Saturday, 9th December 2023

ಅಶೋಕ ಸಾಮ್ರಾಜ್ಯ ಮೇಲೆದ್ದ ಕತೆ

ಮೂರ್ತಿ ಪೂಜೆ

ರಾಜ್ಯ ಬಿಜೆಪಿಯಲ್ಲಿ ಗಣೇಶ-ಸುಬ್ರಹ್ಮಣ್ಯ ಎಪಿಸೋಡು ಸಾಂಗೋಪಾಂಗವಾಗಿ ನಡೆದು ಹಿರಿಯ ನಾಯಕ ಆರ್.ಅಶೋಕ್ ವಿಧಾನಸಭೆಯ ಪ್ರತಿಪಕ್ಷನಾಯಕ ರಾಗಿ ಸೆಟ್ಲಾಗಿದ್ದಾರೆ. ಅಂದ ಹಾಗೆ ಪಕ್ಷದ ಶಾಸಕಾಂಗ ನಾಯಕ ಸ್ಥಾನಕ್ಕೆ, ಆ ಮೂಲಕ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಯಾರನ್ನು ತರಬೇಕು ಎಂಬ ಪ್ರಶ್ನೆ ಎದ್ದಾಗ ಮೂರು ಹೆಸರುಗಳು ಫ್ರಂಟ್ ಲೈನಿಗೆ ಬಂದಿದ್ದವು. ಈ ಪೈಕಿ ಹಿರಿಯ ನಾಯಕ ಆರ್.ಅಶೋಕ್ ಒಬ್ಬರಾದರೆ, ಅವರ ಜತೆ ಜತೆಗೆ ಬಿಜೆಪಿ ಸರಕಾರದ ಅವಽಯಲ್ಲಿ ಪವರ್ ಫುಲ್ ಆಗಿದ್ದ ನಾಯಕರೊಬ್ಬರ ಹೆಸರಿತ್ತು. ಉಳಿದಂತೆ ಮಾಜಿ ಇಂಧನ ಸಚಿವ ಸುನೀಲ್ ಕುಮಾರ್ ಅವರ ಹೆಸರು ಕಾಣಿಸಿ ಕೊಂಡಿತ್ತು. ಅಂದ ಹಾಗೆ ರೇಸು ಶುರುವಾಗುವ ಮುನ್ನವೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ನಿಂತಿದ್ದ ಅಶೋಕ್ ಅವರು, ನಾನು ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಬರಲು ನೀವು ಬೆಂಬಲ ನೀಡಬೇಕು ಎಂದು ಇಂಡೆಂಟು ಇಟ್ಟಿದ್ದರು.

ಅವರಿಟ್ಟ ಈ ಇಂಡೆಂಟು ಯಡಿಯೂರಪ್ಪ ಅವರಿಗೆ ಇಷ್ಟವಾಗಿದ್ದು ಸಹಜ. ಎಷ್ಟೇ ಆದರೂ ಅಶೋಕ್ ಅವರು ಹಿಂದಿನಿಂದ ತಮ್ಮ ಬಣದಲ್ಲಿರುವವರು. ತಾವು ಮುಖ್ಯಮಂತ್ರಿ ಹುದೆಯಿಂದ ಕೆಳಗಿಳಿದ ನಂತರ ವಿಜಯೇಂದ್ರ ಅವರಿಗೆ ಆದ ಅನ್ಯಾಯಕ್ಕೆ ಮಮ್ಮಲ ಮರುಗಿದವರು. ಒಂದು ಹಂತದಲ್ಲಿ ವಿಜಯೇಂದ್ರ ಅವರಿಗೆ ಎಮ್ಮೆಲ್ಸಿ ಟಿಕೆಟ್ಟು ಕೊಡಿಸಲು ತಾವು ಪರದಾಡುತ್ತಿದ್ದಾಗ ರಾಜ್ಯ ಬಿಜೆಪಿಯ ಕೋರ್ ಕಮಿಟಿಯಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಕೊಡದಿದ್ದರೆ ತಪ್ಪಾಗುತ್ತದೆ ಎಂದು ಬಹಿರಂಗವಾಗಿ ಹೇಳಿದವರು.

