Monday, 14th October 2024

ಶನಿ, ಕುಜ, ರಾಹು – ಕೇತುಗಳೆಂಬ ಕಾಡುವ ಗ್ರಹಗಳು !

ಯಶೋ ಬೆಳಗು

yashomathy@gmail.com

ರಾಹು ಸಾಮಾನ್ಯವಾಗಿ ಮಾಯೆ, ಭ್ರಮೆ, ಚಪಲತೆ, ಭ್ರಾಂತಿ ಮತ್ತು ಸುಳ್ಳಿನೊಂದಿಗೆ ಸಂಬಂಧ ಹೊಂದಿರುತ್ತಾನೆ. ಇದು ವ್ಯಕ್ತಿ ಯನ್ನು ಬೇಡವಾದ ಚಟುವಟಿಕೆಗಳಿಗೆ ಮತ್ತು ಸಂಬಂಧಗಳಿಗೆ ಪ್ರಲೋಭಿಸುತ್ತದೆ. ನೀವು ಸುಳ್ಳು ಭರವಸೆಗಳಿಗೆ ಪ್ರಾಮುಖ್ಯತೆ ನೀಡಲು ಆಸಕ್ತಿ ಹೊಂದಬಹುದು. ನಿಮ್ಮ ವರ್ತನೆಯು ಬದಲಾಗಬಹುದು ಅಥವಾ ನೀವು ಅಸಹಜ ನಡವಳಿಕೆಯನ್ನು ಹೊಂದಬಹುದು.

ನಾನೇನು ಮಹಾ ಪಂಡಿತೆಯಲ್ಲ, ನಿತ್ಯಬರಹಗಾರಳಲ್ಲ. ವಾರಕ್ಕೊಮ್ಮೆ ಬರೆಯಲು ಕೂರುವ ಸಮಯಕ್ಕೆ ಸರಿಯಾಗಿ ಏನೋ ಒಂದು ತೊಂದರೆ ಎದುರಾಗುತ್ತ ಬೆರಳಂಚಿಗೆ ಬರಲು ಕಾದು ಕುಳಿತ ಅಕ್ಷರಗಳೆಲ್ಲ ತಲೆಮರೆಸಿಕೊಂಡು ಬೇಡದ ವಿಚಾರಗಳೆಲ್ಲ
ಧಿಮಿಕಿಟ ಕುಣಿಯ ತೊಡಗುತ್ತವೆ. ಬರವಣಿಗೆ ಮುಂದೆ ಸಾಗದೆ ಅದಕ್ಕೆ ಕಾರಣಗಳನ್ನು ಹುಡುಕತೊಡಗುತ್ತವೆ.

ಬಹುಶಃ ಇಂದು ಎದ್ದ ಘಳಿಗೆ ಸರಿಯಿಲ್ಲವೆನಿ ಸುತ್ತದೆ. ಅದಕ್ಕೇ ಇಷ್ಟೆಲ್ಲ ತೊಡಕುಗಳು ಎಂದು ಸಿಡಿ ಮಿಡಿಗುಟ್ಟುತ್ತಾ ಕುಳಿತ ದಿಕ್ಕನ್ನು ನೋಡಿದರೆ ಅದೂ ದಕ್ಷಿಣವಾಗಿರಬೇಕಾ? ಛೆ, ಈ ದಕ್ಷಿಣ ದಿಕ್ಕಿಗೆ ಬರೆಯಲು ಕೂತರೆ ಮತ್ತಿನ್ನೇನಾಗುತ್ತೆ? ಅಂದು ಕೊಳ್ಳುತ್ತಾ ಕುಳಿತ ದಿಕ್ಕು ಬದಲಿಸಿ ಇನ್ನೇನು ಬರೆಯಲು ಶುರುವಿಟ್ಟುಕೊಳ್ಳೋಣ ಅಂದುಕೊಳ್ಳುವಷ್ಟರಲ್ಲಿ, ಯಾರೋ ಅತಿಥಿ ಗಳು ಆಗಮಿಸಿ, ಅದೆಷ್ಟು ದಿನದಿಂದ ಅಂದುಕೊಳ್ಳುತ್ತಲೇ ಇದ್ದೆ… ನಿಮ್ಮನ್ನು ಭೇಟಿಯಾಗೋಣ ಅಂತ.

