Saturday, 23rd November 2024

ನಮ್ಮದು ಸರಸ್ವತೀ ತೀರದ ಆರ್ಯ ನಾಗರಿಕತೆ

ದಾಸ್ ಕ್ಯಾಪಿಟಲ್

dascapital1205@gmail.com

ಸದ್ಯೋ ಭವಿಷ್ಯತ್ತಿನ ಭಾರತಕ್ಕೆ ಅತೀ ತುರ್ತಾಗಿ ಸರಿಹೊತ್ತಿನ ಗಳಿಗೆಯಲ್ಲಿ ಬೇಕಾಗಿರು ವುದು ಆಕ್ರಮಣಕಾರಿ ಗುಣಗಳು, ಅತಿ ಎತ್ತರದಲ್ಲಿ ವಿಹರಿಸುವ ಆದರ್ಶಾತ್ಮಕತೆ, ನಿರ್ಭಯ ಪ್ರತಿರೋಧ, ದಿಟ್ಟಸೃಷ್ಟಿ, ಎದೆಗುಂದದ ಆಕ್ರಮಣ. ನಮ್ಮಲ್ಲಿ ತಾಮಸಿಕ ಪ್ರವೃತ್ತಿ, ಜಡತೆ, ಬಹಳಷ್ಟು ತುಂಬಿದೆ.

ನಾವು ಮತ್ತೊಂದು ಸ್ವಭಾವ ಹಾಗೂ ತರಬೇತಿ ರೂಪಿಸಿಕೊಳ್ಳಬೇಕಾಗಿದೆ, ಮನಸ್ಸಿನಲ್ಲಿ ಇನ್ನೊಂದು ಬಲವಂತದ ಅಭ್ಯಾಸ ಬೆಳೆಸಿಕೊಳ್ಳಬೇಕಾಗಿದೆ; ನಮ್ಮ ಮೇಲಾಗುವ ದುರಾ ಕ್ರಮಣಗಳನ್ನು ಎದುರಿಸಲು! ಸದ್ಯದ ಸಂದರ್ಭಕ್ಕೆ ನಾವು ಡಾಂಟನ್ನಿನ ಶಕ್ತ್ಯುತ್ಸಾಹದ ಧ್ಯೇಯ ವಾಕ್ಯವನ್ನಳವಡಿಸಿಕೊಳ್ಳಬೇಕು- ನಮಗೆ ಬೇಕಾಗಿರುವುದು, ಎಲ್ಲಕ್ಕಿಂತ ಮಿಗಿಲಾಗಿ ನಾವು ಕಲಿಯಬೇಕಿರುವುದು, ಧೈರ್ಯ ತೋರುವುದು, ಮತ್ತೆ ಮತ್ತೆ ಧೈರ್ಯ ತೋರುವುದು ಹಾಗೂ ಧೈರ್ಯ ತೋರುತ್ತಲೇ ಇರುವುದು.

