Thursday, 3rd October 2024

Ranjith H Ashwath Column: ರಾಜ್ಯದಲ್ಲೀಗ ರಾಜೀನಾಮೆಯ ರಾಜಕೀಯ

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ಕಳೆದ ಎರಡು ತಿಂಗಳಿನಿಂದ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಒಂದಿಲ್ಲೊಂದು ಕಾರಣಕ್ಕೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಮುಡಾ ಪ್ರಕರಣ, ಬಿಜೆಪಿಗರ ಭಿನ್ನಮತ, ಬಂಡಾಯ ಪಾದಯಾತ್ರೆ ಸೇರಿದಂತೆ ವಿವಿಧ ಕಾರಣಕ್ಕೆ ಸದ್ದು ಮಾಡಿದ್ದ ಕರ್ನಾಟಕದ ರಾಜಕೀಯ, ಇದೀಗ ಹತ್ತು ಹಲವು ಆರೋಪ -ಪ್ರತ್ಯಾರೋಪ ಗಳಿಂದಾಗಿ ರಾಷ್ಟ್ರವ್ಯಾಪಿ ಗಮನ ಸೆಳೆದಿದೆ.

ರಾಜ್ಯದಲ್ಲಿ ರಾಜಕೀಯ ಮೀರಿ ಹೈಕೋರ್ಟ್, ಐಪಿಸಿ, ಬಿಎನ್‌ಎಸ್ ಕಲಂಗಳೇ ಚರ್ಚೆಯಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದವರ ಗಮನವೀಗ, ಚುನಾವಣಾ ಬಾಂಡ್ ಪ್ರಕರಣದ ಸಂಬಂಧ ಕೇಂದ್ರದ ಅರ್ಥಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್ ದಾಖಲಿಸಲು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದ ಬಳಿಕ ಬಿಜೆಪಿಯತ್ತ ತಿರುಗಿದೆ.

ಚುನಾವಣಾ ಬಾಂಡ್ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕರಣಕ್ಕೆ ಬಹುದೊಡ್ಡ ‘ಶೀಲ್ಡ್’ ಸಿಕ್ಕಂತಾಗಿದೆ ಎನ್ನುವ ವಿಶ್ಲೇಷಣೆ ಕೇಳಿ ಬರುತ್ತಿದೆ. ಕರ್ನಾಟಕ ಪೊಲೀಸರು
ದಾಖಲಿಸಿರುವ ಈ ಪ್ರಕರಣ ಕೇವಲ ಕಾಂಗ್ರೆಸಿಗರಿಗೆ ಮಾತ್ರವಲ್ಲದೇ, ದೇಶಾದ್ಯಂತ ಬಿಜೆಪಿ ವಿರೋಧಿ ಬಣದಲ್ಲಿರುವ ಎಲ್ಲ ಪಕ್ಷಗಳಿಗೆ ಸಿಕ್ಕಿರುವ ಬಹುದೊಡ್ಡ ಅಸ್ತ್ರವಾಗಿದೆ.

ಕೇಂದ್ರದ ಅರ್ಥ ಸಚಿವೆಯೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಜಾರಿ ನಿರ್ದೇಶನಾಲಯದ ಅಧಿಕಾರಿ ಗಳ ವಿರುದ್ಧವೂ ದೂರು ದಾಖಲಾಗಿರುವುದು ಪ್ರತಿಪಕ್ಷ ಗಳ ಪಾಲಿಗೆ ಬಿಜೆಪಿ ವಿರುದ್ಧ ಮಾತನಾಡಲು ಸಿಕ್ಕಿರುವ ಬಹುದೊಡ್ಡ ವಿಷಯವಾಗಿದೆ. ಸದ್ಯ ಈ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ಪ್ರತಿಪಕ್ಷಗಳಿಗೆ ಸಿಕ್ಕಿರುವ ಅಸ್ತ್ರ ಎನಿಸಿದೆ.

