ಬೆಂಬಿಡದ ಗುಂಗು
ಎಸ್.ಜಿ.ಹೆಗಡೆ
ಸಂಗೀತ ನಿರ್ದೇಶಕನಾಗಿ ಆರ್.ಡಿ. ಬರ್ಮನ್ ಮತ್ತು ಹಾಡುಗಾರ್ತಿಯಾಗಿ ಆಶಾ ಇಬ್ಬರೂ ಜತೆಯಾಗಿ ಸಿನಿಮಾ ಜಗತ್ತಿನಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದರು. ಬರ್ಮನ್ ನಿರ್ದೇಶನದ ‘ತೀಸ್ರಿ ಮಂಜಿಲ್’ಗೆ ಹಾಡಿದ ಹಾಡುಗಳು ಆಶಾರನ್ನು ಹೊಸ ಮಂಜಿಲ್‌ನತ್ತ ಒಯ್ದವು. ಈ ಸಿನಿಮಾಕ್ಕೆ ಆಶಾ ಹಾಡಿದ ‘ಓ ಹಸೀನಾ ಝುಲೆವಾಲಿ’, ‘ಆಜಾ ಆಜಾ ಮೈ ಹೂಂ ಪ್ಯಾರ್ ತೇರಾ’, ‘ಓ ಮೇರೆ ಸೋನಾರೆ’ ಹಾಡುಗಳು ಅದ್ಭುತ ರೀತಿಯಲ್ಲಿ ಹಿಟ್ ಆಗಿ ಅಮರಗೀತೆಗಳ ಸಾಲಲ್ಲಿ ಸೇರಿಕೊಂಡವು.
ದುಬೈನ ಕೋಕಾ-ಕೋಲಾ ಅರೇನಾ ರಂಗಸ್ಥಳದಲ್ಲಿ ಇತ್ತೀಚೆಗೆ ಜರುಗಿದ ಭರ್ಜರಿ ಸಂಗೀತ ಕಛೇರಿ ಯೊಂದರಲ್ಲಿ, ೯೦ನೇ ವರ್ಷಕ್ಕೆ ಕಾಲಿಟ್ಟ ಹಿಂದಿ ಚಲನಚಿತ್ರ ಸಂಗೀತರಾಣಿ ಆಶಾ ಭೋಸ್ಲೆ ಅವರ ಹುಟ್ಟುಹಬ್ಬ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸುಮಾರು ೩೦೦ಕ್ಕೂ ಹೆಚ್ಚು ಪ್ರಸಿದ್ಧ ಹಾಡುಗಾರರು, ಸಂಗೀತ ನಿರ್ದೇಶಕರು, ಕೊರಿಯೋಗ್ರಾಫರುಗಳು, ಕುಣಿತದವರು ಜತೆಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೊಂದು ಅಭೂತಪೂರ್ವ ಪ್ರಸಂಗ. ಸುಮಾರು ೪ ಗಂಟೆಗೂ ಮಿಕ್ಕಿ ನಡೆದ ಹಿಂದಿ ಫಿಲ್ಮೀ ಹಾಡಿನ ಪ್ರದರ್ಶನದಲ್ಲಿ, ೯೦ ವರ್ಷ ವಯಸ್ಸಿನ ಹೊಸ್ತಿಲನ್ನು ತಲುಪಿದ ಹಿಂದಿ ಸಿನಿಮಾ ಸಂಗೀತದ ಹಸ್ತಿಗೆ ನಮನ ಸಲ್ಲಿಸಲಾಯಿತು.
ಅಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರಲ್ಲದೆ ಜಗತ್ತಿನ ಎಲ್ಲೆಡೆಯ ಅಪಾರ ಸಂಗೀತ ಪ್ರೇಮಿಗಳು, ಅಭಿಮಾನಿ ಬಳಗದವರು ಒಕ್ಕೊರಲಿನ ಹಾರೈಕೆ, ಪ್ರಣಾಮ ಸಲ್ಲಿಸಿದರು. ಇಲ್ಲಿಯ ತನಕ ಆಶಾಜಿ ತಮ್ಮ ಹುಟ್ಟುಹಬ್ಬವನ್ನು ಕುಟುಂಬ ಮತ್ತು ಹತ್ತಿರದ ಬಳಗಕ್ಕಷ್ಟೇ ಸೀಮಿತವಿಟ್ಟಿದ್ದರು. ‘ಇದೊಂದು ಅಸಾಮಾನ್ಯ ಸಂದರ್ಭ; ನಾನು ಅಸಾಮಾನ್ಯ ಸಂಗತಿಗಳನ್ನು ಸಾಧಿಸುವುದನ್ನು ಸದಾ ಬಯಸಿ ಬಂದಿರುವೆ’ ಎಂದ ಆಶಾಜಿ, ೯೦ರ ವಯಸ್ಸಿನಲ್ಲಿಯೂ ಈ ಕಾರ್ಯಕ್ರಮದಲ್ಲಿ ೩ ತಾಸು ಹಾಡಿ, ನಿರಂತರ ಹೆಜ್ಜೆಹಾಕಿದ್ದು ವಿಶೇಷ. ಅಂಥ ಚೈತನ್ಯ, ಶ್ರಮ, ಪಟ್ಟು, ಲವಲವಿಕೆಯೇ ಆಶಾಜಿ ನಡೆದು ಬಂದ ದೂರದ ದಾರಿಯ ಗುಟ್ಟು. ಕೋಕಾ-ಕೋಲಾ ಅರೇನಾದಿಂದ ಏರ್ಪಟ್ಟ ಈ ಕಾರ್ಯಕ್ರಮಕ್ಕೆ ‘ಆಶಾಃ೯೦’ ಎಂದು ಕರೆಯಲಾಯಿತು.
‘ಸಂಗೀತವೆಂದೂ ನಿಂತುಹೋಗುವುದಿಲ್ಲ, ಸಂಗೀತಕ್ಕೆ ಮುಕ್ತಾಯವಿಲ್ಲ. ಅದು ಹರಿಯುತ್ತಿರುವ ನದಿಯಂತೆ. ಇಲ್ಲಿ ಪರಿಪೂರ್ಣತೆ ಎಂಬುದಿಲ್ಲ. ಯಾರಾದರೂ ತಾನು ಪೂರ್ಣತೆ ಪಡೆದೆನೆಂದು ತಿಳಿದರೆ ಅದು ತಪ್ಪಾಗಬಹುದು. ಎಲ್ಲವೂ ಕಾಲದೊಂದಿಗೆ ಹೊಸದಾಗಿ ಅರಳುತ್ತ ಸಾಗುವ ಬಗೆಯಷ್ಟೇ’ ಎಂದು ಆಶಾಜಿ ಕಾರ್ಯಕ್ರಮಕ್ಕೂ ಮುಂಚಿನ ಸಂದರ್ಶನವೊಂದರಲ್ಲಿ ಹೇಳಿದ್ದರು. ಹಿಂದಿ ಸಿನಿಮಾ ಸಂಗೀತ ಸಾಗರದಲ್ಲಿ ಅದೆಷ್ಟೋ ಭೀಕರ ಅಲೆಗಳನ್ನು ದಾಟಿ ಬಹುದೂರ ಈಜಿ
ಸಾಗಿರುವ, ಇನ್ನೂ ಅರಳುವಿಕೆಯಲ್ಲಿ ತೊಡಗಿಸಿಕೊಂಡು ಹೊಸ ಬಣ್ಣ, ಹೊಸ ಪರಿಮಳ ಸೂಸುತ್ತಿರುವ ಆಶಾ, ತಮ್ಮ ಎಡೆಬಿಡದ ಸಂಗೀತಯಾನದ ಬದುಕಿನ ೯೦ ವರ್ಷದ ಮೆಟ್ಟಿಲನ್ನು ಇದೇ ಸೆಪ್ಟೆಂಬರ್ ೮ರಂದು ತಲುಪಿದರು, ಸ್ವಲ್ಪವೂ ದಣಿವಿಲ್ಲದ ಗತ್ತಿನಲ್ಲಿ, ಹೊಸ ಆಶಾಭಾವದಲ್ಲಿ.