ಪ್ರತಿಯೊಬ್ಬ ಮನುಷ್ಯನಿಗೆ ತನ್ನ ದೇಶ, ಅದರ ಸಾಹಿತ್ಯ, ಸಂಪ್ರದಾಯಗಳು, ಪದ್ಧತಿಗಳು ಹಾಗೂ ರೀತಿ-ರಿವಾಜುಗಳ ಬಗ್ಗೆ ಇರುವ ಸಹಜವಾದ ಒಲವಿನ ಜತೆಗೆ ದೇಶಭಕ್ತಿಯು ಒಂದು ಹೆಚ್ಚಿನ ಪ್ರಚೋದನೆಯನ್ನು ಹೊಂದಿದೆ. ಅದು ರಾಷ್ಟ್ರೀಯ ನಾಗರಿಕತೆಯ ಶ್ರೇಷ್ಠತೆಯನ್ನು ಸ್ಮರಿಸುವುದರಲ್ಲಿದೆ. ಆಂಗ್ಲರು ಇಂಗ್ಲೆಂಡ್ ದೇಶವನ್ನು ಅದರ ಎಲ್ಲ ದೋಷಗಳೊಂದಿಗೆ ಪ್ರೀತಿಸುವುದಾದರೆ ನಾವೇಕೆ ಭಾರತವನ್ನು ಪ್ರೀತಿಸಬಾರದು? ವಿದೇಶೀ ದಾಳಿಗಳು ಅದರ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತ ಗೊಳಿಸುವವರೆಗೂ ಭಾರತದ ದೋಷಗಳು ಕುಗ್ಗಿ ಕನಿಷ್ಠ ಮಟ್ಟದಲ್ಲಿದ್ದವು. ಆದರೆ, ಇಂಥ ನಾಗರಿಕತೆಯ ಧ್ವಜವನ್ನು ಇಡೀ ಜಗತ್ತಿನಲ್ಲಿ ಮೆರೆಸುವ ಸಹಜ ಆಕಾಂಕ್ಷೆಯಿಂದ ಬೀಗುವ ಬದಲು ನಾವು ನಮ್ಮ ತಾಯ್ನೆಲದ ದೇಶದ ಸಮಗ್ರತೆಯನ್ನು ಕಾಯ್ದು ಕೊಳ್ಳಲು ಅಸಮರ್ಥರಾಗಿದ್ದೇವೆ.

ಇದು ನಂಬಿಕೆ ದ್ರೋಹ, ಇದು ಅನರ್ಹತೆಯ ಪರಮಾವಧಿ. ಈ ಅನರ್ಘ್ಯ ಆಸ್ತಿಗೆ ನಾವು ಏನನ್ನೂ ಸೇರಿಸಲಾಗಿಲ್ಲ; ಇದಕ್ಕೆ
ವಿರುದ್ಧವಾಗಿ ನಾವು ನಮ್ಮ ಮತ್ತು ಮುಂಬರುವ ತಲೆಮಾರುಗಳನ್ನು ಈ ಸಕ್ರಮ ಆಸ್ತಿಯ ಪೂರ್ಣ ಅನುಭೋಗದಿಂದ
ವಂಚಿತರನ್ನಾಗಿ ಮಾಡಬಾರದು. ಬ್ರಿಟಿಷ್ ಸಾಮ್ರಾಜ್ಯವಾದವನ್ನು ಸಮರ್ಥಿಸಿಕೊಂಡು, ತಮ್ಮ ರಾಷ್ಟ್ರದ ಉದಾತ್ತ ಕಾರ್ಯ ಸಾಧನೆಯಾದ ಅತ್ಯುನ್ನತ ರೀತಿಯ ನಾಗರಿಕತೆಯ ಪ್ರಸಾರ ಮತ್ತು ಪರರಾಷ್ಟ್ರಗಳ ಆಳ್ವಿಕೆಯ ಉಪಕೃತಿಗಳಿಂದ ಒಂದು ನಾಗರಿಕ ಸಮುದಾಯದ ಸುಸಂಸ್ಕೃತ ಸದಸ್ಯರಿಗಾಗುವ ನ್ಯಾಯಯುತ ಹೆಮ್ಮೆಯ ಬಗ್ಗೆ ಮಾತನಾಡಿದ್ದ ಬ್ರಿಟಿಷ್ ಲೇಖಕ ಸಿಡ್ಗ್ ವಿಕ್‌ನ ಪ್ರಕಾರ ಭೌತಿಕ ವಿಸ್ತರಣೆಯು ಅಧ್ಯಾತ್ಮಿಕ ವಿಸ್ತರಣೆಯ ಆಕಾಂಕ್ಷೆಯಿಂದ ಹುಟ್ಟುತ್ತದೆ ಮತ್ತು ಇಂಥ ಉಪಕ್ರಮವನ್ನು ಇತಿಹಾಸವೂ ಬೆಂಬಲಿಸುತ್ತದೆ.

