Friday, 13th December 2024

ಅಧಿಕಾರಿಗಳೇನು ಶಾಸಕಾಂಗದ ಸೇವಕರೇ ?

daily wage workers vidhana soudha

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ನಮ್ಮ ವ್ಯವಸ್ಥೆಯಲ್ಲಿ ಅಧಿಕಾರವಿಲ್ಲದ ಪಕ್ಷದ ಸದಸ್ಯರಿಗೆ ಆಡಳಿತ ಪಕ್ಷದ ಮೇಲಿನ ದ್ವೇಷ ಅಸಹನೆಗಳು ಆಡಳಿತ ಪಕ್ಷದ ಅಧಿಕಾರಿಗಳ ಮೇಲೆ ಹೆಚ್ಚಾಗಿ ತಿರುಗಿ ಬೀಳುತ್ತದೆ. ಆಡಳಿತ ಪಕ್ಷಗಳು ತಮ್ಮ ಪಕ್ಷದ ಕಾರ್ಯಕರ್ತರಂತೆ ಕಂಡು ಮುಲಾಜಿನಲ್ಲಿ ಇರಿಸಿಕೊಳ್ಳುತ್ತಾರೆ.

‘ಬಾಯಿ ಮುಚ್ಚಿ ಕುಳಿತುಕೊಳ್ಳಿ ಎಂದು ಮೂರುಬಾರಿ, ಮುಚ್ಕೊಂಡು ಕೂತ್ಕೊಳ್ರಿ’ ಎಂದು ಮೂರುಬಾರಿ ಜನಪ್ರತಿನಿಧಿಯೊಬ್ಬರು ಸರಕಾರಿ ಅಧಿಕಾರಿಗೆ ಸಂಬೋಧಿಸಿ ಗದರಿಸುವುದು ಸಮಾಜದಲ್ಲಿ ಯಾವ ಸಂದೇಶ ನೀಡುತ್ತದೆ?. ಚಿಲ್ಲರೆ ಕಾಸು ನೀಡದೆ ಮುಖ ತಿರುಗಿಸಿದರೆ ರಸ್ತೆಯಲ್ಲಿನ ಭಿಕ್ಷುಕರೇ ನಮ್ಮನ್ನು ಬೈದುಕೊಂಡು ಶಪಿಸಿಕೊಂಡು ಹೋಗುತ್ತಾನೆ. ಹೀಗಿರುವಾಗ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಒಬ್ಬ ಅಧಿಕಾರಿಯನ್ನು ಭಿಕ್ಷುಕನಿಗೂ ಕೇವಲವಾಗಿ ರಾಜಕಾರಣಿಗಳು ಬೈದಾಡಿದರೆ ಹುದ್ದೆಗೆ ಮತ್ತು ಮಾವೀಯ ಮೌಲ್ಯಗಳ ಗತಿಯೇನು. ನಮ್ಮ ದೇಶದಲ್ಲಿ ಸಂವಿಧಾನದ ಪರಿಧಿಯಲ್ಲಿ ಪ್ರಜಾಪ್ರಭುತ್ವಕ್ಕಾಗಿ ಕಾರ್ಯ ನಿರ್ವಹಿಸುವ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಮತ್ತು ಈ ಮೂರೂ ಅಂಗಳನ್ನು ಕಾಯುವ ನಾಲ್ಕನೇ ಸ್ತಂಭ ಪತ್ರಿಕಾರಂಗ. ಈ ನಾಲ್ಕು ರಂಗಗಳಲ್ಲಿ ಪ್ರತಿಂiಬ್ಬರಿಗೂ ಅವರದ್ದೇ ಆದ ಮೌಲ್ಯಗಳು ಹೊಣೆಗಾರಿಕೆ ಸೇವೆ ಗೌರವ ಘನತೆ ಸ್ವಾಭಿಮಾನವಿರುತ್ತದೆ.

