Friday, 13th December 2024

ಇಲಿ ಹೆಗ್ಗಣಗಳೊಂದಿಗೆ ಸುಶಾಸನ ಅಸಾಧ್ಯ

ಪ್ರಸ್ತುತ 

ಶಿವಪ್ರಶಾದ್

ಇದು ಕ್ರಿಸ್ಮಸ್ ಹಬ್ಬದ ವಾರ. ವಿಶ್ವದಾದ್ಯಂತ ಕ್ರೈಸ್ತರಿಗೆ ವರ್ಷದ ಅತ್ಯಂತ ಮಹತ್ವದ ಹಬ್ಬದ ವಾರ, ಹೊಸ ವರ್ಷಾಚರಣೆಯ ಸಂದರ್ಭ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾದ ಬಿಜೆಪಿಗೂ ಡಿಸೆಂಬರ್ ೨೫ ಮಹತ್ವದ ದಿನ. ಪೂರ್ವ
ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನ. ‘ಸುಶಾಸನ್ ದಿವಸ್’ ಎಂಬ ನಾಮಾಂಕಿತದೊಂದಿಗೆ ಈ ದಿನವನ್ನು ಬಿಜೆಪಿಯವರು ಉತ್ತಮ ಆಡಳಿತ ದಿನ ವೆಂದೂ ಗುರುತಿಸಿದ್ದಾರೆ.

ವಾಜಪೇಯಿಯವರು ಮೊದಲನೆಯ ಬಾರಿ ಭಾರತಕ್ಕೆ ಬಿಜೆಪಿ ಸರಕಾರವನ್ನು ಕೊಟ್ಟವರು. ಅವರು ನೀಡಿದ ಆಡಳಿತವನ್ನು ದೇಶದ ಜನರಿಗೆ ನೆನಪಿಸಿ, ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಯೊಂದಿಗೆ ಇಂದಿನ ಬಿಜೆಪಿ ನಾಯಕರು ಜನಮೆಚ್ಚುವ ಆಡಳಿತವನ್ನು ನೀಡುವ ಸಂಕಲ್ಪ ಕೈಗೊಳ್ಳಬೇಕೆಂಬುದು ಇದರ ಉದ್ದೇಶ. ಪ್ರತಿ ವರ್ಷ ಹೊಸ ಹುಮ್ಮಸ್ಸಿನೊಂದಿಗೆ ಜನರ ಆಶೋತ್ತರಗಳನ್ನು ಈಡೇರಿಸುವ ಬಯಕೆ ಮತ್ತು ಸದುದ್ದೇಶಗಳನ್ನು ಆಡಳಿತಾ ರೂಢ ಬಿಜೆಪಿ ನಾಯಕರ ಮನಗಳಲ್ಲಿ ಮೂಡಿಸುವ ಧ್ಯೇಯವನ್ನು ಹೊತ್ತು ‘ಸುಶಾಸನ್ ದಿವಸ್’ನ ಆಚರಣೆ ಪೂರ್ಣಗೊಳ್ಳುತ್ತದೆ.

ಆದರೆ ಸುಶಾಸನ್ ದಿವಸ್ ಆಡಳಿತಾರೂಢ ಸರಕಾರದ ಉಳಿದೆಲ್ಲ ಕಾರ್ಯಕ್ರಮಗಳಂತೆ ಮತ್ತೊಂದು ಕಾರ್ಯಕ್ರಮವಾಗಷ್ಟೇ ಉಳಿಯದೆ, ತನ್ನ ಧ್ಯೇಯೋದ್ದೇಶಗಳನ್ನು ಸಾಕಾರ ಗೊಳಿಸುವ ನಿಜವಾದ ಉತ್ತಮ ಆಡಳಿತ ದಿನವಾಗಿ ಮಾರ್ಪಟ್ಟಿದೆಯೇ ಎಂದು ಬಿಜೆಪಿಯ ವರಿಷ್ಠರು ಅವಲೋಕಿಸಬೇಕಾದ ಸಮಯ ಬಂದಿದೆಯೆಂದರೆ ತಪ್ಪಾಗಲಾರದು. ಈ ಮಾತು ಕೇಂದ್ರ ಬಿಜೆಪಿಯ ಮಟ್ಟಿಗೆ ಎಷ್ಟು ಪ್ರಸ್ತುತವಾಗಿದೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯ ಬಿಜೆಪಿಗೆ ಅನ್ವುಸುತ್ತದೆ.

ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರವಿದೆ. ಮೋದಿಯವರ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳ ಸರ್ಪಗಾವಲಿನಲ್ಲಿ, ಹದ್ದಿನ ಕಣ್ಣುಗಳ ಗೃಹ ಮಂತ್ರಿ ಅಮಿತ್ ಶಾ ಅವರ ಮೇಲ್ವಿಚಾರಣೆಯಲ್ಲಿ, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಗುರಿಯನ್ನು ಹೊಂದಿರುವ ಆಡಳಿತವನ್ನು ನೀಡುತ್ತ ಸರಕಾರ ಜನಮಾನಸದಲ್ಲಿ ನೆಲೆಗೊಂಡಿದೆ. ಆಪರೇಷನ್
ಕಮಲದ ಕೂಸಾಗಿ, ಹಿಂಬಾಗಿಲಿನಿಂದ ವಿಧಾನಸೌಧವನ್ನು ಪ್ರವೇಶಿಸಿದ ಬಿಜೆಪಿ ಸರಕಾರವು, ಈವರೆಗೆ ಇಬ್ಬರು ನಾಯಕರನ್ನು ಕಂಡು, ಕಳೆದ ಎರಡು ವರ್ಷಗಳಿಗಿಂತ ಅಧಿಕ ಸಮಯದಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷವಾಗಿದ್ದುಕೊಂಡು ಸದ್ಯ ದಲ್ಲೇ ಚುನಾವಣೆಯನ್ನೆದುರಿಸಲಿದೆ.

ಆದರೆ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ’ನಂತಹುದೇ ಧ್ಯೇಯಗಳನ್ನು ಹೊಂದಿ, ಕೇಂದ್ರದಷ್ಟೇ ಜನಾನುರಾಗಿಯಾದ ಆಡಳಿತ ವನ್ನು ಕರ್ನಾಟಕದಲ್ಲೂ ನೀಡಿ, ಆಶೋತ್ತರಗಳ ನಿಜವಾದ ಪ್ರತಿಬಿಂಬವಾಗಿ ಬಿಜೆಪಿ ರಾಜ್ಯ ಸರಕಾರ ಹೊರ ಹೊಮ್ಮಿದೆಯೇ ಎಂಬುದೇ ಪ್ರಸ್ತುತ ಯಕ್ಷ ಪ್ರಶ್ನೆ. ಈ ಸಂದರ್ಭದಲ್ಲಿ ಪಕ್ಷದ ಸರಕಾರದ ಗತಕಾಲದ ನಡವಳಿಕೆಯ ವಿಮರ್ಶೆ ಮತ್ತು ಚುನಾವಣಾ ಪೂರ್ವ ಸಮಯದ ನಡೆಗೆ ದಾರಿದೀಪವಾಗುವ ದಿಶೆಯಲ್ಲಿ, ಈ ಅವಲೋಕನ ಸುಸಮಂಜಸ. ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರಂಥ ಆದರ್ಶವಾದಿ ನಾಯಕರ ಮುಂದಾಳತ್ವದಲ್ಲಿ ತನ್ನ ಚಿಗುರಿನ ದಿನ ಗಳನ್ನು ನೋಡಿದ ಬಿಜೆಪಿ, ಮುಂದೊಂದು ದಿನ ಹೆಮ್ಮರವಾಗಿ, ಅಸಂಖ್ಯಾತ ಬೇರುಗಳ ಆಲದ ಮರದಂತೆ ಭಾರತದುದ್ದ ಗಲಕ್ಕೂ ಪಸರಿಸುತ್ತದೆಂಬ ಕನಸು ಮತ್ತು ಹೆಬ್ಬಯಕೆಯೊಂದಿಗೆ ಆ ನಾಯಕರು ಅವಿರತ ಪರಿಶ್ರಮ ಮತ್ತು ತ್ಯಾಗಗಳ ನೀರನ್ನೆರೆ ದಿದ್ದರು.

