Friday, 13th December 2024

ವಿದೇಶಾಂಗ ನೀತಿಯಲ್ಲೂ ಭಾರತದ ಆತ್ಮನಿರ್ಭರತೆ

ವಿಶ್ಲೇಷಣೆ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

ಭಾರತೀಯರ ಹಿತಾಸಕ್ತಿಗೆ ಧಕ್ಕೆ ಬಂದಾಗ ಮೋದಿ ಸರಕಾರವು ಮಧ್ಯಪ್ರವೇಶಿಸಿ ಎಷ್ಟೇ ಜಟಿಲವಾದ ಸಮಸ್ಯೆ ಯಾಗಿದ್ದರೂ ಬಗೆಹರಿಸುವ ಸಾಮರ್ಥ್ಯ ಇಂದಿನ ನಾಯಕತ್ವದಲ್ಲಿ ಇರುವುದನ್ನು ಪದೇ ಪದೇ ಸಾಬೀತು ಪಡಿಸು ತ್ತಿದ್ದಾರೆ. ವಿಶ್ವ ವೇದಿಕೆಯಲ್ಲಿ ಭಾರತದ ಗೌರವ ಇಮ್ಮಡಿಸಿದೆ. ಇದರ ಪೂರ್ಣ ಶ್ರೇಯಸ್ಸು ಮೋದಿ ಸರಕಾರಕ್ಕೆ ಸಲ್ಲುತ್ತದೆ.

2014 ರ ನಂತರ ಭಾರತದ ವಿದೇಶಾಂಗ ನೀತಿಗೆ ಸ್ಪಷ್ಟ ದಿಕ್ಕು ದೊರೆತಿದೆ ಮತ್ತು ಆನೆಬಲ ಬಂದಿದೆ. ಕಳೆದ 8 ವರ್ಷಗಳಲ್ಲಿ ವಿದೇಶಾಂಗ ವ್ಯವಹಾರಗಳಲ್ಲಿ ‘ದೇಶ ಮೊದಲು ನೀತಿ’ಯು ಅಕ್ಷರಶಃ ಪಾಲನೆಯಾಗುತ್ತಿದೆ. 2014ರಲ್ಲಿ ನರೇಂದ್ರ ಮೋದಿ ಯವರು ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಮಾರಿಷಸ್ ಅಧ್ಯಕ್ಷರನ್ನು ಆಹ್ವಾನಿಸಿ ಭಾರತದ ಮುಂದಿನ ವಿದೇಶಾಂಗ ನೀತಿಯ ದಿಕ್ಕು ಎತ್ತ ಸಾಗುತ್ತದೆ ಎಂಬುದನ್ನು ಸೂಚ್ಯವಾಗಿ ಪರಿಚಯಿಸಿದರು.

ನೆರೆಹೊರೆಯವರು ಜತೆಗೆ ‘ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ’ ಎಂಬುದನ್ನು ಎರಡು ಬಾರಿ ನೆರೆಯ ಪಾಕಿಸ್ಥಾನದ ನೆಲಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಸಾಬೀತು ಪಡಿಸಿದರು. ಭಾರತೀಯ ಸೇನೆಯ ಶೌರ್ಯವನ್ನು ಮೊದಿ ಈ ಸಂದರ್ಭ ಮೆರೆಸಿದರು. ಅಷ್ಟೇ ಅಲ್ಲ, ೨೦೧೫ ರಲ್ಲಿ ನೇಪಾಳದಲ್ಲಿ ಭೂಕಂಪವಾಗಿ ಅಪಾರ ಸಾವು ನೋವು ಸಂಭವಿಸಿದಾಗ, ದುರ್ಘಟನೆ ನಡೆದ ಒಂದು ಗಂಟೆಯೊಳಗೆ ಪರಿಹಾರ ಸಾಮಾಗ್ರಿಯೊಂದಿಗೆ ಭಾರತೀಯ ವಾಯು ಸೇನೆ ಕಠ್ಮಂಡುವಿನಲ್ಲಿ ಇಳಿಯಿತು.

