Saturday, 14th December 2024

ರಾಮಕೃಷ್ಣ ಹೆಗಡೆ ಎಂಬ ಮೌಲ್ಯಾಧರಿತ ರಾಜಕಾರಣಿ

ಸಂಸ್ಮರಣೆ

ಶಶಿಭೂಷಣ ಹೆಗಡೆ

ಇಂದು ೨೦೨೪ರ ಆಗಸ್ಟ್ ೨೯. ದಕ್ಷ ಆಡಳಿತಗಾರ ಮತ್ತು ಮುತ್ಸದ್ದಿ ಎಂದೇ ಹೆಸರಾಗಿದ್ದ ರಾಮಕೃಷ್ಣ ಹೆಗಡೆಯವರು ನಮ್ಮೊಂದಿಗೆ ಇಹದಲ್ಲಿದ್ದಿದ್ದರೆ ಅವರಿಗೆ ೯೮ ವರ್ಷ ತುಂಬಿ ೯೯ ಆರಂಭವಾಗುತ್ತಿತ್ತು. ಮುಂದಿನ ವರ್ಷ ಅವರ ಜನ್ಮಶತಮಾನೋತ್ಸವ. ಹೆಗಡೆಯವರು ಗತಿಸಿ ೨೦ ವರ್ಷ ಕಳೆದಿವೆ. ಅವರು ಕಾಲವಾದ ನಂತರ ಹುಟ್ಟಿದವರು ಇಂದು ಮತದಾನ ಮಾಡುವ ವಯಸ್ಸನ್ನು ಮುಟ್ಟಿದ್ದಾರೆ.

ಪಕ್ಷ ರಾಜಕಾರಣ, ಜಾತೀಯ-ಪ್ರಾಂತೀಯ ಕಾರಣಗಳಿಂದಾಗಿ ಹೆಗಡೆಯವರು ಚುನಾವಣಾ ರಾಜಕಾರಣದಲ್ಲಿ ಅಪ್ರಸ್ತುತರಾಗಿದ್ದಿರಬಹುದು; ಆದರೆ ತಾತ್ವಿಕ ಮತ್ತು ಮೌಲ್ಯಾಧಾರಿತ ರಾಜಕಾರಣದ ಮಾತು ಬಂದಾಗ ಲೆಲ್ಲಾ ಹಾಗೂ ವೈಚಾರಿಕ, ಶುದ್ಧ, ಪಾರದರ್ಶಕ, ಪರಿಣಾಮಕಾರಿ, ಜನಸ್ನೇಹಿ ಆಡಳಿತದ ಪ್ರಸ್ತಾಪವಾದಾಗಲೆಲ್ಲಾ ನೆನಪಾಗುವವರು ಹೆಗಡೆಯವರೇ! ಕಲಸುಮೇಲೋಗರದ ಮೂಟೆಯಾಗಿರುವ, ಸೈದ್ಧಾಂತಿಕ   ರಾಜಕಾರಣವೆಂಬುದು ಹೆಚ್ಚುಕಡಿಮೆ ಅದೃಶ್ಯವಾಗಿರುವ ಇಂದಿನ ಸನ್ನಿವೇಶದಲ್ಲಿ ಹೆಗಡೆಯವರು ನಮ್ಮ ಕಣ್ಣುಗಳಿಗೇ ಎಟುಕದಷ್ಟು ಎತ್ತರದಲ್ಲಿ ಚಿರಸ್ಥಾಯಿಯಾಗಿರುವುದು ಅಪ್ಪಟಸತ್ಯ. ಒಂದು ಲೇಖನದ ಕೆಲವೇ ಸಾಲುಗಳಲ್ಲಿ ಹೆಗಡೆಯವರ ವ್ಯಕ್ತಿತ್ವದ ಎಲ್ಲಾ ಆಯಾಮಗಳನ್ನು ಕಟ್ಟಿಕೊಡುವುದು ಯಾರಿಂದಲೂ ಅಸಾಧ್ಯ; ಆದರೆ ಕೆಲವಷ್ಟು ಐತಿಹಾಸಿಕ ಮತ್ತು ಮರೆಯಬಾರದ ಘಟನೆಗಳು ಹಾಗೂ ದಂತಕಥೆಗಳ ಮೂಲಕ,
ಕರ್ನಾಟಕ ರಾಜಕಾರಣದ ಸುವರ್ಣಯುಗದ ನಿರ್ಮಾತೃವಾದ ಅವರನ್ನು ನೆನಪಿಸಿಕೊಳ್ಳಬಹುದೇನೋ!

