ರಾಮರಥ
ಯಾಜ್ಞವಲ್ಕ್ಯ ಜೋಶಿ
ರಾಮರಾಜ್ಯದ ಕನಸನ್ನು ಹೊತ್ತ ಶ್ರೀ ವಿಶ್ವಪ್ರಸನ್ನತೀರ್ಥರು, ಅಯೋಧ್ಯೆಯಲ್ಲಿ ೪೮ ದಿನಗಳ ಮಂಡಲೋತ್ಸವದ ಮಂಗಳೋತ್ಸವಗೈದು ಬೆಂಗಳೂರಿಗೆ ಇಂದು ಆಗಮಿಸಲಿದ್ದಾರೆ. ಮಹಾನುಭಾವ ಶ್ರೀ ವಿಶ್ವಪ್ರಸನ್ನತೀರ್ಥರೇ, ಅವರಲ್ಲಿ ತುಂಬಿದ ಶ್ರೀ ವಿಶ್ವೇಶತೀರ್ಥರೇ, ನಿಮಗಿದೋ ತುಂಬು ಹೃದಯದ ಸ್ವಾಗತ
ಇಡೀ ದೇಶ ತವಕದಿಂದ ಕಾಯುತ್ತಿತ್ತು ಆ ಒಂದು ದಿನಕ್ಕಾಗಿ! ಅದು ೨೦೨೪ರ ಜನವರಿ ೨೨. ಇಡೀ ಭಾರತದ ೫೦೦ ವರ್ಷಗಳ ತಪಸ್ಸು ಅದು. ಅಯೋಧ್ಯೆ ಯ ರಾಮಮಂದಿರದತ್ತ ಎಲ್ಲರ ಚಿತ್ತ. ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಮಹಾಸಂಭ್ರಮ. ಅಂದಿನ ಶುಭ ಗಳಿಗೆಯಲ್ಲಿ ಬಾಲರಾ ಮನ ಕಂಡು ಭಾವುಕರಾದವ ರೆಷ್ಟೋ, ಸಾಷ್ಟಾಂಗವೆರಗಿದವರೆಷ್ಟೋ. ಅಂದು ಇಡೀ ಭಾರತವೇ ಅಯೋಧ್ಯೆಯ ರಾಮಮಂದಿರ ವಾಗಿಬಿಟ್ಟಿತ್ತು. ಆ ಕ್ಷಣದ ದೃಶ್ಯಾವಳಿಯಲ್ಲಿ ಪ್ರಧಾನಿ ಮೋದಿಯವರ ಜತೆಗೆ ಒಬ್ಬ ಮಹಾತ್ಮರನ್ನು ಕಂಡು ಇಡೀ ಕರುನಾಡೇ ಹೆಮ್ಮೆ ಪಟ್ಟಿತ್ತು.
ಆ ಮಹಾನುಭಾವರೇ ಪೇಜಾವರ ಮಠಾಽಶರಾದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳವರು. ಹೌದು, ಪರಮಪೂಜ್ಯರು ರಾಮನ ಪ್ರತಿಮೆಯಲ್ಲಿ ಸಾನ್ನಿಧ್ಯ ತುಂಬುವುದಕ್ಕಾಗಿ ಮಾತೃಕಾನ್ಯಾಸಾದಿಗಳನ್ನು ನೆರವೇರಿಸುತ್ತಿದ್ದರು. ವಿಧಿವಿಧಾನದಂತೆ ತಾವು ಸ್ವಯಂ ಅಂದು ನಸುಕಿನ ಜಾವ ತತ್ವನ್ಯಾಸ ಮಾತೃಕಾನ್ಯಾಸಾದಿಗಳನ್ನು ನೆರವೇರಿಸಿಕೊಂಡಿದ್ದರು. ಶ್ರೀಪಾದರ ಕೆಲಸ ಅಲ್ಲಿಗೆ ಮುಗಿಯಲಿಲ್ಲ, ಅವರು ಆ ದಿನದಿಂದ ಮಂಡಲೋತ್ಸವಕ್ಕೆ ತಯಾರಾಗುತ್ತಿದ್ದರು. ಅದೊಂದು ವಿಧಿ. ದೇವಳದಲ್ಲಿ ದೇವಪ್ರತಿಷ್ಠೆಯ ನಂತರ ೪೮ ದಿನಗಳ ಕಾಲ ನಿತ್ಯ ತತ್ವಹೋಮ, ತತ್ವ ಕಲಶಾಭಿಷೇಕ ಇವೆಲ್ಲ ನಡೆಯಬೇಕು.
