Tuesday, 10th September 2024

ನಳ ಮಹಾರಾಜ ಮಾಡಿದ ಬೆಳ್ಳುಳ್ಳಿ ಪಾಯಸದ ರೆಸಿಪಿ ಬೇಕೇ ?

ತಿಳಿರುತೋರಣ

srivathsajoshi@yahoo.com

‘ಅಮಿತಗುಣೋಪಿ ಪದಾರ್ಥೋ ದೋಷೇಣೈಕೇನ ನಿಂದಿತೋ ಭವತಿ| ನಿಖಿಲರಸಾಯನಮಹಿತೋ ಗಂಧೇನೋಗ್ರೇಣ ಲಶುನ ಇವ|| ಅಂತೊಂದು
ಸುಭಾಷಿತ ಇದೆ. ಯಾವುದೇ ವಸ್ತುವಿನಲ್ಲಿ ಅಥವಾ ವ್ಯಕ್ತಿಯಲ್ಲಿ ಅಪರಿಮಿತವಾದ ಒಳ್ಳೆಯ ಅಂಶಗಳಿದ್ದು, ಒಂದೇಒಂದು ದೋಷವಿದ್ದರೂ ಸಾಕು ನಿಂದನೆ ಬಂದೇಬರುತ್ತದೆ.

ಔಷಧಗಳಿಗೆಲ್ಲ ರಾಜನೆನಿಸಿದರೂ ಕಟುವಾದ ವಾಸನೆಯಿಂದಾಗಿ ಬೆಳ್ಳುಳ್ಳಿಯು ಹೇಗೆ ತಿರಸ್ಕಾರಕ್ಕೆ ಒಳಗಾಗುತ್ತದೆಯೋ ಹಾಗೆ-  ಎಂದು ಈ ಸುಭಾಷಿತದ ಅರ್ಥ. ಸಂಸ್ಕೃತದಲ್ಲಿ ಬೆಳ್ಳುಳ್ಳಿಯನ್ನು ಲಶುನ ಎನ್ನುತ್ತಾರೆ. ಲಶುನಂ ಗೃಂಜನಾರಿಷ್ಟ ಮಹಾಕಂದ ರಸೋನಕಾಃ ಎಂದು ಅಮರಕೋಶದಲ್ಲಿ ಕೊಟ್ಟಿರುವ ಇನ್ನಷ್ಟು ಪರ್ಯಾಯಪದಗಳು. ಬೆಳ್ಳುಳ್ಳಿಯ ವಾಸನೆಯನ್ನು ಕುರಿತಾದದ್ದೇ ಇನ್ನೊಂದು ಸುಭಾಷಿತವೂ ಇದೆ: ‘ಅಲ್ಪತ್ವಗಾಕೃತೀನಾಂ ವಿಗರ್ಹಿತಾನಾಂ ಸದಾಗತಿಂ ನುದತಾಮ್| ಪಿಶುನಾನಾಂ ಲಶುನಾನಾಂ ನ ಸಹಂತೇ ಗಂಧಮಪಿ ಸಂತಃ|| ಇದರ ಅರ್ಥ- ಬೆನ್ನ ಹಿಂದೆ ಆಡಿಕೊಳ್ಳುವವ ರನ್ನು ಮತ್ತು ಬೆಳ್ಳುಳ್ಳಿಯನ್ನು ಸಂತರು ಮೂಸಿಯೂ ನೋಡುವುದಿಲ್ಲ.

ಏಕೆಂದರೆ ಎರಡೂ ಅಲ್ಪತನ ತೋರಿಸುವಂಥವು (ಬೆಳ್ಳುಳ್ಳಿಯ ತೆಳು ಸಿಪ್ಪೆಯನ್ನು ಅಲ್ಪತನಕ್ಕೆ ಹೋಲಿಸಿರುವುದು), ದೂಷಣೆಗೆ ಒಳಗಾಗುವಂಥವು, ಮತ್ತು ದುರ್ನಾತ ಬೀರುವಂಥವು. ಮತ್ತೆ ದ್ವಿಜರಂತೂ ಬೆಳ್ಳುಳ್ಳಿಯನ್ನು ತಿನ್ನಲೇಬಾರದೆನ್ನುವ ಶ್ಲೋಕವೊಂದು- ‘ಲಶುನಂ ಗೃಂಜನಂ ಚೈವ ಪಲಾಂಡು ಕವಕಾನಿ ಚ| ಅಭಕ್ಷ್ಯಾಣಿ ದ್ವಿಜಾತೀನಾಮಮೇಧ್ಯಪ್ರಭವಾನಿ ಚ|| ಅಂತ ಮನುಸ್ಮೃತಿಯಲ್ಲೂ ಇದೆಯಂತೆ.

ಕನ್ನಡದ ಕೆಲವು ಕವಿಗಳೂ ಲಶುನ ಎಂಬ ಪದವನ್ನೇ ಬಳಸಿದ್ದಿದೆ. ಎಸ್ ವಿ ಪರಮೇಶ್ವರ ಭಟ್ಟರು ಇಂದ್ರಚಾಪದ ಒಂದು ಚೌಪದಿಯಲ್ಲಿ ಹೀಗೆ ಬರೆದಿದ್ದಾರೆ: ‘ಎಷ್ಟೆಷ್ಟು ಸಜ್ಜನರೊಡನಾಡಬಿಟ್ಟರು| ಖಳನಿಗೆ ಸದ್ಬುದ್ಧಿ ಬರದು| ಕಸ್ತೂರಿಯೊಡನಿಟ್ಟು ಕುಟ್ಟಿ ತೆಗೆದಿಟ್ಟರು| ಲಶುನಕೆ ಸೌರಭ
ಬರದು| – ಇದರಲ್ಲಿ ಅವರು ಬೆಳ್ಳುಳ್ಳಿಯನ್ನು ಕೆಟ್ಟದೆಂದು ನಿಂದಿಸುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಬದುಕಿನಲ್ಲಿ ವಕ್ಕರಿಸಿದ ಯಾವನೋ ದುಷ್ಟನ ವರ್ತನೆಯಿಂದ ಹತಾಶರಾಗಿ ಆ ನೋವನ್ನು ತೋಡಿಕೊಳ್ಳಲು ಬೆಳ್ಳುಳ್ಳಿಯ ಘಾಟನ್ನು ರೂಪಕವಾಗಿ ಬಳಸಿದ್ದಿರಬಹುದು. ಏಕೆಂದರೆ ಇಂದ್ರಚಾಪ ಕೃತಿಯನ್ನು ಪರಮೇಶ್ವರ ಭಟ್ಟರ ಆತ್ಮಕತೆ ಅಂತಲೂ ಪರಿಗಣಿಸಲಾಗುತ್ತದೆ.