ಈ ಒಂದು ಪ್ರಕರಣದ ಎಫ್‌ ಐಆರ್‌ನಿಂದ ಕೇಂದ್ರ ಸರಕಾರದ ಮೇಲೆ ಈ ಪ್ರಮಾಣದಲ್ಲಿ ಮುಗಿ ಬೀಳಲು
ಪ್ರಮುಖ ಕಾರಣವಿದೆ. ಏಕೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದ ಗದ್ದುಗೆ ಏರಿದ ಬಳಿಕ ಕೇಂದ್ರ
ಸರಕಾರದ ವಿರುದ್ಧ ಹಾಗೂ ಮೋದಿ ಆಪ್ತ ಸಚಿವರ ವಿರುದ್ಧ ಕೇಳಿಬಂದಿರುವ ಬಹುದೊಡ್ಡ ಭ್ರಷ್ಟಾಚಾರದ ಆರೋಪ ಇದಾಗಿದೆ. ಚುನಾವಣಾ ಬಾಂಡ್ ವಿಷಯದಲ್ಲಿ ಈ ಹಿಂದೆಯೇ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ ದ್ದರೂ, ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧ ಆರೋಪಗಳಿರಲಿಲ್ಲ.

ಆದರೀಗ ಇದೇ ಮೊದಲ ಬಾರಿಗೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಫ್ಐಆರ್ ದಾಖಲಾಗಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಪಿಸಿಆರ್ ಆಗದೇ‌ ನೇರವಾಗಿ ರಾಜ್ಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರೆ, ಅದಕ್ಕೊಂದು ‘ರಾಜಕೀಯ ಲೇಪನ’ ಸಿಗುತ್ತಿತ್ತು. ಆದರೆ ಈ‌ ಪ್ರಕರಣದಲ್ಲಿ ಆರಂಭಿಕ ಹಂತದಲ್ಲಿ ಪೊಲೀಸರು ದೂರು ಪಡೆದಿಲ್ಲ ಎನ್ನುವ ಕಾರಣಕ್ಕೆ ದೂರುದಾರ ಆದರ್ಶ್ ಅಯ್ಯರ್ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ದೂರು ದಾಖಲಾಗಿರುವುದು ಬಿಜೆಪಿ ವಿರುದ್ಧ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಲು ವಿರೋಧ ಪಕ್ಷಗಳಿಗೆ ಸಿಕ್ಕಿರುವ ಬಹುದೊಡ್ಡ ಅಸ್ತ್ರವಾಗಿದೆ.

ಯಾವುದೇ ಪಕ್ಷದ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಆರೋಪಗಳು ಬಂದಾಗ ಪ್ರತಿಪಕ್ಷಗಳು ರಾಜೀನಾಮೆಗೆ ಆಗ್ರಹಿಸುವುದು ಸಾಮಾನ್ಯ. ಕಾನೂನಾತ್ಮಕವಾಗಿ ರಾಜೀನಾಮೆ ನೀಡಬೇಕು ಎನ್ನುವ ಲಿಖಿತ ನಿಯಮವಿಲ್ಲದಿದ್ದರೂ, ‘ನೈತಿಕ’ ಪ್ರಶ್ನೆಯ ಕಾರಣಕ್ಕೆ ಅನೇಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಉದಾಹರಣೆಯಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಕಾರಣಗಳಿಗೆ ಕೇಳಿಬರುವ ಆರೋಪಗಳನ್ನು ‘ರಾಜಕೀಯ’ವಾಗಿಯೇ
ಎದುರಿಸುವ ಮಾತುಗಳನ್ನು ಬಹುತೇಕರು ಆಡುತ್ತಿದ್ದಾರೆ.