ಸರಕಾರಿ ಕಚೇರಿಯಲ್ಲಿನ ಡಿ ದರ್ಜೆಯ ನೌಕರನಿಂದ ಹಿಡಿದು ಮುಖ್ಯಮಂತ್ರಿಯವರೆಗೂ ಪ್ರತಿಯೊಬ್ಬರಿಂದಲೂ ರಾಜ್ಯಕ್ಕೆ ದೇಶಕ್ಕೆ ಅವರದ್ದೇ ಆದ ಸೇವೆ ಕೊಡುಗೆಗಳಿರುತ್ತದೆ. ಆದ್ದರಿಂದಲೇ ನಮ್ಮ ವಿಧಾನಸೌಧದ ತಲೆ ಬಾಗಿಲಿನಲ್ಲಿ ಸರಕಾರಿ ಕೆಲಸ ದೇವರ ಕೆಲಸ ಎಂದು ಬರೆದಿರುವುದು. ಆದರೆ ರಾಜಕಾರಣಿಗಳು ಅಧಿಕಾರಿ ಗಳನ್ನು ಇಷ್ಟೊಂದು ನಿಕೃಷ್ಟವಾಗಿ ಕಾಣುವುದಕ್ಕೆ ಇಬ್ಬರಲ್ಲೂ ಅವರದ್ದೇ ಆದ ಸಮಾನ ಕಾರಣಗಳೂ ಇವೆ. ಇಂದಿನ ಸಮಾಜದಲ್ಲಿ ಎಂಥ ಪೂರ್ವಗ್ರಹ ಗಳಿವೆಯೆಂದರೆ ಆಡಳಿತ ಪಕ್ಷದ ರಾಜ್ಯಪಾಲರಿಂದ ಹಿಡಿದು ಸರಕಾರಿ ಕಚೇರಿಯ ಗುಮಾಸ್ತನವರೆಗೂ ಪ್ರತಿಯೊಬ್ಬರೂ ವಿರೋಧ ಪಕ್ಷಗಳಿಗೆ ರಣರಂಗದಲ್ಲಿರುವ
ಶತ್ರುಸೈನ್ಯದವರಂತೆ ಭಾಸವಾಗುತ್ತಾರೆ.

ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆಗಿಳಿಯುವ ರಾಜಕಾರಣಿಗಳು ಐಎಎಸ್ ಐಪಿಎಸ್ ಅಧಿಕಾರಿಗಳನ್ನೇ ಅತ್ಯಂತ ಹೀನಾಯವಾಗಿ ನಡೆಸಿಕೊಂಡು ನಿಂದಿಸಿರುವುದನ್ನು ನಾವುಗಳು ನೋಡಿದ್ದೇವೆ. ಉನ್ನತ ಅಧಿಕಾರಿಗಳ ಮೇಲೆಯೇ ಕೈ ಎತ್ತಿರುವುದನ್ನು ಕಂಡಿದ್ದೇವೆ. ಇನ್ನು ಶಾಸಕನ ಸ್ವಕ್ಷೇತ್ರದಲ್ಲಿ ಕುಂದುಕೊರತೆಗಳ ಪರಿಶೀಲನೆ ನಡೆಸುವಾಗ ಸಂಬಂಧಿಸಿದ ಸರಕಾರಿ ನೌಕರರು ಅಥವಾ ಅಧಿಕಾರಿಗಳಿಂದೇನಾದರು ತಪ್ಪಾಗಿದ್ದರಂತೂ ಅವರನ್ನು ತುಚ್ಛವಾಗಿ ಕಂಡು ತಾನೊಬ್ಬ ಮಹಾಯೋಗ್ಯನಂತೆ ಮಹಾಹರಿಶ್ಚಂದ್ರನಂತೆ ಆತನ ಮೇಲೆ ಸವಾರಿ ಮಾಡದೇ ಬಿಡುವುದಿಲ್ಲ. ಯಾವುದೇ ವ್ಯಕ್ತಿಗೆ
ವೈಯಕ್ತಿವಾಗಿ ಅವನದ್ದೇ ಅದ ಘನತೆ ಗೌರವವಿರುತ್ತದೆ.