ಶ್ರೀಪಾದರು ಇವೆಲ್ಲದಕ್ಕೂ ತಯಾರಾಗುತ್ತಿದ್ದರು. ಮಂಡಲೋತ್ಸವದ ಮಹತ್ವವನ್ನು ಟ್ರಸ್ಟ್ನ ಉಳಿದ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟು, ಅದರ ಜವಾಬ್ದಾರಿ ಯನ್ನು ಸ್ವಯಂ ಹೊತ್ತಿದ್ದರು. ಎಲ್ಲ ಕೈಂಕರ್ಯ ಗಳನ್ನು ನೆರವೇರಿಸಿದ ಅಯೋಧ್ಯಾ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ನಾವೆಲ್ಲ ತುಂಬು ಹೃದಯದಿಂದ ಅಭಿನಂದಿಸಲೇಬೇಕು. ಉತ್ತರದ ರಾಮಲಲ್ಲಾನಿಗೆ ದಕ್ಷಿಣದ ಉತ್ಸವದ ವೈಭವ. ಇದಕ್ಕಾಗಿ ನೂರಾರು ಪುರೋಹಿತರ ಅವಶ್ಯ ಕತೆ ಇತ್ತು. ಅದನ್ನು ಮನಗಂಡು ದೇಶದ, ರಾಜ್ಯದ ಮೂಲೆ ಮೂಲೆಗಳಿಂದ ಆಯ್ದ ಪುರೋಹಿತರನ್ನು ಯಾವ ಮತಭೇದವಿಲ್ಲದೆ ನಿಯುಕ್ತಿ ಗೊಳಿಸಿದ್ದರು. ಅವರೆಲ್ಲ ರಾಮಜನ್ಮ ಭೂಮಿಗೆ ಬಂದು ತಮ್ಮ ಸೇವೆ ಸಲ್ಲಿಸಿ ಪುನೀತರಾಗಿ ಹೋಗಿದ್ದಾರೆ.
ಇದರ ಜತೆಗೆ ಶ್ರೀಪಾದರ ಸಾಮರ್ಥ್ಯವನ್ನು, ರಾಮನ ಪ್ರತಿಮೆಯಲ್ಲಿ ಸಾನ್ನಿಧ್ಯ ತುಂಬುವ ಪ್ರಾಮಾಣಿಕ ಕಾಳಜಿಯನ್ನು, ರಾಮಮಂದಿರ ಮಾತ್ರವಲ್ಲ ರಾಮರಾಜ್ಯದ ಕನಸನ್ನು ನಾವಿಲ್ಲಿ ಮನಗಾಣಲೇಬೇಕು. ನಿಜ, ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಉತ್ತರದ ಭಾಗದಲ್ಲಿ ೪೮ ದಿನಗಳ ಕಾಲ ತತ್ವಹೋಮ, ತತ್ವ ಕಲಶಾರಾಧನೆ ಮತ್ತು ಬಾಲರಾಮನಿಗೆ ಆ ಕಲಶದ ಅಭಿಷೇಕ ಇವಿಷ್ಟು ನಡೆಯುತ್ತಿದ್ದವು. ಶ್ರೀಪಾದರು ಸನ್ಯಾಸಿಗಳು, ಆದ್ದರಿಂದ ಅವರು ಸ್ವಯಂ ಹೋಮವನ್ನು ಮಾಡುವಂತಿಲ್ಲ; ಆದರೆ ಕಲಶದಲ್ಲಿ ತಾವೇ ತತ್ವನ್ಯಾಸಾದಿ ಗಳನ್ನು ನೆರವೇರಿಸಿ ಕಲಶ ಪೂಜೆಯನ್ನು ಮಾಡಿ
ಬಾಲರಾಮನಿಗೆ ಅಭಿಷೇಕಗೈಯುತ್ತಿದ್ದರು.