ಆಶಾಜಿ ಹಾಡಿನ ಕಂಪು ಜಗತ್ತಿನ ಎಲ್ಲೆಡೆ ಪಸರಿಸಿದೆ. ಅವರು ನೀಡಿದ ಸಂಗೀತವು ಬಹುವರ್ಷದ, ನಿಲುವಿಲ್ಲದ ನಿರಂತರ ಕೊಡುಗೆ. ಕಾಲದೊಂದಿಗೆ ಹರಡುತ್ತ ಹೋಗಿದ್ದು. ಕಳೆದ ೯೦ ವರ್ಷಗಳ ಅವಽಯಲ್ಲಿ ೮೦ ವರ್ಷಗಳು ಸಂಗೀತ ಕ್ಷೇತ್ರವನ್ನು ಒಳಗೊಂಡಿದ್ದು, ‘ಮೈ ಇಸ್ ದುನಿಯಾ ಕೆ ಆಖ್ರಿ ಮುಘಲ್ ಹೂಂ’ ಅಂತ ಆಶಾ ಅಂದಿದ್ದು ಈ ನಿಟ್ಟಿನಿಂದ ನಿಜವೇ. ೯೦ ವರ್ಷಗಳಲ್ಲಿ ೮೦ ವರ್ಷಗಳ ಕಸುಬನ್ನು ಈ ರೀತಿಯಲ್ಲಿ ಸಮರ್ಪಿಸಿಕೊಂಡ ಹಾಡುಗಾರರನ್ನು ಮುಂದೆ ಕಾಣುತ್ತೇವೋ ಇಲ್ಲವೋ ಗೊತ್ತಿಲ್ಲ.
ಆಶಾಜಿ ೧೯೪೩ರಲ್ಲಿ, ತಮ್ಮ ೧೦ನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ಪದಾರ್ಪಣ ಮಾಡಿದ್ದು ‘ಮಾಝಾ ಬಾಳ್’ ಮರಾಠಿ ಚಲನಚಿತ್ರದ ಮೂಲಕ. ‘ಚಲಾ
ಚಲಾ ನವಾ ಬಾಳಾ’ ಎನ್ನುವ ಹಾಡು. ಆಶಾ ಹುಟ್ಟಿದ್ದು ೧೯೩೩ರಲ್ಲಿ, ಸಾಂಗ್ಲಿ ಭಾಗದ ಗೋವಾರ್ ಎಂಬ ಹಳ್ಳಿಯ ದೀನನಾಥ್ ಮಂಗೇಶ್ಕರ್ ಕುಟುಂಬ
ದಲ್ಲಿ. ಸಂಗೀತ ಮತ್ತು ರಂಗಭೂಮಿಯಲ್ಲಿ ದೀನನಾಥ್ ಮಂಗೇಶ್ಕರ್ ಆಗಲೇ ಸಾಕಷ್ಟು ಹೆಸರು ಗಳಿಸಿದ್ದರಿಂದ, ಕುಟುಂಬವು ಪ್ರತಿಷ್ಠಿತವಾಗಿತ್ತು. ತನ್ನ ೯ನೇ ವಯಸ್ಸಿನಲ್ಲಿ ತಂದೆ ತೀರಿಹೋದ ನಂತರ ಅಲ್ಲಿಯೇ ಉಳಿಯುವುದು ಸಾಧ್ಯವಾಗದೆ, ಬದುಕಿನ ಹಾದಿ ಹುಡುಕಿ ಮುಂಬೈಗೆ ತಲುಪುವ ಪರಿಸ್ಥಿತಿ ಬಂತು.