ಕ್ಷಣಮಾತ್ರವೂ ವ್ಯರ್ಥ ಮಾಡದೆ ಪರಿಹಾರ ಕಾರ್ಯ ಆರಂಭಿಸಿ ಭಾರತದ ಮಾನವೀಯ ಮುಖವನ್ನು ತೋರಿಸಲಾಯಿತು.
ಜತ್ತಿಗೆ ಭಾರತದ ಪ್ರಭಾವ ಗೊತ್ತಾದದ್ದು ಜೂನ್ 21ರಂದು. ಅಂದಿನ ದಿನವನ್ನು ವಿಶ್ವ ಯೋಗ ದಿನಾಚರಣೆಯನ್ನಾಗಿ ವಿಶ್ವ ಸಂಸ್ಥೆ ಘೋಷಿಸಲು ಭಾರತ ಮಂಡಿಸಿದ ನಿರ್ಣಯಕ್ಕೆ 130 ದೇಶಗಳು ಸಹ ಪ್ರಾಯೋಜಕರಾದರು. ಭಾರತ ತನ್ನ ಪ್ರಯತ್ನದಲ್ಲಿ ಸಫಲ ವಾಯಿತು. ಇನ್ನು ಸಂಘರ್ಷದ ಸಮಯದಲ್ಲಿ ಭಾರತ ತೋರಿದ ನಾಯಕತ್ವ ಗುಣಕ್ಕೆ ಉದಾಹರಣೆ ಇಲ್ಲಿದೆ. ಯುದ್ಧ ನಿರತ
ರಾಷ್ಟ್ರಗಳಿಂದ ಅದರಲ್ಲೂ ಯೆಮನ್‌ನಿಂದ ಭಾರತೀಯರಲ್ಲದೆ ಇತರ ರಾಷ್ಟ್ರಗಳ ನಾಗರಿಕರನ್ನೂ ಪಾರು ಮಾಡಿದ್ದು.

ಸೌದಿ ಅರೇಬಿಯ ಜತೆ ಮಾತನಾಡಿ ಕೆಲವು ಗಂಟೆಗಳ ಕಾಲ ವೈಮಾನಿಕ ದಾಳಿ ಸ್ಥಗಿತಗೊಳ್ಳುವಂತೆ ಮಾಡಿ ನಾಗರಿಕರನ್ನು ಹೊರ ತರಲಾಯಿತು. ಇತರ ದೇಶಗಳಿಗೆ ಆಗದ ಕೆಲಸವನ್ನು ಮೋದಿ ಸರಕಾರ ಮಾಡಿ ಭಾರತದ ಸದ್ಭಾವನೆಯನ್ನು ತೋರಿಸಿ ಕೊಟ್ಟರು. ಹತ್ತು ವರ್ಷಗಳ ಅವಧಿಯ ಯುಪಿಎ ಸರಕಾರದಲ್ಲಿ ಭಾರತೀಯ ವಾಯುಸೇನೆಗೆ ಅತ್ಯವಶ್ಯಕವಾಗಿದ್ದ ಫೈಟರ್ ಜೆಟ್ ಖರೀದಿ ಸಲು ಹಣವಿಲ್ಲ ಎಂದು ದಿನ ದೂಡುತ್ತಿದ್ದರು.

ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಕಾರ್ಯಗತಗೊಳಿಸಿ, ರಫೆಲ್ ಫೈಟರ್ ಜೆಟ್ ವಿಮಾನವನ್ನು ಫ್ರಾನ್ಸ್ ಸರಕಾರದಿಂದ ನೇರವಾಗಿ ಖರೀದಿಸಲು ಒಪ್ಪಂದ ಮಾಡಿಕೊಂಡರು.ಭಾರತಕ್ಕೆ 36 ಯುದ್ಧ ವಿಮಾನಗಳು ಮೂರು ವರ್ಷದಲ್ಲಿ ಬರುವಂತೆ ಮಾಡಿದರು. ಗುಜರಾತ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಡೆದ ಕೋಮು ಗಲಭೆ ಹಿನ್ನೆಲೆಯಲ್ಲಿ ವೀಸಾ ನಿರಾಕರಿಸಿದ್ದ ಅಮೆರಿಕ, ಮೋದಿಯವರು ಪ್ರಧಾನಿಯಾಗಿ ಅಮೆರಿಕ ಪ್ರವಾಸ ಕೈಗೊಂಡಾಗ ಕೆಂಪು ಗಂಬಳಿಯನ್ನು ಹಾಸಿ ಸ್ವಾಗತಿಸಬೇಕಾಯಿತು. ಆ ಬಳಿಕ ಅಮೆರಿಕ ಅಧ್ಯಕ್ಷರಾದ ಬರಾಕ್ ಒಬಾಮ ಮತ್ತು ಡೋನಾಲ್ಡ್ ಟ್ರಂಪ್ ಸಹ ಭಾರತಕ್ಕೆ ಭೇಟಿ ನೀಡಿ ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸಿದರು.

ಡೋನಾಲ್ಡ್ ಟ್ರಂಪ್ ಅಹಮದಾಬಾದಿನಲ್ಲಿ ‘ಐತಿಹಾಸಿಕ ನಮಸ್ತೆ ಟ್ರಂಪ್’ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿ ಯಾದರು. ಮೋದಿಯವರು ವಿದೇಶ ಪ್ರವಾಸ ಕೈಗೊಂಡ ವೇಳೆ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ಪರಿಪಾಠ
ಮಾಡಿಕೊಂಡು ಅನಿವಾಸಿ ಭಾರತೀಯರ ಶಕ್ತಿಯ ಪರಿಚಯ ಆಯಾ ದೇಶಗಳಿಗೆ ಮಾಡಿಕೊಟ್ಟಿದ್ದಾರೆ. ಕರೋನಾ ಸಾಂಕ್ರಾಮಿಕದ ವಿಚಾರದಲ್ಲಂತೂ ಭಾರತ ಕೈಗೊಂಡ ಕ್ರಮಗಳು ವಿಶ್ವಕ್ಕೇ ಮಾದರಿ. ಸಾಂಕ್ರಾಮಿಕ ಹರಡಿದಾಗ ಆರಂಭದಲ್ಲಿ ಭಾರತದ ಹೈಡ್ರಾಕ್ಸಿಕ್ಲೋರೊಕ್ಷೈನ್ ಮಾತ್ರೆಯನ್ನು ಅಮೆರಿಕ ಸಹಿತ ೧೨೦ ದೇಶಗಳಿಗೆ ಸರಬರಾಜು ಮಾಡಿತು.

ಇತರ ದೇಶಗಳು ಜೀವಾನವಶ್ಯಕ ಔಷಧಗಳ ರಫ್ತು ನಿರ್ಬಂಧಿಸಿದ್ದರೆ, ಭಾರತ 40 ದೇಶಗಳಿಗೆ ಉಚಿತವಾಗಿ ಔಷಧಗಳನ್ನು ಸರಬರಾಜು ಮಾಡಿತು. 2021ರಲ್ಲಿ ವಿಶ್ವದೆಡೆ ಕರೋನಾ ಲಸಿಕೆಗೆ ಬೇಡಿಕೆ ಅಗಾಧವಾಗಿತ್ತು. ಶ್ರೀಮಂತ ದೇಶಗಳು ಅಮೆರಿಕ,
ಬ್ರಿಟನ್ ಮತ್ತು ಕೆನಡಾ ದೇಶಗಳು ಲಸಿಕೆಯನ್ನು ತಮ್ಮ ಅಗತ್ಯಕ್ಕಿಂತ ದುಪ್ಪಟ್ಟು ಖರೀದಿಸಿ ಸಂಗ್ರಹ ಮಾಡಿದ್ದವು. ಬಡ ದೇಶಗಳು ಅವರ ಆದ್ಯತಾ ಪಟ್ಟಿಯಲ್ಲಿ ಇರಲಿಲ್ಲ. ಆದರೆ, ಭಾರತ 98 ದೇಶಗಳಿಗೆ ಭಾರತದ ಲಸಿಕೆಯನ್ನು ಸರಬರಾಜು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತವನ್ನು ‘ವಿಶ್ವದ ಔಷಧಾಲಯ’ ಎಂದು ಪ್ರಂಶಸಿಸಿದ್ದಾರೆ. ಭಾರತ ಪಾಶ್ಚಮಾತ್ಯ ರಾಷ್ಟ್ರಗಳ ಹಾಗೆ ಪರಿಸ್ಥಿತಿಯ ದುರ್ಲಾಭ ಪಡೆಯದೇ ಪರಿಸ್ಥಿತಿಗೆ ಪರಿಹಾರವಾಗಿ ವಿಶ್ವಕ್ಕೆ ಮಾದರಿಯಾಗಿದೆ. ಭಾರತದ ದಿಟ್ಟತನಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ ನೋಡಿ. ರಷ್ಯಾ ನಿರ್ಮಿತ ಖ-400 ಕ್ಷಿಪಣಿ ಭಾರತ ಖರೀದಿ ಮಾಡಿತು. ಈ ಕ್ಷಿಪಣಿ ಖರೀದಿಸಿದ ರಾಷ್ಟ್ರಗಳ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ ಹೇರುತ್ತದೆ.