ಇದಕ್ಕಾಗಿ ಶ್ರೀಪಾದರು ನಿತ್ಯ ೮ ಗಂಟೆಗೆ ಉಪಸ್ಥಿತರರುತ್ತಿದ್ದರು. ‘ಅಯ್ಯೋ! ಅದೇನು ೮ ಗಂಟೆ ಅಲ್ವಾ?’ ಎಂದು ಸಸಾರ ಮಾಡಬೇಡಿ. ಅಯೋಧ್ಯೆಯ
ವಾತಾವರಣ ಇಲ್ಲಿಯ ಹಾಗಿರಲಿಲ್ಲ. ಒಂದರ ಮೇಲೊಂದು ಹೊದಿಕೆಯನ್ನು ಹೊದ್ದು ಮಲಗಿಸುವ ಚಳಿ! ಬೆಳಗ್ಗೆ ೯.೩೦ಕ್ಕೂ ಇದೇ ವಾತಾವರಣ.
ಕೈ-ಕಾಲುಗಳಿಗೆ ಗ್ಲೌಸ್-ಸಾಕ್ಸ್ ಮುಂತಾದವುಗಳಿಲ್ಲದಿದ್ದರೆ ಸಾಧ್ಯವೇ ಇಲ್ಲ; ನೆಲದ ಮೇಲೆ ಕಾಲಿಡಲು ಆಗದಂಥ ಮೈ ಕೊರೆಯುವ ಚಳಿ! ನಮ್ಮಲ್ಲಿನ
ಬಿರುಬಿಸಿಲಿಗೆ ಬೆಂದವರಿಗೆ, ಅಲ್ಲಿನ ಒಂದೇ ದಿನದ ಚಳಿಗೆ ಚರ್ಮ ಒಣಗಿ ಉರಿದಿದೆ, ತುಟಿಗಳು ಬಿರುಕುಬಿಟ್ಟಿವೆ. ಅಂಥ ಚಳಿ ಅಯೋಧ್ಯೆಯಲ್ಲಿ.
ಸಂಜೆ ೫ ದಾಟಿದರೂ ಇದೇ ಪರಿಸ್ಥಿತಿ! ಇಂಥ ಚಳಿಯಲ್ಲಿ ಶ್ರೀಪಾದರು ೮ ಗಂಟೆಗೆ ಬರಬೇಕೆಂದರೂ ನಸುಕಿನ ಜಾವ ಕನಿಷ್ಠವೆಂದರೂ ೪ ಗಂಟೆಗೆ ಏಳಬೇಕು. ಎದ್ದು ತಮ್ಮ ಸನ್ಯಾಸ ಧರ್ಮದ ಅನುಷ್ಠಾನಗಳನ್ನೆಲ್ಲ ಪೂರೈಸಬೇಕು. ಅವರು ತಮ್ಮ ಸಂಸ್ಥಾನದ ಪಟ್ಟದ ದೇವರು ಶ್ರೀರಾಮ- ವಿಟ್ಠಲ ರನ್ನು ಪೂಜಿಸಿ ಬರಬೇಕಾಗಿತ್ತು. ಇದು ಒಂದು ದಿನದ ಕತೆಯಲ್ಲ, ೪೮ ದಿನಗಳೂ ಹೀಗೆಯೇ! ಇದರ ಜತೆಗೆ ಒಂದು ದಿನವೂ ತಮ್ಮ ಶಿಷ್ಯರಿಗೆ ವೇದಾಂತ
ಪಾಠವನ್ನು ತಪ್ಪಿಸಲಿಲ್ಲ. ಇದು ಶ್ರೀಪಾದರಿಗಿರುವ ಬದ್ಧತೆ! ಥೇಟ್ ಅವರ ಗುರುಗಳಾದ ಶ್ರೀ ವಿಶ್ವೇಶ ತೀರ್ಥರಂತೆಯೇ. ನಾವಾದರೆ ಆ ಚಳಿಗೆ ಪತರು
ಗುಟ್ಟುತ್ತಿದ್ದೆವು. ಆದರೆ ಶ್ರೀಪಾದರು ನಿರ್ಭೀತಿ ಯಿಂದ, ಅನಾಯಾಸವಾಗಿ, ಒಂದು ದಿನವೂ ಸಮಯ ತಪ್ಪದೆ ಪ್ರಭು ಶ್ರೀರಾಮನಿಗೆ ತಮ್ಮ ಸೇವೆ
ಯನ್ನು ಸಲ್ಲಿಸಿದ್ದಾರೆ.