ಸಂಗೀತ ಮತ್ತು ರಂಗಭೂಮಿಯ ಹಿನ್ನೆಲೆಯಿದ್ದ ಕುಟುಂಬದ ನಾಡಿಯಲ್ಲಿ ಆಗಲೇ ಸಂಗೀತದ ಝರಿ ಹರಿದಿತ್ತು. ಸ್ವಾಭಾವಿಕವಾಗಿ ಸಂಗೀತವೇ ಉಳಿವಿನ ಹಾದಿಯಾಯಿತು. ‘ಚಲಾ ಚಲಾ ನವಾ ಬಾಳಾ’ ಎಂಬ ಮೊದಲ ಹಾಡಿನ ಭಾವವು ಬದುಕಿನ ಚಲನೆಯಲ್ಲಿ ಅಕ್ಷರಶಃ ಹಾಗೇ ನಡೆದುಬಂತು. ಸಾಂಗ್ಲಿಯಿಂದ ಮುಂಬೈಗೆ ವಲಸೆ ಬಂದಾಗ, ಕುಟುಂಬದ ಗೂಡಿನಲ್ಲಿದ್ದ ಕೋಗಿಲೆಮರಿಗಳು ಹಾರಲಾರಂಭಿಸಿದ್ದವು, ಹಾಡಲಾರಂಭಿಸಿದ್ದವು, ಸಂಗೀತ ಜಗತ್ತಿನ ಆಲಿಕೆಯನ್ನು ಸೆಳೆಯತೊಡಗಿದ್ದವು. ಅವುಗಳಲ್ಲಿ ಮೊದಲು ಆವರಿಸಿದ ಧ್ವನಿ ಅಕ್ಕ ಲತಾ ಮಂಗೇಶ್ಕರ್ ಅವರದ್ದು. ಲತಾ ಧ್ವನಿಯ ಇಂಪು ಮತ್ತು ಹಾಡಿನ ತಾನವು ಅದ್ಭುತ ರೂಪು ಪಡೆದಾಗ, ಸಹೋದರಿಯಾಗಿ ಹೊಳಪಿಗೆ ಬರುವುದು ಕಷ್ಟದ ಸವಾಲಾಗಿತ್ತು.
ಒಂದು ಮನೆಯಲ್ಲಿ ಅನೇಕ ಒಡಹುಟ್ಟಿದ ಪ್ರತಿಭೆಗಳು ಅದೇ ಮಟ್ಟದಲ್ಲಿ, ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಮತ್ತು ಯಶಸ್ಸು ಪಡೆಯುವುದು ಕಷ್ಟಸಾಧ್ಯ ಹಾಗೂ ಅಪರೂಪ. ಅಕ್ಕ ಲತಾ ಹಿಂದಿ ಹಾಡಿನ ದುನಿಯಾದಲ್ಲಿ ಬೇಗನೆ ಪ್ರಸಿದ್ಧಿ ಪಡೆಯುತ್ತಿದ್ದಾಗ, ಆಶಾಜಿ ಇನ್ನೂ ಹೆಣ ಗಾಡುವ ಸ್ಥಿತಿಯಿತ್ತು. ಆದರೆ ಆಶಾ ಛಲವೆಂದೂ
ಕುಂದಲಿಲ್ಲ. ಅಕ್ಕ ಲತಾರ ರೀತಿಯಲ್ಲಿ ಹಾಡಿದರೆ ತನಗೆ ಅವಕಾಶ ಸಿಗಲಾರದೆಂಬುದನ್ನು ಅರಿತು ಕೊಂಡಿದ್ದ ಆಶಾ, ತಮ್ಮ ಧ್ವನಿ ಹಾಗೂ ಶೈಲಿಯನ್ನು
ತಮ್ಮದೇ ರೀತಿಯಲ್ಲಿ ರೂಪಿಸಿಕೊಂಡು ವೈವಿಧ್ಯ ಗಳಿಸಿಕೊಂಡಿದ್ದಾಗಿ ಮತ್ತು ಧ್ವನಿಯನ್ನು ಇನ್ನೂ ಹರಿತಗೊಳಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ದೈತ್ಯ ಪ್ರತಿಭೆಯ ಪ್ರತೀಕವೇ ಅದು, ಗಾಢವಾದ ಪ್ರಭಾವ ಮತ್ತು ಸವಾಲುಗಳನ್ನು ಮೀರಿ ಬೆಳೆಯುವಂಥದ್ದು. ಲತಾ ಪ್ರಭಾವದ ಮಿತಿ ದಾಟಿ ಗಾನ ಲೋಕದಲ್ಲಿ ಆಶಾ ಸ್ಥಿರವಾಗಿದ್ದು ಹಾಗೆ.