ಅಂತೂ ಇವತ್ತು ಅದಕ್ಕೆ ಸಮಯ ಕೂಡಿ ಬಂತು ನೋಡಿ ಎನ್ನುತ್ತಾ ಮನೆಬಾಗಿಲಲ್ಲಿ ನಿಂತು ನಗೆಯರಳಿಸಿದಾಗ, ಬಾರದ ನಗೆಯನ್ನು ಬಲವಂತದಿಂದಲೇ ತಂದುಕೊಳ್ಳುತ್ತಾ ಉಪಚಾರ ಮಾಡಿ ಕಳಿಸುವಷ್ಟರಲ್ಲಿ ಸೂರ್ಯ ನೆತ್ತಿ ಮೇಲೆ ಬಂದು ಅರ್ಧ ದಿನ ಕಳೆದೇ ಹೋಗಿರುತ್ತದೆ. ಒಂದರೆ ಗಳಿಗೆ ನಿದ್ರೆ ಮಾಡಿ ಒಳ್ಳೆಯ ಮನಸಿನಿಂದ ಬಲಗಡೆ ಏಳಬೇಕು. ಆಗ ಎಲ್ಲವೂ ಸರಿ ಹೋಗುತ್ತದೆ ಅಂದುಕೊಳ್ಳುತ್ತ ಇನ್ನೇನು ಕಣ್ಣುಮುಚ್ಚುವಷ್ಟರಲ್ಲಿ ಫೋನು ರಿಂಗಣಿಸತೊಡಗುತ್ತದೆ.

ಸಾಲ ಕೊಡ್ತೀವಿ ಅಂತ ಒಂದಷ್ಟು ದನಿಗಳು, ಸಾಲ ಮರುಪಾವತಿಸಿ ಅಂತ ಮತ್ತೊಂದಷ್ಟು ದನಿಗಳು ಉಲಿಯತೊಡಗುತ್ತವೆ. ಇತ್ತೀಚೆಗೆ ಫುಡ್ ಕಾಲ್ ಗಳೇ ಹೆಚ್ಚಾಗಿ ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಅನ್ನುವ ಗೊಂದಲದೊಳಗೆ ಹುದುಗಿ ಹೋಗಿ ನಿದ್ರೆಯೂ ಹತ್ತಿರ ಸುಳಿಯುವುದಿಲ್ಲ. ಯಾಕೆ ಹೀಗೆಲ್ಲ ಆಗುತ್ತಿದೆ ಅನ್ನುತ್ತಾ ಒಂದಷ್ಟು ಹೊತ್ತು ಸೋಷಿಯಲ್
ಮೀಡಿಯಾ ಮೇಲೆ ಕಣ್ಣಾಡಿಸಿ ರೀಫ್ರೆಶ್ ಆಗೋಣವೆಂದು ಕೊಂಡು ಸ್ಕ್ರಾಲ್ ಡೌನ್ ಮಾಡುವಾಗ ಗ್ರಾಹಕನ ಮನದಿಂಗಿತವನ್ನು ಅರಿತ ಚಾಣಾಕ್ಷ ವ್ಯಾಪಾರಿಯಂತೆ ಅದು ಜ್ಯೋತಿಷ್ಯದ ಬಗೆಗಿನ ಮಾಹಿತಿಗಳನ್ನೆಲ್ಲ ತಂದು ಕಣ್ಣೆದುರಿಗೆ ಒಗೆಯುತ್ತದೆ.