ವಾರ್ಧಾದಲ್ಲಿ ಕಳೆದ ಯೌವನ
ಸ್ವಾತಂತ್ರ್ಯ ಹೋರಾಟಗಾರ್ತಿ ಅಕ್ಕಮಹಾದೇವಿಯವರ ಜತೆಗೆ ಮಹಾರಾಷ್ಟ್ರದ ವಾರ್ಧಾದಲ್ಲಿರುವ ವಿನೋಬಾ ಭಾವೆಯವರ ಆಶ್ರಮಕ್ಕೆ ಹೋದಾಗ ಹೆಗಡೆಯವರಿಗೆ ಇನ್ನೂ ಹದಿಹರೆಯ. ಅಲ್ಲಿಯೇ ಪದವಿ ಶಿಕ್ಷಣವನ್ನು ಪಡೆದ ಹೆಗಡೆಯವರು ಆಶ್ರಮದಲ್ಲಿ ಕಸ ಗುಡಿಸುವುದರಿಂದ ಮೊದಲ್ಗೊಂಡು ಪಾಯಿಖಾನೆ ಸ್ವಚ್ಛಗೊಳಿಸುವವರೆಗಿನ ಎಲ್ಲ ಕೆಲಸಗಳನ್ನೂ ಮಾಡಿದರು. ಸಮಾಜದ ನಾಯಕತ್ವ ವಹಿಸಿದ, ಆಗರ್ಭ ಶ್ರೀಮಂತ ಬ್ರಾಹ್ಮಣ ಕುಟುಂಬದ ತಮಗೆ ಇದು ಸಮಾನತೆಯ ಪಾಠ ಕಲಿಸಿ ಬದುಕನ್ನು ಹಸನುಗೊಳಿಸಿತು ಎಂದು ಸ್ವತಃ ಹೆಗಡೆಯವರು ಆಗಾಗ ಹೇಳಿದ್ದಿದೆ. ಯಶಸ್ವಿ ನಾಯಕತ್ವದ ನಿರ್ಮಾಣದ ಹಿಂದೆ ಇರುವುದು ಇಂಥ ಪುಟ್ಟಪುಟ್ಟ ಹೆಜ್ಜೆಗಳು, ಘಟನೆಗಳೇ ಅಲ್ಲವೇ? ಮರಾಠಿ ಭಾಷಿಕರೇ ತುಂಬಿರುವ ಉತ್ತರಕನ್ನಡ ಜಿಲ್ಲೆಯ ಕ್ಯಾಸಲ್‌ರಾಕ್‌ಗೆ ನಾನು ಇತ್ತೀಚೆಗೆ ಹೋದಾಗ, ಅಲ್ಲಿ ಹೆಗಡೆಯವರೊಂದಿಗೆ ಒಡನಾಡಿದ ಹಿರಿಯ ರೊಬ್ಬರು, “೧೯೭೭ರ ಲೋಕಸಭಾ ಚುನಾವಣೆಯಲ್ಲಿ ಹೆಗಡೆಯವರು ಇಲ್ಲಿ ಅಸ್ಖಲಿತ ‘ಪುಣೀರಿ’ ಮರಾಠಿಯಲ್ಲಿ ಅರ್ಧಗಂಟೆ ಭಾಷಣ ಮಾಡಿದ್ದರು” ಎಂದಾಗ ದಂಗಾದೆ.