ಆದರೆ ದಾಸಸಾಹಿತ್ಯದಲ್ಲಿ ಜಗನ್ನಾಥದಾಸರು ಬೆಳ್ಳುಳ್ಳಿಯನ್ನು ನೇರವಾಗಿ ತಿರಸ್ಕರಿಸಿದ್ದಾರೆ. ಬೆಳ್ಳುಳ್ಳಿ ಭಕ್ಷಣವನ್ನು ಪಾಪಕೃತ್ಯವೆಂದೇ ಘೋಷಿಸಿದ್ದಾರೆ. ಸಾರಿದ ಡಂಗುರ ಯಮನು ಅಘ- ನಾರಿಯರೆಳೆದು ತಂದು ನರಕದೊಳಿಡು ಎಂದು… ಎಂಬ ಕೀರ್ತನೆಯಲ್ಲಿ ಯಾವ್ಯಾವ ಪಾಪಕೃತ್ಯಗಳನ್ನು ಮಾಡಿದ ವರನ್ನು ಯಮಕಿಂಕರರು ಎಳೆದೊಯ್ಯುತ್ತಾರೆ ಎಂದು ಪಟ್ಟಿ ಮಾಡುತ್ತ ‘ಲಶುನ ವೃಂತಾಕಾದಿಗಳನು ಭಕ್ಷಿಸುವಳ| ಸೊಸೆಯರೊಡನೆ ಮತ್ಸರಿಸು ತಿಹಳ| ಹಸಿದು ಬಂದವರಿಗೆ ಅಶನವಿಲ್ಲೆಂಬಳ| ಉಸಿರು ಬಿಡದ ಹಾಗೆ ಎಳೆದು ತನ್ನಿರೊ…’ ಎಂದಿದ್ದಾರೆ. ವೃಂತಾಕ ಅಂದರೆ ಬದನೆ. ಬದನೆಯನ್ನು ಕೆಂಡದಲ್ಲಿ ಸುಟ್ಟು ಸಿಪ್ಪೆ ತೆಗೆದು ಕಿವುಚಿ ಹುಣಿಸೆರಸ ಮತ್ತು ಉಪ್ಪು ಮೆಣಸು ಮಸಾಲೆಗಳನ್ನೆಲ್ಲ ಸೇರಿಸಿ ಭರ್ತಾ ಮಾಡಿ ಅದಕ್ಕೆ ಲೈಟಾಗಿ ಬೆಳ್ಳುಳ್ಳಿಯ ಒಂದು ಒಗ್ಗರಣೆಯನ್ನೂ ಕೊಟ್ಟು ಚಪ್ಪರಿಸುವವರನ್ನು ದಾಸರು ಏನೆನ್ನುವರೋ!

ಬೆಳ್ಳುಳ್ಳಿಯ ಇಷ್ಟು ಘಾಟು ಮತ್ತು ಅದರಿಂದಾಗಿ ನಿಂದನೆ, ತಿರಸ್ಕಾರಗಳು ಇಂದುನಿನ್ನೆಯದಲ್ಲ. ಆದಿಕವಿ ಪಂಪನಿಂದಲೇ ಅದು ಆರಂಭವಾಗಿದೆ ಎಂದು ನಮಗೆ ತಿಳಿದುಬರುತ್ತದೆ. ಪಂಪಭಾರತದಲ್ಲಿ, ಯುದ್ಧದ ಕೊನೆಯ ದಿನ ದುರ್ಯೋಧನನು ರಣರಂಗದಲ್ಲಿ ಹೆಣಗಳ ರಾಶಿಯ ನಡುವೆ ನಡೆದುಕೊಂಡು
ವೈಶಂಪಾಯನ ಸರೋವರದ ಕಡೆಗೆ ಹೋಗುವ ಸನ್ನಿವೇಶ. ಅದು ಹೇಗಿತ್ತೆಂದರೆ ‘ನೋಡಿ ಕನಲ್ವ ಕೆಂಡದ ಮೇಲೆ ಪೞೆಯ ಬೇವಿನೆಣ್ಣೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳುರ್ವ ಕೆಂಡಂಗಳೊಳ್ ಸುೞದು ಬೇವ ಪೆಣಂಗಳ ಕಂಪು ನಾಱುವುದರ್ಕೆ ಸೈರಿಸಲಾಱದೆ…’ ಹೋದನಂತೆ ದುರ್ಯೋಧನ. ಹಳಗನ್ನಡದ ಈ ಪ್ರಸಿದ್ಧ ನುಡಿಯನ್ನು ನಮಗೀಗ ಅರ್ಥವಾಗುವ ಹೊಸಗನ್ನಡದಲ್ಲಿ, ವಿದ್ವಾಂಸರ ವಿಶ್ಲೇಷಣೆಯನ್ನು ಎರವಲು ಪಡೆದು ತಿಳಿದುಕೊಳ್ಳುವುದಾದರೆ- ಹಳೆಯ ಬೇವಿನೆಣ್ಣೆಯಲ್ಲಿ ನೆನೆಸಿಟ್ಟ ಬೆಳ್ಳುಳ್ಳಿಯನ್ನು ಹೊಳೆಯುತ್ತಿರುವ ಕೆಂಡದ ಮೇಲೆ ಸುಟ್ಟಾಗಿನ ವಾಸನೆಯ ಹಾಗೆ, ಗುಳ್ಳೆನರಿಯ ಬಾಯಿಯಲ್ಲಿ ಸುಡುತ್ತ ಅಥವಾ ಉರಿಯುವ ಕೆಂಡಗಳಲ್ಲಿ ಕಾಣಿಸಿಕೊಂಡು ಬೇಯುತ್ತಿರುವ ಹೆಣಗಳ ದುರ್ವಾಸನೆ ಯನ್ನು ಸಹಿಸಲಾರದೆ ದುರ್ಯೋಧನನು ದೂರದೂರ ಹೆಜ್ಜೆ ಇಟ್ಟು ನಡೆಯುತ್ತ ಯುದ್ಧಭೂಮಿಯನ್ನು ದಾಟಿ ವೈಶಂಪಾಯನ ಸರೋವರದ ಕಡೆಗೆ ಹೋದನು.