ಹಾಗಿದ್ದರೆ ಇಡೀ ಜಗತ್ತಿನಲ್ಲಿ ಭಾರತವೇಕೆ ಪ್ರಧಾನ ಶಕ್ತಿಯಾಗಬಾರದು? ಇದು ಸ್ವಾಮೀ ವಿವೇಕಾನಂದರ ಕಾರ್ಯಸರಣಿ
ಯ ಯೋಜನೆಯಾಗಿತ್ತು. ಭಾರತದ ಅಧ್ಯಾತ್ಮಿಕತೆಯ ಮಹೋನ್ನತತೆಯ ಪ್ರeಯು ದೇಶಕ್ಕೆ ತನ್ನ ಹಿರಿಮೆಯ ಅರಿವನ್ನು ಮತ್ತೊಮ್ಮೆ ಮೂಡಿಸಬಹುದು. ಇಂಥ ಹಿರಿಮೆಯ ಪ್ರಜ್ಞೆಯು ಎಲ್ಲ ದೇಶಭಕ್ತಿಯ ಮುಖ್ಯ ಉಣಿಸು. ಇದು ಮಾತ್ರ ಎಲ್ಲ ಕೀಳರಿಮೆಯನ್ನು ಕೊನೆಗಾಣಿಸಿ ಕಳೆದು ಹೋದದ್ದನ್ನು ಮತ್ತೆ ಗಳಿಸುವ ಜ್ವಲಂತ ಅಭೀಪ್ಸೆಯನ್ನು ಉದ್ದೀಪಿಸಬಲ್ಲದು.

೧೯೪೭ರಲ್ಲಿ ನಮಗೆ ಬ್ರಿಟಿಷರಿಂದ ಬಂದದ್ದು ರಾಜಕೀಯ ಸ್ವಾತಂತ್ರ್ಯವೇನೋ ಅಹುದು. ಆದರೆ ಬೌದ್ಧಿಕವಾಗಿ ಇನ್ನೂ ನಾವು ಬ್ರಿಟಿಷರ ತೊತ್ತುತನದಿಂದ ಹೊರಬಂದಿಲ್ಲ. ನಾವು ಅಳವಡಿಸಿಕೊಂಡಿರುವ ಶಿಕ್ಷಣ ವಿಧಾನವನ್ನು ರೂಪಿಸಿದವರು ಬ್ರಿಟಿಷರೇ. ಎಪ್ಪತ್ತು ವರ್ಷಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ನಮ್ಮ ಶೈಕ್ಷಣಿಕ ವಿನ್ಯಾಸವನ್ನು ಚಾಲನೆಗೆ ತಂದುಕೊಂಡಿದ್ದೇವೆ. ತಮ್ಮ ಸ್ವಾರ್ಥಕ್ಕಾಗಿ ಬ್ರಿಟಿಷರು ಮಾಡಿಕೊಂಡ ಈ ವಿಧಾನದಲ್ಲಿ ನಮ್ಮ ಭಾರತೀಯತ್ವದ ಸರ್ವನಾಶದ ಹುನ್ನಾರವಿತ್ತೆಂದು ಅಷ್ಟು ಸುಲಭವಾಗಿ ನಮಗೆ ಅರ್ಥವಾಗುವುದಿಲ್ಲ.