ಹೆಗಡೆಯವರು ವಾರ್ಧಾದಲ್ಲಿರುವಾಗ ಆ ಭಾಷೆಯನ್ನು ಕರಗತ ಮಾಡಿಕೊಂಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಆದರೆ, ‘ಮಹಾಜನ್ ವರದಿ’ಯ ಅನುಷ್ಠಾನದ ಬಗ್ಗೆ ತಮಗಿದ್ದ ಬದ್ಧತೆಯಿಂದಾಗಿ, ಇದೇ ಮರಾಠಿ ಭಾಷಿಕರ ಬೆಂಬಲ ಸಿಗದೆ ಹೆಗಡೆಯವರು ೧೯೭೭ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದು ವಿಪರ್ಯಾಸ. ೧೯೫೦-೫೨ರ ಕಾಲಘಟ್ಟದಲ್ಲಿ ಲಖನೌ ವಾರ್ಸಿಟಿಯಲ್ಲಿ ಎಂ.ಎ. ಎಲ್‌ಎಲ್‌ಬಿ ವ್ಯಾಸಂಗ ಮಾಡುವಾಗ
ಹೆಗಡೆಯವರು ಉರ್ದು ಭಾಷೆಯನ್ನು ಕೂಡ ಕರಗತ ಮಾಡಿಕೊಂಡಿದ್ದರು.

ಪೊಲೀಸ್ ಉದ್ಯೋಗಾಕಾಂಕ್ಷಿ ಗೃಹಮಂತ್ರಿ ೧೯೮೨-೮೩ ಇರಬೇಕು. ಸ್ನಾತಕೋತ್ತರ ಪದವೀಧರನಾಗಿದ್ದ ದಲಿತ ಯುವಕನೊಬ್ಬ, ‘ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು ನಾನೂ ಅರ್ಜಿ ಸಲ್ಲಿಸಿರುವೆ. ನಿಮ್ಮ ಪ್ರಭಾವ ಬಳಸಿ ನನಗೆ ನೇಮಕಾತಿ ಮಾಡಿಸಿಕೊಡಿ’ ಎಂದು ಕೇಳಿಕೊಂಡ. ಆ ಯುವಕನನ್ನು ಹತ್ತು ನಿಮಿಷ ಸೂಕ್ಷ್ಮವಾಗಿ ಗಮನಿಸಿದ ಹೆಗಡೆಯವರು, ‘ಆಯಿತು, ನೀನು ಊರಿಗೆ ತೆರಳು, ನೋಡೋಣ’ ಎಂದು ಅಲ್ಲಿಂದ ಸಾಗಹಾಕಿದರು. ಇದಾದ ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಅದರ ಬೆನ್ನಲ್ಲೇ ಬಿಜಾಪುರದ (ಇಂದಿನ ವಿಜಯಪುರ) ಜನತಾ ಪಕ್ಷದ ನಾಯಕರು ಆ ಯುವಕನ ಮನೆಗೆ ‘ಬಿ ಫಾರ್ಮ್’ ತಲುಪಿಸಿ, ‘ಹೆಗಡೆಯವರ ನಿರ್ದೇಶನದಂತೆ ನಿಮ್ಮನ್ನು ಬಳ್ಳೊಳ್ಳಿ ಮೀಸಲು ಕ್ಷೇತ್ರದ ಅಭ್ಯರ್ಥಿಯನ್ನಾಗಿ ನಿಯೋಜಿಸಿದ್ದೇವೆ’ ಎಂದಾಗ ಆ ಯುವಕ  ಕಕ್ಕಾಬಿಕ್ಕಿ.