ವೈದ್ಯ ಹೇಳಿದ್ದೂ ಹಾಲು-ಅನ್ನ ರೋಗಿ ಬಯಸಿದ್ದೂ ಹಾಲು-ಅನ್ನ ಅನ್ನುವ ಹಳೆಯ ಗಾದೆಯ ಮಾತಿನಂತೆ ನಾನೂ ಸಹ ಅದರೊಳಗೆ ಕುತೂಹಲದಿಂದ ಇಣುಕುತ್ತೇನೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅನ್ನುವ ಮೆಸೇಜಿನೊಂದಿಗೆ ಅದು ನೇರ ನನ್ನ ವಾಟ್ಸ್ ಆಪ್‌ಗೆ ಬಂದಿಳಿಯಿತು. ನಂಬುವುದು ಬಿಡುವುದು ಆನಂತರ. ಪ್ರಯತ್ನದಲ್ಲಿ ತಪ್ಪೇನಿದೆ? ಅಂದುಕೊಳ್ಳುತ್ತಲೇ ಅದು ಕೇಳುವ ಎಲ್ಲ ಪ್ರಶ್ನೆಗಳಿಗೆ ಮಾಹಿತಿ ಒದಗಿಸುತ್ತಾ ನನ್ನ ಜನ್ಮದಿನಾಂಕ, ಸಮಯ, ಸ್ಥಳ ಎಲ್ಲ ವಿವರಗಳನ್ನೂ ನೀಡಿದೆ.

ಕೆಲವೇ ಗಂಟೆಗಳಲ್ಲಿ ನನ್ನ ಇಡೀ ಭವಿಷ್ಯವೇ ನಮ್ಮ ಮೊಬೈಲಿನೊಳಗೆ ಬಂದು ಕುಳಿತುಬಿಟ್ಟಿತ್ತು. ಕುತೂಹಲಕ್ಕೆಂದೇ ಅದರ ಮೇಲೆ ಕಣ್ಣಾಡಿಸುವಾಗ ಇಷ್ಟು ವರ್ಷಗಳು ನನ್ನದೆಂದು ನಂಬಿಕೊಂಡು ಬಂದ ನಕ್ಷತ್ರವೇ ನನ್ನದಲ್ಲ ಅನ್ನುವ ಮಾಹಿತಿ
ಕಾಣುತ್ತಲೇ, ಅಯ್ಯೋ ಮತ್ತೆ ಇಷ್ಟು ವರ್ಷಗಳು ಅದಕ್ಕೆ ಮಾಡಿಸಿದ ಶಾಂತಿ – ಹೋಮಗಳೆಲ್ಲ ವ್ಯರ್ಥವಾ ಹಾಗಾದರೆ? ಎಂದು ನಿಟ್ಟುಸಿರು ಬಿಡುತ್ತಾ ಮುಂದೇನಿದೆ ಅನ್ನುವ ಕುತೂಹಲಕ್ಕೆ ಇನ್ನಷ್ಟು ಪುಷ್ಟಿ ಕೊಡುವಂತೆ ನಿಮ್ಮ ನಕ್ಷತ್ರಾಧಿ ಪತಿ ಶುಕ್ರ.

ನಿಮ್ಮ ಜಾತಕದಲ್ಲಿ ಚಂದ್ರನಿಗೆ ಪಕ್ಷಬಲವಿದ್ದು ಶುಭಗ್ರಹನಾಗಿzನೆ. ನೀವು ಸಪ್ತಮಿ ಯಲ್ಲಿ ಜನಿಸಿರುವುದರಿಂದ ನಿಮ್ಮ ಉದ್ದೇಶ ದ್ವೇಷ ಪೂರಿತವಲ್ಲದಿದ್ದರೂ ಬಹಳ ಕಠಿಣವಾಗಿ ಮತ್ತು ಹಲವು ಬಾರಿ ನಿರ್ದಯರಾಗಿ ಮಾತನಾಡುವ ಪ್ರಕೃತಿಯುಳ್ಳವರು. ಇನ್ನು ಯೋಗಗಳು ಜಾತಕದಲ್ಲಿನ ಗ್ರಹಗಳ ವಿಶೇಷ ಸಂಯೋಜನೆಗಳಾಗಿದ್ದು ಅವು ವ್ಯಕ್ತಿಯ ಭವಿಷ್ಯ ಮತ್ತು ಜೀವನದ ಮೇಲೆ ಪ್ರಭಾವ ಬೀರುತ್ತವೆ. ನಿಮ್ಮ ಜಾತಕದಲ್ಲಿ ಗುರುತಿಸಿದ ಪ್ರಮುಖ ಸಂಯೋಜನೆಗಳಿಂದ ಬುಧನು ಸ್ವಕ್ಷೇತ್ರದ ಸ್ಥಾನದಲ್ಲಿರುವುದರಿಂದ ಭದ್ರಯೋಗದ ಪರಿಣಾಮವಾಗಿ ನೀವು ಶ್ರೀಮದ್ಗಾಂಭೀರ್ಯವಿರುವ, ಮೋಡಿ ಮಾಡುವ ಓರ್ವ ಘನವೆತ್ತ ಮಹಿಳೆಯಾಗಿರುತ್ತೀರಿ.