ಪ್ರಾಚೀನ ಭಾರತದ ಸಂಸ್ಕೃತಿ, ನಾಗರಿಕತೆಗಳನ್ನು ತುಚ್ಛೀಕರಿಸಿ, ಅವುಗಳಲ್ಲಿ ತಿರಸ್ಕಾರದ, ಹೀನಾಯದ ಭಾವವನ್ನು ಉಂಟು ಮಾಡಲು ಮೆಕಾಲೆಯಂಥವರು ಯೋಜನಾಬದ್ಧವಾಗಿ ಪ್ರಚುರಪಡಿಸಿದ ದುರ್ಬೋಧನೆಗಳೇ ನಾವು ಓದುವ ನಮ್ಮ ಚರಿತ್ರೆಯ ಪುಟಗಳಲ್ಲಿ ಇಂದಿಗೂ ಅವರು ಹಾಕಿಕೊಟ್ಟ ಮಾರ್ಗದ ಮುಂದುವರಿಯುತ್ತಿದ್ದೇವೆ. ಬಿಳಿಯರು ಬರುವ ಮೊದಲು ನಮ್ಮಲ್ಲಿ ದ್ದದ್ದು ಮತೀಯ ಮೂಢನಂಬಿಕೆಗಳ ಗಾಢ ಅಂಧಕಾರವೆಂದೂ, ಅದನ್ನು ನಿಸ್ತೇಜಗೊಳಿಸುತ್ತ ನಮ್ಮವರ ತಲೆಯಲ್ಲಿ ಅದನ್ನೇ ತುಂಬುತ್ತ ಬಂದಿರುವುದರಿಂದ ಮತ್ತು ನಾವೂ ಅದನ್ನೇ ಓದುತ್ತ, ಗುಲಾಮೀ ಮನೋಭಾವವನ್ನು ವೃದ್ಧಿಸಿಕೊಳ್ಳುತ್ತ ಜಡವಾಗಿ ಬಿಟ್ಟಿದ್ದೇವೆ.

ಅದನ್ನೇ ನಮ್ಮ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತ ಬಂದಿರುವುದರಿಂದ ಈ ಗುಲಾಮೀ ಮನೋಭಾವವೇ ನಮ್ಮಲ್ಲಿ ಅಡರಿ ಕೊಂಡಿದೆ. ಇದು ಮೆಕಾಲೆಯ ಬೌದ್ಧಿಕ ಜಾಣತನ. ಮಧ್ಯ ಏಷಿಯಾದಿಂದಲೋ, ದಕ್ಷಿಣ ರಷ್ಯಾದಿಂದಲೋ, ಇಂಡೋ ಯುರೋಪಿಯನ್ ಆರ್ಯರು ಕ್ರಿ.ಪೂ. ೧೫೦೦ರ ಆಸುಪಾಸಿನಲ್ಲಿ ಇಂಡಿಯಾದ ಮೇಲೆ ದಂಡಯಾತ್ರೆ ಮಾಡಿದರಂತೆ. ಇಲ್ಲಿದ್ದ ದ್ರಾವಿಡ ನಾಗರಿಕತೆಯನ್ನು ಧ್ವಂಸಗೊಳಿಸಿ, ದ್ರಾವಿಡ ನಗರಗಳನ್ನು ನಾಶಮಾಡಿ ಮಕ್ಕಳು ಮುದುಕರೆನ್ನದೆ ದ್ರಾವಿಡರನ್ನು ಮಾರಣಹೋಮ ಮಾಡಿ ಅವರ ಸಮಾಧಿಗಳ ಮೇಲೆ ವೇದ ಸಂಸ್ಕೃತಿಯನ್ನು ಸ್ಥಾಪಿಸಿದರಂತೆ.