ನಂತರ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಆ ಯುವಕನನ್ನು ಮನೆಗೆ ಕರೆಸಿಕೊಂಡ, ಅದಾಗಲೇ ಮುಖ್ಯಮಂತ್ರಿಯಾಗಿದ್ದ ಹೆಗಡೆಯವರು, ‘ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿದ್ದಿಯಲ್ಲವೇ?  ಹೋಗು, ಇಡೀ ಕರ್ನಾಟಕದ ಪೊಲೀಸರನ್ನು ನೋಡಿಕೊಳ್ಳುವ ಕೆಲಸವನ್ನು ನಿನಗೆ ಕೊಡುತ್ತಿದ್ದೇನೆ’ ಎಂದರು. ಪೊಲೀಸ್ ಕೆಲಸದ ಆಕಾಂಕ್ಷಿಯಾಗಿದ್ದ ೨೮ರ ಪ್ರತಿಭಾವಂತ ದಲಿತ ಯುವಕನನ್ನು ಹೆಗಡೆಯವರು ಗೃಹಮಂತ್ರಿಯನ್ನಾಗಿ ಮಾಡಿದ್ದರು. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ರಮೇಶ್ ಜಿಗಜಿಣಗಿಯವರು. ನೈಜ ಪ್ರತಿಭೆಯನ್ನು ಗುರುತಿಸಿ ಪೋಷಿಸುವಲ್ಲಿ ಹೆಗಡೆಯವರಿಗಿದ್ದ ಇಂಥ ಸೂಕ್ಷ್ಮತೆ, ವಿಶಾಲತೆಯನ್ನು ಇನ್ನೆಲ್ಲಿ ಕಾಣಲು ಸಾಧ್ಯ? ಇಂಥ ಅನೇಕ ಉದಾಹರಣೆಗಳನ್ನು ನೀಡಬಹುದು.

ಅಪ್ರತಿಮ ಪ್ರಜಾಪ್ರಭುತ್ವವಾದಿ ಪ್ರಜಾಪ್ರಭುತ್ವದ ಬಗ್ಗೆ ಹೆಗಡೆಯವರಿಗೆ ಇದ್ದ ಬದ್ಧತೆ ಬೆರಗು ಹುಟ್ಟಿಸುವಂಥದ್ದು. ಇದಕ್ಕೆ ಸಾಕ್ಷಿ ಎನ್ನುವಂಥ ಒಂದು ಘಟನೆ ನಡೆದಿದ್ದು ೧೯೬೮ರಲ್ಲಿ. ಬಹಳ ಮೊದಲಿನಿಂದಲೂ, ಅಧಿಕಾರ ವಿಕೇಂದ್ರೀಕರಣ ಎಂದರೆ ಹೆಗಡೆಯವರಿಗೆ PZooಜಿಟ್ಞ ಮತ್ತು uಚಿoಛಿooಜಿಟ್ಞ. ಆಗ ಹೆಗಡೆಯವರು ವೀರೇಂದ್ರ ಪಾಟೀಲರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಕೂಡ ಹೊಂದಿದ್ದರು. ೧೯೮೬ರಲ್ಲಿ ಬಂದ ‘ಪಂಚಾಯತ್ ರಾಜ್’ ಕಾಯ್ದೆಯನ್ನು ಹೆಗಡೆಯವರು ವಾಸ್ತವವಾಗಿ ೧೯೬೮ರಲ್ಲೇ ಸಿದ್ಧಪಡಿಸಿ ಜಾರಿಗೆ ತರಲು ಬಯಸಿದ್ದರು. ಸದನದಲ್ಲಿ ಮಂಡಿಸುವ ಮೊದಲು ಶಾಸಕಾಂಗ ಪಕ್ಷದ ಸಭೆಯಲ್ಲೂ ‘ವಿಧೇಯಕ’ಗಳನ್ನು ಅಂಗೀಕರಿಸುವ ಪರಿಪಾಠ ಈಗ ಇದೆಯೋ ಇಲ್ಲವೋ, ಆಗ ಇತ್ತು. ಹೆಗಡೆಯವರು ತರಲು ಬಯಸಿದ್ದ ಈ ‘ವಿಧೇಯಕ’ದ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದು ಮತಕ್ಕೂ
ಹಾಕಲ್ಪಟ್ಟಾಗ, ಒಂದು ಮತದಿಂದ ಆ ವಿಧೇಯಕ ತಿರಸ್ಕರಿಸಲ್ಪಟ್ಟಿತು. ನೆನಪಿರಲಿ, ಇದಾಗಿದ್ದು ಸದನದಲ್ಲಿ ಅಲ್ಲ, ಹೆಗಡೆಯವರು ಇದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ. ತಾವು ತರಲು ಬಯಸಿರುವ ಕಾನೂನಿನಲ್ಲಿ ತಮ್ಮ ಪಕ್ಷದ ಶಾಸಕರಿಗೇ ನಂಬಿಕೆ ಇಲ್ಲವೆಂದರೆ, ಅವರ ವಿಶ್ವಾಸ ಕಳೆದುಕೊಂಡ ತಮಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ಯೋಗ್ಯತೆ ಇಲ್ಲವೆಂದು ಭಾವಿಸಿದ ಹೆಗಡೆಯವರು ಆ ಸಭೆಯಲ್ಲೇ ಸಚಿವ ಸ್ಥಾನಕ್ಕೆ
ರಾಜೀನಾಮೆ ನೀಡಿದ್ದರು!