ಆರಂಭದ ವರ್ಷಗಳಲ್ಲಿ ಮರಾಠಿ ಸಿನಿಮಾಗಳಲ್ಲಿ ಮತ್ತು ಇನ್ನುಳಿದ ರಂಗಪ್ರಕಾರಗಳಲ್ಲಿ ಆಗಾಗ ಹಾಡುವ ಅವಕಾಶ ಆಶಾಗೆ ಸಿಕ್ಕಿದ್ದರೂ, ಹಿಂದಿ ಸಿನಿಮಾದಲ್ಲಿ ಮೊಟ್ಟಮೊದಲ ಅವಕಾಶ ದೊರೆತಿದ್ದು ೫ ವರ್ಷಗಳ ನಂತರ, ‘ಸಾವನ್ ಆಯಾ’ ಚಿತ್ರದ ‘ಚುನರಿಯಾ’ ಹಾಡಿನ ಮೂಲಕ. ಆದರೆ ಹಿಂದಿ ಸಿನಿಮಾ ಜಗತ್ತಿನಲ್ಲಿನ ಹಾದಿ ಆಶಾಗೆ ಸುಗಮವಾಗಿರಲಿಲ್ಲ. ಅಕ್ಕ ಲತಾರ ಶಕ್ತಿ ಒಂದೆಡೆಯಾದರೆ, ಗೀತಾ ದತ್, ಶಂಶಾದ್ ಬೇಗಂ ಅಂಥವರೂ ಸಕ್ರಿಯರಾಗಿದ್ದ ಕಾಲವದು. ಹೀಗಾಗಿ ಕಡಿಮೆ ಆದಾಯದ, ಕಡಿಮೆ ಮಟ್ಟದ ಅವಕಾಶಗಳಷ್ಟೇ ದೊರೆತಿದ್ದವು.
ಸಿಕ್ಕಿದ್ದು ಕ್ಲಬ್ ಮತ್ತು ಕ್ಯಾಬರೆ ಹಾಡುಗಳಂಥವು. ಹೆಚ್ಚಿನ ಬೇಡಿಕೆಯಲ್ಲಿದ್ದ ಅಂದಿನ ಹಾಡುಗಾರರು ಬೇಡವೆಂದು ಬಿಟ್ಟಿದ್ದ ಹಾಡುಗಳೂ ಇರಲಿಕ್ಕೆ ಸಾಕು. ಆದರೂ ಧೃತಿಗೆಡದ ಆಶಾ ಪಾಲಿಗೆ ೧೯೫೪ರಲ್ಲಿ ರಾಜ್‌ಕಪೂರ್ ಅವರ ಸಿನಿಮಾದಲ್ಲಿ ‘ನನ್ಹೇ ಮುನ್ನೆ ಬಚ್ಚೆ ತೇರಿ ಮುಟ್ಟಿ ಮೇ ಕ್ಯಾ ಹೈ’ ಎನ್ನುವ ಹಾಡನ್ನು ಪ್ರಸಿದ್ಧ ಹಾಡುಗಾರ ರಫಿ ಸಾಹೇಬರ ಜತೆ ಹಾಡುವ ಅವಕಾಶ ಸಿಕ್ಕಿದ್ದೇ ಎತ್ತರದ ಹಾದಿಗೆ ಬುನಾದಿಯಾಯಿತು ಎನ್ನಲಾಗಿದೆ. ೨ ವರ್ಷಗಳ ನಂತರ ಒ.ಪಿ. ನಯ್ಯರ್ ಅವರ ಹಾಡನ್ನು ‘ಸಿಐಡಿ’ ಚಿತ್ರದಲ್ಲಿ ಹಾಡಿದ ಮೇಲೆ ಹೊಸ ಬಾಗಿಲುಗಳು ತೆರೆದು ಕೊಂಡವು. ಲತಾ ಅವರ ಮೆತ್ತಗಿನ ಧ್ವನಿಗಿಂತಲೂ ಸ್ವಲ್ಪ ದಪ್ಪನೆಯ ಸ್ವರ ಅರಸಿದ್ದ ಒ.ಪಿ. ನಯ್ಯರ್ ಹಾಡುಗಳಿಗೆ ಆಶಾ ಧ್ವನಿಯಾದರು. ಅಂದಿನಿಂದ ಸಿನಿಮಾ ಕ್ಷೇತ್ರದಲ್ಲಿನ ಆಶಾಕಿರಣ ಪ್ರಖರವಾಗುತ್ತಾ ಹೋಯಿತು.