ಹೀಗೆ ತಮ್ಮ ಕಷ್ಟ ಕಾಲದಲ್ಲಿ ಹೆಗಲಾಗಿದ್ದ ಅಶೋಕ್ ಅವರನ್ನು ಈಗ ತಾವು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ತಾವಿಡುವ ಹೆಜ್ಜೆಗೆ ಪ್ಲಸ್ ಆಗಿರುತ್ತಾರೆ. ಯುದ್ಧ
ಎದುರಾದಾಗ ಶಸಾಸ ಪೂರೈಸುತ್ತಾರೆ ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಇದಾದ ನಂತರ ನವೆಂಬರ್ ಮೊದಲ ವಾರ ಯಡಿಯೂರಪ್ಪನವರ ಆಪ್ತ,
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮನೆಯಲ್ಲಿ ಒಂದು ವಿಶೇಷ ಪೂಜೆ ಏರ್ಪಾಟಾಗಿದೆ. ಪೂಜೆಯ ದಿನ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪಕ್ಷದ ಬಹುತೇಕ ಶಾಸಕರನ್ನು ಆಹ್ವಾನಿಸಿದ್ದಾರೆ.

ಈ ಆಹ್ವಾನದ ಮೇರೆಗೆ ಬಿಜೆಪಿಯ ಪ್ರಮುಖ ಶಾಸಕರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮನೆಗೆ ಹೋದರಲ್ಲ? ಹೀಗೆ ಹೋದಾಗ ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ಯಾರು ಬರಬೇಕು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಅಷ್ಟೇ ಅಲ್ಲ,ಇವತ್ತಿನ ಸ್ಥಿತಿಯಲ್ಲಿ ಈ ಸ್ಥಾನಕ್ಕೆ ಅಶೋಕ್ ಬರು ವುದು ಬೆಸ್ಟು ಎಂಬ ಅಭಿಪ್ರಾಯ ಕನ್ ಸಾಲಿಡೇಟ್ ಆಗಿದೆ. ಹೀಗೆ ಅಶೋಕ್ ಅವರು ಯಡಿಯೂರಪ್ಪ ಅವರ ಸುತ್ತ ಸುತ್ತುತ್ತಾ, ತಮ್ಮ ಪರವಾದ ಅಭಿಪ್ರಾಯ ಬಿಲ್ಡ ಆಗುವಂತೆ
ನೋಡಿಕೊಳ್ಳುತ್ತಿದ್ದರೆ, ಶಾಸಕಾಂಗ ನಾಯಕನ ರೇಸಿನಲ್ಲಿದ್ದ ಮತ್ತೊಬ್ಬ ನಾಯಕರು ಹೈದರಾಬಾದಿನ ಜ್ಯೋತಿಷಿಯೊಬ್ಬರ ಮೊರೆ ಹೋಗಿದ್ದಾರೆ. ಸದರಿ ಜ್ಯೋತಿಷಿ ಬಿಜೆಪಿಯ ರಾಷ್ಟ್ರೀಯ ನಾಯಕರಾದ ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಅವರಿಗೆ ತುಂಬ ಕ್ಲೋಸು. ಹೀಗಾಗಿ ಅವರನ್ನು ಹಿಡಿದರೆ ನಿಮ್ಮ ಕೆಲಸ
ಸಲೀಸು ಅಂತ ಆಪ್ತರು ಹೇಳಿದ ಮಾತು ಇದಕ್ಕೆ ಕಾರಣ.