ಹೇಗಿದ್ದಿರಬಹುದು ಆ ಕರಾಳ ದೃಶ್ಯ ಮತ್ತು ಅಲ್ಲಿ ಮೂಗಿಗೆ ಅಡರುತ್ತಿದ್ದ ಕಮಟು ವಾಸನೆ ಎನ್ನುವುದು ಓದುಗರ ಊಹೆಗೆ ಬಿಟ್ಟದ್ದು. ಅಂದಹಾಗೆ ಜೈನಕವಿ ಪಂಪನಿಗೆ ಬೆಳ್ಳುಳ್ಳಿ ವಾಸನೆಯ ಪರಿಚಯ ಹೇಗಾಯ್ತೋ! ಬಹುಶಃ ಪಂಪನ ಪಕ್ಕದಮನೆಯವರು ಬೆಳ್ಳುಳ್ಳಿಪ್ರಿಯರಿದ್ದಿರಬಹುದು. ಆದರೂ ಪಾಪ, ಕಟುವಾದ ವಾಸನೆ ಇದೆಯೆಂಬ ಒಂದೇ ಕಾರಣಕ್ಕೆ ಬೆಳ್ಳುಳ್ಳಿಗೆ ಇಷ್ಟೆಲ್ಲ ನಿಂದನೆ. ತಿಂದಮೇಲೆ ಉಸಿರಿಗೆಲ್ಲ ವಾಸನೆ, ಮಾರನೆದಿನ ಬೆವರಿಗೂ ನಾತಲೀಲೆ- ಎಂಬುದು ಬೆಳ್ಳುಳ್ಳಿಯ ಮೇಲಿನ ಸಾರ್ವತ್ರಿಕ ಆರೋಪ. ಈರುಳ್ಳಿಯಾದರೂ ಓಕೆ ಬೆಳ್ಳುಳ್ಳಿ ಯಾಕೆ ಎನ್ನುವವರ ಸಂಖ್ಯೆ ದೊಡ್ಡದಿದೆ. ಆದರೆ
ಇಂದಿನ ಅಂಕಣಬರಹದ ಇನ್ನುಳಿದ ಭಾಗದಲ್ಲಿ ಬೆಳ್ಳುಳ್ಳಿಯ ದೂಷಣೆಯಿಲ್ಲ, ಬದಲಿಗೆ ಒಂದಿಷ್ಟು ಗುಣಗಾನ. ಬೆಳ್ಳುಳ್ಳಿಯ ಬಗ್ಗೆ ನಿಮಗೆ ಗೊತ್ತಿರಲಾರದ (ನನಗಂತೂ ಇದುವರೆಗೆ ಗೊತ್ತಿರದ) ಕೆಲವು ಸ್ವಾರಸ್ಯಕರ ಸಂಗತಿಗಳ ಸಂಕಲನ.

ಇಲ್ಲೊಂದು ಡಿಸ್‌ಕ್ಲೇಮರ್ ಸಹ ಅವಶ್ಯ. ನನಗೆ ಬೆಳ್ಳುಳ್ಳಿಯೆಂದರೆ ಅತಿಯಾದ ವ್ಯಾಮೋಹವೇನೂ ಇಲ್ಲದಿದ್ದರೂ ಮೂಗು ಮುರಿಯುವಷ್ಟು
ವಾಕರಿಕೆಯಂತೂ ಇಲ್ಲ. ಆಯ್ದ ಕೆಲ ಪದಾರ್ಥಗಳಿಗೆ- ಉದಾಹರಣೆಗೆ ಬಸಳೆ ಸೊಪ್ಪಿನ ಹುಳಿ, ಎಳೆಹಲಸಿನಕಾಯಿಯ ಹುಳಿ ಇತ್ಯಾದಿ- ಹಿತಮಿತವಾಗಿ ಬೆಳ್ಳುಳ್ಳಿಯ ಪರಿಮಳ ಇದ್ದರೇನೇ ಹೆಚ್ಚು ರುಚಿ ಎನ್ನುವವನು ನಾನು. ಅಂತೆಯೇ ಪಾಸ್ತಾ, ನೂಡಲ್ಸ್ ಮುಂತಾದ ವಿದೇಶೀ ತಿಂಡಿಗಳೂ ಬೆಳ್ಳುಳ್ಳಿಯಿಲ್ಲದೆ ರುಚಿಕರವೆನಿಸವು ಎಂದು ನನ್ನ ಅಭಿಪ್ರಾಯ. ಹಾಗಂತ, ಇಲ್ಲಿ ಇಂಡಿಯನ್ ಸ್ಟೋರ್‌ನಿಂದ ಉಪ್ಪಿನಕಾಯಿಕೊಳ್ಳುವಾಗ ಮಾವಿನ ತೊಕ್ಕು, ಗೊಂಗುರಾ ಪಿಕಲ್ಸ್ ಜಾಡಿಗಳ ಮೇಲೆ ವಿದೌಟ್ ಗಾರ್ಲಿಕ್ ಅಂತ ಬರೆದಿರುವುದನ್ನು ಖಚಿತಪಡಿಸಿಕೊಂಡೇ ಕೊಳ್ಳುತ್ತೇನೆ.