ಟರ್ಕಿ ಈ ಕ್ಷಿಪಣಿಯನ್ನು ಖರೀದಿಸಿದ ಕಾರಣಕ್ಕೇ ಈಗಾಗಲೇ ಅದರ ಮೇಲೆ ದಿಗ್ಬಂಧನ ಹೇರಲಾಗಿದೆ. ಭಾರತ ಇಂಥ ಗೊಡ್ಡು ಬೆದರಿಕೆಗಳಿಗೆಲ್ಲ ಜಗ್ಗಲಿಲ್ಲ. ಕ್ಷಿಪಣಿ ಖರೀದಿಸಿಯೇ ಬಿಟ್ಟಿತು. ಆದರೆ, ಭಾರತದ ಮೇಲೆ ಯಾವುದೇ ದಿಗ್ಭಂಧನ ಹೇರಲು ಅಮೆರಿಕ ಹಿಂಜರಿಯಿತು. ದೇಶದ ಸುರಕ್ಷತೆಯ ದೃಷ್ಟಿಯಿಂದ ದಿಗ್ಭಂಧನಕ್ಕೆ ಬೆದರಿ ರಾಜಿ ಮಾಡಿಕೊಳ್ಳದ ದಿಟ್ಟ ನಿಲುವನ್ನು ಮೋದಿ ಸರಕಾರ ಕೈಗೊಂಡಿತ್ತು.

ರಷ್ಯಾ, ಉಕ್ರೇನ್ ಯುದ್ಧದ ವಿಚಾರದಲ್ಲಿ ಮತ್ತೊಮ್ಮೆ ಭಾರತ ತನ್ನ ರಾಜತಾಂತ್ರಿಕ ಶಕ್ತಿ ಮೆರೆಯುತ್ತಿದೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧದ ನಿರ್ಣಯಗಳನ್ನು ಮಂಡಿಸಿದಾಗ ಭಾರತ ತನ್ನ ಹಿತದ ದೃಷ್ಟಿಯಿಂದ ಮತದಾನದಿಂದ ಹೊರಗುಳಿದಿದೆ. ಆದರೆ ಉಕ್ರೇನ್‌ಗೆ ಮಾನವೀಯ ದೃಷ್ಟಿಯಿಂದ 4 ವಿಮಾನದಲ್ಲಿ ಅಗತ್ಯ ಔಷಧ ಮತ್ತು ಇತರ ವೈದ್ಯಕೀಯ ಉಪಕರಣಗಳು ಮತ್ತು
ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿ ಕೊಟ್ಟು ಸಂಬಂಧದಲ್ಲಿ ಸಂತುಲನ ಕಾಪಾಡಿಕೊಂಡಿದೆ.