ಆಶಾಜಿ ಹಾಡಿನ ಜನಪ್ರಿಯತೆ ತೀವ್ರವಾಗಿ ಬೆಳೆಯುತ್ತ ಹೋದಂತೆ ಹೀಗೊಂದು ಸಂಗತಿ ನಡೆಯಿತು. ಆಶಾ ಕಂಠಕ್ಕೆ ಮಾರುಹೋದ, ಕಪ್ಪು ಕನ್ನಡಕ ಧರಿಸಿದ್ದ, ತೆಳ್ಳನೆಯ ದೇಹದ ಕಾಲೇಜು ಹುಡುಗನೊಬ್ಬ ಆಶಾರ ಆಟೋಗ್ರಾಫ್ ಕೇಳಿ ಬಂದ. ಆತ ಆಗಾಗ ತನ್ನ ತಂದೆಯ ಜತೆ ಸ್ಟುಡಿಯೋಕ್ಕೆ ಬರುತ್ತಿದ್ದ. ಆತನೇ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಲು ಬಯಸಿದ್ದ ರಾಹುಲ್ ದೇವ್ ಬರ್ಮನ್. ಸಂಗೀತ ನಿರ್ದೇಶಕನಾಗಿ ಆರ್.ಡಿ. ಬರ್ಮನ್ ಮತ್ತು ಹಾಡುಗಾರ್ತಿಯಾಗಿ ಆಶಾ ಇಬ್ಬರೂ ಜತೆಯಾಗಿ ಸಿನಿಮಾ ಜಗತ್ತಿನಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದರು.
ಬರ್ಮನ್ ನಿರ್ದೇಶನದ ‘ತೀಸ್ರಿ ಮಂಜಿಲ್’ಗೆ ಹಾಡಿದ ಹಾಡುಗಳು ಆಶಾರನ್ನು ಹೊಸ ಮಂಜಿಲ್‌ನತ್ತ ಒಯ್ದವು. ಈ ಸಿನಿಮಾಕ್ಕೆ ಆಶಾ ಹಾಡಿದ ‘ಓ ಹಸೀನಾ ಝುಲೆವಾಲಿ’, ‘ಆಜಾ ಆಜಾ ಮೈ ಹೂಂ ಪ್ಯಾರ್ ತೇರಾ’, ‘ಓ ಮೇರೆ ಸೋನಾರೆ’ ಹಾಡುಗಳು ಅದ್ಭುತ ರೀತಿಯಲ್ಲಿ ಹಿಟ್ ಆಗಿ ಅಮರಗೀತೆಗಳ ಸಾಲಲ್ಲಿ ಸೇರಿಕೊಂಡವು. ಬರ್ಮನ್ ಅವರ ಪಾಶ್ಚಾತ್ಯ ಮತ್ತು ಪಾಪ್‌ಸ್ಟೈಲ್ ಸಂಗೀತಕ್ಕೂ, ಆಶಾಜಿ ಕಂಠಕ್ಕೂ ಒಳ್ಳೇ ಹೊಂದಾಣಿಕೆಯಾಗಿತ್ತು. ‘ಪಿಯಾ ತೊ ಅಬ್ ತು ಆಜಾ’, ‘ಚುರಾಲಿಯಾ ಹೈ ತುಮ್ ನೇ ಜೊ ದಿಲ್ ಕೊ’, ‘ದಮ್ ಮಾರೋ ದಮ್’, ‘ಏ ಮೇರಾ ದಿಲ್ ಪ್ಯಾರ್ ಕಾ ದೀವಾನಾ’ ಇತ್ಯಾದಿ ಹಾಡುಗಳು ಜನಪ್ರಿಯತೆಯ ಶಿಖರದಲ್ಲಿ ಎಂದೆಂದೂ ಸ್ಥಿರವಾಗಿವೆ.
