ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಆಯುರ್ವೇದದ ಬಹಳಷ್ಟು ಪರಿಕಲ್ಪನೆಗಳು ಆಧುನಿಕ ವೈದ್ಯಕೀಯ ವ್ಯಾಪ್ತಿಗೆ ಬರುವುದಿಲ್ಲ. ಭಾರತೀಯ ವೈದ್ಯಕೀಯ ಸಂಘವು
ಆಯುರ್ವೇದವನ್ನು ಹುಸಿವಿಜ್ಞಾನ (ಸ್ಯೂಡೋಸೈನ್ಸ್), ಆಯುರ್ವೇದ ವೈದ್ಯರನ್ನು ನಕಲಿವೈದ್ಯರು (ಕ್ವಾಕ್ಸ್) ಎಂದು ಪರಿಭಾವಿಸುತ್ತದೆ.
ಆಯುರ್ವೇದ ಕ್ರಿ.ಪೂ. 8 ಸಾವಿರ ವರ್ಷಗಳಷ್ಟು ಹಿಂದೆ ಆರಂಭವಾಗಿರಬಹುದು. ಇದು ತಲೆಮಾರಿನಿಂದ ತಲೆಮಾರಿಗೆ ಕೇವಲ ನೆನಪಿನ ಶಕ್ತಿಯ ಮೂಲಕ ವರ್ಗಾವಣೆಯಾ ಯಿತು. ಸಿಂಧು-ಸರಸ್ವತಿ ಸಂಸ್ಕೃತಿಯನ್ನು ಕಟ್ಟಿದ ಜನರು (ಕ್ರಿ.ಪೂ.3300-ಕ್ರಿ.ಪೂ.1300) ಆಯುರ್ವೇದ ಪರಿಪಾಲಿಸುತ್ತಿದ್ದರು ಎನ್ನಲಾಗಿದೆ.
ಇದರ ಸ್ಪಷ್ಟ ಉಗಮವು ವೇದಗಳಲ್ಲಿ (ಕ್ರಿ.ಪೂ.1500-ಕ್ರಿ.ಪೂ.900) ಕಂಡು ಬರುತ್ತದೆ. ಅಥರ್ವಣ ವೇದದ 114 ಮಂತ್ರಗಳು ರೋಗಗಳು ಹಾಗೂ ಅವುಗಳ ಚಿಕಿತ್ಸೆಗೆ ಸಂಬಂಧಪಟ್ಟಿವೆ. ಪಾರಂಪರಿಕ ನಂಬಿಕೆಯಂತೆ ದೇವ ವೈದ್ಯ ಧನ್ವಂತರಿ ಕಾಶಿಯಲ್ಲಿ ದಿವೋದಾಸ ಎನ್ನುವ ರಾಜನಾಗಿ ಹುಟ್ಟಿ ಆಯುರ್ವೇದ ಶಾಲೆ ಆರಂಭಿಸಿದ ನಂತೆ. ಸುಶ್ರುತ ಸೇರಿ ಅನೇಕ ಋಷಿಗಳಿಗೆ ಆಯುರ್ವೇದ ವನ್ನು ಕಲಿಸಿದನಂತೆ. ಇದರ ಮೂಲಸೂತ್ರಗಳನ್ನು ಅಧ್ಯಯನ ಮಾಡಿದರೆ ಬಹುಶಃ ಇವು ಸಾಂಖ್ಯ ಮತ್ತು ವೈಶೇಷಿಕ ದರ್ಶನಗಳಿಂದ ಪ್ರಭಾವಿತವಾಗಿರುವ ಹಾಗೆ ಕಾಣುತ್ತದೆ.