ಆನಂತರದ ಪಂಕ್ತಿಯಲ್ಲಿ ವಾಜಪೇಯಿ, ಅಡ್ವಾಣಿ, ಮುರಳಿಮನೋಹರ ಜೋಶಿ, ಮುಂತಾದ ಆದರ್ಶಪ್ರಾಯರಾದ ನಾಯಕರು
ಮತ್ತು ಅರುಣ್ ಜೈಟ್ಲಿ, ಪ್ರಮೋದ್ ಮಹಾಜನ್‌ರಂಥ ವಾಸ್ತವಿಕ ದೃಷ್ಟಿಕೋನದ ನಾಯಕರ ಅವಿರತ ದುಡಿಮೆಯ ಫಲದಿಂದ ಆಲದಮರವೀಗ ಅಸಂಖ್ಯಾತರಿಗೆ ನೆರಳುದಾಣ ವಾಗಿ ಬೇರೂರಿದೆ. ಆದರೆ ವಿಸ್ತಾರವಾಗಿ ಬೆಳೆದುನಿಂತ ಆಲದಮರದ ನೆರಳಿನಲ್ಲಿ, ಪ್ರಾಣಿಪಕ್ಷಿಗಳು ನೆಲೆಗಾಣುವಂತೆಯೇ ಕೆಲವು ಇಲಿ ಹೆಗ್ಗಣಗಳೂ ವಾಸ ಮಾಡತೊಡಗಿವೆ.

ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ವೃತ್ತಾಂತ, ಆಪರೇಷನ್ ಕಮಲದ ನೆನಪು ಮತ್ತು ಅಭೂತಪೂರ್ವ ಲಂಚದ ಬೇಡಿಕೆಯ ಗುತ್ತಿಗೆದಾರರ ಆರೋಪಗಳು ಕೇಂದ್ರದ ಅಂಗಳ ತಲುಪಿದವು. ಇಡೀ ಭಾರತದಲ್ಲಿ ಬಿಜೆಪಿ ಆಡಳಿತದಲ್ಲಿರುವ
ರಾಜ್ಯಗಳಲ್ಲಿ ಕಡು ಭ್ರಷ್ಟ ಸರಕಾರವೆಂಬ ಹಣೆಪಟ್ಟಿಯನ್ನು ಹೊತ್ತು ಕುಳಿತಿರುವ ರಾಜ್ಯ ಬಿಜೆಪಿಗೆ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ ಎಂಬ ವಿಷಯ ಕೇಂದ್ರ ಪಕ್ಷವಲಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪ್ರತಿಧ್ವನಿಸುತ್ತಿದೆ.

ಹಾಗೆಯೇ, ಸಿಕ್ಕಷ್ಟು ಬಾಚಿಕೊಳ್ಳುವ ಚಾಳಿ ಹೊತ್ತು ತಿರುಗುತ್ತಿರುವ ಕೆಲವು ಪ್ರಭಾ ಕೂಳುಬಾಕ ಮಂತ್ರಿಗಳಿಗೆ ಚಳಿ ಬಿಡಿಸಿ, ಹಲವರಿಗೆ ಮತ್ತೊಮ್ಮೆ ಚುನಾವಣಾ ‘ಬಿ’ ಫಾರ್ಮ್ ನೀಡದೆ, ಬಿಜೆಪಿಯ ನಿಷ್ಠಾವಂತ ಯುವ ಕಟ್ಟಾಳುಗಳಿಗೆ ಚುನಾವಣಾ
ಕಣಕ್ಕಿಳಿಯುವ ಅವಕಾಶವನ್ನು ನೀಡುವ ಮತ್ತು ಪಕ್ಷದ ವರ್ಚಸ್ಸನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಈಗ ಪಕ್ಷದ ಮುಂದಿದೆ. ಮೋದಿ, ಅಮಿತ್ ಶಾರಂತಹ ಬಿಗಿಮುಷ್ಟಿಯ ನಾಯಕರು ಇಂತಹ ಇಲಿ ಹೆಗ್ಗಣಗಳನ್ನು ಹಿಡಿದು ಬೋನಿಗಟ್ಟಿ, ಸರಿಯಾದ ಸಮಯಕ್ಕೆ ಚುನಾವಣೆಯಲ್ಲಿ ಒಗ್ಗಟ್ಟಾದ ಮತ್ತು ಜನಸ್ನೇಹಿ ರಾಜಕಾರಣಿಗಳನ್ನು ಮುಂದಿಟ್ಟು ಕೊಂಡು ಪ್ರಜೆಗಳ ಓಲೈಕೆ ಮಾಡದೆ ಹೋದರೆ, ಭಾರತದ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಯ ಏಕಮೇವ ಆಡಳಿತ ಸರಕಾರದ ಹೆಗ್ಗುರುತಾದ ಕರ್ನಾಟಕದಲ್ಲಿ ಜನಬೆಂಬಲ ಕಳೆದುಕೊಳ್ಳಬಹುದು.

