Friday, 13th December 2024

ಕಲೆಯ ವಿರುದ್ದ ರಾಜಕಾರಣದ ಗೆಲುವು

ಅಭಿಮತ

ಶಿವಸುಬ್ರಹ್ಮಣ್ಯ ಕೆ.

ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ರಾಜ್ಯ ಸರಕಾರದ ಎಲ್ಲ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರನ್ನು ಆಯ್ಕೆ ಮಾಡಿ ಪ್ರಕಟವಾದ ಪಟ್ಟಿ ನೋಡಿದಾಗ ಅಚ್ಚರಿ ಆಗಿತ್ತು. ಕಾರಣವಿಷ್ಟೇ, ಮೈಸೂರಿನ ನೃತ್ಯಗಿರಿ ಸಂಸ್ಥೆಯ ನಿರ್ದೇಶಕಿ ನೃತ್ಯ ವಿದುಷಿ ಡಾ.ಕೃಪಾ ಫಡ್ಕೆ ಅವರನ್ನು ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. ನಾನೂ ಅಭಿನಂದನೆ ಸಲ್ಲಿಸಿದ್ದೆ.

ಅವರು ನನ್ನ ಅತ್ತಿಗೆ ಕೂಡಾ. ಡಾ.ಕೃಪಾ ಫಡ್ಕೆ ಅವರು ಯಾವುದೇ ಲಾಬಿ ನಡೆಸದೇ ಕನಿಷ್ಠ ಆ ಸ್ಥಾನದ ಯೋಚನೆ ಕೂಡ ಮಾಡದೇ ಇದ್ದಾಗ ಈ
ಸ್ಥಾನ ಅರಸಿ ಬಂದಾಗ ಅವರನ್ನು ದಶಕಗಳಿಂದ ಬಲ್ಲವರಿಗೆ ತುಂಬಾ ಸಂತೋಷವಾಗಿತ್ತು. ಸುಮಾರು ಮೂವತ್ತು ವರ್ಷಗಳಿಂದ ಮೈಸೂರಿನ ಕಲಾ ಪ್ರಪಂಚದ ಅತ್ಯಂತ ಸಶಕ್ತ ಕಲಾವಿದೆ ಮಾತ್ರವಲ್ಲದೆ ಅತ್ಯುತ್ತಮ ಸಂಘಟನೆಯ ಶಕ್ತಿಯಾಗಿಯೂ ಹೆಸರಾದವರು. ಕಲಾ ಪ್ರಪಂಚದ ನೂರಾರು
ಕಲಾವಿದರನ್ನು ವೇದಿಕೆ ಒದಗಿಸಿ ಕಲೆಯ ನಿಜ ಉದ್ದೇಶವನ್ನು ಸಾರ್ಥಕಗೊಳಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಯನ್ನೂ ಪಡೆದವರು.

ಮೈಸೂರಿನ ಮಾಧ್ಯಮವೂ ಇವರ ಕಲಾ ಸೇವೆಯನ್ನು ಅತ್ಯಂತ ಹತ್ತಿರದಿಂದ ನೋಡುತ್ತಿದ್ದ ಕಾರಣ ಆ ಹುದ್ದೆಗೆ ಅತ್ಯಂತ ಸಮರ್ಥರು ಎಂದೇ ಸಂತಸ ಪಟ್ಟಿದ್ದರು. ದಿವಂಗತ ಪಂಡಿತ್ ರಾಜೀವ್ ತಾರಾನಾಥ್‌ರಂತವರೂ ಕರೆ ಮಾಡಿ ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದರು. ಯಾರು ಯಾವ ಹುದ್ದೆ ಅಲಂಕರಿಸಲಿ. ಯಾರು ಎಲ್ಲಾ ಕಾರ್ಯಕ್ರಮಗಳನ್ನು ನೀಡಲಿ, ಅದಕ್ಕಾಗಿ ಖುಷಿ ಪಡುವವರಷ್ಟೇ ಹೊಟ್ಟೆ ಕಿಚ್ಚಿನಿಂದ ನರಳುವವರೂ ಇದ್ದಾರೆ.

ಕರ್ನಾಟಕದ ಕಲಾ ಜಗತ್ತಿನ ಅತ್ಯಂತ ದೊಡ್ಡ ಸಮಸ್ಯೆಯೇ ಅಸೂಯೆ. ಕೃಪಾ ಫಡ್ಕೆಯವರು ಕಳೆದ ೩೦ ವರ್ಷಗಳಲ್ಲಿ ರಾಜ್ಯ, ರಾಷ್ಟ್ರದ ಅನೇಕ
ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ‘ಬಲಿದಾನ’ ನಾಟಕದಲ್ಲಿ ಮುಖ್ಯ ಪಾತ್ರ ಮಾಡಿದವರು ಕೃಪಾ ಫಡ್ಕೆ. ಕನಕದಾಸರ ಕೀರ್ತನೆಗಳಿಗೆ ನೃತ್ಯ ಸಂಯೋಜನೆ ಮಾಡಿ ಹಲವಾರು ಕಾರ್ಯಕ್ರಮ ನೀಡಿದವರು. ಮೈಸೂರಿನ ಶಕ್ತಿಧಾಮದಲ್ಲಿ ನೃತ್ಯ ತರಬೇತಿ
ನೀಡಿದವರು. ರಾಜ್ಯ, ರಾಷ್ಟ್ರದ ಅನೇಕ ಪ್ರಮುಖ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದವರು.

ಕಾಂಗ್ರೆಸ್ ಸರಕಾರದ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ರೈತ ಗೀತೆಗೆ ನೃತ್ಯ ಸಂಯೋಜನೆ ಮಾಡಿದರೆ, ಬಿಜೆಪಿ ಸರಕಾರದ ಕಾರ್ಯಕ್ರಮ ಗಳಲ್ಲಿ ವಂದೇ ಮಾತರಂ ನೃತ್ಯ ಸಂಯೋಜನೆ ಕೂಡ ಮಾಡಿದ್ದರು. ಕುಮಾರಸ್ವಾಮಿ ಅವರ ಸರಕಾರ ನಡೆಸಿದ ಜಾನಪದ ಉತ್ಸವದಲ್ಲಿ ಹೆಣ್ಣು ಮಕ್ಕಳಿಂದ ಡೊಳ್ಳು ಕುಣಿತ, ಕಂಸಾಳೆಯನ್ನು ಪ್ರದರ್ಶಿಸಿ ನೃತ್ಯ ಅಷ್ಟೇ ತಮ್ಮ ವೃತ್ತಿಯೆಂದು ಬದುಕಿದವರು. ಆದರೆ, ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸರಕಾರ ಘೋಷಣೆ ಮಾಡಿದ ಕ್ಷಣದಿಂದ ಅವರ ಆತ್ಮವಿಶ್ವಾಸ ಕುಸಿಯುವಂತೆ ಮಾಡುವ ಪ್ರಯತ್ನ ಮಾಡಲಾಯಿತು.

ಅಕಾಡೆಮಿಯೊಂದಕ್ಕೆ ಅಧ್ಯಕ್ಷರಾಗಿ ನಿಯೋಜಿತರಾಗಿದ್ದ ವ್ಯಕ್ತಿ ಪದೇ ಪದೇ ಕಾಲ್ ಮಾಡಿ ರಾಜಿನಾಮೆ ಕೊಡೋದು ಒಳ್ಳೇದು ಎಂದು ಮತ್ತೊಂದು ದಿನ ಏನು ತೀರ್ಮಾನ ಕೈಗೊಂಡಿರಿ ಎಂದು ಕೇಳುತ್ತಲೇ ಇದ್ದರು. ಅವರ ವಿಶೇಷ ಆಸಕ್ತಿ ಬಗ್ಗೆ ಕುತೂಹಲ ಮೂಡಿತ್ತು. ಕೊನೆಗೂ ಕೃಪಾ ಫಡ್ಕೆಯವರು ಎಚ್ಚರಿಕೆ ನೀಡಿದ ನಂತರ ಕರೆ ಮಾಡುವುದನ್ನು ನಿಲ್ಲಿಸಿ ದರು. ಮೈಸೂರಿನ ಆಂಗ್ಲ ಪತ್ರಿಕೆಯ ವರದಿಗಾರ ಒಬ್ಬ ಯಾರೋ ಎಲ್ಲಾ ಹೇಳಿದ್ದನ್ನು ಕೇಳಿಸಿಕೊಂಡು ವರದಿ ಬರೆದ. ಬೆಂಗಳೂರಿನ ಕನ್ನಡ ಪತ್ರಿಕೆಯಲ್ಲಿ ಕೆಲಸ ಮಾಡುವ ಒಬ್ಬ ಈ ವಿಷಯದ ವರದಿ ಬರೆದು ಅದಕ್ಕೆ ತನ್ನ ಹೆಸರನ್ನು ಹಾಕಿಸಿ
ವಿಶೇಷ ವರದಿ ಎಂದು ಬರೆದು ಪ್ರಕಟಿಸಿ ಕಲೆಯ ವಿರುದ್ಧ ಸಮರಕ್ಕೆ ಇಳಿದ ಗುಂಪಿನ ವಕಾಲತ್ತು ವಹಿಸಿದರು.

ಪತ್ರಿಕೆಯ ಆಡಳಿತ ಮಂಡಳಿಯ ಒಬ್ಬರು ಅವರಿಗೆ ಎಚ್ಚರಿಕೆ ನೀಡಿದರು. ಮರು ದಿನವೇ ಕೃಪಾ ಫಡ್ಕೆಯವರಿಗೆ ಕಾಲ್ ಮಾಡಿ ಹಾಗಲ್ಲ ಹೀಗಲ್ಲ… ಎಂದು ಸಮಜಾಯಿಷಿ ನೀಡಿ ತಡವರಿಸಿ ದರು. ಇನ್ನೋರ್ವ ಅಂಕಣಕೋರ ಲೇಖನ ಬರೆದು, ಕೃಪಾ ಫಡ್ಕೆ ಅಷ್ಟೇನೂ ಕಲಾವಿದರೇ ಅಲ್ಲ ಎಂದು ವಾಂತಿ
ಮಾಡಿಕೊಂಡಂತೆ ಬರೆದರು. ಅಸೂಯೆ, ಹತಾಶೆಯಿಂದ ಪತ್ರಿಕೆ ಗಳಲ್ಲಿ ಕೃಪಾ ವಿರುದ್ಧ ಕೆಲವು ಭರತ ನಾಟ್ಯ ಕಲಾವಿದರು ಬರೆಸಿದರು. ಆಪ್ತರಂತೆ ನಟಿಸಿ ದವರು ಮೂಗರ್ಜಿ ಬರೆದರು. ಎಲ್ಲ ಪತ್ರಿಕೆಗಳಲ್ಲಿ ಕೃಪಾ ಅವರಿಗೂ ಮಿತ್ರರಿದ್ದಾರೆ ಎಂಬ ಸಾಮಾನ್ಯ ಅರಿವು ಆ ವ್ಯಕ್ತಿಗಳಿಗೆ ಇರಲಿಲ್ಲ!

ಹುದ್ದೆ ತಪ್ಪಿಸಲು ಬಿರುಸಿನಿಂದ ಪ್ರಯತ್ನ ನಡೆಯುತ್ತಿದ್ದ ಹೊತ್ತಿನಲ್ಲಿ ಡಾ.ಕೃಪಾ ಫಡ್ಕೆಯವರು ಹೇಳುತ್ತಿದ್ದ ಮಾತು ಒಂದೇ-‘ನಾನಾಗಿ ಕೇಳಿಕೊಂಡು ಹೋಗಿಲ್ಲ, ಸರಕಾರ ತಾನಾಗಿಯೇ ಆಯ್ಕೆ ಮಾಡಿದೆ, ಅವರಾಗಿಯೇ ಬದಲಾವಣೆ ಮಾಡಿದರೂ ಎಳ್ಳಷ್ಟು ದುಃಖ ಇರದು. ಆದರೆ ವರದಿ ಪ್ರಕಟಿಸಿ, ಮೂಗರ್ಜಿ ಬರೆದು ಹೆದರಿಸಿದರೆ ಖಂಡಿತವಾಗಿ ರಾಜೀನಾಮೆ ನೀಡಲಾರೆ’. ಕೃಪಾ ಫಡ್ಕೆಯವರು ಹೆದರಲಿಲ್ಲ. ಹೆದರುವವರೂ ಅಲ್ಲ. ಅವರು ಹೆದರ ದಂತೆ, ಅವರ ರಕ್ಷಣೆಗೆ ನಾನು ಮತ್ತು ನನ್ನ ಕುಟುಂಬವಂತೂ ಸದಾ ನಿಂತಿದೆ. ಒಂದರ್ಥದಲ್ಲಿ ಡಾ.ಕೃಪಾ ಫಡ್ಕೆಯವರು ಈಗ ನಿಜಕ್ಕೂ ನಿರಾಳ ಭಾವ ವನ್ನು ಈಗ ಅನುಭವಿಸುತ್ತಿರುವುದು ಅಭಿಮಾನಿಗಳಾದ, ಬಂಧುಗಳಾದ ನಮಗೆ ಖುಷಿ. ಕಳೆದ ಎರಡು ತಿಂಗಳಿಂದ ಒಂದು ಅತಂತ್ರಭಾವ ಅವರಲ್ಲಿ ಇತ್ತು.

ಅದಕ್ಕೊಂದು ಮುಕ್ತಾಯ ಸಿಕ್ಕಿದೆ. ಒಬ್ಬ ವ್ಯಕ್ತಿಗೆ ಅಽಕಾರ, ಗೌರವ ಬಂದಾಗ ಸುತ್ತಲಿನ ಜನರ ವರ್ತನೆಗಳು ಬದಲಾಗುತ್ತವೆ ಅನ್ನುವುದು ಈ ಹೊತ್ತಿನಲ್ಲಿ ಸತ್ಯವಾಗಿ ತಿಳಿಯಿತು. ಸರಕಾರದಲ್ಲಿ ಇರುವವರು ಕಲೆ, ಸಾಹಿತ್ಯ, ಕ್ರೀಡೆ ಮೊದಲಾದ ವಿಷಯಗಳಲ್ಲಿ ರಾಜಕಾರಣ ತೂರಬಾರದು. ಉನ್ನತ ಹುದ್ದೆಗಳಲ್ಲಿ
ಇರುವವರು ಹಿತ್ತಾಳೆ ಕಿವಿ ಆಗಬಾರದು. ಈ ರಾಜ್ಯದಲ್ಲಿ ವಿಚಿತ್ರ ಪರಿಸ್ಥಿತಿಯೆಂದರೆ ಕಾಂಗ್ರೆಸ್ , ಜನತಾದಳ, ಬಿಜೆಪಿ ಸರಕಾರ ಇರುವಾಗ ಅವರ ಆಪ್ತರಂತೆ
ವರ್ತಿಸಿ ವೇದಿಕೆಗಳಲ್ಲಿ ಓಡಾಡುವವರು ಹುದ್ದೆ ಅಲಂಕರಿಸುತ್ತಾರೆ. ಅವರಿಗೆ ಯಾವುದೇ ಹಣೆಪಟ್ಟಿ ಇರುವುದಿಲ್ಲ. ಅದರೆ, ಕೃಪಾ ಫಡ್ಕೆ ಸಂಘ ಪರಿವಾರ ದವರು ಎಂದು ಕೆಲವರು ಹಣೆಪಟ್ಟಿ ಕಟ್ಟಿದರು. ಕೃಪಾ ಫಡ್ಕೆಯವರು ಕಾಂಗ್ರೆಸ್ ಸರಕಾರದಲ್ಲಿ ಹುದ್ದೆ ಅಲಂಕರಿಸುತ್ತಿದ್ದಾರೆ ಎಂದು ಸಂಘ ಪರಿವಾರ ದವರು ಹುಬ್ಬೇರಿಸಿದರು.

ಕಲಾಸೇವೆಯೇ ಮುಖ್ಯ ಎಂದು ಭಾವಿಸಿದ್ದ ಕೃಪಾ ಫಡ್ಕೆಯವರು ಈ ಎರಡರ ಮಧ್ಯೆ ಸಿಲುಕಿ ಅವರ ಮನಸ್ಸು ಕಿರಿಕಿರಿ ಆಗಿದ್ದಂತೂ ನಿಜ. ಪತ್ರಿಕೋದ್ಯಮ, ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವವರನ್ನು ಯಾವುದೇ ಪಂಥ, ಧರ್ಮದ, ಗುಂಪಿನ ಚೌಕಟ್ಟಿನಲ್ಲಿ ನೋಡುವುದು ಉತ್ತಮ ಸಮಾಜದ ಬೆಳವಣಿಗೆಗೆ ಮಾರಕ. ಅದರಲ್ಲೂ ಕಲಾವಿದರನ್ನು ಹೀಗೆ ನೋಡುವುದು ಕ್ಷುಲ್ಲಕ. ಈ ಲೇಖನದಲ್ಲಿನ ಮಾತು ಎಲ್ಲಾ ಪಕ್ಷಗಳಿಗೂ ಅನ್ವಯವಾಗುತ್ತದೆ. ಅವರ ನೇಮಕದ ಆದೇಶ ಹೊರಬಿದ್ದಾಗ, ಕೃಪಾ ಅಕ್ಕಾ… ಎಂದು ಸದಾ ಕರೆಯುತ್ತಿದ್ದವರು ಹಸಿ ಮೆಣಸು ತಿಂದವರಂತೆ ಕೊರಗಿದರು.

ನೂರಾರು ಜನರು ಅಭಿನಂದನೆಗಳನ್ನು ಸಲ್ಲಿಸಿದರೆ, ಕೆಲವು ಸ್ನೇಹಿತರು, ಹಿರಿಯರು ಅಂದುಕೊಂಡಿದ್ದ ವರ ವ್ಯತಿರಿಕ್ತ ವರ್ತನೆ ಅಚ್ಚರಿಯನ್ನೂ ಮೂಡಿಸಿತು. ಅವರನ್ನು ಹಲವಾರು ವರ್ಷಗಳಿಂದ ಹತ್ತಿರದಿಂದ ನೋಡಿದವರು, ಅಪಪ್ರಚಾರದಲ್ಲಿ ತೊಡ ಗಿದವರಿಗೆ ಮಾಹಿತಿದಾರರಾಗಿ ವರ್ತಿಸಿದ್ದೂ ಇದೆ! ಕಳೆದ ಮೂರು ದಶಕಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ನೃತ್ಯಗಿರಿಯಿಂದ ನೃತ್ಯ ಕಲಿತು, ಅವರ ಪೈಕಿ ಹಲವು ವಿದ್ಯಾರ್ಥಿಗಳು ತಮ್ಮದೇ ನೃತ್ಯ ಶಾಲೆಗಳನ್ನು ನಡೆಸುತ್ತಿದ್ದಾರೆ ನೃತ್ಯ ಗಿರಿಯ ವೇದಿಕೆಯಲ್ಲಿ ನೂರಾರು ಕಲಾವಿದರು ಹಾಡಿ ನರ್ತಿಸಿ ಹೋಗಿದ್ದಾರೆ. ನೂರಾರು ಮಕ್ಕಳಿಗೆ ನೃತ್ಯ ಕಲಿಸಿದ
ಆತ್ಮ ತೃಪ್ತಿ ಅವರಿಗೆ ಇದೆ. ಹಣಕಾಸು ಮುಗ್ಗಟ್ಟು ಇದ್ದ ಪೋಷಕರ ಮಕ್ಕಳಿಗೆ ಉಚಿತವಾಗಿ ಕಲಿಸಿದ ಹೆಮ್ಮೆ ಅವರಿಗಿದೆ. ಕಲೆ ಅವರಿಗೆ ಯಾವತ್ತೂ ವ್ಯಾಪಾರವಾಗಿಲ್ಲ. ಅನ್ನ ಕೊಟ್ಟ ದಾರಿಯಾಗಿದೆ.

ಅವರ ಕೈಯಲ್ಲಿ ಗುರುಗಳು ನೀಡಿದ ವಿದ್ಯೆಯಿದೆ. ಬದುಕಲು ನಿಷ್ಠೆ ಪ್ರಾಮಾಣಿಕತೆ ಇದೆ, ನೋವಾದಾಗ ಸಂತೈಸಲು ಅತ್ಯಂತ ಸುಸಂಸ್ಕೃತ ಕುಟುಂಬ ವಿದೆ. ಇನ್ನು ಮುಂದೆಯೂ ನೃತ್ಯಗಿರಿಯಲ್ಲಿ ನಟುವಾಂಗದ ಸದ್ದು ಅವರ ಉಸಿರಿರುವ ತನಕ ಕೇಳುತ್ತದೆ. ಅನಂತರ ಅದನ್ನು ಮುಂದುವರಿಸಲು ಅವರ ಪುತ್ರಿಯೂ ಭರತನಾಟ್ಯ ಕಲಾವಿದೆಯಾಗಿ ಸಮರ್ಥಳಿದ್ದಾಳೆ.