ಹಾಗಾಗಿ ಆಯುರ್ವೇದದ ಮೂಲವು ಸುಮಾರು ಕ್ರಿ.ಪೂ.2000 ವರ್ಷಗಳಷ್ಟು ಹಿಂದೆ ಆರಂಭವಾಗಿ, ದರ್ಶನಗಳ ಕಾಲಕ್ಕೆ (ಕ್ರಿ.ಪೂ.1000) ಒಂದು ಸ್ಪಷ್ಟ ರೂಪ ಪಡೆಯಿತು ಎನ್ನಬಹುದು. ಆರಂಭದಲ್ಲಿ ಅಗ್ನಿ ವೇಶ, ಪರಾಶರ, ಹಾರೀತ, ಭೇಲ, ಜಾತುಕರ್ಣ ಮತ್ತು ಕ್ಷರ ಪಾಣಿ ಮಹರ್ಷಿಗಳು ತಮ್ಮದೇ ಆದ ಆಯುರ್ವೇದ ಚಿಕಿತ್ಸಾ ಪದ್ಧತಿಗಳನ್ನು ಅಭಿವೃದ್ಧಿಪಡಿಸಿದರು. ಇವರ ಗ್ರಂಥಗಳು ನಮಗೆ ದೊರೆತಿಲ್ಲ. ಸುಶ್ರುತ (ಕ್ರಿ.ಪೂ.800) ಮತ್ತು ಚರಕ ಮಹರ್ಷಿಗಳು (ಕ್ರಿ.ಪೂ.600) ಈ 6 ಪ್ರಾಚೀನ ಆಚಾರ್ಯರ ಪದ್ಧತಿ ಗಳನ್ನೆಲ್ಲ ಸುಶ್ರುತ ಮತ್ತು ಚರಕ ಸಂಹಿತೆ ಎಂಬ ಹೆಸರಲ್ಲಿ ಸಂಗ್ರಹಿಸಿರುವರು.
ಹಾಗಾಗಿ ಈ ಎರಡು ಗ್ರಂಥಗಳು ಆಯುರ್ವೇದಕ್ಕೆ ಮೂಲ ಪ್ರಮಾಣ ಗ್ರಂಥಗಳು ಎನಿಸಿಕೊಂಡಿವೆ. ಆಯುರ್ವೇದವು ಒಂದು ಚಿಕಿತ್ಸಾ ಪದ್ಧತಿಯಲ್ಲ. ಇದು ಭಾರತೀಯರ ಜೀವನಶೈಲಿ ರೂಪಿಸುವ ವಿಜ್ಞಾನ. ಇದು ರೋಗಗಳಿಗೆ ಚಿಕಿತ್ಸೆ ನೀಡುವುದಿಲ್ಲ. ಬದಲಿಗೆ ರೋಗಗಳೇ
ಬಾರದಂತೆ ರೋಗರಕ್ಷಣಾ ಸಾಮರ್ಥ್ಯ ಸುಧಾರಿಸಲು ಆದ್ಯತೆ ನೀಡುತ್ತದೆ. ಹಾಗಾಗಿ ಆಯುರ್ವೇದವನ್ನು ಒಂದು ಉಪವೇದ ಎಂದು ಪರಿಗಣಿಸಿ, ಮನುಷ್ಯರ ಆಯುಸ್ಸನ್ನು ವೃದ್ಧಿ ಜ್ಞಾನ ಎಂಬ ವ್ಯಾಖ್ಯೆ ನೀಡಿರುವುದು ಅರ್ಥವತ್ತಾಗಿದೆ.