ಸರಕಾರವನ್ನು ರಚಿಸುವುದು ಮತ್ತು ನಡೆಸುವುದು, ಎರಡು ಭಿನ್ನ ಸವಾಲುಗಳೆಂಬುದನ್ನು ಸ್ಥಳೀಯ ಬಿಜೆಪಿ ನಾಯಕರು ಮನಗಾಣುವಂತೆ, ಕೇಂದ್ರ ನಾಯಕರು ಒತ್ತಿ ಹೇಳದೆಹೋದರೆ, ಮುಂಬರುವ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯು ಅವನತಿಯ ದಾರಿಯನ್ನು ನೋಡುವಂಥ ಪರಿಸ್ಥಿತಿ ಒದಗುವುದು ನಿಶ್ಚಿತ. ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿರುವ ಮೋದಿ ಮತ್ತು ಶಾ, ತಮ್ಮ ಗಮನವನ್ನು ಇನ್ನೂ ಕರ್ನಾಟಕದ ಮೇಲೆ ಅವಶ್ಯವಿರುವಷ್ಟು ಮಟ್ಟಿಗೆ ನೆಟ್ಟಿರುವಂತೆ ಕಾಣುತ್ತಿಲ್ಲ. ಕರ್ನಾಟಕ ರಾಜ್ಯವು ಗುಜರಾತ್ ರಾಜ್ಯದಷ್ಟು ಸುಲಭವಾಗಿ ತಮ್ಮ ತೆಕ್ಕೆಗೆ ಮತ್ತೆ ಬೀಳುವುದಿಲ್ಲವೆಂಬ ಮನವರಿಕೆ
ಅವರಿಬ್ಬರಿಗಿದೆ.

ಆದ್ದರಿಂದ ಸ್ಥಳೀಯ ಸವಾಲುಗಳನ್ನು ಎದುರಿಸಿ ಅವುಗಳಿಗೆ ಸಮರ್ಪಕವಾದ ಪ್ರತ್ಯುತ್ತರಗಳನ್ನು ಮೋದಿ-ಶಾ ದ್ವಯರು ಪ್ರಯೋಗಿಸಬೇಕಾದ ಸಮಯ ಈಗ ಬಂದೊದಗಿದೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ, ಜೆಡಿಎಸ್‌ನ ಪಂಚರತ್ನಯಾತ್ರೆಗಳ ನಡುವೆ, ಆಡಳಿತರೋಧಿ ಅಲೆಯನ್ನೆದುರಿಸುತ್ತಿರುವ ಬಿಜೆಪಿಯು ಕರ್ನಾಟಕದ ಜನರಲ್ಲಿ ಹೊಸ ಭರವಸೆಯ ಬೀಜವನ್ನು ಬಿತ್ತಬೇಕು.

ಉತ್ತಮ ಆಡಳಿತದ ಬೀಜಮಂತ್ರವನ್ನು ಪಠಿಸುತ್ತ, ನೂರ ಇಪ್ಪತ್ಮೂರಕ್ಕಿಂತ ಅಧಿಕ ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಗುರಿ ಯೆಡೆಗೆ, ರಾಜ್ಯ ನಾಯಕರನ್ನು ಕರೆದೊಯ್ಯಲು ಮೋದಿ-ಶಾ ದ್ವಯರು ಕಠಿಣ ಕಸರತ್ತನ್ನೇ ಮಾಡಬೇಕು. ಒಂದು ವೇಳೆ ಇಪ್ಪತ್ತೈದಕ್ಕಿಂತ ಅಧಿಕ ಸ್ಥಾನಗಳಲ್ಲಿ ಜಯಗಳಿಸಿದರೆ, ಜೆಡಿಎಸ್ ಪಕ್ಷವು ಮತ್ತೆ ಕಿಂಗ್‌ಮೇಕರ್ ಆಗಿ ಹೊರಹೊಮ್ಮಬಹುದಾದ ಪರಿಸ್ಥಿತಿ ಈಗ ಮತ್ತೊಮ್ಮೆ ಕರ್ನಾಟಕದಲ್ಲಿ ಕಾಣುವಂತಾಗಿದೆ. ಕಾಂಗ್ರೆಸ್ ತೊರೆದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕರಾಗಿರುವ ಸಿ.ಎಂ. ಇಬ್ರಾಹಿಂ, ಅಲ್ಪಸಂಖ್ಯಾತ ಮತಗಳನ್ನು ತಮ್ಮ ಪಕ್ಷದೆಡೆಗೆ ಸೆಳೆದುಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.