ಎಲ್ಲ ರೀತಿಯಲ್ಲೂ ಸದೃಢರಾಗಿರುತ್ತೀರಿ. ಪ್ರವೃತ್ತಿಯಿಂದಲೇ ಇತರರಿಗೆ ನೆರವಾಗುವವರು ಮತ್ತು ಅವರ ಯೋಗಕ್ಷೇಮದ ಕುರಿತು ನಿಜವಾದ ಕಾಳಜಿಯಿರುವವರು. ನೀವು ಶಿಕ್ಷಿತರು ಮತ್ತು ತಾತ್ವಿಕ ಚಿಂತನೆಯನ್ನು ಉಳ್ಳವರಾಗಿರುತ್ತೀರಿ. ಅಧಿಕಾರಿಗಳ ಪ್ರೋತ್ಸಾಹವನ್ನು ಪಡೆಯುತ್ತೀರಿ. ನೀವು ಗೌರವಾನ್ವಿತರು, ಅದೃಷ್ಟವಂತರು ಮತ್ತು ಆಧ್ಯಾತ್ಮಿಕ ಒಲವಿರುವವರು. ಅಲ್ಲದೇ  ಅತಿಗಂಡ ನಿತ್ಯಯೋಗವು ನಿಮ್ಮನ್ನು ಸಂಗೀತ, ಚಲನಚಿತ್ರ ಹಾಗೂ ಲಲಿತಕಲೆಯೆಡೆಗೆ ಕರೆ ದೊಯ್ಯುತ್ತದೆ. ಭಾವನಾತ್ಮಕವಾಗಿ ನಿರ್ಲಿಪ್ತರಾಗಿ ಉಳಿಯಲು ಪ್ರಯತ್ನಿಸುತ್ತೀರಿ. ಒಳ್ಳೆಯ ವಾದವನ್ನು ಆನಂದಿಸುತ್ತೀರಿ.

ದೃಢ ಮನಸ್ಕರಾಗಿರುತ್ತೀರಿ. ನಿಮ್ಮ ಮೇಲೆ ಪ್ರಭಾವ ಬೀರುವುದು ಕಷ್ಟ. ವನಿಜ ಕರಣದಲ್ಲಿ ಜನಿಸಿರುವುದರಿಂದ ಕಲೆಯನ್ನು ಆಸ್ವಾದಿಸುವಿರಿ. ನಿಮ್ಮ ಪ್ರತಿಭೆಯನ್ನು ಅತ್ಯುತ್ತಮವಾಗಿ ಬಳಸುವುದರಲ್ಲಿ ನೀವು ನಿಪುಣರು… ಅನ್ನುವ ವಿಷಯ ಓದುವಷ್ಟರ ಗಲೇ ನನ್ನ ಅಹಂ ಹಿರಿಹಿರಿ ಹಿಗ್ಗಿ ಸಿಡಿದುಹೋಗುವ ಹಂತ ತಲುಪಿತ್ತು. ಅಷ್ಟಕ್ಕೇ ನಿಲ್ಲದೆ ಇನ್ನೂ ಸಾಕಷ್ಟು ಯೋಗಗಳಾದ ಹಂಸಯೋಗ, ರಾಜಯೋಗ, ಗಜಕೇಸರಿ ಯೋಗ, ಅಮಲ ಯೋಗ, ಚತುಸ್ಸಾಗರ ಯೋಗ, ಪರ್ವತ ಯೋಗ, ಕಹಳ ಯೋಗ, ಮಾತೃಮೂಲಧನ ಯೋಗ, ಸರಸ್ವತಿ ಯೋಗಗಳೊಂದಿಗೆ ಸೂರ್ಯ, ಬುಧ ಗ್ರಹಗಳು ಒಂದೇ ಮನೆಯಲ್ಲಿರುವುದರಿಂದ ದ್ವಿಗ್ರಹ ಯೋಗದಿಂದಾಗಿ ನೀವು ಹೆಚ್ಚು ಹೆಚ್ಚು ಜ್ಞಾನವನ್ನು ಗಳಿಸಲು ಒಲವು ತೋರುವಿರಿ.