ಸರಿ, ಈ ನಾಯಕರು ಹೈದರಾಬಾದಿಗೆ ಹೋಗಿ ಸದರಿ ಜ್ಯೋತಿಷಿಯನ್ನು ಅಪ್ರೋಚ್ ಮಾಡಿದಾಗ, ಡೋಂಟ್ ವರಿ, ನೀವು ಪ್ರತಿಪಕ್ಷ ನಾಯಕನಾಗಲು ನಾನು ನೆರವು ನೀಡುತ್ತೇನೆ. ನಾನು ಹೇಳಿದರೆ ನಡ್ಡಾಜೀ, ಶಾಜೀ ಇಲ್ಲ ಅನ್ನುವುದಿಲ್ಲ ಅಂತ ಅವರು ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಅಲ್ಲಿಂದಲೇ ದಿಲ್ಲಿಗೆ ಫೋನು ಮಾಡಿ ‘ಈ ಕೆಲಸ ಆಗಬೇಕು ಅಂತ ಸಾಹೇಬರಿಗೆ ವಿಷಯ ತಿಳಿಸಿ’ ಅಂತ ಯಾರಿಗೋ ಹೇಳಿzರೆ. ಅವತ್ತು ಅವರ ಗೆಟಪ್ಪು, ಬಿಲ್ಡಪ್ಪುಗಳನ್ನು ನೋಡಿದ ಈ ನಾಯಕರಿಗೆ ದೊಡ್ಡ ಮಟ್ಟದಲ್ಲಿ ಭರವಸೆ ಮೂಡಿದೆ. ಅಷ್ಟೇ ಅಲ್ಲ, ಮೇಲಿಂದ ಮೇಲೆ ಅವರನ್ನು ಸಂಪರ್ಕಿಸುವಂತೆ ಮಾಡಿದೆ. ಆದರೆ ಯಾವಾಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಬಂದು ಕುಳಿತಿದ್ದಾರೋ? ಆಗ ಒಂದು ವಿಷಯ ಎಲ್ಲರಿಗೂ ಸ್ಪಷ್ಟವಾಗಿದೆ.

ಅದೆಂದರೆ, ಕರ್ನಾಟಕದಲ್ಲಿ ಪಕ್ಷವನ್ನು ಯಡಿಯೂರಪ್ಪ ಅವರ ಕೈಗೆ ಕೊಡಲು ಹೈಕಮಾಂಡ್ ವರಿಷ್ಟರು ನಿರ್ಧರಿಸಿದ್ದಾರೆ ಎಂಬುದು. ಯಾವಾಗ ಇದು ಸ್ಪಷ್ಟವಾಯಿತೋ?ಆಗ ಹೈದರಾಬಾದಿನ ಜ್ಯೋತಿಷಿಯ ಮೊರೆ ಹೋಗಿದ್ದ ನಾಯಕರ ಹೆಸರು ಸೇರಿದಂತೆ ಎಲ್ಲರ ಹೆಸರು ಹಿಂದೆ ಸರಿದಿದೆ. ಮತ್ತು ಶುಕ್ರವಾರ
ಸಂಜೆ ಬೆಂಗಳೂರಿನ ಐಟಿಸಿ ಗಾರ್ಡೇನಿಯ ಹೋಟೆಲಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆ ಅಶೋಕ್ ಅವರ ನೆತ್ತಿಯ ಮೇಲೆ ಕಿರೀಟ ಇಟ್ಟು ಜೈ ಎಂದಿದೆ.
ಅಂದ ಹಾಗೆ ಒಮ್ಮೆ ಗಣೇಶ-ಸುಬ್ರಹ್ಮಣ್ಯ ಅವರ ನಡುವೆ ಯಾರು ಹೆಚ್ಚು? ಎಂಬ ಪೈಪೋಟಿ ಶುರುವಾಗುತ್ತದೆ. ಆಗ ಜಗತ್ತನ್ನು ಮೊದಲು ಯಾರು ಸುತ್ತಿ ಬರುತ್ತಾರೋ? ಅವರು ಶ್ರೇಷ್ಟರು ಎಂಬ ತೀರ್ಮಾನವಾದಾಗ ಸುಬ್ರಹ್ಮಣ್ಯ ತಕ್ಷಣವೇ ನವಿಲು ಹತ್ತಿ ಪ್ರಪಂಚ ಪರ್ಯಟನೆಗೆ ಮುಂದಾಗುತ್ತಾನೆ.