ಈ ಮಧ್ಯೆ, ಪೂರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮರ್ ಅವರಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದಾಟದ ನಡುವೆಯೂ, ಆಡಳಿತ ವಿರೋಧಿ ಅಲೆಯ ಬೆಂಬಲ ಪಡೆದು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ವಿಧಾನ ಸೌಧದ ಮೂರನೆಯ ಮಹಡಿಯ ಮೆಟ್ಟಿಲೇರುವ ಕನಸು ಕಾಣುತ್ತಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವು ಮಲ್ಲಿಕಾರ್ಜುನ ಖರ್ಗೆ ಯವರನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದೆ. ಹೀಗಾಗಿ, ಖರ್ಗೆಯವರ ತವರು ರಾಜ್ಯದಲ್ಲಿ ದಲಿತ ಮತಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವ ಮಹತ್ವಾಕಾಂಕ್ಷೆಯನ್ನು ಕಾಂಗ್ರೆಸ್ ಪಕ್ಷವು ಹೊಂದಿದೆ.

ಸಿದ್ಧರಾಮಯ್ಯರ ಅಹಿಂದ ಮತಗಳು ಮತ್ತು ಡಿ.ಕೆ.ಶಿಯವರ ಒಕ್ಕಲಿಗ ಮತಗಳ ಬೇಟೆಯ ನಡುವೆ, ಬಿಜೆಪಿಯ ಲಿಂಗಾಯತ
ಮತಗಳ ಭದ್ರಕೋಟೆಯನ್ನೂ ತಕ್ಕಮಟ್ಟಿಗೆ ಭೇದಿಸುವ ಗುರಿಯೊಂದಿಗೆ ಕಾಂಗ್ರೆಸ್ ನಾಯಕರು ತಮ್ಮ ದಾಳಗಳನ್ನು ಉರುಳಿಸುತ್ತಿದ್ದಾರೆ. ಇತ್ತ ಬಿಜೆಪಿಯು, ಲಿಂಗಾಯತರ ಧೀಮಂತ ನಾಯಕ ಬಿ.ಎಸ್.ಯಡಿಯೂರಪ್ಪರನ್ನು ರಾಷ್ಟ್ರ ಕಾರ್ಯಕಾರಿಣಿ ಸದಸ್ಯರನ್ನಾಗಿಸಿದ ಮೇಲೆ, ಲಿಂಗಾಯತರ ಮತಗಳ ಮೇಲಿನ ತನ್ನ ಹಿಡಿತ ಸಡಿಲಿಸಿಲ್ಲವೆಂಬ  ಭರವಸೆ ಯೊಂದಿಗೆ, ದಲಿತ ಮತ್ತು ಇತರ ಹಿಂದುಳಿದ ಜಾತಿಗಳ ಮತಗಳ ಕ್ರೋಡೀಕರಣದ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು, ಪ್ರತಿಯೊಂದು ಮತಗಟ್ಟೆಗೆ ಹೊಂದುವಂಥ ರಣತಂತ್ರವನ್ನು ಹೆಣೆಯುವ ಹವಣಿಕೆಯಲ್ಲಿದೆ. ಆದರೆ, ಮೊದಲೇ ಹೇಳಿದಂತೆ, ಇಲಿ ಹೆಗ್ಗಣಗಳನ್ನು ಬೋನಿಗಟ್ಟುವುದರಲ್ಲಿ ಬಿಜೆಪಿಯು ಎಷ್ಟರಮಟ್ಟಿಗೆ ಯಶಸ್ಸನ್ನು ಪಡೆಯಲಿದೆಯೆಂಬುದೇ ಮುಂಬರುವ ಚುನಾವಣೆಯ ರೂಪುರೇಷೆಗಳನ್ನು ಮತ್ತು ಚುನಾವಣೋತ್ತರ ಇ.ವಿ.ಎಂಗಳ ರಹಸ್ಯಗಳ ಎಣಿಕೆಯ ದಿನದ ಲೆಕ್ಕಾಚಾರಗಳನ್ನು ನಿರ್ಧರಿಸುತ್ತವೆಯೆಂಬುದಂತೂ ಸುನಿಶ್ಚಿತ.

Read E-Paper click here