ಪಿಜ್ಜಾದಲ್ಲಿದ್ದಷ್ಟು ಬೆಳ್ಳುಳ್ಳಿ ಸಾಕು, ಜೊತೆಗೆ ಗಾರ್ಲಿಕ್ ಬ್ರೆಡ್ ಬೇಕಾಗಿಲ್ಲ ಎನ್ನುತ್ತೇನೆ. ಆರಕ್ಕೇರದ ಮೂರಕ್ಕಿಳಿಯದ ರೀತಿಯದು ನನ್ನ ಬೆಳ್ಳುಳ್ಳಿ
ಪ್ರಿಫರೆನ್ಸು. ಹಿಂದೂಕುಷ್ ಪರ್ವತಾವಳಿಯ ಆಸುಪಾಸಿನಲ್ಲಿ, ಮಧ್ಯ ಏಷ್ಯದ ಪ್ರದೇಶದಲ್ಲಿ ಬೆಳ್ಳುಳ್ಳಿಯ ಉಗಮವಾದದ್ದಂತೆ. ಅಲ್ಲ, ಬೆಳ್ಳುಳ್ಳಿಯೆಂಬ ಕಾಡುತ್ಪತ್ತಿಯನ್ನು ತಿನ್ನಲಿಕ್ಕೆ ಯೋಗ್ಯವಾದುದು, ಔಷಧಿಯ ಗುಣಗಳಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಶತಮಾನಗಳ ಹಿಂದೆ ಮನುಷ್ಯನು ಕಂಡುಕೊಂಡಿದ್ದು ಎಂದು ಹೇಳಿದರೆ ಹೆಚ್ಚು ಸೂಕ್ತ. ಏಕೆಂದರೆ ಮನುಕುಲವು ಬೆಳ್ಳುಳ್ಳಿಯನ್ನು ಪ್ರಕೃತಿದತ್ತ ಆಹಾರಪದಾರ್ಥ, ಬೆಳೆಸಿ
ಬಳಸಬಹುದಾದ್ದು ಅಂತ ಗುರುತಿಸಿ ಸಹಸ್ರಾರು ವರ್ಷಗಳೇ ಸಂದಿವೆಯೆನ್ನುತ್ತಾರೆ ಇತಿಹಾಸಜ್ಞರು. ಹಿಮಾಲಯದ ತಪ್ಪಲಿನ ಅತಿಯಾದ ಥಂಡಿ ಪ್ರದೇಶಗಳಲ್ಲಿ ಬೆಳ್ಳುಳ್ಳಿ ಬೆಳೆ ಸಾಧ್ಯವಾಗುವುದೂ, ಅಂತಹ ಚಳಿಯಲ್ಲಿ ಖಾದ್ಯಪದಾರ್ಥವಾಗಿ ಅಗತ್ಯವಾಗಿರುವುದೂ ಇದಕ್ಕೆ ಕಾರಣ.

ಆಮೇಲೆ ಕೃಷಿ ಮತ್ತು ವ್ಯಾಪಾರದಿಂದಾಗಿ ಪ್ರಪಂಚಕ್ಕೆಲ್ಲ ಬೆಳ್ಳುಳ್ಳಿಯ ಘಮ ಹಬ್ಬಿತು. ಈಜಿಪ್ಟ್‌ನ ಪಿರೇಮಿಡ್ಡುಗಳ ಮೇಲೆ ಬೆಳ್ಳುಳ್ಳಿಯ ಚಿತ್ರಗಳಿವೆಯಂತೆ. ಪಿರೇಮಿಡ್ ನಿರ್ಮಾಣದ ಕಾರ್ಮಿಕರ ಆಹಾರದಲ್ಲಿ ಬೆಳ್ಳುಳ್ಳಿ ಕಡ್ಡಾಯವಾಗಿ ಇರುತ್ತಿತ್ತಂತೆ. ಅಷ್ಟೇಅಲ್ಲ, ಆಗಿನ ಕಾಲದ ಈಜಿಪ್ಟ್‌ನಲ್ಲಿ ಬೆಳ್ಳುಳ್ಳಿಯೇ ಕರೆನ್ಸಿಯೂ ಆಗಿತ್ತಂತೆ. ಸತ್ತವರನ್ನು ಗೋರಿಗಳಲ್ಲಿ ಹೂಳುವಾಗ ಮಣ್ಣಿನಿಂದ ಮಾಡಿದ ಬೆಳ್ಳುಳ್ಳಿ ಆಕೃತಿಗಳನ್ನು ಜೊತೆಯಲ್ಲಿಡುತ್ತಿದ್ದರು, ಅಗಲಿದ ಆತ್ಮಕ್ಕೆ ದಾರಿಖರ್ಚಿಗೆ ದುಡ್ಡು ಎಂಬ ಭಾವನೆಯಿಂದ ಇರಬಹುದು!