ನಿಮ್ಮ ಬುದ್ಧಿವಂತಿಕೆ ಮತ್ತು ಕಲಿಕೆ ಸಾಮರ್ಥ್ಯ ಬೇರೆಯವರ ಗಮನ ಆಕರ್ಷಿಸುವುದು. ಕೆಲವೊಂದು ಯೋಜನೆಗಳಿಂದ ನೀವು ಹಣ ಮಾಡುವಿರಿ. ನೀವು ಸಾಹಿತ್ಯ ಅಥವಾ ಧಾರ್ಮಿಕ ಪ್ರಚಾರದಲ್ಲಿ ತೊಡಗಬಹುದು. ನೀವು ದತ್ತಿ ಸಂಸ್ಥೆಗಳನ್ನು ಸ್ಥಾಪಿಸ ಬಹುದು, ನಿಮ್ಮ ಅದ್ಭುತ ಮಾತಿನ ಕೌಶಲ್ಯ ನಿಮಗೆ ಹಲವಾರು ಅಭಿಮಾನಿಗಳನ್ನು ಗಳಿಸಿಕೊಡಬಹುದು. ಚಂದ್ರನು ಮೊದಲನೇ ಮನೆಯಲ್ಲಿರುವುದರಿಂದ, ನೀವು ಪ್ರಬಲರಾಗಿರುವಿರಿ ಮತ್ತು ಸುಂದರ ಕಣ್ಣುಗಳನ್ನು ಹೊಂದಿರುತ್ತೀರಿ.

ನಿಮ್ಮ ಲಗ್ನಾಧಿಪತಿಯು ತನ್ನದೇ ಮನೆಯಲ್ಲಿರುವುದರಿಂದ, ಅಧಿಕಾರ ಹಾಗೂ ಪ್ರಭಾವವಿರುವ ಸ್ಥಾನಕ್ಕೆ ಏರುತ್ತೀರಿ ಎನ್ನುವು ದನ್ನು ಸೂಚಿಸುತ್ತದೆ ಅನ್ನುವ ಮಾತುಗಳನ್ನು ಕೇಳಿ ಕಾಲು ನೆಲದ ಮೇಲೇ ನಿಲ್ಲಲಾರದಷ್ಟು ಸಂತೋಷದಿಂದ ಉಬ್ಬಿಹೋಗಿದ್ದೆ. ಆದರೆ ಅದಕ್ಕೆ ಬ್ರೇಕು ಹಾಕುವಂತೆ ಎರಡನೇ ಮನೆಯ ಅಧಿಪತಿಯೂ ಎಂಟನೇ ಮನೆಯಲ್ಲಿರುವುದರಿಂದ ಕೆಲವೊಮ್ಮೆ ನಿಮಗೆ ತಿರಸ್ಕಾರ ಮಾತ್ರವೇ ಉಳಿಯುತ್ತದೆ. ನೀವು ಎಷ್ಟು ಸೂಕ್ಷ್ಮವೆಂದರೆ, ತಿರಸ್ಕಾರದ ಅಲ್ಪ ಸುಳಿವು ಸಿಕ್ಕಿದರೂ ಕೂಡ ನೀವು ಕಂಗಾ ಲಾಗುವಿರಿ ಮತ್ತು ಭಯ ನಿಮ್ಮನ್ನು ಆವರಿಸಬಹುದು. ಸಂಪತ್ತಿನ ನಷ್ಟ ಸಂಭವಿಸಬಹುದು.