ಇಂಥ ಘಟನೆ ನಡೆದದ್ದು ಪ್ರಾಯಶಃ ಅದೇ ಮೊದಲು ಮತ್ತು ಅದೇ ಕೊನೆ! ನಾಯಕ ಸಂಶಯಾತೀತನಾಗಿರಬೇಕು ಲೋಕಾಯುಕ್ತವನ್ನು ದೇಶಕ್ಕೆ ಪ್ರಥಮವಾಗಿ ಪರಿಚಯಿಸಿದ್ದು ಹೆಗಡೆಯವರು. ತಮ್ಮ ಮೇಲೆ ಅಥವಾ ತಮ್ಮ ಸಂಬಂಧಿಗಳ/ ಆಪ್ತರ ಮೇಲೆ ಆರೋಪಗಳು ಬಂದಾಗ ಯಾವ ಮುಲಾಜೂ ಇಲ್ಲದೆ ತನಿಖೆಗೆ ಆದೇಶಿಸಿದ ಧೀಮಂತ ಅವರು. ಇಂಥ ಪ್ರಸಂಗಗಳು, ಭಂಡತನವನ್ನೇ ಉಸಿರಾಡುವ ಇಂದಿ ನ ರಾಜಕಾರಣಿಗಳನ್ನು ಕಂಡಾಗ ಅಚ್ಚರಿಯನ್ನುಂಟುಮಾಡುತ್ತವೆ. ತಮ್ಮ ಸೋದರ ಸಂಬಂಧಿ ಅಣ್ಣ ಗಣೇಶ ಹೆಗಡೆ ದೊಡ್ಮನೆ ಅವರ ಮೇಲೆ ಆಗಿನ ವಿಪಕ್ಷ ನಾಯಕ ಬಂಗಾರಪ್ಪನವರು ಅಕ್ರಮ ಅಕ್ಕಿ ಸಾಗಾಟದ ಆರೋಪ ಮಾಡಿದಾಗ, ಮರುದಿನವೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು ಮುಖ್ಯಮಂತ್ರಿ ಹೆಗಡೆ! ‘ಹಣ ಪಡೆದು ಮೆಡಿಕಲ್ ಸೀಟ್ ನೀಡಿದ’ ಎಂದು ಮಗನ ಮೇಲೆ ರಾಜಕೀಯ ಪ್ರೇರಿತ ಆರೋಪ ಬಂದಾಗಲೂ ಹೆಗಡೆಯವರು ತಕ್ಷಣ
ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು. ಅಪವಾದದ ಕರಿನೆರಳನ್ನು ಹೊತ್ತ ಅಧಿಕಾರ ಅವರಿಗೆ ಎಂದೂ ಸಹ್ಯವಾಗಲಿಲ್ಲ- ಆ ಅಪವಾದವು ಸುಳ್ಳು, ನಿರಾಧಾರವಾದದ್ದು, ತನಿಖೆಯಲ್ಲಿ ಬಿದ್ದುಹೋಗಲಿರುವಂಥದ್ದು ಎಂದು ಗೊತ್ತಿದ್ದಾಗ ಕೂಡ!