ದುಷ್ಟಶಕ್ತಿಗಳನ್ನು, ರೋಗರುಜಿನಗಳನ್ನು ಎದುರಿಸಲಿಕ್ಕೆ ಬೆಳ್ಳುಳ್ಳಿಯನ್ನು ತಾಯಿತದಂತೆ ಬಳಸುವ ಪದ್ಧತಿ ಪ್ರಪಂಚದ ಅನೇಕ ಕಡೆಗಳಲ್ಲಿ ಪ್ರಾಚೀನ ಕಾಲದಿಂದ ನಡೆದುಬಂದಿರುವುದು ಈಗಲೂ ಕಂಡುಬರುತ್ತದೆ. ಗ್ರೀಕ್ ಮಿಡ್‌ವೈಫ್ ಗಳು ಪ್ರಸೂತಿಗೃಹದ ಬಾಗಿಲಿಗೆ ಬೆಳ್ಳುಳ್ಳಿ ತೋರಣ ಕಟ್ಟುತ್ತಿದ್ದರಂತೆ, ನವಜಾತ ಶಿಶುವನ್ನು ಕ್ಷುದ್ರಶಕ್ತಿಗಳಿಂದ ರಕ್ಷಿಸುವುದಕ್ಕಾಗಿ. ಪ್ರಾಚೀನ ಪ್ಯಾಲೆಸ್ತೈನ್ ಸಂಪ್ರದಾಯದ ಮದುವೆಯಲ್ಲಿ ವರನು ತನ್ನ ಪೋಷಾಕಿನಲ್ಲಿ ಬೆಳ್ಳುಳ್ಳಿ ಎಸಳನ್ನು ಸಾಂಕೇತಿಕವಾಗಿ ಧರಿಸಿಕೊಂಡರೆ ಶೋಭನರಾತ್ರಿ ಯಶಸ್ವಿಯಾಗುತ್ತದೆಂದು ನಂಬಿಕೆ. ಎಷ್ಟೆಂದರೂ ಬೆಳ್ಳುಳ್ಳಿ ಕಾಮೋತ್ತೇಜಕ, ಹಾಗೂ ಅದೇ ಅದಕ್ಕೆ ವರ ಮತ್ತು ಶಾಪವೂ ತಾನೆ? ಪ್ರಾಚೀನ ಭಾರತೀಯರು ಕಂಡುಕೊಂಡ ಬೆಳ್ಳುಳ್ಳಿಯ ಔಷಧಿಯ ಉಪಯೋಗಗಳನ್ನು ಚರಕ ಸಂಹಿತಾ, ಕಾಶ್ಯಪಸಂಹಿತಾ, ಅಷ್ಟಾಂಗಹೃದಯ ಮುಂತಾದ ಗ್ರಂಥಗಳಲ್ಲಿ ವಿವರಿಸಲಾಗಿದೆ. ಷಡ್ರಸಗಳ ಪೈಕಿ ಐದನ್ನು ಹೊಂದಿರುವ ಶ್ರೇಷ್ಠತೆ ಬೆಳ್ಳುಳ್ಳಿಯದು ಎನ್ನುತ್ತದೆ ಆಯುರ್ವೇದ. ಎಲ್ಲಕ್ಕಿಂತ ಇಂಟೆರೆಸ್ಟಿಂಗ್ ಅಂದರೆ ಯಶೋಮಿತ್ರ ಎಂಬ ಬೌದ್ಧಭಿಕ್ಕುವೊಬ್ಬ ಬರೆದಿದ್ದೆನ್ನಲಾದ, ಕ್ರಿಸ್ತ ಪೂರ್ವ ಕಾಲದ್ದೆಂದು ನಂಬಲಾದ, ಕ್ರಿ.ಶ ೧೯ನೆಯ ಶತಮಾನದಲ್ಲಿ ತುರ್ಕಿಸ್ತಾನದ ಕುಛರ್ ಎಂಬಲ್ಲಿ ಉತ್ಖನನದ ವೇಳೆ ಲೆಫ್ಟಿನೆಂಟ್ ಎಚ್ ಬೋವರ್ ಎಂಬ ಬ್ರಿಟಿಷ್ ಅಧಿಕಾರಿಗೆ ದೊರೆತ ಪ್ರಾಚೀನ ಗ್ರಂಥ.

ನಾವನೀತಕಮ್ ಎಂದು ಅದರ ಹೆಸರು. ಸಂಸ್ಕೃತ-ಪ್ರಾಕೃತ ಮಿಶ್ರಣದಂಥ ಭಾಷೆಯಲ್ಲಿರುವ ಆ ಗ್ರಂಥದ ಪ್ರಥಮ ಕಾಂಡದಲ್ಲೇ ೪೩ ಶ್ಲೋಕಗಳಲ್ಲಿ ಬೆಳ್ಳುಳ್ಳಿಯ ಪೌರಾಣಿಕ ಹಿನ್ನೆಲೆ, ಮತ್ತು ಔಷಧಿಯ ಗುಣಗಳ ವಿವರಗಳಿವೆ. ಒಂದಾನೊಂದು ಕಾಲದಲ್ಲಿ ಆತ್ರೇಯ ಮುನಿಯ ನೇತೃತ್ವದಲ್ಲಿ ಸುಶ್ರುತ, ಹರಿತ, ಪರಾಶರ, ವಸಿಷ್ಠ, ಭೇಲ ಮುಂತಾದ ಋಷಿಗಳ ಗುಂಪೊಂದು ಕಾಶ್ಮೀರದ ಕಣಿವೆಗಳಲ್ಲಿ ಔಷಽಯ ಸಸ್ಯಗಳ ಹೆಸರು, ರುಚಿ, ಗುಣಲಕ್ಷಣಗಳ
ಅಧ್ಯಯನಕ್ಕಾಗಿ ಅಲೆದಾಡುತ್ತಿತ್ತು. ಇಂದ್ರನೀಲಮಣಿಯಂತೆ ಕಡುನೀಲಿ ಬಣ್ಣದ ಎಲೆಗಳುಳ್ಳ, ಮಲ್ಲಿಗೆ, ಶ್ವೇತಕಮಲ, ಶಶಿಕಿರಣ, ಶಂಖಗಳಂತೆ ಬಿಳಿಬಣ್ಣದ ಗೆಡ್ಡೆಯಿರುವ ಸಸ್ಯವೊಂದು ಸುಶ್ರುತನಿಗೆ ಕಾಣಿಸಿತು.