ಇದಲ್ಲವೇ ಭಕ್ತಿ, ಇದಲ್ಲವೇ ನಿಷ್ಠೆ! ಇದು ಶ್ರೀಪಾದರಿಗಿರುವ ಅಪೂರ್ವ ಯೋಗಸಿದ್ಧಿ. ಆ ಯೋಗಸಿದ್ಧಿಯೇ ಆ ಚಳಿಯಲ್ಲೂ ರಾಮನ ಸೇವೆ ಸಲ್ಲಿಸುವಂತೆ ಉಪಕಾರಗೈದಿದೆ. ಇದಲ್ಲದೆ ಬೆಳಗಿನ ಹೊತ್ತು ರಾಮತಾರಕ ಮಂತ್ರ ಸೇರಿದಂತೆ ಅನೇಕ ಹೋಮಗಳು ಈ ೪೮ ದಿವಸಗಳ ಕಾಲ ನೆರವೇರಿವೆ. ಇಲ್ಲಿಯೂ ಅಷ್ಟೇ, ಶ್ರೀಪಾದರ ಧೈರ್ಯವನ್ನು ಮೆಚ್ಚಬೇಕು. ಬಾಲರಾಮನ ಪ್ರಾಣ ಪ್ರತಿಷ್ಠೆಗೂ ಮುನ್ನವೇ ದೇಶಾದ್ಯಂತದ ರಾಮಭಕ್ತರಿಂದ ರಾಮತಾರಕ ಮಂತ್ರದ ಜಪವನ್ನು ಮಾಡಿಸಿ, ನೂರು ಜಪಕ್ಕೆ ಒಂದು ಆಹುತಿ ಎಂಬಂತೆ, ಶತಾಂಶಕ್ಕ ನುಗುಣವಾಗಿ ಶ್ರೀರಾಮತಾರಕ ಮಂತ್ರ ಹೋಮ ನಡೆದಿದೆ.
ಇದು ಬೆಳಗಿನ ಕಾರ್ಯಕ್ರಮವಾದರೆ, ಸಂಜೆಯ ಹೊತ್ತು ಪ್ರಭು ಶ್ರೀರಾಮನಿಗೆ ಇನ್ನೊಂದು ತರಹದ ಉತ್ಸವದ ವೈಭವ. ನಿತ್ಯಸಂಜೆ ಪಲ್ಲಕ್ಕಿ ಸೇವೆ,
ಅಷ್ಟಾವಧಾನ ಸೇವೆಗಳನ್ನೆಲ್ಲ ಶ್ರೀಪಾದರು ನೆರವೇರಿಸಿದ್ದಾರೆ. ಕಾಶಿ ಮಠದ ಬಂಗಾರದ ಅಟ್ಟೆ ಪ್ರಭಾವಳಿ, ರಜತದ ಪಲ್ಲಕ್ಕಿ, ಬುಡಕಟ್ಟು ಜನರ ಬಿದಿರಿನ
ಪಲ್ಲಕ್ಕಿಗಳ ಉತ್ಸವ ಶ್ರೀರಾಮನಿಗೆ. ಜತೆಗೆ, ಚತು ರ್ವೇದಗಳ, ಷಟ್-ಶಾಸಗಳ, ವ್ಯಾಕರಣ- ಪುರಾಣೇತಿಹಾಸಗಳ, ಜ್ಯೋತಿಷ, ಗದ್ಯ-ಪದ್ಯಗಳ ಸೇವೆ ಶ್ರೀರಾಮನಿಗೆ ಸಂದಿದೆ. ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಿಂದ ನಾನಾ ರೀತಿಯ ವಾದ್ಯವೃಂದದವರು, ವೈಣಿಕರು, ವೇಣುವಾದಕರೇ ಮುಂತಾದ ಸಂಗೀತ ಪಟುಗಳು ರಾಮನಿಗೆ ಸೇವೆ ಸಲ್ಲಿಸಿದ್ದಾರೆ.