ಸಂವೇದನಾಶೀಲನೇ ನಿಜನಾಯಕ
ಮುಖ್ಯಮಂತ್ರಿ ಹೆಗಡೆಯವರು ಬೀದರ್ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದರು. ಹೀಗೆ ಸಾಗುತ್ತಿರುವಾಗ ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕೆಲ ಕಾರ್ಮಿಕರು ರಸ್ತೆ ಬದಿಯಲ್ಲಿ ಗುಂಪುಗೂಡಿರುವುದನ್ನು ನೋಡಿ, ತಮ್ಮ ಬೆಂಗಾವಲು ಪಡೆ ವಾಹನವನ್ನು ನಿಲ್ಲಿಸಿ, ಅಲ್ಲೇನು ನಡೆಯುತ್ತಿದೆ ಎಂದು ವಿಚಾರಿಸಿದರು. ಕಾಮಗಾರಿಯಲ್ಲಿ ದುಡಿಯುತ್ತಿದ್ದ ಲಂಬಾಣಿ ವರ್ಗದ ತುಂಬು ಗರ್ಭಿಣಿಯೊಬ್ಬಳು ಪ್ರಸವ ವೇದನೆಯಲ್ಲಿದ್ದಾಳೆ ಮತ್ತು ಉಳಿದ ಹೆಂಗಸರು ಅವಳ ಸುತ್ತ ಸೀರೆಯೊಂದನ್ನು ಪರದೆಯಂತೆ ಮಾಡಿ ಅಲ್ಲಿಯೇ ಹೆರಿಗೆ ಮಾಡಿಸಲು ಸನ್ನದ್ಧರಾಗುತ್ತಿದ್ದಾರೆ ಎಂಬುದು ಹೆಗಡೆಯವರಿಗೆ ಗೊತ್ತಾಯಿತು. ಇಂದಿನ ರಾಜಕಾರಣಿಗಳಾದರೆ  ಐದೋ ಹತ್ತೋ ಸಾವಿರ ರುಪಾಯಿಗಳನ್ನು ಆಕೆಯ ಕೈಗಿತ್ತು ‘ಹೀರೋ’ ಎನಿಸಿಕೊಳ್ಳುವ ಹವಣಿಕೆಯಲ್ಲಿ ಇರುತ್ತಿದ್ದರೇನೋ.

ಆದರೆ ಹೆಗಡೆಯವರು ಹಾಗೆ ಮಾಡಲಿಲ್ಲ (ಅವರ ಕಿಸೆಯಲ್ಲಿ ನಗದು ಇದ್ದುದನ್ನು ನೋಡಿದವರು ಕಡಿಮೆ ಎನ್ನಿ!). ಮರುದಿನ ಬೆಂಗಳೂರಿಗೆ ಬಂದವರೇ ಸಂಪುಟ ಸಭೆ ಕರೆದು ‘ಹೆರಿಗೆ ಭತ್ಯೆ’ ಯೋಜನೆಯನ್ನು ಜಾರಿ ಮಾಡಿದರು. ಇದೇ ಅಲ್ಲವೇ ಸಂವೇದನಾಶೀಲ ನಾಯಕತ್ವ?