ಸುಶ್ರುತ ಮಹರ್ಷಿಗಳು ಸಮ ದೋಷ ಸಮ ಅಗ್ನಿಶ್ಚ ಸಮಧಾತು ಮಲಕ್ರಿಯಾಃ| ಪ್ರಸನ್ನ ಆತ್ಮ ಇಂದ್ರಿಯ ಮನಃ ಸ್ವಾಸ್ಥ್ಯ ಇತ್ಯಭಿದೀ ಯತೆ|| ಎಂದು ಆರೋಗ್ಯದ ವ್ಯಾಖ್ಯೆ ಯನ್ನು ನೀಡುತ್ತಾರೆ. ಸ್ವ ಎಂದರೆ ಸ್ವಯಂ, ತಾನು ಎಂದರ್ಥ. ಸ್ಥ ಎಂದರೆ ಸಹಜ ಸ್ಥಿತಿ. ಹಾಗಾಗಿ ಸ್ವಾಸ್ಥ್ಯ ಎಂದರೆ ಸಹಜ ಸ್ಥಿತಿಯಲ್ಲಿರುವುದು. ಸದಾ ಆನಂದಕರ ವಾಗಿರುವುದೇ ಸಹಜ ಸ್ಥಿತಿ. ಇಡೀ ಶರೀರ ಸಮತೋಲನ ದಲ್ಲಿದ್ದಾಗ ಮಾತ್ರ ಸಹಜ ಸ್ಥಿತಿ ರೂಪುಗೊಳ್ಳುತ್ತದೆ. ಇಂತಹ ಸಹಜ ಸ್ಥಿತಿ ರೂಪುಗೊಳ್ಳಬೇಕಾದರೆ ಐದು ಘಟಕ ಗಳು ಸಮತೋಲನ ದಲ್ಲಿರಬೇಕು.
ಮೊದಲು ತ್ರಿದೋಷಗಳು, ೨ನೆಯದು ಅಗ್ನಿ, ೩ನೆಯದು ಧಾತುಗಳು ಹಾಗೂ 4ನೆಯದು ಮಲಕ್ರಿಯೆಗಳು. ಈ ನಾಲ್ಕು ಘಟಕಗಳು ಸಮತೋಲನದಲ್ಲಿದ್ದಾಗ ಇಂದ್ರಿಯಗಳು, ಮನಸ್ಸು ಹಾಗೂ ಆತ್ಮವು ಸಹಜವಾಗಿ ಪ್ರಸನ್ನವಾಗಿರುತ್ತವೆ. ಇದುವೇ ಸ್ವಾಸ್ಥ್ಯ. ಇಂದ್ರಿಯ ಗಳೆಂದರೆ ಇಂದ್ರನಿಗೆ ಸಂಬಂಽಸಿದ ಅಂಗಗಳು. ನಮ್ಮ ದೃಷ್ಟಿ, ಶ್ರವಣ, ರಸನ, ಘ್ರಾಣ ಮತ್ತು ಸ್ಪರ್ಶ ಸಂವೇದನೆಗಳು ಇಂದ್ರನ ವಜ್ರಾಯುಧದಂತೆ ಶಕ್ತಿಶಾಲಿಯಾದವು.
ಇವು ಸುಲುಭವಾಗಿ ಅನಾರೋಗ್ಯವನ್ನುಂಟು ಮಾಡಬಲ್ಲವು. ಪಂಚೇಂದ್ರಿಯಗಳು ಸ್ವಾಸ್ಥ್ಯಕ್ಕೆ ಪೂರಕವಾಗಿರಬೇಕೆ ಹೊರತು ಮಾರಕ ವಾಗಿರಬಾರದು. ಮನಸ್ಸು ಹೇಳುವ ಹಾಗೆ ಇಂದ್ರಿಯಗಳು ಕೇಳಬೇಕೇ ಹೊರತು, ಇಂದ್ರಿಯ ಹೇಳುವ ಹಾಗೆ ಮನಸ್ಸು ಕೇಳಬಾರದು. ಮನಸ್ಸು ಮತ್ತು ಬುದ್ಧಿಗಳೆರಡು ಮಿದುಳಿನ ಎರಡು ಕಾರ‍್ಯಗಳು. ಆತ್ಮ ಎನ್ನುವ ಪರಿಕಲ್ಪನೆ ಆಧುನಿಕ ವಿಜ್ಞಾನಕ್ಕೆ ನಿಲುಕದು. ಆದರೆ ಅಧ್ಯಾತ್ಮದಲ್ಲಿ ಪರಮಾತ್ಮನ ಒಂದಂಶವೇ ಆತ್ಮ. ಆತ್ಮನು ಪ್ರಸನ್ನನಾಗಿದ್ದರೆ, ಮನಸ್ಸು ಪ್ರಸನ್ನವಾಗಿ ರುತ್ತದೆ. ಮನಸ್ಸು ಪ್ರಸನ್ನ ವಾಗಿದ್ದರೆ ಇಂದ್ರಿಯಗಳು ಪ್ರಸನ್ನವಾಗಿರುತ್ತವೆ.