ಭರತನಾಟ್ಯ ಸೇರಿದಂತೆ ನಾನಾ ನೃತ್ಯ ಪ್ರಕಾರಗಳ ನರ್ತಕರು, ಯಕ್ಷಗಾನ ಕಲಾವಿದರು ರಾಮನೆದುರು ಪ್ರದರ್ಶನ-ಸೇವೆ ನೀಡಿ ತಮ್ಮನ್ನು ಸಮರ್ಪಿಸಿ ಕೊಂಡಿದ್ದಾರೆ. ತಾವೇನೂ ಕಮ್ಮಿಯಿಲ್ಲವೆಂಬಂತೆ ಗಾಯಕರೂ ಸೇವೆ ಸಲ್ಲಿಸಿದ್ದಾರೆ. ಕಡೆಯ ದಿನವೂ ೧೦೦೦ ಕಲಶಗಳ ಬ್ರಹ್ಮ ಕಲಶೋತ್ಸವವನ್ನು ನೆರವೇರಿಸಿದ್ದಾರೆ.
ಹೀಗೆ ಬಾಲರಾಮನಿಗೆ ಅಮೋಘವಾಗಿ ಮಂಡಲೋತ್ಸವದ ಮಂಗಳೋತ್ಸವವನ್ನು ನೆರವೇರಿಸಿದರು ಶ್ರೀ ಪೇಜಾವರ ಮಠಾಽಶರಾದ ಶ್ರೀ ವಿಶ್ವಪ್ರಸನ್ನ
ತೀರ್ಥರು. ಇವರ ಗುರುಗಳಾದ ಶ್ರೀ ವಿಶ್ವೇಶತೀರ್ಥರ ಕೊಡುಗೆ ವರ್ಣಿಸಲಸದಳ. ಮಂದಿರ ನಿರ್ಮಾಣದ ಕಾಯಕಲ್ಪದ ತನಕವೂ ಅವರಿದ್ದು ಹೋರಾ ಡಿದರು. ತದನಂತರ ಆ ಜವಾಬ್ದಾರಿಯನ್ನು ತಮ್ಮ ಶಿಷ್ಯರಾದ ಶ್ರೀ ವಿಶ್ವಪ್ರಸನ್ನತೀರ್ಥರ ಮೇಲಿರಿಸಿದರು. ಅದನ್ನು ಚಾಚೂತಪ್ಪದೆ ಸಮರ್ಥವಾಗಿ ನಿರ್ವಹಿಸಿದವರು ಶ್ರೀ ವಿಶ್ವಪ್ರಸನ್ನತೀರ್ಥರು. ನಮ್ಮ ಇಡೀ ಕರ್ನಾಟಕಕ್ಕೆ ಹೆಮ್ಮೆ ದಕ್ಷಿಣ ಭಾರತದಿಂದ ಆಯ್ಕೆಯಾದ ಶ್ರೀ ವಿಶ್ವಪ್ರಸನ್ನ ತೀರ್ಥರು.