ರಾಹು ದೆಶೆಯಲ್ಲಿರುವ ಶನಿಯ ಉಪಾವಧಿಯು ನಿಮ್ಮನ್ನು ನಿಜವಾಗಿ ಪ್ರೀತಿಸುವವರಿಂದ ದೂರ ಸರಿಸಲ್ಪಟ್ಟಂತೆ ಭಾಸವಾಗ ಬಹುದು. ನಿಮ್ಮ ಹತ್ತಿರದವರಿಂದ ಬಹುದೂರ ಪಯಣ ಮಾಡಬೇಕಾಗಿಬರಬಹುದು. ಕುಜನು ಏಳನೇ ಮನೆಯಲ್ಲಿರುವ ಕಾರಣ ನಿಮ್ಮ ಸುಖಮಯ ಜೀವನವನ್ನು ನಿರ್ವಹಿಸಲು ದಣಿವಿರದ ಪ್ರಯತ್ನದ ಅಗತ್ಯವಿದೆ. ನಷ್ಟವಾಗದಂತೆ ತಡೆಯಲು ಹಣಕಾಸಿನ ವಿಚಾರಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸಿ, ನೀವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಅನಿರೀಕ್ಷಿತ ಅಡಚಣೆಗಳು ಮತ್ತು ತೊಂದರೆ ಗಳನ್ನು ಎದುರಿಸಬೇಕಾಗುತ್ತದೆ. ನೀವು ಪ್ರತಿಕೂಲ ಸಂದರ್ಭಗಳ ವಿರುದ್ಧ ಹೋರಾಡಲು ಸಾಧ್ಯವಿರುವುದಿಲ್ಲ. ಒತ್ತಡವು ನಿಮ್ಮ ನೈಸರ್ಗಿಕ ನಿದ್ರೆಯ ಮೇಲೆ ಪರಿಣಾಮ ಬೀರಬಹುದು.

ಶನಿಯು ಸಂತೋಷದ ಕುಟುಂಬದ ಗೆಲುವಿಲ್ಲದ ಸದಸ್ಯ. ಶನಿಯು ಒಂದು ರಾಶಿಯ ಮೂಲಕ ಸಂಚರಿಸಲು ಸುಮಾರು ಎರಡೂ ವರೆ ವರ್ಷ ತೆಗೆದುಕೊಳ್ಳುತ್ತಾನೆ. ನೀವೀಗ ಸಾಡೇಸಾಥಿಯ ಅತ್ಯಂತ ಕೆಟ್ಟಭಾಗವನ್ನು ಸಂಪೂರ್ಣಗೊಳಿಸಿದ್ದೀರಿ. ಆದರೆ ಅದರ ಉಳಿಕೆಯ ಪರಿಣಾಮಗಳು ಅಸೌಖ್ಯ ಅಥವಾ ವಿಷಾದದ ರೂಪದಲ್ಲಿ ಉಳಿದುಕೊಳ್ಳಬಹುದು. ರಾಹು ಸಾಮಾನ್ಯವಾಗಿ ಮಾಯೆ, ಭ್ರಮೆ, ಚಪಲತೆ, ಭ್ರಾಂತಿ ಮತ್ತು ಸುಳ್ಳಿನೊಂದಿಗೆ ಸಂಬಂಧ ಹೊಂದಿರುತ್ತಾನೆ.

ಇದು ವ್ಯಕ್ತಿಯನ್ನು ಬೇಡವಾದ ಚಟುವಟಿಕೆಗಳಿಗೆ ಮತ್ತು ಸಂಬಂಧಗಳಿಗೆ ಪ್ರಲೋಭಿಸುತ್ತದೆ. ನೀವು ಸುಳ್ಳು ಭರವಸೆಗಳಿಗೆ ಪ್ರಾಮುಖ್ಯತೆ ನೀಡಲು ಆಸಕ್ತಿ ಹೊಂದಬಹುದು. ನಿಮ್ಮ ವರ್ತನೆಯು ಬದಲಾಗಬಹುದು ಅಥವಾ ನೀವು ಅಸಹಜ ನಡವಳಿಕೆ ಯನ್ನು ಹೊಂದಬಹುದು. ರಾಹು- ಕೇತು ನೆರಳಿನಂತೆ ಅಸುಟವಾಗಿರುವ ಗ್ರಹಗಳು, ಅವುಗಳ ಚಲನೆಯು ಪರಸ್ಪರ ಸಂಬಂಧ ವಿರುವಂತಹುದು. ಹಾಗೂ ಒಂದೇ ದೇಹದ ಭಾಗದಂತಿರುವವರು. ರಾಹು ವಿಷಯ ಆಸಕ್ತಿಯನ್ನೂ, ವಾಂಛೆಯನ್ನೂ ಸೂಚಿಸಿ ದರೆ, ಕೇತು ಆಧ್ಯಾತ್ಮಿಕ ಒಲವನ್ನು ಹಾಗೂ ವಿಷಯಾಸಕ್ತಿಯನ್ನು ಆಧ್ಯಾತ್ಮಿಕದೆಡೆಗೆ ವಾಲಿಸುವ ಪ್ರಕ್ರಿಯೆಯನ್ನು ಸೂಚಿಸು ತ್ತದೆ…. ಇದೆಲ್ಲವನ್ನೂ ಓದುತ್ತಾ ಭಯಭೀತವಾದ ಮನಸಿಗೆ ಸಮಾಧಾನ ನೀಡುವಂತೆ ಆಯಾ ಗ್ರಹಗಳ ಸಂಚಾರದ ಸಮಯ ದಲ್ಲಿ ಪಾಲಿಸಬೇಕಾದ ನಿಯಮಗಳು, ವ್ರತಗಳು, ಮಂತ್ರಗಳು, ಧರಿಸಬೇಕಾದ ವಸ್ತ್ರಗಳು, ನೀಡಬೇಕಾದ ದಾನಗಳು,
ಮಾಡ ಬೇಕಾದ ಪೂಜೆಗಳ ಪಟ್ಟಿಯನ್ನೂ ಅದರ ಜೊತೆಯ ನೀಡಲಾಗಿತ್ತು.