ಅದನ್ನವನು ಅಲ್ಲೇ ತಪಸ್ಸನ್ನಾಚರಿಸುತ್ತಿದ್ದ ಕಾಶಿರಾಜನ ಬಳಿಗೊಯ್ದು ಅದೇನೆಂದು ತಿಳಿಸುವಂತೆ ಕೇಳಿದನು. ಅದಕ್ಕೆ ಉತ್ತರವಾಗಿ ಕಾಶಿರಾಜನು ೪೩ ಶ್ಲೋಕಗಳ ಸುಂದರ ಕಾವ್ಯರೂಪದಲ್ಲಿ ಬೆಳ್ಳುಳ್ಳಿಯ ಬಗ್ಗೆ ವಿವರಿಸಿದನು. ಅದೇ ಲಶುನ ಕಲ್ಪ. ಅದರ ಪ್ರಕಾರ- ಸಮುದ್ರಮಥನದ ವೇಳೆ ಅಮೃತಕುಂಭ
ಹಿಡಿದುಕೊಂಡು ಧನ್ವಂತರಿಯು ಉದ್ಭವಿಸುತ್ತಾನೆ. ಅದನ್ನು ಅಸುರರು ಮತ್ತು ಸುರರಿಗೆ ಹಂಚಲಿಕ್ಕೆ ಮೋಹಿನಿಯ ರೂಪದಲ್ಲಿ ವಿಷ್ಣು ಬರುತ್ತಾನೆ. ಬೇಕಂತಲೇ ಅಮೃತವು ಸುರರಿಗೆ ಮಾತ್ರ ಸಿಗಲೆಂದು ವಿಷ್ಣುವಿನ ಸಂಚು. ಅದು ಸ್ವರಭಾನು ಎಂಬ ಅಸುರನಿಗೆ ಗೊತ್ತಾಗಿ ಅವನು ವೇಷ ಮರೆಸಿಕೊಂಡು ದೇವತೆಗಳ ಸಾಲಲ್ಲಿ ಕುಳಿತುಕೊಳ್ಳುತ್ತಾನೆ.

ಮೋಹಿನಿಯಿಂದ ಅಮೃತವನ್ನೂ ಪಡೆಯುತ್ತಾನೆ. ಅವನ ಕಪಟವು ಸೂರ್ಯ-ಚಂದ್ರರಿಗೆ ತತ್ ಕ್ಷಣ ಗೊತ್ತಾಗಿ ಅವರು ಎಚ್ಚರಿಸುತ್ತಾರೆ. ಒಡನೆಯೇ ಮೋಹಿನೀ ರೂಪ ತೊರೆದ ವಿಷ್ಣು ಸುದರ್ಶನ ಚಕ್ರವನ್ನು ಕರೆದು ಆ ಅಸುರನ ಶಿರಚ್ಛೇದ ಮಾಡುವಂತೆ ಆಜ್ಞಾಪಿಸುತ್ತಾನೆ. ಅದಾಗಲೇ ಒಂದಿಷ್ಟು
ಅಮೃತವನ್ನು ಕುಡಿದಿದ್ದರಿಂದ ಅಸುರ ಸಾಯುವುದಿಲ್ಲ. ರುಂಡ-ಮುಂಡಗಳದು ಪ್ರತ್ಯೇಕ ಅಸ್ತಿತ್ವವಾಗಿ ರಾಹು- ಕೇತುಗಳೆಂದು ಗುರುತಿಸಲ್ಪಡುತ್ತಾರೆ.

ಸುದರ್ಶನ ಚಕ್ರದಿಂದ ಕತ್ತನ್ನು ಕೊಯ್ದಾಗ ಆಗಿನ್ನೂ ಅಲ್ಲಿದ್ದ ಅಮೃತದ ಒಂದೆರಡು ಬಿಂದುಗಳು ನೆಲಕ್ಕೆ ಬೀಳುತ್ತವೆ. ಅಲ್ಲಿ ಬೆಳ್ಳುಳ್ಳಿ ಹುಟ್ಟಿಕೊಳ್ಳು ತ್ತದೆ! ಮುಂದೆ ಕಾಶಿರಾಜನು ಸುಶ್ರುತನಿಗೆ ಬೆಳ್ಳುಳ್ಳಿಯ ಗುಣಶ್ರೇಷ್ಠತೆಯನ್ನು ಬಣ್ಣಿಸುತ್ತಾನೆ. ಎಲ್ಲ ಥರದ ಕಾಯಿಲೆ-ಕಸಾಲೆಗಳನ್ನು ಅದು ನಿವಾರಿಸುತ್ತದೆ; ಹಸಿವಿಲ್ಲದಿರುವಿಕೆ, ಹೊಟ್ಟೆಯಲ್ಲಿ ಗೆಡ್ಡೆ ಬೆಳೆಯುವುದು, ಕೆಮ್ಮು, ನಿತ್ರಾಣ, ಅಜೀರ್ಣ, ಕೈಕಾಲು ಊತ,ಹೊಟ್ಟೆ ನೋವು, ರಕ್ತನಾಳಗಳು ಬಾತುಕೊಳ್ಳು ವುದು, ಹೊಟ್ಟೆಹುಳ ಕಾಣಿಸಿಕೊಳ್ಳುವುದು, ಮೂತ್ರಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳು, ಮಾನಸಿಕ ದೌರ್ಬಲ್ಯ ಮುಂತಾದುವೆಲ್ಲದಕ್ಕೂ ಅದು ರಾಮಬಾಣ ಎನ್ನುತ್ತಾನೆ. ಲಶುನ ಸೇವನೆಯಿಂದ ನಿನಗೆ ಕೊಳಲಿನಂತೆ ಇಂಪಾದ ಸ್ವರ, ಪುಟವಿಟ್ಟ ಚಿನ್ನದಂಥ ಮೈಕಾಂತಿ, ಶಕ್ತಿಯುತ ಸ್ಮೃತಿ ಮತ್ತು ಧೃತಿ, ಸುಕ್ಕುಗಳಿಲ್ಲದ ಶರೀರ, ಸುಸ್ಥಿತಿಯಲ್ಲಿರುವ ಪಂಚೇಂದ್ರಿಯಗಳು, ಸದಾ ವಧಿಸುತ್ತಿರುವ ಸ್ಥೈರ್ಯ-ವೀರ್ಯ ದಕ್ಕುವುದರಿಂದ ಶತವರ್ಷ ಬಾಳು ತ್ತೀಯೆ ಎಂದು ಹರಸುತ್ತಾನೆ. ಅದಾದಮೇಲೆ ಸ್ವಲ್ಪೋವಮ ಎಂಬ ಹೆಸರಿನ ಉತ್ಸವದ ವಿವರಗಳು ಬರುತ್ತವೆ. ಅದು ಬೆಳ್ಳುಳ್ಳಿ ಉತ್ಸವ.