‘ಅಹಹಾ ಆಜಾ’ ಎನ್ನುವಲ್ಲಿ ಶ್ವಾಸ ನೀಡುವ ರೀತಿ ಮತ್ತು ‘ಓ ಮೇರೆ ಸೋನಾರೆ’ ಎನ್ನುವಲ್ಲಿ ನೀಡುವ ಮಿಂಚು ಬೆಳಕಿನ ಗತಿಯ ಜತೆಯ ಭಾವುಕ ಒತ್ತು ಅಪ್ರತಿಮವಾಗಿವೆ ಎನ್ನುತ್ತಾರೆ ಸಂಗೀತ ಪಂಡಿತರು. ಆರ್.ಡಿ. ಬರ್ಮನ್ ಮತ್ತು ಆಶಾರ ಶ್ರೇಷ್ಠ ಜೋಡಿಯು ಸಂಗೀತಕ್ಕಷ್ಟೇ ಸೀಮಿತವಾಗದೆ ಮದುವೆಯಲ್ಲಿ ಒಂದಾದ್ದನ್ನೂ ಇಲ್ಲಿ ಹೇಳಬೇಕು. ಉನ್ನತ ಮಟ್ಟದ ಸಂಗೀತ ಸಾಧಕರ ಜೋಡಿ ಆದಾಗ್ಯೂ, ಇಬ್ಬರ ನಡುವೆ ಪ್ರೀತಿ, ಆದರ, ಪರಸ್ಪರ ಅರಿವು ಸಾಕಷ್ಟಿದ್ದರೂ ವೈವಾಹಿಕ ಬದುಕು ಬಹು ಕಾಲ ಉಳಿಯದೇ ಕೆಲ ವರ್ಷಗಳಲ್ಲೇ ಕೊನೆಗೊಂಡು ಪ್ರತ್ಯೇಕವಾಗುವಂತಾಯಿತು. ನಂತರವೂ ಪರಸ್ಪರರು ತಮ್ಮೊಳಗಿನ ಅಪಾರ ಮೆಚ್ಚುಗೆಯನ್ನು ಹಾಗೇ ಉಳಿಸಿಕೊಂಡಿದ್ದರು.
ಆಶಾ ಬದುಕಿನಲ್ಲಿ ನಡೆದ ಇನ್ನೊಂದು ಘಟನೆಯೆಂದರೆ, ತಮ್ಮ ೧೬ನೇ ವಯಸ್ಸಿನಲ್ಲಿ ಗಣಪತರಾವ್ ಭೋಸ್ಲೆ ಎಂಬುವರ ಜತೆ ಪ್ರೇಮವಿವಾಹವಾಗಿ, ‘ಆಶಾ ಮಂಗೇಶ್ಕರ್’ ಎಂಬುದು ‘ಆಶಾ ಭೋಸ್ಲೆ’ಯಾಗಿ ಬದಲಾಗಿದ್ದು. ವಿವಾಹ ಯಶಸ್ವಿಯಾಗದೆ ಮುರಿದು ಬಿದ್ದ ಮೇಲೆ ಮೂರು ಮಕ್ಕಳ ಸಲಿಗೆ ಮತ್ತು ಜವಾಬ್ದಾರಿಯು
ಆಶಾರ ಜತೆ ಸಾಗಿತ್ತು. ವೈಯಕ್ತಿಕ ಬದುಕಿನ ಆಗುಹೋಗುಗಳಿಂದ ಆಶಾಜಿ ಧೃತಿಗೆಡಲಿಲ್ಲ, ಸಂಗೀತ ಬದುಕಿನ ಯಾನ ದಲ್ಲಿ ಇನ್ನೂ ಗಟ್ಟಿಯಾಗಿ ಹೊರಹೊಮ್ಮುತ್ತಲೇ ನಡೆದರು. ‘ನಾನು ವಿಽಯಲ್ಲಿ ಬಲವಾದ ನಂಬಿಕೆ ಇಟ್ಟವಳು.