ಇಂದ್ರಿಯಗಳು ಪ್ರಸನ್ನವಾಗಿದ್ದರೆ ಸ್ವಾಸ್ಥ್ಯವು ನಮಗೆ ಲಭಿಸುತ್ತದೆ. ಆಯುರ್ವೇದದ ನಂಬಿಕೆಯನ್ವಯ ಮನುಷ್ಯನ ದೇಹವು ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ ಎಂಬ ಪಂಚಭೂತಗಳಿಂದಾಗಿದೆ. ಇವುಗಳ ಸಮನ್ವಯದ ಕಾರಣ ನಮ್ಮ ಶರೀರದಲ್ಲಿ ಮೂರು ಶಕ್ತಿಗಳು ರೂಪುಗೊಳ್ಳುತ್ತವೆ. ಆ ಶಕ್ತಿಗಳನ್ನು ದೋಷ ಎನ್ನುವ ಪದದಿಂದ ಸೂಚಿಸುವರು. ಅವು ತ್ರಿದೋಷಗಳೆಂದು ಪ್ರಸಿದ್ಧವಾಗಿವೆ. ವಾತ ದೋಷವು ಆಕಾಶ ಮತ್ತು ಗಾಳಿಯಿಂದ ರೂಪುಗೊಂಡಿದೆ. ಪಿತ್ತದೋಷವು ಅಗ್ನಿ ಮತ್ತು ಜಲಗಳಿಂದ ರೂಪುಗೊಂಡಿದೆ ಹಾಗೂ ಕ- ದೋಷವು ಜಲ ಮತ್ತು ಪೃಥ್ವಿಯಿಂದ ರೂಪುಗೊಂಡಿದೆ. ಈ ಮೂರು ದೋಷಗಳು ಶರೀರ ಹಾಗೂ ಮನಸ್ಸಿನ ಕೆಲಸಕಾರ್ಯಗಳು,
ಬೆಳವಣಿಗೆ ಹಾಗೂ ಆರೋಗ್ಯ ಗಳನ್ನು ನಿರ್ಧರಿಸುತ್ತವೆ.
ಪ್ರತಿ ವ್ಯಕ್ತಿಯಲ್ಲಿ ಈ ಮೂರು ದೋಷಗಳು ಅನುವಂಶಿಕವಾಗಿ ಬರುತ್ತವೆ. ಪರಿಸರವೂ ಪ್ರಭಾವ ಬೀರುತ್ತದೆ. ಹಾಗಾಗಿ ತ್ರಿದೋಷಗಳ ಪ್ರಮಾಣವು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗುತ್ತದೆ. ಒಬ್ಬ ವ್ಯಕ್ತಿಯಲ್ಲಿ ಯಾವ ದೋಷವು ಪ್ರಧಾನವಾಗಿದೆಯೋ, ಆ ವ್ಯಕ್ತಿಯನ್ನು ಆಯಾ ದೋಷದಿಂದ ಗುರುತಿಸುವ ವಾಡಿಕೆಯಿದೆ. ಒಂದೊಂದು ದೋಷವು ಶರೀರದ ನಿರ್ದಿಷ್ಟ ಅಂಗ/ಅಂಗವ್ಯವಸ್ಥೆಯ ಕೆಲಸ ಕಾರ್ಯಗಳನ್ನು ನಿಯಂತ್ರಿಸುತ್ತದೆ ಎನ್ನಲಾಗಿದೆ.