ನಿರ್ಮಲಾ ಸೀತಾರಾಮನ್ ವಿರುದ್ಧ ದೂರು ದಾಖಲಾಗುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ದೂರು ದಾಖಲಾಗಿತ್ತು. ಮುಡಾ ಪ್ರಕರಣ ಬಹಿರಂಗವಾದ ದಿನದಿಂದಲೂ ಬಿಜೆಪಿಗರು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದೇ ವಿಷಯವನ್ನು ಮುಂದಿ
ಟ್ಟುಕೊಂಡು ಬಿಜೆಪಿ, ಜೆಡಿಎಸ್‌ನವರು ಪಾದಯಾತ್ರೆ ನಡೆಸಿದ್ದರು. ಇದಾದ ಬಳಿಕ ಸಚಿವ ಸಂಪುಟದ ವಿವಿಧ ಸಚಿವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದಾಗಲೆಲ್ಲ, ಆ ನಾಯಕರ ರಾಜೀನಾಮೆಯನ್ನು ಬಿಜೆಪಿಗರು ಆಗ್ರಹಿಸುತ್ತಾ ಬಂದಿದ್ದಾರೆ. ಆದರೀಗ ನಿರ್ಮಲಾ ಹಾಗೂ ಬಿಜೆಪಿಯ ಇಡೀ ಪದಾಧಿಕಾರಿಗಳ ವಿರುದ್ಧವೇ ದೂರು ದಾಖಲಾಗಿರುವುದರಿಂದ ಕಾಂಗ್ರೆಸಿಗರ ರಾಜೀನಾಮೆ ಕೇಳುವ ಬಿಜೆಪಿಗರ ಧ್ವನಿಯನ್ನು ಅಡಗಿಸುವ ಸ್ಥಿತಿ ನಿರ್ಮಾಣ ವಾಗಿದೆ ಎಂದರೆ ತಪ್ಪಾಗುವುದಿಲ್ಲ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಕಾಂಗ್ರೆಸ್ ನಾಯಕರು ಇದೀಗ, ‘ಸಿಎಂ ರಾಜೀನಾಮೆ ನೀಡಬೇಕು ಎನ್ನುತ್ತಿರುವ ಬಿಜೆಪಿಯ ಎಷ್ಟು ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ? ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿರುವ ೨೮ಕ್ಕೂ ಹೆಚ್ಚು ಕೇಂದ್ರ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು‌ ದಾಖಲಾಗಿದ್ದರೂ, ಈವರೆಗೆ ಅವರ ರಾಜೀನಾಮೆಯನ್ನು ಏಕೆ ಕೇಳಿಲ್ಲ?’ ಎನ್ನುವ ಪ್ರಶ್ನೆಗಳನ್ನು ಎತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಬಿಜೆಪಿಗರು ಆಗ್ರಹಿಸಿದರೂ,
ರಾಜೀನಾಮೆ ನೀಡುವ ಮನಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಾಗಲಿ, ಪಡೆಯುವ ಮನಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್ ಆಗಲಿ ಇಲ್ಲ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ಸಿಕ್ಕಿದ್ದರೂ,
ಇದೊಂದು ಸುದೀರ್ಘ ಪ್ರಕ್ರಿಯೆ ಹಾಗೂ ಕಾನೂನಾತ್ಮಕವಾಗಿ ಬಹುದೂರ ಸಾಗುವ ಪ್ರಕರಣವಾಗಿದೆ. ಈ ಹಂತ
ದವರೆಗೂ ಹೈಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಕೆಯಾಗದೇ ಇರುವುದರಿಂದ, ಸಲ್ಲಿಕೆಯಾದ ಬಳಿಕ ಯಾವುದಾದರೂ
ಒಂದು ಹಂತದಲ್ಲಿ ಈ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ಸಿಗುವ ಸಾಧ್ಯತೆಯಿದೆ. ಆದ್ದರಿಂದ ಆ ಹಂತದವರೆಗೂ
ಕಾದು ನೋಡೋಣ ಎನ್ನುವ ಲೆಕ್ಕಾಚಾರದಲ್ಲಿ ಪಕ್ಷದ ಹೈಕಮಾಂಡ್ ಇದೆ.

ಇನ್ನೊಂದು ಪ್ರಮುಖ ಅಂಶವೆಂದರೆ, ಸಿದ್ದರಾಮಯ್ಯ ಅವರ ಬೆನ್ನಿಗೆ ಈಗಲೂ ಅಹಿಂದ ಸಮುದಾಯ ನಿಂತಿದೆ
ಹಾಗೂ ಕಾಂಗ್ರೆಸ್‌ನ ಅರ್ಧಕ್ಕಿಂತ ಹೆಚ್ಚು ಶಾಸಕರು ಸಿದ್ದರಾಮಯ್ಯ ಅವರ ಆಪ್ತರಿದ್ದಾರೆ. ಈ ಹಂತದಲ್ಲಿ ಅವರಿಂದ
ರಾಜೀನಾಮೆ ಪಡೆಯುವ ಪ್ರಯತ್ನವನ್ನು ಮಾಡಿದರೂ, ಸರಕಾರ ಅಸ್ಥಿರವಾಗುವ ಹಾಗೂ ಮುಂಬರುವ ವಿವಿಧ
ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಹೊಡೆತ ಬೀಳುವ ಸಾಧ್ಯತೆಯಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಬಹು ದೊಡ್ಡ ರಾಜ್ಯವಾಗಿರುವ ಕರ್ನಾಟಕದಲ್ಲಿ, ಈ ಹಂತದಲ್ಲಿ ಸರಕಾರವನ್ನು ಅಸ್ಥಿರಗೊಳಿಸುವ ಸಾಹಸಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗುವುದಿಲ್ಲ ಎನ್ನುವುದು ಬಹುತೇಕರ ವಾದವಾಗಿದೆ.