ತುಪ್ಪ ಹಾಕಿ ಗೋಧಿ, ಬಾರ್ಲಿಯಿಂದ ಮಾಡಿದ ಭಕ್ಷ್ಯಗಳು, ಮದ್ಯ, ಮಾಂಸ ಸೇವನೆಯ ಮೋಜು ಮಸ್ತಿ. ಮಾಘದಲ್ಲಿ ಮತ್ತು ಮಾಧವ(ಚೈತ್ರ) ಮಾಸದಲ್ಲಿ ಆಚರಣೆ. ಪ್ರತಿಯೊಂದು ಮನೆಯ ಮುಂಬಾಗಿಲಿಗೆ, ಕಿಟಕಿಗಳಿಗೆ, ಮೇಲುಪ್ಪರಿಗೆಗೆ ಬೆಳ್ಳುಳ್ಳಿಯ ತೋರಣ. ಮನೆಮಂದಿಗೆಲ್ಲ ಬೆಳ್ಳುಳ್ಳಿ ಮಾಲೆಯ ಧಾರಣ.
ಹಜಾರದಲ್ಲಿರುವ ಮಂಟಪದಲ್ಲಿ ಬೆಳ್ಳುಳ್ಳಿಗೆ ಪೂಜೆ. ಇವೆಲ್ಲದರ ವಿವರಣೆ ನಾವನೀತಕಮ್ ಗ್ರಂಥದಲ್ಲಿ ಸಂಸ್ಕೃತ ಶ್ಲೋಕಗಳಲ್ಲಿದೆ. ನನಗೆ ಅಂತರಜಾಲ ದಲ್ಲಿ ಅದರದೊಂದು ಪರಿಷ್ಕೃತ ಪಿಡಿಎಫ್ ಸಹ ಸಿಕ್ಕಿದೆ!

ಹಾಗೆ ಅಂತರಜಾಲದಲ್ಲಿ ಬೆಳ್ಳುಳ್ಳಿಶೋಧದ ವೇಳೆ ಸಿಕ್ಕ ಇನ್ನೊಂದು ನಿಽ- ಮಹಾಭಾರತ ಕಾಲದ ನಳ ಮಹಾರಾಜನಿಂದ ರಚಿತವಾದದ್ದೆನ್ನಲಾದ ಪಾಕದರ್ಪಣಮ್ ಕೃತಿ. ಮೂಲ ಸಂಸ್ಕೃತ ಶ್ಲೋಕಗಳೊಂದಿಗೆ ಡಾ. ಇಂದ್ರದೇವ ತ್ರಿಪಾಠಿಯವರ ಹಿಂದೀ ವ್ಯಾಖ್ಯಾನವುಳ್ಳ ಗ್ರಂಥದ ಪಿಡಿಎಫ್. ಪ್ರಾಚೀನ ತಮ ಆಯುರ್ವೇದೀಯ ಸ್ವಾಸ್ಥ್ಯವ್ರತ ಏವಂ ಪಾಕಶಾಸದ ವಿಶಿಷ್ಟ ಗ್ರಂಥವೆಂದು ಅದರ ಹೆಗ್ಗಳಿಕೆ. ವಾರಾಣಸೀ ಚೌಖಂಬಾ ಸಂಸ್ಕೃತ ಸಂಸ್ಥಾನದ ಪ್ರಕಟಣೆ.

ನಳ ಮಹಾರಾಜನ ಪಾಕಶಾಸದ ಆಕರ್ಷಕ ರೆಸಿಪಿಗಳೆಲ್ಲ ಅದರಲ್ಲಿವೆ. ಬರೀ ರೆಸಿಪಿಗಳಷ್ಟೇ ಅಲ್ಲ, ಪ್ರತಿಯೊಂದರಿಂದಲೂ ನಮ್ಮ ಶರೀರಸ್ವಾಸ್ಥ್ಯಕ್ಕೆ ಏನು ಉಪಯೋಗ ಎಂಬ ಅಂಶಗಳೂ ಇವೆ. ಸಸ್ಯಾಹಾರವಷ್ಟೇ ಅಲ್ಲದೆ ಮಾಂಸಾಹಾರ ತಯಾರಿಯ ವಿವರಗಳೂ ಇವೆ. ಹಲಸಿನ ಕಾಯಿ ಮತ್ತು ಹಣ್ಣಿನಿಂದ ಮಾಡುವ ಪದಾರ್ಥಗಳ ಬಣ್ಣನೆಯನ್ನು ನೋಡಿಯಂತೂ ನನಗೆ ಬಹಳವೇ ಆಶ್ಚರ್ಯ ಆಯಿತು. ಪಾಕದರ್ಪಣಮ್‌ನ ಚತುರ್ಥ ಅಂಕದಲ್ಲಿ ಪಾಯಸ ಪ್ರಕಾರ ಇದೆ. ಅದರಲ್ಲಿ ಮೊದಲನೆಯದಾಗಿ ‘ವಿಚಿತ್ರ ಲಶುನ ಪಾಯಸ ನಿರ್ಮಾಣ ವಿಧಿ’ ಇದೆ.