ಕೊನೆಗೂ ವಿಧಿಲಿಖಿತವೇ ಅಂತಿಮ ಫಲ ನೀಡುವುದು. ಯಾವುದು ಬರೆದಿಲ್ಲವೋ ಅದೆಂದೂ ಸಿಗದು, ಯಾವುದು ಬರೆದಿದೆಯೋ ಅದನ್ನು ಯಾರಿಂದಲೂ ತಪ್ಪಿಸಲಾಗದು’ ಎನ್ನುವ ಆಶಾ ಅಪ್ರತಿಮ ಆಶಾವಾದಿ. ‘ಸಾಧನೆಯು ಒಂದು ಅದ್ಭುತವಾದ ಯಶಸ್ಸಿನ ಮಾದರಿ. ಎಲ್ಲ ರೀತಿಯ ರಾಜಕೀಯ ಎಲ್ಲೆಡೆ ಇದೆ. ಎಲ್ಲವನ್ನೂ ಪಾರುಮಾಡಿ ಒಮ್ಮೆ ತಿರುಗಿ ಗಮನಿಸಿದಾಗ ಜಗತ್ತು ಮಜದಾರ್ ಕಾಣಿಸುತ್ತದೆ’ ಎಂದ ಆಶಾ ಮಾತು ಅರ್ಥಗರ್ಭಿತ. ಆಶಾಜಿ ಹಾಡಿದ ಹಾಡುಗಳು, ದೊರಕಿದ ಪುರಸ್ಕಾರಗಳು, ಸಾಧನೆಯನ್ನು ಪಟ್ಟಿಮಾಡುತ್ತ ಹೋಗುವುದು ಇಂಥ ಲೇಖನದ ಮಿತಿಯಲ್ಲಿ ಅಸಾಧ್ಯದ ಮಾತು. ಅದೊಂದು ಅಂತ್ಯವಿಲ್ಲದ
ಪುಸ್ತಕವಾಗಿದ್ದು, ಅಂದಿನ ತಲೆಮಾರಿನ ಮೀನಾ ಕುಮಾರಿಯಿಂದ ಇಂದಿನ ಕಾಜೊಲ್ ತನಕವೂ ಪಸರಿಸಿದೆ. ಆದರೂ, ಅಸಾಧ್ಯದ ಮಿತಿಯಲ್ಲಿಯೂ ಎಲ್ಲರ ಮನಸ್ಸಿನಲ್ಲಿ ಗುಂಗಾಗಿರುವ ‘ಉಮ್ರಾವ್ ಜಾನ್’ ಚಿತ್ರದ ‘ದಿಲ್ ಚೀಜ್ ಕ್ಯಾ ಹೈ’, ‘ಇನ್ ಆಂಖೊ ಕಿ ಮಸ್ತಿ’, ‘ರಂಗೀಲಾ’ದ ‘ತನಹಾ ತನಹಾ’, ‘ಲಗಾನ್’ ಚಿತ್ರದ ‘ರಾಧಾ ಕೈಸೆ ನ ಜಲೇ’ ಹಾಡುಗಳನ್ನು ಹೆಸರಿಸದೇ ಇರುವುದು ಹೇಗೆ? ಸುಮಾರು ೧೨,೦೦೦ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾದ ಆಶಾ, ಗಿನ್ನಿಸ್ ದಾಖಲೆ ಪುಸ್ತಕ ದಲ್ಲಿಯೂ ಸೇರಿ ಆಗಿದೆ. ದೊರೆತ ಸುಮಾರು ೭೬ಕ್ಕೂ ಹೆಚ್ಚು ಪ್ರತಿಷ್ಠಿತ ಪುರಸ್ಕಾರಗಳಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಬಿಬಿಸಿ ಜೀವಮಾನ
ಸಾಧನೆ ಪ್ರಶಸ್ತಿ ಮತ್ತು ಪದ್ಮವಿಭೂಷಣ ಸೇರಿವೆ.
ಜಗತ್ತಿನ ಅನೇಕ ಭಾಗಗಳಲ್ಲಿರುವ ‘ಆಶಾ’ ಬ್ರಾಂಡಿನ ಹಲವಾರು ರೆಸ್ಟೋರೆಂಟುಗಳಲ್ಲಿ ಅವರ ಪಾಲುದಾರಿಕೆ ಇದೆ. ಹೀಗಾಗಿ ಆಶಾ ಸಂಗೀತ ಸರಸ್ವತಿಯಲ್ಲದೆ ಅನ್ನಪೂರ್ಣೇಶ್ವರಿಯೂ ಹೌದು! ೯ ದಶಕದ ಹುಟ್ಟುಹಬ್ಬ ಪೂರೈಸಿದ ನವರತ್ನ ಆಶಾ ಬಡಿಸಿದ ಸಂಗೀತ ರಸದೌತಣ ಅನಂತ, ಅಮರ!
(ಲೇಖಕರು ಮುಂಬೈನ ಲಾಸಾ
ಸೂಪರ್ ಜನೆರಿಕ್ಸ್‌ನ ನಿರ್ದೇಶಕರು)