ಇನ್ನು ಕರ್ನಾಟಕದಲ್ಲಿ ವಿರೋಧ ಪಕ್ಷಗಳು ಆಳುಗ ಕಾಂಗ್ರೆಸ್ ನಾಯಕರ ಮತ್ತು ಕಾಂಗ್ರೆಸ್ಸಿಗರು ಬಿಜೆಪಿ ನಾಯಕರ ರಾಜೀನಾಮೆ ಕೇಳುವುದು ರಾಜಕೀಯ ಚಟುವಟಿಕೆಯ ಒಂದು ಭಾಗವೇ ಆಗಿಬಿಟ್ಟಿದೆ. ಆದರೆ ಇದನ್ನು ಮೀರಿದ
ಭಿನ್ನ ಪರಿಸ್ಥಿತಿ ರಾಜ್ಯ ಬಿಜೆಪಿ ಘಟಕದಲ್ಲಿ ಶುರುವಾಗಿದೆ.

ಒಂದೆಡೆ ರಾಜ್ಯ, ರಾಷ್ಟ್ರೀಯ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರ ರಾಜೀ
ನಾಮೆಗೆ ಆಗ್ರಹಿಸುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಜೆ.ಪಿ. ನಡ್ಡಾ ಅವರ
ರಾಜೀನಾಮೆಗೆ ಕಾಂಗ್ರೆಸಿಗರು ಆಗ್ರಹಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ರಾಜೀನಾಮೆಯನ್ನು ಕೇಳಲು ಕಾಂಗ್ರೆಸಿಗರಿಗಿಂತ ಹೆಚ್ಚಾಗಿ ಬಿಜೆಪಿಯ ಒಂದು ಗುಂಪು ಮುಂದಾಗಿದ್ದು, ಬಹುದೊಡ್ಡ
ಮಟ್ಟದಲ್ಲಿಯೇ ಈ ಕೂಗನ್ನು ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಕೇಳಿಸುವಂಥ ಪ್ರಯತ್ನವನ್ನು ಅದು ಮಾಡು
ತ್ತಿದೆ. ವಿಜಯೇಂದ್ರ ವಿರೋಽ ಬಣದಲ್ಲಿರುವ ಬಹುತೇಕರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸಿಗರ ಆರೋಪಗಳನ್ನು ಪ್ರಶ್ನಿಸುವುದಕ್ಕಿಂತ ಹೆಚ್ಚಾಗಿ ವಿಜಯೇಂದ್ರರ ರಾಜೀನಾಮೆಗೆ ಆಗ್ರಹಿಸುವುದರಲ್ಲಿ ತಲೀನರಾಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆಯುವುದರಲ್ಲಿ ಸಾಲು ಸಾಲು ಆರೋಪ ಕೇಳಿ ಬಂದರೂ, ಅದನ್ನು ಸಮರ್ಥವಾಗಿ ಎತ್ತಿಹಿಡಿಯುವಲ್ಲಿ ಬಿಜೆಪಿ ವಿಫಲವಾಗಿದೆ. ಈ ರೀತಿ ಸರಕಾರವನ್ನು ಮಣಿಸಲು ವಿಫಲವಾಗಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ‘ಹೊಂದಾಣಿಕೆ’ ರಾಜಕೀಯವೇ ಕಾರಣ ಎಂದು ಯತ್ನಾಳ್ ಸೇರಿದಂತೆ ವಿರೋಧಿ ಬಣದ ಬಹುತೇಕರು ಆರೋಪಿಸುತ್ತಿದ್ದಾರೆ.