ಕ್ರಿ.ಪೂ. ೧೨೦೦ ರ ಹೊತ್ತಿಗೆ ಋಗ್ವೇದವನ್ನು ರಚಿಸಿದರಂತೆ. ನಿರ್ಗತಿಕರಾದ ದ್ರಾವಿಡರು ವಿಧಿಯಿಲ್ಲದೆ ದಕ್ಷಿಣದ ಕಡೆಗೆ ಬಂದು ನೆಲೆಸಿದರಂತೆ. ಮ್ಯಾಕ್ಸ್ ಮುಲ್ಲರ್ ರಂತಹ ಪಾಶ್ಚಾತ್ಯ ವಿದ್ವಾಂಸರ ಪರಂಪರೆ ಅಸಂಬದ್ಧವಾಗಿ ಪ್ರಸಾರಮಾಡಿದ ವಿಷವಿದು. ಇದು ಸತ್ಯವೋ ಸುಳ್ಳೋ ಎಂದು ಈಗ ಸಾಬೀತು ಮಾಡುವ ಅಗತ್ಯ ಇಲ್ಲವೇ ಇಲ್ಲ. ಸತ್ಯ ಈಗ ಬಹಿರಂಗವಾಗಿದೆ. ಈ ವಾದವನ್ನು ಹುಟ್ಟುಹಾಕಿದವರಿಗೇ ಅದು ಸುಳ್ಳೆಂದು ಗೊತ್ತಿತ್ತು. ಆರ್ಯರ ದಂಡಯಾತ್ರೆಯ ಪಿತಾಮಹ ಇದೇ ಮ್ಯಾಕ್ಸ್ ಮುಲ್ಲರ್. ವೇದ ಪಂಡಿತರಾಗಿ ಅವತಾರವೆತ್ತಿದ ಮೊದಲ ಇಪ್ಪತ್ತು ವರ್ಷಗಳು ಆರ್ಯರದೇ ಪ್ರತ್ಯೇಕ ಜನಾಂಗವೆಂದು ಮುಲ್ಲರ್ ಹುಯಿಲೆಬ್ಬಿಸಿ ದಾಗ ಹಲವರು ಪ್ರಶ್ನಿಸಿದರು.

ಆಗ ಮಾತಿನ ವರಸೆಯ ಧಾಟಿ ಬದಲಿಸಿದ ಮುಲ್ಲರ್, ಆರ್ಯ ಎಂಬುದು ಪ್ರತ್ಯೇಕ ಜನಾಂಗವಲ್ಲ, ಪ್ರತ್ಯೇಕ ಭಾಷಾ ಕುಟುಂಬ ವಷ್ಟೇ ಎಂದು ಹಸಿ ಸುಳ್ಳನ್ನು ಹೇಳಿದ. ಕೆಲವರ್ಷಗಳವರೆಗೆ ಆರ್ಯಭಾಷಾವಾದವನ್ನೇ ವಾದಿಸಿದ. ದೇಶ, ಜನಾಂಗ ಮತ್ತು ಭಾಷೆಯ ವಿಚಾರದಲ್ಲಿ ಇದಮಿತ್ಥಂ ಎಂಬ ನೆಲೆಯಲ್ಲಿ ಮಾತಾಡುವುದಕ್ಕೂ ಮುಲ್ಲರ್‌ಗೆ ಸಾಧ್ಯವಾಗದೇ ಹೋದದ್ದು ಸಂಸ್ಕೃತ ಭಾಷಾ ವಿದ್ವಾಂಸ ವೇದ ಪಂಡಿತ ಎಂದು ಯೋಗ್ಯತೆಗೆ ಮೀರಿದ ಹೆಸರು ಪಡೆದ ಮುಲ್ಲರ್‌ನ ದುರಂತವರೇ ಸರಿ.