ಆಯ್ಕೆ ಏನೋ ಆಗಬಹುದು, ಆದರೆ ದಕ್ಷತೆಯಿಂದ ಕಾರ್ಯನಿರ್ವಹಿಸುವುದಿದೆಯಲ್ಲ, ಅದು ನಮ್ಮ ಸಾಮರ್ಥ್ಯವನ್ನು ತೋರುತ್ತದೆ. ಅದರಲ್ಲಿ ಒಂದಿ
ನಿತೂ ಸೋಲದವರು ಶ್ರೀ ವಿಶ್ವಪ್ರಸನ್ನ ತೀರ್ಥರು. ಈ ೪೮ ದಿನಗಳ ಮಂಡಲೋತ್ಸವವೇ ಅದಕ್ಕೆ ಸಾಕ್ಷಿ. ಅವರಿಗೆ ರಾಮಮಂದಿರದ ಭಾಗವಾಗುವ
ಅವಕಾಶ ಹೇಗೆ ದಕ್ಕಿತು? ಅಯೋಧ್ಯೆಯ ಈ ಬಾಲರಾಮನನ್ನು ಮುಟ್ಟಿ ಅರ್ಚಿಸುವ ಭಾಗ್ಯ ಅವರಿಗೆ ಹೇಗೆ ಒದಗಿತು? ಎಂಬ ಪ್ರಶ್ನೆಗಳು ನನ್ನಲ್ಲಿ
ಸುರಿಸಿದ್ದುಂಟು. ನಿಶ್ಚಿತವಾಗಿಯೂ ಹೇಳಬಲ್ಲೆ, ಅವರ ಗುರುಭಕ್ತಿಯಿಂದ ಒದಗಿದ ಭಾಗ್ಯವಿದು.
ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಐತಿಹಾಸಿಕ ವಾದ, ಅಪೂರ್ವವಾದ ಐದನೆಯ ಪರ್ಯಾಯವನ್ನು ಉಡುಪಿಯ ಶ್ರೀಕೃಷ್ಣನಿಗೆ ನೆರವೇರಿಸುವಂತೆ
ತಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥರಿಗೆ ಒದಗಿಸಿ ಕೊಟ್ಟರು. ಇಂಥ ಅಪೂರ್ವವಾದ ಭಾಗ್ಯವನ್ನು ಒದಗಿಸಿದ ಶಿಷ್ಯರಿಗೆ ಅಪೂರ್ವವಾದುದನ್ನೇ ಕೊಡ
ಬೇಕಲ್ಲವೇ? ಉಡುಪಿಯ ಕೃಷ್ಣನ ಪೂಜೆ ಕೊಡೋಣವೆಂದರೆ, ಅವರು ಸನ್ಯಾಸಿಯಾದಾಗಿ ನಿಂದಲೂ ಆ ಭಾಗ್ಯವಿದೆ. ಹಾಗಾಗಿ, ಅಪೂರ್ವ ದಾಖಲೆಯ ಪಂಚಮ ಪರ್ಯಾಯದ ಉಡುಪಿಯ ಬಾಲಕೃಷ್ಣ ಪೂಜೆಯ ವೈಭವವನ್ನು ಒದಗಿಸಿದ ತಮ್ಮ ಶಿಷ್ಯರಿಗೆ, ಅಯೋಧ್ಯೆಯ ಅಪೂರ್ವವಾದ ಬಾಲರಾಮನ ಪೂಜೆಯ ವೈಭವ ವನ್ನು ಗುರುಗಳು ಅನುಗ್ರಹಿಸಿದ್ದಾರೆ.
ಇದಲ್ಲವೇ ಗುರು-ಶಿಷ್ಯರ ಬಾಂಧವ್ಯ, ಇದಲ್ಲವೇ ಗುರು ಅನುಗ್ರಹಿಸುವ ಪರಿ, ಇದಲ್ಲವೇ ಗುರುಭಕ್ತಿಯ ಫಲ! ಹಿರಿಯರು ಮಾಡಿಟ್ಟ ಪುಣ್ಯವು ನಮ್ಮನ್ನು
ಅನುಗ್ರಹಿಸುತ್ತದೆ ಎಂಬುದಕ್ಕೆ ಇದಲ್ಲವೇ ಸಾಕ್ಷಿ! ಇಂಥ ಅಪರಿಮಿತ ಗುರುಭಕ್ತಿಯ, ಅತಿ ದಕ್ಷತೆಯ, ಪ್ರತಿ ಹೆಜ್ಜೆಯಲ್ಲೂ ಗುರುಗಳನ್ನು ಜ್ಞಾಪಿಸುವ, ಇದೀಗ ರಾಮರಾಜ್ಯದ ಕನಸನ್ನು ಹೊತ್ತ ಶ್ರೀ ವಿಶ್ವಪ್ರಸನ್ನತೀರ್ಥರು, ಅಯೋಧ್ಯೆಯಲ್ಲಿ ೪೮ ದಿನಗಳ ಮಂಡಲೋತ್ಸವದ ಮಂಗಳೋತ್ಸವಗೈದು ಕರ್ನಾಟಕದ ರಾಜಧಾನಿಗೆ ಆಗಮಿಸಲಿದ್ದಾರೆ.