ಆದರೆ ಆತ ಪ್ರಪಂಚ ಪರ್ಯಟನೆ ಮುಗಿಸಿ ವಾಪಸಾಗುವ ಮುನ್ನವೇ ಗಣೇಶ ತಾನು ಕುಳಿತಲ್ಲಿಂದ ಮೇಲೆದ್ದು ತನ್ನ ತಂದೆ-ತಾಯಿಗಳಾದ ಶಿವ-ಪಾರ್ವತಿಯರಿಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಸ್ಪರ್ಧೆಯಲ್ಲಿ ಗೆಲ್ಲುತ್ತಾನೆ. ಅರ್ಥಾತ್, ಪ್ರಪಂಚ ಸುತ್ತುವುದಕ್ಕಿಂತ, ಪ್ರಪಂಚವನ್ನು ಸೃಷ್ಟಿಸಿದ ತಂದೆ- ತಾಯಿಯನ್ನು ಸುತ್ತುವುದು ಶ್ರೇಷ್ಟ ಎಂಬುದು ಈ ಕತೆಯ ನೀತಿ. ಈ ನೀತಿಯನ್ನು ಅಶೋಕ್ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿzರೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಪರಿಷತ್ತಿಗೆ ಛಲವಾದಿ ನಾಯಕ?
ಈ ಮಧ್ಯೆ ರಾಜ್ಯ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ದಲಿತ ಸಮುದಾಯದ ಛಲವಾದಿ ನಾರಾಯಣಸ್ವಾಮಿ ಬಂದು ಕೂರುವ ಸಾಧ್ಯತೆಗಳು
ದಟ್ಟವಾಗಿವೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರು, ಶಾಸನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಒಕ್ಕಲಿಗರು ಬಂದು ಕುಳಿತ ಮೇಲೆ ಹಿಂದ ಸಮುದಾಯ ಗಳಿಗೆ ನ್ಯಾಯ ಕೊಡಬೇಕಲ್ಲ? ಎಂಬ ಲೆಕ್ಕಾಚಾರ ಇದಕ್ಕೆ ಕಾರಣ. ಹಾಗಂತ ಇದೊಂದೇ ಕಾರಣದಿಂದ ಛಲವಾದಿ ನಾರಾಯಣಸ್ವಾಮಿ ಅವರ ಹೆಸರು ಕೇಳುತ್ತಿಲ್ಲ. ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎದುರಿಸುವ ವಿಷಯದಲ್ಲಿ ಅವರು ತೋರಿಸುತ್ತಿರುವ ಗಟ್ಟಿತನವೂ ಇದಕ್ಕೆ ಕಾರಣ. ಅಂದ ಹಾಗೆ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕನ ರೇಸಿನಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರು ಇದೆಯಾದರೂ, ಛಲವಾದಿ ನಾರಾಯಣಸ್ವಾಮಿ
ಒಳ್ಳೆಯ ಆಯ್ಕೆ ಅಂತ ಯಡಿಯೂರಪ್ಪ ಭಾವಿಸಿದ್ದಾರೆ. ಇದೇ ರೀತಿ ವಿಧಾನಸಭೆಯಲ್ಲಿ ಪಕ್ಷದ ಉಪನಾಯಕನ ಸ್ಥಾನಕ್ಕೆ ಹಿಂದುಳಿದವರನ್ನು ತರಬೇಕು ಎಂಬುದು ಅವರ ಯೋಚನೆ.