ನಮ್ಮ ವ್ಯವಸ್ಥೆಯಲ್ಲಿ ಅಧಿಕಾರವಿಲ್ಲದ ಪಕ್ಷದ ಸದಸ್ಯರಿಗೆ ಆಡಳಿತ ಪಕ್ಷದ ಮೇಲಿನ ದ್ವೇಷ ಅಸಹನೆಗಳು ಆಡಳಿತ ಪಕ್ಷದ ಅಧಿಕಾರಿಗಳ ಮೇಲೆ ಹೆಚ್ಚಾಗಿ ತಿರುಗಿಬೀಳುತ್ತದೆ. ಹಾಗೆಯೇ ಅದೇ ಅಧಿಕಾರಿಗಳನ್ನು ಆಡಳಿತ ಪಕ್ಷಗಳು ತಮ್ಮ ಪಕ್ಷದ ಕಾರ್ಯಕರ್ತರಂತೆ ಕಂಡು ಅವರಿಗೆ ಒಂದಷ್ಟು ಮುಲಾಜನ್ನು ನೀಡಿ ಇರಿಸಿಕೊಳ್ಳುತ್ತಾರೆ. ಇದರ ಮತ್ತೊಂದು ಮಜಲು ಎಂದರೆ ಜಾತೀಯತೆ. ಆಡಳಿತ ಪಕ್ಷದ ಪ್ರತಿಯೊಬ್ಬ ಶಾಸಕನೂ ಮಂತ್ರಿಯೂ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ತಮ್ಮ ಇಲಾಖೆ ಮತ್ತು ಆಪ್ತವರ್ಗದ ಆಯಾಕಟ್ಟಿನ ಸ್ಥಳಗಳಲ್ಲಿ ತಮ್ಮದೇ ಜಾತಿಯ ಅಧಿಕಾರಿಗಳನ್ನು ನೌಕರವರ್ಗವನ್ನು ನೇಮಿಸಿಕೊಳ್ಳುವುದು ಸಹಜವಾಗಿಬಿಟ್ಟಿದೆ.

ಹೀಗಾಗಿ ಅಧಿಕಾರಿಗಳು ಆಡಳಿತ ಪಕ್ಷದ ನಾಯಕರಿಗೆ ದುಂಬಾಲುಬಿದ್ದು ಅವರ ಮನೆ ಕಚೇರಿಗಳನ್ನು ಎಡತಾಕಿ ಅವರನ್ನು ಅನೇಕ ರೀತಿಯಲಿ ಸಂತೈಸಿ ಒಲಿಸಿಕೊಂಡು ತಮಗೆ ಎಲ್ಲಾ ರೀತಿಯ ಅನುಕೂಲಗಳಿರುವಂಥ ಸ್ಥಳಗಳಿಗೆ ವರ್ಗಾವಣೆ ಮಾಡಿಸಿದ್ದೊಂದು ಬಂದಿರುತ್ತಾರೆ. ಭ್ರಷ್ಟತನವೇ ಇಡೀ ಕಾರ್ಯಾಂಗ,
ಶಾಸಕಾಂಗದ ವ್ಯವಸ್ಥೆಯನ್ನು ಕುಲಗೆಡಿಸಿ ಕೂರಿಸಿದೆ. ಸರಕಾರಿ ಕಚೇರಿಯಲ್ಲಿ ಡಿ ದರ್ಜೆಯ ನೌಕರನೊಬ್ಬ ಏಕಾಏಕಿ ಹುದ್ದೆಯನ್ನು ಗಿಟ್ಟಿಸಿಕೊಂಡಿರುವುದಿಲ್ಲ. ತನ್ನ
ಕುಟುಂಬದ ಹಿರಿಯ ಜೀವವನ್ನು ಕಳೆದುಕೊಂಡು ಅನುಕಂಪ ಆಧರಿತ ನೌಕರಿಯನ್ನು ಪಡೆದು ಬಂದಿರುತ್ತಾನೆ. ಇಲ್ಲದಿದ್ದರೆ ಸರಕಾರದಿಂದ ಕರೆ ನೀಡುವ ಮೀಸಲು ಜಾತಿ ಇನ್ನಿತರ ಮಾರ್ಗಗಳಿಂದ ಅರ್ಜಿ ಸಲ್ಲಿಸಿ ಅದಕ್ಕೂ ಸರಿಯಾದ ಎಡೆಯನ್ನು ಇಟ್ಟೇ ಅಧಿಕಾರಿಯ ಬಾಗಿಲಬಳಿ ಬಂದು ನಿಂತಿರುತ್ತಾನೆ.

