರೆಯಬಾರದೆಂದೂ, ಬರೆದರೂ ಅವುಗಳನ್ನೂ ಪ್ರಕಟಿಸಬಾರದೆಂದೂ ಸರಕಾರ ಕಾನೂನು ಮಾಡಬೇಕಿದೆ.

ಎಪ್ಪತ್ತರ ದಶಕದ ತನಕ ಬಂದ ಕವಿತೆಗಳನ್ನು ನಮ್ಮ ಹಳೆಯ ಕಾವ್ಯಗಳನ್ನೂ ಮರುಮುದ್ರಿಸಿ ಓದಿಸುವ ಕೆಲಸ ಮೊದಲು ಶುರುವಾಗ ಬೇಕಿದೆ. ಹೊಸಕಾವ್ಯದ ಯಾವ ಗೀತೆಯನ್ನಾದರೂ ಹಾಡಲು ಸಾಧ್ಯವೇ? ಇವತ್ತೂ ಭಾವಗೀತೆಯೆಂದರೆ ಬೇಂದ್ರೆ, ಕುವೆಂಪು, ಕೆಎಸ್ನ, ಭಟ್ಟ, ಅಡಿಗ, ಪುತಿನ, ಕಣವಿ, ಮಾಸ್ತಿ, ಜಿಎಸ್ಸೆಸ್. ಅದರಾಚೆಗೀಚೆಗೆ ಬರೆದುದನ್ನು ಓದಲೂ ಸಲ್ಲ, ಹಾಡಲೂ ಸಲ್ಲ’ ಎಂದು ಆತಂಕ
ವ್ಯಕ್ತಪಡಿಸಿದ್ದಾರೆ.

ಅಷ್ಟಾಗಿ ಅದು ಇಪ್ಪತ್ತು ವರ್ಷಗಳ ಹಿಂದಿನ, ಸೋಷಿಯಲ್ ಮೀಡಿಯಾ ಅಷ್ಟೇನೂ ಪರಿಚಿತವಿಲ್ಲದಿದ್ದ ಕಾಲದ ಲೇಖನ. ಈಗಿನ ಫೇಸ್ಬುಕ್ ಕವಿಗಳ ಮತ್ತು ಕವಿತೆಗಳ ಉಪಟಳವೇ ಸಾಕ್ಸಾಕಾಗಿರುವಾಗ ಇನ್ನು ಪದ್ಯರಚನೆಗೊಂದು ಆಪೂ ಬಂದರೆ ದೇವರೇ ಗತಿ! ಆದರೂ, ಅರವಿಂದರ ಕನಸಿನ ಕಲ್ಪನೆಗೆ ತಣ್ಣೀರೆರಚಲಿಕ್ಕೆ ನನಗೆ ಮನಸ್ಸಿಲ್ಲ. ಪದ್ಯರಚನೆಯ ಆಪ್ ಸಹ ಬರಲಿ. ಅಲ್ಲಿಯವರೆಗೆ, ಹಲಸಿನಹಣ್ಣಿನ ಕಡುಬಿನ ಬಗ್ಗೆ ಘಮಘಮ ಭೋಗ ಷಟ್ಪದಿ- ಹದಿನಾರಲ್ಲದಿದ್ದರೆ ಕನಿಷ್ಠ ಎರಡನ್ನಾದರೂ ಅವರಿಗೆ ನಾನೇ ಬರೆದುಕೊಡೋಣವೆಂದು
ಯೋಚಿಸಿದ್ದೇನೆ.

ಅಲ್ಲದೇ ಲೇಖನದ ಆರಂಭದಲ್ಲಿ ‘ಬಾಡಿದ ಬಾಳೆಎಲೆಯಿಂದ ಬಿಸಿಬಿಸಿ ಕಡುಬು ತಟ್ಟೆಗೆ ಬಡಿಸಿದ ಹಾಗೆ…’ ಅಂತೆಲ್ಲ ಬಣ್ಣಿಸಿ, ನಿಮಗೂ
ಬಾಯಿಯಲ್ಲಿ ನೀರೂರುವಂತೆ ಮಾಡಿರುವಾಗ, ಉಪಸಂಹಾರದಲ್ಲೂ ಕಡುಬು ಬರಲೇಬೇಕು.

ಅರವಿಂದರಷ್ಟೇ ಅಲ್ಲ, ನೀವೂ ಅದರ ರುಚಿ ನೋಡಲೇಬೇಕು: ಅಕ್ಕಿ ಜೊತೆಗೆ ಹಲಸುಹಣ್ಣು ಚಿಕ್ಕದಾಗಿ ಕಡೆದುಕೊಂಡು ತಕ್ಕ ರುಚಿಗೆ ಉಪ್ಪು ಬೆರೆಸಿ ಹಿಟ್ಟು ಮಾಡಿರಿ| ಚೊಕ್ಕವಾದ ಬಾಳೆಲೆಯಲಿ ಪಕ್ಕ ಮೀರದಂತೆ ಮಡಚಿ ಉಕ್ಕರಿಸಿರಿ ಹಬೆಯ ಪಾತ್ರೆಯಲ್ಲಿ ಪೇರಿಸಿ||
ಬೆಂದಮೇಲೆ ಹಬೆಯ ಪಾತ್ರೆಯಿಂದ ತೆಗೆದ ಕಡಬುಗಳನು ಚಂದದಿಂದ ಎಲೆಯ ಬಿಡಿಸಿ ತಟ್ಟೆಗ್ಹಾಕಿರಿ|

ಒಂದು ತುತ್ತಿಗೊಂದು ಮಿಳ್ಳೆ ಯೆಂದ ರೀತಿಯಲ್ಲಿ ತುಪ್ಪ ದಿಂದ ಕೂಡಿ ಕಡಬುಗಳನು ಹೊಟ್ಟೆಗಿಳಿಸಿರಿ||