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪ ಅವರ ಈ ಲೆಕ್ಕಾಚಾರವನ್ನು ಅಶೋಕ್ ದಿಲ್ಲಿ ನಾಯಕರ ಕಿವಿಗೆ ಮುಟ್ಟಿಸಲಿದ್ದಾರೆ. ನವೆಂಬರ್ ೨೩,೨೪ ಇಲ್ಲವೇ ೨೫ರಂದು ದಿಲ್ಲಿಗೆ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿರುವ ಅಶೋಕ್ ಈ ವಿಷಯವನ್ನು ಅವರಿಗೆ ಮುಟ್ಟಿಸುವುದಲ್ಲದೆ ಅದಕ್ಕೆ ಗ್ರೀನ್ ಸಿಗ್ನಲ್ ಪಡೆದು ಬರಲಿದ್ದಾರೆ.

ಸಿಎಂ-ಡಿಸಿಎಂ ಕೊಟ್ಟ ಟಿಪ್ಸು ಏನು?
ಈ ಮಧ್ಯೆ ಬಿಜೆಪಿಯ ನೂತನ ಅಧ್ಯಕ್ಷ ವಿಜಯೇಂದ್ರ ಅವರ ಮೇಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಾಢವಾದ
ಪ್ರಭಾವ ಬೀರಿzರಂತೆ. ಕಾರಣ? ಉಭಯ ನಾಯಕರ ಮಧ್ಯೆ ಭಿನ್ನಾಭಿಪ್ರಾಯವಿದೆ ಅಂತ ಯಾರೆಷ್ಟೇ ಹೇಳಿದರೂ ಪಕ್ಷದ ಕ್ಯಾಂಡಿಡೇಟುಗಳನ್ನು ಗೆಲ್ಲಿಸುವ ವಿಷಯದಲ್ಲಿ ಅವರ ಮಧ್ಯೆ ನಯಾ ಪೈಸೆಯ ಒಡಕು ಕಾಣದಿರುವುದು.

ವಸ್ತುಸ್ಥಿತಿ ಎಂದರೆ ಕರ್ನಾಟಕದಲ್ಲಿ ಮರಳಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದ ರಾಜ್ಯದ ಬಿಜೆಪಿ ನಾಯಕರು ವರಿಷ್ಟರ ಬಳಿ, ಮುಖ್ಯಮಂತ್ರಿ ಹುzಗಾಗಿ ಸಿದ್ಧರಾಮಯ್ಯ- ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿರುವ ಸಂಘರ್ಷ ನಮಗೆ ವರವಾಗಲಿದೆ. ಅವರ ಕ್ಯಾಂಡಿಡೇಟುಗಳನ್ನು ಇವರು, ಇವರ ಕ್ಯಾಂಡಿಡೇಟು ಗಳನ್ನು ಅವರು ಸೋಲಿಸುವುದರಿಂದ ಬಿಜೆಪಿ ಪುನಃ ಅಽಕಾರಕ್ಕೆ ಬರಲಿದೆ ಎನ್ನುತ್ತಿದ್ದರು. ಆದರೆ ಯಾರೇನೇ ಹೇಳಿದರೂ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಏಕೋಭಾವ ದಿಂದ ಕೆಲಸ ಮಾಡಿ ಕಾಂಗೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದರು. ಭಿನ್ನಾಭಿಪ್ರಾಯದ ಮಧ್ಯೆಯೂ ಈ ಇಬ್ಬರ
ಮಧ್ಯೆ ಇಂತಹ ಕೆಮಿಸ್ಟ್ರಿ ಹೇಗೆ ಸಾಧ್ಯವಾಗುತ್ತಿದೆ? ಎಂಬುದೇ ವಿಜಯೇಂದ್ರ ಅವರ ಸದ್ಯದ ವಿಸ್ಮಯ. ಹೀಗಾಗಿಯೇ ಈ ನಾಯಕರನ್ನು ಆದರ್ಶವಾಗಿಟ್ಟು ಕೊಂಡಿರುವ ಅವರು, ಬಿಜೆಪಿಯಲ್ಲೂ ಇದು ಸಾಧ್ಯವಾಗಬೇಕು ಎಂದು ಬಯಸಿದ್ದಾರಂತೆ. ಅಂದ ಹಾಗೆ ವಿಜಯೇಂದ್ರ ಅವರು ಅಧ್ಯಕ್ಷರಾದ ಮೇಲೆ ಬಿಜೆಪಿಯಲ್ಲಿ ರುವ ಯಡಿಯೂರಪ್ಪ ವಿರೋಧಿ ಬಣ ಸಿಟ್ಟಿಗೆದ್ದಿದೆ.