ಯುದ್ಧ ಆರಂಭಗೊಳ್ಳುತ್ತಿದ್ದಂತೆಯೇ 23 ಸಾವಿರ ವೈದ್ಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದರು. ಅವರನ್ನು ಹಿಂದಕ್ಕೆ ಕರತರಬೇಕಾದ ಗುರುತರ ಜವಾಬ್ದಾರಿ ಸರಕಾರದ ಮೇಲಿತ್ತು. ತಾನು ಕಾಪಾಡಿಕೊಂಡು ಬಂದಿದ್ದ ಉತ್ತಮ ಬಾಂಧವ್ಯದ ಫಲ ವಾಗಿ ಎಲ್ಲ ವಿದ್ಯಾರ್ಥಿಗಳನ್ನೂ ಭಾರತಕ್ಕೆ ಹಿಂದಕ್ಕೆ ಕರತರಲು ಸಾಧ್ಯವಾಯಿತು. ಉಕ್ರೇನ್ ಮೇಲೆ ದಾಳಿ ವಿರೋಧಿಸಿ ನ್ಯಾಟೋ ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿವೆ.

ರಷ್ಯಾದೊಡನೆ ವ್ಯಾಪಾರಕ್ಕೆ ತಡೆ ಒಡ್ಡಲಾಗಿದೆ. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಭಾರತ ಇದರ ನಡುವೆಯೂ
ಖ400 ಮಿಸೈಲ್ ಅನ್ನು ರಷ್ಯಾದಿಂದ ಪಡೆಯಿತು ಮತ್ತು ಅಗ್ಗದ ದರದಲ್ಲಿ ರಷ್ಯ ಮಾರಾಟ ಮಾಡಿದ ತೈಲವನ್ನು ಕೂಡ ಖರೀದಿ ಸಿತು. ಇದಕ್ಕೆ ತಕರಾರು ಮಾಡಿದ ಪಾಶ್ಚಮಾತ್ಯ ರಾಷ್ಟ್ರಗಳಿಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ‘ಭಾರತ ರಷ್ಯಾದಿಂದ ಖರೀದಿಸುವ ತೈಲವು ಯುರೋಪ್ ರಾಷ್ಟ್ರಗಳು ಒಂದು ಮಧ್ಯಾಹ್ನ ಖರೀದಿಸುವಷ್ಟೂ ಇಲ್ಲ’ ಎಂದು ತಿರುಗೇಟು ನೀಡಿ ತೆಪ್ಪಗಾಗಿಸಿದರು.

ಕಳೆದ ಎರಡು ತಿಂಗಳಿನಿಂದ ಭಾರತಕ್ಕೆ ವಿದೇಶಿ ಗಣ್ಯರು ಒಬ್ಬರಾದ ಮೇಲೆ ಒಬ್ಬರು ದಾಂಗುಡಿ ಇಡುತ್ತಿದ್ದಾರೆ. ಪೋಲೆಂಡ್, ಸ್ಲೋವೇನೀಯಾ, ಪೋರ್ಚುಗೀಸ್ , ನೆದರ್ ಲೆಂಡ್, ನಾರ್ವೆ, ರಷ್ಯಾ, ಬ್ರಿಟನ್ ಮತ್ತು ಯುಕ್ರೇನ್ ವಿದೇಶಾಂಗ ಸಚಿವರುಗಳಲ್ಲದೇ ಬ್ರಿಟನ್ ಪ್ರಧಾನಿ ಬೋರಿಸ್ ಯೆಲ್ಸಿನ್ ಭಾರತಕ್ಕೆ ಭೇಟಿ ನೀಡಿದರು. ಅಮೆರಿಕ, ಆಸ್ಟ್ರೇಲಿಯಾ ಪ್ರಧಾನಿ-ಅಧ್ಯಕ್ಷರೊಡನೆ ವರ್ಚು
ಯಲ್ ಸಭೆಗಳಾದವು. ಇದಕ್ಕೆ ಕಾರಣಗಳು ಇಲ್ಲದಿಲ್ಲ. ರಷ್ಯಾ ಮತ್ತು ಯುಕ್ರೇನ್ ಯುದ್ಧದಲ್ಲಿ ಭಾರತ ತನ್ನದೆ ಆದ ಸ್ವತಂತ್ರ ನಿಲುವು ತೆಗೆದುಕೊಂಡಿದೆ ಮತ್ತು ತನ್ನ ನಿಲುವಿನ ಹಿಂದಿರುವ ಅನಿವಾರ್ಯವನ್ನು ಹಾಗೂ ದೇಶದ ಸುರಕ್ಷತೆಯ ದೃಷ್ಟಿಯಿಂದ ಇದರ ಅವಶ್ಯಕತೆಯನ್ನು ಸಾಲು ಸಾಲು ಭಾರತಕ್ಕೆ ಭೇಟಿ ನೀಡುತ್ತಿರುವ ಇತರ ದೇಶಗಳ ಪ್ರಮುಖರಿಗೆ ಮನದಟ್ಟು ಮಾಡಿಸುವು ದರಲ್ಲಿಯೂ ಸಫಲವಾಗಿದೆ.