ಕೆಲಮಂದಿಗೆ ಸರಕಾರಿ ಸೇವೆಯೆಂಬುದು ತಮ್ಮ  ಜೀವನದ ಕೊನೆಯವರೆಗೂ ನಂತರ ತಮ್ಮ ಮನೆಯ ಸದಸ್ಯನಿಗೂ ಸೌಲಭ್ಯಗಳನ್ನು ಪಿಂಚಿಣಿಯನ್ನು ನೀಡುವ
ಮಹಾಅವಕಾಶ ಮತ್ತು ಹೆಮ್ಮೆಯ ಕಾಯಕವೆಂಬ ನಂಬಿಕೆಯದ್ದಾಗಿರುತ್ತದೆ. ಆದರೆ ಅನೇಕ ಮಂದಿಗೆ ಇದು ಒಮ್ಮೆ ಬಂಡವಾಳ ಹೂಡಿ ಕೊನೆಯವರೆಗೂ ಬಾಚಿಕೊಳ್ಳುವ ಒಂದು ಅವಕಾಶವಾಗಿ ಗೋಚರಿಸಿರುತ್ತದೆ. ಆದ್ದರಿಂದ ಇಲ್ಲಿ ಅಧಿಕಾರಿಗಳಿಗೆ ರಾಜಕಾರಣಿಗಳೂ ಬೇಕು, ರಾಜಕಾರಣಿಗಳಿಗೆ ಅಧಿಕಾರಿಗಳೂ ಬೇಕು. ಇದನ್ನು ನೋಡುವ ಪುಢಾರಿಗಳಿಗೆ ಕಾರ್ಯಾಂಗದ ಮೇಲಿನ ಗೌರವವೇ ಸತ್ತಿರುತ್ತದೆ.

ಅಧಿಕಾರಿಗಳ ಮೇಲೆ ತಾತ್ಸರ ಮುಲಾಜು ಹೆಚ್ಚಾಗಿ ಯೇ ಇವನೇನು ಹರಿಶ್ಚಂದ್ರನಾ, ಇವನ ಯೋಗ್ಯತೆ ನಮಗೇನು ತಿಳಿದಿಲ್ವ ಎಂಬ ಅಸಡ್ಡೆ ಸ್ಥಾಪಿತ ವಾಗಿರುತ್ತದೆ. ಮೇಲಿನಂತೆ ಮುಚ್ಕೊಡು ಕೂತ್ಕೊಳ್ರಿ ಎಂದು ಗದರಿದ್ದು ಸಿದ್ದರಾಮಯ್ಯನವರ ಮಗ ಶಾಸಕ ಯತೀಂದ್ರ ಸಿದ್ದರಾಮಯ್ಯ. ಮೊನ್ನೆ ತಮ್ಮ ಕ್ಷೇತ್ರದಲ್ಲಿ ಸಾಮಾನ್ಯರು ವಿದ್ಯುತ್ ಶುಲ್ಕ ಕಟ್ಟಲಿಲ್ಲವೆಂಬ ಕಾರಣಕ್ಕೆ ಚೆಸ್ಕಾಂ ಅಧಿಕಾರಿ ಮನೆಗಳ ವಿದ್ಯುತ್ ಸಂಪರ್ಕವನ್ನು ತೆಗೆದಿದ್ದರಿಂದ ರೊಚ್ಚಿಗೆದ್ದು ಹೀಗೆ ಅಧಿಕಾರಿಗೆ ಬುದ್ದಿವಾದ ಹೇಳಿದ್ದಾರೆ. ಶುಲ್ಕ ಕಟ್ಟಲಿಲ್ಲವೆಂಬ ಕಾರಣಕ್ಕೆ ಬಡವರ ಮನೆಯನ್ನು ಕತ್ತಲುಗೊಳಿಸದ್ದನ್ನು ಪ್ರಶ್ನಿಸುವುದು ಕ್ಷೇತ್ರದ ನಾಯಕನಾಗಿ ಯತೀಂ ಅವರು ನಡೆ ಸ್ವಾಗತಾರ್ಹ.ಯತೀಂದ್ರ ಅವರು ವೃತ್ತಿಯಲ್ಲಿ ವೈದ್ಯರು. ವೈದ್ಯಕೀಯವನ್ನು ಕಲಿತವರು ಇದಕ್ಕಿಂತ ಕೆಟ್ಟದಾಗಿ ವರ್ತಿಸುವ ಮಂದಿ ಬಹಳಷ್ಟಿದ್ದಾರೆ. ಆದರೆ
ಯತೀಂದ್ರ ಅವರು ತಂದೆಗೆ ತಕ್ಕ ಮಗ ಎಂಬುದನ್ನು ಸಾಬೀತು ಪಡಿಸಲು ಕೇವಲ ವಾಕ್ಚಾತುರ್ಯದಿಂದ ಸಾಧ್ಯವಿಲ್ಲ. ಅದನ್ನು ಮೀರಿ ಸಹನೆ ತಾಳ್ಮೆಯಿಂದ ವರ್ತಿಸಿ ಒಳ್ಳೆಯ ಮಾತಿನಿಂದ ಎಲ್ಲರನ್ನೂ ಗೆಲ್ಲುವಂಥ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಉತ್ತಮ. ಅನೇಕ ಅಯೋಗ್ಯರ ಮುಂದೆ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಅಧಿಕಾರಿಗೆ ಆರೇಳು ಬಾರಿ ಮುಚ್ಕೊಂಡು ಮಾತುಗಳಿಂದ ಹೌಹಾರಿದ್ದು ನೆರೆದಿದ್ದ ಜನರಿಗೆ ಮಾಧ್ಯಮಗಳಲ್ಲಿ ನೋಡಿದವರಿಗೆ ಯತೀಂದ್ರರ
ವರ್ತನೆ ಮತ್ತು ಅಽಕಾರಿಯ ಸ್ಥಿತಿ ಹೇಗೆಲ್ಲಾ ಕಾಣಬಹುದು ಮತ್ತು ಮುಂದೆ ಆ ಅಧಿಕಾರಿಯನ್ನು ಜನ ಮತ್ತು ಸಹೋದ್ಯೋಗಿಗಳು ಹೇಗೆಲ್ಲಾ ಕಾಣಬಹುದು ಎಂಬುದು ಇಲ್ಲಿ ಗಮನಾರ್ಹ.