ಅದರ ಈ ಸಿಟ್ಟು ತಾರರಕ್ಕೇರದಂತೆ ನೋಡಿಕೊಳ್ಳಬೇಕು ಎಂಬುದೇ ವಿಜಯೇಂದ್ರ ಅವರ ಸದ್ಯದ ಯೋಚನೆ. ಎಷ್ಟೇ ದೊಡ್ಡ ಭಿನ್ನಾಭಿಪ್ರಾಯವಿದ್ದರೂ ಪಕ್ಷದ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸಾಧ್ಯವಾಗುತ್ತಿರುವ ಹೊಂದಾಣಿಕೆ ನಮಗೂ ಸಾಧ್ಯವಾಗಬೇಕು ಎಂಬುದು ಅವರ ಹಪಹಪಿ.
ಅಂದ ಹಾಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟವನ್ನು ಕೊಡುವ ಮುನ್ನ ವರಿಷ್ಠರು ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರಿಗೆ ಒಂದು ಕಂಡೀಷನ್ನು ಹಾಕಿದ್ದಾರೆ. ನೀವು ಅದೇನು ಮಾಡುತ್ತೀರೋ ಗೊತ್ತಿಲ್ಲ.ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಇಪ್ಪತ್ತು ಮಂದಿ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂಬುದು ಈ ಕಂಡೀಷನ್. ಹೀಗೆ ನೀವು ಇಪ್ಪತ್ತು ಸೀಟುಗಳನ್ನುಗೆಲ್ಲಿಸಿಕೊಂಡು ಬಂದರೆ ಮೈತ್ರಿಪಕ್ಷ ಜೆಡಿಎಸ್ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ. ಅಲ್ಲಿಗೆ ಕರ್ನಾಟಕದಿಂದ ನಾವೇನು ಬಯಸಿದ್ದೇವೋ ಅದು ನಮಗೆ ಸಿಕ್ಕಂತಾಗುತ್ತದೆ ಅಂತ ವರಿಷ್ಠರು ಹೇಳಿರುವ ಮಾತು ವಿಜಯೇಂದ್ರ ಅವರಿಗೆ ಸವಾಲಾಗಿ ಪರಿಣಮಿಸಿದೆ.

ಹೀಗಾಗಿ ಇದು ಸಾಧ್ಯವಾಗಬೇಕು ಅಂತಿದ್ದರೆ ಪಕ್ಷದಲ್ಲಿ ಒಡಕಿನ ಧ್ವನಿ ಇರಬಾರದು. ಬದಲಿಗೆ ಯಾರೆಷ್ಟೇ ಸಿಟ್ಟು ಮಾಡಿಕೊಂಡರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂಬುದು ವಿಜಯೇಂದ್ರ ಅವರ ಥಿಂಕಿಂಗು. ಹೀಗಾಗಿ ಹೋದಲ್ಲ ತಮ್ಮ ಈ ಥಿಂಕಿಂಗಿಗೆ ಕಾರಣವಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ತಾರೀಪು ಮಾಡಲು ವಿಜಯೇಂದ್ರ ಮರೆಯುತ್ತಿಲ್ಲ.

Leave a Reply

Your email address will not be published. Required fields are marked *

error: Content is protected !!