ಮುಲ್ಲರ್‌ನೊಂದಿಗೆ ಯಾರಾದರೂ ಸಂಸ್ಕೃತದಲ್ಲಿ ಮಾತನಾಡಲು ಆರಂಭಿಸಿದರೆ ಒಂಚೂರೂ ಅರ್ಥವಾಗದೆ ಜರ್ಮನಿಯ ಇಂಗ್ಲಿಷ ಆ ಸಂಸ್ಕೃತ ಪದಗಳನ್ನು ಬರೆದುಕೊಂಡು ಕೂಡಿಸಿ ಓದುತ್ತಿದ್ದ. ಸಂಸ್ಕೃತದ ಪದಗಳ ರಾಚನಿಕ ವೈಶಿಷ್ಟ್ಯ ಮತ್ತು
ವಿನ್ಯಾಸ ಅವನಿಗೇ ತಿಳಿದೇ ಇರಲಿಲ್ಲ. ಆರ್ಯರೆಂಬ ಜನಾಂಗವೇ ಇಲ್ಲವೆಂದ ಮೇಲೆ ಕೇವಲ ಅವರ ಭಾಷೆಯನ್ನು ಹಿಡಿದು ಕೊಂಡು ಕ್ರಿ.ಪೂ. 1500ರಲ್ಲಿ ಅವರು ಇಂಡಿಯಾಕ್ಕೆ ಬಂದರೆಂದೂ, ಕ್ರಿ.ಪೂ. 1200ರಲ್ಲಿ ಋಗ್ವೇದವನ್ನು ರಚಿಸಿದರೆಂದು ನೀವು ಹೇಗೆ ಹೇಳುತ್ತೀರಿ ಎಂದು ಪಂಡಿತರು ಕೇಳಿದಾಗ ಮ್ಯಾಕ್ಸ್ ಮುಲ್ಲರ್ ಪ್ರತಿಕ್ರಿಯಿಸಿದ ರೀತಿಯಿದು: ಏನೋ! ಯಾವ ವೇದ ಯಾವಾಗ ಬಂತೋ ಯಾರಿಗೆ ಗೊತ್ತು? ಅದು ಕ್ರಿ.ಪೂ. 1200 ಬಂದಿರಬಹುದು, ಕ್ರಿ.ಪೂ. 2000ದಲ್ಲಿರಬಹುದು, ಕ್ರಿ.ಪೂ. ೪೦೦೦ದಲ್ಲಿ ಇರಬಹುದು ಎಂದು.

ಆರ್ಯರೆಂಬವರು ಮಧ್ಯ ಏಷಿಯಾದಿಂದ ಬಂದು ಇಂಡಿಯಾವನ್ನು ಆಕ್ರಮಿಸಿದ ವಿದೇಶಿಯರೆಂದು ನಂಬಿಕೊಂಡೇ ಬಂದೆವು. ಅದು ಹಸಿ ಸುಳ್ಳೆಂದು ಪ್ರಪಂಚವೆಲ್ಲ ಅರ್ಥಮಾಡಿಕೊಂಡರೂ ನಮ್ಮ ಚರಿತ್ರೆಯ ಪಾಠಗಳಲ್ಲಿ ಮಾತ್ರ ಅದೇ ಪರಮ ಸತ್ಯ ವೆಂಬಂತೆ ಬರೆಯುತ್ತ ಬಂದೆವು. ನಿಜಕ್ಕೂ ಆರ್ಯರು ಹೊರಗಿನವರಲ್ಲ. ಇಲ್ಲಿಯವರೇ. ಆರ್ಯ ಸಂಸ್ಕೃತಿ ಇಲ್ಲಿಯೇ ಹುಟ್ಟಿ ಇಲ್ಲಿಯೇ ವಿಕಸಿತಗೊಂಡು ಇಲ್ಲಿಂದ ಹೊರಗಡೆಗೆ ವಿಸ್ತರಿಸಿತೇ ಹೊರತು ಹೊರಗಿಂದ ಆಮದಾಗಿದ್ದಲ್ಲ.