ತ್ರಿದೋಷಗಳಲ್ಲಿ ಪ್ರಧಾನವಾದದ್ದು ವಾತ ದೋಷ. ಏಕೆಂದರೆ ಇದು ನಮ್ಮ ಮನಸ್ಸು, ಉಸಿರಾಟ, ರಕ್ತ ಪರಿಚಲನೆ ಹಾಗೂ ಮಲ ವಿಸರ್ಜನೆಗಳನ್ನು ನಿಯಂತ್ರಿಸುತ್ತದೆ. ಮುಖ್ಯವಾಗಿ ಜೀವಕೋಶಗಳ ವಿಭಜನೆಯ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ನಮ್ಮ ಮನಸ್ಸಿನ ಭಾವನೆಗಳಾದ ಭಯ ಮತ್ತು ದುಃಖಗಳು ಈ ಪ್ರಧಾನ ಜೈವಿಕ ಕೆಲಸ ಕಾರ್ಯಗಳನ್ನು ಏರುಪೇರು ಮಾಡಬಲ್ಲವು. ಪದೇ ಪದೇ ತಿನ್ನುವುದು ಹಾಗೂ ಸಕಾಲದಲ್ಲಿ ನಿದ್ರೆ ಮಾಡದಿರುವುದು ಈ ಜೈವಿಕ ಕಾರ್ಯಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ.
ಹಾಗಾಗಿ ವಾತ ದೋಷ ಏರುಪೇರಾದಾಗ ಆತಂಕ, ಅಸ್ತಮ, ಹೃದ್ರೋಗಗಳು, ಚರ್ಮದ ಕಾಯಿಲೆಗಳು, ರುಮಟಾಯ್ಡ್ ಆರ್ತ್ರೈಟಿಸ್ ಮುಂತಾದ ಕಾಯಿಲೆಗಳು ಬರಬಹುದು. ಪಿತ್ತ ದೋಷವು ಆಹಾರವು ಜೀರ್ಣವಾಗುವಿಕೆ, ಪೋಷಕಾಂಶಗಳ ಉತ್ಪಾದನೆ, ಅವು ರಕ್ತಪ್ರವಾಹದಲ್ಲಿ ಹರಿದು, ಜೀವಕೊಶಗಳ ಒಳಪ್ರವೇಶಿಸಿ ಶಕ್ತಿಯನ್ನು ಬಿಡುಗಡೆ ಮಾಡುವಿಕೆ-ಇತ್ಯಾದಿ ಕೆಲಸವನ್ನು ನಿರ್ವಹಿಸುತ್ತದೆ. ನಮ್ಮ ಜೀರ್ಣಶಕ್ತಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿಯಂತ್ರಿಸುವ ಹಾರ್ಮೋನುಗಳ ಉತ್ಪಾದನೆ ಮೇಲೆ ಪ್ರಭಾವ ಬೀರುತ್ತದೆ. ತುಂಬಾ ಹುಳಿಯಾದ, ಖಾರದ ಹಾಗೂ ಮಸಾಲೆಭರಿತ ಆಹಾರವನ್ನು ಸೇವಿಸುವುದರಿಂದ ಹಾಗೂ ಬಿಸಿಲಲ್ಲಿ ಹೆಚ್ಚು ಹೊತ್ತು ಕಳೆಯು
ವುದರಿಂದ ಈ ಜೈವಿಕ ಕ್ರಿಯೆಗಳು ಏರುಪೇರಾಗಬಲ್ಲವು.