ಕೊನೇಗುಟುಕು
’Peಜ್ಝಿಟomeಛ್ಟಿo ಞ್ಠoಠಿ ಚಿಛಿ ಛ್ಟಿo’ ಎಂದು ಸಾಕ್ರೆಟಿಸ್ ಹೇಳಿದ್ದ. ಇದಕ್ಕೆ ವ್ಯತಿರಿಕ್ತವಾಗಿ ಛ್ಟಿo ಞ್ಠoಠಿ ಚಿಛಿ meಜ್ಝಿಟoಟmeಛ್ಟಿo ಎಂಬುದೂ ಅದೇ ಅರ್ಥವನ್ನು ಕೊಡುತ್ತದೆ. ಫಿಲಾಸಫರ್ ಅಥವಾ ತತ್ವಜ್ಞಾನಿಯ ಬಹುದೊಡ್ಡ ಗುಣ ಎಂದರೆ ಈಛಿಠಿZeಞಛ್ಞಿಠಿ ಅಥವಾ ನಿರ್ಲಿಪ್ತತೆ. ತಮಗೆ ಮಾನ- ಸಮ್ಮಾನ, ಅಧಿಕಾರ, ಹೆಸರು ಎಲ್ಲವನ್ನೂ ತಂದುಕೊಟ್ಟ ಸ್ಥಾನ ವನ್ನು, ಸಂದರ್ಭ ಬಂದಾಗ ನಿರ್ಲಿಪ್ತತೆಯಿಂದ ನಿರ್ಮೋಹದಿಂದ
ಅಂಗಿಯಂತೆ ಕಳಚಿ ತ್ಯಜಿಸಿಬಿಡುವುದು ಕೇವಲ ತತ್ವಜ್ಞಾನಿಗಳಿಂದ ಮಾತ್ರ ಸಾಧ್ಯ. ಇಂಥದೊಂದು ಪರಿಗೆ ಸಾಕ್ಷಿರೂಪವಾಗಿದ್ದರು ಹೆಗಡೆ.

ಸೈದ್ಧಾಂತಿಕ ಬದ್ಧತೆ, ಸರ್ವಸ್ವವೂ ಹೋದರೂ ಮೌಲ್ಯಗಳು ಉಳಿಯಬೇಕೆಂಬ ದೃಢತೆ, ಪ್ರತಿ ಹೆಜ್ಜೆಯೂ ಸಂಶಯಾತೀತವಾಗಿರಬೇಕು ಪಾರದರ್ಶಕವಾಗಿರಬೇಕು ಎಂಬ ಅಚಲ ನಿಲುವು, ಜನರಿಂದ ತಮಗೆ ದತ್ತವಾದ ಅಧಿಕಾರ ಮತ್ತು ಬೊಕ್ಕಸದ ಹಣವು ಸಮಾಜದ ತಳಸ್ತರದವರೆಗೂ ಪಸರಿಸಬೇಕು, ವಿಕೇಂದ್ರೀಕೃತಗೊಳ್ಳಬೇಕು ಎಂಬ mZooಜಿಟ್ಞ ಇವೆಲ್ಲವೂ ರಾಮಕೃಷ್ಣ ಹೆಗಡೆಯವರಲ್ಲಿ ಕೆನೆಗಟ್ಟಿದ್ದನ್ನು ನೋಡಿದರೆ, ಪ್ರಾಯಶಃ ಸಾಕ್ರೆಟಿಸ್ ಅವರನ್ನು ನೋಡಿಯೇ Peಜ್ಝಿಟomeಛ್ಟಿo ಞ್ಠoಠಿ ಚಿಛಿ ಛ್ಟಿo ಎಂದು ಹೇಳಿದಂತಿದೆ.

(ಲೇಖಕರು ರಾಮಕೃಷ್ಣ ಹೆಗಡೆಯವರ ಮೊಮ್ಮಗ)