ಮಹಾನುಭಾವ ಶ್ರೀ ವಿಶ್ವಪ್ರಸನ್ನತೀರ್ಥರೇ, ಅಷ್ಟು ಮಾತ್ರವಲ್ಲ ಶ್ರೀ ವಿಶ್ವಪ್ರಸನ್ನತೀರ್ಥರಲ್ಲಿ ತುಂಬಿದ ಶ್ರೀ ವಿಶ್ವೇಶತೀರ್ಥರೇ, ನಿಮಗಿದೋ ತುಂಬು ಹೃದಯದ ಸ್ವಾಗತ, ಸುಸ್ವಾಗತ! ಬನ್ನಿ, ರಾಮರಾಜ್ಯ ಮಾಡಬನ್ನಿ. ನೀವು ವಿಶ್ವಸ್ಥ ಮಂಡಳಿಗೆ ಆಯ್ಕೆಯಾದುದಕ್ಕೆ ಮಾತ್ರವಲ್ಲ ಈ ಹೆಮ್ಮೆ; ಬಾಲ ರಾಮನಿಗೆ ಮಂಡಲೋತ್ಸವವನ್ನು ಅಮೋಘ ವಾಗಿ ಅತಿ ವೈಭವದಿಂದ ನೆರವೇರಿಸಿದಿರಲ್ಲ, ಅದು ನಮಗೆ ಇನ್ನೂ ಹೆಮ್ಮೆ! ಉತ್ತರದ ಶೈಲಿಯ
ದೇಗುಲದಲ್ಲಿ ದಕ್ಷಿಣದ ಉತ್ಸವವನ್ನು ನೆರವೇರಿಸಿ, ದಕ್ಷಿಣೋತ್ತರಗಳನ್ನು ಮತ್ತೊಮ್ಮೆ ಹೆಣೆದಿರಲ್ಲ, ನಮಗೆಂಥಾ ಹೆಮ್ಮೆ!
ಅಂದು ಹನುಮನಿಂದ ಸೇವೆ ಸ್ವೀಕರಿಸಿದ ರಾಮ, ಇಂದು ಹನುಮನಾಡಿನ ನಿಮ್ಮಿಂದ ಸೇವೆ ಸ್ವೀಕರಿಸಿದ ರಾಮ. ಅಂದು ರಾಮನ ಸೇವೆಗೆ ಹನುಮನ ಜತೆಗೆ ಕಪಿಗಳು ಸೇರಿಕೊಂಡಂತೆ, ಇಂದು ರಾಮನ ಸೇವೆಗೆ ನಮ್ಮನ್ನು ಸೇರಿಸಿಕೊಂಡಿದ್ದೀರಿ. ರಾಮಾಯಣದ ಪ್ರಸಂಗವನ್ನು ನೆನಪಿಸಿದ್ದೀರಿ. ಅಂದು ಹನುಮ ಸುಂದರಕಾಂಡ, ಇಂದು ಪ್ರಸನ್ನಸುಂದರಕಾಂಡ. ಮತ್ತೊಮ್ಮೆ ನಿಮಗೆ ಹನುಮನಾಡು ಕರುನಾಡಿಗೆ ಸ್ವಾಗತ, ಸುಸ್ವಾಗತ.
(ಲೇಖಕರು ಸಂಸ್ಕೃತ ವಿದ್ವಾಂಸರು)