‘ಅಥ ಭೇದಾನ್ ಪ್ರವಕ್ಷ್ಯಾಮಿ ಪಾಯಸಸ್ಯ ವಿಚಿತ್ರಕಾನ್| ತ್ವಚಂ ಲಶುನಭಾಗಾನಾಂ ಸಮುತ್ಸೃಜ್ಯ ಪ್ರಯತ್ನತಃ…’ ಎಂದು ಆರಂಭವಾಗಿ ‘ನಿಕ್ಷಿಪೇತ್ತತ್ರ ಜಾತ್ಯಾದಿ ಕುಸುಮಾನ್ಯುಭಯತ್ರ ಚ| ಪಾಯಸಂ ಲಘುವಾತಘ್ನಂ ರಮ್ಯಂ ವ್ಯಾಧಿಹರಂ ಶುಭಮ್’ ಎಂದು ಮುಗಿಯುವ, ಅನುಷ್ಟುಪ್ ಛಂದಸ್ಸಿನ ಶ್ಲೋಕಗಳಲ್ಲಿ ದೇವರ ಸ್ತೋತ್ರದಂತೆ ಪಾಕವಿಧಾನ ಓದುವುದೇ ಒಂದು ವಿಚಿತ್ರ ಅನುಭವ. ಒಟ್ಟು ೧೨ ಶ್ಲೋಕಗಳಲ್ಲಿ ಬೆಳ್ಳುಳ್ಳಿ ಪಾಯಸ ಸಿದ್ಧವಾಗುತ್ತದೆ. ನನ್ನ ಅಲ್ಪಸ್ವಲ್ಪ ಸಂಸ್ಕೃತಜ್ಞಾನದಿಂದ ಶ್ಲೋಕಗಳನ್ನು ಅರ್ಥಮಾಡಿಕೊಂಡಿದ್ದಾಯಿತು.

ಜೊತೆಯಲ್ಲಿ ಹಿಂದೀ ವ್ಯಾಖ್ಯಾನ ಇರುವುದರಿಂದ ನಿಖರ ವಿವರಗಳನ್ನು ತಿಳಿದುಕೊಳ್ಳುವುದು ಸುಲಭವಾಯಿತು. ಅದರ ಕನ್ನಡ ಅನುವಾದ ಇಲ್ಲಿ ನಿಮಗಾಗಿ:

ಬೆಳ್ಳುಳ್ಳಿಯ ೧೦-೧೨ ಎಸಳುಗಳನ್ನು ತೆಗೆದುಕೊಳ್ಳಿ. ಸಿಪ್ಪೆ ತೆಗೆದು ಎರಡೂ ತುದಿಗಳನ್ನು ಸ್ವಲ್ಪೇಸ್ವಲ್ಪ ಕತ್ತರಿಸಿ ಬಿಸಾಡಿ. ಪ್ರತಿಯೊಂದು ಎಸಳನ್ನೂ ಅಡ್ಡಡ್ಡಕ್ಕೆ ನಾಲ್ಕು ತುಂಡುಗಳಾಗಿ ಮಾಡಿ. ನಡುವಿನ ಗಟ್ಟಿ ಭಾಗವನ್ನು ತೆಗೆದು, ಆ ರಂಧ್ರಗಳ ಮೂಲಕ ಸೂಜಿ-ದಾರ ಉಪಯೋಗಿಸಿ ಪುಟ್ಟದೊಂದು ಮಾಲೆ ಅಥವಾ ಗುಚ್ಛದಂತೆ ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಸ್ವಲ್ಪ ಅನ್ನ ಮಾಡುವಂತೆ ಅಕ್ಕಿ ಬೇಯಲಿಕ್ಕಿಟ್ಟು, ಅದು ಬೇಯುತ್ತಿರುವಾಗ
ಬೆಳ್ಳುಳ್ಳಿಗುಚ್ಛವನ್ನು ಅನ್ನದ ಪಾತ್ರೆಯಲ್ಲಿ ಮುಳುಗಿಸಿಡಿ.

ಇದರಿಂದ ಬೆಳ್ಳುಳ್ಳಿಯ ತೀವ್ರ ಘಾಟು ಇಲ್ಲವಾಗುತ್ತದೆ. ಆ ಮೇಲೆ ಆ ಗುಚ್ಛವನ್ನು ಹೊರತೆಗೆದು ನೀರಿನಿಂದ ಚೆನ್ನಾಗಿ ತೊಳೆದು ಬೆಳ್ಳುಳ್ಳಿ ದಳಗಳನ್ನು ಮೆತ್ತಗೆ ಹಿಸುಕಿ ಹಾಲಿನಲ್ಲಿ ಬೇಯಿಸಿ. ಹಾಲು ಮುಕ್ಕಾಲುಭಾಗಕ್ಕೆ ಇಳಿಯುವವರೆಗೂ ಮಿಶ್ರಣವು ಕುದಿಯಲಿ. ಕೆನೆಗಟ್ಟದಂತೆ ಆಗಾಗ ಕಲಕುತ್ತಿರಿ. ನಿಮಗೆ ಸರಿಯೆನಿಸುವಷ್ಟು ಪ್ರಮಾಣದಲ್ಲಿ ಸಕ್ಕರೆ ಸೇರಿಸಿ. ಈಗ ಈ ಪಾಯಸವನ್ನು ಎರಡು ಪಾಲು ಮಾಡಿ ಚಿಕ್ಕಚಿಕ್ಕ ಬೋಗುಣಿಗಳಲ್ಲಿ ತುಂಬಿ. ಒಂದರ
ಮೇಲೆ ಕತ್ತರಿಸಿದ ಬಾಳೆಹಣ್ಣನ್ನೂ, ಇನ್ನೊಂದರ ಮೇಲೆ ಕತ್ತರಿಸಿದ ಹಲಸಿನಹಣ್ಣಿನ ತೊಳೆಯನ್ನೂ ಉದುರಿಸಿ.

ಹಾಗೆಯೇ ಒಂದೆರಡು ಮಲ್ಲಿಗೆ ಹೂವುಗಳನ್ನು ಎರಡೂ ಬೋಗುಣಿಗಳಲ್ಲಿ ಒಮ್ಮೆ ಅದ್ದಿತೆಗೆಯಿರಿ. ಚಿಟಿಕೆಯಷ್ಟು ಪಚ್ಚೆಕರ್ಪೂರವನ್ನು ಎರಡೂ ಬೋಗುಣಿಗಳಿಗೆ ಚಿಮುಕಿಸಿ. ಜಾಸ್ತಿ ಪರಿಮಳದ್ರವ್ಯಗಳು ಬೇಕಾಗಿಲ್ಲ. ಈ ಪಾಯಸವು ವಾತನಾಶಕವೂ ವ್ಯಾಧಿ ನಾಶಕವೂ ಆಗಿರುತ್ತದೆ

Leave a Reply

Your email address will not be published. Required fields are marked *