ಇತ್ತ ಅಮೆರಿಕವೂ ಮುನಿಸಿಕೊಳ್ಳಬಾರದು, ಅತ್ತ ರಷ್ಯಾ ಕೂಡ ದೂರ ಸರಿಯಬಾರದು ಆ ರೀತಿಯ ಹಗ್ಗದ ಮೇಲಿನ ನಡಿಗೆಯಲ್ಲಿ ಭಾರತ ಸರಕಾರ ಯಶಸ್ವಿಯಾಗಿದೆ. ಚೀನಾದ ಪ್ರಭಾವವನ್ನು ತಗ್ಗಿಸಲು ಭಾರತದ ಸಹಾಯ ಅಮೆರಿಕ ಹಾಗೂ ಇತರ ದೇಶಗಳಿಗೆ ಅಗತ್ಯವಿದೆ. ಹೀಗಾಗಿ ಭಾರತದ ನಿಲುವನ್ನು ಸಾರಾಸಗಟಾಗಿ ವಿರೋಧಿಸಲು ಈ ರಾಷ್ಟ್ರಗಳಿಗೆ ಸಾಧ್ಯವಾಗುತ್ತಿಲ್ಲ. ರಷ್ಯಾ ಮತ್ತು ಉಕ್ರೇನ್ ವಿಶ್ವದಲ್ಲಿ ಅತಿಹೆಚ್ಚು ಗೋಧಿ ರಫ್ತು ಮಾಡುವ ದೇಶಗಳು. ಇವರಿಬ್ಬರ ಪರಸ್ಪರ ಕಾದಾಟದಿಂದ ವಿಶ್ವದ ಅನೇಕ
ದೇಶಗಳು ಗೋಧಿ ಸರಬರಾಜು ಕೊರತೆಯನ್ನು ಅನುಭವಿಸುತ್ತಿದೆ.

ಪ್ರಧಾನಿ ಮೋದಿಯವರು ‘ವಿಶ್ವಸಂಸ್ಥೆ ಅನುಮತಿ ನೀಡಿದರೆ ಇಡೀ ವಿಶ್ವಕ್ಕೇ ಗೋಧಿ ಪೂರೈಸಲು ಭಾರತ ಸಿದ್ಧ’ ಎಂದು ಘೋಷಿಸಿ ಎಲ್ಲರ ಮನ ಗೆದ್ದಿದ್ದಾರೆ. ಇನ್ನು ನೆರೆಯ ಶ್ರೀಲಂಕಾ ಇಂದು ಆರ್ಥಿಕ ಸಂಕಟದಲ್ಲಿ ಸಿಲುಕಿರುವುದು ಗೊತ್ತೇ ಇದೆ. ಆಹಾರ ಮತ್ತು ಅಗತ್ಯವಸ್ತುಗಳ ಅಭಾವದ ಜತೆಗೆ ಪೆಟ್ರೋಲ್, ಡೀಸೆಲ್ ಖರೀದಿಗೂ ಆಗದಷ್ಟು ವಿದೇಶಿ ವಿನಿಮಯ ಭಂಡಾರ ಖಾಲಿಯಾಗಿದೆ. ನಂಬಿದ್ದ ಚೀನಾ ಇವರ ನೆರವಿಗೆ ಬರಲಿಲ್ಲ. ಆದರೆ ಭಾರತ ಮಾತ್ರ ಧನ ಸಹಾಯದ ಜತೆಗೆ ತೈಲ ಸರಬರಾಜು ಮತ್ತು ಅಗತ್ಯ ವೈದ್ಯಕೀಯ ಔಷಧಗಳ ಸರಬರಾಜು ಮಾಡಿ ನೆರೆಯ ರಾಷ್ಟ್ರದ ಸಂಕಷ್ಟದಲ್ಲಿ ಆಪತ್ಭಾಂಧವನಾಗಿ ನಿಂತಿದೆ.