ನಾನೂ ಸಹ ಭಯ-ಭಕ್ತಿಯಿಂದ ಅವೆಲ್ಲವನ್ನೂ ಒಂದಷ್ಟು ದಿನಗಳು ಪಾಲಿಸುತ್ತಾ ಬಂದೆ. ಸಣ್ಣ ಅಡಚಣೆಗೂ ಇದು ಶನಿಯ, ಕುಜನ, ರಾಹುವಿನ ಕಾಟವಿರಬಹುದಾ? ಅನ್ನುವ ಕಡೆಗೇ ಮನುಸು ವಾಲುತ್ತಾ ಇನ್ನಷ್ಟು ಕುಗ್ಗಿಹೋಗಲಾರಂಭಿಸಿತು. ಒಮ್ಮೆ ಹೀಗೇ ಯೋಚಿಸುತ್ತಿರಬೇಕಾದರೆ ಅ, ಈ ಶನಿ, ಕುಜ, ರಾಹು, ಕೇತುಗಳನ್ನು ನಾನು ಈವರೆಗೂ ಒಮ್ಮೆಯೂ ನೋಡಿಯೇ ಇಲ್ಲ. ಒಂದು ಮಾತು ಕೂಡ ಆಡಿಲ್ಲ. ಅವರಿಗೆ ನಾನು ಯಾವ ತೊಂದರೆಯನ್ನೂ ಕೊಟ್ಟಿಲ್ಲ.

ಆದರೂ ಅವರ‍್ಯಾಕೆ ನನ್ನನ್ನು ಇಷ್ಟು ಕಾಡುತ್ತಿದ್ದಾರೆ. ನಮ್ಮ ನಿಲುಕಿಗೂ ಸಿಗದಷ್ಟು ದೂರ ಉಳಿದ ಜೀವವೇ ಇಲ್ಲದ ಗ್ರಹಗಳ ಲೆಕ್ಕಾಚಾರ ಹಾಕುವ ನಾವು, ದಿನನಿತ್ಯ ನಮ್ಮ ನಡುವೆ ಒಡನಾಡುವ ಜೀವಗಳ ಲೆಕ್ಕಾಚಾರ ಅರಿಯುವಲ್ಲಿ ಸೋಲುತ್ತೇವೆ ಎಂಥಾ ವಿಪರ್ಯಾಸ. ಅವರ ಕೆಲಸ ಅವರು ಮಾಡಲಿ. ನನ್ನ ಕೆಲಸ ನಾನು ಮಾಡುತ್ತೇನೆ ಎಂದುಕೊಳ್ಳುತ್ತಾ ಬರೆಯಲು ಕುಳಿತೆ.
ಅಕ್ಷರಗಳು ಜಲಪಾತದಂತೆ ಬೆರಳಂಚಿಗೆ ಇಳಿಯತೊಡಗಿದವು.