ಹಾಗಾಗಿ ಪಿತ್ತ ದೋಷಿಗಳು ಕ್ರಾನ್ಸ್ ರೋಗ, ರಕ್ತದ ಏರೊತ್ತಡ, ಹೃದ್ರೋಗಗಳು, ಸೋಂಕುಗಳಿಗೆ ಹೆಚ್ಚು ತುತ್ತಾಗಬಹುದು. ಕಫ ದೋಷವು ಸ್ನಾಯುಗಳ ಬೆಳವಣಿಗೆ, ಶರೀರದ ಶಕ್ತಿ ಹಾಗೂ ದೃಢತೆ, ಶರೀರದ ತೂಕ ಹಾಗೂ ರೋಗರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿ ಸುತ್ತದೆ. ಹಗಲು ನಿದ್ರೆ, ಅಧಿಕ ಸಿಹಿ ಹಾಘೂ ಉಪ್ಪು ಸೇವನೆ…ಈ ಜೈವಿಕ ಕ್ರಿಯೆಗಳ ಸಾಮರ್ಥ್ಯವನ್ನು ವಿರೂಪಗೊಳಿಸಬಲ್ಲವು. ಇಂತ ಹವರು ಅಸ್ತಮ ಮುಂತಾದ ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳಿಗೆ, ಮಧುಮೇಹ, ಕ್ಯಾನ್ಸರ್, ಬೊಜ್ಜು ಮುಂತಾದ ರೋಗಗಳಿಗೆ ಬೇಗ ತುತ್ತಾಗಬಹುದು. ಹಾಗಾಗಿ ಈ ದೋಷಗಳ ನಡುವೆ ಸಮತೋಲನೆಯು ಇರಬೇಕಾದದ್ದು ಅಗತ್ಯ.
ಅಗ್ನಿ ಎಂದರೆ ಜಠರಾಗ್ನಿ. ಜಠರಾಗ್ನಿ ಎಂದರೆ ಜಠರ ರಸ. ಈ ಜಠರಾಗ್ನಿಯು ತೀವ್ರವಾದರೂ ಕಷ್ಟ. ಮಂದವಾದರೂ ಕಷ್ಟ. ಇದು ಸಮತೋಲನದಲ್ಲಿ ಇರಬೇಕು. ಶರೀರ ಪ್ರಕೃತಿಗೆ ಹಾಗೂ ಋತುಮಾನಕ್ಕೆ ಅನುಗುಣವಾಗಿ ತಾಜಾ ಆಹಾರವನ್ನು ಹಿತ-ಮಿತವಾಗಿ ಸೇವಿಸಬೇಕು. ಆಗ ಜಠರಾಗ್ನಿಯು ಸಮತೋಲನದಲ್ಲಿರುತ್ತದೆ. ನಾವು ಸೇವಿಸುವ ಆಹಾರವನ್ನು ಈ ಜಠರಾಗ್ನಿಯು ಜೀರ್ಣಿಸಿ ಅವನ್ನು ಸಪ್ತ ಧಾತುಗಳನ್ನಾಗಿ (ರಸ ಧಾತು, ರಕ್ತ ಧಾತು, ಮಾಂಸ ಧಾತು, ಮೇಧ ಧಾತು, ಅಸ್ಥಿ ಧಾತು, ಮಜ್ಜ ಧಾತು ಹಾಗೂ ಶುಕ್ರ/ಆರ್ಥವ)
ಪರಿವರ್ತಿಸುತ್ತದೆ. ಜಠರಾಗ್ನಿಯು ಏರುಪೇರಾದಾಗ ಈ ಧಾತುಗಳ ಉತ್ಪಾದನೆಯೂ ಏರುಪೇರಾಗಿ ಅನಾರೋಗ್ಯಕ್ಕೆ ಎಡೆ ಮಾಡಿ ಕೊಡುತ್ತದೆ.