ಇನ್ನು ಮೊನ್ನಿನ ಕಾಂಗ್ರೆಸ್ ಪಾದಯಾತ್ರೆಯ ಮೊದಲ ದಿನ ಅಽಕಾರಿಗಳು ಡಿಕೆಶಿಯ ಆರೋಗ್ಯ ಪರೀಕ್ಷಿಸಲು ಹೋದಾಗ ಅವರ ಮಾತಿಗೆ ಸ್ಪಂದಿಸದೇ ಅವರನ್ನು ಎದುರಾಳಿಗಳಂತೆ ಕಂಡಿದು, ಗೃಹಮಂತ್ರಿ ಆರಗ ಜ್ಞಾನೇಂದ್ರ ಗೋಕಳ್ಳರೊಂದಿಗೆ ಶಾಮೀಲಾದರೆಂದು ತಮ್ಮ ಇಲಾಖೆಯ ಪೊಲೀಸರಿಗೇ ಉಗಿದದು. ಹೀಗೆ ಇಂಥ ನಡೆಗಳೆಲ್ಲಾ ಕಾರ್ಯಾಂಗದ ಶಾಸಕಾಂಗದ ಗಂಭೀರತೆಯನ್ನು ಹಾಳುಮಾಡುತ್ತದಷ್ಟೆ. ಸಿನಿಮಾ ನಾಯಕನಂತೆ ಅಂಗಸಾಧಕನಾಗಿ ಬಂಧಿಯಾಗಿರುವ ಐಪಿಎಸ್ ಅಧಿಕಾರಿ ಎಮ್ಮೆ ತಮ್ಮಣ್ಣನಂಥ ನೀತಿಗೆಟ್ಟ ಮಂತ್ರಿಗಳ ಮುಂದೆ ದಿಕ್ಕಿಲ್ಲದವರಂತೆ ನಿಂತು ಕೋಣನ ಕಿಂದರಿಯನ್ನು ಕೇಳಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಾರೆ. ಇಂಥ ಅಸಹಜತನ ಅವೈಜ್ಞಾನಿಕತನಕ್ಕೆ ಕಾರಣವೇ ಭ್ರಷ್ಟಾಚಾರ.