ಆದ್ದರಿಂದ ಇದೀಗ ರಾಜ್ಯ ಕಾಂಗ್ರೆಸಿಗರ ರಾಜೀನಾಮೆಗಿಂತ ಮೊದಲು ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕು ಎನ್ನುವ ಆಗ್ರಹದಿಂದಾಗಿ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅಪ್ರಿಯಸತ್ಯ ಬಹಿರಂಗವಾಗುತ್ತಿದೆ. ವಿವಿಧ ಕಾರಣಕ್ಕೆ ಹತ್ತು ಹಲವರ ರಾಜೀನಾಮೆಯನ್ನು ಆಯಾ ಪಕ್ಷಗಳು ಕೇಳುತ್ತಿವೆ. ಆದರೆ ಇಂದಿನ ರಾಜಕೀಯ ಸ್ಥಿತಿ-ಗತಿಯಲ್ಲಿ ರಾಜೀನಾಮೆ ಕೊಟ್ಟು ಹೋಗುವ ಮನಸ್ಥಿತಿಯಲ್ಲಿ ಯಾವ ಪಕ್ಷದವರೂ ಇಲ್ಲ. ರಾಜೀನಾಮೆ ನೀಡದೇ ಇರುವುದಕ್ಕೆ ಮತ್ತೊಂದು ಕಾರಣವೇನೆಂದರೆ, ಆರೋಪ ಕೇಳಿಬಂದಾಕ್ಷಣ ರಾಜೀನಾಮೆ ನೀಡಿದರೆ ತಪ್ಪು ಮಾಡಿ ರುವುದನ್ನು ಒಪ್ಪಿಕೊಂಡಂತಾಗುತ್ತದೆ.

ತೀರಾ ಇತ್ತೀಚಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಬಕಾರಿ ಹಗರಣದಲ್ಲಿ ಜೈಲು ಸೇರಿದಾಗ, ಅವರು ರಾಜೀನಾಮೆ ನೀಡಬೇಕು ಎನ್ನುವ ಒತ್ತಡ ಕೇಳಿಬಂದಿತ್ತು. ಆದರೆ ಕಾನೂನಾತ್ಮಕವಾಗಿ ರಾಜೀನಾಮೆ ನೀಡಬೇಕು ಎನ್ನುವ ನಿಯಮವಿಲ್ಲದೇ ಇರುವುದರಿಂದ ಅವರು ಮುಖ್ಯಮಂತ್ರಿಯಾಗಿಯೇ ಹೊರಬಂದರು. ಆದರೆ
ಜಾಮೀನಿನ ಮೇಲೆ ಹೊರಬಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಜನಾದೇಶದ ಬಳಿಕವೇ ಮತ್ತೆ
ಮುಖ್ಯಮಂತ್ರಿಯಾಗುವೆ ಎನ್ನುವ ‘ಶಪಥ’ದೊಂದಿಗೆ ಹೊರನಡೆದರು. ಈ ರೀತಿ ಮಾಡದೇ, ಜೈಲು ಸೇರುತ್ತಿದ್ದಂತೆ
ರಾಜೀನಾಮೆ ನೀಡಿದ್ದಿದ್ದರೆ, ರಾಜಕೀಯವಾಗಿ ‘ತಪ್ಪೊಪ್ಪಿಗೆ’ ನೀಡಿದಂತಾಗುತ್ತದೆ ಎನ್ನುವ ಕಾರಣಕ್ಕೆ ಈ ನಡೆಯನ್ನು
ಕೇಜ್ರಿವಾಲ್ ಅನುಸರಿಸಿದ್ದರು. ರಾಜೀನಾಮೆ ನೀಡುವ ವಿಷಯದಲ್ಲಿ ಅರವಿಂದ ಕೇಜ್ರಿವಾಲ್ ಅವರಿಗೆ ಇರುವ
‘ಸ್ವಾತಂತ್ರ್ಯ’ ರಾಷ್ಟ್ರೀಯ ಪಕ್ಷದ ನಾಯಕರಿಗೆ ಸಿಗುವುದು ತೀರಾ ವಿರಳ.

ಮುಂದಿನ ದಿನಗಳಲ್ಲಿ ಆರೋಪಗಳನ್ನು ಹೊತ್ತಿರುವ ನಾಯಕರು ಅಧಿಕಾರದಲ್ಲಿದ್ದುಕೊಂಡೇ ‘ಕ್ಲೀನ್ ಚಿಟ್’ ಪಡೆಯುವರೇ ಅಥವಾ ರಾಜೀನಾಮೆಯ ಹಾದಿ ಹಿಡಿಯುವರೇ ಎನ್ನುವುದು ‘ಸುಪ್ರೀಂ’ನಲ್ಲಿಯೇ ತೀರ್ಮಾನ ವಾಗುವುದು ನಿಶ್ಚಿತ.

ಇದನ್ನೂ ಓದಿ: Ranjith H Ashwath Column: ಒಡೆದ ಕನ್ನಡಿಯಾದ ರಾಜ್ಯ ಬಿಜೆಪಿ