ಆಹಾರ ಸಮತೋಲನದಿಂದ ಧಾತು ಸಮತೋಲನವನ್ನು ಸಾಧಿಸಬೇಕಾಗುತ್ತದೆ. ಇನ್ನು ಮಲಕ್ರಿಯಾ ಸಮತೋಲನ. ನಾವು ಸೇವಿಸಿದ ಆಹಾರವು ಸಪ್ತ ಧಾತುಗಳನ್ನು ಉತ್ಪಾದಿಸಿದ ನಂತರ ಉಳಿದ ತ್ಯಾಜ್ಯ ವಸ್ತುವು ಶರೀರಕ್ಕೆ ಅನಗತ್ಯ ಹಾಗೂ ಅಪಾಯಕಾರಿ. ಅವು ಕಾಲ ಕಾಲಕ್ಕೆ ಮಲ, ಮೂತ್ರ, ಬೆವರು, ಸಿಂಬಳ, ಗುಗ್ಗೆ ಮುಂತಾದವುಗಳ ರೂಪದಲ್ಲಿ ಹೊರಹೋಗುತ್ತಿರಬೇಕು. ಇವನ್ನು ಕೃತಕವಾಗಿ ತಡೆ ಹಿಡಿದಾಗ ಶರೀರದ ಸಮತೋಲನ ಏರುಪೇರಾಗುತ್ತದೆ.
ಆಯುರ್ವೇದದಲ್ಲಿ ಶರೀರ ಸಮತೋಲನವನ್ನು ಕಾಪಾಡಲು ಪಂಚಕರ್ಮ, ಆಹಾರ ವಿಽ, ಪ್ರಾಣಾಯಾಮ, ಯೋಗ, ಧ್ಯಾನ, ಪ್ರಧಾನ ವಾಗಿ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧ ಸೇವನೆ ಮತ್ತು ಋತುಚರ್ಯಗಳನ್ನು ಕರಾರುವಾಕ್ಕಾಗಿ ಪಾಲಿಸಬೇಕಾಗುತ್ತದೆ.
ಆಯುರ್ವೇದದ ಬಹಳಷ್ಟು ಪರಿಕಲ್ಪನೆಗಳು ಆಧುನಿಕ ವೈದ್ಯಕೀಯ/ವಿಜ್ಞಾನದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಆಯುರ್ವೇದವು ಸರಿಯೇ ಅಥವಾ ತಪ್ಪೇ ಎನ್ನುವುದನ್ನು ಇದಮಿತ್ಥಂ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಭಾರತ ದಲ್ಲಿ ಸದಾ ಆಧುನಿಕ ವೈದ್ಯಕೀಯ ಹಾಗೂ ಆಯುರ್ವೇದದ ನಡುವೆ ಭಿನ್ನಾಭಿಪ್ರಾಯಗಳು ತಲೆದೋರುತ್ತಲೇ ಇರುತ್ತವೆ.
ಇತ್ತೀಚೆಗೆ ಕರೋನ ಚಿಕಿತ್ಸೆಯಲ್ಲಿ ನಡೆದ ಸಂಘರ್ಷವು ನಮ್ಮ ನೆನಪಿನಲ್ಲಿ ಇನ್ನೂ ಇದೆ. ಆಧುನಿಕ ವೈದ್ಯಕೀಯವು ಹಾಗೂ ಭಾರತೀಯ ವೈದ್ಯಕೀಯ ಸಂಘವು ಆಯುರ್ವೇದವನ್ನು ಹುಸಿವಿಜ್ಞಾನ (ಸ್ಯೂಡೋಸೈನ್ಸ್) ಎಂದು, ಆಯುರ್ವೇದ ವೈದ್ಯರನ್ನು ನಕಲಿ ವೈದ್ಯರು (ಕ್ವಾಕ್ಸ್) ಎಂದೂ ಪರಿಭಾವಿಸುತ್ತದೆ. ಆದರೂ ಭಾರತ ಮತ್ತು ನೇಪಾಳದಲ್ಲಿರುವ ೮೦% ಜನರು ಆಯುರ್ವೇದವನ್ನು ಆಳವಾಗಿ ನಂಬುತ್ತಾರೆ ಎನ್ನುವುದು ವಾಸ್ತವದ ಸತ್ಯ.