ಎರಡು ವರ್ಷದ ಕೆಳಗೆ ಕೊರೋನ ಉಲ್ಬಣಗೊಂಡಾಗ 23 ಸಾವಿರ ಭಾರತೀಯ ವಿದ್ಯಾರ್ಥಿಗಳು ಚೀನಾದಿಂದ ತಮ್ಮ ವಿದ್ಯಾ ಭ್ಯಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಆಗಿದ್ದರು. ಈಗ ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರುಳಿದ ತರುವಾಯ ಮತ್ತೆ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಹಿಂದಿರುಗಬೇಕಾಗಿತ್ತು. ಆದರೆ ಚೀನಾ ಸರಕಾರವು ಇವರಿಗೆ ಮರಳಿ ಬರಲು ಅನುಮತಿ ನೀಡದೆ ಸತಾಯಿಸುತ್ತಿತ್ತು. ಪರಿಣಾಮ ೨೩ ಸಾವಿರ ವಿದ್ಯಾರ್ಥಿಗಳ ಭವಿಷ್ಯ ತೂಗೂಯ್ಯಾಲೆಯಲ್ಲಿತ್ತು.

ವಿದೇಶಾಂಗ ಸಚಿವ ಜೈಶಂಕರ್ ಅವರು ಮಧ್ಯಪ್ರವೇಶಿಸಿ ಚೀನಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಭಾರತೀಯ ವಿದ್ಯಾರ್ಥಿಗಳು ಚೀನಾಗೆ ತೆರಳಿ ತಮ್ಮ ವ್ಯಾಸಂಗ ಮುಗಿಸಲು ಅನುಮತಿ ಪಡೆಯಲು ಯಶಸ್ವಿಯಾಗಿದ್ದಾರೆ. ಭಾರತೀಯರ ಹಿತಾಸಕ್ತಿಗೆ ಧಕ್ಕೆ ಬಂದಾಗ ಮೋದಿ ಸರಕಾರವು ಮಧ್ಯಪ್ರವೇಶಿಸಿ ಎಷ್ಟೇ ಜಟಿಲವಾದ ಸಮಸ್ಯೆಯಾಗಿದ್ದರೂ ಬಗೆಹರಿಸುವ ಸಾಮರ್ಥ್ಯ ಇಂದಿನ ನಾಯಕತ್ವದಲ್ಲಿ ಇರುವುದನ್ನು ಪದೇ ಪದೇ ಸಾಬೀತು ಪಡಿಸುತ್ತಿದ್ದಾರೆ. ವಿದೇಶಾಂಗ ವ್ಯವಹಾರದಲ್ಲಿ ಆತ್ಮನಿರ್ಭರತೆಯ ಮಂತ್ರಕ್ಕೆ ಆದ್ಯತೆ ನೀಡಿರುವ ಪರಿಣಾಮ ವಿಶ್ವ ವೇದಿಕೆಯಲ್ಲಿ ಭಾರತದ ಗೌರವ ಇಮ್ಮಡಿಸಿದೆ. ಇದರ ಪೂರ್ಣ ಶ್ರೇಯಸ್ಸು ಮೋದಿ ಸರಕಾರಕ್ಕೆ ಸಲ್ಲುತ್ತದೆ.