ಜಗತ್ತಿಗೆ ನಾಗರಿಕತೆಯನ್ನು ಕಲಿಸಿದ ಭೂಮಿಯಿದು. ವಿದೇಶೀಯರು ನಮಗೆ ನಾಗರಿಕತೆಯನ್ನು ಕಲಿಸಲು ಸಾಧ್ಯವೇ ಇಲ್ಲ. ಆರ್ಯರು ಇಲ್ಲಿಯವರೇ ಆದಮೇಲೆ ಆರ್ಯಸಂಸ್ಕೃತಿ ಇ ವಿಕಸನಗೊಂಡು ಇಲ್ಲಿಂದಲೇ ಜಗತ್ ವ್ಯಾಪಿ ಹರಡಿತೇ ವಿನಾ ಹೊರಗಿ ನಿಂದ ಬಂದ ಯಾರೋ ಕಲಿಸಿದ್ದಲ್ಲ. ಸಿಂಧು ನಾಗರಿಕತೆ ಎಂದು ಇಂಗ್ಲಿಷಿನವರು ತಿಳಿದೂ ತಿಳಿಯದೇ ಹೆಸರಿಟ್ಟರೆ ಹೊರತು ನಿಜಕ್ಕೂ ನಮ್ಮದು ಸರಸ್ವತೀ ನಾಗರಿಕತೆ. ಸರಸ್ವತಿ ಒಂದು ಕಾಲದಲ್ಲಿ ಗಂಗೆಗಿಂತಲೂ ಪವಿತ್ರವಾಗಿ ಭಾರತೀಯರು ಆರಾಧಿಸಿದ ಮಹಾನದಿ.

‘ಅಂಬಿತಮೇ ನದೀತಮೇ ದೇವೀತಮೇ’ ಎಂದು ಋಗ್ವೇದ ಋಷಿಗಳು ಹಲವು ಬಾರಿ ಸ್ತುತಿಸಿದ ಸರಸ್ವತೀ ತೀರದ ಉದ್ದಕ್ಕೂ ಆರ್ಯ ನಾಗರಿಕತೆ ಅಖಂಡವಾಗಿ ಪಸರಿಸಿತ್ತು. ಪ್ರಾಕೃತಿಕ ವೈಪರೀತ್ಯಗಳಿಗೆ ಒಳಗಾಗಿ ಮಹಾನದೀ ತನ್ನ ಮಾರ್ಗವನ್ನು  ಬದಲಾಯಿಸಿತು. ಕ್ರಮೇಣ ಒಣಗಿ ಪೂರ್ತಿಯಾಗಿ ಅದೃಶ್ಯವಾದಂತೆ ಪ್ರಾಚೀನ ಸರಸ್ವತೀ ನಾಗರಿಕತೆ ಕೂಡ ಕಾಲಾನುಕ್ರಮವಾಗಿ ಕ್ಷೀಣಿಸಿತು. ಆ ಗತವೈಭವದ ಅತೀ ಪ್ರಾಚೀನ ಕುರುಹಗಳೇ ಈಗ ಕಾಂಬೆಯಲ್ಲಿ ಹೊರಬಿದ್ದ ಪಳೆಯುಳಿಕೆಗಳು.

ಪ್ರಸ್ತುತದಲ್ಲಿ ಸಮುದ್ರ ಗರ್ಭದಲ್ಲಿದ್ದರೂ, ಒಂದು ಕಾಲದಲ್ಲಿ ಅದು ಪ್ರಾಚೀನ ನದೀ ನಾಗರಿಕತೆಯಲ್ಲಿ ಅಂತರ್ಭಾಗವಾಗಿತ್ತೆಂದು ಶಾಸೀಯ ಸಂಶೋಧನೆಗಳಿಂದ ಸ್ಪಷ್ಟಗೊಂಡಿದೆ. ಉಬ್ಬರ ಬಂದು ಮುಳುಗಿಹೋಯಿತೆಂದು ಅಂದುಕೊಳ್ಳುತ್ತಿರುವ ಪುರಾಣ ಕಾಲದ ದ್ವಾರಕಾ ನಗರವು ಇದೇ ಆಗಿತ್ತೆಂಬುದನ್ನು ಚೆನ್ನಾಗಿ ಪರಿಶೀಲಿಸಿ ಖಚಿತವಾಗಿ ತೀರ್ಮಾನಿಸಬೇಕಾಗಿದೆ.

Read E-Paper click here