ಇವನೆಷ್ಟು ಸಾಚ ಎಂಬುದು ಇವನಿಗೆ ಗೊತ್ತಿರುತ್ತದೆ, ಅವನೆಷ್ಟು ಸಾಚಾ ಎಂಬುದು ಇವನಿಗೆ ತಿಳಿದಿರುತ್ತದೆ ಹೀಗಾಗಿ ಇಲ್ಲಿ ಅನೈತಿಕ ಸಹನೆ ತಾಳ್ಮೆ ಮೆರೆದು ಅಧಿಕಾರಿ ಮತ್ತು ಮಂತ್ರಿಗಳಿಬ್ಬರೂ ಆಗಿರುವುದು ಉಳಿದೆಲ್ಲರಿಗೂ ಖಾತ್ರಿಯಾಗಿರುತ್ತದೆ. ಹಾಗಂತ ಎಲ್ಲ ನೌಕರರು ಅಧಿಕಾರಿಗಳು ಹೀಗೇ ಇರುವುದಿಲ್ಲ. ಪರಮ ಪ್ರಾಮಾಣಿಕನಾಗಿ ಸೇವೆಸಲ್ಲಿಸುವ ನೌಕರ ತನ್ನ ವ್ಯಾಪ್ತಿಯ ಯಾವ ದೊಣೆನಾಯಕನಿಗೂ ಮುಲಾಜು ನೀಡುವುದಿಲ್ಲ. ಬದುಕಿನಲ್ಲಿ ಮಾನ ಮರ್ಯಾದೆ ಗೌರವವೂ ದೊಡ್ಡ ಮೌಲ್ಯವೆಂಬ ಅರಿವಿದ್ದರೆ ಸರಕಾರಿ ಅಧಿಕಾರಿಗಳು ದುರಾಸೆಗೆ ಒಳಗಾಗಿ ಜಾತಿ ಮುಲಾಜು, ಲಂಚಾವತಾರಕ್ಕೆ, ಹಣಮಾಡಲು ಅಡ್ಡದಾರಿಗಾಗಿ ಪುಢಾರಿಗಳ ಪಲ್ಲಂಗ ಹೊತ್ತು ಇರುವ ಗೌರವ ಮರ್ಯಾದೆ ಕಳೆದುಕೊಂಡು ಕೆಲಸ ಮಾಡುವುದನ್ನು ಬಿಟ್ಟು ದಿಟ್ಟತನದಿಂದ ಪ್ರಾಮಾಣಿಕತೆಯಿಂದ ಸೇವೆಯನ್ನು ಮಾಡಬೇಕಿದೆ.

ಯಾವ ಪುಟಗೋಸಿ ನಾಯಕನ ಮುಂದೆಯೂ ಹೀಗೆ ಅನ್ನಿಸಿಕೊಂಡು ನಿಲ್ಲುವಂಥ ಸ್ಥಿತಿಗೆ ಒಳಗಾಗದೆ ಸಂಭಾವಿತರಾಗಿ ಸಮಾಜಕ್ಕೆ ಮಾದರಿಯಾಗಿ ನಿಲ್ಲಲಿ. ಶಾಸಕಾಂಗಕ್ಕೆ ಅದರದ್ದೆ ಅದ ಗೌರವವಿದೆ. ಕಾರ್ಯಾಂಗಕ್ಕೆ ವೇತನ ಭತ್ಯ ಪಿಂಚಣಿಯನ್ನು ರಾಜಕಾರಣಿಗಳು ನೀಡುವುದಿಲ್ಲ ಅದನ್ನು ಒದಗಿಸುವುದು
ಸಾರ್ವಜನಿಕರ ಹಣದಿಂದ. ಇದನ್ನು ಅರಿತು ಜನರಿಗಾಗಿ ಸಮಾಜಕ್ಕಾಗಿ ಮಾನವೀಯ ಮೌಲ್ಯಗಳಿಂದ ಕರ್ತವ್ಯ ನಿರ್ವಹಿಸಲಿ. ಇದರಿಂದ ಶಾಸಕಾಂಗವೂ ಶುದ್ಧವಾಗುತ್ತದೆ. ಆಗ ಜನರೂ ನಿಮ್ಮ ಜತೆ ನಿಲ್ಲುತ್ತಾರೆ. ಪತ್ರಿಕೋದಮವೂ ಜತೆಯಾಗಿ ನಿಂತು ಇಂಥ ಸನ್ನಿವೇಶಗಳನ್ನು ಖಂಡಿಸಿ ನಿಮ್ಮ ಪರವಾಗಿ ನಿಲ್ಲುತ್ತದೆ. ಹಾಗಾಗದೆ ಅಯೋಗ್ಯ ನಾಲಾಯಕ್ಕು ಪುಢಾರಿಗಳು ಅಂದದೆಲ್ಲಾ ಅನ್ನಿಸಿಕೊಂಡು ಹೋಗದರೆ ಶಾಸಕಾಂಗದ ಮುಂದೆ ಕಾರ್ಯಾಂಗ ಮುಚ್ಕೊಂಡು ಇರಬೇಕಷ್ಟೆ