Wednesday, 18th September 2024

ಆಪ್‌ಗಳಿಗೆ ಕಡಿವಾಣ ಹಾಕಬೇಕಾಗಿದೆ

ಕಳಕಳಿ

ರಾಸುಮ ಭಟ್

ಪ್ರಸಕ್ತ ದಿನಮಾನದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಹಲವಾರು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಮನುಷ್ಯ ಎಲ್ಲಿ ಹೋಗಿ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲವೋ ಅಂಥ ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅನುಕೂಲಕರವಾಗಿದೆ. ಆದರೆ ಕೆಲವರು ಈ ತಂತ್ರಜ್ಞಾನವನ್ನು ತಮ್ಮ ಅಭಿವೃದ್ಧಿಯ ಬದಲಿಗೆ, ಸಮಾಜಕ್ಕೆ ಮಾರಕವಾಗುವ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ.

ಜಗತ್ತಿನ ಗಣನೀಯ ಸಂಖ್ಯೆಯ ಜನರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವುದು ಗೊತ್ತಿರುವ ಸಂಗತಿಯೇ. ಎಕ್ಸ್ (ಟ್ವಿಟರ್), ರೆಡಿಟ್, ಯೂಟ್ಯೂಬ್ ಮುಂತಾದ ಇಂಥ ಜನಪ್ರಿಯ ಮಾಧ್ಯಮಗಳನ್ನು ಬಳಸುವಾಗ, ಮಹಿಳೆಯರ ನಗ್ನಚಿತ್ರಗಳನ್ನು ಸೃಷ್ಟಿಸುವ ಟೂಲ್‌ಗಳ ಲಿಂಕ್‌ಗಳು ಜಾಹೀರಾತಿನ ರೂಪದಲ್ಲಿ ಪ್ರಕಟಗೊಂಡು ಕಣ್ಣಿಗೆ ರಾಚುತ್ತವೆ. ಇಂಥ ಲಿಂಕ್‌ಗಳನ್ನು ಸಮಾಜಘಾತುಕರು ಬಳಸಿಕೊಳ್ಳುತ್ತಾರೆ. ಕ್ಲಿಕ್ ಮಾಡುತ್ತಿದ್ದಂತೆ
ಆ ಲಿಂಕ್‌ಗಳು ಬಳಕೆದಾರರನ್ನು ‘ನ್ಯೂಡಿಫ್ ಆಪ್’ ಅಥವಾ ವೆಬ್‌ಸೈಟ್‌ಗಳಿಗೆ ಕರೆದುಕೊಂಡು ಹೋಗುತ್ತವೆ. ಅಲ್ಲಿ ಯಾವುದೇ ಮಹಿಳೆಯ ಫೋಟೋ ವನ್ನು ಅಪ್‌ಲೋಡ್ ಮಾಡಿದರೆ, ಆಕೆಯ ಮುಖಕ್ಕೆ ಲಭ್ಯವಿರುವ ಬೇರೊಂದು ನಗ್ನದೇಹವನ್ನು ಸಂಯೋಜಿಸಿ ನಗ್ನ ಫೋಟೋವನ್ನು ಕ್ಷಣಮಾತ್ರದಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡುವ ವ್ಯವಸ್ಥೆಯಿರುತ್ತದೆ.

ಕೃತಕ ಬುದ್ಧಿಮತ್ತೆಯ ತಂತ್ರಾಂಶದಿಂದಾಗಿ ಆ ಫೋಟೋ ನೈಜತೆಯಿಂದ ಕೂಡಿರುತ್ತದೆ ಹಾಗೂ ಆ ಫೋಟೋವನ್ನು ಮುಂದಿಟ್ಟುಕೊಂಡು ಮಹಿಳೆ ಯರನ್ನು ಬ್ಲ್ಯಾಕ್‌ಮೇಲ್ ಮಾಡಲಾಗುತ್ತದೆ, ಇಲ್ಲವೇ ಮೋಜು, ಪೋರ್ನೋಗ್ರಫಿ ಮುಂತಾದ ಸಮಾಜಘಾತುಕ ಮತ್ತು ವಿಕೃತ ಕಾರ್ಯಗಳಿಗೆ ಬಳಸಿ ಕೊಳ್ಳಲಾಗುತ್ತದೆ. ನ್ಯೂಡಿಫ್ ಲಿಂಕ್‌ಗಳು ಬಹಳ ಸುಲಭವಾಗಿ ದೊರೆಯುತ್ತವೆ. ಗೂಗಲ್‌ನಲ್ಲಿ ಕೇವಲ ‘ನ್ಯೂಡಿಫ್’ ಎಂದು ಟೈಪ್ ಮಾಡಿದರೆ ಸಾಕು, ನಗ್ನ ಫೋಟೋಗಳನ್ನು ಸೃಷ್ಟಿಸುವ ಹಲವು ಆಪ್‌ಗಳನ್ನು ಅದು ತೆರೆದುಕೊಡುತ್ತದೆ. ಇವು ತುಂಬಾ ಅಪಾಯಕಾರಿ. ಹೀಗಾಗಿ ಸಾಮಾಜಿಕ ಜಾಲತಾಣ ಗಳನ್ನು ಬಳಸುವ ಮಹಿಳೆಯರು ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಇಂಥ ತಾಣಗಳ ಪ್ರೊಫೈಲ್‌ನಲ್ಲಿ ಮಹಿಳೆಯರು ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡದೇ ಇರುವುದೇ ಸೂಕ್ತ. ಸರಕಾರವು ಇಂಥ ಲಿಂಕ್‌ ಗಳನ್ನು -ರ್‌ವಾಲ್ ವ್ಯವಸ್ಥೆಯ ಮೂಲಕ ಶಾಶ್ವತವಾಗಿ ನಿರ್ಬಂಧಿಸಬೇಕು ಹಾಗೂ ಯಾರೇ ಇಂಥ ಕುಕೃತ್ಯಗಳಲ್ಲಿ ತೊಡಗಿರುವುದು ಪತ್ತೆಯಾದರೆ ಅವರಿಗೆ ಉಗ್ರ ಶಿಕ್ಷೆಯನ್ನು ವಿಧಿಸಬೇಕು. ಬನ್ನಿ ಮಹಿಳೆಯರ ಪರವಾಗಿ ಸರಕಾರವನ್ನು ಈ ನಿಟ್ಟಿನಲ್ಲಿ ಆಗ್ರಹಿಸೋಣ.

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *