ಶಶಾಂಕಣ
shashidhara.halady@gmail.com
ಇದೊಂದು ಗೌರವ ಅದೆಷ್ಟೋ ವರ್ಷಗಳ ಹಿಂದೆ ಬರಬೇಕಿತ್ತು; ಈಗಲಾದರೂ ದೊರಕಿದೆ, ಅದೇ ಸಂತೋಷ. ಬೇಲೂರು, ಹಳೆಬೀಡು ಮತ್ತು ಸೋಮನಾಥ
ಪುರದ ಶಿಲಾ ಸೌಂದರ್ಯವು ಈಗ ಯುನೆಸ್ಕೊ ವಿಶ್ವಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರಿರುವುದು ನಮಗೆಲ್ಲರಿಗೂ ಹೆಮ್ಮೆ ತರುವಂತಹ ವಿಚಾರ. ಈ ಮೂರು ಸ್ಥಳಗಳ ಶಿಲಾ ಸೌಂದರ್ಯದ ಜತೆಯಲ್ಲೇ, ಜಾವಗಲ್, ಬೆಳವಾಡಿ, ಅರಸಿಕೆರೆ, ಅಮೃತಾಪುರ, ಹಾರನಹಳ್ಳಿ, ದೊಡ್ಡ ಗದ್ದುವಳ್ಳಿ ಮುಂತಾದ ಇನ್ನೂ ಹಲವು ಹೊಯ್ಸಳ ಶೈಲಿಯ ವಾಸ್ತುಸೌಂದರ್ಯವನ್ನು ನೋಡಲು ಈ ಗೌರವವು ಪ್ರೇರೇಪಿಸುತ್ತದೆ. ಯುನೆಸ್ಕೋ ವಿಶ್ವಪರಂಪರೆ ತಾಣಗಳ ಪಟ್ಟಿಯಲ್ಲಿರುವ ಸ್ಥಳಗಳನ್ನು ಅಂತಾರಾಷ್ಟ್ರೀಯ ಪ್ರವಾಸಿಗರು ನೋಡಲು ಪದೇ ಪದೇ ಬರುವುದರಿಂದಾಗಿ, ಇದು ಸ್ಥಳೀಯ ಪ್ರವಾಸೋದ್ಯಮವನ್ನು ಸಹ ಬೆಳೆಸುತ್ತದೆ.
ಈಗ ವಿಶ್ವಪರಂಪರೆಯ ತಾಣದ ಪಟ್ಟಿಯಲ್ಲಿ ಸೇರಿರುವ ಹೊಯ್ಸಳ ಶಿಲಾ ಸೌಂದರ್ಯವನ್ನು ಕಳೆದ ನಾಲ್ಕು ದಶಕಗಳಿಂದ ನಾನು ನೋಡುತ್ತಾ ಬಂದಿದ್ದೇನೆ; ಜತೆಯಲ್ಲೇ ಬೆಳವಾಡಿ, ಅರಸಿಕೆರೆ, ಅಮೃತಾಪುರ, ಹಾರನಹಳ್ಳಿ, ದೊಡ್ಡಗದ್ದುವಳ್ಳಿ ಮೊದಲಾದ ಹಲವು ತಾಣಗಳಿಗೂ ಭೇಟಿ ನೀಡಿದ್ದೇನೆ. ಕಲ್ಲನ್ನು ಮೇಣದ ರೀತಿ, ಮರದ ರೀತಿ ಬಳಸುವ ಅಪ್ರತಿಮ ಕಲಾಕೌಶಲವನ್ನು ಇಲ್ಲಿ ಕಾಣಬಹುದು. ಹಂಪೆಯಲ್ಲಿರುವ ಶಿಲಾ ನಿರ್ಮಿತಿ ಗಳಿಗಿಂತಲೂ, ಹೊಯ್ಸಳ ಶೈಲಿಯ ಈ ನಿರ್ಮಿತಿಗಳು ಸುಮಾರು ೩೦೦ ವರ್ಷ ಹಿಂದಿನವು. ಈ ಅಪ್ರತಿಮ ಕಲಾಕೃತಿಗಳನ್ನು ನಿರ್ಮಿಸಿದ ಕಲಾವಿದರು, ಶಿಲ್ಪಿಗಳು ಯಾರು ಎಂದು ಬಹಳಷ್ಟು ನನಗೆ ಕುತೂಹಲ ಮೂಡಿದ್ದುಂಟು; ಹೊಯ್ಸಳ ಶಿಲ್ಪಿಗಳ ಹೆಸರುಗಳನ್ನು ಇತಿಹಾಸ ತಜ್ಞರು ಗುರುತಿಸಿದ್ದಾರೆ.
ಆದರೆ, ಅವರ ಕುರಿತು ವಿಸ್ತೃತ ಮಾಹಿತಿ, ಅವರ ಕಲಾಪ್ರೌಢಿಮೆಯ ಕುರಿತಾದ ವಿವರವಾದ ಮಾಹಿತಿ ಲಭ್ಯವಿಲ್ಲ ಎಂದೇ ಹೇಳಬೇಕು. ಆ ಅಸಾಧಾರಣ ಶಿಲ್ಪಿ ಗಳನ್ನು ನಾವು, ಜನಸಾಮಾನ್ಯರು, ವಿಶ್ವಮಟ್ಟದ ಪ್ರವಾಸಿಗರು ತಿಳಿಯಬೇಕಿದೆ, ಅವರಿಗೆ ಗೌರವ ಸಲ್ಲಿಸಲೇ ಬೇಕಿದೆ. ಅಂತಹ ಗೌರವಕ್ಕೆ ಅವರು ಅರ್ಹರು. ಜಗತ್ತಿನ ಇಂತಹ ಇತರ ಕೆಲವು ಕಲಾವಿದರು ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ, ಆ ಮೂಲಕ ಅವರ ದೇಶಗಳಿಗೆ ಗೌರವ, ಹೆಮ್ಮೆ ತಂದಿದ್ದಾರೆ. ಉದಾಹರಣೆಗೆ ಮೈಕೆಲೇಂಜಲೋ ಜಗತ್ತಿನ ಪ್ರಖ್ಯಾತ ಕಲಾವಿದರಲ್ಲೊಬ್ಬ. ಇಟೆಲಿ ದೇಶದಲ್ಲಿ ಹುಟ್ಟಿದ ಈತನ ಕಾಲ ೧೪೭೫-೧೫೬೪.
ಈತನ ಕೌಶಲದ ಕುರಿತು, ಕಲಾ ಚತುರತೆ ಕುರಿತು ಎರಡು ಮಾತಿಲ್ಲ. ಮುಖ್ಯವಾಗಿ ಅಮೃತ ಶಿಲೆಯನ್ನು ಉಪಯೋಗಿಸಿ, ಶಿಲ್ಪ ಕಲಾಕೃತಿಗಳನ್ನು ರಚಿಸುವು ದರಲ್ಲಿ ಇತ ನಿಷ್ಣಾತ. ಬೈಬಲ್ ಕಥೆ ಗಳಲ್ಲಿ ಬರುವ ಡೇವಿಡ್ ಎಂಬ ರಾಜನ, ೧೭ ಅಡಿ ಎತ್ತರದ ನಗ್ನ ಶೈಲಿಯ ಶಿಲ್ಪವು ಈತನ ಅತಿ ಪ್ರಖ್ಯಾತ ಶಿಲ್ಪ. ಇದರ ಜತೆ, ಕ್ರಿಸ್ತನ ಜೀವನದ ವಿವಿಧ ಘಟ್ಟಗಳನ್ನು ಬಿಂಬಿಸುವ ಹಲವು ಕಲಾ ಕೃತಿಗಳನ್ನು ಈತ ರಚಿಸಿದ್ದಾನೆ. ವೆಟಿಕನ್‌ನ ಸೈಂಟ್ ಪೀಟರ್ ಬೆಸೆಲಿಕಾ ಚರ್ಚ್‌ನ ಪ್ರಖ್ಯಾತ ಗುಮ್ಮಟವನ್ನು ವಿನ್ಯಾಸ ಮಾಡಿದವನು ಮೈಕೆಲೇಂಜೆಲೋ.
ಈತ ರಚಿಸಿದ ಹತ್ತೈವತ್ತು ಶಿಲ್ಪಗಳ ಅಧ್ಯಯನ ನಡೆದಿದೆ. ಹದಿನೈದು ಮತ್ತು ಹದಿನಾರನೆಯ ಶತಮಾನದಲ್ಲಿ ಈತ ಯಾವ ವರ್ಷ ಎಲ್ಲೆಲ್ಲಿ ಇದ್ದ, ಯಾವ ಶಿಲ್ಪವನ್ನು ರಚಿಸಿದ, ವ್ಯಾಟಿಕನ್‌ನಲ್ಲಿ ಏನೇನು ಮಾಡಿದ, ಈತನ ಗುರು ಯಾರು, ಶಿಷ್ಯರು ಯಾರು, ಸಮಕಾಲೀನರು ಯಾರು, ಈತನ ಹೆಂಡತಿಯ ಹೆಸರೇನು ಮೊದಲಾದ ನಾನಾ ರೀತಿಯ ವಿವರಗಳು ದಾಖಲಾಗಿವೆ. ಈತ ಜೀವಿಸಿರುವಾಗಲೇ ಈತನ ಬದುಕಿನ ವಿವರ ನೀಡುವ ಮೂರು ಜೀವನ ಚರಿತ್ರೆಗಳು ರಚನೆಗೊಂಡಿದ್ದವು!
ಅಮೃತ ಶಿಲೆಯಲ್ಲಿ ನಾನಾ ಶಿಲ್ಪಗಳನ್ನು ರಚಿಸಿದ ಮೈಕೆಲೇಂಜೆಲೋ, ಬೃಹತ್ ಗಾತ್ರದ ವರ್ಣ ಚಿತ್ರಗಳನ್ನೂ ರಚಿಸಿದ್ದಾನೆ. ಅವುಗಳ ಉದ್ದ, ಅಗಲ, ವರ್ಣ ವಿನ್ಯಾಸ, ವಿಷಯ, ಸಂದೇಶ ಎಲ್ಲವೂ ದಾಖಲಾಗಿದ್ದು, ಅಧ್ಯಯನಕ್ಕೆ ಒಳಪಟ್ಟಿವೆ. ಈತನ ಬಹಪಾಲು ಚಿತ್ರಗಳು ಧಾರ್ಮಿಕ ವಿಚಾರದ ಹಿನ್ನೆಲೆಯವು. ಕೆ.ವಿ.
ಅಯ್ಯರ್ ಅವರು ‘ರೂಪದರ್ಶಿ’ ಕಾದಂಬರಿಯ ಮೂಲಕ ಇಟೆಲಿಯ ಈ ಕಲಾವಿದನನ್ನು ಕನ್ನಡದ ಓದುಗರಿಗೆ ಪರಿಚಯಿಸಿದ್ದಾರೆ. ಕ್ರಿಸ್ತನ ಬಾಲ್ಯದ ಚಿತ್ರ ವೊಂದನ್ನು ರಚಿಸಲು ಮೈಕೆಲೇಂಜಲೋ ಸೂಕ್ತ ರೂಪದರ್ಶಿಯನ್ನು ಹುಡುಕುವ ಕಥನ ಹೊಂದಿರುವ ಈ ಕಾದಂಬರಿ ನಮ್ಮಲ್ಲಿ ಸಾಕಷ್ಟು ಜನಪ್ರಿಯ. ಈಗ ನಮ್ಮ ಮಕ್ಕಳಿಗೆ, ಜನಸಾಮಾನ್ಯರಿಗೆ ಒಂದು ಪ್ರಶ್ನೆ ಕೇಳಬೇಕೆನಿಸುತ್ತಿದೆ.
ನಮಗೆ ಮೈಕೆಲೇಂಜಲೋ ಗೊತ್ತು. ಆದರೆ ನಮ್ಮ ರಾಜ್ಯದ ಕಲಾವಿದ, ಶಿಲ್ಪಿ ಮಲ್ಲಿತಮ್ಮನ ಜೀವನದ ವಿವರ ಗಳು ಗೊತ್ತಾ? ದಾಸೋಜ ಗೊತ್ತಾ? ಅವರು
ರಚಿಸಿದ ಎಲ್ಲಾ ಕಲಾಕೃತಿಗಳ ವಿವರವಾದರೂ ಗೊತ್ತಾ? ಹೋಗಲಿ, ಹಂಪೆಯ ವಿಶ್ವವಿಖ್ಯಾತ ವಿಠ್ಠಲ ದೇಗುಲ ನಿರ್ಮಿಸಿದ ಎಲ್ಲಾ ಶಿಲ್ಪಿಗಳ ಹೆಸರು ಗೊತ್ತಾ? ಹೆಚ್ಚಿನವರು ಇಲ್ಲ ಎಂದೇ ಹೇಳಿಯಾರು. ಮಲ್ಲಿತಮ್ಮ, ದಾಸೋಜ ಮೊದಲಾದವರು ಹೊಯ್ಸಳರ ಕಾಲದಲ್ಲಿದ್ದ (ಹನ್ನೆರಡು – ಹದಿಮೂರನೆಯ ಶತಮಾನ) ಮಹಾನ್ ಶಿಲ್ಪಿಗಳು.
ಆದರೆ, ಅದೇಕೋ ಅವರ ಜೀವನದ ಹೆಚ್ಚಿನ ವಿವರಗಳು ನಮ್ಮ ಜನಸಾಮಾನ್ಯರ ಅರಿವಿಗೇ ಬಂದಿಲ್ಲ, ಆ ರೀತಿ ಪರಿಚಯಿಸುವ ಕೆಲಸವನ್ನೂ ನಮ್ಮವರು ಮಾಡಿಲ್ಲ. ಇಟೆಲಿಯ ಮೈಕೆಲೇಂಜೆಲೋ ಜನಿಸಿದ ಊರು, ಅವರ ತಂದೆ ತಾಯಿಯರ ಕೆಲಸ, ಅವರ ಕಾಲ, ಹೆಂಡತಿ, ಮಕ್ಕಳ ವಿವರ, ಆತ ರಚಿಸಿದ ಎಲ್ಲಾ ಕಲಾಕೃತಿಗಳ ಕೂಲಂಕುಶ ವಿವರ ನಮಗೆ ದೊರೆಯುತ್ತದೆ. ಆತ ಯಾವ ಶಿಲ್ಪವನ್ನು ರಚಿಸಿದ, ಅದರ ಕಾಲ, ಎತ್ತರ, ವಿಶೇಷತೆ ಎಲ್ಲವನ್ನೂ ದಾಖಲಿಸಲಾಗಿದೆ,
ಸಂಶೋಽಸಲಾಗಿದೆ. ಇಟೆಲಿಯ ಇನ್ನೋರ್ವ ಮಹಾನ್ ಕಲಾವಿದ ಲಿಯೋನಾರ್ಡೊ ಡ ವಿನ್ಸಿ (೧೪೫೨-೧೫೧೯)ಯ ಜೀವನದ ವಿವರ, ಆತ ರಚಿಸಿದ ಮೊನಾಲಿಸಾ, ಲಾಸ್ಟ್ ಸಪ್ಪರ್ ಮೊದಲಾದ ಕಲಾಕೃತಿಗಳ ವಿವರ ನಮಗೆ ಗೊತ್ತು.
ಅವರ ಮತ್ತು ಅವರಂತಹ ಹಲವು ಪ್ರಮುಖ ಯುರೋಪಿಯನ್ ವ್ಯಕ್ತಿಗಳು ನಮ್ಮ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಆಗಾಗ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಹಣಿಕಿ ಹಾಕುತ್ತಿರುತ್ತಾರೆ. ಇಟೆಲಿಯ ಆ ಮಹಾನ್ ಕಲಾವಿದರ ಜೀವನದ ವಿವರಗಳನ್ನು, ಕಲಾಕೃತಿಯ ವಿವರಗಳನ್ನು ನಮ್ಮ ಮಕ್ಕಳು ಬಾಯಿಪಾಠ ಮಾಡಿ, ಉರು ಹೊಡೆಯುತ್ತಾರೆ. ಆದರೆ ಅದೇ ನಮ್ಮ ಮಕ್ಕಳಿಗೆ ಕನ್ನಡನಾಡಿನಲ್ಲಿ ಅಸಾಧಾರಣ ಕೆಲಸ ಮಾಡಿದ್ದ ಮಲ್ಲಿತಮ್ಮ, ದಾಸೋಜ ಮೊದಲಾದ ಕಲಾವಿದರು
ಸಾಧನೆಯ ವಿವರಗಳು ಗೊತ್ತಿಲ್ಲ. ದೂರದ ಸೈಂಟ್ ಪೀಟರ್ ಬೆಸಿಲಿಕಾದ ಗುಮ್ಮಟ ನಿರ್ಮಿಸಿದವರ (ಮೈಕೆಲೇಂಜೆಲೊ) ವಿವರ ಗೊತ್ತು, ಆದರೆ ಹಂಪೆಯ ಸಂಗೀತ ಕಂಬಗಳನ್ನು ನಿರ್ಮಿಸಿದ ಕಲಾವಿದ ಹೆಸರು ಗೊತ್ತಿಲ್ಲ!
ನಮ್ಮ ಪಠ್ಯಗಳು ಯುರೋಪಿನ ಕಲಾವಿದರ ಪರಿಚಯ ಮಾಡಿಕೊಡುತ್ತವೆ, ಆದರೆ ಹಂಪೆಯ ಕಲ್ಲಿನ ರಥದ ಪೂರ್ಣಸ್ವರೂಪದ ಪರಿಚಯ, ಅದನ್ನು ಕೆತ್ತಿನ
ಶಿಲ್ಪಿಗಳ ಹೆಸರು ಮೊದಲಾದ ವಿವರಗಳ ಪರಿಚಯ ಮಾಡಿಕೊಡುವುದಿಲ್ಲವಲ್ಲ! ಹಾಗೆಂದು, ಅಂತಹ ವಿವರಗಳು ಸ್ವಲ್ಪವೂ ಲಭ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇತಿಹಾಸ ತಜ್ಞರು ಸಾಕಷ್ಟು ವಿವರಗಳನ್ನು ಸಂಶೋಧಿಸಿದ್ದಾರೆ. ಆದರೆ ಜನರಿಗೆ ತಲುಪಿಸುದ, ಆ ಮೂಲಕ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ
ಕೆಲಸ ಸಮರ್ಪಕವಾಗಿ ಆಗಿಲ್ಲ. ಉದಾಹರಣೆಗೆ, ಹೊಯ್ಸಳ ವಾಸ್ತುರಚನೆಗಳನ್ನು ನಿರ್ಮಿಸಿದ ಶಿಲ್ಪಿಗಳ ವಿಚಾರವನ್ನೇ ತೆಗೆದುಕೊಂಡರೆ, ಅವು ಅಲ್ಲಲ್ಲಿ ಚದುರಿ ಹೋಗಿವೆ ಮತ್ತು ಅಂತಹ ಅಪರೂಪದ ವಿವರಗಳನ್ನು ಒಟ್ಟಿಗೆ ಕ್ರೋಢೀಕರಿಸಿ, ಅಧ್ಯಯನ ನಡೆಸಿ, ಆ ವಿವರಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಕೆಲಸ
ಮಾಡಿಕೊಡಲಾಗಿಲ್ಲ, ಅಷ್ಟೆ.
ಹೊಯ್ಸಳ ಶಿಲ್ಪಿಗಳ ಕುರಿತು ಷ.ಶೆಟ್ಟರ್ ಮತ್ತು ಇತರ ಹಲವು ಇತಿಹಾಸ ತಜ್ಞರು ಅಧ್ಯಯನ ಮಾಡಿ, ತಮ್ಮ ಬರೆಹಗಳಲ್ಲಿ ದಾಖಲಿಸಿದ್ದಾರೆ. ವಿದ್ವಾಂಸರಾದ
ಷ. ಶೆಟ್ಟರ್ ಅವರು ಮಲ್ಲಿತಮ್ಮನ ಜೀವನ ಮತ್ತು ಸಾಧನೆಯ ಹಲವು ವಿವರಗಳನ್ನು ತಮ್ಮ ‘ಸ್ಥಪತಿ’ ಪುಸ್ತಕದಲ್ಲಿ ಮತ್ತು ಇತರೆಡೆ ದಾಖಲಿಸಿದ್ದಾರೆ. ಆದರೆ ಮಲ್ಲಿತಮ್ಮನಂತಹ ಅಸಾಧಾರಣ ಶಿಲ್ಪಿಯ ವಿಚಾರವಾಗಿ ನಮ್ಮ ಜನಸಾಮಾನ್ಯರಿಗೆ (ಲೇಮ್ಯಾನ್) ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ಇಲ್ಲ. ಆತನು ಒಬ್ಬ ಶಿಲ್ಪಿ ಎಂದು ಗೊತ್ತೇ ಹೊರತು, ಅವನೊಬ್ಬ ಅಸಾಧಾರಣ ಕಲಾವಿದ ಎಂಬ ಅರಿವಿಲ್ಲ. ಅಂತಹ ಅಸಾಧಾರಣ ಕಲಾವಿದರ ಸಾಧನೆಯ ಕುರಿತು ತಿಳಿಸುವ ಪಠ್ಯಗಳನ್ನು ನಮ್ಮ ಪಠ್ಯಗಳಲ್ಲಿ ಸೇರಿಸಬೇಕಿತ್ತು, ಆ ಮೂಲಕ ನಮ್ಮ ಮಕ್ಕಳಿಗೆ ತಿಳಿಸಬೇಕಿತ್ತು.
ದೂರದ ಇಟೆಲಿಯ ಕಲಾಕೃತಿಗಳ ಅಂಕಿಅಂಶಗಳನ್ನು ಉರು ಹೊಡೆಯುವ ನಮ್ಮ ಮಕ್ಕಳು, ಅದರ ಜತೆಯಲ್ಲೇ ಮಲ್ಲಿತಮ್ಮ, ದಾಸೋಜ ಮೊದಲಾದ
ಮಹಾನ್ ಶಿಲ್ಪಿಗಳ ವಿವರಗಳನ್ನು ಬಾಯಿಪಾಠ ಮಾಡಬೇಕಿತ್ತು. ಹೊಯ್ಸಳ ಶಿಲ್ಪಿ ಮಲ್ಲಿತಮ್ಮನ ಕೆಲವು ವಿವರ ಗಳನ್ನು ನೋಡೋಣ. ಬೇಲೂರಿನ ಚನ್ನಕೇಶವ
ದೇವಾಲಯ ನಿರ್ಮಾಣ ಕಾಲದಲ್ಲಿ (೧೧೧೭) ಶಿಲ್ಪಿ ಮಲ್ಲಿತಮ್ಮ ಜನಿಸಿರಲಿಲ್ಲ. ಆತನು ಕೆಲಸ ಮಾಡಿದ ಮೊದಲ ದೇಗುಲ ಅಮೃತಾಪುರದ ದೇಗುಲ (೧೧೯೬-೧೨೦೬). ಹಾರನಹಳ್ಳಿ, ಸೋಮನಾಥಪುರ (೧೨೫೮), ಅಮೃತಾಪುರ, ಗೋವಿಂದನ ಹಳ್ಳಿ, ನುಗ್ಗೆಹಳ್ಳಿ, ಜಾವಗಲ್ (೧೨೪೬) ಮೊದಲಾದ ಹಲವು ದೇಗುಲಗಳ ರಚನೆಯಲ್ಲಿ ಈತನ ಅಪಾರ ಶ್ರಮವಿದೆ.
ಸೋಮನಾಥಪುರ ದೇಗುಲದ ನಿರ್ಮಾಣದ ಸಮಯದಲ್ಲಿ ಈತ ಒಬ್ಬ ಪರಿಣಿತ, ಹಿರಿಯ ಶಿಲ್ಪಿ ಎಂದೇ ಹೆಸರಾಗಿದ್ದ ಎಂದು ಷ. ಶೆಟ್ಟರ್ ದಾಖಲಿಸಿದ್ದಾರೆ. ಹೊಯ್ಸಳ ಶೈಲಿಯಲ್ಲಿ ರಚನೆ ಗೊಂಡ ಒಟ್ಟು ಏಳು ಶಿಲಾ ದೇಗುಲಗಳ ನಿರ್ಮಾಣದಲ್ಲಿ ಈತನ ಕೊಡುಗೆ ಇದೆ. ಇವನ ಕುರಿತು ಷ. ಶೆಟ್ಟರ್ ಬರೆದಿರುವುದು ಹೀಗೆ:
‘ಮಲ್ಲಿತಮ್ಮನು ಕ್ರಿ.ಶ.೧೩ನೆಯ ಶತಮಾನದ ಹೊಯ್ಸಳ ವಾಸ್ತುಶಿಲ್ಪಿಗಳಲ್ಲಿ ಸರ್ವಶ್ರೇಷ್ಠ ನೆಂಬುದು ಸ್ಪಷ್ಟವಾಗಿದೆ. ತನ್ನ ಜೀವಿತಾವಧಿಯ ಆರು ಸಕ್ರಿಯ ದಶಕಗಳಲ್ಲಿ ಆತ ಆ ಶತಮಾನದಲ್ಲಿ ನಿರ್ಮಿತವಾದ ಬಹುತೇಕ ಎಲ್ಲ ಮುಖ್ಯ ವಿಷ್ಣು ಮಂದಿರಗಳ ನಿರ್ಮಾಣನದಲ್ಲಿ ಭಾಗಿಯಾಗಿದ್ದಾನೆ.
ಮಲ್ಲಿತಮ್ಮನು ವೈಷ್ಣವಮೂರ್ತಿ ಶಿಲ್ಪ ಶಾಸ್ತ್ರದಲ್ಲಿ ಪರಮ ಜ್ಞಾನವನ್ನು ಪಡೆದವನಾಗಿದ್ದನು. ಅವನು ನಿರ್ಮಿಸಿದ ೮೪ ವಿಷ್ಣು ವಿಗ್ರಹಗಳು ಆಗಮ ಶಾಸ್ತ್ರಜ್ಞರು ಅವುಗಳೊಂದಿಗೆ ತಮ್ಮ ಜ್ಞಾನವನ್ನು ಹೋಲಿಸಿಕೊಂಡು ಒರೆಗೆ ಹಚ್ಚಿಕೊಳ್ಳಲು ಸವಾಲುಗಳಾಗಿದ್ದವು. (ಹಾರನ ಹಳ್ಳಿಯಲ್ಲಿ ೨೮, ನುಗ್ಗಿಹಳ್ಳಿಯಲ್ಲಿ ೧೮, ಜಾವ
ಗಲ್ಲಿನಲ್ಲಿ ೧೩, ಸೋಮನಾಥಪುರದಲ್ಲಿ ೨೨ ವಿಷ್ಣ ವಿಗ್ರಹಗಳಿವೆ.). ಜಾವಗಲ್ಲಿನ ಮಂದಿರವು ಕ್ರಿ.ಶ.೧೨೫೦ರಲ್ಲಿ ಮುಕ್ತಾಯವಾಗಿದ್ದಿತು. ಒಂದು ವೇಳೆ ಮಲ್ಲಿತಮ್ಮನು ಇದರ ಬಳಿಕ ಒಂದು ಅಥವಾ ಎರಡು ವರ್ಷಗಳ ನಂತರ ಸೋಮನಾಥಪುರವನ್ನು ತಲುಪಿದರೆ, ಕ್ರಿ.ಶ.೧೨೬೮ರಲ್ಲಿ ಅವನಿಂದ ನಿರ್ಮಾಣ ಗೊಂಡಿರುವ ಕೇಶವ ಮಂದಿರವು ಅತಿ ದೊಡ್ಡ ಮತ್ತು ಅತಿ ಸುಂದರ ವಾದ ಮಂದಿರವಾಗಿದ್ದು, ಸುಮಾರು ಒಂದು ದಶಕದ ಅವಧಿಯಲ್ಲಿ ಪೂರ್ಣಗೊಂಡಿರ
ಬಹುದು. (‘ಸ್ಥಪತಿ’ ಪುಸ್ತಕದಲ್ಲಿ ಪುಟ ೨೦೨ರಿಂದ ೨೦೭ರಲ್ಲಿ ಮಲ್ಲಿತಮ್ಮನ ಕುರಿತು ಬರೆದ ಸಂಶೋಧನಾತ್ಮಕ ಮಾಹಿತಿಯ ಆಯ್ದ ಭಾಗ).
ಹಂಪೆಯ ಪ್ರಖ್ಯಾತ ರಾಜ ಕೃಷ್ಣದೇವರಾಯ ಆಳಿದ ಕಾಲದಲ್ಲಿ (೧೫೦೯-೧೫೨೯) ಹಂಪೆಯು ರೋಮ್ ನಗರಕ್ಕಿಂತ ವಿಸ್ತಾರವಾಗಿತ್ತು ಮತ್ತು ವಿಶ್ವದ ಅತಿ ದೊಡ್ಡ ನಗರಗಳಲ್ಲಿ ಒಂದಾಗಿತ್ತು ಎಂದು ದಾಖಲಾಗಿದೆ. ಆ ಸಮಯದಲ್ಲಿ ಇಟೆಲಿ ಯಲ್ಲಿದ್ದ ಮೈಕೆಲೇಂಜಲೋ (೧೪೭೫-೧೫೬೪) ಮತ್ತು ಲಿಯೋನಾರ್ಡೊಡ ವಿಂಚಿ (೧೪೫೨- ೧೫೧೯) ಮೊದಲಾದ ಕಲಾವಿದರ ಜೀವನ, ಸಾಧನೆಗಳು ಎಲ್ಲೆಡೆ ಲಭ್ಯ. ಆದರೆ, ಅದೇ ಕಾಲದ ಹಂಪೆಯ ಕಲಾವಿದರ, ಶಿಲ್ಪಿಗಳ ವಿವರಗಳು ನಮಗೆ ಪರಿಚಿತವಿಲ್ಲ!
ಹಂಪೆಯ ಉಚ್ಛ್ರಾಯ ಕಾಲದಲ್ಲಿ, ದೂರದ ಇಟೆಲಿಯಲ್ಲಿ ರಚನೆಗೊಂಡ ಕಲಾಕೃತಿಗಳು ಇಂದಿಗೂ ಬಹು ಪಾಲು ಸುರಕ್ಷಿತವಾಗಿವೆ, ಆದರೆ ಹಂಪೆಯನ್ನು ‘ಹಾಳು ಹಂಪೆ’ ಎಂದು ಪ್ರಚುರಪಡಿಸಿ, ಅಲ್ಲಿನ ಕಲಾಕೃತಿಗಳನ್ನು ಪಳೆಯುಳಿಕೆಯನ್ನಾಗಿಸಿದ್ದೇವೆ! ಕಲಾವಿದ ಮೈಕೆಲೇಂಜೆಲೋವನ್ನು ಹೊಗಳುವುದು ಖಂಡಿತಾ ತಪ್ಪಲ್ಲ. ಆದರೆ ಬೇಲೂರಿನ ಮದನಿಕೆಯ ವಿಗ್ರಹಗಳನ್ನು ರಚಿಸಿದ ಶಿಲ್ಪಿ, ಹಂಪೆಯ ಸಂಗೀತ ಕಂಬಗಳನ್ನು ಮತ್ತು ಕಲ್ಲಿನ ರಥವನ್ನು ರಚಿಸಿದ ಕಲಾವಿದನ ಹೆಸರುಗಳು
ನಮ್ಮ ವಿದ್ಯಾರ್ಥಿಗಳಿಗೆ ಇಂದಿಗೂ ಗೊತ್ತಿಲ್ಲ!
ಇದೊಂದು ವಿಸ್ಮಯ ಎನಿಸುವುದಿಲ್ಲವೆ! ಇದನ್ನು ನಮ್ಮ ಕಾಲದ ಸಾಂಸ್ಕೃತಿಕ ವಿಸ್ಮೃತಿ ಎಂದೂ ಕರೆಯಬಹುದು. ಹನ್ನೆರಡು ಮತ್ತು ಹದಿಮೂರನೆಯ ಶತಮಾನದ ಮಹಾನ್ ಶಿಲ್ಪಿ ಮಲ್ಲಿತಮ್ಮನ ಸಾಧನೆಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುವ ಮೂಲಕ, ಮಲ್ಲಿತಮ್ಮನ ಅಗಾಧ ವೈಯಕ್ತಿಕ ಸಾಧನೆಯನ್ನು ಎತ್ತಿ ಹೇಳುವ ಮೂಲಕ, ನಮ್ಮ ನಾಡಿನ ಎಲ್ಲಾ ಶಿಲ್ಪಿಗಳಿಗೆ ಗೌರವ ಸೂಚಿಸುವ ಮತ್ತು ನಮ್ಮ ಪರಂಪರೆಯ ಕುರಿತು ಅಭಿಮಾನ ಬೆಳೆಸುವ ಕೆಲಸ ಇನ್ನಾದರೂ ಆಗಬೇಕಿದೆ.